ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನವೀರ ಕಣವಿಗೆ ಕವಿತೆ ಬರೆಯಲು ಪ್ರೇರಣೆ ನೀಡಿದ ಧಾರವಾಡ ಮಳೆ...

Last Updated 16 ಫೆಬ್ರುವರಿ 2022, 6:51 IST
ಅಕ್ಷರ ಗಾತ್ರ

ಪ್ರಜಾವಾಣಿಯ ‘ಹುಬ್ಬಳ್ಳಿ-ಧಾರವಾಡ ಮೆಟ್ರೊ’ ಪುರವಣಿಯ‘ನಾ ಕಂಡ ಧಾರವಾಡ’ ಮಾಲಿಕೆಯಲ್ಲಿ 2017ರ ಜೂನ್ ಸಂಚಿಕೆಯಲ್ಲಿ ಪ್ರಕಟವಾದ ಬರಹದಲ್ಲಿ ಕವಿ ಡಾ.ಚೆನ್ನವೀರ ಕಣವಿ ಅವರು ಧಾರವಾಡದ ತಮ್ಮ ನೆನಪಿನ ಬುತ್ತಿಯನ್ನು ತೆರೆದಿಟ್ಟಿದ್ದರು. ಅದನ್ನು ಇಲ್ಲಿ ನೀಡಲಾಗಿದೆ.

ಕೋಲು ಮಲ್ಲಿಗೆ ಹೂವ
ಕೋಲುಗಳೆನೆಸೆಯುತ್ತಿಹ
ಗಿಡವಲ್ಲಿ ಗಿಡವಿಲ್ಲಿ ಅಭ್ರಂಕಶ...

1941ರ ಹೊತ್ತಿಗೆ ಗದಗದಿಂದ ಧಾರವಾಡಕ್ಕೆ ಬಂದ ನನಗೆ ರೈಲ್ವೇ ನಿಲ್ದಾಣದಿಂದ ನಗರದೊಳಕ್ಕೆ ಬರುವಾಗ ನನ್ನನ್ನು ಆ ಕೋಲು ಮಲ್ಲಿಗೆಯ ಹೂವಿನ ಮರಗಳು ಸ್ವಾಗತಿಸಿದಂತಿತ್ತು. ರಸ್ತೆಯ ಎರಡೂ ಸಾಲಿನಲ್ಲಿದ್ದ ಮರಗಳು ಮಲೆನಾಡ ನೆನಪು ತರುವಂತಿದ್ದವು. ಆದರೆ ರಸ್ತೆ ವಿಸ್ತರಣೆ ನೆಪದಲ್ಲಿ ಧರೆಗುರುಳಿದ ಆ ಮರಗಳು ಈಗ ನೆನಪು ಮಾತ್ರ.

ಗರಗದಲ್ಲಿ ನನ್ನ ಭಾವನವರು ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಪ್ರಾಥಮಿಕ ಹಂತವನ್ನು ಅಲ್ಲೇ ಮುಗಿಸಿದೆ. ಸೈಕಲ್‌ನಲ್ಲಿ ಗರಗದಿಂದ ಧಾರವಾಡಕ್ಕೆ ಆಗಾಗ ಬರುತ್ತಿದ್ದೆ. ಬೆಳಗಾವಿ ರಸ್ತೆಯಲ್ಲಿ ಸಾಧನಕೇರಿಗೆ ಹೊರಳುವ ಜಕಾತಕಟ್ಟೆ ಬಳಿ ಸೈಕಲ್‌ನಲ್ಲಿ ಬರುವವರು ಒಂದು ಆಣೆ ತೆರಿಗೆ ಕಟ್ಟಿದರೆ ಮಾತ್ರ ಧಾರವಾಡಕ್ಕೆ ಪ್ರವೇಶ ಸಿಗುತ್ತಿತ್ತು.

ಹೀಗೆ ಏಳನೇ ತರಗತಿ ಮುಗಿಸಿ ನಂತರ ಮುರುಘಾಮಠದ ಪ್ರಸಾದಾಲಯ ಸೇರಿಕೊಂಡೆ. ಆರ್ಎಲ್‌ಎಸ್ ಶಾಲೆಯಲ್ಲಿ ನನ್ನ ವಿದ್ಯಾಭ್ಯಾಸ. ಶಾಲೆಯ ಆವರಣದಲ್ಲಿ ಹಡ್ಸನ್ ಗ್ರಂಥಾಲಯ ಇತ್ತು. ಸಿದ್ದನಗೌಡ ಎಂಬ ಶಿಕ್ಷಕರು ನಮಗೆ ಇಂಗ್ಲಿಷ್‌ ಕಲಿಸುತ್ತಿದ್ದರು.
ಸರ್ಕಾರ ನೀಡುವ ವಿದ್ಯಾರ್ಥಿ ವೇತನ ಪರೀಕ್ಷೆಯಲ್ಲಿ ಮೊದಲಿಗನಾಗಿದ್ದ ನನಗೆ ಆಗ ₹5 ವಿದ್ಯಾರ್ಥಿ ವೇತನ ಸಿಗುತ್ತಿತ್ತು. ಇದು ನನ್ನ ಓದು ಮುಗಿಯುವವರೆಗೂ ಸಿಕ್ಕಿತು. ಹಾಗೆಯೇ ಲಿಂಗಾಯತ್‌ ನಿಧಿ ಮತ್ತು ಶಿರಸಂಗಿ ನಿಧಿಯಿಂದಲೂ ₹1.5 ಸಿಗುತ್ತಿತ್ತು.

ಮುರುಘಾಮಠದಲ್ಲಿ ಮೃತ್ಯುಂಜಯಪ್ಪಗಳು ಇದ್ದರು. ತ್ರಿಷಷ್ಠಿಪೂರ್ವಾತನರ ಹೆಸರುಗಳನ್ನು ಒಂದೊಂದು ಕೋಣೆಗೆ ಇಟ್ಟಿದ್ದರು. ಅಂದಿನ ಮುರುಘಾಮಠದ ಜಾತ್ರೆ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ತೇರಿನೊಂದಿಗೆ ನಾವೆಲ್ಲರೂ ಹೋಗುತ್ತಿದ್ದೆವು. ಮೃತ್ಯುಂಜಯಪ್ಪಗಳು ಭಜನೆ ಮಾಡುತ್ತ ಭಕ್ತಿಯಿಂದ ಕುಣಿಯುತ್ತಿದ್ದರು.

ಆಗ ಮಠದಲ್ಲಿ ನಾಲ್ಕು ಬಾರಿ ಹಾಜರಿ ತೆಗೆದುಕೊಳ್ಳುತ್ತಿದ್ದರು. ಬೆಳಿಗ್ಗೆ ನಸುಕಿನ 5ಕ್ಕೆ, ನಂತರ ಊಟದ ಸಮಯ, ಸಂಜೆ ಶಿವಾನುಭವ ಕಾರ್ಯಕ್ರಮದಲ್ಲಿ ಹಾಗೂ ರಾತ್ರಿ ಮಲಗುವ ಹೊತ್ತಿಗೆ ಹಾಜರಿ ಕಡ್ಡಾಯ. ಹೀಗಾಗಿ ಯಾವುದನ್ನೂ ತಪ್ಪಿಸಿಕೊಳ್ಳುವಂತಿರಲಿಲ್ಲ.
ಆಗ ಸಾರಿಗೆ ಬಸ್ಸುಗಳು ಇರಲಿಲ್ಲ. ಎಲ್ಲಿಗೆ ಹೋಗಬೇಕಾದರೂ ನಡೆದುಕೊಂಡೇ ಹೋಗಬೇಕಾಗಿತ್ತು. ಟಾರು ರಸ್ತೆಗಳಂತೂ ಇರಲೇ ಇಲ್ಲ. ಬೆಣ್ಣಿ ಅವರು ಅಧ್ಯಕ್ಷರಾಗಿದ್ದಾಗ ಹುಬ್ಬಳ್ಳಿ–ಧಾರವಾಡ ನಡುವೆ ಟಾರು ರಸ್ತೆ ಆಗಿತ್ತು ಎಂದು ಕೇಳದ್ದೇವೆಯೇ ಹೊರತು ನೋಡಿರಲಿಲ್ಲ. ನಂತರ ಕರ್ನಾಟಕ ಕಾಲೇಜು ರಸ್ತೆಗೂ ಟಾರ್‌ ಹಾಕಲಾಯಿತು. ಆಗ ಕೆಲವರು, ‘ಟಾರು ರಸ್ತೆ ಆದ ನಂತರ ಧಾರವಾಡದ ಜನರಿಗೆ ನಡೆದಾಡಿ ದಂತಾಗುತ್ತಿಲ್ಲ’ ಎಂದು ಚೇಷ್ಟೆ ಮಾಡುತ್ತಿದ್ದರು.

ಮಳೆಗಾಲ ಹೊಯ್ತಿರಲು/
ನನ್ನಕವಿತೆಯ ನವಿಲು/
ನೂರು ಕಣ್ಣನು ತೆರೆದು ನರ್ತಿಸುವುದು/

ಅಂದಿನ ಧಾರವಾಡ ಮಳೆ ಇಂದು ನೆನಪು ಮಾತ್ರ. ಏಪ್ರಿಲ್‌ ಕೊನೆಗೆ ಅಡ್ಡ ಮಳೆಯೊಂದಿಗೆ ಆರಂಭವಾಗುತ್ತಿದ್ದ ಮಳೆಗಾಲ ಶ್ರಾವಣ ಮುಗಿದರೂ ಸುರಿಯುತ್ತಿತ್ತು.

ಕೋಟ್‌, ಕೊಡೆ ಹಾಗೂ ಗಂಬೂಟ್‌ ಧರಿಸಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೋಗುವಷ್ಟರಲ್ಲಿ ಅರ್ಧ ತೋಯುತ್ತಿದ್ದೆವು. ಹೀಗಾಗಿ ನಾವೆಲ್ಲರೂ ಕಚೇರಿಯಲ್ಲೇ ಒಂದು ಜೊತೆ ಅರವಿ ಇಟ್ಟಿರುತ್ತಿದ್ದೆವು. ಬರಿಗಾಲಲ್ಲಿ ನಡೆದರಂತೂ ಬೆರಳ ನಡುವೆ ಸೆಳೆದಂತಾಗುತ್ತಿತ್ತು.
ವರ್ಷದಲ್ಲಿ ಹತ್ತೂ ಮಳೆಗಳೂ ಪೂರ್ಣ ಪ್ರಮಾಣದಲ್ಲಿ ಆಗ ಸುರಿಯುತ್ತಿದ್ದವು. ಹೀಗಾಗಿ ನನಗೆ ಧಾರವಾಡ ಮಳೆ ಹಲವು ಕವಿತೆಗಳನ್ನು ಬರೆಯಲು ಪ್ರೇರೇಪಣೆ ನೀಡಿತು. ಹೀಗಾಗಿಯೇ ಸೂರಪ್ಪನವರು ಒಂದು ಕಡೆ ಹೇಳಿದ್ದಾರೆ, ‘ಕುವೆಂಪು ಸೂರ್ಯೋದಯದ ಕವಿ, ಬೇಂದ್ರೆ ಶ್ರಾವಣ ಕವಿ ಹಾಗೂ ಕಣವಿ ಮಳೆಗಾಲದ ಕವಿ’ ಎಂದು. ನನಗೆ ಮಳೆಗಾಲ ಎಂದರೆ ನವಿಲು ಕುಣಿದಂತೆಯೇ ಭಾಸವಾಗುತ್ತದೆ.

ನಿರಂತರ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ...

ಆಗ ವಿದ್ಯಾವರ್ಧಕ ಸಂಘ ಹಾಗೂ ಮುರುಘಾಮಠದಲ್ಲಿ ನಿರಂತರವಾಗಿ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತಿದ್ದವು. ನಗರಕ್ಕೆ ಬರುವ ದೊಡ್ಡ ಸಾಹಿತಿಗಳು ಹಾಗೂ ಸಂಗೀತಗಾರರು ಮುರುಘಾಮಠಕ್ಕೆ ಭೇಟಿ ನೀಡಿ ಅಲ್ಲಿ ಭಾಷಣ ಅಥವಾ ಕಾರ್ಯಕ್ರಮ ನೀಡುತ್ತಿದ್ದರು.

ಆ ಹೊತ್ತಿನಲ್ಲಿ ನಗರದಲ್ಲಿ ದೊಡ್ಡ ಸಭಾಂಗಣ ಇರಲಿಲ್ಲ. ಕರ್ನಾಟಕ ವಿದ್ಯಾವರ್ಧಕ ಸಂಘದ ಅಟ್ಟದ ಮೇಲೆ ಕೆಲವೊಂದು ಕಾರ್ಯಕ್ರಮಗಳು ಜರುಗುತ್ತಿದ್ದವು. ಇಲ್ಲವೇ ಶಾಂತ ಕವಿಗಳ ನೆನಪಿನಲ್ಲಿ ಸ್ಥಾಪಿಸಿದ್ದ ಶಾಂತೇಶ ವಾಸಾಲಯ (ಇಂದು ರಾ.ಹ.ದೇಶಪಾಂಡೆ ಸಭಾಭವನ)ದಲ್ಲಿ ಕೆಲವೊಂದು ಕಾರ್ಯಕ್ರಮ ಜರುಗುತ್ತಿತ್ತು.

ಉಳಿದಂತೆ ದೊಡ್ಡ ಕಾರ್ಯಕ್ರಮಗಳು ಪಾಲಿಕೆ ಕಚೇರಿ ಮೇಲಿನ ಸಭಾಂಗಣದಲ್ಲಿ ನಡೆಯುತ್ತಿತ್ತು. ಇಲ್ಲವೇ ಮಿಷನ್‌ ಕಂಪೌಂಡ್‌ ಒಳಗಿನ ಟ್ಯಾಗೋರ್ ಸಭಾಂಗಣದಲ್ಲಿ ನಡೆಯುತ್ತಿತ್ತು. ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಕಾರ್ಯಕ್ರಮದ ಅಂತ್ಯದಲ್ಲೂ ಕಾವ್ಯ ಗಾಯನ ತಪ್ಪದೆ ನಡೆಯುತ್ತಿತ್ತು. ಪಿ.ಆರ್‌.ಭಾಗವತ್‌ ನಡೆಸಿಕೊಡುತ್ತಿದ್ದರು. ಮೊಟ್ಟ ಮೊದಲ ಬಾರಿಗೆ ಕುವೆಂಪು, ಆನಂದಕಂದರು ಹಾಗೂ ಬೇಂದ್ರೆ ಅವರ ಕವನಗಳನ್ನು ಕೇಳುವ ಅವಕಾಶ ಸಿಕ್ಕಿದ್ದು ಇಲ್ಲಿಯೇ. ಆ ಮೂಲಕ ಭಾವಗೀತೆ ಪ್ರಪಂಚದ ಪರಿಚಯವಾಯಿತು.

ಆಗ ಭಾಷಣಗಳನ್ನು ಕೇಳುವುದೇ ದೊಡ್ಡ ಖುಷಿ. ಸಂಘದ ಅಟ್ಟದ ಮೇಲೆ ಗೋವಿಂದ ಪೈಗಳ ಭಾಷಣ ಕೇಳಿದ್ದೆ. ಗುಳಗಿ ತಿಮ್ಮಪ್ಪಯ್ಯ, ಬಿ.ಎಂ.ಶ್ರೀಕಂಠಯ್ಯ ಅವರ ಭಾಷಣಗಳನ್ನು ನಾನು ಅಲ್ಲಿಯೇ ಕೇಳಿದ ನೆನಪು ಇಂದಿಗೂ ಇದೆ.

ಜೆಎಸ್‌ಎಸ್‌ ಕಾಲೇಜು ಇರುವ ಸ್ಥಳದಲ್ಲಿ ಮೊದಲು ಕೆ.ಇ. ಬೋರ್ಡ್ಸ್‌ ಕಾಲೇಜು ಇತ್ತು. ಮೈಸೂರು ವಿವಿ ಕುಲಸಚಿವರಾಗಿದ್ದ ನವೋದಯ ಸಾಹಿತ್ಯದ ಹಿರಿಯರಾದ ಬಿ.ಎಂ.ಶ್ರೀಕಂಠಯ್ಯ ಅವರು ನಿವೃತ್ತರಾಗಿದ್ದರು. ಅವರನ್ನು ಕೆ.ಇ.ಬೋರ್ಡ್ಸ್‌ನ ಪ್ರಾಚಾರ್ಯರನ್ನಾಗಿ ನೇಮಿಸಲಾಗಿತ್ತು. ಹೀಗಾಗಿ ಆಗಾಗ ಅವರ ಭಾಷಣಗಳು ಆಗಾಗ ಕೇಳುವ ಅವಕಾಶ ಒದಗಿಬರುತ್ತಿತ್ತು. ಆದರೆ ಆಗಿನ ಯುವಕರಿಗೆ ಅ.ನ.ಕೃ ಅವರು ಹೀರೊ. ಹೀಗಾಗಿ ಅವರ ಭಾಷಣವನ್ನು ತಪ್ಪಿಸುತ್ತಿರಲಿಲ್ಲ. ಅವರ ಭಾಷಣ ಇದೆ ಎಂದರೆ ಆವರಣ ತುಂಬಿ ತುಳುಕುತ್ತಿತ್ತು.

ಹೈಸ್ಕೂಲಿನಿಂದ ಸಾಹಿತ್ಯ ರಚನೆ ಆರಂಭ...

ಹೈಸ್ಕೂಲ್‌ ಮಿಸಲೇನಿಗೆ ಮೊದಲ ಬಾರಿಗೆ ಕವಿತೆ ಹಾಗೂ ಲೇಖನ ಬರೆಯುವ ಮೂಲಕ ನನ್ನ ಸಾಹಿತ್ಯ ರಚನೆ ಆರಂಭವಾಯಿತು. ಮುಖ್ಯೋಪಾಧ್ಯಾಯ ರಾಗಿದ್ದ ವೀರು ಕೊಪ್ಪಳ ಅವರು ಬಹಳಷ್ಟು ಪ್ರೋತ್ಸಾಹ ನೀಡುತ್ತಿದ್ದರು.

ಹಾಗೆಯೇ ಮುರುಘಾಮಠದ ಶಿವಾನುಭವ ಕಾರ್ಯಕ್ರಮಕ್ಕೆ ಬರುತ್ತಿದ್ದ ಮಲ್ಲಿಕಾರ್ಜುನ ಮನಸೂರ ಹಾಗೂ ಬಸವರಾಜ ರಾಜಗುರು ಅವರು ಶ್ರಾವಣ ಮಾಸದ ಕಾರ್ಯಕ್ರಮದಲ್ಲಿ ಸಂಗೀತ ಕಛೇರಿಯ ಕೊನೆಯಲ್ಲಿ ತಪ್ಪದೇ ವಚನ ಗೀತೆ ಹಾಡುತ್ತಿದ್ದರು. ಇದನ್ನು ಕೇಳುತ್ತಲೇ ವಚನ ಸಾಹಿತ್ಯ ಕುರಿತ ಆಸಕ್ತಿ ಹೆಚ್ಚಾಯಿತು.

ಪ್ರೌಢಶಾಲೆ, ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಮುರುಘಾಮಠದ ವಾತಾವರಣ ನನ್ನ ಮೇಲೆ ಸಾಹಿತ್ಯದ ಪ್ರಭಾವ ಬೀರಿತು. ಮುಂದೆ ಕನ್ನಡ ಸಂಘ ನಡೆಸಿದ ಸ್ಪರ್ಧೆಯಲ್ಲಿ ಕವಿತೆ ಬರೆದ ನನಗೆ ಮೊದಲ ಬಹುಮಾನ ಲಭಿಸಿತು. ಅದನ್ನು ಡಿವಿಜಿ ಅವರಿಂದ ಪಡೆದಿದ್ದು ಇಂದಿಗೂ ನೆನಪಿದೆ.

ಆಗ ಸೆಲ್ಫಿ ಇರಲಿಲ್ಲ!

ಬೇಂದ್ರೆ ಅವರ ಭಾಷಣ ಹಾಗೂ ಕವಿತೆ ಕೇಳಿದರೂ, ಅವರೊಂದಿಗೆ ಒಡನಾಟ ಇದ್ದರೂ ಅಂತರ ಕಾಯ್ದುಕೊಳ್ಳುತ್ತಿದ್ದೆವು. ಅಷ್ಟು ದೊಡ್ಡವರ ಜತೆ ಈಗಿನಂತೆ ಸೆಲ್ಫಿ ಬಿಡಿ, ಜತೆಗೆ ನಿಂತು ಫೋಟೊ ತೆಗೆಸಿಕೊಳ್ಳಲೂ ನಾವು ಅಂಜುತ್ತಿದ್ದೆವು.

‘ಅಭಿವೃದ್ಧಿಯಾಗುತ್ತಿದ್ದಂತೆ ಧಾರವಾಡದಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಿವೆ. ಮೊದಲು ಒಂದೇ ವಿಶ್ವವಿದ್ಯಾಲಯ ಇತ್ತು. ಈಗ ಹಲವು ವಿವಿಗಳಾಗಿವೆ. ಹಾಗೆಂದ ಮಾತ್ರಕ್ಕೆ ಶಿಕ್ಷಣದ ಗುಣಮಟ್ಟ ಸುಧಾರಣೆಯಾಗಿದೆ ಎಂದಲ್ಲ...’

‘ಅಂದಿಗೂ ಇಂದಿಗೂ ಧಾರವಾಡ ಬದಲಾಗಿರುವುದು ಸಹಜ. ಆದರೆ ಎಲ್ಲಾ ಸ್ಥಳಗಳೂ ಲಘೂನೇ ಹೋಗಿ ಲಘೂನೇ ಬರುವಂತೆ ಉಳಿದುಕೊಂಡಿದೆ, ಬೆಂಗಳೂರಿನಂತಾಗಿಲ್ಲವಲ್ಲ ಎಂಬುದಷ್ಟೇ ಸಮಾಧಾನಕರ’

‘ಅಂದಿನ ಚಳವಳಿಯಲ್ಲಿ ಶ್ರದ್ಧೆ ಇತ್ತು. ಅಂದಿನ ಸ್ವಾತಂತ್ರ್ಯ ಹೋರಾಟ, ಏಕೀಕರಣ ಚಳವಳಿ ಹೀಗೆ ಪ್ರತಿಯೊಂದು ಹೋರಾಟದಲ್ಲೂ ಶ್ರದ್ಧೆ ಇತ್ತು. ಹೋರಾಟ ಮಾತ್ರವಲ್ಲ ಮಾಡುವ ಕೆಲಸದಲ್ಲೂ ಪ್ರತಿಯೊಬ್ಬರಿಗೂ ನಿಷ್ಠೆ ಇರುತ್ತಿತ್ತು...’ ಇವೆಲ್ಲ ಕಣವಿ ಅವರ ಮಾತುಗಳು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT