7

ರಾಜಕೀಯವಿಲ್ಲದೆ ಸಾಹಿತ್ಯವಿಲ್ಲ, ಬದುಕಿಲ್ಲ

Published:
Updated:

ಪ್ರತಿಸಲ ಸಲ ಬೆಂಗಳೂರಿನ ರಿಚ್ಮಂಡ್ ರಸ್ತೆಯ ಬಳಿಯಿರುವ ಕತೆಗಾರ ವಿವೇಕ ಶಾನಭಾಗರ ಮನೆಗೆ ಹೋಗುವಾಗಲೂ ಮುಖ್ಯ ರಸ್ತೆಯಿಂದ ಅವರ ಮನೆಯ ಕಡೆಗೆ ಕವಲೊಡೆಯುವ ಓಣಿಯು ತಪ್ಪಿಬಿಡುತ್ತದೆ. ಈ ತಿರುವಿನ ನಂತರ ಇನ್ನೊಂಚೂರು ಮುಂದೆ ಸಾಗಿದ ಮೇಲೆ ದೊರಕುವ ಬಲ ತಿರುವು ಅಂದುಕೊಳ್ಳುವಾಗಲೇ ಅದನ್ನು ದಾಟಿಯಾಗಿರುತ್ತದೆ. ಗಾಡಿಯನ್ನು ಹಿಂದಕ್ಕೆ ತಿರುಗಿಸದೆ ಅವರ ಮನೆ ತಲುಪಿದ್ದೇ ಇಲ್ಲ. 

ಈ ಸಲವೂ ಹಾಗೆಯೇ ಆಯಿತು. ಅವರ ಅಪಾರ್ಟ್‌ಮೆಂಟ್ ತಲುಪಿದ ನಂತರ ಎರಡನೆಯ ಮಹಡಿಯೋ ಮೂರನೆಯ ಮಹಡಿಯೋ ಎನ್ನುವ ಗೊಂದಲವೂ ಪ್ರತಿಸಲ ಇದ್ದದ್ದೇ. ಮನೆಯ ಒಳಹೊಕ್ಕ ಕೂಡಲೇ ಒಂದು ಪ್ರಶಾಂತತೆ ಆವರಿಸುತ್ತದೆ. ಅವರ ಮನೆಯ ಒಳಗಿರುವ ಕೆಳಮಹಡಿಯು ನನ್ನೊಳಗೊಂದು ನಿಗೂಢತೆಯನ್ನು ತುಂಬುತ್ತದೆ. ಮನೆ ಒಳ ಆವರಣಗಳ ಗೌಪ್ಯತೆಯಂತಲ್ಲ ಅದು. ಈ ಮನೆಯ ಮೂಲ ವಿನ್ಯಾಸವೇ ಹೀಗಿತ್ತೇ ಅಥವಾ ಕೆಳಗಿರುವ ಮತ್ತೊಂದು ಮನೆಯನ್ನೂ ಇವರೇ ಖರೀದಿಸಿ, ಈ ಮನೆಯೊಂದಿಗೆ ಹೊಂದಿಸಿಕೊಳ್ಳಲಾಗಿದೆಯೇ ಎನ್ನುವ ಕ್ಷುಲ್ಲಕ ಅನುಮಾನ. ಈ ಸಲ ಹೋಗುವಾಗ ಅವರಲ್ಲಿ ಕೇಳುವುದಕ್ಕೆ ಕೆಲವೊಂದು ಪ್ರಶ್ನೆಗಳೂ ಇದ್ದವು.

ನಿಮ್ಮ ‘ಊರು ಭಂಗ’ ಕಾದಂಬರಿಯನ್ನು ಒಂದು ರೆಫೆರೆನ್ಸ್ ಆಗಿಟ್ಟುಕೊಳ್ಳೋಣ. ನಿಮ್ಮ ಬಾಲ್ಯ, ನೀವು ಬೆಳೆದುಬಂದ ಪರಿಸರ, ನಂತರದ ಕಾರ್ಪೊರೇಟ್ ಜಗತ್ತು, ಇದೆಲ್ಲವನ್ನು ಗಮನಿಸುವಾಗ, ಸ್ವಾಭಾವಿಕವಾಗಿ ಎಲ್ಲರಲ್ಲೂ ಇರುವಂಥ ‘ತೆಂಕಣಕೇರಿ ಎಫೆಕ್ಟ್’ ನಿಮ್ಮಲ್ಲೂ ಇತ್ತಾ? ಅದು ಆ ಕಾದಂಬರಿಯಲ್ಲಿ ಬರುವ ಸ್ವರೂಪದ್ದೇ ಆಗಿರಬೇಕೆಂದಿಲ್ಲ. ಅಂಥದ್ದನ್ನು ನಿಮ್ಮಿಂದ ಮೀರಲು ಸಾಧ್ಯವಾಗಿದೆಯೇ? ಅಥವಾ ಆ ಪ್ರೊಸೆಸ್‌ನಲ್ಲಿದ್ದೀರ?

ಅದು ಎಲ್ಲರಲ್ಲೂ ಇರುತ್ತೆ. ಇರದುದರೆಡೆ ತುಡಿಯುವುದು. ಒಬ್ಬೊಬ್ಬರಿಗೆ ಒಂದೊಂದು ಥರ ಇರುತ್ತೆ. ಕಾರಣಗಳು ಬೇರೆ ಬೇರೆ ಇರಬಹುದು. ಕ್ಲಾಸ್, ಕ್ಯಾಸ್ಟ್, ಬದುಕಿನ ಸನ್ನಿವೇಶಗಳು ಹೀಗೆ ಆ ಒಂದು ಟ್ರಾನ್ಸಿಶನ್ ಪ್ರತಿದಿನವೂ ನಡೆಯುತ್ತಿರುತ್ತದೆ. ಮತ್ತೆ, ಯಾವುದೇ ಸಂಬಂಧದಲ್ಲಿ ಇಬ್ಬರೂ ಸರಿಸಮಾನರು ಅಂತಿರುವುದಿಲ್ಲ. ಈಕ್ವಾಲಿಟಿ ಅನ್ನುವುದು ಒಂದು ಆಲೋಚನೆ ಅಷ್ಟೇ. ಅದರೆಡೆಗೆ ನಮ್ಮ ಪ್ರಯತ್ನವಿರುತ್ತದೆ. ಅದು ಸಮಾನತೆಗೆ ಅತೀ ಹತ್ತಿರ ಇರಬಹುದು. ಆದರೆ ಅದು ಪರಿಪೂರ್ಣ ಸ್ಥಿತಿಯಲ್ಲಿರುವುದಿಲ್ಲ. ನಾನಿದನ್ನು ಮಾಸ್ಟರ್-ಸ್ಲೇವ್ ಥರದ ಅರ್ಥದಲ್ಲಲ್ಲ. ಬಹಳ ವಿಶಾಲವಾದ ಅರ್ಥದಲ್ಲಿ ಹೇಳುತ್ತಿದ್ದೇನೆ. ಸಂಬಂಧಗಳಲ್ಲಿ ಕೂಡ ಆಕರ್ಷಣೆ ಕುಂದದಿರಬೇಕಾದರೆ ನಮಗೆ ಹೊರತಾದದ್ದು ಅಲ್ಲಿದೆ ಅನಿಸಬೇಕು. ಭಿನ್ನತೆ ಮತ್ತು ಸಮಾನತೆಗಳು ಬೇರೆಬೇರೆ ಎಂಬುದನ್ನು ಮರೆಯದೇ ಹೀಗೆ ಹೇಳುತ್ತಿದ್ದೇನೆ.

ವ್ಯಕ್ತಿ, ವ್ಯವಸ್ಥೆ ಮತ್ತು ಬದಲಾವಣೆ -ಇಲ್ಲಿ ಸಾಹಿತ್ಯದ ಪಾತ್ರವೇನು?

ಇದು ರಾಜಕೀಯಕ್ಕೆ ಸಂಬಂಧಪಟ್ಟ ಪ್ರಶ್ನೆ. ಸಾಹಿತ್ಯದಲ್ಲಿ ರಾಜಕೀಯ ಅನ್ನುವುದು ಬಹಳ ಅಪಾರ್ಥಕ್ಕೆ ಗುರಿಯಾಗಿದೆ. ಪ್ರೊಟೆಸ್ಟ್ ಲಿಟರೇಚರ್ ಮೂಲಕ ಮಾತ್ರ ಸಾಹಿತ್ಯದಲ್ಲಿ ರಾಜಕೀಯ ಕಾಣುವುದು ಸರಳೀಕೃತ ಗ್ರಹಿಕೆ. ಕೇವಲ ಪ್ರತಿರೋಧ ಮಾತ್ರ ಇರೋದು, ಅದು ಬಂಡಾಯ ಇರಬಹುದು, ಯಾವುದೇ ಇರಬಹುದು, ಅದು ಯಾವತ್ತೂ ಎರಡನೆಯ ದರ್ಜೆಯ ಸಾಹಿತ್ಯವೇ. ಆದರೆ ಯಾವುದು ಅಂತರ್ಗತವಾಗಿರುತ್ತದೋ ಅದು ನಿಜವಾದ ರಾಜಕೀಯ ಸಾಹಿತ್ಯ. ಅದಕ್ಕಾಗಿ ದೇವನೂರ ಮಹಾದೇವ ಉಳಿದವರಿಗಿಂತ ಭಿನ್ನ ಮತ್ತು ಶ್ರೇಷ್ಠ. ಇಂತಹ ಬರವಣಿಗೆ ಆ ಕ್ಷಣಕ್ಕೆ ಪ್ರಚೋದಿಸುವ ರಂಜಿಸುವ ಸಾಹಿತ್ಯವಲ್ಲ. ಆದರೆ ಬದುಕಿನಲ್ಲಿ ನಾವು ನಿರ್ಧಾರ ಕೈಗೊಳ್ಳುವ ಗಳಿಗೆಗಳಿಗೆ ಈ ಸಾಹಿತ್ಯ ನಮ್ಮನ್ನು ತಯಾರುಗೊಳಿಸುತ್ತದೆ. ಸರಳ ಉದಾಹರಣೆಯೆಂದರೆ ಘರ್ಷಣೆಯ ಕಾಲದಲ್ಲಿ ಯಾರ ಪರ ನಿಲ್ಲಬೇಕೆಂಬುದನ್ನು ಅದು ಕಲಿಸುತ್ತದೆ. ಬೀದಿಗಿಳಿದು ಪ್ರತಿಭಟಿಸುವ ನೈತಿಕ ನೆಲೆಯನ್ನು ಅದು ಸಜ್ಜುಗೊಳಿಸುತ್ತದೆ. ರಾಜಕೀಯವಿಲ್ಲದೆ ಸಾಹಿತ್ಯವಿಲ್ಲ, ಬದುಕಿಲ್ಲ. ಸಾಹಿತ್ಯದಲ್ಲಿ ರಾಜಕೀಯ ಬೇಕೋ ಬೇಡವೋ ಎನ್ನುವ ಪ್ರಶ್ನೆಯೇ ನನಗೆ ಬರುವುದಿಲ್ಲ. ಅದನ್ನು ಪ್ರತ್ಯೇಕಿಸಲು ಬರುವುದಿಲ್ಲ. ನನಗೆ ನನ್ನದೇ ಆದ ಸ್ಪಷ್ಟ ರಾಜಕೀಯ ನಿಲುವುಗಳಿವೆ. ಹಾಗೆಂದು ನಾನದನ್ನು ಕರಪತ್ರದಲ್ಲಿ ಬರೆಯುವ ಹಾಗೆ ಸಾಹಿತ್ಯದಲ್ಲಿ ತರುವುದಿಲ್ಲ.

ಯಾಕೆಂದರೆ ಅದು ಸರಿಯಾದ ಕ್ರಮ ಅಲ್ಲ?

ಅದು ಪರಿಣಾಮಕಾರಿಯೂ ಅಲ್ಲ. ಪರ್ಸನಲ್ ಈಸ್ ಪೊಲಿಟಿಕಲ್ ಅನ್ನುವ ಫೆಮಿನಿಸ್ಟ್ ಚಳವಳಿಯ ಮಾತನ್ನು ಇಲ್ಲಿ ನೆನೆಯುವುದು ಸೂಕ್ತ. ಇದರ ಇನ್ನೊಂದು ಮಗ್ಗಲಾಗಿ ಒಂದು ಹಿಂಸಾಚಾರ ನಡೆದಾಗ ಸಾಮೂಹಿಕ ಪಾಪವನ್ನು ವೈಯಕ್ತಿಕಗೊಳಿಸಿ ಸ್ವತಃ ನೋಯುವ ಗಾಂಧಿಯನ್ನೂ ನೆನೆಯುತ್ತೇನೆ. ಒಳ್ಳೆಯ ಸಾಹಿತ್ಯ ಇದೆರಡನ್ನೂ ಒಟ್ಟಿಗೇ ಹಿಡಿಯುವ ಪ್ರಯತ್ನದ ಫಲ.

ಇದಕ್ಕೆ ಸಂಬಂಧಿಸಿದ ಇನ್ನೊಂದು ಪ್ರಶ್ನೆ. ನೀವು ಬಹಳ ಸಂಕೋಚ ಸ್ವಭಾವದವರು. ಅನಗತ್ಯವಾಗಿ ಮಾತಾಡುವವರಲ್ಲ. ಯು ನೋ ವೆನ್ ಟು ಸ್ಪೀಕ್, ವಾಟ್ ಟು ಸ್ಪೀಕ್, ಅಂಡ್ ವೇರ್ ಟು ಸ್ಪೀಕ್. ನಿಮ್ಮ ಈ ಮೌನವನ್ನ ನಿಮ್ಮ ಓದುಗರು ಯಾವ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕು? ಒಂದು ರೀತಿಯಲ್ಲಿ ಈಗಾಗಲೇ ಇದಕ್ಕೆ ಉತ್ತರಿಸಿದ್ದೀರ. ಪರಿಣಾಮಕಾರಿಯಾದ ಬರವಣಿಗೆ ನಿಮ್ಮ ಆದ್ಯತೆ. ಹಾಗಾಗಿ ಹಸಿಹಸಿಯಾದ ಇಂಪಲ್ಸಿವ್ ಆದ ಪ್ರತಿಕ್ರಿಯೆಗಳು, ಅಭಿಪ್ರಾಯಗಳು, ಹೇಳಿಕೆಗಳು ನಿಮ್ಮಿಂದ ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲವೇನೋ?

ಅಭಿಪ್ರಾಯ, ಪ್ರತಿಕ್ರಿಯೆಗಳಿಗಾಗಿ ಈಗ ನಮ್ಮ ಮೇಲೆ ಬಹಳ ಒತ್ತಡವಿದೆ. ಸೋಶಿಯಲ್ ಮೀಡಿಯಾದಲ್ಲಂತೂ ಕ್ಷಣಕ್ಷಣಕ್ಕೂ ಅಭಿಪ್ರಾಯವನ್ನು ಬಯಸಲಾಗುತ್ತದೆ. ಕೇವಲ ಬರಹಗಾರರ ಮೇಲಲ್ಲ, ಎಲ್ಲರ ಮೇಲೂ ಇದೆ. ಬರಹಗಾರರ ಮೇಲೆ ಹೆಚ್ಚಿದೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಕೊಟ್ಟಕ್ಷಣ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಭಾವಿಸುವುದು ರಾಜಕೀಯ, ಸಾರ್ವಜನಿಕ ಕ್ಷೇತ್ರದ ಕ್ರಿಯಾಶೀಲತೆಗೆ ಮತ್ತು ಸಾಹಿತ್ಯಕ್ಕೆ ಅತ್ಯಂತ ಅಪಾಯಕಾರಿ. ಅಷ್ಟಲ್ಲದೇ, ನಮ್ಮೆಲ್ಲರಿಗೂ ನಮ್ಮದೇ ಆದ ಪರಿಣತ ಕ್ಷೇತ್ರಗಳಿರುತ್ತವೆ. ಅದನ್ನು ಮರೆತು ಜಗತ್ತಿನ ಎಲ್ಲದರ ಬಗ್ಗೆಯೂ ಅಭಿಪ್ರಾಯ ಕೊಟ್ಟು ನಮ್ಮ ಅಜ್ಞಾನದಿಂದ ವಿಷಯದ ಘನತೆಯನ್ನು ಕಳೆದು ಅದನ್ನು ಲೋಕಾಭಿರಾಮ ಮಾಡಿಬಿಡಬಾರದು.

ಅಥೆಂಟಿಸಿಟಿ ಮತ್ತು ಕ್ರೆಡಿಬಿಲಿಟಿ ಮುಖ್ಯ.

ಹೌದು. ಅದು ಮುಖ್ಯ. ಪಬ್ಲಿಕ್ ಸ್ಪೇಸ್‌ನಲ್ಲಿ ನಮ್ಮ ಅಭಿಪ್ರಾಯವನ್ನು ಇಡುವಾಗ ಬಹಳ ಜಾಗರೂಕರಾಗಿರಬೇಕು. ಅನೇಕರಿಗೆ ಎಲ್ಲ ಕಡೆ ಸಲ್ಲದೇ ಇದ್ದರೆ ತಾವು ಇರ್ರೆಲೆವೆಂಟ್ ಆಗಿಬಿಡುವ ಭಯ. ನಮ್ಮ ಕಾರ್ಯಕ್ಷೇತ್ರದ ಬಗ್ಗೆ ನಂಬಿಕೆಯಿದ್ದರೆ ಈ ಬಗೆಯ ಅನಗತ್ಯ ಒತ್ತಡಗಳಿಗೆ ಮಣಿಯಬೇಕಾಗಿಲ್ಲ. ತನ್ನ ಅಭಿಪ್ರಾಯವೇ ಬಹಳ ಘನವಾದದ್ದು ಅಂತ ಭಾವಿಸುವುದರಲ್ಲಿಯೇ ಏನೋ ಸಮಸ್ಯೆಯಿದೆ... ಅಂಥವರಿಗೆ ಕೇಳಿಸಿಕೊಳ್ಳುವ ವಿನಯ ಇರುವುದಿಲ್ಲ.

ಹೀಗಿರುವಾಗ, ತಾನೊಬ್ಬ ಮುಖ್ಯ ಲೇಖಕ ಎನ್ನುವ ಅಸ್ಮಿತೆ ಎಷ್ಟು ಮುಖ್ಯ? ಇದು ಎರಡು ರೀತಿ ಕೆಲಸ ಮಾಡುತ್ತಿರುತ್ತದೆ. ಅದು ಬರವಣಿಗೆಗೆ ಒಂದು ಶಕ್ತಿಯನ್ನು ತಂದುಕೊಡುತ್ತದೆ. ಅದೇ ಕಾಲಕ್ಕೆ ಬೇಜವಾಬ್ದಾರಿಯನ್ನೂ ತುಂಬುತ್ತದೆ. ಆದರೆ ಈ ಅಸ್ಮಿತೆ ಒಬ್ಬ ಬರಹಗಾರನ ಸೃಜನಶೀಲತೆಗೆ ಎಷ್ಟು ಮುಖ್ಯ?

ಇದನ್ನು ಹೀಗೆ ನೋಡೋಣ. ನಾನು, ನೀವು ಅಥವಾ ಯಾರೇ ಆಗಲಿ, ಒಬ್ಬರನ್ನೇ ಶ್ರೇಷ್ಠ ಬರಹಗಾರ ಎಂದು ಭಾವಿಸಿರುವುದಿಲ್ಲ. ನಮ್ಮ ಓದಿನ ಪ್ರಪಂಚವನ್ನು ಹಲವಾರು ಲೇಖಕರು ನಿರ್ಮಿಸಿರುತ್ತಾರೆ. ಈ ಅರಿವು ಮೊದಲಿರಬೇಕು. ಅದಿದ್ದ ಮೇಲೆ, ಇಡೀ ಸಾಹಿತ್ಯದ ಪರಂಪರೆಯಲ್ಲಿ ತಾನೆಲ್ಲಿದ್ದೇನೆ ಅನ್ನುವುದು ಒಬ್ಬ ಬರಹಗಾರನಿಗೆ ಗೊತ್ತಿರಬೇಕು. ಎಷ್ಟೊಂದು ಸಾಹಿತಿಗಳು ಬದುಕಿನ ಎಷ್ಟೊಂದು ಆಯಾಮಗಳನ್ನು ಸಾಹಿತ್ಯಕ್ಕೆ ಸೇರಿಸುತ್ತ ಬಂದಿದ್ದಾರೆ, ಈ ನಿಟ್ಟಿನಲ್ಲಿ ತಾನು ಯಾವುದನ್ನು ಸೇರಿಸುತ್ತಿದ್ದೇನೆನ್ನುವುದು ತಿಳಿದರೆ ತನ್ನ ಸ್ಥಾನ ಗೊತ್ತಾಗುತ್ತದೆ. ಈ ಸ್ಪಷ್ಟತೆಯಿಲ್ಲದೇ ಹೋದರೆ ನೀವು ಏಕಾಗ್ರತೆಯಿಲ್ಲದೇ ಎಲ್ಲ ದಿಕ್ಕಿಗೂ ಓಡುತ್ತೀರಿ. ಇದು ಒಬ್ಬ ಬರಹಗಾರನಿಗೆ ಅತ್ಯಂತ ಖಾಸಗಿ ಸಂಗತಿ. ಬಹಿರಂಗವಾಗಿ ಚರ್ಚೆ ಮಾಡುವಂಥದಲ್ಲ. ನಿಧಾನವಾಗಿ, ಕಾಲಾಂತರದ ಚಿಂತನೆ ಮತ್ತು ಪ್ರಯೋಗಶೀಲತೆಯ ಮೂಲಕ, ತನ್ನ ಕೃತಿಗಳಿಗೆ ದೊರೆತ ಪ್ರತಿಕ್ರಿಯೆಗಳ ಮೂಲಕ ತಾನೇ ಕಂಡುಕೊಳ್ಳಬೇಕಿರುವುದು. ಇದು ಕೊಡುವ ಆತ್ಮವಿಶ್ವಾಸ ಸೃಜನಶೀಲತೆಗೆ ಬಹಳ ಸಹಾಯಕಾರಿ. ತಪ್ಪು ಗ್ರಹಿಕೆಗಳು ಬೇಜವಾಬ್ದಾರಿಗೆ ದಾರಿ ಮಾಡಿಕೊಡುತ್ತವೆ.

ಹಾಗಿದ್ದಾಗ ಒಬ್ಬ ಬರಹಗಾರನಿಗೆ ಓದುವಿಕೆ ಯಾಕೆ ಮುಖ್ಯ ಅನ್ನುವುದು ಮತ್ತು ಯಾವುದನ್ನು ಬರೆಯಬೇಕು, ಯಾವುದನ್ನು ಬರೆಯಬಾರದು ಅನ್ನುವುದೂ ಸಿದ್ಧವಾಗುತ್ತದೆ. ನೀವು ಯಾವುದನ್ನು ಬರೆಯಬಾರದು ಅನ್ನುವುದರ ಬಗ್ಗೆ ಬಹಳ ಪರ್ಟಿಕುಲರ್.

‘ಯಾವುದನ್ನು ಬರೆಯಬಾರದು ಅಂದರೆ? ಅನ್‍ಸೆಡ್? ವಾಚ್ಯಗೊಳಿಸಬಾರದು ಅನ್ನುವ ಅರ್ಥದಲ್ಲ ಅಥವಾ ಬರೆಯೋಕೆ ಶಕ್ತಿ ಇಲ್ಲ ಹಾಗಾಗಿ ಬರೆಯಬಾರದು ಅಂತಾನಾ?’ (ಹೀಗೆ ಕೇಳುವಾಗ ಕೀಟಲೆಯ ಧ್ವನಿಯಿತ್ತು).

ಇಲ್ಲ. ಹಾಗಲ್ಲ. ವಾಚ್ಯಗೊಳಿಸಬಾರದು ಅನ್ನುವುದು ಒಂದು ರೀತಿ. ಹಾಗೆಯೇ ಬರೆಯುವಾಗ ಅಥವಾ ಬರೆದ ಮೇಲೆ ಇದನ್ನು ಬರೆಯುವುದರಿಂದ ಕೇವಲ ನನ್ನ ಅನುಭವವನ್ನು ಹೊರಗೆಡೆಹುವುದು ಬಿಟ್ಟರೆ, ಇದು ಯಾವ ರೀತಿಯಲ್ಲೂ ಹೊಸತೇನನ್ನೂ ಹೇಳುತ್ತಿಲ್ಲ, ಇದನ್ನು ಈಗಾಗಲೇ ನೂರಾರು ಬಾರಿ ಹೇಳಿಯಾಗಿದೆ ಅನ್ನುವ ಪ್ರಜ್ಞೆ ಇರಬೇಕಲ್ಲವೆ?

ಹೌದು. ಇದು ಬಹಳ ಮುಖ್ಯ. ಯಿದ್ದಿಶ್‌ ಭಾಷೆಯ ಕತೆಗಾರ ಇಸಾಕ್ ಬಾಶೆವಿಸ್ ಸಿಂಗರ್ ಒಂದು ಮಾತು ಹೇಳುತ್ತಾನೆ, ‘ನಾನು ಬರೆಯುತ್ತಿರುವ ಎಲ್ಲವನ್ನೂ ಈ ಜಗತ್ತಿನಲ್ಲಿ ಯಾರೋ ಒಬ್ಬ ಓದುಗ ಸಂಪೂರ್ಣವಾಗಿ ಗಮನಿಸುತ್ತಿದ್ದಾನೆ, ಆದ್ದರಿಂದ ನಾನು ಅನಗತ್ಯವಾಗಿ ಏನನ್ನೂ ಹೇಳಬಾರದು, ರಿಪೀಟ್ ಮಾಡಬಾರದು’ ಅಂತ. ಈ ಸರ್ವಗ್ರಾಹಿ ಓದುಗನನ್ನು ಮೋಸ ಮಾಡುವುದು ಸಾಧ್ಯವಿಲ್ಲ. ಮೋಸ ಎಂದರೆ ನಮಗೆ ನಾವೇ ಮಾಡಿಕೊಳ್ಳುವ ಮೋಸ. ನಾವು ಏನನ್ನೋ ಬರೆದಾಗ, ನೀವು ಈಗ ಹೇಳಿದ ಹಾಗೆ ಇದು ಹೊಸದೇನನ್ನೂ ಸೇರಿಸುತ್ತಿಲ್ಲ ಎನ್ನುವುದು ನಮಗೆ ಗೊತ್ತಾದರೆ, ಅದನ್ನು ಹೊರಜಗತ್ತಿಗೆ ಪಬ್ಲಿಕ್ ಸ್ಪೇಸ್ ಒಪ್ಪಿಸುವ ಮೊದಲು ಎಚ್ಚರವಹಿಸಬೇಕು. ಈ ಪ್ರಜ್ಞೆ ಎಲ್ಲ ಬರಹಗಾರನಿಗೂ ಅವಶ್ಯ. ಇದು ನಮ್ಮ ಜವಾಬ್ದಾರಿ.

ನಿಮ್ಮ ಸೃಜನಶೀಲತೆಗೆ ಸಂಬಂಧಪಟ್ಟಂತೆ ನಿಮ್ಮ ಬಾಲ್ಯದ ಯಾವುದಾದರು ಸನ್ನಿವೇಶ ಅಥವಾ ವ್ಯಕ್ತಿ ನಿಮ್ಮ ಮೇಲೆ ಯಾವ ರೀತಿಯ ಪ್ರಭಾವ ಬೀರಿದೆ?

ಬಾಲ್ಯದಲ್ಲಿ ನನ್ನ ಅಜ್ಜನ ತಂಗಿಗೆ ಕತೆ ಹೇಳೆಂದು ಬಹಳ ಪೀಡಿಸುತ್ತಿದ್ದೆ. ಅವರು ನನಗೆ ದಿನಕ್ಕೆ ಇಪ್ಪತ್ತು ಮೂವತ್ತು ಬಾರಿ ಕತೆ ಹೇಳುತ್ತಿದ್ದರು. ಆದರೆ ಅವರು ಹೇಳುತ್ತಿದ್ದುದು ಒಂದೇ ಕತೆ. ಅವರ ಜೀವನ ಪೂರ್ತಿ ನನಗವರು ಹೇಳಿದ್ದು ಅದೊಂದನ್ನೇ. ಅದರ ಹೆಸರು ‘ನೆರಳಿನ ಕಳ್ಳ’. ಪ್ರತಿಸಲ ಅವರು ಆ ಕತೆಯನ್ನು ಹೇಳುವಾಗ ಬೇರೆ ಬೇರೆ ರೀತಿಯಿಂದ ಅದು ಶುರುವಾಗುತ್ತಿತ್ತು. ದನದ ಕೊಟ್ಟಿಗೆಯಲ್ಲಿದ್ದರೆ ಅಲ್ಲಿಂದಲೇ ಆರಂಭವಾಗುತ್ತಿತ್ತು. ನನ್ನ ತಂಗಿಯ ಕಾಲು ಮುರಿದಾಗ ಕಥಾನಾಯಕನ ತಂಗಿಯ ಕಾಲು ಮುರಿದ ಪ್ರಸಂಗದಿಂದ ಕತೆ ಶುರುವಾಯಿತು. ಹಾಗಾಗಿ ನನಗೆ ಆ ಕತೆ ಯಾವತ್ತೂ ಬೇಡವೆನ್ನಿಸಲಿಲ್ಲ. ಒಂದೇ ಕತೆಯನ್ನು ನೂರಾರು ರೀತಿಯಲ್ಲಿ ಹೇಳುವ ಕಲೆ ಅವರಲ್ಲಿತ್ತು. ಕತೆ ಕೇಳುವುದು ಮುಂದೇನೆಂಬ ಕುತೂಹಲ ತಣಿಸುವುದಕ್ಕಲ್ಲ ಎಂಬುದು ನನ್ನ ಅನುಭವಕ್ಕೆ ಬಂದದ್ದು ಅಲ್ಲಿಯೇ. ಇದು ನನ್ನ ಮೇಲೆ ಆಳವಾದ ಪರಿಣಾಮ ಬೀರಿತೆನ್ನಬಹುದು. ಒಂದು ಕತೆ ಹೇಳುವ ಕ್ರಮದಲ್ಲೇ ಕೇಳುಗನ ಅಪೇಕ್ಷೆಯನ್ನು ಅವರು ನಿಯಂತ್ರಿಸುತ್ತಿದ್ದರು. ನುರಿತ ಕತೆಗಾರರಿಗೆ ಮಾತ್ರ ಇದು ಸಾಧ್ಯ.

ಒಂದು ಮಾತಿದೆ ಒಬ್ಬ ಲೇಖಕ ಒಂದೇ ಕತೆಯನ್ನು ಹೇಳುತ್ತಿರುತ್ತಾನೆ. ಅಥವಾ ಒಂದು ಕತೆಗಾಗಿ ಉಳಿದೆಲ್ಲ ಕತೆಗಳು ಅವನಿಂದ ಬರುತ್ತಿರುತ್ತದೆ ಅಂತ...

ವಿಶಾಲವಾದ ಅರ್ಥದಲ್ಲಿ ಈ ಮಾತನ್ನು ಹೇಳಬಹುದು. ಆದರೆ ನನಗೆ ಹಾಗನ್ನಿಸಲ್ಲ. ನನ್ನ ಮೊದಲ ಸಂಕಲನದ ಕತೆಗಳಿಗೂ ನಂತರದ ಕತೆಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ನಮ್ಮ ಆದ್ಯತೆ ಕಾಳಜಿ ಗ್ರಹಿಕೆಗಳೆಲ್ಲ ಬದಲಾಗುತ್ತಿರುತ್ತವೆ. ಅಲ್ಲದೇ ಇತ್ತೀಚಿನ ಇಪ್ಪತ್ತೈದು ವರ್ಷಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಯನ್ನು ನಾವು ಟೆಕ್ನಾಲಜಿ ಇನ್ನಿತರ ಕಾರಣಗಳಿಂದ ನೋಡಿದ್ದೇವೆ. ಹಾಗಾಗಿ ಒಂದೇ ಕತೆಯನ್ನು ನಾನು ಬರೆಯುತ್ತಿದ್ದೇನೆ ಅಂತ ನನಗ್ಯಾವತ್ತೂ ಅನ್ನಿಸಲಿಲ್ಲ. ಬರಹಗಾರರನ್ನು ಯಾವುದೋ ಗುಂಪಿಗೆ ಸೇರಿಸಿ ಗ್ರಹಿಸುವ ಆಲಸ್ಯವನ್ನು ಕೂಡ ನಾನು ಒಪ್ಪುವುದಿಲ್ಲ. ಒಂದು ಉದಾಹರಣೆ ಕೊಡೋದಾದರೆ ನಾನು ಮತ್ತು ಜಯಂತ ಕಾಯ್ಕಿಣಿ, ಸಿಂಗರ್‌ನ ಕತೆಯೊಂದನ್ನ ಅನುವಾದ ಮಾಡಿದೆವು. ಹಾಗೆ ಮಾಡಿದ್ದರಿಂದ ನಾವಿಬ್ಬರೂ ಎಷ್ಟು ಬೇರೆ ರೀತಿಯ ಕತೆಗಾರರು ಎನ್ನುವುದು ಗೊತ್ತಾಯಿತು. ನಾವು ಕತೆಯನ್ನು ಓದುವ ಕ್ರಮ, ನಮ್ಮ ಪದಗಳ ಆಯ್ಕೆ, ವಾಕ್ಯ ರಚನೆ, ಎಲ್ಲವೂ ಬೇರೆ. ನಾವು ಒಂದೇ ಪ್ರದೇಶದವರು, ಇಬ್ಬರದೂ ಮನೆ ಮಾತು ಕೊಂಕಣಿ. ಹೊರಗಿನಿಂದ ನೋಡುವವರಿಗೆ ಎಷ್ಟೇ ಸಾಮ್ಯ ಕಾಣಿಸಿದರೂ ನಮ್ಮ ಭಾಷೆ ಎಷ್ಟು ಬೇರೆ ಬೇರೆಯಾಗಿದೆ ಅನ್ನುವುದನ್ನು ಈ ಅನುವಾದ ಪ್ರಕ್ರಿಯೆ ನನಗೆ ಕಾಣಿಸಿತು. ಹಾಗಾಗಿ ಒಂದೇ ಕತೆ ಒಂದೇ ರೀತಿಯ ಕತೆಗಾರರು ಅನ್ನುವುದೆಲ್ಲ ಅಷ್ಟು ಸಮಂಜಸ ಅಂತ ನನಗನ್ನಿಸುವುದಿಲ್ಲ. ಸೂಕ್ಷ್ಮವಾಗಿ ನೋಡಿದಾಗ ಕಾಣುವ ಚಿತ್ರಗಳು ಬೇರೆಯಾಗಿರುತ್ತವೆ.

ನೀವು ಕತೆಯ ತಂತ್ರದ ಬಗ್ಗೆ ವಿಶೇಷ ಕಾಳಜಿ ವಹಿಸುವವರು. ಒಂದು ಕತೆಯಿಂದ ಮತ್ತೊಂದು ಕತೆಗೆ ಅಥವಾ ಕಾದಂಬರಿಗೆ ನಮ್ಮ ಅನುಭವ ಪ್ರಪಂಚ ಬದಲಾಗುತ್ತ ಹೋದಂತೆ ತಂತ್ರವು ಹೇಗೆ ಬದಲಾಗುತ್ತದೆ? ಅಲ್ಲಿ ನೀವು ಯಾವ ರೀತಿಯ ಸವಾಲುಗಳನ್ನ ಎದುರಿಸುತ್ತೀರಿ? ಏನು ಮಾಡಿದರೂ ಈ ಕತೆಯನ್ನು ನನ್ನಿಂದ ಹೇಳಲಾಗುತ್ತಿಲ್ಲ ಅಂತ ಕೈಬಿಟ್ಟ ಕತೆಗಳಿದ್ದಾವೆಯೇ?

ತಂತ್ರವನ್ನು ಕತೆಯಿಂದ ಬೇರ್ಪಡಿಸಿ ನೋಡಬಾರದು. ಉತ್ತಮ ಕತೆಯಲ್ಲಿ ಅದು ಗುರುತಿಸಲಿಕ್ಕಾಗದ ಹಾಗೆ ಬೆರೆತಿರುತ್ತದೆ. ಕತೆಗೆ ನಿರೂಪಣೆಯ ಒಂದು ಬಿಂದು ಇರುತ್ತದೆ. ಅದು ಬಹಳ ಮುಖ್ಯ. ಕ್ಯಾಮೆರಾಗೆ ಒಂದು ಪೊಸಿಶನ್ ಇದ್ದ ಹಾಗೆ. ಆ ಕೋನದಿಂದ ಕೆಲವೊಂದು ಸಂಗತಿಗಳು ಕಾಣುತ್ತವೆ, ಕೆಲವು ಕಾಣುವುದಿಲ್ಲ. ಆ ಬಿಂದುವನ್ನು ನಿರ್ಧರಿಸುವುದೇ ಅತ್ಯಂತ ಮುಖ್ಯವಾದದ್ದು. ನಿರೂಪಕನ ಕಣ್ಣಿನಿಂದ ನೋಡಿದಾಗ ಯಾವುದು ಕಾಣುವುದಿಲ್ಲ ಎಂಬುದನ್ನು ಕಂಡುಕೊಳ್ಳುವುದು ಕತೆಗೆ ಅತ್ಯಂತ ಮುಖ್ಯ. ಕತೆಗೆ ಅನುರಣನ ಶಕ್ತಿ ಬರುವುದು ಹೇಳದಿರುವ ಮಾತುಗಳಿಂದ. ಉದಾಹರಣೆಗೆ ಅನ್‌ರಿಲೆಯಬಲ್ ನರೇಟರ್ ಇರುವ ಕತೆಗಳನ್ನು ತೆಗೆದುಕೊಳ್ಳಿ. ಮೇಲ್ನೋಟಕ್ಕೆ ನೀವು ನಿರೂಪಕನನ್ನು ನಂಬುತ್ತಿರುತ್ತೀರ ಆದರೆ ಅವನೊಳಗೆ ಸಾಕಷ್ಟು ಬಿರುಕುಗಳಿರುತ್ತವೆ. ಅನಂತಮೂರ್ತಿಯವರ ‘ಸೂರ್ಯನ ಕುದುರೆ’, ಲಂಕೇಶರ ‘ಸಹಪಾಠಿ’, ಚಿತ್ತಾಲರ ‘ಕತೆಯಾದಳು ಹುಡುಗಿ’ ಇದಕ್ಕೆ ಉತ್ತಮ ಉದಾಹರಣೆಗಳು. ನಿರೂಪಣೆಯ ಇಂಥ ಅನಿವಾರ್ಯತೆಯನ್ನು, ಕೇವಲ ತಂತ್ರವೆಂದು ಬೇರ್ಪಡಿಸಿ ನೋಡುವುದು ಸಾಧ್ಯವಿಲ್ಲವೆನ್ನುವುದನ್ನು ಅರ್ಥಮಾಡಿಕೊಳ್ಳಬೇಕಾದರೆ ಇವೇ ಕತೆಗಳನ್ನು ಬೇರೆ ಬಗೆಯಲ್ಲಿ ಬರೆಯಲು ಪ್ರಯತ್ನಿಸಬೇಕು. ನಮ್ಮ ಹೊಸ ಕತೆಗಾರರು ಇಂತಹ ಕೆಲವು ಚಟುವಟಿಕೆಗಳನ್ನು ಬರವಣಿಗೆಯ ಕಸುಬು ಕೈಗೂಡಿಸಿಕೊಳ್ಳಲು ಮಾಡಬಹುದು.

ಹೇಳಲಿಕ್ಕಾಗದೆ ಉಳಿದುಕೊಂಡಂಥ ಕತೆಗಳು?

ಇದ್ದಾವೆ. ಕೆಲವನ್ನು ಬರೆಯಲು ಪ್ರಯತ್ನಿಸಿದ್ದೇನೆ ಕೂಡ. ವಿಫಲವಾದವುಗಳನ್ನು ಕೈಬಿಟ್ಟಿದ್ದೇನೆ. ಇನ್ನೊಮ್ಮೆ ಸರಿಯಾದ ಸಮಯ ಬರಬಹುದೆಂದು ಕಾಯುವುದಷ್ಟೇ. ನನ್ನಲ್ಲಿ ಹೀಗೆ ದಡ ದಾಟದ ಎಷ್ಟೋ ಕತೆಗಳಿವೆ.

ಇದು ಸಾಧ್ಯವಾಗಬೇಕಾದರೆ ಕತೆಗಾರನಿಗೆ ತನ್ನ ಕತೆಯಿಂದ ಒಂದು ಬಗೆಯ ಎಮೋಶನಲ್ ಡಿಸ್ಟನ್ಸ್ ಇಟ್ಟುಕೊಳ್ಳಬೇಕು. ಇದು ಬಹಳ ಕಷ್ಟ. ಒಂದು ಬಗೆಯ ಭಾವುಕತೆ ನಮ್ಮ ಕತೆಗಳ ಬಗೆಗಿರುತ್ತದೆ. ಹಾಗಾಗಿ ಕತೆಗಳನ್ನು ಬಿಟ್ಟುಕೊಡುವುದು ಕಷ್ಟ.

ಬಿಟ್ಟುಕೊಡುವುದು ಅನ್ನುವುದಕ್ಕಿಂತ, ಇಷ್ಟೊಂದು ಶ್ರಮ ಹಾಕಿಯೂ ವ್ಯರ್ಥ ಆಯ್ತಲ್ಲ ಅಂತನ್ನಿಸುತ್ತೆ. ಆದರೆ ಪ್ರಕಟವಾಗದಿದ್ದ ಮಾತ್ರಕ್ಕೆ ಕತೆ ವ್ಯರ್ಥವಾಗಲ್ಲ. ಅದು ನಮ್ಮ ಮಿತಿಗಳ ಬಗ್ಗೆ ಏನನ್ನೋ ಕಲಿಸಿರತ್ತೆ. ಪ್ರಕಟಣೆಯೇ ಬರವಣಿಗೆಯ ಅಂತಿಮ ಗುರಿಯಲ್ಲ. ಕೆಲವನ್ನು ರಿಯಾಜ್‌ನಂತೆ ಮಾಡುತ್ತ ಇರಬೇಕಾಗುತ್ತದೆ. ಮತ್ತೆ, ತಮ್ಮ ಕತೆ ಚೆನ್ನಾಗಿದೆಯೋ ಇಲ್ಲವೋ ಅನ್ನುವುದು ಬರೆದವರಿಗೆ ಗೊತ್ತಿರುತ್ತೆ. ಹಾಗೆ ಗೊತ್ತಾಗದಿರುವವರು ಒಳ್ಳೆಯ ಕತೆಗಾರರಾಗಲು ಸಾಧ್ಯವಿಲ್ಲ. ಒಳ್ಳೆಯ ಕತೆಗಾರ ಒಳ್ಳೆಯ ವಿಮರ್ಶಕ ಕೂಡ ಎಂಬುದರ ಅರ್ಥ ಇದೇ ಹೊರತು ಆತ/ಆಕೆ ಒಳ್ಳೆಯ ವಿಮರ್ಶೆ ಬರೆಯುತ್ತಾರೆಂದಲ್ಲ.

ನೀವು ಕತೆಗಳಿಗಾಗಿ ಯಾವ ರೀತಿಯ ತಯಾರಿ ಮಡಿಕೊಳ್ಳುತ್ತೀರ? ಕತೆ ಬರೆದ ನಂತರದ ಎಡಿಟಿಂಗ್ ಹೇಗಿರುತ್ತೆ?

ತಯಾರಿ ಅನ್ನುವುದನ್ನು ಹೀಗೇ ಎಂದು ಗುರುತಿಸುವುದು ಕಷ್ಟ. ಕೆಲವೊಮ್ಮೆ ಕತೆ ಹೊಳೆದೊಡನೆ ಬರೆದರೆ ಒಮ್ಮೊಮ್ಮೆ ವರ್ಷಗಳು ಬೇಕಾಗುತ್ತವೆ. ಸಾಮಾನ್ಯವಾಗಿ ಎಲ್ಲರಿಗೂ ಆಗುವಂತೆ ವಸ್ತುವೊಂದು ಒಳಗೇ ಕಾಯುವುದು, ಮಾಗುವುದು ಎಲ್ಲವೂ ಇರುತ್ತೆ. ಬರವಣಿಗೆಯಲ್ಲಿ ಯಾವುದೋ ಒಂದು ಆಳವಾದ, ಅಸ್ಪಷ್ಟವಾದ ಸಂಗತಿಯನ್ನು ಮುಟ್ಟುವುದಕ್ಕೆ ಪ್ರಯತ್ನಿಸುತ್ತಿರುತ್ತೇನೆ. ಅದು ಏನೆಂದು ಬರೆದಾದ ಮೇಲೆಯೇ ಗೊತ್ತಾಗೋದು. ಅದು ಯಾವುದೋ ರೂಪದಲ್ಲಿ ನಮ್ಮನ್ನೂ ಮೀರಿ ಹೊರಬಂದಾಗ ಒಂದು ವಿಸ್ಮಯವನ್ನುಂಟು ಮಾಡುತ್ತದೆ. ಬೇಂದ್ರೆಯವರು ಹೇಳಿದ ಲೀಲೆ ಎಂಬ ಮಾತು ಇದಕ್ಕೇ ಸಂಬಂಧಿಸಿದ್ದು. ಬಹಳ ವಿಶೇಷವಾದ ಸುಖವಿದು. ಕೆಲವೊಮ್ಮೆ ಕತೆಗೆ ಸಂಬಂಧಪಡದ ಅನವಶ್ಯಕ ಸಂಗತಿಗಳನ್ನು ಬರೆದೆನೆಂದು ಭಾವಿಸಿಕೊಂಡಿರುತ್ತೇನೆ. ಆದರೆ ಎಡಿಟಿಂಗಿಗೆ ಕೂತಾಗ ಅವುಗಳ ನಡುವಿನ ಸಂಬಂಧ ನಿಚ್ಚಳವಾಗುತ್ತ ಹೋಗುತ್ತದೆ. ಎಡಿಟಿಂಗ್ ಅನ್ನೋದು ನನ್ನ ಕತೆಯನ್ನು ನಾನೇ ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆ.

ಇಂಥ ಬರವಣಿಗೆಗೆ ನಿಮ್ಮೊಳಗೊಂದು ಏಕಾಂತದ ಅವಶ್ಯಕತೆ ಖಂಡಿತ ಬೇಕಾಗುತ್ತೆ. ಸಾಹಿತ್ಯ, ಕಾವ್ಯ ಎನ್ನುವುದು ಧ್ಯಾನವೋ ಅಲ್ಲವೋ ಅನ್ನುವ ಚರ್ಚೆಯನ್ನು ಪಕ್ಕಕ್ಕಿಡೋಣ. ಆದರೆ ಒಂದು ಏಕಾಂತದ ಅವಶ್ಯಕತೆ ಮನಸ್ಸಿಗಿದೆ. ನಿಮ್ಮೊಳಗೆ ನೀವು ಈ ಸ್ಪೇಸ್ ಕ್ರಿಯೇಟ್ ಮಾಡಿಕೊಳ್ಳುವುದಕ್ಕೆ ಏನಾದರು ವಿಶೇಷ ಪ್ರಯತ್ನವಿದೆಯೇ? ಅದು ಅನಾಯಾಸವಾಗಿ ದೊರಕುತ್ತಾ?

ನಾನು ಒಂದು ಮಟ್ಟದ ಪ್ರಯತ್ನ ಮಾಡುತ್ತೇನೆ. ನೀವು ಹೇಳಿದ ಮನಸ್ಸಿನ ಏಕಾಂತ ನನಗೆ ಬಹಳ ಮುಖ್ಯ. ಭೌತಿಕ ಏಕಾಂತ ಅಷ್ಟು ಮುಖ್ಯ ಅಲ್ಲ. ಎಂಥ ಗದ್ದಲದಲ್ಲೂ ನಾನು ಬರೆಯಬಲ್ಲೆ. ನೀವು ಕವಿತೆಗಳನ್ನು ಬರೆಯೋದ್ರಿಂದ ನಿಮಗಿದು ಗೊತ್ತಿರುತ್ತೆ, ಒಂದು ಪದ ಅಥವಾ ಸಾಲು ಬಂದ ನಂತರ ಮತ್ತೊಂದು ಅದರ ಹಿಂದೆಯೇ ಹುಟ್ಟುತ್ತದೆ. ಅದು ಹೇಗೆ ಅಂತ ಗೊತ್ತಾಗೋದಿಲ್ಲ. ಶಬ್ದದಿಂದ ಶಬ್ದ ಹುಟ್ಟುವ ಆ ಓಘಕ್ಕೆ ಬೇಕಾದ ಏಕಾಗ್ರತೆ ಬೇರೆ ಬಗೆಯದು. ಒಂದೇ ವಸ್ತುವಿನ ಜೊತೆ ಸತತವಾಗಿ ತೊಡಗಿರುವುದರಿಂದ ಅದು ದೊರೆಯುತ್ತದೆ.

ಕಲೆಯ ಬೇರೆ ಯಾವ ಕ್ಷೇತ್ರ ನಿಮ್ಮನ್ನು ತಟ್ಟಿದೆ?

ಅಭಿರುಚಿಯ ಕ್ಷೇತ್ರಗಳು ಹಲವಾರಿವೆ. ಆದರೆ ಯಕ್ಷಗಾನ ಮತ್ತು ತಾಳಮದ್ದಲೆ ನನ್ನನ್ನು ಅತ್ಯಂತ ಗಾಢವಾಗಿ ತಟ್ಟಿರುವ ಕಲೆಗಳು. ಶಂಭು ಹೆಗಡೆ, ಪಿ.ವಿ. ಹಾಸ್ಯಗಾರರು ನನ್ನ ಟೀನೇಜಿನ ಹೀರೋಗಳು. ಸಣ್ಣವಯಸ್ಸಿನಿಂದಲೂ ನನ್ನ ಮನಸ್ಸು, ಹೃದಯ, ಇಡಿಯ ಜೀವವನ್ನು ಆವರಿಸಿದ ಕಲೆ ಅದು. ಅದರ ಬಗ್ಗೆ ಹೇಳತೀರದ ಆಕರ್ಷಣೆ.

ತಾಳಮದ್ದಲೆಯಲ್ಲಿ ಮಾತಿನ ಮೂಲಕ ಸಂಭಾಷಣೆಯ ಮೂಲಕ ಜಗತ್ತನ್ನು ನಿರ್ಮಿಸುವ ಕ್ರಿಯೆಯಿದೆ. ನಿಮ್ಮ ‘ನಿರ್ವಾಣ’ ಥರದ ಕತೆಗಳಲ್ಲಿ ಈ ಕ್ರಮ ಕಾಣುತ್ತೆ. ‘ಒಂದು ಬದಿ ಕಡಲು’ ಕಾದಂಬರಿಯ ಪರಿಸರಕ್ಕೂ ‘ಊರುಭಂಗ’ದ ಪರಿಸರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ನೀವು ಊರಿನ ಕತೆ ಬರೆಯುವಾಗ ಪರಿಸರವನ್ನು ಕಟ್ಟಿಕೊಡುತ್ತೀರ. ಆದರೆ ಕಾರ್ಪೊರೇಟ್ ಜಗತ್ತಿನ ಕತೆ ಬರೆಯುವಾಗ ಪಾತ್ರಗಳ ಮನೋರಚನೆ, ತುಮುಲ, ಸಂಕೀರ್ಣತೆಗಳನ್ನು ಕಟ್ಟಿಕೊಡುತ್ತೀರ. ಈ ಎರಡೂ ಕ್ರಮಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಇದು ಯಾಕೆ?

ಒಂದು ಪರಿಸರವನ್ನು ಯಾಕೆ ಕಟ್ಟಿಕೊಡುತ್ತೇವೆ? ಕಥನದಲ್ಲಿ ಅದಕ್ಕೊಂದು ಮಹತ್ವದ ಸ್ಥಾನವಿರುವುದರಿಂದ. ಅಂದರೆ, ಅತ್ಯಂತ ಕಡಿಮೆ ಶಬ್ದಗಳಲ್ಲಿ ಕತೆಗೆ ಅಗತ್ಯವಾದದ್ದನ್ನು ಅದು ಉದ್ದೀಪಿಸುತ್ತಿರಬೇಕು. ‘ಒಂದು ಬದಿ ಕಡಲು’ ಥರದ ಕತೆಗಳು ಕನ್ನಡದ್ದೇ ಕತೆಗಳಾಗಿರುವುದರಿಂದ ಅಂಥಲ್ಲಿ ಅದು ಸಹಜವಾಗಿ ಸಾಧ್ಯವಾಗುತ್ತದೆ. ಅದೇ ನೀವು ಕಾರ್ಪೊರೇಟ್ ಜಗತ್ತಿಗೆ ಬಂದರೆ -ಅಲ್ಲಿ ಕನ್ನಡವಿಲ್ಲ. ಕನ್ನಡಿಗರಿಲ್ಲ ಅಂತಲ್ಲ, ಕನ್ನಡತನ ಇಲ್ಲ. ಕತೆಗಾರನಿಗೂ ಓದುಗನಿಗೂ ಒಂದು ಸಮಾನವಾದ ಪಾತಳಿಯ ಸೃಷ್ಟಿ ಕೂಡ ಪರಿಸರವನ್ನು ಕಟ್ಟುವುದರ ಉದ್ದೇಶ. ಕಾರ್ಪೊರೇಟ್ ಜಗತ್ತಿನಲ್ಲಿ ಕನ್ನಡ ಸಹಜವಾಗಿ ಲಭ್ಯವಿಲ್ಲ. ಅಂಥ ಪರಿಸರವನ್ನ ತರುವುದಕ್ಕೆ ಹೋದರೆ ಅವಶ್ಯಕತೆಗಿಂತ ಹೆಚ್ಚಿನ ವಿವರಗಳನ್ನ ಕೊಡಬೇಕಾಗುತ್ತದೆ. ಹಾಗಾದದ್ದೇ ಕತೆಯ ಓದು ಎಡವುತ್ತದೆ. ಬರವಣಿಗೆ ಅನಗತ್ಯವಾಗಿ ದೀರ್ಘವೂ ನಿಸ್ಸಾರವೂ ಆಗುತ್ತದೆ. ನನ್ನ ‘ಹುಲಿಸವಾರಿ’ ಕತೆಯ ಮೊದಲ ಕರಡು ಅನುವಾದಿತ ಕತೆಯ ಥರ ಓದಿಸಿಕೊಂಡಿತು. ಎಷ್ಟೊಂದು ಬಾರಿ ತಿದ್ದಿ ಅದನ್ನು ಹದಗೊಳಿಸಬೇಕಾಯ್ತು. ನಾನು ಈಗ ಆ ಕತೆಯನ್ನು ಬರೆದರೆ ಇನ್ನೂ ಚೆನ್ನಾಗಿ ಮೂಡಿಬರಬಹುದು ಅನ್ನಿಸುತ್ತದೆ. ಯಾಕೆಂದರೆ ಈಗ ಕನ್ನಡವು ಆ ಜಗತ್ತನ್ನು ಸ್ವಲ್ಪಮಟ್ಟಿಗೆ ಹೀರಿಕೊಂಡಿದೆ. ಬಳಕೆಯಿಂದ ಆ ಜಗತ್ತಿನ ಅನೇಕ ಶಬ್ದಗಳು ಮತ್ತು ನುಡಿಗಟ್ಟುಗಳು ತಮ್ಮ ಪೆಡಸುತನವನ್ನು ಕಳಕೊಂಡು ಕೈಗೆಟಕುವಂತಾಗಿವೆ. 

‘ಹುಲಿಸವಾರಿ’ ಕತೆಯ ಬಗ್ಗೆ ಹೇಳಿದಿರಿ. ‘ನಿರ್ವಾಣ’, ‘ಊರುಭಂಗ’ ಎಲ್ಲ ಕತೆಗಳಲ್ಲೂ ಒಂದು ಅಟ್ಟರ್ ಹೆಲ್ಪ್‌ಲೆಸ್‌ನೆಸ್ ಇದೆ. ಅಸಹಾಯಕತೆ. ಮನುಷ್ಯ ಟ್ರ್ಯಾಪ್ ಆಗಿಬಿಡುವ ದುರಂತವಿದೆ. ಇಂದಿನ ಜಾಗತೀಕರಣದ ಕತೆಗಳಿಗೆ ಇಂಥ ಅಸಹಾಯಕತೆಯಿಂದ ಬಿಡುಗಡೆ ಇದೆಯಾ?

ಇದು ಬಹಳ ದೊಡ್ಡ ಟ್ರ್ಯಾಪ್. ಸುಲಭದಲ್ಲಿ ಇದರಿಂದ ಬಿಡುಗಡೆ ಸಾಧ್ಯವಿಲ್ಲ. ಜಾಗತೀಕರಣದ ಆಂತರ್ಯವು ಮನುಷ್ಯನ ಕೆಲವು ಮೂಲಭೂತ ದೌರ್ಬಲ್ಯಗಳೊಂದಿಗೆ ತಳುಕು ಹಾಕಿಕೊಂಡಿದೆ. ನಾವದನ್ನು ಕಪ್ಪು-–ಬಿಳಿಯಾಗಿ ನೋಡುವುದಕ್ಕೆ ಸಾಧ್ಯವಿಲ್ಲ. ಅದರ ಕೊಂಡಿಗಳೆಲ್ಲ ಎಷ್ಟು ಕಡೆ ಹರಡಿಕೊಂಡಿದೆಯೆಂದರೆ ಬಹುಶಃ ಅದನ್ನು ಅರ್ಥಮಾಡಿಕೊಳ್ಳಲು ಫಿಲಾಸಫಿಯತ್ತ ಮುಖ ಮಾಡಬೇಕು ಅನ್ನಿಸುತ್ತದೆ. ಜಾಗತೀಕರಣದ ಬಗ್ಗೆ ಮೊಟ್ಟಮೊದಲು ಪ್ರತಿರೋಧ ಬಂದಿದ್ದು ಪ್ರಥಮ ಜಗತ್ತಿನ ದೇಶಗಳಿಂದಲೇ. 2008ರಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾದಾಗ ಜನರು ಬೇರೆ ರೀತಿಯಲ್ಲಿ ಯೋಚಿಸುವುದಕ್ಕೆ ಶುರು ಮಾಡಿದರು. ಒಂದು ದೊಡ್ಡ ಆಘಾತ ಆಗದ ಹೊರತು ಇದರಿಂದ ಬಿಡುಗಡೆ ಹೊಂದುವುದರ ಬಗ್ಗೆ ನಾವು ಯೋಚನೆ ಕೂಡ ಮಾಡುವುದಿಲ್ಲ. ಅಂಥದ್ದೊಂದು ಆಘಾತವಾದಾಗ ಬಹುಶಃ ಏನಾದರೂ ಸಾಧ್ಯವಾಗಬಹುದು.

ಈ ಜಾಗತೀಕರಣದ ಸಂಕೀರ್ಣತೆಗಳನ್ನು ಸರಿಯಾದ ತಂತುಗಳಲ್ಲಿ ಹಿಡಿಯುವ ಕ್ರಮ ನಮಗೆ ದಕ್ಕಿದೆ ಅಂತ ಅನ್ನಿಸುತ್ತಾ? ಕಪ್ಪು ಬಿಳಿಯ ವರ್ಗೀಕರಣದಲ್ಲಿ ಕ್ಲೀಷೆಯಾದ ಗ್ರಹಿಕೆಗಳೇ ಕಾಣಿಸುತ್ತಿವೆ. ಅದನ್ನು ಅಥಾರಿಟೇಟಿವ್ ಆಗಿ ಗ್ರಹಿಸಲು ಬೇಕಾದ ಸಿದ್ಧತೆ ಕನ್ನಡಕ್ಕೆ ಬೇಕಿದೆ ಅಂತ ಅನ್ನಿಸುತ್ತ?

ಜಾಗತೀಕರಣವು ಕೇವಲ ಆರ್ಥಿಕ ಬದಲಾವಣೆಯಲ್ಲ, ಅದು ಮನಸ್ಸು ಮತ್ತು ಬುದ್ಧಿಯ ಪದರಗಳನ್ನ ಅನೇಕ ರೀತಿಯಿಂದ ಆವರಿಸಿಕೊಂಡಿರುವ ಒಂದು ಮಹತ್ವದ ವಿದ್ಯಮಾನ. ಸೋರುವ ಸೂರಿನಲ್ಲಿ ಅದೃಶ್ಯ ಸಂದಿಗಳಿಂದ ನೀರು ಹಾದು ಜಿನುಗುವ ಹಾಗೆ ಇದು ನಮ್ಮ ಕೈಮೀರಿ ಸಮಾಜದ ಸರ್ವಾಂಗ ವ್ಯಾಪಿಸಿಕೊಂಡಿದೆ. ನಮ್ಮ ಸಂಬಂಧಗಳು, ಜೀವನದ ಅಪೇಕ್ಷೆಗಳು, ಪ್ರೇಮ–ಕಾಮಗಳು, ನೈತಿಕ ನಿಲುವುಗಳು ನೂರೆಂಟು ಬಗೆಯಲ್ಲಿ ಇದಕ್ಕೆ ತಳುಕು ಹಾಕಿಕೊಂಡಿವೆ. ನಾವು ಆ ಸಂಕೀರ್ಣತೆಯನ್ನು ಗುರುತಿಸಿದಾಗ ಮಾತ್ರ ಈ ಕಾಲದ ಬಹುಮುಖ್ಯ ಘಟನೆಯಾದ ಜಾಗತೀಕರಣದೊಡನೆಯ ನಮ್ಮ ಸಂಬಂಧವೂ ಅರ್ಥವಾಗುತ್ತದೆ. ನಾವೆಲ್ಲರೂ ಒಂದಲ್ಲ ಒಂದು ಬಗೆಯಲ್ಲಿ, ಕಣ್ಣಿಗೆ ಕಾಣದ ರೀತಿಯಲ್ಲಿ ಜಾಗತೀಕರಣದ ಫಲಾನುಭವಿಗಳು. ಆ ಮಾರ್ಗದಲ್ಲಿ ಮತ್ತೇನನ್ನೋ ಕಳೆದುಕೊಂಡಿದ್ದೇವೆ ಕೂಡ. ಆದರೆ ಜಾಗತೀಕರಣವನ್ನು ಕಟುವಾಗಿ ವಿಮರ್ಶಿಸುವಾಗ ಎರಡನ್ನೂ ಗಮನದಲ್ಲಿಟ್ಟುಕೊಳ್ಳದೇ ಹೋದರೆ ವೈಯಕ್ತಿಕ ಜೀವನಕ್ಕೂ ಸಾರ್ವಜನಿಕ ನಿಲುವಿಗೂ ವ್ಯತ್ಯಾಸ ಬಂದು ಎಡಬಿಡಂಗಿಗಳಾಗುತ್ತೇವೆ. ಕನ್ನಡ ಸಾಹಿತ್ಯದಲ್ಲಿರುವ ತಪ್ಪು ಗ್ರಹಿಕೆಯೆಂದರೆ ಜಾಗತೀಕರಣದ ಬಗ್ಗೆ ಮಾತಾಡಬಲ್ಲವರು ಬರೀ ಸಿಟಿಯ ರೈಟರ್ಸ್, ಐಟಿ ಅಥವಾ ಟೆಕ್ನಾಲಜಿ ಕ್ಷೇತ್ರದಲ್ಲಿರುವವರು ಅನ್ನೋದು. ಆದರೆ ಅಮರೇಶ ನುಗಡೋಣಿಯವರ ಎಷ್ಟೊಂದು ಕತೆಗಳು, ಗ್ರಾಮೀಣ ಕರ್ನಾಟಕದ ನೆಲದಲ್ಲಿಯೇ ಅರಳಿರುವ ಕತೆಗಳು, ಜಾಗತೀಕರಣದ ಕುರಿತಾಗಿವೆ. ಅದರ ಹಲವು ಮಗ್ಗಲುಗಳನ್ನು ಅವರು ಎಷ್ಟೊಂದು ಸೂಕ್ಷ್ಮವಾಗಿ ಶಕ್ತಿಯುತವಾಗಿ ತೋರಿಸಿದ್ದಾರೆ. ಈ ಕುರಿತು ಹೆಚ್ಚಿನ ಚರ್ಚೆಯಾಗಿಲ್ಲ. ಈಗ ಜಗತ್ತಿನೆಲ್ಲೆಡೆ ಬೆಳೆಯುತ್ತಿರುವ ಬಲಪಂಥೀಯ ಒಲವಿನ ಮೂಲದಲ್ಲಿ ಇರೋದು ಕೂಡ ಜಾಗತೀಕರಣವೇ. ಇಂತಹ ಸಂಕೀರ್ಣವಾದ ಸಂಗತಿಯನ್ನು ಸರಳೀಕೃತ ಗ್ರಹಿಕೆಗಳ ಮೂಲಕ ತೆಳುಗೊಳಿಸಬಾರದು.

ಕನ್ನಡದ ಬರಹಗಳು ಬೇರೆ ಭಾಷೆಗಳಿಗೆ, ಮುಖ್ಯವಾಗಿ ಇಂಗ್ಲೀಷಿಗೆ ಹೋಗುವುದು ಎಷ್ಟು ಮುಖ್ಯ? ಇದನ್ನು ಎರಡು ರೀತಿ ಅರ್ಥ ಮಾಡಿಕೊಳ್ಳಬಹುದು. ಒಂದು ನನ್ನ ಬರವಣಿಗೆ ಹೆಚ್ಚು ಜನರನ್ನು ತಲುಪಬೇಕು ಅನ್ನುವ ತುಡಿತ. ಮತ್ತೊಂದು, ಹಾಗೆ ಅನುವಾದ ಆಗುವ ಕ್ರಿಯೆಯಲ್ಲಿ ತನ್ನ ಕೃತಿಯು ಮತ್ತೊಂದೇ ವಿಸ್ತಾರವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ ಅನ್ನುವುದು. ಈ ಅನುವಾದದ ಬಗ್ಗೆ ನಿಮ್ಮ ಅನಿಸಿಕೆ ಏನು?

ಆಗಲೇ ಹೇಳಿದ ಹಾಗೆ ಪ್ರಕಟಣೆಯೇ ಬರವಣಿಗೆಯ ಅಂತಿಮ ಗುರಿಯಾಗಬಾರದು. ಇದು ಇನ್ನೂ ಮುಂದೆ. ಹಾಗಾಗಿ ಇಂಗ್ಲೀಷಿಗೆ ಅನುವಾದ ಆಗುವುದು ಬರವಣಿಗೆಯ ಗುಣಮಟ್ಟದ ದೃಷ್ಟಿಯಿಂದ ಅಷ್ಟು ಮಹತ್ವದ್ದು ಅಂತನ್ನಿಸುವುದಿಲ್ಲ. ಆದರೆ ಅನುವಾದ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಸಾಧ್ಯವಾದರೆ ಅದು ಬರವಣಿಗೆಯ ಕಸುಬಿನ ಬಗ್ಗೆ ಕೆಲವು ಒಳನೋಟಗಳನ್ನು ಕೊಡುತ್ತದೆ. ಕನ್ನಡದ ಎಷ್ಟೋ ಗಂಭೀರ ಮಾತುಗಳು ಇನ್ನೊಂದು ಭಾಷೆಯಲ್ಲಿ ಕ್ಷುಲ್ಲಕವಾಗಿ ತೋರುತ್ತವೆ. ಒಬ್ಬ ಸೃಜನಶೀಲ ಲೇಖಕನಿಗೆ ಈ ಅನುಭವ ಮುಖ್ಯ. ಅನುವಾದದಿಂದ ವಿಪುಲ ಸಂಖ್ಯೆಯಲ್ಲಿ ಓದುಗರು ದೊರೆಯುತ್ತಾರೆನ್ನುವುದು ನಿಜ. ಕನ್ನಡ ಸಂಸ್ಕೃತಿಯ ಅರಿವು ಇಲ್ಲದಿರುವಾಗಲೂ ಅದನ್ನು ಓದಿ ಪ್ರತಿಸ್ಪಂದಿಸುವ ಓದುಗರು ಕೃತಿಯನ್ನು ಗ್ರಹಿಸುವ ಕ್ರಮವೇ ಬೇರೆ. ಅದೂ ಒಂದು ವಿಶಿಷ್ಟವಾದ ಅನುಭವವೇ.

ನಿಮ್ಮ ಬರವಣಿಗೆಯ ಮೊದಲ ಕಡತವನ್ನ ಇತರ ಬರಹಗಾರರೊಂದಿಗೆ ಹಂಚಿಕೊಳ್ಳುತ್ತೀರ? ಚರ್ಚಿಸುತ್ತೀರ?

ಪ್ರಕಟನೆಯ ಮೊದಲು ಕೆಲವರೊಂದಿಗೆ ಕರಡನ್ನು ಹಂಚಿಕೊಳ್ಳುತ್ತೇನೆ. ನಾನು ಪ್ರಯತ್ನಿಸುವ ಸೂಕ್ಷ್ಮ ಸಂಗತಿಗಳು ಅವರಿಗೆ ಅರ್ಥವಾಗುತ್ತದೆನ್ನುವ ಭರವಸೆಯಿರುವುದರಿಂದ ಅವರ ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಇಂಥ ಕೆಲವು ಸ್ನೇಹಿತರಿರುವುದಕ್ಕೂ ಅದೃಷ್ಟ ಬೇಕು.

ನಿಮ್ಮ ಹೊಸ ನಾಟಕ? (‘ಅದರ ಬಗ್ಗೆ ಈಗಲೇ ಮಾತು ಬೇಡ. ಅದೆಲ್ಲ ಬರೆದ ಮೇಲೆಯೇ...’ ಎಂದು ಮಾತು ತೇಲಿಸಿದರು!) ನೀವು ಎಲ್ಲಿಯೂ ನಿಮ್ಮ ಹೊಸ ಕೃತಿಯ ಬಗ್ಗೆ ಒಂಚೂರು ಸುಳಿವು ಬಿಟ್ಟುಕೊಡುವುದಿಲ್ಲ. ಈ ನಾಟಕದ ಬಗ್ಗೆಯೂ ನನಗೆ ಮತ್ತೊಬ್ಬರಿಂದ ತಿಳಿಯಿತು. ಯಾಕೆ ನಿಮ್ಮ ಬರವಣಿಗೆಯನ್ನು ಇಷ್ಟು ಗೌಪ್ಯವಾಗಿಡುತ್ತೀರಿ?

ಗೌಪ್ಯತೆ ಅಲ್ಲ. ಇನ್ನೂ ಬರೆಯದಿರುವುದರ ಬಗ್ಗೆ ಮಾತಾಡಿದರೆ ಅಸ್ಪಷ್ಟವಾಗಿರುವ ಸಂಗತಿಗಳು ಗೋಚರಿಸತೊಡಗುತ್ತವೆ. ನನಗದು ಬರವಣಿಗೆಯಲ್ಲೇ ಸ್ಪಷ್ಟವಾಗಬೇಕು. ಇಲ್ಲದಿದ್ದರೆ ಅದರ ಬಗ್ಗೆ ನನಗೇ ಸ್ವತಃ ಆಕರ್ಷಣೆ ಉಳಿಯುವುದಿಲ್ಲ. ಅಡಿಗೆಯ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ, ಮಾಡಿ ಬಡಿಸಿದಾಗಲೇ ಅದು ನಿಜ. ಇದೂ ಹಾಗೆಯೇ.

ಕತೆಗಾರ, ಕಾದಂಬರಿಕಾರರಾಗಿ ನೀವು ವಿಮರ್ಶೆಯನ್ನು ನೋಡುವ ರೀತಿ ಯಾವುದು? ಅದರ ಕುರಿತು ನಿಮ್ಮ ನಿರೀಕ್ಷೆ, ಅಪೇಕ್ಷೆಗಳು ಏನು?

ಒಂದು ಸೃಜನಶೀಲ ಕೃತಿಯ ಅರ್ಥವ್ಯಾಪ್ತಿಯಲ್ಲಿ ಕೃತಿಕಾರನ ಅರಿವಿಗೂ ಬಾರದ ಕೆಲವು ಸಂಗತಿಗಳಿರುತ್ತಾವೆ. ಇದು, ಭಾಷೆ ಮತ್ತು ಸಂಸ್ಕೃತಿಯು ನಮ್ಮ ಸುಪ್ತಪ್ರಜ್ಞೆಯನ್ನು ರೂಪಿಸಿರುವುದರಿಂದ ಆಗುವಂಥದ್ದು. ನಮ್ಮ ಅತ್ಯುತ್ತಮ ವಿಮರ್ಶಕರು ಕೃತಿಯ ಇಂಥ ಮಗ್ಗಲುಗಳನ್ನು ತೋರಿಸುವಲ್ಲಿ, ಅವುಗಳನ್ನು ಅರ್ಥೈಸುವಲ್ಲಿ ಅತ್ಯಂತ ಮುಖ್ಯವಾದ ಕೆಲಸ ಮಾಡಿದ್ದಾರೆ. ಒಂದು ಆರೋಗ್ಯಪೂರ್ಣ ಸಾಹಿತ್ಯ ಸಂದರ್ಭದಲ್ಲಿ ವಿಮರ್ಶೆ ಮತ್ತು ಸೃಜನಶೀಲ ಸಾಹಿತ್ಯ ಪೂರಕವಾಗಿರುತ್ತವೆ ಮತ್ತು ಆಳದಲ್ಲಿ ಪರಸ್ಪರ ಸವಾಲು-–ಜವಾಬುಗಳಲ್ಲಿ ತೊಡಗಿರುತ್ತವೆ. ಯಾರದೇ ಕೃತಿಯ ಕುರಿತಾಗಿದ್ದರೂ, ಒಂದು ಉತ್ತಮ ವಿಮರ್ಶೆ ನನಗೆ ಏನನ್ನೋ ಖಂಡಿತ ಒದಗಿಸುತ್ತದೆ. ಅಷ್ಟೇ ಅಲ್ಲ, ದಶಕಗಳ ಹಿಂದಿನ ಸಾಹಿತ್ಯ ವಿಮರ್ಶೆಯೂ ಪ್ರಸ್ತುತವೇ. ಒಬ್ಬ ಸೃಜನಶೀಲ ಲೇಖಕನಾಗಿ ಇದು ನನಗೆ ಅತ್ಯಂತ ಮುಖ್ಯ. ತಮ್ಮ ಕೃತಿಯ ವಿಮರ್ಶೆಗೆ ಕಾಯುತ್ತ, ಅದರಿಂದ ಮಾತ್ರ ಕಲಿಯಬಯಸುವ ಲೇಖಕ ಬಹಳ ದೂರ ಹೋಗುವುದಿಲ್ಲ. ಹೊಸಬರನ್ನು ಓದಿಗೆ ಪ್ರಚೋದಿಸುವಾಗ ಕೇವಲ ಕತೆ, ಕಾದಂಬರಿಗಳನ್ನು ಮಾತ್ರ ಹೆಸರಿಸುವುದು ಪರಿಪಾಠವಾಗಿದೆ. ಅವರು ಕನ್ನಡದ ವಿಮರ್ಶೆಯನ್ನೂ ಸಹ ಓದುವ ಅಗತ್ಯವಿದೆ. ವಿಮರ್ಶೆ ಅಕೆಡೆಮಿಕ್ ವಲಯದವರಿಗೆ ಮಾತ್ರ ಎಂಬ ಪೂರ್ವಗ್ರಹದಿಂದ ಹೊರಬರಬೇಕು.

ತರುಣ ಪೀಳಿಗೆ ವಿಮರ್ಶೆಗೆ ಯಾಕೆ ಹಿಂಜರಿಯುತ್ತಿದೆ?

ವಿಮರ್ಶೆಯೆಂದರೆ ಮುನ್ನೂರು ಶಬ್ದಗಳಲ್ಲಿ ಸಾರಾಂಶ ಹೇಳಿ ಪುಸ್ತಕ ಪರಿಚಯ ಮಾಡಿಸುವುದಲ್ಲ. ಸಾಹಿತ್ಯ ವಿಮರ್ಶೆಗೆ ಸತತ ಅಧ್ಯಯನ ಮತ್ತು ಪ್ರತಿಭೆ ಬೇಕು. ಕನ್ನಡದ ಅತ್ಯುತ್ತಮ ವಿಮರ್ಶೆಯನ್ನು ಓದಿದರೆ ಅದರ ಹಿಂದಿನ ಓದಿನ ಆಳ ಗೊತ್ತಾಗುತ್ತದೆ. ಇಂಥ ಶ್ರಮದ ಫಲ ದೊರಕುವುದಕ್ಕೆ ಸಮಯ ಬೇಕು. ಒಟ್ಟೂ ಅವಸರದಲ್ಲಿರುವ ನಮ್ಮ ತರುಣಪೀಳಿಗೆಗೆ ಇದು ಆಕರ್ಷಕವಾಗಿ ಕಾಣುತ್ತಿಲ್ಲವೆನಿಸುತ್ತದೆ. ವಿಮರ್ಶೆಯೇ ಎಂದಲ್ಲ, ಕತೆ, ಕವಿತೆಗಳನ್ನು ಬರೆಯುವವರೂ ಸಹ ಸಾಹಿತ್ಯಕ್ಕೆ ಅತ್ಯಗತ್ಯವಾದ ಓದು ಮತ್ತು ಅಭ್ಯಾಸಕ್ಕೆ ಬೇಕಾದ ಶ್ರಮವನ್ನು ಗಣಿಸುವುದಿಲ್ಲ. 

ವಿಮರ್ಶಕರು ಪುಸ್ತಕದ ‘ಬೆಲೆ ಕಟ್ಟುತ್ತಾರೆ’, ‘ಮೌಲ್ಯಮಾಪನ ಮಾಡುತ್ತಾರೆ’ ಎಂಬ ಸರಳೀಕೃತ ಗ್ರಹಿಕೆಗಳಿಂದ ಅಧ್ಯಯನದ ಬಲವಿಲ್ಲದ ಹೊಸ ವಿಮರ್ಶಕರು ತಮಗೆ ಸಲ್ಲದ ಮಹತ್ವವನ್ನು ಆರೋಪಿಸಿ­ಕೊಂಡು ಪುಸ್ತಕಗಳ ಬಗ್ಗೆ ಭೋಳೆಯಾಗಿ ಬರೆಯತೊಡಗಿದ್ದರೆ ಅಂಥದೇ ಗ್ರಹಿಕೆಯಿರುವ ಲೇಖಕರು ವಿಮರ್ಶಕರೆಂದರೆ ಎದುರಾಳಿಗಳೆಂದು ಭಾವಿಸಿ ಉಪೇಕ್ಷೆಯಿಂದ ಮಾತನಾಡುತ್ತಾರೆ.

ಕೊನೆಯದಾಗಿ, ಒಬ್ಬ ಲೇಖಕ ಯಾವಾಗ ಸಾಯುತ್ತಾನೆ? ಅದನ್ನೇ ಇನ್ನೊಂದು ರೀತಿಯಲ್ಲಿ ಕೇಳುವುದಾದರೆ ಯಾವುದು ಒಬ್ಬ ಕತೆಗಾರನಿಗೆ ಜೀವಂತವಾಗಿರುವುದು ಅತ್ಯವಶ್ಯಕ ಸಂಗತಿ?

ಪಿ. ಲಂಕೇಶ್ ಒಂದು ಕಡೆ ಹೇಳುತ್ತಾರೆ, ‘ನಿರ್ಲಕ್ಷ್ಯವೇ ಕತೆಗಾರನಿಗೆ ಮೃತ್ಯು’ ಅಂತ. ಎಂದರೆ ಹೊಗಳಿಸಿಕೊಳ್ಳುತ್ತ ಇರಬೇಕು ಅಂತಲ್ಲ. ಜಗಳದಲ್ಲೋ ಟೀಕೆಯಲ್ಲೋ ಒಟ್ಟಿನಲ್ಲಿ ಒಬ್ಬ ಬರಹಗಾರ ಚರ್ಚೆಯಲ್ಲಿದ್ದು ರೆಲವೆಂಟ್ ಆಗಿರಬೇಕು. ಹಾಗೆಯೇ ಇಂಟಲೆಕ್ಚ್ಯುಲ್ ಸಫರಿಂಗ್ ಅನ್ನುವುದು ಒಬ್ಬ ಬರಹಗಾರನಿಗೆ ಮುಖ್ಯ ಅಂತ ಅನಂತಮೂರ್ತಿ ಹೇಳುತ್ತಿದ್ದರು. ಇವೆರಡೂ ಇದ್ದಾಗ ಲೇಖಕ ಜೀವಂತವಾಗಿರುತ್ತಾನೆ. ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ದೇವನೂರ ಮಹಾದೇವರ ಒಂದು ಹೇಳಿಕೆಯನ್ನು ಓದಿದ್ದೆ. ಆ ವರ್ಷದ ಅತ್ಯಂತ ಖೇದಕರ ನೋವಿನ ಸಂಗತಿ ಯಾವುದು ಅಂತ ಒಂದು ಪತ್ರಿಕೆಯವರು ಕೇಳಿದಾಗ, ಇಥಿಯೋಪಿಯಾದ ಬರಗಾಲ ತನಗೆ ತೀವ್ರವಾದ ನೋವಿನ ಸಂಗತಿ ಎಂದಿದ್ದರು. ಇಲ್ಲಿಯ ಒಬ್ಬ ಮನುಷ್ಯ ಇಥಿಯೋಪಿಯಾದ ನೋವಿಗೆ ಮಿಡಿಯುವ ಗುಣ ಇದೆಯಲ್ಲ ಇದು ಇಂಟೆಲೆಕ್ಚ್ಯುಲ್ ಸಫರಿಂಗ್. ಅವರ ಭಾವಜಗತ್ತಿನಲ್ಲಿ ಇಥಿಯೋಪಿಯಾದ ನೋವಿಗೂ ಒಂದು ಸ್ಥಾನವಿದೆ. ನೋಡಿ, ಮಧ್ಯಪ್ರಾಚ್ಯದಲ್ಲಿ ಯುದ್ಧದಿಂದ ಆಗಿರುವ ಅನಾಹುತ ಎಷ್ಟು ಭೀಕರವಾದ್ದು. ಏನೂ ನಡೆದೇ ಇಲ್ಲ ಅನ್ನುವ ಹಾಗೆ ನಾವು ಪತ್ರಿಕೆಯ ಪುಟ ತಿರುವುತ್ತೇವೆ. ನಾನು ಇತ್ತೀಚೆಗೆ ಅಮೆರಿಕಾದ ಫೋಟೋ ಜರ್ನಲಿಸ್ಟ್ ಒಬ್ಬರನ್ನು ಭೇಟಿಯಾಗಿದ್ದೆ. ಅವರು ಹೇಳುತ್ತಿದ್ದರು – ಜಗತ್ತಿನ ಮಾಧ್ಯಮ ಈವತ್ತು ಯುದ್ಧವನ್ನ ನಮ್ಮ ಕಣ್ಣಿನಿಂದ ಮುಚ್ಚಿಟ್ಟಿದೆ. ನೆಲದ ಮೇಲಿರುವ ಯುದ್ಧದ ಭೀಕರತೆಯು ನಮಗೆಲ್ಲೂ ಕಾಣುವುದಕ್ಕೇ ಸಿಗುವುದಿಲ್ಲ. ಯುದ್ಧವೂ ಲೇಸರ್ ಶೋ ಥರ ಕಾಣುವ ಹಾಗೆ ಮಾರ್ಪಾಟಾಗಿದೆ. ಬಂಡವಾಳಶಾಹಿ ಜಗತ್ತಿಗೆ ಈ ಕರಾಳ ಚಿತ್ರವನ್ನು ನಾವು ನೋಡುವುದು ಬೇಡವಾಗಿದೆ. ಯಾಕೆಂದರೆ ಜನರೊಳಗೆ ಕ್ಷೇಮಭಾವ ಇರುವಾಗ ಉದಾರಿಯಾಗಿರುತ್ತಾರೆ. ಜನರು ಎಂಥದ್ದೇ ಪರಿಸ್ಥಿತಿಯಲ್ಲೂ ಖರ್ಚು ಮಾಡುತ್ತಿರಬೇಕು ಎಂಬುದೇ ಬಂಡವಾಳಶಾಹಿಯ ಮೂಲಮಂತ್ರ. ಹೀಗಿರುವಾಗ, ಮಹಾದೇವರ ಆ ಮಾತುಗಳು ಈವತ್ತಿಗೂ ನನ್ನ ತಟ್ಟುತ್ತವೆ. ಎಲ್ಲಿಯದೋ ನೋವು, ಯಾವುದೋ ಬರಗಾಲ, ಅದಕ್ಕೆ ಸ್ಪಂದಿಸುವುದು ಎಷ್ಟು ಮುಖ್ಯವೆಂದೆನಿಸುತ್ತದೆ. ಇಲ್ಲಿಯೂ ಪ್ರಾಮಾಣಿಕತೆ ಮುಖ್ಯ. ತೋರುಗಾಣಿಕೆಯಲ್ಲ.

ನನ್ನ ಪ್ರಶ್ನೆಗಳಿಗೆ ಅವರ ಉತ್ತರ ಎನ್ನುವುದಕ್ಕಿಂತ, ಅವರ ಮಾತಿನ ಲಹರಿಗೆ ನನ್ನ ಪ್ರಶ್ನೆಗಳು ಹೇಗೋ ಹೊಂದಿಕೊಳ್ಳುತ್ತ, ಅದಕ್ಕೂ ಸ್ಪಂದಿಸುತ್ತ, ಸೃಜನಶೀಲತೆಗೆ ಸಂಬಂಧಪಟ್ಟ ಅನೇಕ ಸಂಗತಿಗಳು ತೆರೆದುಕೊಳ್ಳುತ್ತ ಹೋದವು. ಅದು ತೆರೆದುಕೊಂಡಷ್ಟೂ ನಿಗೂಢವಾಗುವ ಚಮತ್ಕಾರವೂ ಹೌದು. ವಿವೇಕರೊಂದಿಗೆ ಮಾತು-ಕತೆಯನ್ನು ಮುಗಿಸಿಕೊಂಡು ಹೊರಬರುವಾಗ, ಅವರ ಮುಂದಿನ ಕೃತಿಗಳ ಬಗೆಗಿನ ಆಕರ್ಷಣೆಯೂ ಹೆಚ್ಚಿತ್ತು. 

ವಿವೇಕ ಶಾನಭಾಗ

ಉತ್ತರ ಕನ್ನಡ ಜಿಲ್ಲೆಯ ಕುಮಟೆ ತಾಲ್ಲೂಕಿನ ವಿವೇಕ ಶಾನಭಾಗ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ‘ಅಂಕುರ’, ‘ಲಂಗರು’, ‘ಹುಲಿ ಸವಾರಿ’, ‘ಮತ್ತೊಬ್ಬನ ಸಂಸಾರ’, ‘ಘಾಚರ್‌ ಘೋಚರ್‌’ ಎಂಬ ಕಥಾಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ‘ಸಕ್ಕರೆ ಬೊಂಬೆ‘, ‘ಬಹುಮುಖಿ’ ಎಂಬ ನಾಟಕಗಳನ್ನು, ‘ಇನ್ನೂ ಒಂದು’, ‘ಒಂದು ಬದಿ ಕಡಲು’, ‘ಊರು ಭಂಗ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.

ವಿಕ್ರಂ ಹತ್ವಾರ್

ಹೊಸ ತಲೆಮಾರಿನ ಮಹತ್ವದ ಕತೆಗಾರ ವಿಕ್ರಂ ‘ಜೀರೋ ಮತ್ತು ಒಂದು’ ಎಂಬ ಕಥಾ ಸಂಗ್ರಹ ಹಾಗೂ ‘ಇದೇ ಇರಬೇಕು ಕವಿತೆ’, ‘ಅಕ್ಷೀ... ಎಂದಿತು ವೃಕ್ಷ!’ ಎಂಬ ಕವನ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಉದ್ಯೋಗಿ.

 

ಮಯೂರ: ಸಂಪುಟ: 51, ಸಂಚಿಕೆ: 06, ಜೂನ್: 2018

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !