ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಳಿ ಕಂಟಿಯ ಹಣ್ಣು- ಅದರ ಮೇಲೆ ಇವರ ಕಣ್ಣು!

Last Updated 24 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

‘ಕವಳಿ ಹಣ್ಣು, ಕಾರಿ ಹಣ್ಣು, ಬಾರಿ ಹಣ್ಣು, ನೀರಲ ಹಣ್ಣವೋ...’

ಲಂಬಾಣಿ ಅಜ್ಜಿಯ ಈ ಕೂಗು, ಕಿವಿಯ ಮೇಲೆ ಬೀಳುವುದೇ ತಡ, ಮನೆ ಮಂದಿಯ ಬಾಯಲ್ಲಿ ನೀರೇ ನೀರು. ಆ ಹಣ್ಣುಗಳ ರಸಾಸ್ವಾದವೇ ಅಂತಹದ್ದು. ಆ ದನಿಗೆ ಮನೆಯೊಳಗಿದ್ದವರು ಎದ್ದು–ಬಿದ್ದು ಹೊರಬಂದು ಅಜ್ಜಿಯನ್ನು ಬರಮಾಡಿಕೊಳ್ಳಲು ಸ್ವಲ್ಪವೂ ತಡವಾಗದು. ಅಜ್ಜಿಯ ಬಿದಿರ ಬುಟ್ಟಿಯಲ್ಲಿ ಬೆಚ್ಚಗೆ ಕುಳಿತಿದ್ದ ಕವಳಿ ಹಣ್ಣುಗಳು ಮನೆಯ ಸಣ್ಣ ಬುಟ್ಟಿಗೆ ‘ಜಂಪ್‌’ ಮಾಡಿದ ಮೇಲಂತೂ ಬಾಯಲ್ಲಿ ನೀರೂರದಂತೆ ನಿಯಂತ್ರಿಸುವುದು ಇನ್ನೂ ಕಷ್ಟ.

ಗದಗ ಹತ್ತಿರದ ಕಪ್ಪತಗುಡ್ಡ, ಗಜೇಂದ್ರಗಡ ಬಳಿಯ ಕಾಲಕಾಲೇಶ್ವರ ಗುಡ್ಡ, ಕೊಪ್ಪಳದ ಗವಿಸಿದ್ಧೇಶ್ವರ ಗುಡ್ಡದ ಕುರುಚಲು ಕಾಡುಗಳಲ್ಲಿ ನೆತ್ತಿ ಸುಡುವ ಬಿಸಿಲಿನಲ್ಲೂ ಕವಳಿ, ಕಾರಿ, ಬಾರಿ ಕಂಟಿಗಳನ್ನು ಹುಡುಕಿಕೊಂಡು ಹಣ್ಣು ಆಯ್ದು ತರುವ ಈ ಅಮ್ಮಂದಿರ ಜೀವನಪ್ರೀತಿ, ಆ ಹಣ್ಣುಗಳಷ್ಟೇ ನೈಸರ್ಗಿಕ.

ಲಂಬಾಣಿ ಹೆಣ್ಣುಮಕ್ಕಳ ಬಾಲ್ಯ, ಯೌವನ ಹಾಗೂ ವೃದ್ಧಾಪ್ಯ ಜೀವನದ ನೆನಪುಗಳೆಲ್ಲವೂ ಕಾಡುಹಣ್ಣುಗಳ ಜತೆಗೆ ಬೆಸೆದುಕೊಂಡಿವೆ. ಬಾಲ್ಯದಲ್ಲಿ ಅವ್ವ ತಂದು ಕೊಡುತ್ತಿದ್ದ ಹಣ್ಣುಗಳನ್ನು ತಿಂದು ಬೆಳೆದ ಹುಡುಗಿಯೊಬ್ಬಳು ಯೌವನಕ್ಕೆ ಕಾಲಿಡುತ್ತಿದ್ದಂತೆ ತನ್ನ ಪು‌ಟ್ಟದಾದ ಸೊಂಟದ ಮೇಲೊಂದು ಬಿದಿರಿನ ಪುಟ್ಟಿ ತಾಗಿಸಿಕೊಂಡು ಹಣ್ಣುಗಳನ್ನು ಹೆಕ್ಕಿ ತರಲು ಗುಡ್ಡಕ್ಕೆ ಹೊರಡುತ್ತಾಳೆ. ಕಾಡುಹಣ್ಣುಗಳ ಜತೆಗಿನ ಅವರ ಒಡನಾಟ ಉಸಿರು ನಿಲ್ಲುವವರೆಗೂ ಜೀವಂತವಾಗಿರುತ್ತದೆ.

ಲಂಬಾಣಿ ಜನಾಂಗದಲ್ಲಿ ಹೆಣ್ಣನ್ನು ಮರದ ಬೇರಿಗೆ ಹೋಲಿಸುತ್ತಾರೆ. ಆ ಕುಟುಂಬದ ಮೂಲಧಾತುವೇ ಅವಳು. ಋತುವಿಗೆ ಅನುಸಾರವಾಗಿ ಸಿಗುವ ಒಂದೊಂದು ಹಣ್ಣಿನ ರುಚಿಯಂತೆ ಅವರ ಜೀವನದಲ್ಲೂ ಸಿಹಿ, ಹುಳಿ, ಕಹಿ, ಒಗರು ಭಾವಗಳು ಬೆರೆತು ಹೋಗಿವೆ.

ಉತ್ತರ ಕರ್ನಾಟಕದ ಭಾಗದಲ್ಲಿ ಬೆಟ್ಟ, ಗುಡ್ಡ, ಕಾಡಿನ ನಡುವೆ ತಾಂಡಾಗಳಲ್ಲಿ ವಾಸಿಸುವ ಲಂಬಾಣಿ ಹೆಣ್ಣುಮಕ್ಕಳಿಗೆ ನಾಡಿನ ಜನರಿಗೆ ವಿಷರಹಿತ, ನೈಸರ್ಗಿಕ ರುಚಿಯ ಹಣ್ಣುಗಳನ್ನು ತಂದು ಕೊಡುವುದೇ ಕಾಯಕ. ಆರೋಗ್ಯಕ್ಕೆ ಅಗತ್ಯವಾದ ಔಷಧೀಯ ಗುಣಗಳೂ ಈ ಹಣ್ಣುಗಳಲ್ಲಿ ಇವೆಯಂತೆ. ಇಂತಹ ಅಮೂಲ್ಯ ಹಣ್ಣುಗಳನ್ನು ಆಯ್ದು ತಂದು ಕೊಟ್ಟರೂ ಅವರು ಪಡೆಯುವುದು ತುಂಬಾ ಚಿಕ್ಕ ಪ್ರತಿಫಲವನ್ನು.

ಕಾಡುಹಣ್ಣುಗಳಿಗೆ ಆ ಬೆಟ್ಟದಲ್ಲಿ, ಬಿರುಬಿಸಿಲಿನಲ್ಲಿ ಸುಳಿದಾಡಬೇಕು ಗೆಳತಿ... ಚಿತ್ರಗಳು: ಪ್ರಕಾಶ ಕಂದಕೂರ
ಕಾಡುಹಣ್ಣುಗಳಿಗೆ ಆ ಬೆಟ್ಟದಲ್ಲಿ, ಬಿರುಬಿಸಿಲಿನಲ್ಲಿ ಸುಳಿದಾಡಬೇಕು ಗೆಳತಿ... ಚಿತ್ರಗಳು: ಪ್ರಕಾಶ ಕಂದಕೂರ

ಬಾರೆ ಹಣ್ಣು, ಹತ್ತಿ ಹಣ್ಣು, ಕವಳಿಹಣ್ಣು, ನೇರಳೆ, ಕಾಡು ಮಾವು, ಸೀತಾಫಲ ಹೀಗೆ ಆಯಾ ಋತುವಿನಲ್ಲಿ ಸಿಗುವ, ಕಾಡಲ್ಲೇ ಮಾಗಿದ ತಾಜಾ ಹಣ್ಣುಗಳು ಜನರ ಮನೆಬಾಗಿಲಿಗೇ ಬರುತ್ತವೆ. ಪೌಷ್ಟಿಕಾಂಶಗಳ ಆಗರವಾಗಿರುವ ಈ ಹಣ್ಣುಗಳನ್ನು ದೊರಕಿಸಿ ಕೊಡುವ ಲಂಬಾಣಿ ಹೆಣ್ಣುಮಕ್ಕಳು ಕಾಡಿನ ಹಣ್ಣುಗಳ ರುಚಿ ಹಂಚುವ ರಾಯಭಾರಿಗಳೂ ಹೌದು. ಹಾಗೆಯೇ ಎಳೆ ನಾಗರಕಾಯಿ, ಹುರಿದ ಹುಣಸೆಬೀಜದ ಅವರ ಚಿಕ್ಕ ಗಂಟು, ಮಕ್ಕಳನ್ನು ಅವರ ಸುತ್ತ ಜೊಲ್ಲು ಸುರಿಸುತ್ತ ನೆರೆಯುವಂತೆ ಮಾಡುತ್ತದೆ.

ಊರಿನ ಜನರಿಗೆ ಸ್ವಾದಭರಿತ ಕಾಡಿನ ಹಣ್ಣುಗಳನ್ನು ತಂದು ಕೊಡುವ ಲಂಬಾಣಿ ಹೆಣ್ಣುಮಕ್ಕಳ ಜೀವನ ನೂರಾರು ಏರಿಳಿತಗಳ ನಡುವೆ ಸಾಗುತ್ತಿರುತ್ತದೆ. ಕೆಲವು ಹೆಣ್ಣುಮಕ್ಕಳಿಗೆ ಹಣ್ಣು ಮಾರಾಟದಿಂದ ಸಿಗುವ ಹಣವೇ ತುತ್ತಿನ ಚೀಲ ತುಂಬಿಸಲು ಆಧಾರ. ಕಾಡುಹಣ್ಣಿನ ವ್ಯಾಪಾರದಿಂದ ಬಂದ ಹಣದಿಂದ ಎಷ್ಟೋ ಮಂದಿ ಮಕ್ಕಳ ವಿದ್ಯಾಭ್ಯಾಸ ಮಾಡಿಸಿದ್ದಾರೆ.

ಗಜೇಂದ್ರಗಡ ಗುಡ್ಡದ ತಾಂಡಾದ 90ರ ಹರೆಯದ ಅಜ್ಜಿ ಸೋನಾಬಾಯಿ ಲಿಂಬಣ್ಣ ಚವ್ಹಾಣ ನಾಲ್ಕೈದು ದಶಕಗಳ ಕಾಲ ಕಾಡುಹಣ್ಣುಗಳನ್ನು ಮಾರಾಟ ಮಾಡಿ ಜೀವನ ಸಾಗಿಸಿದವರು. ಈಗ ಅವರ ಹಣೆಯ ಮೇಲೆ ಕಾಣಿಸುವ ನೆರಿಗೆಗಳಿಗಿಂತಲೂ ಹೆಚ್ಚು ಅನುಭವಗಳು ಅವರ ಎದೆಯಲ್ಲಿ ಮಡುಗಟ್ಟಿವೆ.

‘ಗುಡ್ಡಕ್ಕ ಹೋಗಿ ಹಣ್ಣು ತರಾಕ ನಿಂತು ಏಸ್‌ ವರ್ಸ ಆದ್ವು ಗೊತ್ತಿಲ್ಲೊ ಎಪ್ಪ. ಕಸುವು ಇದ್ದಾಗ ಕವಳಿ, ಹತ್ತಿ, ಬಾರಿ, ಕಾರಿ ಎಲ್ಲಾ ತರ್ತಿದ್ದೆ. ಸ್ವಾಮಾರ (ಸೋಮವಾರ) ಗುಡ್ಡಕ್ಕ ಹೋಗಿ ಹಣ್‌ ತಂದ್ರ, ಮಂಗ್ಳಾರ (ಮಂಗಳವಾರ) ಊರಾಗ ಹೋಗಿ ಮಾರ್ಕೊಂಡ್‌ ಬರೋದು. ದಿನಾ ಬಿಟ್ಟ ದಿನಾ ಹಣ್‌ ತರೂದು, ದಿನಾ ಬಿಟ್ಟು ದಿನಾ ಮಾರೂದು ಹಿಂಗss ಸಾಗಿ ಬಂದೈತಿ ನೋಡ್‌ ಎಪ್ಪ ಜೀವನ’ ಎಂದು ಮುಗ್ಧವಾಗಿ ಹೇಳುವ ಸೋನಮ್ಮಜ್ಜಿ, ಅಪ್ಪಟ ಬಂಗಾರ.

ಗಂಡುಮಕ್ಕಳು ದುಡಿಯುತ್ತಿದ್ದರು. ಆದರೆ, ಹೆಚ್ಚಿನವರು ದುಡಿದಿದ್ದನ್ನು ಕುಡಿದು ಕಳೆಯುತ್ತಿದ್ದರು. ಮನೆ ನಿಭಾಯಿಸುವ ಜತೆಗೆ ಕುಟುಂಬ ಉಳಿಸಿಕೊಳ್ಳುವ ಜವಾಬ್ದಾರಿ ಕೂಡ ಹೆಣ್ಣುಮಕ್ಕಳದು. ಹಿಂದೆ ವಾರಕ್ಕೆ ₹10ಕ್ಕಿಂತ ಕಡಿಮೆ ಹಣ ದುಡಿದು ತಂದರೆ ನಮ್ಮ ಅತ್ತೆ ಕೈಯಲ್ಲಿದ್ದ ರೊಟ್ಟಿ ಕಸಿದುಕೊಂಡು ಮುಂಗೈಗೆ ಬರೆ ಹಾಕುತ್ತಿದ್ದಳು. ಮಾವ ಬಂದು ಮುಖಕ್ಕೆ ಗುದ್ದುತ್ತಿದ್ದ. ಇಂತಹ ಸಂದರ್ಭಗಳಲ್ಲಿ ಹಲ್ಲುಗಳೂ ಉದುರಿ ಬಿದ್ದಿವೆ... ಅಜ್ಜಿಯ ನೆನಪಿನ ಬುತ್ತಿ ಬಿಚ್ಚಿದರೆ, ಅದು ರುಚಿಯಾದ ಹಣ್ಣುಗಳಿರುವ ಬುಟ್ಟಿಯನ್ನು ಕೆಳಗೆ ಇಳಿಸಿದಂತೇನಲ್ಲ.

ಲಂಬಾಣಿಗರ ವೇಷಭೂಷಣದ ಕುರಿತು ಬಹುತೇಕರಿಗೆ ಕುತೂಹಲ. ಲಂಬಾಣಿ ದಿರಿಸಿನ ಹಿಂದೆ ವೈಜ್ಞಾನಿಕ ಅಂಶಗಳ ಜತೆಗೆ ಕಾಡುಹಣ್ಣುಗಳನ್ನು ತರಲು ಅಡವಿ, ಗುಡ್ಡಗಾಡಿನಲ್ಲಿ ಅಡ್ಡಾಡುವಾಗ ಅವು ಸ್ವಯಂ ರಕ್ಷಣೆಗೂ ಉಪಯೋಗಕ್ಕೆ ಬರುತ್ತವೆ. ಇವುಗಳನ್ನು ಧರಿಸುವ ಕಾರಣ ಮೂರ್ಚೆ ರೋಗ, ಹಳದಿ ರೋಗ ಸುಳಿಯುವುದಿಲ್ಲವಂತೆ. ದಿರಿಸಿನಲ್ಲಿರುವ ಕನ್ನಡಿಯೊಳಗೆ ತಮ್ಮದೇ ಪ್ರತಿಬಿಂಬ ನೋಡಿದ ಕಾಡು ಪ್ರಾಣಿಗಳು ಹೆದರಿ ಓಡುತ್ತಿದ್ದವಂತೆ. ಸಣ್ಣಪುಟ್ಟ ಪ್ರಾಣಿಗಳು ಮೈಮೇಲೆ ಎಗರಿಬಂದರೆ ಕೈಯಲ್ಲಿದ್ದ ಕಬ್ಬಿಣದ ಬಳೆಗಳು ಉಪಯೋಗಕ್ಕೆ ಬರುತ್ತಿದ್ದವು ಎಂದೂ ಸೋನಮ್ಮಜ್ಜಿಯ ವಾರಿಗೆಯವರು ಹೇಳುತ್ತಾರೆ. ಅದಕ್ಕಾಗಿಯೇ ತಾಂಡಾದಲ್ಲಿ ಹೆಣ್ಣು ಮಗು ಜನಿಸಿದರೆ ಅವಳಿಗೆ ಚಿಕ್ಕಂದಿನಿಂದಲೇ ಕಸೂತಿ ಕಲೆ ಕಲಿಸುತ್ತಾರೆ. ಈ ದಿರಿಸು ಸಂಸ್ಕೃತಿಯ ಪ್ರತೀಕವೂ ಹೌದು, ರಕ್ಷಣೆಯ ಕವಚವೂ ಹೌದು.

ಕಾಡು ಹಣ್ಣು ಹೆಚ್ಚಿ... ಉಪ್ಪು–ಖಾರ ಹಚ್ಚಿ...
ಕಾಡು ಹಣ್ಣು ಹೆಚ್ಚಿ... ಉಪ್ಪು–ಖಾರ ಹಚ್ಚಿ...

ಋತುವಿಗೆ ಅನುಸಾರವಾಗಿ ಸಿಗುವ ಹಣ್ಣುಗಳನ್ನು ಕಾಡಿಂದ ತಂದು ಊರೂರು ಅಲೆದು ಮಾರುವವರಿಗೆ ಕೆಲವು ಗ್ರಾಹಕರು ಪ್ರೀತಿಯಿಂದ ರೊಟ್ಟಿ ಪಲ್ಯ ಕೊಡುತ್ತಿದ್ದರು. ಆದರೆ, ಈಗ ಅಂತಹ ಪ್ರೀತಿ ಕ್ವಚಿತ್‌ ಆಗಿ ಕಾಣಸಿಗುತ್ತದೆ. ಮಾರಾಟ ಆಗದೇ ಉಳಿದ ಹಣ್ಣುಗಳನ್ನು ಮನೆಗೆ ತಂದು ಅದರಲ್ಲೇ ಪದಾರ್ಥ ಮಾಡಿಕೊಳ್ಳುವುದು ಈ ಹಣ್ಣುಗಳ ಅಮ್ಮಂದಿರ ರೂಢಿ. ಮಾವಿನ ಕಾಲವಾದರೆ ಸೀಕರಣೆ, ದೋರೆಗಾಯಿಗಳನ್ನು ಬಳಸಿ ಪಲ್ಯ ಮಾಡುವುದು, ತುಂಡು ರೊಟ್ಟಿಗೆ ಮುಷ್ಟಿ ಹಿಡಿಯಷ್ಟು ಪಲ್ಯ ಹಾಕಿಕೊಂಡು ತಿಂದು ಹೊಟ್ಟೆ ತುಂಬಿಸಿಕೊಳ್ಳುವುದು ಅವರ ಬದುಕು. ದುಡಿಮೆಯಲ್ಲಿ ತುಸು ಏರುಪೇರಾದರೂ ಊಟವಾಗಿಯೂ ಕಾಡುಹಣ್ಣುಗಳು ಅವರಿಗೆ ಒದಗಿಬಂದಿದ್ದಿದೆ. ತಾಂಡಾಗಳು ಕಾಡಿನ ನಡುವೆಯೇ ಇರುವುದರಿಂದ ಪರಿಸರದಲ್ಲಿ ಯಾವ ಹಣ್ಣು ಎಲ್ಲಿ ಬೆಳೆಯುತ್ತದೆ ಎಂಬುದರ ಅರಿವು ಅವರಿಗೆ ಚೆನ್ನಾಗಿರುತ್ತದೆ. ಹಾಗಾಗಿ, ಅವರ ಹೆಜ್ಜೆಗಳು ಕೂಡ ಋತುವಿಗನುಸಾರವಾಗಿ ಕುಣಿಯುತ್ತವೆ. ಫಲಭರಿತ ಜಾಗಕ್ಕೆ ತಂತಾನೇ ಅವರನ್ನು ಕರೆದೊಯ್ಯುತ್ತವೆ.

‘ಒಮ್ಮೆ ನನ್ನ ಮಗ ಗಜ್ಜುಗ ಗುಂಡ ಆಡಾಕ ಒಂದಾಣೆ ರೊಕ್ಕ ಕೇಳಿದ್ದ. ತಿನ್ನಾಕಾ ಇಲ್ಲ. ಇನ್ನು ಆಡಾಕ ರೊಕ್ಕ ಎಲ್ಲಿಂದ ಕೊಡ್ಲಿ ಅಂದಿದ್ದಕ್ಕೆ ಆತ ಕಸೂತಿ ಅರಿಬಿನ ಒತ್ತಿ ಇಡಾಕ ಹೋಗಿದ್ದ. ಹಣ್ಣು ಮಾರಿ, ಮಾರಿ ಅವನ್ನ ಓದ್ಸಿದೆ. ಈಗ ಅಂವ ಕಾಲೇಜಿನಾಗ ಮಾಸ್ತರ ಆಗ್ಯಾನ. ನನ್ನನ್ನ ಕಣ್ಣ ರೆಪ್ಪಿಯಂಗ ಕಾಯ್ತಾನ’ ಎನ್ನುತ್ತಾರೆ ಸೋನಮ್ಮಜ್ಜಿ.

ಲಂಬಾಣಿ ಮಹಿಳೆಯರಿಗೆ ಈಗ ಮೊದಲಿನಷ್ಟು ಸಮೃದ್ಧವಾಗಿ ಕಾಡುಹಣ್ಣುಗಳು ಸಿಗುತ್ತಿಲ್ಲ. ಜತೆಗೆ ತಾಂಡಾಗಳ ಮೇಲೂ ಬದಲಾವಣೆಯ ಗಾಳಿ ಬೀಸಿದೆ. ಶಿಕ್ಷಣ ಅವರ ಬದುಕು ಮತ್ತು ಸಂಸ್ಕೃತಿಯ ಮೇಲೂ ಪ್ರಭಾವ ಬೀರಿದೆ. ಅಲ್ಲದೆ, ಹಿಂದಿನವರಂತೆ ಈಗಿನ ಹೆಣ್ಣುಮಕ್ಕಳು ಕಷ್ಟ ಸಹಿಸುವ ಧಾರಣಾಶಕ್ತಿ ಹೊಂದಿಲ್ಲ. ಆದರೆ, ಅವರೆಲ್ಲ ಶಿಕ್ಷಣ ಪಡೆಯುವತ್ತ ಒಲವು ತೋರಿರುವುದು ಸಕಾರಾತ್ಮಕ ಬೆಳವಣಿಗೆ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಈಗಲೂ ಕಾಡುಹಣ್ಣುಗಳ ಮಾರಾಟ ಮುಂದುವರಿಸಿದ್ದಾರೆ. ಲಂಬಾಣಿ ಹೆಣ್ಣುಮಕ್ಕಳ ಜೀವನ ಹಲವು ಅಡೆತಡೆಗಳನ್ನು ದಾಟಿ ಮುನ್ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT