ಶುಕ್ರವಾರ, ಡಿಸೆಂಬರ್ 6, 2019
23 °C

ಗೋಕುಲಾಷ್ಟಮಿ ವಿಶೇಷ: ಮಗು ಮನಸ್ಸಿನ ಸಾಕಾರ ರೂಪ ಶ್ರೀಕೃಷ್ಣ

Published:
Updated:

‘ಅ ಯ್ಯೋ ನೀವ್ಯಾಕೆ ಯಜ್ಞ ಮಾಡುತ್ತಿದ್ದ ಗಂಡಸರ ಹತ್ತಿರ ಊಟ ಕೇಳೋಕೆ ಹೋಗಿದ್ರಿ? ಶಾಸ್ತ್ರ ಓದಿ ಜಡ್ಡುಗಟ್ಟಿದ ಅವರ ಮನಸ್ಸುಗಳಿಗೆ ಭಾವನೆಗಳೇ ಅರ್ಥವಾಗಲ್ಲ. ಸ್ವತಃ ದೇವರೇ ಎದುರು ಬಂದರೂ ‘ನೀನು ದೇವರು ಅನ್ನಲು ಏನು ಆಧಾರ’ ಅಂತ ಕೇಳುವ ಕೆಟ್ಟ ತರ್ಕ ಅವರದು. ಈ ಸಲ ಸೀದಾ ಅಡುಗೆಮನೆ ಹತ್ತಿರ ಹೋಗಿ, ‘ಅಮ್ಮಾ ಹಸಿವು’ ಅನ್ನಿ. ಎರಡನೇ ಯೋಚನೆಯೇ ಇಲ್ಲದೆ ಹೆಂಗಸರು ಊಟ ಕೊಡ್ತಾರೆ...’

– ತನ್ನೊಡನೆ ದನಕಾಯಲು ಬಂದಿದ್ದವರಿಗೆ ಕೃಷ್ಣ ಹೇಳುವ ಮಾತುಗಳನ್ನು ಭಾಗವತ ಪುರಾಣ ಉಲ್ಲೇಖಿಸುವುದು ಹೀಗೆ.

ಕೆಲಸ ಮಾಡಿ, ಆಟವಾಡಿ ದಣಿದ ಹುಡುಗರಿಗೆ ಬೆಂಕಿಯಂಥ ಹಸಿವು. ದೂರದಲ್ಲಿ ಹೋಮದ ಹೊಗೆ ಕಾಣಿಸುತ್ತೆ. ಊಟ ಸಿಗಬಹುದು ಎಂದು ಆಸೆಪಟ್ಟು ಹೋದವರಿಗೆ ಅಲ್ಲಿದ್ದವರು ಬರಿಗೈ ತೋರಿದ್ದರು. ಕೃಷ್ಣ ಇಂಥದ್ದೊಂದು ಉಪಾಯ ಹೂಡಿ ತನ್ನ ಗೆಳೆಯರ ಹೊಟ್ಟೆ ತುಂಬಿಸಿದ. ಹಸಿದ ಮಕ್ಕಳನ್ನು ಕಂಡರೆ ಅಮ್ಮನ ಕರುಳು ಚುರುಕ್ ಎನ್ನದೆ? ಜಗತ್ತಿಗೆ ಅಮ್ಮನೂ–ಅಪ್ಪನೂ ಆಗಿರುವ ಕೃಷ್ಣನಿಗಲ್ಲದೆ ಇನ್ಯಾರಿಗೆ ಮಕ್ಕಳ–ಅಮ್ಮನ ಮನಸ್ಸು ಅರ್ಥವಾಗಬೇಕು?

ತುಳಸಿ ದಾವನದಲ್ಲಿ ಕೃಷ್ಣನನ್ನು ಇರಿಸಿ ಪೂಜೆ ಮಾಡುವ ಹಬ್ಬವೇ ಗೋಕುಲಾಷ್ಟಮಿ. ಬೀದಿಯಿಂದ ದೇವರಮನೆಯವರೆಗೆ ಪುಟ್ಟ ಪಾದಗಳ ಗುರುತು ಚಿತ್ರಿಸಿ ‘ದೇವರು ಮನೆಗೆ ಬಂದ’ ಎಂದು ಸಂಭ್ರಮಿಸುವ ಹಬ್ಬ. ಪುಟ್ಟ ಮಕ್ಕಳಿರುವ ಮನೆಯಲ್ಲಿ ಹಬ್ಬಕ್ಕೆ ಕೃಷ್ಣವೇಷದ ಮೆರುಗು. ಮೂತಿಗೆ ಬೆಣ್ಣೆಮೆತ್ತಿ, ತಲೆಗೊಂದು ನವಿಲುಗರಿ ಸಿಕ್ಕಿಸಿ, ತೋಚಿದಂತೆ ಪಂಚೆ ಸುತ್ತಿದರೆ ನಮ್ಮನೆ ಮಗುವೂ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನೇ ಸೈ.

‘ನಾನೇ ಊಟ ಮಾಡ್ತೀನಿ’ ಎಂದು ಪ್ರತಿದಿನ ಹಟ ಮಾಡುವ ನಿಮ್ಮನೆಯ ಪುಟ್ಟ ಮಗು ಮುಖಮೂತಿಗೆಲ್ಲಾ ಅನ್ನ ಮೆತ್ತಿಕೊಳ್ಳುತ್ತಲ್ಲ, ಆಗ ಅದು ಬಾಲಕೃಷ್ಣನಂತೆಯೇ ಕಾಣಿಸುವುದಿಲ್ಲವೇ? ಇಂದು ಒಮ್ಮೆ ದಿಟ್ಟಿಸಿ ನೋಡಿ, ಮಗುವಿನ ಮೊಗದ ಗೆಲುನಗುವಿನಲ್ಲಿ ನಿಜಕ್ಕೂ ಕೃಷ್ಣ ಕಂಡಾನು.

ಈ ವಿಷಯ ಬಿಡಿ, ಕೃಷ್ಣವೇಷದ ಸಂಭ್ರಮಕ್ಕೆ ಬನ್ನಿ. ‘ಅಮ್ಮಾ, ಕೃಷ್ಣ ನನ್ನ ಹಾಗೆ ಇದ್ನಾ?’ ಎಂದು ಮಗು ಮುದ್ದಾಗಿ ಕೇಳಿದಾಗ, ‘ಅ ಯ್ಯೋ ಚಿನ್ನ, ನಿನ್ನ ಹಾಗೆ ಇರದಿದ್ದರೆ ಅವನು ಕೃಷ್ಣನೇ ಆಗಿರಲ್ಲ ಬಿಡು’ ಎಂದು ಅಮ್ಮ ಸೊಕ್ಕಿ ಮುದ್ದು ಮಾಡುತ್ತಾಳೆ. ಅಮ್ಮನ ಎದೆಯಾಳದ ಈ ಮಾತು ಎಷ್ಟು ನಿಜ ಅಲ್ವಾ? ಎಲ್ಲ ಮಕ್ಕಳೂ, ಎಲ್ಲ ಕಾಲಕ್ಕೂ ಕೃಷ್ಣನೇ. ಅದು ದ್ವಾಪರಯುಗವೋ, ಕಲಿಯುಗವೋ, ಎಲ್ಲ ಕಾಲದಲ್ಲೂ ಮಕ್ಕಳು ಅಂದ್ರೆ ಮಕ್ಕಳೇ ತಾನೆ?

‘ಸಾಯುವವರೆಗೂ ಮಗುವಿನ ಮನಸ್ಸು ಉಳಿಸಿಕೊಳ್ಳಬೇಕು’ ಎನ್ನುವುದು ಅಧ್ಯಾತ್ಮದ ಪ್ರಮುಖ ತತ್ವ. ಇದು ಬದುಕಿನ ದೊಡ್ಡ ಸಾಧನೆಯೂ ಹೌದು. ಮನೆಯಲ್ಲಿ ಚಿಕ್ಕಮಕ್ಕಳಿದ್ದಾಗ ಎಲ್ಲರೂ ಸ್ವಲ್ಪಹೊತ್ತಾದರೂ ಇಂಥ ಭಾವ ಅನುಭವಿಸುತ್ತಾರೆ. ಆದರೆ ಈ ತತ್ವವನ್ನು ತನ್ನ ಜೀವನದಲ್ಲಿ ಆಚರಿಸಿ, ಒಂದು ಆದರ್ಶವಾಗಿ ಜಗತ್ತಿಗೆ ತೋರಿದವನು ಕೃಷ್ಣ. ಹೀಗಾಗಿಯೇ ದುರ್ಯೋಧನ ಒಡ್ಡಿದ ದೊಡ್ಡದೊಡ್ಡ ಪ್ರಲೋಭನೆಗಳನ್ನೂ, ಅರ್ಜುನನ ಮಾನಸಿಕ ತೊಳಲಾಟವನ್ನು ಕೃಷ್ಣನಿಗೆ ಒಂದೇ ದೃಷ್ಟಿಯಲ್ಲಿ ಕಾಣಲು ಮತ್ತು ತಿರಸ್ಕರಿಸಲು ಸಾಧ್ಯವಾಯಿತು. ಅಷ್ಟೇ ಅಲ್ಲ, ಇಬ್ಬರನ್ನೂ ಸರಿದಾರಿಗೆ ತರಬೇಕು ಎನ್ನುವ ನಿರ್ಮಮಕಾರದ ಪ್ರಯತ್ನಕ್ಕೂ ಅವನಿಗಿದ್ದ ಇಂಥ ಮಗುವಿನ ಮನಸ್ಸೇ ಕಾರಣ.

‘ನಾನು ಗತಿಗೆಟ್ಟು ಬಂದಿಲ್ಲ, ನೀನು ನನ್ನ ಆಪ್ತನೂ ಅಲ್ಲ’ ಎಂದು, ಮಹಾರಾಜ ದುರ್ಯೋಧನ ಅಹಂಕಾರದಿಂದ ಕೊಟ್ಟ ಅರಮನೆಯ ಔತಣವನ್ನು ನಿರಾಕರಿಸಿದ ಕೃಷ್ಣ, ತನ್ನನ್ನು ಕರೆಯದಿದ್ದರೂ ದಾಸಿಪುತ್ರ ವಿದುರನ ಮನೆಗೆ ಹೋಗಿ ಹಾಲುಕುಡಿದ. ನಮ್ಮ ಮಕ್ಕಳೂ ಹೀಗೆಯೇ ಅಲ್ಲವೇ? ತಮ್ಮನ್ನು ನಿಜವಾಗಿ ಪ್ರೀತಿಸುವ ನೆರೆಮನೆಯವರ ಜಾತಿ–ಅಂತಸ್ತಿನ ಬಗ್ಗೆ ಎಂದಿಗೂ ಯೋಚಿಸುವುದಿಲ್ಲ. ತೋರಿಕೆಗೆ ಪ್ರೀತಿಯ ನಾಟಕವಾಡುವ, ದುಬಾರಿ ಗಿಫ್ಟ್‌ ತಂದುಕೊಟ್ಟು ದೊಡ್ಡತನ ಮೆರೆಯಲು ಯತ್ನಿಸುವ ಸಂಬಂಧಿಕರನ್ನು ಕಂಡರೆ ದೂರ ಓಡುತ್ತವೆ.

ಗೆಳೆಯರನ್ನು ಹೇಗೆ ಪ್ರೀತಿಸಬೇಕು ಎನ್ನುವುದಕ್ಕೂ ಕೃಷ್ಣನೇ ಮಾದರಿ. ಅರ್ಜುನನ ಮಾನಸಿಕ ತೊಳಲಾಟ ಅರ್ಥ ಮಾಡಿಕೊಂಡ ಕೃಷ್ಣ ಯುದ್ಧಭೂಮಿಯಲ್ಲಿ ಮಾಡಿದ್ದು ಗೀತೋಪದೇಶದ ಸೈಕೊಥೆರಪಿ. ಅರ್ಜುನನ ದೌರ್ಬಲ್ಯವನ್ನು ಅವನು ಸಮರ್ಥಿಸಲೂ ಇಲ್ಲ, ‘ನೀನು ನನ್ನ ಗೆಳೆಯ. ನಿನ್ನ ಪರವಾಗಿ ನಾನು ಯುದ್ಧ ಮಾಡಿ ಗೆಲ್ಲಿಸಿಕೊಡುತ್ತೇನೆ’ ಎಂದು ಓಲೈಸಲೂ ಇಲ್ಲ. ಅರ್ಜುನನಿಗೆ ಅವನ ವಿಚಾರಧಾರೆಯಲ್ಲಿರುವ ತಪ್ಪುಗಳನ್ನು ಅರ್ಥಮಾಡಿಸಿ, ಸ್ವತಃ ಕಾರ್ಯಪ್ರವೃತ್ತನಾಗುವಂತೆ ಮಾಡಿದ.

ನಮಗೆ ಶ್ರೇಯಸ್ಸು ಕೋರುವ, ನಮ್ಮ ಎದುರೇ ನಮ್ಮ ದೌರ್ಬಲ್ಯಗಳನ್ನು ಮತ್ತು ತಪ್ಪುನಡೆಗಳನ್ನು ಖಂಡಿಸುವ, ನಿಷ್ಠುರ ಮಾತುಗಳ ಮೂಲಕ ನಮ್ಮನ್ನು ತಿದ್ದಲು ಯತ್ನಿಸುವವರೇ ನಿಜವಾದ ಗೆಳೆಯರು ಎಂದು ತನ್ನ ನಡವಳಿಕೆಯಿಂದಲೇ ಸಾರಿಹೇಳಿದ. ಭಗವದ್ಗೀತೆಯ ಮೂಲಕ ಅಧ್ಯಾತ್ಮ ಉಪದೇಶಿಸಿದ ಕೃಷ್ಣನೇ, ಉದ್ಧವಗೀತೆಯ ಮೂಲಕ ಪ್ರಕೃತಿಯ ಪಾಠಗಳನ್ನು ಜಗತ್ತಿಗೆ ಕೊಟ್ಟ. ‘ಕಾಮವನ್ನು (ಆಸೆ) ಯಾರೂ ಮೀರಲಾರರು. ಆದರೆ ಅದು ನಮ್ಮ ಮತ್ತು ಸಮಾಜದ ಉದ್ಧಾರಕ್ಕೆ ಕಾರಣವಾಗುವಂತೆ ಎಚ್ಚರವಹಿಸಬೇಕು’ ಎಂಬ ಪ್ರಾಕ್ಟಿಕಲ್ ಮಾತುಗಳನ್ನು ಆಡಿದ.

ಕೃಷ್ಣ ಎಂದರೆ ಮನುಷ್ಯತ್ವ ಬೆಳೆಯಬಹುದಾದ ಬಹುದೊಡ್ಡ ಎತ್ತರ. ಕೃಷ್ಣ ಎಂದರೆ ಮನುಷ್ಯರಾದವರು ಸಾಯುವವರೆಗೂ ಜೋಪಾನವಾಗಿ ಕಾಯ್ದುಕೊಳ್ಳಬೇಕಾದ ಮಗುವಿನ ಮನಸ್ಸಿನ ಸಾಕಾರ ರೂಪ.

***

ನಿಮ್ಮ ರಾಧಾ–ಕೃಷ್ಣ

ನಮ್ಮನೆಯಂಗಳದ ಪುಟ್ಟ ಕಿಟ್ಟಿ, ಕಳ್ಳಕೃಷ್ಣನಾಗಿ, ಪುಟ್ತಾಯಿ ರಾಧೆಯಾಗಿ ಮನೆತುಂಬ ಸಂತಸ ಹಂಚುವ ದಿನವಿದು. ಕೊಳಲು, ಬಿಂದಿಗೆ, ಬೆಣ್ಣೆ, ಮಜ್ಜಿಗೆ ಏನೇ ಇರಲಿ, ದೇವ ಮನೆಗೆ ಬಂದಾ... ಎಂದು ಹಾಡುವಂತೆ ಮಾಡುತ್ತವೆ ಈ ಪುಟ್ಟದೇವರು. ನಿಮ್ಮನೆಯ, ಕೃಷ್ಣ ರಾಧೆಯ ರೂಪದಲ್ಲಿರುವ ಪುಟ್ಟ ದೇವರ ಫೋಟೊಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಸೋಮವಾರದ ಸಂಚಿಕೆಯಲ್ಲಿ ಆಯ್ದ ಚಿತ್ರಗಳನ್ನು ಪ್ರಕಟಿಸಲಾಗುವುದು. ಚಿತ್ರದೊಂದಿಗೆ ನಿಮ್ಮ ಹೆಸರು, ವಿಳಾಸ ಮತ್ತು ಫೋನ್‌ ನಂಬರ್‌ ಕಡ್ಡಾಯ. ಫೋಟೊಗಳನ್ನು ಭಾನುವಾರ ಸಂಜೆಯವರೆಗೆ ಕಳುಹಿಸಬಹುದು.

ಇಮೇಲ್‌ ವಿಳಾಸmetropv@prajavani.co.in

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು