ಕೊಡಗು ಉಳಿಸೋಣ ಬನ್ನಿ...

7

ಕೊಡಗು ಉಳಿಸೋಣ ಬನ್ನಿ...

Published:
Updated:
Deccan Herald

ಆಕಾಶಕ್ಕೇ ತೂತು ಕೊರೆದಂತೆ ಬಿಟ್ಟೂಬಿಡದಂತೆ ಸುರಿವ ಮಳೆ, ಮೂಳೆ ಕೊರೆಯುವ ಚಳಿ, ಕಣ್ಣೆದುರಿಗೇ ಬದುಕು ಕೊಚ್ಚಿಹೋದ ದೃಶ್ಯ... ಎಲ್ಲವೂ ಒಮ್ಮೆಲೇ ಮೈ–ಮನಕ್ಕೆ ಆವರಿಸುತ್ತಿದೆ. ದೊರೆಯಂತೆ ಬದುಕಿದವರೂ ಇಂದು ತುತ್ತು ಅನ್ನಕ್ಕಾಗಿ ಮತ್ತೊಬ್ಬರ ಎದುರು ಕೈಚಾಚುವ ಅನಿವಾರ್ಯ.

–ಇದು ನೆರೆಪೀಡಿತ ಕೊಡಗು ಜಿಲ್ಲೆಯ ಸಂತ್ರಸ್ತರ ಮನಮಿಡಿಯುವ ದೃಶ್ಯ. ನೋವಿನಲ್ಲಿರುವ ಕಾವೇರಿ ತಾಯ ಮಕ್ಕಳಿಗೆ ನಗರದ ಹಲವು ತಂಡಗಳು ಸಹಾಯ ಮಾಡಲು ಅವರಲ್ಲಿಗೆ ತೆರಳಿವೆ. ನಿತ್ಯದ ಬದುಕಿಗೆ ಬೇಕಾಗುವ ದಿನಸಿ, ಆಹಾರ ಸೇರಿದಂತೆ ಹಾಸಿಗೆ, ಬೆಡ್‌ಶೀಟ್, ಸ್ವೆಟರ್, ಟೋಪಿ, ಅಗತ್ಯ  ಔಷಧಿಗಳನ್ನೂ ಸರಬರಾಜು ಮಾಡುತ್ತಿವೆ. ನೆರೆಪೀಡಿತ ಕೊಡಗು ಜಿಲ್ಲೆಗೆ ತೆರಳಿ ಅವರ ನೋವಿಗೆ ಮಿಡಿದ ಎರಡು ತಂಡಗಳ ನಾಯಕರು ತಮ್ಮ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಕರ್ನಾಟಕ ರಣಧೀರ ಪಡೆ: ‘ಕರ್ನಾಟಕ ರಣಧೀರ ಪಡೆಯಿಂದ ನಾವು 15 ಮಂದಿ ಮಡಿಕೇರಿಯತ್ತ ಶನಿವಾರ ಹೊರಟೆವು. ಮಡಿಕೇರಿಗಿಂತ ಎರಡು ಕಿ.ಮೀ. ಹಿಂದೆಯೇ ನಮ್ಮ ವಾಹನ ನಿಲ್ಲಿಸಿ ನಿತ್ಯ ಜೀವನಕ್ಕೆ ಬೇಕಾದ 10 ಕೆ.ಜಿ. ಅಕ್ಕಿ, ಬೇಳೆ, ಪೇಸ್ಟ್–ಬ್ರಶ್, ಅಡುಗೆ ಎಣ್ಣೆ, ಕಂಬಳಿ, ಚಾಪೆ, ಟಾರ್ಪಲ್ ಇವುಗಳನ್ನು ಒಂದು ಕಿಟ್ ಮಾದರಿಯಲ್ಲಿ ರೆಡಿ ಮಾಡಿಕೊಂಡೆವು. ಮಡಿಕೇರಿ ತಲುಪಿದಾಗ ಅಲ್ಲಿನ ಡಿಸಿ ಕಚೇರಿ ಮತ್ತು ಎಪಿಎಂಸಿ ಗೋದಾಮಿನಲ್ಲಿ ನಿತ್ಯದ ಸಾಮಾನುಗಳು ಲಾಟ್‌ಗಟ್ಟಲೇ ಬಿದ್ದಿದ್ದವು. ಬಹುಶಃ ಜಿಲ್ಲಾಡಳಿತಕ್ಕೂ ಮಾನವ ಸಂಪನ್ಮೂಲದ ಕೊರತೆ ಇದೆ ಅನಿಸಿತು. ಮಡಿಕೇರಿಯ 5 ಕಿ.ಮೀ. ಸುತ್ತಮುತ್ತ ಮಾತ್ರ ಕೆಲ ಸಂತ್ರಸ್ತರಿಗೆ ಸಹಾಯವಾಗಿದೆ. ಜಿಲ್ಲಾಡಳಿತ ತಲುಪಲಾಗದ ಗ್ರಾಮಗಳಿಗೆ ತೆರಳಿ ಸಹಾಯ ಮಾಡಲು ನಿರ್ಧರಿಸಿದೆವು.

ಮಡಿಕೇರಿಯಿಂದ 30 ಕಿ.ಮೀ. ದೂರ ನಾಪೋಕ್ಲು ಕಡೆಗೆ ಪಯಣಿಸಿದೆವು. ಅಲ್ಲಿನ ದೃಶ್ಯ ನೋಡಿದರೆ ಮನ ಮಿಡಿಯುವಂತಿತ್ತು. ಅಲ್ಲಿನ ಸಂತ್ರಸ್ತರಿಗೆ ಸಹಾಯ ಮಾಡಿ. ನಂತರ ಕೇರಳ–ಕರ್ನಾಟಕದ ಗಡಿಗ್ರಾಮವೊಂದಕ್ಕೆ ತೆರಳಿದೆವು. ಅಲ್ಲಿ ಹಿಂದುಳಿದವರು, ಬುಡಕಟ್ಟು ಜನರಿದ್ದರು. ಅಲ್ಲಂತೂ ಹಣ್ಣುಹಣ್ಣು ಮುದುಕಿಯೊಬ್ಬರು ತಮ್ಮ ಮನೆಗೆ ನುಗ್ಗಿರುವ ನೀರನ್ನು ಹೊರಗೆ ಚೆಲ್ಲುತ್ತಿದ್ದರು. ಪಾರ್ಶ್ವವಾಯು ಪೀಡಿತ ಅಜ್ಜ ಮಲಗಿದ್ದರು. ಅವರ ಮಕ್ಕಳು ಬೆಂಗಳೂರು ಸೇರಿದ್ದಾರೆ. ಇಲ್ಲಿ ಇವರಿಬ್ಬರೇ. ಅವರ ಸ್ಥಿತಿ ನೋಡಿ ಕಣ್ಣಲ್ಲಿ ನೀರು ಬಂತು. ನಮ್ಮ ಪಡೆಯ ಸದಸ್ಯರು ಅಜ್ಜಿ ಮನೆಯನ್ನು ಸ್ವಚ್ಛಗೊಳಿಸಿ, ನೀರು ಹೊರಗೆ ಚೆಲ್ಲಿ. ಬೇಕಾದ ಅಗತ್ಯ ಸಾಮಾನುಗಳ ನಾಲ್ಕು ಕಿಟ್ ಅವರಿಗೆ ಕೊಟ್ಟು ಬಂದೆವು. ಆ ಗ್ರಾಮದ ಉಳಿದ 150 ಕುಟುಂಬಗಳ ವಿವರ ಪಡೆದು, ಒಂದೊಂದು ಕುಟುಂಬಕ್ಕೂ ಬೇಕಾದ ಅಗತ್ಯ ಸಾಮಾನುಗಳನ್ನು ವಿತರಿಸಿದೆವು.

ಕೆಲವರು ಈಗಾಗಲೇ ಸಂತ್ರಸ್ತರಿಗೆ ಬೇಕಾದಷ್ಟಿದೆ ಎನ್ನುವ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ವಾಸ್ತವವಾಗಿ ಹಾಗಿಲ್ಲ. 6,723 ಜನರು ನಿರಾಶ್ರಿತರ ಕೇಂದ್ರದಲ್ಲಿದ್ದಾರೆ. ಇನ್ನೂ ಸಾವಿರಾರು ಮಂದಿ ಹೊರಗಿದ್ದಾರೆ. ಅಲ್ಲಿರುವ 43 ಸಂತ್ರಸ್ತ ಕೇಂದ್ರಗಳಲ್ಲಿ 900 ವಿದ್ಯಾರ್ಥಿಗಳಿದ್ದಾರೆ. ಅವರ ಭವಿಷ್ಯ ನೆನದು ಆತಂಕವಾಯಿತು.  ಮುಖ್ಯವಾಗಿ ಬೆಂಗಳೂರಿನಿಂದ ಕೊಡಗಿನತ್ತ ಹೋಗುವವರು ತುಂಬಾ ಎಚ್ಚರಿಕೆಯಿಂದ ಪ್ರಯಾಣಿಸಬೇಕು. ರಾತ್ರಿ ಪ್ರಯಾಣ ಬೇಡವೇ ಬೇಡ. ವೇಗವಾಗಿ ಹೋದರೆ ಗಾಡಿಗಳೇ ಪಲ್ಟಿಯಾಗುವ ಸಾಧ್ಯತೆ ಇದೆ. ಸಹಾಯ ಮಾಡಲು ತೆರಳುವ ಸ್ಥಳಗಳಲ್ಲಿ ಇನ್ನೂ ಅಪಾಯವಿದೆ. ಯಾವಾಗ ಗುಡ್ಡ ಕುಸಿಯುತ್ತದೋ ಹೇಳಲಾಗದು. ಇಲ್ಲಿಂದ ಸಹಾಯ ಮಾಡುವವರು ಅಲ್ಲಿಗೆ ಹೋಗಿ ಸಾಮಾನು ಕೊಡುತ್ತಾರೆ ನಿಜ. ಆದರೆ, ಅವೆಲ್ಲವೂ ಸಂತ್ರಸ್ತರಿಗೆ ತಲುಪುತ್ತಿವೆಯೇ ಎಂಬುದನ್ನೂ ಯೋಚಿಸಿ. ಸಾಧ್ಯವಾದರೆ ಜಿಲ್ಲಾಡಳಿತ, ಸೇನೆ ತಲುಪದ ಸ್ಥಳಗಳಿಗೆ ಹುಷಾರಾಗಿ ತೆರಳಿ ಸಂತ್ರಸ್ತರಿಗೆ ಸಹಾಯ ಮಾಡಿದರೆ ಒಳಿತು. ನಮ್ಮ ತಂಡದಿಂದ ಇನ್ನೊಂದು ವಾರದಲ್ಲಿ ಮತ್ತೆ ಅಲ್ಲಿಗೆ ಹೋಗಿ ಸಹಾಯ ಮಾಡುತ್ತೇವೆ.
–ಹರೀಶ್‌ಕುಮಾರ್ ಬಿ. ಅಧ್ಯಕ್ಷ, ಕರ್ನಾಟಕ ರಣಧೀರ ಪಡೆ

***
 


ಮಂಗಳಾದೇವಿನಗರ ಅಂಗನವಾಡಿ ಕೇಂದ್ರದ ಬಳಿ ಪೀಪಲ್ ಫಾರ್ ಕೊಡಗು ತಂಡ

ಪೀಪಲ್ ಫಾರ್ ಕೊಡಗು: ಬೆಂಗಳೂರಿನಿಂದ ಒಂದಷ್ಟು ಜನರ ತಂಡ ‘ಪೀಪಲ್ ಫಾರ್ ಕೊಡಗು’ ಜತೆಗೆ ನಾಲ್ಕು ದಿನಗಳಿಂದ ಕೊಡಗಿನಲ್ಲಿದ್ದೇನೆ. ಸಂತ್ರಸ್ತರಿಗೆ ಬೇಕಾದ ಅಕ್ಕಿ, ಬೆಲ್ಲ, ಬೇಳೆ, ಬಟ್ಟೆಗಳು ಇವುಗಳನ್ನು ನಮ್ಮತಂಡ ವಿತರಣೆ ಮಾಡುತ್ತಿದೆ. ಸುಮಾರು ₹ 30ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಔಷಧಿಗಳನ್ನು ವಿತರಿಸುತ್ತಿದ್ದೇವೆ. ಮುಖ್ಯವಾಗಿ ಕೂಲಿಕಾರ್ಮಿಕರಿಗೆ ಪರಿಹಾರ ಸಾಮಗ್ರಿಗಳು ತಲುಪುತ್ತಿರಲಿಲ್ಲ. ಅಂಥ ಸಂತ್ರಸ್ತರನ್ನು ಹುಡುಕಿಕೊಂಡು ಹೋಗಿ ಅಗತ್ಯ ಸಾಮಾನು ನೀಡಿದೆವು. ಇಲ್ಲಿ ತುಬಾ ಚಳಿ ಇರುವುದರಿಂದ ಮಕ್ಕಳು, ವೃದ್ಧರಿಗೆ ಚಳಿ ತಡೆಯಲಾಗುತ್ತಿಲ್ಲ. ಅವರಿಗೆ ಅಗತ್ಯ ಹೊದಿಕೆ, ಸ್ವೆಟರ್‌ ನೀಡುತ್ತಿದ್ದೇವೆ. ಆತಂಕಕಾರಿ ಸಂಗತಿಯೆಂದರೆ ಅಲ್ಲಿ ಇನ್ನೂ ಗುಡ್ಡಗಳು ಜರುಗುತ್ತಿವೆ. ಆದರೂ ಅಲ್ಲಿನ ಜನರು ಇನ್ನೂ ಅಲ್ಲಿಂದ ಕದಲುತ್ತಿಲ್ಲ. ಅವರಿಗೆ ತಮ್ಮ ಸ್ಥಳಗಳ ಜತೆಗೆ ಭಾವನಾತ್ಮಕ ಸಂಬಂಧವಿದೆ.

ಮಂಗಳಾದೇವಿ ನಗರಕ್ಕೆ ಹೋದಾಗ ಅಲ್ಲಿನ ಜನರು ಅಕ್ಷರಶಃ ನಮ್ಮ ಮೇಲೆ ಮುಗಿಬಿದ್ದರು. ಅದನ್ನೆಲ್ಲಾ ನೋಡಿದಾಗ ಕಣ್ಣೀರು ತಡೆಯಲಾಗಲಿಲ್ಲ. ಅವರಿಗೆ ಇ ಟಾಯ್ಲೆಟ್,  ಗಮ್ ಬೂಟ್‌ಗಳು ಬೇಕಿವೆ. ಬ್ರೆಡ್‌ಬನ್ ಒಂದೆರಡು ದಿನಕ್ಕಷ್ಟೇ ಸಾಕಾಗುತ್ತವೆ. ಆದರೆ, ಅವರ ಮುಂದಿನ ದಿನಗಳ ಬದುಕಿಗೆ ದಿನಸಿ ಬೇಕು. ಬೆಂಗಳೂರಷ್ಟೇ ಅಲ್ಲ ರಾಜ್ಯದ ಇತರ ಕಡೆಯಿಂದಲೂ ನಮಗೆ ಅಗತ್ಯ ಸಾಮಾಗ್ರಿಗಳ ಸಹಾಯ ದೊರೆಯುತ್ತಿದೆ.

ಕೊಡಗಿನ ಸ್ಥಿತಿ ನೋಡಿ ನಾನಂತೂ ತುಂಬಾ ಡಿಸ್ಟರ್ಬ್ ಆಗಿದ್ದೇನೆ. ಸಿನಿಮಾವೊಂದರ ಶೂಟಿಂಗ್‌ಗೆ ಹೋಗುವಾಗ ಮಡಿಕೇರಿ ನಗರದ ಗುಡ್ಡಗಳ ಮೇಲಿನ ಮನೆಗಳನ್ನು ನೋಡಿ ಅರೆ ಇಷ್ಟೊಂದು ಮನೆಗಳಾಗಿವೆ. ಇವು ಕುಸಿದರೆ ಏನಪ್ಪಾ ಗತಿ ಅಂದುಕೊಂಡಿದ್ದೆ. ಒಂದು ಕ್ಷಣ ಭಯ ಕಾಡಿತ್ತು. ಆದರೆ, ಅದು ಇಷ್ಟು ಬೇಗ ಈ ದುರಂತ ಸಂಭವಿಸುತ್ತದೆ ಅಂದುಕೊಂಡಿರಲಿಲ್ಲ. ಸಾಧ್ಯವಾದಷ್ಟೂ ದಿನ ಇಲ್ಲಿಯೇ ಇದ್ದು ಸಹಾಯ ಮಾಡಬೇಕೆಂದು ಕೊಂಡಿದ್ದೇನೆ. ನನ್ನ ಜತೆಗಿರುವ ತಂಡದ ಕಾಯಕಕ್ಕೆ ಅಭಿನಂದನೆಗಳು.
–‘ಸಂಚಾರಿ’ ವಿಜಯ್, ಪೀಪಲ್ ಫಾರ್ ಕೊಡಗು

***
ತರಕಾರಿ ಬೇಡ ಅಗತ್ಯ ಸಾಮಾನು ಕೊಡಿ
ಕೊಡಗಿನ ಸಂತ್ರಸ್ತರಿಗೆ ಒಂದೆರಡು ದಿನಗಳಲ್ಲೇ ಹಾಳಾಗುವ ತರಕಾರಿ, ಆಹಾರ ಪದಾರ್ಥ ಕೊಡಬೇಡಿ. ಅದರ ಬದಲು ಅವರಿಗೆ ನಿತ್ಯದ ಬದುಕಿಗೆ ಅಗತ್ಯವಾಗಿರುವ ಸಾಮಾನುಗಳನ್ನು ಕೊಡಿ. ಎಣ್ಣೆ ಹಚ್ಚದ ಚಪಾತಿ, ಅಕ್ಕಿ, ಬೇಳೆ, ಎಣ್ಣೆ, ಬೆಡ್‌ಶೀಟ್, ಗಮ್ ಬೂಟ್, ಆಲೂಗಡ್ಡೆ, ಈರುಳ್ಳಿ, ಬೆಳ್ಳುಳ್ಳಿ, ಇ–ಟಾಯ್ಲೆಟ್, ಗೀಸರ್‌ ಕೊಡಿ ಅನ್ನೋದು ಅಲ್ಲಿಗೆ ಭೇಟಿ ನೀಡಿದ ತಂಡಗಳ ಮನವಿ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !