ಬುಧವಾರ, ಡಿಸೆಂಬರ್ 8, 2021
26 °C

PV Web Exclusive: ಕೃಷ್ಣ ಮತ್ತು ಆಧುನಿಕ ಜಗತ್ತು

ಸುಕೃತ ಎಸ್‌. Updated:

ಅಕ್ಷರ ಗಾತ್ರ : | |

ಕೃಷ್ಣ

ಮಹಾಭಾರತವನ್ನು ಬಗೆದಷ್ಟು ನಮಗೆ ಹೊಸ ಹೊಸ ಹೊಳಹುಗಳು ದಕ್ಕುತ್ತವೆ. ಆ ಮಹಾಕಾವ್ಯವೇ ಅಂಥದ್ದು. ಅದು ರಚಿತವಾದ ಕಾಲಘಟ್ಟದಿಂದ ಹಿಡಿದು ಇಲ್ಲಿಯವರೆಗೂ ಆಯಾ ಕಾಲಘಟ್ಟದಲ್ಲಿ ಅದನ್ನು ಅರ್ಥೈಸಲಾಗಿದೆ, ಮುಂದೂ ಅರ್ಥೈಸಲಾಗುತ್ತದೆ.

ಕೃಷ್ಣ ನನಗೆ ವೈಯಕ್ತಿಕವಾಗಿ ಬಹಳ ಇಷ್ಟವಾಗುವ ಪಾತ್ರ. ಆತನನ್ನು ಓದುವಾಗ, ಎಲ್ಲೋ ದೂರದಲ್ಲಿ ಇರುವ, ವಾಸ್ತವದಿಂದ ಆಚೆ ನಿಲ್ಲುವ ವ್ಯಕ್ತಿತ್ವ ಎಂದು ಅನ್ನಿಸುವುದೇ ಇಲ್ಲ. ಇಲ್ಲಿ, ನಮ್ಮ ಪಕ್ಕದಲ್ಲಿ, ಕೆಲವೊಮ್ಮೆ ನಾವೇ ಆಗಿ ಆತ ನಮ್ಮನ್ನು ಆವರಿಸಿಕೊಂಡು ಬಿಡುತ್ತಾನೆ. ಆದ್ದರಿಂದಲೇ ಆತನೊಟ್ಟಿಗೆ ಜಗಳ ಆಡುವುದಕ್ಕೂ ಸಾಧ್ಯವಾಗಿದೆ. ದಾಸರಂತು ಕೃಷ್ಣನನ್ನು ಯಥೇಚ್ಛವಾಗಿ ಬೈದಿದ್ದಾರೆ, ಪ್ರೀತಿಸಿದ್ದಾರೆ, ಮೂದಲಿಸಿದ್ದಾರೆ ಇತ್ಯಾದಿ. ಕೃಷ್ಣ ಅಲ್ಲದೆ ಬೇರೆ ಯಾರನ್ನೂ ನಾವು ಇಷ್ಟು ಸಲುಗೆಯಿಂದ ಅಪ್ಪಿಕೊಳ್ಳಲು, ಓದಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗೇನಾದರೂ ಆದರೆ, ದೊಡ್ಡ ಯುದ್ಧವೇ ಜರುಗೀತು.

ಕಳ್ಳತನ ಮಾಡಿದ್ದಾನೆ, ಸುಳ್ಳು ಹೇಳಿದ್ದಾನೆ, ಜನರನ್ನು ಮರುಳು ಮಾಡಿದ್ದಾನೆ, ತಾನು ಅಂದುಕೊಂಡ ಕೆಲಸ ಆಗಬೇಕು ಎಂದಾದರೆ ಏನನ್ನೂ ಮಾಡಿದ್ದಾನೆ. ಪ್ರೀತಿಸಿದ ಹುಡುಗಿಯನ್ನು ಮದುವೆ ಮನೆಯಿಂದ ಎತ್ತಿಕೊಂಡು ಹೋಗಿದ್ದಾನೆ. ಮನುಷ್ಯರು ಮಾಡುವ ಎಲ್ಲ ತಪ್ಪು, ಸರಿಗಳನ್ನು ಆತನೂ ಮಾಡಿದ್ದಾನೆ. ಹೀಗೆ, ಮನುಷ್ಯರಂತೆಯೇ ಇರುವ ಕೃಷ್ಣ ಬಹಳ ಸುಲಭವಾಗಿ ನಮ್ಮವನಾಗಿ ಬಿಡುತ್ತಾನೆ. ಆದ್ದರಿಂದಲೇ ಈ ಪಾತ್ರ ನಮ್ಮನ್ನು ಹೆಚ್ಚು ಕಾಡುತ್ತದೆ.

ಇದು ಒಂದೊತ್ತಿಗಿರಲಿ. ಕಾವ್ಯದಿಂದ ತುಸು ಹೊರಬಂದು ವಾಸ್ತವ ಜಗತ್ತಿಗೆ ಪ್ರವೇಶ ಮಾಡೋಣ. ಈ ಕಾರ್ಪೋರೇಟ್ ಜಗತ್ತಿನಲ್ಲಿ ಪಿಆರ್‌ (ಪಬ್ಲಿಕ್‌ ರಿಲೇಷನ್‌) ತಂತ್ರಗಳೇ ಪ್ರಾಮುಖ್ಯ. ಜಗತ್ತನ್ನು ಆಳುತ್ತಿರುವುದೂ ಇದೇ ತಂತ್ರವೇ ಆಗಿದೆ. ತನ್ನ ವಸ್ತುವಿನ ಗುಣಮಟ್ಟದ ಬಗ್ಗೆ ಈಗ ಯಾರೂ ತಲೆಗೆಡಿಸಿಕೊಳ್ಳಬೇಕಿಲ್ಲ, ಯಾವ ರೀತಿಯಲ್ಲಿ ನೀನು ನಿನ್ನ ವಸ್ತುವಿನ ಮಾರ್ಕೆಟಿಂಗ್‌ ಮಾಡುತ್ತೀಯೋ ಅದು ನಿನ್ನ ವಸ್ತುವಿನ ಖರೀದಿಯ ಮೇಲೆ ಪ್ರಭಾವ ಬೀರುತ್ತದೆ. ಇದೆಲ್ಲವೂ ಬಹಳ ಸಂಕೀರ್ಣ ವಿಚಾರ. ಬಹಳ ಸ್ಥೂಲವಾಗಿ ಇಲ್ಲಿ ಅವಲೋಕಿಸಲಾಗುತ್ತಿದೆ ಅಷ್ಟೆ.

ವಸ್ತು ಮಾತ್ರವಲ್ಲ, ದೇಶದ ನಾಯಕರನ್ನೂ ನಾವು ಇದೇ ತಂತ್ರಗಳಿಂದ ಪ್ರಭಾವಿತರಾಗಿಯೇ ಆಯ್ಕೆ ಮಾಡುತ್ತಿದ್ದೇವೆ. ಹಾಗೆ ಮಾಡಿದುದರ ಪರಿಣಾಮವನ್ನೂ ಅನುಭವಿಸುತ್ತಿದ್ದೇವೆ. ಬಣ್ಣ ಬಣ್ಣದ ಮಾತಿನ ಮೂಲಕ, ಒಳ್ಳೆ ಬಟ್ಟೆ ತೊಡುವುದರ ಮೂಲಕ, ಸುಂದರವಾಗಿ ಗಡ್ಡ ಬಿಡುವುದರ ಮೂಲಕ ದೇಶವನ್ನು ಕೆಲವು ಕಾಲ ಮುನ್ನಡೆಸಿದಂತೆ ನಟಿಸಬಹುದಷ್ಟೇ.

ನಾನು, ಒಂದು ಪುಸ್ತಕ ಬರೆದೆ ಎಂದಿಟ್ಟುಕೊಳ್ಳಿ, ಕೊರೊನಾ ಕಾಲ ಬೇರೆ. ಹೇಗೆ ಪುಸ್ತಕದ ಪ್ರಚಾರ ಮಾಡುವುದು. ಸಾಮಾಜಿಕ ಜಾಲತಾಣದಲ್ಲಿ ಪುಸ್ತಕದ ಬಗ್ಗೆ ಮತ್ತೆ ಮತ್ತೆ ಬರೆಯುವುದು, ಜನರ ಕಣ್ಣಿನಿಂದ ಆಚೆ ಹೋಗದಂತೆ ನೋಡಿಕೊಳ್ಳುವುದು. ಪ್ರತಿದಿನ ನೀವು ಆ ಪುಸ್ತಕದ ಬಗ್ಗೆ ನೋಡುವಂತೆ ಮಾಡುವುದು. ಇಷ್ಟು ಮಾಡಿದರೆ, ಜನರಲ್ಲಿ ಒಂದು ಕುತೂಹಲ ಹುಟ್ಟುತ್ತದೆ, ಓದಬೇಕು ಎನ್ನಿಸುತ್ತದೆ; ಖರೀದಿಸುತ್ತೀರಿ. ಇದು ಪಿಆರ್‌ ತಂತ್ರಗಳಲ್ಲಿ ಒಂದು.

ಕೊನೆಗೂ ಪಿಆರ್‌ ತಂತ್ರಗಾರಿಕೆಯ ಮರ್ಮ ಇಷ್ಟೆ, ನೀನು ಹೇಗಾದರೂ ಇರು, ಆದರೆ, ನೀನು ಇರುವ ಹಾಗೆ ನಿನ್ನನ್ನು ನಾನು ನೋಡುವಂತಿಲ್ಲ. ನೀನು ಹೇಗೆ ನಿನ್ನನ್ನು ಜಗತ್ತಿಗೆ ತೋರಿಸಿಕೊಳ್ಳುತ್ತೀಯೋ ಹಾಗೆ ನಾನು ನಿನ್ನನ್ನು ನೋಡಬೇಕು. ಇಷ್ಟೆ ತಂತ್ರಗಾರಿಕೆ. ದೇಶವಾಗಿ, ಒಬ್ಬ ರಾಜಕಾರಣಿಯಾಗಿ, ಉದ್ಯಮಿಯಾಗಿ, ನಟ–ನಟಿಯಾಗಿ ಇತ್ಯಾದಿ, ಕೊನೆಗೆ ವೈಯಕ್ತಿಕವಾಗಿ ನಿನ್ನನ್ನು ನೀನು ಹೇಗೆ ಪ್ರೊಜೆಕ್ಟ್‌ ಮಾಡಿಕೊಳ್ಳುತ್ತೀಯಾ ಎನ್ನುವುದೇ ಮುಖ್ಯ. ಇನ್ನಷ್ಟು ಸ್ಪಷ್ಟ ಮಾಡೋಣ: ನೀನು ‘ತೋರಿಸಿಕೊಳ್ಳುವುದು’ ಮುಖ್ಯ ‘ಇರುವುದಲ್ಲ’.

ಪತ್ರಿಕೋದ್ಯಮ ವಿದ್ಯಾರ್ಥಿ ಆಗಿದ್ದ ನಮಗೆ, ಪಿಆರ್‌ ತಂತ್ರಗಾರಿಕೆಯ ಕುರಿತು ನೂರು ಅಂಕಗಳ ವಿಷಯ ಇತ್ತು. ತರಗತಿಯಲ್ಲಿ ಸೆಮಿನಾರ್‌ ನೀಡಬೇಕು. ನಾನು ತಯಾರಿ ಮಾಡಿಕೊಂಡು ಹೋದದ್ದೆ ಬೇರೆ, ಆದರೆ, ಅಲ್ಲಿ ಆದದ್ದೆ ಬೇರೆ. ಕೃಷ್ಣ ಒಮ್ಮೆ ನನ್ನ ಕಣ್ಣ ಮುಂದೆ ಹಾಗೆ, ಕಾದು ಹೋದ ಹಾಗಾಯಿತು. ನಂತರ ಆದದ್ದೇ ಬೇರೆ.

ಕೃಷ್ಣನ ಪಾತ್ರವನ್ನು ಬಹುಷಃ ಆಧುನಿಕ ಜಗತ್ತಿಗೆ ಹೋಲಿಸಿ ನೋಡಿದರೆ, ನಮಗೆ ಆತ ಬೇರೆಯದೇ ಆಗಿ ತೋರುತ್ತಾನೆ. ಆಧುನಿಕ ಜಗತ್ತಿನ ಈ ಪಿಆರ್‌ ತಂತ್ರಗಳ ಮೂಲ ಪುರುಷನಾಗಿ ಬೃಹದಾಕಾರವಾಗಿ ಬೆಳೆದು ನಿಲ್ಲುತ್ತಾನೆ. ಕೃಷ್ಣನನ್ನು ನಾವೂ ಹೀಗೂ ಗ್ರಹಿಸಬಹುದು ಎನ್ನುವ ಚರ್ಚೆ ಅಷ್ಟೆ ಈ ಬರಹ. ಕೆಲವರಿಗೆ ಇದೆಂಥ ಹೋಲಿಕೆ ಎನ್ನಿಸಲೂ ಬಹುದು, ಕೆಲವರಿಗೆ ಹೌದಲ್ಲವಾ ಎನ್ನಿಸಲೂ ಬಹುದು.

ಕೃಷ್ಣನಿಗೂ ಸೂಟು, ಬೂಟು ಹಾಕಿ, ಕನ್ನಡಕ ಹಾಕಿ, ಫೈಲ್‌ಗಳನ್ನು ಹಿಡಿದುಕೊಂಡು ಕ್ಯಾಬಿನ್‌ನಿಂದ ಬರುವುದನ್ನು ಊಹಿಸಿಕೊಂಡು, ಮಹಾಭಾರತವನ್ನು ಮತ್ತೆ ಓದಿಕೊಳ್ಳಬಹುದು. ಧರ್ಮ ಸ್ಥಾಪನೆ ಆಗಬೇಕು. ಅದು ಪಾಂಡವರನ್ನು ಗೆಲ್ಲಿಸುವ ಮೂಲಕವೇ ಆಗಬೇಕು ಎನ್ನುವ ಏಕ ಉದ್ದೇಶ ಕೃಷ್ಣನದು. ಅದಕ್ಕಾಗಿ ಆತ ಅವರನ್ನು ಹೆಜ್ಜೆ ಹೆಜ್ಜೆಗೂ ಮುನ್ನಡೆಸುತ್ತಾನೆ. ಪಾಂಡವರ ಬಗ್ಗೆ ಯಾವ ವಿರೋಧವೂ ಬರದಂತೆ ನೋಡಿಕೊಳ್ಳುತ್ತಾನೆ. ಯಾರೂ ಅವರನ್ನು ಪ್ರಶ್ನಿಸಬಾರದು. ಪ್ರಶ್ನಿಸಿದವರನ್ನು ಅವರ ಪಾಪಗಳ ಮೂಲಕವೇ ಕಟ್ಟಿ ಹಾಕಿ ಅವರನ್ನು ಇಲ್ಲವಾಗಿಸಿ ಬಿಡುತ್ತಾನೆ. ಅರ್ಜುನನಿಗೆ ಮಿಗಿಲಾಗಿ ಯಾರೂ ಬೆಳೆಯ ಬಾರದು. ಹೀಗೆ ನಾನಾ ರೀತಿಯಲ್ಲಿ ಅವರನ್ನು ಕಾಪಾಡುತ್ತಾನೆ.

ಆತನ ಮಾತುಗಾರಿಕೆ, ಎಲ್ಲರನ್ನು ಒಪ್ಪಿಸುವ ಬಗೆ, ಸಂಕಷ್ಟದ ಸಮಯದಲ್ಲಿ ತೋರುವ ಸಮಯೋಚಿತ ನಿರ್ಧಾರಗಳು, ಮೆಸೇಜ್ ಮ್ಯಾನೇಜ್‍ಮೆಂಟ್ (ಮಾಹಿತಿ ನಿರ್ವಹಣೆ), ಕೂಲಂಕಷವಾಗಿ ವಿಷಯ ಅಥವಾ ಘಟನೆಯನ್ನು ಅರ್ಥ ಮಾಡಿಕೊಳ್ಳುವ ಬಗೆ, ತನ್ನನ್ನು ನಂಬಿದವರನ್ನು ಯಾವ ಮಾರ್ಗವಾಗಲಿ ಕೈಬಿಡದೆ ಮುನ್ನಡೆಸುವ ಛಾತಿ ಎಲ್ಲವನ್ನೂ ಕೃಷ್ಣನಲ್ಲಿ ಕಾಣಬಹುದು.

ಕರ್ಣ, ಕುಂತಿಯ ಮಗ ಎಂದು ಮೊದಲೇ ಕೃಷ್ಣ ತಿಳಿದಿದ್ದ. ಆದರೆ, ಅವರನ್ನು ಮುಖಾಮುಖಿ ಮಾಡಿಸಿದ್ದು ಯುದ್ಧದ ಸಂದರ್ಭದಲ್ಲಿ. ಅಲ್ಲಿಗೆ ಪಾಂಡವರು ಅರ್ಧ ಯುದ್ಧ ಗೆದ್ದಾಗಿತ್ತು. ಸಂದರ್ಭ ನೋಡಿಕೊಂಡು ದಾಳ ಬಿಡುವ ತಂತ್ರ. ತನ್ನ ಮಾತಿನ ಮೂಲಕ ಯಾರನ್ನೂ ಮರುಳು ಮಾಡುವ ಕೃಷ್ಣ, ಯುದ್ಧದ ಸಮಯದಲ್ಲಿ ಅರ್ಜುನ ಆತನಿಗೆ ಒಡ್ಡುವ ಕೆಲವು ಪ್ರಶ್ನೆಗಳಿಗೆ, ಅಷ್ಟೆ ತಂತ್ರಗಾರಿಕೆಯಿಂದ ಉತ್ತರಿಸುತ್ತಾನೆ. ‘ಇದೆಲ್ಲ ನಾನೇ ಮಾಡಿದ್ದು, ನನ್ನಿಂದಲೇ ಇದೆಲ್ಲ ಆಗುತ್ತಿರುವುದು ನೀನು ನೆಪ ಮಾತ್ರ. ತಪ್ಪೋ, ಸರಿಯೋ ನಾನಿದ್ದೇನೆ. ಗೆಲುವು ಮುಖ್ಯ’ ಎಂದು ಒಪ್ಪಿಸಿ ಕರ್ಣನನ್ನು ಕೊಲ್ಲಿಸಿ ಬಿಡುತ್ತಾನೆ.

ಒಟ್ಟು ಸಮಾಜದಲ್ಲಿ ಪಾಂಡವರು ಒಬ್ಬರೇ ಆಗಿರಬೇಕು. ಹಾಗಾದರೆ, ಕೌರವರು ಅಧಿಕಾರಕ್ಕಾಗಿ ಹೋರಾಡಿರುವುದು ತಪ್ಪೇ. ಸಹೋದರರೇ ಆಗಲಿ, ಅಧಿಕಾರಕ್ಕಾಗಿ ಅವರೂ ಹಲವು ತಂತ್ರಗಳನ್ನು ಹೂಡಿದರು. ತಮಗೂ ಆಸ್ತಿ ಬೇಕು ಎಂದು ಕೇಳಿದರು. ಇದು ಯಾರೂ ಮಾಡಬಹುದಾದದ್ದು. ಆದರೆ, ಜನರ ದೃಷ್ಟಿಯಲ್ಲಿ ಅವರದ್ದು ಅಧರ್ಮ ಎನ್ನುವುದನ್ನು ಬಹಳ ವ್ಯವಸ್ಥಿತವಾಗಿ ಹೇಳಿಕೊಂಡು ಬಂದ ಕೃಷ್ಣ, ಪಾಂಡವರನ್ನು ಗೆಲ್ಲಿಸಿಬಿಡುತ್ತಾನೆ. ಹಾಗಾದರೆ, ಕೃಷ್ಣ ಸ್ವಂತಕ್ಕೆ, ಪಾಂಡವರು ಏನೂ ತಪ್ಪು ಮಾಡಲಿಲ್ಲವೇ, ಯಾವ ಅಧರ್ಮವನ್ನೂ ಮಾಡಲಿಲ್ಲವೇ? ಆದರೆ, ಅವೆಲ್ಲವೂ ಧರ್ಮ ಸ್ಥಾಪನೆಗಾಗಿ ಮಾಡಿದುದು. ಆದರೆ, ಕೌರವರದ್ದು ಮಾತ್ರ ಅಧರ್ಮ. ಇದು ತಂತ್ರಗಾರಿಕೆ.

ಅಲ್ಲಿಗೆ ನಾವು ಯಾವುದನ್ನು ‘ಇದು ಹೀಗೆ’ ಎನ್ನುವುದನ್ನು ಒತ್ತಿ ಒತ್ತಿ ಕೇಳುತ್ತೇವೋ ಅದು ‘ಅದೇ’ ಆಗುತ್ತದೆ. ನಾವು ಎಷ್ಟು ಪರಿಣಾಮಕಾರಿ ಆಗಿ ಹೇಳುತ್ತೇವೆ ಎನ್ನುವುದು ಮುಖ್ಯ. ಜನರಿಗೆ ಮುಟ್ಟುವ ಹಾಗೆ, ನಂಬಿಸುವ ಹಾಗೆ ಹೇಳುವುದು ಮುಖ್ಯ. ಈ ಎಲ್ಲದರ ಆಚೆಗೆ ಸತ್ಯ ಇರುತ್ತದೆ ಎನ್ನುವುದನ್ನು ನಾವು ಮರೆತು ಬಿಡುತ್ತೇವೆ. ಹಿಂದಿನ ಸರ್ಕಾರಗಳು ತಪ್ಪು ಮಾಡಿವೆ ಎನ್ನುವುದನ್ನು ಈ ಸರ್ಕಾರ ಮಾಡುತ್ತಿರುವವರು ಎಷ್ಟು ಪರಿಣಾಮಕಾರಿ ಆಗಿ ಜನರಿಗೆ ತಲು‍ಪಿಸುತ್ತಾರೊ ಆ ಮಟ್ಟಿಗೆ ಇವರ ಹೆಗ್ಗಳಿಕೆ ನಿರ್ಧಾರವಾಗುತ್ತದೆ. ಈಗಿನ ಎಲ್ಲ ಹಿನ್ನೆಡೆಗೂ ಹಿಂದಿನ ಸರ್ಕಾರವೇ ಕಾರಣ ಎಂದು ಜನರನ್ನು ನಂಬಿಸಿದರೆ, ಮುಗಿಯಿತು, ನೀವು ಗೆದ್ದಂತೆ. ಸತ್ಯ ಬೇಡ, ಸುಳ್ಳನ್ನು ಹೇಗೆ ನಿಭಾಯಿಸುತ್ತೀರಿ ಎನ್ನುವುದು ಮುಖ್ಯವಾಗಿಬಿಡುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು