ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿದಾಸರ ಸಿರಿ - ಕೃಷ್ಣ

Last Updated 22 ಆಗಸ್ಟ್ 2019, 8:36 IST
ಅಕ್ಷರ ಗಾತ್ರ

‘ಕೃಷ್ಣಾ ನೀ ಬೇಗನೆ ಬಾರೋ – ಎಂಬ ಹಾಡಿಗೆ ತಲೆದೂಗದ ಕನ್ನಡಿಗನಾರು? ಕಾಲಲಂದುಗೆಗೆಜ್ಜೆ, ನೀಲದಬಾವುಲಿ, ಕಾಶಿಪೀತಾಂಬರ, ಕೊಳಲು, ಪೂಸಿದಶ್ರೀಗಂಧ - ತಾಯಿಗೆ ಬಾಯಲ್ಲಿ ಜಗವನ್ನೇ ತೋರಿದ ಜಗದೋದ್ಧಾರನ ಹೃದ್ಯವಾದ ವರ್ಣನೆ ವ್ಯಾಸರಾಜರದ್ದು - ದಾಸಸಾಹಿತ್ಯದ ಟಿಪಿಕಲ್ ಎನ್ನಿಸುವ ಕೃಷ್ಣವರ್ಣನೆಗೆ ಮೇಲ್ಪಂಕ್ತಿಯಂಥದ್ದು. ನಾಡು ಕಂಡ ಶ್ರೇಷ್ಠ ಅನುಭಾವಿಗಳಲ್ಲೊಬ್ಬರಾದ ವ್ಯಾಸರಾಜರು ದಾಸಸಾಹಿತ್ಯಕ್ಕೆ ನೇರವಾಗಿ ಪರೋಕ್ಷವಾಗಿ ನೀಡಿದ ಕೊಡುಗೆ ಬಲು ದೊಡ್ಡದು. ಕೃಷ್ಣನ ಬಾಲಲೀಲಾವಿನೋದಗಳನ್ನು ವರ್ಣಿಸುವ ವ್ಯಾಸರಾಜರ ಹಾಡುಗಳಲ್ಲಿ ಗಕ್ಕನೆ ನೆನಪಾಗುವ ಮತ್ತೊಂದು ಹಾಡು ‘ಕಡಗೋಲ ತಾರೆನ್ನ ಚಿನ್ನವೇ’. ತಾಯಿಗೆ ಮೊಸರು ಕಡೆಯುವ ಹೊತ್ತು. ತುಂಟಕೃಷ್ಣ ಕಡಗೋಲನ್ನೆತ್ತಿಕೊಂಡು ಓಡಿದ್ದಾನೆ, ಕೊಡಲೊಲ್ಲ. ತಾಯಿ ಅನುನಯಿಸಿ ಬೇಡುತ್ತಿದ್ದಾಳೆ - ಬೆಣ್ಣೆಯ ಆಸೆ ತೋರುತ್ತಾಳೆ, ಬಣ್ಣದ ಸರವನ್ನು ಹಾಕುವೆನೆನ್ನುತ್ತಾಳೆ, ಚಿಣ್ಣರೊಡನೆ ಆಟಕ್ಕೆ ಬಿಡುವೆನೆನ್ನುತ್ತಾಳೆ, ಪುಟ್ಟ ಬೂಚಿಯನ್ನು ತಂದು ಚಿನ್ನದ ತೊಟ್ಟಿಲಿಗೆ ಕಟ್ಟುವೆನೆನ್ನುತ್ತಾಳೆ, ಬಟ್ಟಲ ತುಂಬ ಸಕ್ಕರೆ ನೀಡುವೆನೆನ್ನುತ್ತಾಳೆ - ಕೆಲಸದ ಅವಸರದಲ್ಲಿದ್ದಾಗ ಮಗು ಇಷ್ಟು ಸತಾಯಿಸುತ್ತಿದ್ದರೆ ನಾವು ಏನು ಮಾಡುತ್ತಿದ್ದೆವೋ, ಆದರೆ ಈ ಮಹಾತಾಯಿಗೆ ಒಂದಿನಿತೂ ಬೇಸರವಿಲ್ಲ - ಕೃಷ್ಣನಿಗೋ ಪೂಸಿ ಹೊಡೆದಷ್ಟೂ ಹಿಗ್ಗು; ದಾಸರಿಗೋ ಕಂಡಷ್ಟೂ ಹಿಗ್ಗು. ಕೃಷ್ಣ ರಕ್ಕಸರನ್ನು ಕೊಂದ, ಮಡುವಲ್ಲಿ ದುಮುಕಿದ, ಗೊಲ್ಲತಿಯರನ್ನು ಕಾಡಿದ, ಬೆಣ್ಣೆ ಕದ್ದ - ಇವೆಲ್ಲಾ ಯಾರು ಬೇಕಾದರೂ ಹೇಳಿಬಿಡಬಹುದಾದ ಚೇಷ್ಟೆಗಳು. ಆದರೆ ಮೊಸರು ಕಡೆಯುವ ಕಡಗೋಲನ್ನೆತ್ತಿಕೊಂಡು ಅಲ್ಲೆಲ್ಲೋ ನಿಂತು ಸತಾಯಿಸುವುದಿದೆಯಲ್ಲ, ಇದು ತಾಯಿಗಷ್ಟೇ ಬರಬಹುದಾದ ಕಲ್ಪನೆ - ದಾಸರ ಕರುಳು ಅಂಥದ್ದು. ಭಾಗವತದಲ್ಲೆಲ್ಲೋ ವಾಕ್ಯಮಾತ್ರವಾಗಿ ಬಂದು ಹೋಗಿರಬಹುದಾದ ಚೇಷ್ಟೆಗಳೂ ದಾಸರ ವರ್ಣನೆಯಲ್ಲಿ ಕುಸುರಿಕುಸುರಿಯಾಗಿ ಒಡಮೂಡುವ ಪರಿಯೇ ಸೊಗಸು.

ಪುರಂದರದಾಸರದ್ದು ಇದೇ ಜಾಡು. ಕೃಷ್ಣನ ತುಂಟಾಟಗಳನ್ನು ವರ್ಣಿಸಿ ಗೋಪಿಯರು ಯಶೋದೆಗೆ ದೂರು ಹೇಳುವ ಪರಿ - ಅಬ್ಬಬ್ಬಾ, ಎಷ್ಟೆಷ್ಟೊಂದು ತಂಟೆಗಳು, ಚಾಡಿಗಳು. ಬೇರೆ ಯಾವ ತಾಯಿಯೋ ಆಗಿದ್ದರೆ ತಲೆ ಚಿಟ್ಟು ಹಿಡಿದಿರುತ್ತಿತ್ತೇನೋ, ಆದರೆ ಈಕೆ ಯಶೋದೆ! ಹೋಗಲಿ ದಿನವೆಲ್ಲ ಕುಣಿದವನು ರಾತ್ರಿ ಸುಮ್ಮನೆ ಮಲಗುತ್ತಾನೆಯೇ - ಉಹೂಂ. ಅಳು ಅಳು ಒಂದೇ ಸಮನೆ ಅಳು - ನೀರೊಳು ಮುಳುಗಿ ಮೈ ಒರೆಸೆಂದಳುತಾನೆ; ಮೇರುವಪೊತ್ತು ಮೈಭಾರವೆಂದಳುತಾನೆ; ಧರಣಿ ಕೋರೆಯೊಳಿಟ್ಟು ದವಡೆನೊಂದಳುತಾನೆ; ದುರುಳ ಹಿರಣ್ಯಕನ ಕರುಳ ಕಂಡಳುತಾನೆ; ಬೆತ್ತಲೆ ನಿಂತವನು ಎತ್ತಿಕೋ ಎಂದಳುತಾನೆ - ಎಷ್ಟೆಷ್ಟು ಪರಿ!

ಕನಕದಾಸರದ್ದು ಹೆಚ್ಚು ಆಧ್ಯಾತ್ಮದೃಷ್ಟಿ ಕೃಷ್ಣನ ಮಹಿಮಾವರ್ಣನೆ, ಅದರಲ್ಲೂ ಬಾಲಲೀಲಾವರ್ಣನೆ ಕಡಿಮೆಯೆಂದೇ ಹೇಳಬೇಕು. ಇರುವ ಕೆಲವು ಹಾಡುಗಳೂ ಗಂಭೀರ, ಕೆಲವೊಮ್ಮೆ ಹಾಸ್ಯಮಿಶ್ರಿತ. ಇಲ್ಲಿ ನೋಡಿ, ಕೃಷ್ಣನ ಮೇಲೆ ಬಾಲೆಯೊಬ್ಬಳು ದೂರು ತಂದಿದ್ದಾಳೆ - ಎಂಥ ಟವಳಿಗಾರನಮ್ಮ ಗೋಪ್ಯಮ್ಮ ಎಂದು ವರ್ಣಿಸತೊಡಗುತ್ತಾಳೆ. ಹಣ ಕೊಡುತ್ತೇನೆಂದು ನಂಬಿಸಿ ಕರೆತಂದನಂತೆ, ಹಣವೆಲ್ಲೆಂದರೆ, ‘ಎಲ್ಲಿ ಹಣವೇ? ಇಲ್ಲಣವೇ? ಚಲ್ಲಣವೇ? ಕುದುರೆಯ ಬೊಕ್ಕಣವೇ? ಹೋಗ್’ ಎನ್ನುತ್ತಾನಂತೆ. ಬುಗುಡಿ ಕೊಡುವೆನೆಂದು ಬೆಡಗಿನಿಂದ ತಂದವನು, ಬುಗುಡಿ ಕೇಳಿದರೆ ‘ಎಲ್ಲಿ ಬುಗುಡಿ? ಎಲ್ಲಿ ಧಗಡಿ? ಪಾಂಡವರಾಡೋ ಪಗಡಿ? ಮೂಗೊಳಗಿನ ನೆಗಡಿ? ಹೋಗ್’ ಎನ್ನುವನಂತೆ. ಶುದ್ಧ ದೇಸೀ ಸೊಗಡು ಕನಕದಾಸರದ್ದು.

ಇನ್ನು ವಾದಿರಾಜರದ್ದು ಹೃದ್ಯವಾದ ಲಯಗಾರಿಕೆ - ಪದಗಳ, ಭಾಷೆಯ, ಭಾವದ, ಮತ್ತು ಅನೇಕವೇಳೆ ದೇವಳಗಳಲ್ಲಿ ನಡೆಯುವ ಹಲವು ಪೂಜಾಕೈಂಕರ್ಯಗಳ ಲಯವನ್ನೂ ಸೊಗಸಾಗಿ ಹಿಡಿದಿಡುವುದರಲ್ಲಿ ಎತ್ತಿದ ಕೈ. ಉದಾಹರಣೆಗೆ ‘ರಂಗಾ ಉತ್ತುಂಗಾ ನರಸಿಂಗ ಬೇಗ ಬಾರೋ; ಗಂಗೇಯ ಪಡೆದಪಾಂಡು ರಂಗ ಬೇಗ ಬಾರೋ’; ’ಅಯ್ಯಾ ವಿಜಯ್ಯಾ ಸಹಾಯ್ಯ ಬೇಗ ಬಾರೋ; ಜೀಯಾ ಫಣಿಶಯ್ಯಾ ಹಯವದನ ಬೇಗ ಬಾರೋ’ (ಬೇಗಬಾರೋ ಬೇಗಬಾರೋ) ಈ ರೀತಿಯ ಸಾಲುಗಳು ಉತ್ಸವಮೂರ್ತಿಯನ್ನು ವೈಹಾಳಿಯಲ್ಲಿ ಕೊಂಡೊಯ್ಯುವ ಅಡ್ಡಗಾಲಿನ ನಡಿಗೆಯ ಲಯಕ್ಕೆ ತಕ್ಕಂತಿಲ್ಲವೇ? ಇದರ ಲಯದ ಸೊಬಗನ್ನು ಹಾಡಿ-ಕೇಳಿಯಷ್ಟೇ ಸವಿಯಲು ಸಾಧ್ಯ.

ರಂಗ-ಕೃಷ್ಣ-ವಿಠಲ ಈ ಮೂರು ರೂಪಗಳು ಇಡೀ ದಾಸಸಾಹಿತ್ಯದ ಜೀವರೇಖೆಗಳೆಂದರೆ ತಪ್ಪಾಗಲಾರದು. ಈ ಕೊಂಡಾಟದ ವೈವಿಧ್ಯವಿಸ್ತಾರವನ್ನು ಈ ಲೇಖನದ ಸ್ಥಳಮಿತಿಯಲ್ಲಿ ಅಡಗಿಸಲು ಸಾಧ್ಯವೇ? - ಹಲವು ದಾಸಪ್ರಮುಖರಲ್ಲಿ
ಯಾರನ್ನು ಬಿಡಲು ಸಾಧ್ಯ? ಶ್ರೀಪಾದರಾಜರು, ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರು, ಮಹಿಪತಿದಾಸರು, ಪ್ರಸನ್ನವೇಂಕಟದಾಸರು, ಗೋಕಾವಿ ಅನಂತಾದ್ರೀಶರು, ಹರಪನಹಳ್ಳಿ ಭೀಮವ್ವ, ಇತ್ತೀಚಿನ ಪ್ರಸನ್ನತೀರ್ಥರು - ಎಲ್ಲರಿಗೂ ಕೃಷ್ಣನೊಂದು ಸ್ಫೂರ್ತಿಯ ಸೆಲೆ, ಅದೇ ನಮ್ಮ ಸಂಪತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT