ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಾಪ್ರ ಕನ್ನಡ | ಬರೀ ಮಾತಿನ ಸರಕಲ್ಲ

Last Updated 25 ಜುಲೈ 2020, 19:45 IST
ಅಕ್ಷರ ಗಾತ್ರ
ADVERTISEMENT
""

ಪ್ರಾದೇಶಿಕ ಭಾಷೆಗಳು ಗ್ರಾಮೀಣ ಪರಿಸರದಲ್ಲಿ ಉಳಿಯುತ್ತವೆ ಎನ್ನುವುದು ಸಾಮಾನ್ಯವಾದ ಒಂದು ನಂಬಿಕೆ. ಆದರೆ ವರ್ತಮಾನ ಸಂದರ್ಭದಲ್ಲಿ ಈ ನಂಬಿಕೆ ಹುಸಿಯಾಗುತ್ತಿದೆ. ಇವತ್ತು ನಗರ ಪ್ರದೇಶಗಳಲ್ಲಿ ಮಾತ್ರವಲ್ಲ, ಚಿಕ್ಕ ಪುಟ್ಟ ಊರುಗಳಲ್ಲೂ ಬದುಕಿಗೆ ಇಂಗ್ಲಿಷ್ ಮತ್ತು ತಂತ್ರಜ್ಞಾನಗಳು ಸಾಕು ಎಂಬ ತಪ್ಪು ಕಲ್ಪನೆ ಆವರಿಸಿಕೊಳ್ಳುತ್ತಿದೆ.

***

ಕನ್ನಡ ಸಾಹಿತ್ಯದಲ್ಲಿ ನಾಡುನುಡಿಗಳ ಕುರಿತಾದ ಉತ್ಕಟ ಅಭಿಮಾನ ಹಲವು ನೆಲೆಗಳಲ್ಲಿ ಪ್ರಕಟಗೊಳ್ಳುತ್ತಾ ಬಂದಿದೆ. ಈ ಪರಂಪರೆಯ ಮುಂದುವರಿದ ಭಾಗವೋ ಎಂಬಂತೆ ಪ್ರಾದೇಶಿಕ ಭಾಷೆಯಾದ ಕುಂದಾಪ್ರ ಕನ್ನಡದ ಕುರಿತಂತೆ ‘ಕುಂದಾಪ್ರ ಕನ್ನಡ: ಭಾಷಿ ಅಲ್ಲ, ಬದ್ಕ್!’ ಎಂಬ ಘೋಷವಾಕ್ಯವೊಂದು ಇತ್ತೀಚೆಗೆ ಎಲ್ಲೆಡೆ ಅನುರಣಿಸುತ್ತಿದೆ. ಸ್ಥಳೀಯ ಭಾಷೆಯೊಂದರ ಕುರಿತಾಗಿ ಇಷ್ಟೊಂದು ವ್ಯಾಪಕವಾಗಿ ಸಂಭ್ರಮಾಚರಣೆ ನಡೆಯುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿ.

ಬೈಂದೂರು ಶಿರೂರು ಗಡಿಯಿಂದ ಮಾಬುಕಳ ಹೊಳೆಯವರೆಗೆ ಮೂಡಣ ಘಟ್ಟ ಹಾಗೂ ಪಡುವಣ ಕಡಲ ತಡಿಯ ನಡುವೆ ಹಬ್ಬಿರುವ ವಿಶಾಲ ಪ್ರಾಂತ್ಯವೇ ಕುಂದಾಪ್ರ ಕನ್ನಡದ ತವರು. ಇಲ್ಲಿ ಹಲವಾರು ಜಾತಿ, ಸಮುದಾಯದ ಜನರಿದ್ದಾರೆ. ಆ ಒಂದೊಂದು ಸಮುದಾಯದ ನಾಲಗೆಯಲ್ಲೂ ಕುಂದಾಪ್ರ ಕನ್ನಡ ವೈವಿಧ್ಯತೆಯನ್ನು ಹೊಂದಿದೆ. ಇಲ್ಲಿನ ಜನತೆಗೂ ಅವರ ಜೀವನಕ್ರಮಕ್ಕೂ ಇರುವ ಸೂಕ್ಷ್ಮ ಸಂಬಂಧ ಈ ಭಾಷೆಯಲ್ಲಿದೆ. ನಮ್ಮ ಹಿರಿಯರ ಸುಖ–ದುಃಖ, ನೋವು ನಲಿವು, ಸೆಡವು ಸಂಕಟಗಳೂ ಭಾಷೆಯೊಳಗೆ ಅಡಕಗೊಂಡಿರುತ್ತವೆ. ‘ಮೆಲ್ಲುವವನೇ ಬಲ್ಲ, ಬೆಲ್ಲದ ಸವಿಯ’ ಎನ್ನುವ ಮಾತಿನಂತೆ ಕುಂದಾಪ್ರ ಕನ್ನಡವನ್ನು ಬಳಕೆಯಿಂದಲೇ ಆಸ್ಪಾದಿಸಬೇಕು. ಆದರೆ ಇವತ್ತು ‘ಕುಂದಾಪ್ರ ಕನ್ನಡ’ ಕುಂದಾಪುರದವರ ನಾಲಗೆಯಲ್ಲೆ ಸೊರಗಿ ಹೋಗುತ್ತಿದೆ. ಹೌದು, ಜನರ ಆದ್ಯತೆಗಳು, ಜೀವನ ಕ್ರಮಗಳು ಬದಲಾದಂತೆ ಭಾಷಾ ಸ್ವರೂಪವೂ ಪರಿವರ್ತನೆಗೊಳಗಾಗುತ್ತದೆ.

ಪ್ರಾದೇಶಿಕ ಭಾಷೆಗಳು ಗ್ರಾಮೀಣ ಪರಿಸರದಲ್ಲಿ, ಹಳ್ಳಿಗಳಲ್ಲಿ ಉಳಿಯುತ್ತವೆ ಎನ್ನುವುದು ಸಾಮಾನ್ಯವಾದ ಒಂದು ನಂಬಿಕೆ. ಆದರೆ ವರ್ತಮಾನ ಸಂದರ್ಭದಲ್ಲಿ ಈ ನಂಬಿಕೆ ಹುಸಿಯಾಗುತ್ತಿದೆ. ಇವತ್ತು ನಗರ ಪ್ರದೇಶಗಳಲ್ಲಿ ಮಾತ್ರವಲ್ಲ, ಚಿಕ್ಕ ಪುಟ್ಟ ಊರುಗಳಲ್ಲೂ ಸ್ಪರ್ಧಾತ್ಮಕ ಆರ್ಥಿಕತೆಯ ಹಿಂದೆ ಓಡುವ ಧಾವಂತ ಹೆಚ್ಚುತ್ತಿದೆ. ಬದುಕಿಗೆ ಇಂಗ್ಲಿಷ್ ಮತ್ತು ತಂತ್ರಜ್ಞಾನಗಳು ಸಾಕು ಎಂಬ ತಪ್ಪು ಕಲ್ಪನೆ ಹಳ್ಳಿಗಳನ್ನೂ ಆವರಿಸಿಕೊಳ್ಳುತ್ತಿದೆ. ಇಂತಹ ಒಂದು ಸಂಕೀರ್ಣ ಕಾಲಘಟ್ಟದಲ್ಲಿ ತಮ್ಮನ್ನು ತಾವು ಆಧುನಿಕತೆಗೆ ಒಡ್ಡಿಕೊಳ್ಳಬೇಕೆಂಬ ತುಡಿತ ಪ್ರತಿಯೊಬ್ಬರ ಆಂತರ್ಯದಲ್ಲೂ ಪ್ರತಿಫಲಿಸುತ್ತಿರುತ್ತದೆ. ಇದರ ನೇರ ಪರಿಣಾಮವನ್ನು ನಾವು ಜನರಾಡುವ ಭಾಷೆಯಲ್ಲಿ ಕಾಣಬಹುದು.

ಆದ್ದರಿಂದಲೇ ‘ಕುಂದಾಪ್ರ ಕನ್ನಡ’ ಬಿಡಿ, ಕನ್ನಡ ಮಾತಾಡುವುದೇ ತಮ್ಮ ಗೌರವ, ಅಂತಸ್ತುಗಳಿಗೆ ಕಡಿಮೆ ಎಂಬ ಭಾವನೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ತಾಯಿ ಭಾಷೆಗೆ ಬೆನ್ನು ಹಾಕುತ್ತಿರುವ ನೆಲದ ಮಕ್ಕಳಲ್ಲಿ ಭಾಷಾ ಪ್ರೇಮ ಬಿತ್ತಲು ಉತ್ಸಾಹಿ ತರುಣ ಪಡೆ ಇಂತಹ ಒಂದು ಪ್ರಯತ್ನವನ್ನು ಮಾಡುತ್ತಿದೆ. ಕೊರೊನಾದ ಆತಂಕದ ನಡುವೆಯೂ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ವಿಭಿನ್ನ ಕಾರ್ಯಕ್ರಮಗಳೊಂದಿಗೆ ಜನಮಾನಸದಲ್ಲಿ ಕುಂದಾಪ್ರ ಕನ್ನಡ ಮೊಳೆತು ಹೆಮ್ಮರವಾಗಿ ಬೆಳೆಯುವಂತೆ ಮನೋಭೂಮಿಕೆಯನ್ನು ಹದಗೊಳಿಸುತ್ತಿರುವ ಪರಿ ನಿಜಕ್ಕೂ ಶ್ಲಾಘನೀಯ.

ಕಳೆದ ವರ್ಷ ಆಟಿ ಅಮಾವಾಸ್ಯೆಯಂದು ಆರಂಭಗೊಂಡ ಈ ಒಂದು ಸಂಭ್ರಮ ಕುಂದಾಪುರದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ನೆಲೆಸಿರುವ ಕುಂದಾಪ್ರ ಕನ್ನಡಿಗರಲ್ಲಿ ಒಂದು ಸಂಚಲನವನ್ನೇ ಉಂಟು ಮಾಡಿತ್ತು. ಹೌದು, ಭಾಷೆಯ ಗುಣವೇ ಅಂಥದ್ದು! ಜಾತಿ, ಧರ್ಮ, ಲಿಂಗ, ದೇಶ, ಕೋಶಗಳ ಗಡಿ ದಾಟಿ ಎಲ್ಲರನ್ನೂ ಸೆಳೆಯಬಲ್ಲ, ಬೆಸೆಯಬಲ್ಲ ಒಂದು ಆಯಸ್ಕಾಂತೀಯ ಗುಣ ಅದಕ್ಕಿದೆ. ಭಾಷೆ ಜೀವಂತವಾಗಿರುವುದು ಜನರ ನಾಲಗೆಯ ಮೇಲೆ. ಅದರ ಅಂದ– ಚೆಂದ, ಸತ್ವವಿರುವುದು ಕೂಡಾ ನಾಲಗೆಯಲ್ಲೇ. ಕುಂದಾಪ್ರ ಕನ್ನಡದತ್ತ ಒಮ್ಮೆ ಕಿವಿ ಆನಿಸಿಕೊಂಡರೆ ಅದರ ಬಾಗು, ಬಳುಕು, ಬಿರುಸು, ಒನಪುಗಳಲ್ಲೇ ಅದರ ತಾಜಾತನವಿರುವುದನ್ನು ಗುರುತಿಸಬಹುದು. ಆದರೆ ಈ ಮಾತಿನಲ್ಲಿರುವ ಏರಿಳಿತ, ಲಯ ವೈವಿಧ್ಯತೆಗಳನ್ನು ಭಾಷೆಯಲ್ಲಿ ಹಿಡಿದಿಡುವುದು ಸ್ವಲ್ಪ ತ್ರಾಸವೇ ಸರಿ. ಅಚ್ಚರಿಯೆಂದರೆ ಹಳಗನ್ನಡ ಕಾವ್ಯಗಳಲ್ಲಿ ಕಾಣುವ ಹಲವು ಶಬ್ದಗಳು ಕುಂದಾಪ್ರ ಕನ್ನಡದಲ್ಲಿ ಬಳಕೆಯಲ್ಲಿರುವುದು. ದಾಂಟು, ಬೆಳರ್, ಮಿಡುಕು ಮುಂತಾದ ಪದಗಳು (ಉದಾಹರಣೆಗೆ ಬೇಲಿದಾಂಟುದ್, ತ್ವಡ್ಮಿ ದಾಂಟುದ್, ಹಳು ಸವ್ರಿ ಮನಿ ಬದಿಯೆಲ್ಲ ಬೆಳಾರ್ ಆಯ್ತ್, ಹೊಲ ಎಲ್ಲ ಈಗ ಬೆಳೂರ್ ಆಯ್ತ್, ಮಿಡ್ಕುದಪ್ಪಾ, ಏನ್ ಮಿಡ್ಕತಳ್ ಅವ್ಳ್) ಈಗಲೂ ನಮ್ಮ ಕುಂದಾಪುರದವರ ನಾಲಗೆಯಲ್ಲಿ ಹರಿದಾಡುತ್ತಿರುತ್ತವೆ.

ಸಮುದಾಯದ ಜೀವನಾಡಿ
ಕುಂದಾಪ್ರ ಕನ್ನಡ ಬರೀ ಮಾತಿನ ಸರಕಲ್ಲ. ಅದು ಈ ಭಾಷಿಕ ಸಮುದಾಯದ ಜೀವನಾಡಿ. ನಾಡಿನ ಚರಿತ್ರೆಯನ್ನು ಅರ್ಥೈಸಿಕೊಳ್ಳುವಲ್ಲಿ ಭಾಷೆ ಕೂಡಾ ಒಂದು ಮಹತ್ವದ ಸಾಧನ. ಸಮುದಾಯದ ಆರ್ಥಿಕ, ಸಾಮಾಜಿಕ, ಚಾರಿತ್ರಿಕ ಅಂಶಗಳನ್ನು ಭಾಷೆ ತನ್ನೊಳಗೆ ಬಚ್ಚಿಟ್ಟುಕೊಂಡಿರುತ್ತದೆ. ಈ ನಿಟ್ಟಿನಲ್ಲಿ ಕುಂದಾಪ್ರ ಕನ್ನಡದಲ್ಲಿರುವ ‘ಗ್ವಾಯಿಕೋಡ್’ ಪದ ನಿಷ್ಪತ್ತಿಯ ಕುರಿತು ಯೋಚಿಸಿದಲ್ಲಿ ಪೋರ್ಚುಗೀಸರು ಗೋವೆಯಿಂದ ಈ ಮೆಣಸಿನ ಕೋಡನ್ನು ತಂದು ನಮ್ಮೂರಿಗೆ ಪರಿಚಯಿಸಿರುವುದು ತಿಳಿದು ಬರುತ್ತದೆ. ಹಾಗೆಯೇ ಜನ ಸಾಮಾನ್ಯರ ಜೀವನ ಮಟ್ಟ ಹೇಗಿತ್ತು? ಎನ್ನುವುದನ್ನೂ ಅವರ ಭಾಷಿಕ ರೂಪದಲ್ಲೆ ತಿಳಿಯಬಹುದು. ‘ಊಟಕ್ಕೇನು ಮಾಡಿದ್ದೀರಿ? ಪದಾರ್ಥ ಏನು?’ ಇಂತಹ ಪ್ರಶ್ನೆಗಳನ್ನು ಇವತ್ತು ಮಾಮೂಲಿಯಾಗಿ ಕೇಳುತ್ತಿರುತ್ತೇವೆ. ಇದಕ್ಕೆ ಪ್ರತಿಯಾಗಿ ಕುಂದಾಪ್ರ ಕನ್ನಡದಲ್ಲಿ ಬಳಕೆಯಲ್ಲಿದ್ದ ‘ಕಚ್ಚುಕ್ ಎಂತಾ?’ ‘ಉಪ್ಪಿನ ಹೊಡಿ ‘ಗ್ವಾಯಿಕೋಡ್ ಇದ್ದಿತ್, ನರ‍್ಕಂಡ್ ಗಂಜಿ ಉಂಡೆ’ ಎನ್ನುವ ಮಾತುಗಳು ಅಂದಿನ ಬಡ ಜನರ ಆರ್ಥಿಕ ಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಹಸಿವು, ಬಡತನ, ಬದುಕಿನ ಸಂಕಟಗಳಿಗೆ ಅವರು ಹೇಗೆ ಮುಖ ಮಾಡಿ ನಿಲ್ಲುತ್ತಿದ್ದರೆನ್ನುವುದೂ ಅವರ ಮಾತುಗಳಲ್ಲೇ ಸ್ಪಷ್ಟವಾಗುತ್ತದೆ. ‘ಕೂಳಿದ್ರ್ ಕೋಲಂಗ್ ದೂಡ್ಲಕ್ಕ್’, ‘ಕಷ್ಟು ಮನುಷ್ಯಂಗ್ ಬರ‍್ದೆ ಮತ್ತ್ ಮರಕ್ಕ್ ಬತತ್ತಾ?’ ‘ಜೀವಿದ್ರ್ ಬೆಲ್ಲ ಬೇಡಿ ತಿನ್ಲಕ್’ ಇಂತಹ ಮಾತುಗಳಲ್ಲಿ ಪ್ರಕಟವಾಗುತ್ತಿದ್ದ ಅವರ ಜೀವನೋತ್ಸಾಹ, ಆತ್ಮವಿಶ್ವಾಸಗಳು ಇವತ್ತು ಚಿಕ್ಕ ಪುಟ್ಟ ಕಾರಣಗಳಿಗೂ ಹತಾಶೆಗೊಳಗಾಗುವ, ಬದುಕಿಗೆ ಬೆನ್ನು ಹಾಕುವ ಮಂದಿಗೆ ಊರುಗೋಲಿನಂತಿವೆ.

ಮಾನ ಮುಚ್ಚಿಕೊಳ್ಳಲು ತುಂಡು ಬಟ್ಟೆಯೂ ಇಲ್ಲದೆ ಓಡಾಡುವ ಮಕ್ಕಳನ್ನು ಕಂಡಾಗ ಹೇಳುವ ‘ದೊಣ್ ಕುಂಡಿ, ದಪ್ಪಟ್ ಕುಂಡಿ, ನಮ್ಮ ಕೇರಿಗ್ ಬರ್‌ಬ್ಯಾಡ ಕುಂಡಿ..’ ಹಾಡುಗಳಲ್ಲಿ ನಾವು ಕಾಣುವುದು ಬಡತನದ ಬಗೆಗಿರುವ ದಿವ್ಯ ನಿರ್ಲಕ್ಷ್ಯ ಅಥವಾ ಅಸಡ್ಡೆಗಳಲ್ಲ, ಬಡತನಕ್ಕೆ ಕಚಗುಳಿಯಿಟ್ಟು ನಗು ಉಕ್ಕಿಸುವ ಬೆಚ್ಚನೆಯ ಒಂದು ಹಾಸ್ಯ ಪ್ರಜ್ಞೆ. ಬದುಕಿನ ಸಂಕೀರ್ಣ ಸನ್ನಿವೇಶದಲ್ಲಿ ತಮಗೆ ತಾವೇ ಸಾಂತ್ವನವನ್ನು ಹೇಳಿಕೊಳ್ಳುವ ಮನಸ್ಸು ಎಷ್ಟು ಕ್ರಿಯಾಶೀಲವಾಗಿದೆಯೋ ಅದೇ ರೀತಿ ರೂಢಿಗತ ಮನಸ್ಥಿತಿಯನ್ನು, ತರತಮಭಾವವನ್ನು ಖಡಾಖಂಡಿತವಾಗಿ ನಿರಾಕರಿಸುವ ಜಾಗೃತ ಪ್ರಜ್ಞೆ ದಟ್ಟವಾಗಿತ್ತೆನ್ನುವುದಕ್ಕೆ ‘ಊಂಚ್ ಪಾಂಚ್ ಆತ್ತ್, ಪಾಂಚ್ ಊಂಚ್ ಆತ್ತ್’ ಎನ್ನುವ ಮಾತು ಅತ್ಯುತ್ತಮ ನಿದರ್ಶನ. ಕನ್ನಡ ಕಾವ್ಯ ಪರಂಪರೆಯಲ್ಲಿ ಲೋಕ ವಿಖ್ಯಾತವಾದ ‘ಕುಲಂ ಕುಲಂಮಲ್ತು, ಚಲಂ ಕುಲಂ ಗುಣಂ ಕುಲಮಭಿಮಾನಮೊಂದೆ...’ ‘ಅತಿ ಹುಸಿವ ಯತಿ ಹೊಲೆಯ, ಹುಸಿಯದಿಹ ಹೊಲೆಯನುನ್ನತ ಯತಿವರನ್’ ಇಂತಹ ಉಕ್ತಿಗಳಿಗೆ ಸರಿ ಸಾಟಿಯಾದ ಲೋಕದೃಷ್ಟಿ ಕುಂದಾಪ್ರ ಭಾಷೆಯಲ್ಲಿದೆ ಎನ್ನುವುದನ್ನು ನಾವು ಮನಗಾಣಲೇ ಬೇಕು.

ಸಂಸ್ಕೃತಿ ವಾಹಕ
ಭಾಷೆ ನಮ್ಮ ಸಂಸ್ಕೃತಿ ವಾಹಕವೂ ಹೌದು. ಕುಂದಾಪ್ರ ಕನ್ನಡಕ್ಕೆ ಕಿವಿಯಾದವರಿಗೆ ಇಲ್ಲಿನ ಸಂಸ್ಕೃತಿಯನ್ನು ಬಿಂಬಿಸುವ ಹಲವು ಪದ ಪುಂಜಗಳು, ನುಡಿಗಟ್ಟುಗಳು, ರೂಪಕಗಳು ಮತ್ತೆ ಮತ್ತೆ ಕಾಣ ಸಿಗುತ್ತವೆ. ‘ಮಂಡಿ ಅಂದ್ರ್ ಮಂದರ್ತಿ ಚಂಡಿ,’ ‘ಜಾಂಟಾ ಕಾಲ್ ಬೊಬ್ರ‍್ಯ’, ‘ಮ್ಯಾಳು ಹರ‍್ಟಿದ್ದ್ ಎಲ್ಲಿಗ್ಯಾ’, ‘ಪೆಟ್ಟಿಗಿ ಕಟ್ರಿಯಾ’, ‘ಬರೀ ಚಪ್ಪ್ ದ್ವಾಸಿ’, ‘ಬೆರ್ಚಪ್ಪ ನಿಂತಾಂಗ್ ಇತ್ತ್’... ಇಂತಹ ನೂರಾರು ಪದಗಳು ನಮ್ಮ ದೈವ, ದೇವರು, ನಂಬಿಕೆ, ಆಚರಣೆ, ಹರಕೆಗಳೊಂದಿಗೆ ಬೆಸೆದುಕೊಂಡಿವೆ. ಕೃಷಿಯನ್ನೇ ನೆಮ್ಮಿಕೊಂಡ ಇಲ್ಲಿನ ಜನರ ಮಾತುಗಳು ಕೂಡಾ ಕೃಷಿ ಸಂಸ್ಕೃತಿಯೊಂದಿಗೆ ತಳುಕು ಹಾಕಿಕೊಂಡಿರುವುದನ್ನು ಕಾಣಬಹುದು. ಶ್ರಮ ಸಂಸ್ಕೃತಿಯ ಹಿನ್ನೆಲೆಯುಳ್ಳ ಯಾವುದೇ ಕುಂದಾಪ್ರ ಕನ್ನಡಿಗರ ಮನೆಗೆ ನೆಂಟರು ಬಂದಾಗ ಅವರು ಮೊದಲು ಕೇಳುವ ಪ್ರಶ್ನೆ ‘ಬಾಯ್ರ್ ಬೇಕಾ?’ ಎಂದು (ಬಾಯಾರಿಕೆ > ಬಾಯ್ರ್, ಕೊಟ್ಟಿಗೆಯಲ್ಲಿರುವ ಜಾನುವಾರುಗಳಿಗೆ ನೀಡುವುದು ಕೂಡಾ ‘ಬಾಯ್ರ್’ ‘ಅಕ್ಕಚ್ಚ್ ಬಾಯ್ರ್’ ಎನ್ನುವುದು ಗಮನಾರ್ಹ). ಅದೇ ರೀತಿ ಊರಿನ ದನ ಸಾಕುವವರಲ್ಲಿ ಕರಾವು ಹೇಗಿದೆ? ಎಂದು ಕೇಳಿದಾಗ ಅವರು ನೀಡುವ ಉತ್ತರ ‘ಸಿದ್ದಿ ಮಹಾಲಕ್ಷ್ಮಿ’, ‘ಸ್ವಲ್ಗಿ ಮಹಾಲಕ್ಷ್ಮಿ’ ಎಂದು. ದುಡಿಮೆಗೆ ಬೇರೆ ದಾರಿಯಿಲ್ಲದ ಅಂದಿನ ದಿನಮಾನಗಳಲ್ಲಿ ಹೆಂಗಸರಿಗೆ ಮನೆಯಲ್ಲಿರುವ ಹಾಲು ಕೈ ಖರ್ಚಿಗೆ ಒಂದು ‘ಹೊದು’ವಾಗಿತ್ತೆನ್ನುವುದನ್ನು ಮರೆಯಲಾಗದು.

ಯಾವುದೇ ಭಾಷೆಯಲ್ಲಿ ನಾವು ಬಳಸುವ ಶಬ್ದಗಳಿಗೂ ಅದು ಸೂಚಿಸಿರುವ ವಸ್ತುವಿಗೂ ನೇರವಾದ ಸಂಬಂಧವಿರುವುದಿಲ್ಲ. ಆದರೆ ಕುಂದಾಪುರ ಕನ್ನಡದಲ್ಲಿರುವ ಮೈನೀರ್ ಇಳ್ಸುದ್, ಮೈಂದ್ ಹ್ವಾಪ್ದ್, ಬಳ್ಳೆಲಿ ಮುಂತಾದ ಪದಗಳು ಗ್ರಾಂಥಿಕ ಕನ್ನಡಕ್ಕಿಂತ ಹೆಚ್ಚು ಅರ್ಥಪೂರ್ಣವಾಗಿರುವುದನ್ನು ಗಮನಿಸಬಹುದು. ಕುಂದಾಪ್ರ ಕನ್ನಡದ ಶಬ್ದ ಸಂಪತ್ತು, ಅದು ಬಚ್ಚಿಟ್ಟುಕೊಂಡ ಅರ್ಥ ವ್ಯಾಪಕತೆ, ಧ್ವನಿ ವೈವಿಧ್ಯತೆ ನಿಜಕ್ಕೂ ಬೆರಗುಗೊಳಿಸುವಂತಹದ್ದು. ಒಡ್ತಳಿತಿಪ್ಪುದ್, ಗ್ವಾಂಜಡಿ, ಆಂರ‍್ಸಿ ಹಿಡ್ಕಂಬ್ದ್, ಆಲಲ್ ತಪ್ತ್, ತಾ..ಬಾ ಮಣಿ, ಹೊಯ್ಮಲ್‌ತನ, ಚಂಪ್ ಹೆಡ್ಗಿ, ಅಟ್ರ‍್ಕಣಿ, ಕಜ್‌ಗೆಡುದ್, ನರ‍್ಕ್, ಬಾಲ್‌ನ್ಯಲಿ, ನೆಲ್‌ಬುಯ್ಡಿ ತೊಳ್ಸ್ಂಬಟ್ಟಿ, ರ‍್ಗಿ ಇಂತಹ ನೂರಾರು ಪದಗಳಿಗೆ ಸಮನಾದ ಶಬ್ದ ಯಾವ ಭಾಷೆಗಳಲ್ಲೂ ಸಿಗಲಿಕ್ಕಿಲ್ಲ. ಇಷ್ಟೊಂದು ಶ್ರೀಮಂತ ಹಿನ್ನೆಲೆ ಇರುವ ಭಾಷೆ ‘ಕುಂದಾಪ್ರ ಕನ್ನಡ’ ಎನ್ನುವುದು ನಮಗೆ ಹೆಮ್ಮೆಯಾಗಬೇಕು. ಆದರೆ ಆ ಹೆಮ್ಮೆ ಮಹಿಳಾ ದಿನಾಚರಣೆ, ಮಕ್ಕಳ ದಿನಾಚರಣೆ, ವನಮಹೋತ್ಸವ ಮುಂತಾದ ದಿನಾಚರಣೆಗಳ ಹಾಗೆ ಒಂದು ದಿನಕ್ಕೆ ಸೀಮಿತಗೊಳ್ಳದೆ ಗರಿಕೆ ಹುಲ್ಲಿನ ಹಾಗೆ ನಿರಂತರ ಪ್ರಸರಣಗೊಳ್ಳಬೇಕು. ಆಗ ಮಾತ್ರ ನಿಜದ ನೆಲೆಯಲ್ಲಿ ಕುಂದಾಪ್ರ ಕನ್ನಡ ವಿಶ್ವ ವ್ಯಾಪಕವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT