ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಮಾರ್ಗ: ಶ್ರೇಷ್ಠ ಸಾಹಿತ್ಯದ ಧ್ಯಾನ, ವಿಚಾರಕ್ರಾಂತಿಗೆ ಆಹ್ವಾನ

Last Updated 26 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಬರೆಯುತ್ತಾ ಬರೆಯುತ್ತಾ ದೊಡ್ಡದನ್ನೇ ಬರೆಯಬೇಕು, ಓದುಗರ ಜಡ ಮನಸ್ಸನ್ನು ಚೇತನವಾಗಿಸಬೇಕು, ಪುರೋಹಿತಶಾಹಿ ಹಾಗೂ ಜಮೀನ್ದಾರಿ ಮನಃಸ್ಥಿತಿಯ ಹಿಡಿತವನ್ನು ಹಿಮ್ಮೆಟ್ಟಿಸಿ ಆಧುನಿಕ ಕರ್ನಾಟಕವನ್ನೂ ನಿರಂಕುಶಮತಿಯಾದ ಹೊಸ ಮಾನವನನ್ನೂ ಜೊತೆಜೊತೆಗೇ ಸೃಷ್ಟಿಸಬೇಕು, ಪೂರ್ಣದೃಷ್ಟಿಯನ್ನು ರೂಪಿಸಿಕೊಳ್ಳಬೇಕು… ಇವು ಕುವೆಂಪು ಮಾರ್ಗದ ಮೂಲ ತುಡಿತಗಳಾಗಿದ್ದವು.

ಹದಿಹರೆಯದಲ್ಲಿ ಬರೆಯಲು ಶುರುಮಾಡಿದ ಕುವೆಂಪು ಎಪ್ಪತ್ತನೆಯ ವಯಸ್ಸಿನ ಹೊತ್ತಿಗೆ ತಮ್ಮ ಪ್ರಮುಖ ಕೃತಿಗಳನ್ನೆಲ್ಲ ಬರೆದಿದ್ದರು. ಎಂಬತ್ತರ ವಯಸ್ಸಿನಲ್ಲಿ ‘ನೆನಪಿನ ದೋಣಿಯಲ್ಲಿ’ ಆತ್ಮಕತೆಯ ಪಯಣವನ್ನು ನಿಲ್ಲಿಸಿದ ಅವರು ಸಾಹಿತ್ಯದ ಎಲ್ಲ ಮೂಲ ಪ್ರಕಾರಗಳಲ್ಲೂ ಬರೆದಿದ್ದರು. ಕುವೆಂಪು ಬರಹಸಮೂಹ ಹತ್ತಿರ ಹತ್ತಿರ ಹನ್ನೆರಡು ಸಾವಿರ ಪುಟಗಳಷ್ಟಾಗುತ್ತದೆ. ಇನ್ನೂ ಪ್ರಕಟವಾಗಬೇಕಾದ ಬರಹಗಳಿವೆ. ಮುದ್ರಿತ ರೂಪದಲ್ಲೂ, ಇದೀಗ ಮೊದಲ ಬಾರಿಗೆ ಡಿಜಿಟಲ್ (https://play.google.com/store/books/author?id=kuvempu) ರೂಪದಲ್ಲೂ ಕೆ.ಸಿ. ಶಿವಾರೆಡ್ಡಿಯವರ ಸಂಪಾದಕತ್ವದಲ್ಲಿ ಕನ್ನಡ ವಿಶ್ವವಿದ್ಯಾಲಯ ಹೊರತಂದಿರುವ ಕುವೆಂಪು ಸಮಗ್ರ ಬರಹಗಳ 12 ಸಂಪುಟಗಳಲ್ಲಿರುವ ಬರಹಗಳ ಆಳ, ವ್ಯಾಪ್ತಿ ವಿಸ್ಮಯ ಹುಟ್ಟಿಸುತ್ತದೆ. ಆಧುನಿಕ ಕನ್ನಡದ ಮಹಾಕವಿಯೊಬ್ಬ ಎಪ್ಪತ್ತು ವರ್ಷಗಳ ಕಾಲ ತನ್ನ ಕೈ ಬರಹದಲ್ಲೇ ಬರೆದ ಈ ಕೃತಿಗಳು ಹಬ್ಬಿಸುತ್ತಲೇ ಬಂದಿರುವ ಆರೋಗ್ಯಕ್ಕೆ ಕನ್ನಡಿಗರು ಕೃತಜ್ಞರಾಗಿರಬೇಕು.

ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ತನ್ನ ಲೇಖಕ ವ್ಯಕ್ತಿತ್ವವನ್ನು ಹುಡುಕಿಕೊಳ್ಳತೊಡಗಿದ್ದ ಹುಡುಗ ಪುಟ್ಟಪ್ಪನ ಎದುರು ತನ್ನ ಮುಂದಿನ ಹಾದಿ-ಗುರಿಗಳ ಅಸ್ಪಷ್ಟ ಕಲ್ಪನೆಯೂ ಮೂಡುತ್ತಿದ್ದಂತಿತ್ತು. ಅಲ್ಲಿಂದಾಚೆಗೆ ಈ ಹಾದಿಗಳ ಹುಡುಕಾಟ ಹಾಗೂ ಸಾಧನೆಗಳ ಕೊನೆಯಿರದ ಪಯಣ. ಸಹಪಾಠಿಯೊಬ್ಬ ಚರಿತ್ರೆಯ ಘಟನೆಗಳನ್ನು ಬಾಯಿಪಾಠ ಮಾಡಿಕೊಳ್ಳಲು ಅಕ್ಬರ್, ಔರಂಗಜೇಬರ ಬಗ್ಗೆ ಇಂಗ್ಲಿಷಿನಲ್ಲಿ ಪದ್ಯ ಕಟ್ಟಿದ ಪುಟ್ಟಪ್ಪನಿಗೆ ಇಂಗ್ಲಿಷಿನಲ್ಲಿ ಪದ್ಯ ಬರೆಯುವ ರುಚಿ ಹತ್ತಿತು!

ಶುರುವಿನಿಂದಲೇ ಜಗತ್ತಿನ ಶ್ರೇಷ್ಠ ಸಾಹಿತ್ಯದತ್ತ ಕೈಚಾಚಿದ ‘ಕಾಡ ಕವಿ’ ಬರಬರುತ್ತಾ ಜಗತ್ತಿನ ಹಲವು ದಿಕ್ಕುಗಳ ಸಾಹಿತ್ಯದತ್ತ, ಹಲಬಗೆಯ ಬರವಣಿಗೆಗಳತ್ತ ಹೊರಳಿದ್ದು ಸಹಜವಾಗಿತ್ತು. ರವೀಂದ್ರನಾಥ ಟ್ಯಾಗೋರ್, ಟಾಲ್‌ಸ್ಟಾಯ್, ಶೇಕ್ಸ್‌ಪಿಯರ್, ವರ್ಡ್ಸ್‌ವರ್ತ್‌ರಿಂದ ಹಿಡಿದು ತತ್ವಜ್ಞಾನಿಗಳಾದ ನೀಷೆ, ಶೋಪನ್ ಹೇರ್ ಬರಹಗಳ ಜೊತೆಗೂ ಕುವೆಂಪು ಒಡನಾಡತೊಡಗಿದ್ದರು. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಭಾರತದಲ್ಲಿ ವಿಕಾಸಗೊಂಡ ನವಸಾಹಿತ್ಯವನ್ನು ‘ನವೋದಯ’ ಎಂದು ಕರೆದವರು ಕುವೆಂಪು ಎಂಬುದು ಈಗಾಗಲೇ ದಾಖಲಾಗಿದೆ. ಭಾರತದ ಇನ್ನಿತರ ಸಾಹಿತಿಗಳಿಗಿಂತ ಭಿನ್ನವಾಗಿ ನವೋದಯದ ಕಲ್ಪನೆಯನ್ನು ವಿಸ್ತರಿಸಿದ ಕುವೆಂಪು ಅದನ್ನು ಕನ್ನಡನಾಡಿನ ಬಹುಜನ ಸಮುದಾಯದ ನವೋದಯದ, ಸರ್ವೋದಯದ ಕಲ್ಪನೆಯಾಗಿ ಮರುರೂಪಿಸಿದರು. ಗಾಂಧೀತತ್ವವನ್ನು ತಮ್ಮ ಸಾಮಾಜಿಕ ನೋಟದೊಳಗೂ ಪ್ರಕೃತಿ ತತ್ವದೊಳಗೂ ಬೆಸೆದರು.

ನವೋದಯ ರಾಷ್ಟ್ರೀಯತೆಗೆ ವಿಶಿಷ್ಟ ರಾಜಕೀಯ ಆಯಾಮ ಒದಗಿಸುವ ಅಖಂಡ ಕರ್ನಾಟಕದ ಕಲ್ಪನೆಯ ಜೊತೆಗೆ ಸರ್ವಸ್ವೀಕಾರ ರಾಷ್ಟ್ರೀಯತೆಯನ್ನೂ ರೂಪಿಸಿದ ಕುವೆಂಪುವಿನೊಳಗೆ ಕ್ಲಾಸಿಕ್ ಎತ್ತರದ ಸಾಹಿತ್ಯ ಸೃಷ್ಟಿಯ ಹಂಬಲವೂ ತೀವ್ರವಾಗಿತ್ತು. ಹೀರೆಯ ಹೂವಿನ ಮೇಲೊಂದು ಕವಿತೆ, ಕಲ್ಕಿಯ ಬಂಡಾಯ, ಸಾಂಪ್ರದಾಯಿಕ ವ್ಯವಸ್ಥೆಯನ್ನು ಸ್ಫೋಟಿಸುವ ಗದ್ಯ, ಕೇಳುಗರ ಮನ ಕರಗಿಸಿ ಅವರ ಮೂಡುಗಳನ್ನು ಬದಲಿಸಬಲ್ಲ ಭಾವಗೀತೆಯೂ ಜೊತೆಜೊತೆಗೇ ಹುಟ್ಟುತ್ತಿತ್ತು. ಸಾವಿರಕ್ಕೂ ಮೀರಿ ಕವಿತೆಗಳನ್ನು ಬರೆದಿರುವ ಕುವೆಂಪುವಿಗೆ ಕಾವ್ಯವೇ ಯೋಚಿಸುವ, ಭಾವಿಸುವ ಕ್ರಮವಾಗಿದ್ದು ಅಚ್ಚರಿಯಲ್ಲ. ಆದರೆ ಸುತ್ತಣ ಸಮಾಜವನ್ನು ತಿದ್ದಲು ಕಾತರಿಸುತ್ತಿದ್ದ ಲೇಖಕನೊಬ್ಬ ನೇರವಾದ ಆಧುನಿಕ ಗದ್ಯವನ್ನೂ ರೂಪಿಸಿಕೊಳ್ಳಬೇಕಾಗಿತ್ತು; ವಿವೇಕಾನಂದರ ಕೃತಿಶ್ರೇಣಿಯಲ್ಲಿ ಹುದುಗಿರುವ ತೀಕ್ಷ್ಣ ವೈಚಾರಿಕತೆಯನ್ನು ಮುನ್ನೆಲೆಗೆ ತರುವ ಬೌದ್ಧಿಕ ಪರಿಶ್ರಮದಲ್ಲೂ ತೊಡಗಬೇಕಾಗಿತ್ತು. ಪಶ್ಚಿಮ, ಭಾರತ ಹಾಗೂ ಕನ್ನಡನಾಡಿನ ಮಹಾಕಾವ್ಯಗಳನ್ನು ಹೀರಿಕೊಂಡಿದ್ದಕುವೆಂಪುಮಹಾಕಾವ್ಯ ಹಾಗೂ ಎಪಿಕ್ ಕಾದಂಬರಿ ಎರಡನ್ನೂ ಬರೆದ ಏಕಮಾತ್ರ ಲೇಖಕರಿರಬಹುದು. ಮಹಾಕಾವ್ಯಗಳ ಭವ್ಯ ಶೈಲಿಯ ಬಳಕೆಯಲ್ಲೂ ನುರಿತಿದ್ದಕುವೆಂಪುಕಾದಂಬರಿಯನ್ನು ಸಮುದಾಯದ ಸಾಮಾನ್ಯರ ಮಹಾಕಾವ್ಯವಾಗಿಸುವ ಕಲೆಯನ್ನೂ ತೋರಿಸಿಕೊಟ್ಟರು.

ಅಷ್ಟೇ ಮುಖ್ಯವಾಗಿ, ಆಧುನಿಕ ಕನ್ನಡ ಸಾಹಿತ್ಯ ಸಂಸ್ಕೃತಿಯ ನಿರ್ಮಾಣಕ್ಕೆ ಅಗತ್ಯವಾದ ಹೊಸ ಕಾವ್ಯತತ್ವ, ಕಾದಂಬರಿ ತತ್ವ, ವಿಮರ್ಶೆ, ಕನ್ನಡ ಭಾಷೆಯ ಅಗ್ರಸ್ಥಾನ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಅರ್ಥಪೂರ್ಣ ಬೋಧನೆ, ವೈಚಾರಿಕ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಬಾಲಸಾಹಿತ್ಯ… ಎಲ್ಲ ಕಡೆಗೂಕುವೆಂಪುಕಾಳಜಿ ಹಬ್ಬಿತ್ತು. ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಹಾಗೂ ಸ್ವಾತಂತ್ರ್ಯ ಪಡೆಯಲಿದ್ದ ದೇಶದಲ್ಲಿ ಆಧುನಿಕ ಸಮಾಜ, ಆಧುನಿಕ ಸಾಹಿತ್ಯ ಎರಡಕ್ಕೂ ಬೇಕಾದ ದ್ರವ್ಯವನ್ನು ಕನ್ನಡ ಭಾಷೆಯಲ್ಲಿ ರೂಪಿಸುತ್ತಾ ಆಧುನಿಕ ಕನ್ನಡಿಗನನ್ನು ರೂಪಿಸಬೇಕೆಂಬ ಸಾಂಸ್ಕೃತಿಕ ಜವಾಬ್ದಾರಿಯೂ ಅವರಲ್ಲಿತ್ತು.

ಕವಿ ರಸವಶನಾದಾಗ ಆಗಸದಲ್ಲಿ ಹಕ್ಕಿಗಳ ಮೆರವಣಿಗೆ ‘ದೇವರು ರುಜು ಮಾಡಿದನು’ ಎಂಬ ರೂಪಕವಾಗುತ್ತಿತ್ತು; ಅತ್ತ ರಾಮಕೃಷ್ಣ ಪರಮಹಂಸರ ಮಾರ್ಗದ ಆಧ್ಯಾತ್ಮದ ಸೆಳೆತವೂ ಕವಿಯಲ್ಲಿತ್ತು. ಜೊತೆಗೆ, ಮತ-ಧರ್ಮ, ಆಧ್ಯಾತ್ಮಗಳ ಹೆಸರಿನಲ್ಲಿ ಜನಸಾಮಾನ್ಯರನ್ನು ತುಳಿಯುತ್ತಿದ್ದ ಪುರೋಹಿತಶಾಹಿಯ ವಿರುದ್ಧದ ಬಂಡಾಯವೂ ಇತ್ತು. ಶೋಷಕ ಪ್ರವೃತ್ತಿಯ ಸನಾತನ ಸಂಕೇತಗಳನ್ನು ನಾಶ ಮಾಡಿದ ಪೆರಿಯಾರ್ ಬಗೆಗೂಕುವೆಂಪುಅವರಿಗೆ ಆದರವಿತ್ತು. ಆದರೆ ಮೊದಲು ಶೂದ್ರರ ಮೆದುಳನ್ನು ತೊಳೆಯಬೇಕೆಂಬ ಜವಾಬ್ದಾರಿಯೂ ಇತ್ತು.

ಈ ಅಂಶಗಳೆಲ್ಲ ಕನ್ನಡ ಸಾಹಿತ್ಯದ ಮುಂದಿನ ಘಟ್ಟಗಳ ಸಾವಿರಾರು ಲೇಖಕ, ಲೇಖಕಿಯರಲ್ಲಿ ಇನ್ನಷ್ಟು ಗಟ್ಟಿಯಾಗಿ ಬೆಳೆದು ಭಾರತದಲ್ಲೇ ಅನನ್ಯವಾದ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯನ್ನು ನಿರ್ಮಿಸಲು ನೆರವಾಗಿವೆ. ನಂತರದ ಕನ್ನಡ ಸಾಹಿತ್ಯ ಚರಿತ್ರೆಯ ಘಟ್ಟಗಳುಕುವೆಂಪುಸಾಹಿತ್ಯಮಾರ್ಗವನ್ನು ಮುಂದುವರಿಸುತ್ತಾ, ಅಥವಾ ಪ್ರಶ್ನಿಸುತ್ತಾ ಬೆಳೆದಿವೆ. ನವ್ಯ ವಿಮರ್ಶೆಯ ಒಂದು ಮಾರ್ಗದಂತೆ ದಲಿತ ವಿಮರ್ಶೆಯ ಒಂದು ಮಾರ್ಗವೂ ಅವರ ಸಾಹಿತ್ಯಕ ಗ್ರಹಿಕೆಗಳನ್ನು ಪ್ರಶ್ನಿಸಿ ಮುಂದೆ ಸಾಗಿದೆ. ತಮ್ಮ ಮಾರ್ಗದಲ್ಲಿ ಅಚಲ ನಂಬಿಕೆಯಿಟ್ಟಿದ್ದಕುವೆಂಪುಮುಂದಿನ ಸಾಹಿತ್ಯ ಘಟ್ಟಗಳಲ್ಲಿನ ದೊಡ್ಡ ಕೃತಿಗಳ, ಸಾಹಿತ್ಯ ಚಳವಳಿಗಳ ಮಹತ್ವವನ್ನು ಗಮನಿಸಲಿಲ್ಲ; ಆದರೂ ಈ ಎಲ್ಲ ಘಟ್ಟಗಳಲ್ಲೂ ಹೊಸ ನೆಲೆಗಳಲ್ಲಿ ಬೆಳೆಯಬಲ್ಲ ಮೂಲ ಚಿಂತನೆಗಳನ್ನು ಅವರು ರೂಪಿಸುತ್ತಲೇ ಇದ್ದರು. ಕನ್ನಡ ಸಿನಿಮಾದ ಮೊದಲ ಕೆಲವು ದಶಕಗಳಲ್ಲಿಕುವೆಂಪುಭಾವಗೀತೆಗಳ ಹರಿವು, ಕೋಮಲತೆ, ಘನತೆ, ರಮ್ಯತೆಗಳಿಂದಲೂ ಪ್ರೇರಣೆ ಪಡೆದ ಚಿತ್ರಗೀತೆಗಳು ಅಂದಿನ ಜನಪ್ರಿಯ ಸಂಸ್ಕೃತಿಯಲ್ಲಿ ಸದಭಿರುಚಿಯನ್ನೂ, ಒಳ್ಳೆಯ ಕೇಳುಗರನ್ನೂ ರೂಪಿಸಿದವು.

ಕುವೆಂಪು1974ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮಾಡಿದ ತಮ್ಮ ಘಟಿಕೋತ್ಸವ ಭಾಷಣವನ್ನು ‘ವಿಚಾರ ಕ್ರಾಂತಿಗೆ ಆಹ್ವಾನ’ ಎಂದು ಕರೆದರು. ಇದೀಗಕುವೆಂಪುಸಮಗ್ರ ಬರಹಗಳನ್ನು ನೋಡುತ್ತಿದ್ದರೆ ಅವರ ಇಡೀ ಬರವಣಿಗೆಯ ಮೂಲ ಉದ್ದೇಶವೇ ವಿಚಾರಕ್ರಾಂತಿಗೆ ಆಹ್ವಾನ, ಆ ಮೂಲಕ ಸೂಕ್ಷ್ಮಪ್ರಜ್ಞೆಯ, ವೈಚಾರಿಕ ಓದುಗರ ರೂಪೀಕರಣ ಎನ್ನಿಸುತ್ತದೆ. ಈ ಕೆಲಸಗಳನ್ನು ಅವರ ಗದ್ಯದಂತೆಯೇ ಕಾದಂಬರಿ, ಕಾವ್ಯ, ನಾಟಕಗಳೂ ಮಾಡಿವೆ. ಪ್ರಾಚೀನ ಸಾಹಿತ್ಯದ ಚಿನ್ನಾಭರಣಗಳನ್ನು ಕರಗಿಸಿ ಹೊಸ ಒಡವೆಗಳನ್ನು ಮಾಡಿಕೊಳ್ಳಬೇಕೆಂಬ ಸೌಂದರ್ಯ ತತ್ವವನ್ನು ರೂಪಿಸಿಕೊಂಡಕುವೆಂಪುಮಹಾಕಾವ್ಯಗಳ ಓದನ್ನು ಮಡಿವಂತಿಕೆಯ ಜಡತೆಯಿಂದ ಬಿಡಿಸಿದರು; ಮಹಾಕಾವ್ಯಗಳನ್ನು ಧರ್ಮಗ್ರಂಥಗಳೆಂದು ಕರೆಯುತ್ತಾ, ಅವನ್ನು ತಂತಮ್ಮ ಲಾಭಗಳಿಗಾಗಿ ಬಳಸಿಕೊಳ್ಳುತ್ತಿದ್ದ ಪುರೋಹಿತ ವ್ಯಾಖ್ಯಾನಗಳ ಸ್ವಾರ್ಥ, ದಬ್ಬಾಳಿಕೆಗಳನ್ನು ಮುರಿಯಲೆತ್ನಿಸಿದರು. ‘ಶೂದ್ರ ತಪಸ್ವಿ’, ‘ಬೆರಳ್ಗೆ ಕೊರಳ್’ ‘ಶ್ಮಶಾನ ಕುರುಕ್ಷೇತ್ರಂ’, ‘ರಾಮಾಯಣ ದರ್ಶನಂ’ ಕೃತಿಗಳನ್ನು ಓದಿದವರು ಎಂದೂ ರಾಮಾಯಾಣ, ಮಹಾಭಾರತಗಳ ಸಂಕುಚಿತ ಬಾಲಂಗೋಚಿಗಳಾಗುವುದಿಲ್ಲ; ಬದಲಿಗೆ, ಎಚ್ಚೆತ್ತ ಓದುಗರಾಗಿ, ಮುಕ್ತ ಪ್ರಜ್ಞೆಯ ಸಾಹಿತ್ಯ ಓದುಗರಾಗಿ ಮಾರ್ಪಡುತ್ತಾರೆ. ಕುವೆಂಪುಮೂಲಕ ಪ್ರಾಚೀನ ಕೃತಿಗಳ ಧಾರ್ಮಿಕ ಸರ್ವಾಧಿಕಾರ ಹಿಮ್ಮೆಟ್ಟಿ ಅವು ಕಾಲಾತೀತ ಸಾಹಿತ್ಯ ಕೃತಿಗಳಾಗುವುದು ಹೀಗೆ; ಸಾಹಿತ್ಯದಲ್ಲಿ ‘ಹಿಂದಣ ಕಾಲವು ಇಂದಿನ ಕಾಲದಿಂದಲೂ, ಇಂದಿನ ಕಾಲವು ಹಿಂದಣ ಕಾಲದಿಂದಲೂ ಪಲ್ಲಟಗೊಳ್ಳುತ್ತಿರಬೇಕು’ ಎಂಬ ಎಲಿಯಟ್ ಆಶಯ ಕುವೆಂಪುವಿನ ಮಹಾಕಾವ್ಯ, ನಾಟಕಗಳಲ್ಲಿ ಸಾಕಾರಗೊಳ್ಳುವುದು ಹೀಗೆ.

ಒಂದು ದೃಷ್ಟಿಯಿಂದ ‘ಭವ್ಯ ವ್ಯಕ್ತಿತ್ವ’ವನ್ನು ರೂಪಿಸಿಕೊಂಡು ‘ರಸಋಷಿ’ ಎನ್ನಿಸಿಕೊಂಡಿದ್ದಕುವೆಂಪುಅವರಿಗೆ ‘ಪ್ರಸಿದ್ಧಿ’ಯ ಕೋಟೆಯ ರಕ್ಷಣೆಯೇನೂ ಇರಲಿಲ್ಲ! ಆಳದಲ್ಲಿ ತಮಗೆ ಸರಿಯೆನ್ನಿಸಿದ್ದನ್ನು ಹೇಳುತ್ತಿದ್ದಕುವೆಂಪುವಿರುದ್ಧ ಮಸಲತ್ತು ಮಾಡುತ್ತಿದ್ದ ಸಂಪ್ರದಾಯವಾದಿಗಳೂ, ಕಿರುಕುಳಜೀವಿ ಪಂಡಿತರೂ ಇದ್ದರು. ವಿಶ್ವವಿದ್ಯಾಲಯದ ದಡ್ಡ ಅಧಿಕಾರಿಗಳ ಚಿಲ್ಲರೆ ನೋಟೀಸು, ಕಟುವಾದ ಪದ್ಯ ಓದಿದರೆ ಸಿಐಡಿಗಳ ಹದ್ದುಗಣ್ಣು, ಪ್ರಕೃತಿಪ್ರಿಯ ಕವಿಯ ಮನೆಯ ಹೂಗಿಡಗಳನ್ನು ಕಿತ್ತೆಸೆಯುವ ಜಾತಿವಾದಿ ಪುಂಡರು, ನಾಡಿನುದ್ದಕ್ಕೂ ಸದಭಿರುಚಿಯನ್ನು ಬಿತ್ತಿದ ಕವಿಯ ಮನೆಯ ಹೊರಗೋಡೆಯ ಮೇಲೆ ಕೀಳುಭಾಷೆಯ ಬರಹ… ಇವೆಲ್ಲವನ್ನೂ ಕುವೆಂಪುಎದುರಿಸಬೇಕಾಯಿತು. ಈ ನಡುವೆಯೂ ಮಕ್ಕಳಿಗೆ ಪೆನ್ನು, ಪುಸ್ತಕ ಕೊಂಡುತರುವ ವ್ಯವಧಾನವೂ ಅವರಿಗಿತ್ತು; ಶೇವಿಂಗಿಗೆ ಬಳಸಿದ ಬ್ಲೇಡುಗಳ ಲೆಕ್ಕವೂ ಅವರ ದಾಖಲೆಗಳಲ್ಲಿತ್ತು!

ಲೋಕದ ಸಕಲ ತಾಪತ್ರಯಗಳ ನಡುವೆ ಗಂಭೀರ ಬರವಣಿಗೆಗೆ, ಚಿಂತನೆಗೆ ಸಮಯ, ಏಕಾಗ್ರತೆಗಳನ್ನುಕುವೆಂಪುರೂಪಿಸಿಕೊಂಡ ರೀತಿ ಎಲ್ಲ ಕಾಲದ ಲೇಖಕ, ಲೇಖಕಿಯರಿಗೂ ಸ್ಫೂರ್ತಿದಾಯಕ ಮಾದರಿಯಾಗಿದೆ. ಗಂಭೀರ ಸಾಹಿತ್ಯ ಸಂಸ್ಕೃತಿ ಹಾಗೂ ಸಾಮಾಜಿಕ ಚಿಂತನೆಗಳ ವಲಯಗಳಲ್ಲಿರುವಂತೆ, ಸಾಹಿತ್ಸೋತ್ಸವ, ಸಂಸ್ಕೃತಿ ಉತ್ಸವಗಳಲ್ಲೂಕುವೆಂಪುಕಾವ್ಯ, ಚಿಂತನೆಗಳು ಮರುದನಿಸುತ್ತಿರುತ್ತವೆ. ಸಮಾಜ, ಸಂಸ್ಕೃತಿಗಳನ್ನು ತಿದ್ದುವಕುವೆಂಪುಕೃತಿಗಳನ್ನು ಕನ್ನಡ ಸಂಸ್ಕೃತಿ ಸದಾ ಜೀವಂತವಾಗಿಟ್ಟಿದೆ. ಕುವೆಂಪುಕೃತಿಗಳು ಎಲ್ಲೆಡೆ ದೊರೆಯುವಂತೆ ನೋಡಿಕೊಳ್ಳುವ ಪ್ರಕಾಶಕರು, ಸಂಪಾದಕರು, ಈ ಕೃತಿಗಳನ್ನು ಬೌದ್ಧಿಕ ಚರ್ಚೆ, ಬೋಧನೆಯ ವಲಯಗಳಲ್ಲಿ ಬೆಳೆಸುತ್ತಾ ನಿತ್ಯ ಹೊಸತಾಗಿಸುವ ವಿಮರ್ಶಾ ಲೋಕ, ಕುವೆಂಪು ಹುಟ್ಟುಹಬ್ಬದಂದು ಕುವೆಂಪು ವಾತಾವರಣವನ್ನು ಸೃಷ್ಟಿಸುವ ನೂರಾರು ವೇದಿಕೆಗಳು, ಸಾಮಾಜಿಕ ಜಾಲತಾಣಗಳು…ಈ ಮಹಾಪ್ರತಿಭೆಯ ಚೈತನ್ಯವನ್ನು ನವೀಕರಿಸುತ್ತಲೇ ಇರುತ್ತವೆ.ಕುವೆಂಪುಹೇಳಿಕೊಟ್ಟ ಮಂತ್ರಮಾಂಗಲ್ಯ ವಿವಾಹ ಮಾರ್ಗವನ್ನು ಅನುಸರಿಸುವ ಹೊಸ ಹೊಸ ಜಾತ್ಯತೀತ ಪ್ರೇಮಿಗಳು, ಸರಳಜೀವಿಗಳು ಇವತ್ತಿಗೂ ಕಾಣುತ್ತಲೇ ಇರುತ್ತಾರೆ.

ಕುವೆಂಪುತಮ್ಮ ಎಂಬತ್ತನೆಯ ವಯಸ್ಸಿನಲ್ಲೂ ಎಂಥ ಮುಕ್ತ ಮನಸ್ಸನ್ನು ಉಳಿಸಿಕೊಂಡಿದ್ದರೆಂಬುದಕ್ಕೆಕುವೆಂಪುಸಮಗ್ರ ಸಾಹಿತ್ಯದ 12ನೆಯ ಸಂಪುಟದಲ್ಲಿ ‘ರತಿವಿಜ್ಞಾನ ದರ್ಪಣ’ ಮಾಸಪತ್ರಿಕೆಗಾಗಿ ಅವರು ಬರೆದ ಮಾತೊಂದನ್ನು ಗಮನಿಸಿ: ‘ನಾನು ನನ್ನ ಸಾಹಿತ್ಯದಲ್ಲಾಗಲಿ, ನನ್ನ ಜೀವನದಲ್ಲಾಗಲಿ ಸೆಕ್ಸನ್ನು ಎಂದೂ ಅವಹೇಳನ ಮಾಡಿದೋನು ಅಲ್ಲ.’ಕುವೆಂಪುಅವರ ಮಕ್ಕಳಾದ ತೇಜಸ್ವಿ, ತಾರಿಣಿಯವರ ನೆನಪುಗಳು ಸೂಚಿಸುವಂತೆ ಕೊನೆಕೊನೆಯವರೆಗೂಕುವೆಂಪುಪ್ರಜ್ಞೆ ಮುಕ್ತವಾಗಿಯೂ, ಜಾಗೃತವಾಗಿಯೂ ಇತ್ತು.
ಆಧುನಿಕ ಭಾರತದಲ್ಲಿ ಆರೋಗ್ಯಕರ ಉದಾರವಾದಿ ಪ್ರಜ್ಞೆಯನ್ನು ರೂಪಿಸಿರುವ, ರೂಪಿಸುತ್ತಲೇ ಇರುವ ರವೀಂದ್ರನಾಥ ಟ್ಯಾಗೋರ್, ಗಾಂಧೀಜಿ, ಅಂಬೇಡ್ಕರ್, ಲೋಹಿಯಾ ಬರಹಗಳಂತೆಕುವೆಂಪುಬರಹಗಳು ಕೂಡ ಸೂಕ್ಷ್ಮ, ವೈಚಾರಿಕ, ಉದಾರವಾದಿ ಕನ್ನಡಿಗರನ್ನು ಇವತ್ತಿಗೂ ಸೃಷ್ಟಿ ಮಾಡುತ್ತಲೇ ಇವೆ. ಈ ಅಂಶ ಆಧುನಿಕ ಕರ್ನಾಟಕದಲ್ಲಿ ಕುವೆಂಪುಯುಗದಲ್ಲಿ ಆರಂಭಗೊಂಡ ವಿಚಾರಕ್ರಾಂತಿಯ ನಿರಂತರ ಅಗತ್ಯ, ಸ್ವೀಕಾರ, ಅನನ್ಯತೆ ಮತ್ತು ಪ್ರಭಾವವನ್ನು ಸ್ಪಷ್ಟವಾಗಿ ಸಾರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT