ಶಾಸನಗಳ ಹುಡುಕುತ್ತಾ...

7
'ಟೆಕಿ’ ತಂಡದ ಒಂದು ವಿನೂತನ ‍ಪ್ರಯತ್ನ

ಶಾಸನಗಳ ಹುಡುಕುತ್ತಾ...

Published:
Updated:

ಅದು ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯ (ಐಸಿಎಚ್ಆರ್) ಕಾರ್ಯಕ್ರಮ. ಇತಿಹಾಸ ಸಂಶೋಧಕರೊಬ್ಬರು ಶಾಸನಗಳ ಮಹತ್ವ ಕುರಿತು ಉಪನ್ಯಾಸ ನೀಡುತ್ತಿದ್ದರು. ಅದನ್ನು ಗಂಭೀರವಾಗಿ ಆಲಿಸುತ್ತಿದ್ದ ಟೆಕಿ ಪಿ.ಎಲ್‌. ಉದಯಕುಮಾರ್‌ ಅವರಿಗೆ ತಾನು ವಾಸಿಸುತ್ತಿದ್ದ ಬೆಂಗಳೂರಿನ ರಾಜಾಜಿನಗರದಲ್ಲಿ ಕೇತೋಮಾರನಹಳ್ಳಿ ಶಾಸನ ಇರುವ ಬಗ್ಗೆ ಯಾರೋ ಹೇಳಿದ ವಿಷಯ ನೆನಪಾಯಿತು.

ಉಪನ್ಯಾಸ ಮುಗಿಸಿಕೊಂಡು ಬಂದವರು, ಗೆಳೆಯರ ತಂಡವೊಂದನ್ನು ಕಟ್ಟಿಕೊಂಡು ಕೇತೋಮಾರನಹಳ್ಳಿ ಮತ್ತು ಅದರ ಸುತ್ತಲಿನ ಪ್ರದೇಶದಲ್ಲಿ ಶಾಸನ ಪತ್ತೆ ಮಾಡಲು ಆರಂಭಿಸಿದರು. ಆದರೆ ಅದು ಸಿಗಲಿಲ್ಲ. ಅದಕ್ಕಾಗಿ ಅವರು ಬೇಸರಗೊಳ್ಳಲಿಲ್ಲ. ಬದಲಿಗೆ, ‘ನಮ್ಮೂರಿನ ಶಾಸನಕ್ಕಾದ ಗತಿ ಬೇರೆ ಊರಿನ ಶಾಸನಗಳಿಗೂ ಆಗಬಾರದು’ ಎಂದು ತೀರ್ಮಾನಿಸಿದರು. ಅದೇ ತಂಡದೊಂದಿಗೆ ಬೆಂಗಳೂರು ಮತ್ತು ಸುತ್ತಲಿನ ಶಾಸನಗಳ ಪತ್ತೆಗೆ ಕಾರ್ಯೋನ್ಮುಖರಾದರು. ಅವರ ಕಾರ್ಯಕ್ಕೆ ಸ್ನೇಹಿತರು ಮತ್ತು ಇತಿಹಾಸ ವಿಷಯದ ಬಗ್ಗೆ ಆಸಕ್ತಿಯುಳ್ಳ ವಿನಯ್ ಕುಮಾರ್, ರಾಜೀವ್ ನೃಪತುಂಗ, ಧನ್‌ಪಾಲ್‌ ಕೈಜೋಡಿಸಿದರು. ಲಿಪಿಶಾಸ್ತ್ರಜ್ಞ ಮತ್ತು ಇತಿಹಾಸಕಾರರಾದ ಪಿ.ವಿ. ಕೃಷ್ಣಮೂರ್ತಿ ಮತ್ತು ಪ್ರೊ.ಆರ್.ನರಸಿಂಹನ್ ‘ಸಾಥ್’ ನೀಡಿದರು. ಶಾಸನ ರಕ್ಷಣೆಗೆ ಮುಂದಾದ ಇವರ ತಂಡ ಇಲ್ಲಿಯವರೆಗೂ 1,023 ಶಾಸನಗಳನ್ನು ಗುರುತಿಸಿದೆ.

ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ನಿರ್ದೇಶಕರಾಗಿ ರುವ ಉದಯಕುಮಾರ್‌ ಅವರು ಆರಂಭದಲ್ಲಿ ಶಾಸನಗಳ ರಕ್ಷಣೆಗೆ ಏನೇನು ಮಾಡಬಹುದು ಎಂದು ಯೋಜನೆಯ ಪಟ್ಟಿ ಮಾಡಿಕೊಂಡರು. ಸ್ನೇಹಿತರ ಜತೆಗೂಡಿ ಫೇಸ್‌ಬುಕ್‌ನಲ್ಲಿ ‘ಇನ್‌ಸ್ಕ್ರಿಪ್‌ಷನ್‌ ಸ್ಟೋನ್‌ ಆಫ್‌ ಬೆಂಗಳೂರು’ ಎಂಬ ಖಾತೆ ತೆರೆದರು. ತಮ್ಮ ತಂಡಕ್ಕೂ ಅದೇ ಹೆಸರಿಟ್ಟುಕೊಂಡರು. ಹಂತ ಹಂತವಾಗಿ ಇತಿಹಾಸ ವಿಷಯದ ಆಸಕ್ತರು, ಲಿಪಿಶಾಸ್ತ್ರಜ್ಞರು, ಭಾಷಾ ತಜ್ಞರು, ಇತಿಹಾಸ ಬೋಧಕರು, ವಿದ್ಯಾರ್ಥಿಗಳು, ಸಂಶೋಧಕರು, ಟೆಕಿಗಳು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ 1,000ಕ್ಕೂ ಹೆಚ್ಚು ಆಸಕ್ತರು ಫೇಸ್‌ಬುಕ್‌ ಖಾತೆಯಲ್ಲಿ ಜತೆಯಾದರು. ಅದರಲ್ಲಿ ಕೆಲವರು ತಂಡದ ಜತೆಗೆ ಸೇರಿ ಶಾಸನಗಳ ಸಂರಕ್ಷಣೆ, ಅಧ್ಯಯನ, ಸಂಶೋಧನಾ ಕಾರ್ಯ ಕೈಗೊಂಡಿದ್ದಾರೆ.

ಹೆಬ್ಬಾಳ ಶಾಸನ ಪತ್ತೆಯಾಗಿದ್ದು...
ಹಳೇ ಹೆಬ್ಬಾಳದಲ್ಲಿ (ಹೆಬ್ಬಾಳ ಗ್ರಾಮ) ಚರಂಡಿ ನಿರ್ಮಾಣಕ್ಕಾಗಿ ಗುಂಡಿ ತೆಗೆಯುವ ವೇಳೆ ಚಿತ್ರ, ಅಕ್ಷರಗಳಿರುವ ಕಲ್ಲೊಂದು ಸಿಕ್ಕಿತು. ಅದನ್ನು ಕಂಡ ಸ್ಥಳೀಯರು, ತಮಗೆ ಪರಿಚಯವಿದ್ದ ‘ಹೆರಿಟೇಜ್ ರಿವೈವಲ್ ಹಬ್’(ಎಚ್‌ಆರ್‌ಬಿ) ತಂಡದ ಸದಸ್ಯರಿಗೆ ಮಾಹಿತಿ ನೀಡಿದರು. ನಂತರ ಲಿಪಿ ತಜ್ಞರ ಸಹಾಯದಿಂದ ಆ ವೀರಗಲ್ಲು ಶಾಸನ ಓದಿಸಿದರು.

ಆ ಪ್ರಕಾರ ಇದು ಗಂಗರ ರಾಜ ಶ್ರೀಪುರುಷನ ಕಾಲದ ಶಾಸನ. ಇದರ ಅವಧಿ ಸುಮಾರು ಕ್ರಿ.ಶ 750. ಇದರಲ್ಲಿ ಪೇಳ್‌ನಾಗತ್ತರ ಎಂಬಾತನ ಹೆಸರು ಉಲ್ಲೇಖವಾಗಿದೆ. ಅಲ್ಲದೆ ‘ಪೆ ಬ್ಬೊಳ’ (ಹೆಬ್ಬಾಳ) ಎಂಬುದರ ಉಲ್ಲೇಖವೂ ಇದೆ. ಯುದ್ಧದಲ್ಲಿ ಸೈನಿಕನೊಬ್ಬ ವೀರಮರಣವಪ್ಪಿದ ಪ್ರಸ್ತಾಪವಿದೆ. ಈ ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕಿದೆ ಎನ್ನುತ್ತಾರೆ ಉದಯ ಕುಮಾರ್.

ತಜ್ಞರ ಅಭಿಪ್ರಾಯದಂತೆ, ಶ್ರೀಪುರಷನ ಕಾಲ ಕ್ರಿ.ಶ 725ರಿಂದ 770. ಹಾಗಾಗಿ ಹೆಬ್ಬಾಳದಲ್ಲಿ ದೊರೆತಿರುವ ಶಾಸನ ಈ ರಾಜನ ಕಾಲಕ್ಕೆ ಸೇರುತ್ತದೆ.

ಈ ಶಾಸನದಿಂದಾಗಿ ಹೆಬ್ಬಾಳಕ್ಕೆ 1,300 ವರ್ಷಗಳಷ್ಟು ಪ್ರಾಚೀನ ಇತಿಹಾಸವಿದೆ ಎಂಬುದು ಗೊತ್ತಾಯಿತು. ಇದು ಈ ಗ್ರಾಮಸ್ಥರಿಗೂ ಹೆಮ್ಮೆಯ ವಿಷಯವಾಗಿದೆ. ಹೀಗೆ ಗ್ರಾಮದ ಇತಿಹಾಸ ಹೇಳುವ ಮೂರು ಶಾಸನಗಳು ಅಲ್ಲೇ ಪತ್ತೆಯಾಗಿವೆ. ಇವುಗಳ ರಕ್ಷಣೆಗಾಗಿ ಸುಂದರ ಮಂಟಪ ಕಟ್ಟಿಸುವ ತೀರ್ಮಾನವನ್ನು ಗ್ರಾಮಸ್ಥರು ತೆಗೆದುಕೊಂಡಿದ್ದಾರೆ. ‘ಆರ್ಕಿಟೆಕ್ಟ್‌ ಡಾ. ಯಶಸ್ವಿನಿ ಶರ್ಮ ಅವರು ಗಂಗರ ವಾಸ್ತುಶಿಲ್ಪದ ಶೈಲಿಯಲ್ಲಿಯೇ ಮಂಟಪದ ವಿನ್ಯಾಸವನ್ನು ಉಚಿತವಾಗಿ ಮಾಡಿಕೊಟ್ಟಿದ್ದಾರೆ. ಅದರ ನಿರ್ಮಾಣಕ್ಕೆ ಅಂದಾಜು ₹13.5 ಲಕ್ಷ ವೆಚ್ಚವಾಗುತ್ತದೆ. ಗ್ರಾಮದ ಜನರಿಂದ ನಿಧಿ ಸಂಗ್ರಹಿಸಿ, ಆಷಾಢ ಕಳೆದ ನಂತರ ಮಂಟಪ ನಿರ್ಮಿಸುತ್ತೇವೆ’ ಎನ್ನುತ್ತಾರೆ ಗ್ರಾಮದ ಹಿರಿಯರಾದ ಪಟೇಲ್‌ ಶ್ರೀನಿವಾಸ್‌.

ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೆ
‘ಇನ್‌ಸ್ಕ್ರಿಪ್‌ಷನ್‌ ಸ್ಟೋನ್‌ ಆಫ್‌ ಬೆಂಗಳೂರು’ ತಂಡದ ಸದಸ್ಯರು ಕ್ಷೇತ್ರಕಾರ್ಯದ ವೇಳೆ ದೊರೆತ ಶಾಸನ ಬರಹಗಳ ಸಾರಂಶ, ಕಾಲ ಮತ್ತು ಲಿಪಿ ಬೆಳವಣಿಗೆಯ ಹಂತಗಳನ್ನು ಗುರುತಿಸಿ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಜತೆಗೆ ಈಗಾಗಲೇ ‘ಎಪಿಗ್ರಾಫಿ ಕರ್ನಾಟಿಕ’ದಲ್ಲಿ ದಾಖಲಾಗಿರುವ ಶಾಸನಗಳು ಹಾಗೂ ಇತರ ಸಂಶೋಧಕರು ಪತ್ತೆ ಮಾಡಿದ ಶಾಸನಗಳು ಇರುವಲ್ಲಿಗೂ ಭೇಟಿ ನೀಡುತ್ತಿದ್ದಾರೆ. ಆ ಶಾಸನಗಳ ಸ್ಥಿತಿಗತಿ ಅಧ್ಯಯನಕ್ಕಾಗಿ ಅವುಗಳ ಛಾಯಾಚಿತ್ರ ತೆಗೆದು, ವಿಡಿಯೊ ತುಣುಕುಗಳನ್ನು ಸಿದ್ಧಪಡಿಸುತ್ತಿದ್ದಾರೆ. ಇವುಗಳನ್ನೂ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೊಂದು ಅಭಿಯಾನದ ರೀತಿ ನಡೆಯುತ್ತಿದೆ. 

ವಿವಿಧ ಪ್ರದೇಶಗಳಲ್ಲಿ ದೊರೆತ ಶಾಸನಗಳ ಮಹತ್ವವನ್ನು ಸ್ಥಳೀಯರಿಗೆ ತಿಳಿಸಿ ಅವುಗಳ ರಕ್ಷಣೆಗೆ ಆಯಾ ಊರಿನವರು ಕೈಜೋಡಿಸುವಂತೆಯೂ ಈ ತಂಡ ಪ್ರೇರೇಪಿಸುತ್ತಿದೆ. ಅಲ್ಲದೆ ವಿವಿಧ ಪ್ರದೇಶಗಳ ಶಾಲಾ, ಕಾಲೇಜುಗಳಿಗೆ ಹೋಗಿ ಶಾಸನಗಳ ಕುರಿತು ಛಾಯಾಚಿತ್ರ ಪ್ರದರ್ಶನ, ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನು ಇದು ನಡೆಸುತ್ತಿದೆ. 

ಯೂಟ್ಯೂಬ್‌, ಗೂಗಲ್‌ನಲ್ಲಿ ಶಾಸನಗಳು
ಬೆಂಗಳೂರಿನ ಶಾಸನಗಳ ಕುರಿತ ವಿಡಿಯೊ ಚಿತ್ರೀಕರಿಸಿ ಅವುಗಳನ್ನು ಯೂಟ್ಯೂಬ್‌ನಲ್ಲೂ ಅಪ್‌ಲೋಡ್‌ ಮಾಡುತ್ತಿರುವ ಈ ತಂಡ, ಶಾಸನ ಇರುವ ಸ್ಥಳಗಳು ಗೂಗಲ್‌ ನಕ್ಷೆಯಲ್ಲಿ ಕಾಣಿಸಿಕೊಳ್ಳುವಂತೆಯೂ ಮಾಡುತ್ತಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಪತ್ತೆಯಾಗಿರುವ ಶಾಸನಗಳ ಮಾಹಿತಿಯನ್ನು ಗೂಗಲ್‌ ನಕ್ಷೆಯಲ್ಲಿ ಅಳವಡಿಸಿದೆ. ಈ ಶಾಸನಗಳು ಎಲ್ಲಿ, ಯಾವ ಸ್ಥಿತಿಯಲ್ಲಿವೆ. ಅಲ್ಲಿಗೆ ಹೇಗೆ ಹೋಗಬಹುದು ಎಂಬುದನ್ನು ಅದರಲ್ಲಿ ಉಲ್ಲೇಖಿಸಿದೆ.

‘ಶಾಸನಗಳ ಮಹತ್ವ ಜನರಿಗೆ ತಿಳಿಯಬೇಕು. ಅವುಗಳಲ್ಲಿರುವ ಜಾಗಕ್ಕೆ ಜನರು ಮತ್ತು ಆಸಕ್ತರು ಸುಲಭವಾಗಿ ಹೋಗಬೇಕು. ಅದೇ ಆಶಯದಿಂದ ಈ ಕಾರ್ಯ ಕೈಗೊಂಡಿದ್ದೇವೆ’ ಎನ್ನುತ್ತಾರೆ ಪಿ.ಎಲ್. ಉದಯ ಕುಮಾರ್‌.

‘ಪೋಸ್ಟ್‌ಕಾರ್ಡ್‌’ ಅಭಿಯಾನ
ಪೋಸ್ಟ್‌ಕಾರ್ಡ್ ಅಳತೆಯ ಕಾರ್ಡ್‌ನಲ್ಲಿ ಶಾಸನಗಳ ಚಿತ್ರ ಹಾಗೂ ಅದರ ಹಿಂಭಾಗದಲ್ಲಿ ಶಾಸನದ ಸಾರಾಂಶ ಮುದ್ರಿಸಲಾಗಿದೆ. ಅದು ಯಾವ ಕಾಲಕ್ಕೆ ಸಂಬಂಧಿಸಿದ್ದು, ಅದರ ಮಹತ್ವ, ಶಾಸನದಲ್ಲಿರುವ ಕೆಲ ಪ್ರಮುಖ ಪದಗಳು ಮಾಹಿತಿಯಲ್ಲಿರುತ್ತವೆ. ಈ ಕಾರ್ಡ್‌ಗಳನ್ನು ತಂಡದ ಸದಸ್ಯರು ಸಾರ್ವಜನಿಕರಿಗೆ ಹಂಚುತ್ತಿದ್ದಾರೆ.  ಇದೇ ತಂಡ ಆಗಾಗ್ಗೆ ನಡೆಸುವ ಛಾಯಾಚಿತ್ರ ಪ್ರದರ್ಶನ, ಉಪನ್ಯಾಸ, ವಿಚಾರ ಸಂಕಿರ್ಣಗಳಲ್ಲೂ ಇವುಗಳನ್ನು ವಿತರಿಸುತ್ತಿದ್ದಾರೆ. ಶಾಸನಗಳು ಇರುವ ಗ್ರಾಮಗಳಿಗೆ ಭೇಟಿ ನೀಡಿದಾಗ, ಅಲ್ಲಿನ ಗ್ರಾಮಸ್ಥರಿಗೆ ಈ ಪೋಸ್ಟ್‌ಕಾರ್ಡ್‌ಗಳನ್ನು ಕೊಟ್ಟು, ಜಾಗೃತಿ ಮೂಡಿಸುತ್ತಿದ್ದಾರೆ.  ಶಾಸನಗಳ ಸಂರಕ್ಷಣೆ ಕುರಿತ ಮಾಹಿತಿ ಹಂಚಿಕೆಗಾಗಿ ಸಂಪರ್ಕ ಸಂಖ್ಯೆ: 9845204268

*

–ಶಾಸನದಲ್ಲಿನ ಮಾಹಿತಿಯನ್ನು ದಾಖಲಿಸಿಕೊಳ್ಳುತ್ತಿರುವ ವಿದ್ಯಾರ್ಥಿನಿ

***

–ಪಿ.ಎಲ್‌. ಉದಯಕುಮಾರ್‌

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !