ಅವ್ವನೆಂಬ ಹೆಣ್ಣಿಗೊಂದು ಪತ್ರ

7

ಅವ್ವನೆಂಬ ಹೆಣ್ಣಿಗೊಂದು ಪತ್ರ

Published:
Updated:
Deccan Herald

ಅವ್ವನೆಂದರೆ ನಮ್ಮೂರು, ನನ್ನ ಬಾಲ್ಯ, ಕಾಮನಬಿಲ್ಲು, ಮಳೆ, ಮಣ್ಣಿನ ಘಮಲು, ಆಲಿಕಲ್ಲು, ಹೆಂಚಿನ ಮನೆ, ಬೆಚ್ಚನೆಯ ಹಕ್ಕಿಗೂಡು, ಜಗುಲಿಯಲ್ಲಿ ಕುಳಿತು ಕಂಡ ಕನಸುಗಳು – ಎಲ್ಲವೂ ನೆನಪಾಗುತ್ತವೆ. ನನಗೆ ಅವ್ವನೆಂದರೆ ನೆತ್ತಿಯ ನೆಳಲು. ಹಾಗೆಯೇ ಒಂದು ಸಣ್ಣ ಶೀತಲಸಮರ, ನನ್ನ ಮತ್ತು ಅಜ್ಜಿಯ ತಲೆಮಾರುಗಳ ನಡುವಿನ ಕೊಂಡಿ.

ಅವ್ವ ಇದನ್ನು ಓದಿಕೊಂಡರೆ ಇದು ಅವಳಿಗೆ ಬರೆದ ಪತ್ರ; ಇಲ್ಲವಾದಲ್ಲಿ ಇದು ನನ್ನದೇ ಸ್ವಗತ!

‘ಸಾರಿ, ಥ್ಯಾಂಕ್ಸ್‌ಗಳು ಗೊತ್ತಿಲ್ಲದ ಜಗತ್ತು ನಿನ್ನದು. ಅಪ್ಪಟ ಹಳ್ಳಿಯ ಅವ್ವ ನೀನು; ಜಗತ್ತೆಂದರೆ ಎಲ್ಲವೂ ಒಳಿತೇ ಎನ್ನುವ ಮುಗ್ಧ ಹೆಣ್ಣುಜೀವ. ನಗರ ಬದುಕಿನ ಮುಖವಾಡಗಳ ನಡುವೆ ಸಹಜ ಅಂತಃಕರಣ ಉಳ್ಳವಳು.
ನನಗೆ ನಿನ್ನದೇ ರೂಪು, ನಿನ್ನದೇ ಸ್ವಾಭಿಮಾನ. ನಮ್ಮಿಬ್ಬರ ಹಟ, ಕೋಪದಲ್ಲಿ ಯಾರಿಗ್ಯಾರೂ ಕಡಿಮೆಯಿಲ್ಲ. ಯಾರ ಅಂಕೆಯೊಳಗೂ ಇರಲಾರದ ಜೀವ ತುಡಿತ ನಿನ್ನದೇ ಬಳುವಳಿ ನನಗೆ. ನೋಟಕ್ಕೆ ನಿನ್ನಂತೆ ಕಂಡರೂ ತಾಳ್ಮೆ, ಸಹಬಾಳ್ವೆ, ಸಂಯಮಗಳಲ್ಲಿ ನನಗೂ ನಿನಗೂ ಅಜಗಜಾಂತರ ಅಂತರವಿದೆ. ನೀನೊಂದು ತ್ಯಾಗಜೀವಿ. ಎಲ್ಲರ ಸುಖಗಳಲ್ಲಿ ನಿನ್ನದೇ ಸುಖ ಅರಸುವವಳು ನೀನು. ನಾವು ನಮ್ಮದೇ ಸುಖಗಳನ್ನು ನಮಗಾಗಿ ಹುಡುಕಿಕೊಳ್ಳುವವರು.

ನಾವಿಬ್ಬರೂ ಹೆಣ್ಣೆಂದರೂ ನಮ್ಮಿಬ್ಬರ ನಡುವೆ ಎಷ್ಟೊಂದು ಅಗಾಧ ಅಂತರ! ಹಳ್ಳಿಯ ಬದುಕಿನಿಂದ ವಿದ್ಯೆಯನ್ನು ಕಲಿತು ನಗರ ಬದುಕಿಗೆ ಹಾರಿದವಳು ನಾನು. ನಿನ್ನದು ಅಕ್ಷರಗಳು ತಾಗಿದರೂ ತಾಗದಂತಿರುವ ಜಗತ್ತು. ಹಾಗಾಗಿಯೇ ಇರಬೇಕು, ನಿತ್ಯಬದುಕಿನಲ್ಲಿ ನನ್ನ ನಿನ್ನ ನಡುವೆ ಶೀತಲಸಮರವೊಂದು ನಡೆಯುತ್ತಲೇ ಇರುತ್ತದೆ. ನನ್ನ ಸ್ವಾತಂತ್ರ್ಯ ಒಮೊಮ್ಮೆ ನಿನಗೆ ಸ್ವೇಚ್ಛೆಯಾಗಿ ಕಂಡಿರಬಹುದು. ಆದರೆ ನಾನು ಸ್ವತಂತ್ರಳು ಮಾತ್ರ. ನಾನು ಏನೇ ಆಗಿದ್ದರೂ ಮೊದಲು ಹೆಣ್ಣು ಮಾತ್ರವೇ ಎಂಬ ನಿನ್ನ ಪುಟ್ಟ ಜಗತ್ತಿನ ತಿಳಿವಳಿಕೆಗಳು, ಚಿಂತನೆಗಳು; ನಾನು ಹೆಣ್ಣಿನಾಚೆಗಿನ ಭ್ರಮೆ ದಾಟಿದ ಮನುಷ್ಯಳು ಮಾತ್ರ ಎಂದು ನಂಬಿದವಳು, ಅಂತಹ ಚಿಂತನೆಗಳೊಟ್ಟಿಗೆ ಜೀಕುವವಳು ನಾನು.

ನೀನೊಂದು ಪುಟ್ಟ ಜಗತ್ತಿನ ಜೀವ; ನಿನ್ನನ್ನು ರೂಪಿಸಿದ್ದು ನಿನ್ನದೇ ಜಗತ್ತು; ನನ್ನದು ಹೊಸ್ತಿಲು ದಾಟಿ ಬಂದ ಜಗತ್ತು.  ಆದ್ದರಿಂದಲೇ ನಿನ್ನ ಜಗತ್ತನ್ನೂ ಮೀರಿ ನನ್ನ ಚಿಂತನೆಗಳು ಹರಿಯುತ್ತವೆ. ಮದುವೆ, ಗಂಡ, ಮಕ್ಕಳು, ಸಂಸಾರಗಳೇ ಸಾರಸರ್ವಸ್ವ ನಿನಗೆ; ನನ್ನಂತವರಿಗೆ ಅದರಾಚೆಗೂ ಬದುಕಿದೆ ಎಂದೇ ಅನಿಸುತ್ತದೆ.

ಅಂದು ಆಚೆ ಹಟ್ಟಿಯ ಜಗುಲಿಯಲ್ಲಿ ಚಿನ್ನಮ್ಮಜ್ಜಿ ‘ಹೆಣ್ಣುಮಕ್ಕಳನ್ನು ಎಷ್ಟು ಓದಿಸಿದರೇನು ಮಡಿಕೆ ಅಂಡು ಸೀಯುವುದು ತಪ್ಪೀತೆ, ಮಗಳು ಓದಿ ಸಂಬಳ ತಂದ್ರೆ ಅವಳ ಗಂಡನಿಗೆ ಕೊಡುತ್ತಾಳೆ,

ಅವನ್ ಮನೆಗೆ ಸಂಪತ್ತು, ಮಗಳು ಓದಿದ್ರೆ ನಿನಗೇನ್ ಲಾಭ?’ – ಎಂದೆಲ್ಲಾ ಕೊಂಕು ಹರಟುವಾಗ ‘ಮಗಳು ಓದಿದರೆ ನಮಗೆ ಹೆಮ್ಮೆ ಅಲ್ವಾ? ಸಂಬಳ ತಂದ್ರೆ ಅವಳೇ ಚೆನ್ನಾಗಿರಲಿ, ನನಗ್ಯಾಕ್ ಕೊಡಬೇಕು? ಮಕ್ಕಳನ್ನು ದುಡ್ಡಿಗಾಗಿ ಓದಿಸ್ಬೇಕೆ?’ – ಎಂದು ಅವರನ್ನೇ ಮರು ಪ್ರಶ್ನಿಸಿದ, ಚೆಂದದ ತಿಳಿವಳಿಕೆಯ ಅವ್ವ ನೀನು. ಸಂಬಂಧಗಳ ಕುಹಕಗಳ ನಡುವೆ ನನ್ನ ಓದಿನ ಕನಸನ್ನು ಕಂಡವಳು ನೀನು. ನನ್ನ ಓದಿನ ಕನಸಿಗೆ ನೀರೆರೆದು ಪೋಷಿಸಿದವಳು ನೀನೇ ಆದರೂ ನಾನು ನೀನು ಒಮ್ಮೊಮ್ಮೆ ಕೋಳಿಜಗಳವನ್ನು ಆಡುತ್ತೇವೆ. ನಾನು ಓದಿಸಿದ್ದಕ್ಕೆ ನೀನು ಓದಿದ್ದು ಎಂಬ ನೀನು, ನಾನು ಓದಿದ್ದಕ್ಕೆ ನೀನು ಓದಿಸಿದ್ದು ಎಂಬ ನಾನು, ಮತ್ತೊಂದರೆಗಳಿಗೆ ಎಲ್ಲ ಮರೆತು, ಅದೇ ನಿನ್ನ ನಗುಮುಖ – ಎಲ್ಲ ಕಷ್ಟಗಳ ಗೆದ್ದ ನಗು ಅದು.

ನಾನು ಹಳ್ಳಿಯ ಹುಡುಗಿಯಾದರೂ ಅಡುಗೆಮನೆಯ ಹುಡುಗಿಯಾಗಲಿಲ್ಲ. ಏನಾದರು ಓದಿಕೊ, ಬರೆದುಕೊ ಎನ್ನುವ ನಿನಗೆ ನಾನು ಯಾವಾಗಲೂ ಕಿರಿಮಗಳೇ. ಈ ದೇಶದಲ್ಲಿ ತನ್ನ ಮಗಳಿಗೆ ಅಡುಗೆಮನೆಯನ್ನು ಪರಿಚಯಿಸದ ಹಳ್ಳಿಯ ಅವ್ವನಿದ್ದರೆ ಅದು ನಿನ್ನಂಥವಳೇ ಇರಬೇಕು. ಯಾರಾದರೂ ನನ್ನನ್ನು ಆಕ್ಷೇಪಿಸಿದರೆ ಅದಕ್ಕೆ ನೀನೇ ಕಾರಣ ನೋಡು! ಆದರೂ ವೈದೇಹಿ ಹೇಳುವ ನಿನ್ನ ಅಡುಗೆಮನೆಯನ್ನು ಕಂಡು ಬಾಲ್ಯದಲ್ಲೆ ಬೆಚ್ಚಿದ್ದೇನೆ.

ಗಂಡುಮಕ್ಕಳೇ ಮುಖ್ಯ ಎಂಬ ನಿನ್ನ ಧೋರಣೆ ಕಂಡು ಬಾಲ್ಯದ ದಿನಗಳಲ್ಲಿ ಕೊರಗಿದ್ದೇನೆ. ನಿನ್ನೆತ್ತರಕ್ಕೆ ಬೆಳೆದು ನಿಂತಾಗ ಗಂಡುಮಕ್ಕಳೇ ವಾರಸುದಾರರು ಎಂಬ ಭ್ರಮೆ ಈ ಸಮಾಜ ನಿನಗೆ ಹೊರಿಸಿದ ಮೌಲ್ಯಭಾರ ಎಂದು ಅರಿತಿದ್ದೇನೆ. ತಾಯಿಯೆಂದರೆ ಅದು ಎಲ್ಲ ಜೀವಕೂ ಮಿಡಿವ ಕರುಳೇ

ಒಂದೊಮ್ಮೆ ನಮ್ಮಟ್ಟಿಯ ಪಡಸಾಲೆಯ ಸೂರಿನಲ್ಲಿ ಗುಬ್ಬಿ ಗೂಡು ಕಟ್ಟಿತ್ತು. ಒಂದು ಬೆಳಗಿನ ಹೊತ್ತು ಗುಬ್ಬಿಮರಿಗಳೆರಡು ಎರಡು ನೆಲಕ್ಕೆ ತಾಗಿದ್ದವು, ಇರುವೆಗಳು ಸಂಭ್ರಮದಲ್ಲಿ ಓಡೋಡಿ ಬರುತ್ತಿದ್ದವು, ಗುಬ್ಬಚ್ಚಿಯ ಯಾವ ಆಕಾರವು ಇರದ ಮಾಂಸದ ಮುದ್ದೆಯಂತಿದ್ದ ಅವು ನಮಗೆ ಭಯ ಹುಟ್ಟಿಸಿದ್ದವು. ಅವ್ವಗುಬ್ಬಿ, ಅಪ್ಪಗುಬ್ಬಿ ಯಾರೂ ಗೂಡಿನಲ್ಲಿ ಇರಲಿಲ್ಲ. ಮರಿಗಳು ಅನಾಥವಾಗಿ ಅಳುತ್ತಿದ್ದವು. ಆದರೆ ಮಕ್ಕಳಾದ ನಮಗೆ ಆ ಮರಿಗಳನ್ನು ಮುಟ್ಟಬೇಕೆಂಬ ಕುತೂಹಲ. ನಾವೆಲ್ಲ ಗುಂಪನ್ನು ಕಟ್ಟಿ ಅಚ್ಚರಿಯಲ್ಲಿ ಅವನ್ನೇ ನೋಡುತ್ತಿದ್ದೆವು. ಆದರೆ ಅಷ್ಟರಲ್ಲಿ, ಅಲ್ಲೇ ಹಾಜರಿದ್ದ ತಾತ ನಮಗೊಂದು ಕಿವಿಮಾತು ಹೇಳಿ ಅಲ್ಲಿಂದ ನಮ್ಮನ್ನು ಓಡಿಸಿದರು.ತಾತ ಅಂದು ಹೇಳಿದ  ‘ಮನುಷ್ಯರು ಮುಟ್ಟಿದ ಮರಿಗಳನ್ನು ತಾಯಿ ಹಕ್ಕಿ ತನ್ನ ಗೂಡಿಗೆ ಸೇರಿಸುವುದಿಲ್ಲವಂತೆ’ ಎಂಬ ಮಾತು ಮತ್ತೆ ಮತ್ತೆ ಕಾಡುತ್ತದೆ. ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನಗೆ ಈ ನಗರದ ಬದುಕಿನಲ್ಲಿ ನಿಂತು ಯೋಚಿಸುವಾಗ – ಇಲ್ಲಿಯವರು ವಿದ್ಯೆಯನ್ನು ಕಲಿತು, ತಮ್ಮದೇ ಒಂದಷ್ಟು ಅಭಿಪ್ರಾಯಗಳನ್ನು ರೂಪಿಸಿಕೊಂಡವರು ಮನುಷ್ಯರು ಮುಟ್ಟಿದ ಗುಬ್ಬಿಗಳಂತೆ, ಒಮ್ಮೊಮ್ಮೆ ತಾಯಿಯಿಂದ ದೂರವೇ ಉಳಿಯುವಂಥವರು ಎನಿಸುತ್ತದೆ.’

ಹೀಗೆ ಎಲ್ಲ ಮನೆಗಳಲ್ಲೂ ಸಂಪ್ರದಾಯಬದ್ಧ ತಾಯಿ ಮತ್ತು ಒಂದಷ್ಟು ಆಧುನಿಕ ಚಿಂತನೆಗಳಿಗೆ ತೆರೆದುಕೊಂಡ ಮಕ್ಕಳ ನಡುವೆ ಒಂದು ಶೀತಲಸಮರ ಇದ್ದೇ ಇರುತ್ತದ್ದೇನೋ? ಹೀಗಾಗಿ ಅವ್ವನೆಂದರೆ ನನಗೆ ನೆತ್ತಿಯ ನೆಳಲು, ಬೆಚ್ಚಗಿನ ಗೂಡು, ಒಂಚೂರು ಶೀತಲಸಮರ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !