ಸೋಮವಾರ, ಆಗಸ್ಟ್ 26, 2019
20 °C

ಸತ್ತ ಪ್ರಾಣಿಗೂ ಜೀವಕಳೆ...

Published:
Updated:
Prajavani

ನೀವು ಮೈಸೂರಿನ ಅರಮನೆ, ಮೃಗಾಲಯ ಅಥವಾ ಯಾವುದಾದರೂ ಪ್ರಾಣಿ ವಸ್ತುಸಂಗ್ರಹಾಲಯಕ್ಕೋ ಭೇಟಿ ನೀಡಿದ್ದರೆ ಅಲ್ಲಿ ಹುಲಿ, ಸಿಂಹ, ಕಾಟಿ, ಆನೆಯಂತಹ, ಜೀವವಿರುವಂತೆ ಕಾಣುವ ಗೊಂಬೆಗಳನ್ನು ನೋಡಿರುತ್ತೀರಿ. ಅವನ್ನು ನೋಡಿ ಭಯಪಟ್ಟಿರಲೂಬಹುದು. ಹಾಗೆ ನೈಜವಾಗಿ ಕಾಣುವಂತೆ ಅವುಗಳನ್ನು ಹೇಗೆ ತಯಾರಿಸುತ್ತಾರೆ? ಅವುಗಳ ಚರ್ಮ, ದೇಹದ ಭಾಗಗಳನ್ನು ಹೇಗೆ ಸಿದ್ಧಗೊಳಿಸುತ್ತಾರೆ ? ಹೀಗೆ ಹಲವು ಕುತೂಹಲಗಳು ನಿಮ್ಮನ್ನು ಕಾಡಿರಬಹುದಲ್ಲವೇ?

ಸತ್ತ ಪ್ರಾಣಿಗಳ ಚರ್ಮ, ದೇಹದ ಭಾಗಗಳನ್ನು ಉಪಯೋಗಿಸಿಕೊಂಡು ಜೀವಂತ ಪ್ರಾಣಿಯ ರೀತಿ ಕಂಗೊಳಿಸುವಂತೆ ಮಾಡುವ ಈ ಕಲಾ ಕೌಶಲಕ್ಕೆ ‘ಟ್ಯಾಕ್ಸಿಡರ್ಮಿ ಕಲೆ’ ಎನ್ನುತ್ತಾರೆ. ಕನ್ನಡದಲ್ಲಿ ಪ್ರಾಣಿ ಪ್ರಸಾಧನ/ಚರ್ಮ ಪ್ರಸಾದನ ಎನ್ನಬಹುದು. ಇದು ಹೆಚ್ಚು ತಾಳ್ಮೆ, ಕೌಶಲ ಬೇಡುವ ಕಲೆ.

ಅಧಿಕೃತವಾಗಿ ಟ್ಯಾಕ್ಸಿಡರ್ಮಿ ಕಲಾ ಕೌಶಲವನ್ನು ಹೊಂದಿದ್ದವರು ಈಗನ್ ವ್ಯಾನ್ ಇಂಗನ್ ಅವರು ಸ್ಥಾಪಿಸಿದ್ದ ವ್ಯಾನ್ ಇಂಗನ್ ಅಂಡ್ ವ್ಯಾನ್ ಇಂಗನ್ ಹೆಸರಿನ ಕಂಪನಿಯವರು. ಮೈಸೂರಿನ ನಜರ್‌ಬಾದ್‌ನಲ್ಲಿ 98 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಈ ಕಂಪನಿ 1998ರಲ್ಲಿ ಮುಚ್ಚಿತು. ಈ ಕಂಪನಿಗೆ ಭಾರತದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಗ್ರಾಹಕರು ಇದ್ದರು.

ಈ ಕಂಪನಿಯಲ್ಲಿ ನಾಲ್ಕು ದಶಕಗಳ ಕಾಲ ದುಡಿದ ಹೆಗ್ಗಡದೇವನಕೋಟೆಯ ಕೆಂಡಗಣ್ಣಸ್ವಾಮಿ, ಕಂಪನಿ ಮುಚ್ಚಿದ ನಂತರವೂ, ಕಲಾ ಕೌಶಲವನ್ನು ಮುಂದುವರಿಸಿದ್ದರು. ಈಗ ಅವರ ಪುತ್ರಿ ಮಂಜುಳಾ, ಈ ಕಲೆಯನ್ನು ಉದ್ಯೋಗವನ್ನಾಗಿಸಿಕೊಂಡಿದ್ದಾರೆ.

‘ಚಿಕ್ಕವಳಿದ್ದಾಗ ನಾನು ನನ್ನ ತಂದೆ ಜತೆ ಕಂಪನಿಗೆ ಹೋಗುತ್ತಿದ್ದೆ. ಅವರು ತಯಾರಿಸುತ್ತಿದ್ದ ವಿವಿಧ ಪ್ರಾಣಿಗಳ ಚರ್ಮ, ತಲೆ, ಕೊಂಬುಗಳ ಗೊಂಬೆಗಳೇ ಆಟಿಕೆಗಳಾಗಿದ್ದವು. ಅವುಗಳನ್ನು ನೋಡುತ್ತಲೇ ಈ ಕಲೆಯನ್ನು ಕರಗತ ಮಾಡಿಕೊಂಡಿದ್ದೇನೆ. ಶಾಸ್ತ್ರೀಯವಾಗಿ ಕಲಿಯದಿದ್ದರೂ ಅನುಭವ, ಅಭ್ಯಾಸದಿಂದ ಈ ಕಲೆ ಒಲಿದಿದೆ’ ಎನ್ನುತ್ತಾರೆ ಮಂಜುಳಾ.

ಮಂಜುಳಾ ಅವರು ರಾಯಚೂರು ಸೇರಿದಂತೆ ವಿವಿಧೆಡೆ ಇರುವ ಅರಣ್ಯ ಇಲಾಖೆಗಳಿಗೆ ಇಂಥ ಗೊಂಬೆಗಳನ್ನು ದುರಸ್ತಿ ಮಾಡಿಕೊಟ್ಟಿದ್ದಾರೆ. ವಿವಿಧ ಕಡೆ ಇರುವ ಗೊಂಬೆಗಳು, ಮೌಂಟ್‌ಗಳು ಹಾಗೂ ಟ್ರೋಫಿಗಳನ್ನು ರಿಪೇರಿ ಮಾಡಿಕೊಡುತ್ತಿದ್ದಾರೆ. ಬೆಂಗಳೂರಿನ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್, ಬೆಳಗಾವಿಯ ಮರಾಠ ಲೈಟ್ ಇನ್ಫೆಂಟ್ರಿ ಕಚೇರಿ, ಮೈಸೂರು ಅರಮನೆ, ಮೈಸೂರು ಮೃಗಾಲಯ, ಮೈಸೂರು ಅರಣ್ಯ ಭವನ ಅಲ್ಲದೆ, ಪ್ರತಿಷ್ಠಿತ ಬೆಂಗಳೂರು ಕ್ಲಬ್‌ನಲ್ಲಿ ಇರುವ ಇಂಥ ಗೊಂಬೆಗಳಿಗೂ ಹೊಸರೂಪ ನೀಡುತ್ತಿದ್ದಾರೆ.

ಹೊರ ರಾಜ್ಯಗಳಿಗೆ ವಿಸ್ತರಿಸಿದ ಕಲೆ

ಟ್ಯಾಕ್ಸಿಡರ್ಮಿ ಕಲೆ ಮಂಜುಳಾ ಅವರನ್ನು ನವದೆಹಲಿ, ಗ್ವಾಲಿಯರ್, ಹೈದರಾಬಾದ್ ಹಾಗೂ ಊಟಿವರೆಗೂ ಕರೆದುಕೊಂಡು ಹೋಗಿದೆ. ಇವರೇ ಸಿದ್ಧಪಡಿಸಿರುವ ಗೊಂಬೆಗಳು ಬೀದರ್‌ನ ದೇವದೇವ ವನ, ಮೈಸೂರಿನ ಲಲಿತಮಹಲ್ ಅರಮನೆ, ಊಟಿಯ ಜಿಮ್ಖಾನ ಕ್ಲಬ್ ಹಾಗೂ ಗುಡ್‌ಷೆಫರ್ಡ್ ಕಾನ್ವೆಂಟ್‌ಗಳಲ್ಲಿವೆ.

ಇಂಥ ಹಲವು ಟ್ಯಾಕ್ಸಿಡರ್ಮಿ ಗೊಂಬೆಗಳು ಮೈಸೂರು ಅರಮನೆಯ ಟ್ರೋಫಿ ರೂಮ್‌ನಲ್ಲಿವೆ. ವ್ಯಾನ್ ಇಂಗನ್ ಅಂಡ್ ವ್ಯಾನ್ ಇಂಗನ್ ಕಂಪನಿಯಲ್ಲಿ ಸಿದ್ಧಗೊಂಡ ಟ್ರೋಪಿಗಳನ್ನು ಅಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ರಾಜರು ಶಿಕಾರಿ ಮಾಡಿದಾಗ ಸಿಕ್ಕ ಆನೆಗಳ ದಂತಗಳನ್ನು ಸಂರಕ್ಷಿಸಿ ಇಡಲಾಗಿದೆ. ಹುಲಿ, ಕಾಟಿಗಳ ಟ್ರೋಫಿಗಳೂ ಇವೆ.

ಅರಣ್ಯ ಇಲಾಖೆ ಅನುಮತಿ

ಈ ರೀತಿ ಪ್ರಸಾದನ ಕಲೆ ಮಾಡಲು ಅರಣ್ಯ ಇಲಾಖೆಯ ಅನುಮತಿ ಪಡೆದಿದ್ದಾರೆ ಮಂಜುಳಾ. ಮುಂದೆ ದೊಡ್ಡ ಪ್ರಮಾಣದಲ್ಲಿ ಇಂಥ ಗೊಂಬೆಗಳನ್ನು ತಯಾರಿಸುವ ಗುರಿ ಇಟ್ಟುಕೊಂಡಿದ್ದಾರೆ. ಸದ್ಯಕ್ಕೆ ಅವರು ತನ್ನ ಮನೆಯನ್ನೇ ಟ್ಯಾಕ್ಸಿಡರ್ಮಿ ಗೊಂಬೆಗಳನ್ನು ದುರಸ್ತಿ ಮಾಡುವ ಕಾರ್ಯಾಗಾರವನ್ನಾಗಿ ಮಾಡಿಕೊಂಡಿದ್ದಾರೆ. ಸರ್ಕಾರ ಜಮೀನು ನೀಡಿದರೆ ಒಂದು ಮ್ಯೂಸಿಯಂ ಮಾಡುವ ಬಯಕೆ ಅವರಲ್ಲಿದೆ.

‘ಅರಣ್ಯ ಇಲಾಖೆಯ ಕೆಲವು ಕಚೇರಿಗಳಲ್ಲಿ ನಿರ್ವಹಣೆ ಕೊರತೆಯಿಂದಾಗಿ ಕೆಲವು ಅಮೂಲ್ಯ ಪ್ರಾಣಿಗಳ ಗೊಂಬೆಗಳು ವ್ಯರ್ಥವಾಗುತ್ತಿವೆ. ಅವುಗಳನ್ನು ದುರಸ್ತಿ ಮಾಡಿ ಸಂರಕ್ಷಿಸಬೇಕು’ ಎಂದು ಕಳಕಳಿಯಿಂದ ಮಂಜುಳಾ ಹೇಳುತ್ತಾರೆ. ಟ್ಯಾಕ್ಸಿಡರ್ಮಿ ಕುರಿತ ಮಾಹಿತಿಗಾಗಿ ಮಂಜುಳಾ ಅವರ ಸಂಪರ್ಕಕ್ಕೆ-98805 13803 

ಟ್ಯಾಕ್ಸಿಡರ್ಮಿಸ್ಟ್ ಕಲಾ ಕೌಶಲ ಶಕ್ತಿ

ಪ್ರಾಣಿ ಪ್ರಸಾಧನ ಎಂಬುದು ವಿವಿಧ ಆಯಾಮಗಳಲ್ಲಿ ಕೆಲಸ ಮಾಡಬೇಕಾದ ಕಲೆಯಾಗಿದೆ. ಸಮಗ್ರ ವಿನ್ಯಾಸ, ವಿವಿಧ ಪರಿಕರಗಳು, ಪ್ರಾಣಿದೇಹದ ವಿಜ್ಞಾನ, ದೇಹರಚನಾಶಾಸ್ತ್ರಗಳ ಸಮ್ಮಿಶ್ರಣವಾಗಿದೆ. ಈ ಎಲ್ಲ ಅಂಶಗಳ ಪರಿಜ್ಞಾನವುಳ್ಳ ಪ್ರಾಣಿ ಪ್ರಸಾಧನಾ ತಜ್ಞರು ಸಿದ್ಧಪಡಿಸಿದ ಒಂದು ಗೊಂಬೆ ನೈಜಪ್ರಾಣಿಯಂತೆ ಮನಸೆಳೆಯಲು ಸಾಧ್ಯವಾಗುತ್ತದೆ. ಹೀಗಾಗಿ ಒಬ್ಬ ಟ್ಯಾಕ್ಸಿಡರ್ಮಿಸ್ಟ್‌ನ ಅಂತಿಮ ಗುರಿಯೇ ನಿರ್ದಿಷ್ಟ ಪ್ರಾಣಿಯ ಚರ್ಮವನ್ನು ಬಳಸಿ ಗೊಂಬೆಯನ್ನು ಸಿದ್ಧಪಡಿಸಿ ಅದು ಜೀವಂತ ಪ್ರಾಣಿಯ ರೀತಿ ಭಾಸವಾಗುವಂತೆ ಮಾಡುವುದೇ ಆಗಿದೆ.

ಹಿಂದೆ ವ್ಯಾನ್ ಇಂಗನ್ ಅಂಡ್ ವ್ಯಾನ್ ಇಂಗನ್ ಕಂಪನಿಯಲ್ಲಿ ಸ್ಥಳೀಯರೂ ಕಾರ್ಯನಿರ್ವಹಿಸುತ್ತಿದ್ದರು. ಅವರಲ್ಲಿ ಕೌಶಲ ಇದ್ದವರೂ ಇದ್ದರು. 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಿಂದಾಗಿ ಈ ಸಂಸ್ಥೆಯ ಚಟುವಟಿಕೆ ತನ್ನ ಪ್ರಾಮುಖ್ಯವನ್ನೂ ಕಳೆದುಕೊಂಡಿತು. ಅಲ್ಲದೆ, ಈ ಕಂಪನಿಯ ಕೊನೆಯ ಪ್ರಾಣಿ ಪ್ರಸಾಧನ ತಜ್ಞ ಎಡ್ವಿನ್ ಜೂಬರ್ಟ್ ವ್ಯಾನ್ಇಂಗನ್ ಅವರ ಮರಣಾನಂತರ ಕಂಪನಿ ಮುಂದೆ ಸಾಗಲೇ ಇಲ್ಲ.

ಮೈಸೂರು ವಿಶ್ವವಿದ್ಯಾಲಯವೂ ಸೇರಿದಂತೆ ದೇಶದ ಬಹುತೇಕ ವಿಶ್ವವಿದ್ಯಾಲಯಗಳ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಪ್ರಾಣಿ ಪ್ರಸಾಧನ ಕಲಾವಿದರು ಹಿಂದೆ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಟ್ಯಾಕ್ಸಿಡರ್ಮಿ ಮಾಡುವುದನ್ನು ನಿಷೇಧಿಸಲಾಗಿದೆ. ಈಗಾಗಲೇ ಸಿದ್ಧಗೊಂಡಿರುವ ಇಂಥ ಗೊಂಬೆಗಳನ್ನು ಸಂರಕ್ಷಿಸಿ ಇಡುವುದೂ ಮುಖ್ಯವಲ್ಲವೇ? ಹಾಗಾಗಿ ಈ ಗೊಂಬೆಗಳ ಪುನರುಜ್ಜೀವನ ಕಾರ್ಯದಲ್ಲಿ ತೊಡಗಿಸಿಕೊಂಡವರೂ ಇದ್ದಾರೆ.

Post Comments (+)