ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನಾನುಭವವೂ ಕಲಾನುಭವವೂ

Last Updated 11 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಕಲೆ ಎಂದರೇನು, ಅನುಭವ ಎಂದರೇನು, ಜೀವನ ಎಂದರೇನು – ಎನ್ನುವ ಪ್ರಶ್ನೆಗಳನ್ನು ಸ್ವಲ್ಪ ಕಾಲ ಬದಿಗಿಟ್ಟು, ಕಲೆ ಅದು ಯಾವ ಅರ್ಥದಲ್ಲಾದರೂ ಸರಿ ಅದನ್ನು ಅನುಭವಿಸಿ, ಆಸ್ವಾದಿಸುವುದಕ್ಕೆ ಲೋಕದ ಸ್ಥಿತಿ ಮತ್ತು ಮನಸ್ಸಿನ ಸ್ಥಿತಿ ಯಾವುದಿರಬೇಕು ಎಂದು ಸ್ವಲ್ಪ ಯೋಚಿಸೋಣ. ಬದುಕಿನಲ್ಲಿ ಜರ್ಜರಿತರಾಗಿದ್ದು, ಅಪಾರ ನೋವಿನಲ್ಲಿ ಮುಳುಗಿರುವವರಿಗೂ ಅಥವಾ ನೈತಿಕವಾಗಿ ಕುಸಿದವರಿಗೂ, ಸಾಮಾಜಿಕ, ರಾಜಕೀಯ ಅನ್ಯಾಯ, ಅಸಮಾನತೆಗಳ ವಿರುದ್ಧ ಧ್ವನಿ ಕಳೆದುಕೊಂಡಿರುವವರಿಗೂ ಕಲೆ ಧ್ವನಿಸುವುದನ್ನು ಗ್ರಹಿಸಲು ಸಾಧ್ಯವಿದೆಯೇ? ಅಥವಾ ಜೀವನದಲ್ಲಿ ತಮ್ಮನ್ನು ತಾವು ಕಂಡುಕೊಂಡವರಿಗೆ, ಸಮಾಜದೊಟ್ಟಿಗೆ ಉತ್ತಮ ಬಾಂಧವ್ಯ ಹೊಂದಿದವರಿಗೆ ಯಾವ ತಯಾರಿ, ಕಲಿಕೆ, ಸಂಸ್ಕಾರವೂ ಇಲ್ಲದೆ ನಾಟಕವೊಂದನ್ನೋ, ದೃಶ್ಯಕಲೆಯ ತುಣುಕೊಂದನ್ನೋ, ಕಾವ್ಯವೊಂದನ್ನೋ ನೋಡಿದ, ಓದಿದ ಕೂಡಲೇ ರಸಾಸ್ವಾದ ಸಾಧ್ಯವಾಗಿಬಿಡುವುದೋ? ಚೆನ್ನಾಗಿ ಬದುಕುವುದೇ ಒಂದು ಕಲೆ, ಜೀವನವೇ ಒಂದು ಕಲೆ ಎಂದು ಅಲಂಕಾರಿಕವಾಗಿ ಹೇಳಲಾಗುವುದಾದರೂ ಅದು ‘ಕಲೆ ಎಂದರೇನು?’ – ಎಂಬ ಪ್ರಶ್ನೆಗೆ ಕಂಡುಕೊಂಡ ಸುಲಭ, ಚತುರ ಉತ್ತರ ಎಂದೇ ಹೇಳಬೇಕಾಗುವುದು.

ಪ್ರೇಕ್ಷಕ-ಸಹೃದಯನಿಲ್ಲದೆ ಕಲೆಗೆ ಅಸ್ತಿತ್ವವಿಲ್ಲ, ಕಲಾನುಭವ ಒಂದರ್ಥದಲ್ಲಿ 'ನಾನು' ಎಂಬ ಪ್ರತ್ಯೇಕತೆಯನ್ನಳಿದು, 'ನಾವು' ಎಂಬ ಭಾವೋದಯ, ಹಾಗಿದ್ದಮೇಲೆ ನಾವೆಷ್ಟೇ ಚೆನ್ನಾಗಿ ಬದುಕಿದರೂ ಪ್ರೇಕ್ಷಕನಿಲ್ಲದೆ ಬದುಕು ಕಲೆ ಅನ್ನಿಸಿಕೊಳ್ಳುವುದಾದರೂ ಹೇಗೆ? ಅದೂ ಅಲ್ಲದೆ ಬದುಕನ್ನು ಇಡಿಯಾಗಿ ಪ್ರೇಕ್ಷಕನೆದುರು ಇಡುವುದು ಹೇಗೆ? ಹಾಗಾಗಿ ಕೇವಲ ಅನುಭವಗಳು, ಕೌಶಲ್ಯ, ಸೌಂದರ್ಯ – ಇವುಗಳೇ ಕಲೆಯಾಗಲಾರವು, ಕಲೆ ಬರೀ ಜೀವನಾನುಭವವಷ್ಟೇ ಅಲ್ಲ, ಆದರೆ ಜೀವನಾನುಭವವಿಲ್ಲದೆ ಕಲಾನುಭವ ಸಾಧ್ಯವಿಲ್ಲ. ಸುಂದರ ಬದುಕನ್ನು ಹೊಂದಿದವರಿಗೂ ಕಲಾನುಭವ ಸಾಧ್ಯವಾಗದಿರುವಿಕೆಗೆ ಕಾರಣ ಏನಿರಬಹುದು, ವ್ಯಕ್ತಿತ್ವದ ದೋಷವೇ ಅಥವಾ ಸಂಸ್ಕಾರದ - ಕಲಿಕೆಯ ಲೋಪವೇ?
ನಾವು ಬದುಕನ್ನು ಎಷ್ಟೇ ಧ್ಯಾನಸ್ಥ ಎಚ್ಚರದಿಂದ ಬದುಕುತ್ತಿದ್ದರೂ, ಒಮ್ಮೊಮ್ಮೆ ಬದುಕಿನ ಓಘವೇ ನಮ್ಮ ಎಚ್ಚರವನ್ನು ಮಸುಕುಗೊಳಿಸುತ್ತದೆ. ಈಗಾಗಲೇ ನಮಗೆ ತಿಳಿದ ಸಂಗತಿಗಳು, ನೆನಪು, ಬುದ್ಧಿ ಕೆಲವೊಮ್ಮೆ ಬದುಕಿನ ಸುತ್ತ ಒಂದು ದಟ್ಟ ಕಾರ್ಮೋಡವನ್ನು ಸೃಷ್ಟಿಸಿ ನಮ್ಮ ಬದುಕು ನಮಗೇ ಕಾಣಲಾರದ ಒಂದು ಸ್ಥಿತಿ ತಲುಪಿಬಿಟ್ಟಿರುತ್ತೇವೆ. ಆಗಲೇ ಮನುಷ್ಯನಿಗೆ ಕಲೆಯ ಬೆಲೆ ತಿಳಿಯುವುದು. ನಮ್ಮೊಳಗಿನ ಮಂಜುಗಡ್ಡೆಯೊಂದು ಕರಗಿ, ಎದೆಯಿಂದ ಎದೆಗೆ ಹರಿದು ಬದುಕಿಗೆ ಮತ್ತೆ ಚಲನೆ ಒದಗಬೇಕಾದರೆ ಕಲೆಯ 'ಬಿಸಿ' ಅಂದರೆ ಕಲೆಯ ಅನುಭವ ನಮಗೆ ತಟ್ಟಲೇಬೇಕು. ಆದರೆ ಕಲೆಯ ಈ ಅನುಭವ ಯಾವುದೇ ಕೌಶಲ್ಯ, ಜ್ಞಾನಗಳ ಸಿದ್ಧಿಯಲ್ಲ, ಕಲಾನುಭವ ಶಾಶ್ವತವಾಗಿ ಏನನ್ನೋ ಪಡೆದು ಹಿಡಿದಿಟ್ಟುಕೊಳ್ಳುವ ಪ್ರಕ್ರಿಯೆಯಲ್ಲ, ಅದು ಅಜ್ಞಾತವಾದುದಕ್ಕೆ ನಮ್ಮೊಳಗನ್ನು ತೆರೆದಿಟ್ಟುಕೊಳ್ಳುವ ಕ್ರಿಯೆ, ಒಳಗಣ್ಣನ್ನು ತೆರೆಯುವ ನಿರಂತರ ಕ್ರಿಯೆ, ಜೀವನದ ಬತ್ತಿ ಹೋದ ನದಿಗಳಿಗೆ ಮತ್ತೆ ಮತ್ತೆ ಹರಿವು ನೀಡುವ ಜಲಧಾರೆ.

ಅಜ್ಞಾತದ ಸೆಳೆತವೇ ಕಲೆಯ ಮೂಲ ಸೆಲೆ. ಅಜ್ಞಾತದ ಬಗ್ಗೆ ಮೋಹ, ಕುತೂಹಲ, ತಳಮಳ, ಆಶ್ಚರ್ಯ, ಭಯ – ಎಲ್ಲವೂ ಸೇರಿ ಅದರೊಟ್ಟಿಗಿನ ಮನುಷ್ಯಸಂಬಂಧವೇ ರೋಮಾಂಚನಕಾರಿಯಾದುದು. ಅಜ್ಞಾತದ ಮಿಂಚಿಲ್ಲದೆ ಸಂಬಂಧಗಳೆಷ್ಟು ನೀರಸ ಊಹಿಸಿ. ಹೊಸ ಸ್ನೇಹ, ಪ್ರೀತಿ, ಪ್ರಣಯ, ಬಯಕೆ – ಎಲ್ಲವೂ ಅಜ್ಞಾತದ ಕುರಿತಾದ ಸೆಳೆತದಿಂದಲೇ ಉಂಟಾದ್ದು. ಅಷ್ಟೇ ಏಕೆ ಪ್ರಪಂಚವನ್ನೇ ತನ್ನ ಹಿಡಿತದಲ್ಲಿಟ್ಟುಕೊಳ್ಳ ಬಯಸುವ ವಿಜ್ಞಾನಕ್ಕೂ ಅಜ್ಞಾತದ ಸೆಳೆತವುಂಟು. ಅಂದ ಮೇಲೆ ಮನುಷ್ಯನ ಮೂಲಭೂತ ಆಕರ್ಷಣೆಗಳಲ್ಲಿ ಅಜ್ಞಾತವನ್ನು ಅನುಭವಿಸುವ ಪ್ರೇರಣೆಯೂ ಒಂದು ಎಂದರೆ ಸರಿಯಾಗುವುದೇನೋ. ಹಾಗಾಗಿ ಬದುಕು ಅದೆಷ್ಟೇ ಸುಂದರವಾಗಿದ್ದರೂ ಅದು ಕಲೆಯಾಗುವುದು, ನಮ್ಮ ವೈಯಕ್ತಿಕ ಕಥಾನಕಗಳನ್ನು ಮೀರಿ ಸಮಷ್ಟಿ ಅನುಭವವಾಗುವುದು, ನಮ್ಮೆಲರ ಎದೆಯಾಳದಲ್ಲಿ ಗುಪ್ತಗಾಮಿನಿಯಾಗಿರುವ ಈ ಅದೃಶ್ಯ ಲೋಕವೊಂದರ ಬಯಕೆಯನ್ನು ಉದ್ದೀಪಿಸುವ ಅಂಕವೊಂದನ್ನು ರಂಗದ ಮೇಲೆ ತಂದಾಗ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT