ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೀಲಾವತೀ ಕತೆಯಾಗದ ಹುಡುಗಿ

Last Updated 13 ಜೂನ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""
""

ಈ ಲೀಲಾವತೀ ಯಾರು? ಮಹಾನ್‌ ಗಣಿತಜ್ಞ ಭಾಸ್ಕರಾಚಾರ್ಯರ ಮಗಳೇ? ಹೆಂಡತಿಯೇ? ಗುರುಪುತ್ರಿಯೇ? ವಾಸ್ತವದಲ್ಲಿ ಲೀಲಾವತೀ ಎನ್ನುವ ಹೆಣ್ಣುಮಗಳು ಇರಲೇ ಇಲ್ಲ ಎಂದು ಹಲವರು ಸಾಕ್ಷಿಸಮೇತ ವಾದಿಸಿದರೂ ಈ ಲೀಲಾವತಿಯೊಂದು ರಮ್ಯ ಕಥೆಯಾಗಿ ಬೆಳೆಯುತ್ತಲೇ ಇರುವುದರ ಗುಟ್ಟೇನು?

ಲೀಲಾವತೀ ಎಂಬ ಹೆಸರು ಕೇಳಿದೊಡನೆಯೇ ನೆನಪಾಗುವುದು ಮಹಾನ್ ಗಣಿತಜ್ಞ ಮತ್ತು ಖಗೋಳಜ್ಞ ಭಾಸ್ಕರಾಚಾರ್ಯ. ಅವರು ರಚಿಸಿದ ಗಣಿತ ಗ್ರಂಥದ ಶೀರ್ಷಿಕೆಯೇ ಲೀಲಾವತೀ. ಆಹಾ! ಓದೋಣ ಎಂದು ಕೈಬೀಸಿ ಕರೆಯುವ ಆಕರ್ಷಕ ಹೆಸರು. ಸಾರಸ್ವತ ಲೋಕವನ್ನೂ ಸೆಳೆಯುವ ಕೃತಿ, ಈ ಗಣಿತಜ್ಞ ಅತ್ಯುತ್ತಮ ಕವಿಯೂ ಹೌದು ಎಂದು ರುಜುವಾತುಪಡಿಸುತ್ತದೆ.

ಲೀಲಾವತೀ ಎಂದೊಡನೆ ಹೀಗೊಂದು ಕತೆ ಎಲ್ಲರಿಗೂ ನೆನಪಾಗುತ್ತದೆ. ಆಕೆ ಭಾಸ್ಕರಾಚಾರ್ಯರ ಮಗಳು. ಆಕೆಯ ಜಾತಕಫಲ ವೈಧವ್ಯವನ್ನೇ ಸೂಚಿಸಿದ್ದರಿಂದ ಮರುಗಿದ ತಂದೆ ತನ್ನೆಲ್ಲಾ ಜ್ಞಾನವನ್ನೂ ಬಳಸಿ ಒಂದು ನಿರ್ದಿಷ್ಟ ಮುಹೂರ್ತವನ್ನು ಹುಡುಕಿದರು - ಅದು ವೈಧವ್ಯವನ್ನು ತಪ್ಪಿಸುವಂತಹದು. ನಿಖರವಾಗಿ ಕಾಲದ ಅಳತೆ ಮಾಡಲು ಗಳಿಗೆ ಬಟ್ಟಲನ್ನು ಅಣಿ ಮಾಡಿಕೊಂಡರು. ಈ ಪುಟ್ಟ ಬಾಲೆ ಅದನ್ನು ಕುತೂಹಲದಿಂದ ನೋಡುತ್ತಿದ್ದಾಗ ಮುತ್ತಿನಸರದ ಒಂದು ಮುತ್ತು ಕಳಚಿಕೊಂಡು ಬಟ್ಟಲಿನೊಳಗೆ ಬಿದ್ದು ನೀರಿನ ಓಟವನ್ನು ತಡೆಹಿಡಿಯಿತು. ಮುಹೂರ್ತ ಮೀರಿ ಹೋಯಿತು. ಮುಂದೆ ಆಕೆಗೆ ತಂದೆಯೇ ಗಣಿತವನ್ನು ಕಲಿಸಿಕೊಟ್ಟು ಆಕೆಯ ಹೆಸರನ್ನು ಅಮರವಾಗಿಸಲು ತನ್ನ ಗ್ರಂಥಕ್ಕೆ ಆಕೆಯ ಹೆಸರನ್ನೇ ಇಟ್ಟರು.

ಈ ಕತೆಯ ಮೂಲ ಎಲ್ಲಿಯದು ಎಂದು ಬಹಳಷ್ಟು ಜನ ತಲೆ ಕೆಡಿಸಿಕೊಂಡಿಲ್ಲ. ನಾಟಕಗಳು, ನೃತ್ಯರೂಪಕಗಳು ಹೀಗೆ ವಿವಿಧ ರೂಪಗಳಲ್ಲಿ ಅಭಿವ್ಯಕ್ತಿಗೊಂಡು ಇದು ಪ್ರತಿಯೊಬ್ಬರ ಮನದಲ್ಲೂ ಬೇರೂರಿಬಿಟ್ಟಿರುವ ಆಕರ್ಷಕ ಕತೆ. ಆಕೆಯನ್ನೂ ಮಹಾನ್ ಗಣಿತಜ್ಞೆ ಎಂದು ಬಿಂಬಿಸಿದವರುಂಟು. ಕೆಳವರ್ಗದವರಿಗೆ ಗಣಿತ ಕಲಿಸಬಾರದು ಮುಂತಾದ ಕಟ್ಟಳೆಗಳ ವಿರುದ್ಧ ಹೋರಾಟ ನಡೆಸಿದ ಕ್ರಾಂತಿಕಾರಿಯನ್ನಾಗಿ ಮಾಡಿದವರುಂಟು. ಯುವಭಾಸ್ಕರನನ್ನು ರೂಪಿಸಿ, ವಿಧವಾ ವಿವಾಹದ ವಿರುದ್ಧದ ಹೋರಾಟಕ್ಕೆ ತಯಾರಿಯನ್ನೂ ನಡೆಸಿದ ವಿವರಗಳನ್ನು ಈಚಿನ ಗ್ರಂಥದಲ್ಲಿ (ಎಡ್ನಾ ಕ್ರೇಮರ್) ಕಾಣಬಹುದು.

ನನಗೆ ಈ ಕತೆ ಮೊದಲು ಓದಲು ಸಿಕ್ಕಿದಾಗ ಸುಮಾರು 8-9ನೆಯ ತರಗತಿಯಲ್ಲಿದ್ದೆ. ಆಗ ಬೆಂಗಳೂರಿನ ವಿಲ್ಸನ್ ಗಾರ್ಡನ್‍ನಲ್ಲಿ ಕೆ.ಎಸ್. ನಾಗರಾಜನ್ ಎಂಬ ವಿದ್ವಾಂಸರಿದ್ದರು; ನನ್ನ ತಂದೆಯ ಸ್ನೇಹಿತರು. ಕೆಲವು ಭಾನುವಾರಗಳಂದು ಅವರ ಮನೆಗೆ ಹೋಗುತ್ತಿದ್ದೆ. ಅವರು ಲೀಲಾವತಿಯ ಶ್ಲೋಕಗಳಿಂದ ಅಂಕಗಣಿತದ ಲೆಕ್ಕಗಳನ್ನು ಮಾಡುವುದನ್ನು ಹೇಳಿಕೊಟ್ಟಿದ್ದರು. (ಮುಂದಿನ ಅಧ್ಯಾಯಗಳಾದ ತ್ರಿಕೋಣಮಿತಿ ಮುಂತಾದವುಗಳ ಪರಿಚಯವೇ ನನಗಿರಲಿಲ್ಲ). ಅವರು ಆಗ ಲೀಲಾವತೀಯನ್ನು ಕನ್ನಡಕ್ಕೆ ಅನುವಾದಿಸುತ್ತಿದ್ದರು. ಆ ಪುಸ್ತಕ ಮನೆಗೆ ಬಂದೊಡನೆ ಮೊದಲ ಅಧ್ಯಾಯವನ್ನು ಶ್ರದ್ಧೆಯಿಂದ ಓದಿದ್ದು ನನ್ನ ತಾಯಿ. ಅದರಿಂದ ಪ್ರಭಾವಿತರಾಗಿ ಅವರು ಆ ಕತೆಯ ಆಧಾರದ ಮೇಲೆ ‘ವಿಧಿಯಾಗಿ ಕಾಡಿತ್ತು ಮುತ್ತು’ ಎಂಬ ರೇಡಿಯೋ ನಾಟಕವನ್ನು ರಚಿಸಿದರು.

ಕತೆಯೋ ವಾಸ್ತವವೋ?
ಮುಂದೆ ಸುಮಾರು ದಶಕಗಳ ಕಾಲ ನಾನು ಈ ಕತೆಯ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಸಿದ್ಧಾಂತ ಶಿರೋಮಣಿಯಂತಹ ಗ್ರಂಥಗಳನ್ನು ಓದುವಾಗಲೂ ನನಗೆ ಈ ಕತೆಯ ಸತ್ಯಾಸತ್ಯತೆಯ ಬಗ್ಗೆ ಅನುಮಾನ ಬರಲಿಲ್ಲ. ಏಕೆಂದರೆ ಅಂದಿನ ಕಾಲದಲ್ಲಿ ಜ್ಯೋತಿಷ ಎಂದರೆ ಬಹುಶಃ ಫಲ ಜ್ಯೋತಿಷವೂ ಸೇರಿತ್ತು ಎಂದು ಭಾವಿಸಿದ್ದೆ. ಅಷ್ಟೇ ಏಕೆ? ವೇದಾಂತಿಗಳು ತತ್ವಶಾಸ್ತ್ರಜ್ಞರು ಕೂಡ ಗಣಿತ, ಜ್ಯೋತಿಷದಲ್ಲಿ ಪಾರಂಗತರೇ ಆಗಿರುತ್ತಿದ್ದರು. ಈಚೆಗೆ ಶ್ರೀರಾಮುಲ ರಾಜೇಶ್ವರ ಶರ್ಮ ಅವರ ಲೇಖನವೊಂದನ್ನು ಓದಿದಾಗ ಇದೊಂದು ಕಟ್ಟು ಕತೆ ಎಂದು ತಿಳಿಯಿತು. ನದಿ ಮೂಲವನ್ನು ಅರಸಿದಂತೆ ಈ ಕತೆಯ ಉಗಮವನ್ನು ಹುಡುಕಿದ ಅವರ ಪ್ರಯತ್ನ ತಿಳಿದು ಆಶ್ಚರ್ಯವಾಯಿತು.

ಭಾಸ್ಕರಾಚಾರ್ಯ ಮಹಾ ಮೇಧಾವಿ. ಆತ ಲೀಲಾವತೀ ಅಲ್ಲದೆ ಸಿದ್ಧಾಂತ ಶಿರೋಮಣಿ, ಕರಣ ಕುತೂಹಲ, ವಾಸನಾ ಭಾಷ್ಯ– ಈ ಕೃತಿಗಳನ್ನೂ ರಚಿಸಿದ್ದಾನೆ. ತನ್ನ ಹಿರಿಯರನ್ನು ನೆನೆಯುತ್ತಾ ತನ್ನ ಊರು ಬಿಜ್ಜಳಬೀಡು (ವಿಜಯಪುರದ ಸಮೀಪದ ಬಿಜ್ಜರಗಿ) ಎಂದು ತಿಳಿಸಿದ್ದಾನೆ. ತನ್ನ ವಯಸ್ಸನ್ನೂ ತಿಳಿಸಿದ್ದಾನೆ. ಬೇರೆ ಯಾವ ವೈಯಕ್ತಿಕ ವಿವರಗಳೂ ಸಿಗುವುದಿಲ್ಲ. ಆದರೆ ಈತನ ಮೊಮ್ಮಗ ಚಂಗದೇವ ಸ್ಥಾಪಿಸಿದ ಮಠವೊಂದಕ್ಕೆ ದತ್ತಿ ನೀಡಿದ ಶಾಸನ ಮಹಾರಾಷ್ಟ್ರದ ಪಾಟನದಲ್ಲಿ ದೊರೆತಿದೆ. ಅದರಲ್ಲಿ ಆತನ ವಂಶಾವಳಿಯೇ ಇದೆ. ಲಕ್ಷ್ಮೀಧರ ಎಂಬುದು ಮಗನ ಹೆಸರು ಎಂದು ತಿಳಿಯುತ್ತದೆ. ಮಗಳ ಹೆಸರಿಲ್ಲ. ಅಂದ ಮಾತ್ರಕ್ಕೆ ಮಗಳಿರಲಿಲ್ಲ ಎಂದು ಹೇಳುವಂತಿಲ್ಲ. ಅಂದಿನ ಸಮಾಜದಲ್ಲಿ ಮಗಳ ಸ್ಥಾನ ಏನಿರುತ್ತಿತ್ತು, ಆಕೆಯ ಹೆಸರನ್ನು ಶಾಸನದಲ್ಲಿ ಬರೆಯಿಸುವ ಪದ್ಧತಿ ಇತ್ತೇ ಎಂಬಂತಹ ಅನೇಕ ಪ್ರಶ್ನೆಗಳು ಏಳುತ್ತವೆ.

ಭಾರತದಾದ್ಯಂತ ಹರಡಿರುವ ಈ ಕತೆಯ ಹಲವು ರೂಪಗಳಲ್ಲಿ ಕೆಲವು ಮುಖ್ಯ ವ್ಯತ್ಯಾಸಗಳಿವೆ. ಮಗಳು ಎಂಬುದು ನಾವು ಕೇಳಿರುವ ಕತೆ, ಇದರಲ್ಲಿ ಆಕೆ ವಿಧವೆಯಾದಳು ಅಥವಾ ಕನ್ಯೆಯಾಗಿಯೇ ಉಳಿದಳು. ಆತನ ಹೆಂಡತಿ ಎಂಬುದು ಇನ್ನೊಂದು ಕತೆಯ ಸಾರ; ಮಕ್ಕಳು ಇರಲಿಲ್ಲವಾದ್ದರಿಂದ ಆಕೆಯ ಸಂತೋಷಕ್ಕಾಗಿ ಬರೆದ ಕೃತಿಯೇ ಲೀಲಾವತೀ. ಮೂರನೆಯದೊಂದು ಕತೆಯಲ್ಲಿ ಆಕೆ ಗುರುಪುತ್ರಿ. ಆಕೆಯ ಅನುರಕ್ತಿಗೆ ಭಾಸ್ಕರ ಸ್ಪಂದಿಸುವಂತಿರಲಿಲ್ಲ. ವರಿಸುವುದಂತೂ ಸಾಧ್ಯವೇ ಇರಲಿಲ್ಲ; ಅವಳ ಹೆಸರು ಪುಸ್ತಕದ ಶೀರ್ಷಿಕೆಯಾಯಿತು ಎಂಬುದು ಇನ್ನೊಂದು ರೂಪಾಂತರ.

ಆದರೆ ಇವು ಯಾವುದಕ್ಕೂ ಪುಷ್ಟಿ ಒದಗಿಸುವ ಅಂಶಗಳು ಸ್ವತಃ ಭಾಸ್ಕರಾಚಾರ್ಯನ ಕೃತಿಗಳಲ್ಲಿ ಇಲ್ಲ. ಸಮಕಾಲೀನ ಕೃತಿಗಳಲ್ಲಿಯೂ ಇಲ್ಲ. ಅನಂತರ ಸುಮಾರು 19ನೆಯ ಶತಮಾನದವರೆಗೂ ಪ್ರಕಟವಾದ ಹಲವಾರು ಅನುವಾದಗಳು, ಟೀಕಾ ಗ್ರಂಥಗಳಲ್ಲೂ ಇಲ್ಲ. ಇತ್ತೀಚೆಗೆ ಡಾ.ಎಂ.ಡಿ. ಶ್ರೀನಿವಾಸ್ ಅವರು ನಡೆಸಿರುವ ಸರ್ವೇಕ್ಷಣೆಯ ಪ್ರಕಾರ ಟೀಕಾ ಕೃತಿಗಳು, ವಿಮರ್ಶಾಗ್ರಂಥಗಳು, ಬೇರೆ ಬೇರೆ ಭಾಷೆಗಳಿಗೆ ಅನುವಾದಗಳು - (ಎಲ್ಲದರಲ್ಲೂ ಲೀಲಾವತೀಯದೇ ಮೊದಲ ಸ್ಥಾನ. ಒಟ್ಟು 18ಕ್ಕೂ ಹೆಚ್ಚು.) ಯಾವುದರಲ್ಲೂ ಇಲ್ಲ.

ವಾರಾಣಸಿಯ ಪಂಡಿತ ಸುಧಾಕರ್ ದ್ವಿವೇದಿ ಅವರು ಬ್ರಿಟಿಷರ ಹಾಗೂ ಸಾಂಪ್ರದಾಯಿಕ ಖಗೋಳ ಜ್ಞಾನಕ್ಕೆ ಸೇತುವಾಗಿ ಎರಡನ್ನೂ ಬೆಸೆದವರು. ನ್ಯೂಟನ್‌ಗಿಂತ ಮುಂಚೆಯೇ ಭಾರತದಲ್ಲಿ ಕ್ಯಾಲ್ಕುಲಸ್ (ಕಲನಶಾಸ್ತ್ರ) ಚಾಲ್ತಿಯಲ್ಲಿತ್ತು ಎಂದು ಪಾಶ್ಚಾತ್ಯರಿಗೆ ಮನದಟ್ಟು ಮಾಡಿಕೊಟ್ಟವರು. ಅವರು 1892ರಲ್ಲಿ ಕತೆಯ ಎರಡು ರೂಪಗಳನ್ನು ಪ್ರಕಟಿಸಿ ಅವು ಸತ್ಯವಲ್ಲ ಎಂದು ಸಾರಾ ಸಗಟಾಗಿ ತಿರಸ್ಕರಿಸಿದ್ದರೂ, ಅವು ಹೇಗೋ ಜನಪ್ರಿಯತೆ ಗಳಿಸುತ್ತಲೇ ಇದ್ದವು. 1922ರಲ್ಲಿ ಲೀಲಾವತೀಯ ಒಂದೊಂದು ಪದ್ಯವನ್ನೂ ಈ ದೃಷ್ಟಿಯಿಂದ ಅಧ್ಯಯನ ಮಾಡಿ, ಎಲ್ಲ ದಂತಕತೆಗಳನ್ನು ತಿರಸ್ಕರಿಸಿದ್ದವರು ಎಂ.ಡಿ. ಪಂಡಿತ್. ಏಕೆಂದರೆ (ದ್ವಿವೇದಿ ಅವರು ಸ್ಪಷ್ಟ ಪಡಿಸಿದ್ದರೂ) ಈ ಕತೆ ಭಾರತದಾದ್ಯಂತ ಪ್ರಚಲಿತವಾಗಿತ್ತು ಎಂದು ತೋರುತ್ತದೆ.

‘ಲೀಲಾವತೀ’ ಗ್ರಂಥದ ಪರ್ಷಿಯನ್ ಆವೃತ್ತಿಯಲ್ಲಿರುವ ಚಿತ್ರ. ವಧು–ವರರ ಮುಂದೆ ಗಳಿಗೆ ಬಟ್ಟಲನ್ನು ಗಮನಿಸಬಹುದು. ಸುಮಾರು 100 ವರ್ಷಗಳ ಹಿಂದೆ ಪ್ರಕಟವಾದ ಲೀಲಾವತೀ ಗ್ರಂಥದ ಎಲ್ಲ ಭಾಷೆಗಳ ಪುಸ್ತಕಗಳ ಮುಖಪುಟದ ಮೇಲೆ ಇಂತಹ ಚಿತ್ರಗಳೇ ಇರುತ್ತಿದ್ದವು.

ಭಾರತದಿಂದ ಭಾರತಕ್ಕೆ

ಈ ಕತೆಯ ಮೂಲವನ್ನು ಹುಡುಕುತ್ತಾ ಹೊರಟ ಎಸ್.ಆರ್. ಶರ್ಮರಿಗೆ ಸಿಕ್ಕಿದ್ದು 1816ರಲ್ಲಿ ಪ್ರಕಟವಾದ ಇಂಗ್ಲಿಷ್ ಅನುವಾದ. ಇದನ್ನು ರಚಿಸಿದ ಜಾನ್ ಟೇಲರ್ ಅವರಿಗೆ ದೊರಕಿದ ಆಧಾರಗ್ರಂಥ ಬಹಳ ಸುತ್ತಿ ಬಳಸಿ ಅವರ ಕೈ ಸೇರಿದೆ. 18ನೆಯ ಶತಮಾನದ ಆದಿಭಾಗದಲ್ಲಿ ಎಡ್ವರ್ಡ್ ಸ್ಟ್ರಾಷೆ ಎಂಬುವರು ಲೀಲಾವತೀ ಮತ್ತು ಬೀಜಗಣಿತದ ಪರ್ಷಿಯನ್ ಅನುವಾದವನ್ನು ಓದಿದ್ದರು. ಚಾರ್ಲ್ಸ್‌ ಹಟನ್ ಎಂಬ ಫ್ರೊಫೆಸರ್ ಅವರಿಗೆ ಅತಾ ಅಲ್ಲಾ ರಷ್ದಿ ಎಂಬುವರು ತಿಳಿಸಿದ್ದ ಸಾರಾಂಶವನ್ನು ಅವರು ವರದಿ ಮಾಡಿದ್ದರು. ಅದರಲ್ಲಿ ಈ ಕತೆ ಇತ್ತು. ಟೇಲರ್ ಅವರು ತಮ್ಮ ಮುನ್ನುಡಿಯಲ್ಲಿ ‘ಲೀಲಾವತೀ ಕುರಿತ ಈ ಕತೆಯನ್ನು ಯಾವ ಹಿಂದುವೂ ಒಪ್ಪಲಿಲ್ಲ; (ಈ ದೇಶದ) ಯಾವ ಗ್ರಂಥದಲ್ಲಿಯೂ ಇದರ ಉಲ್ಲೇಖ ಇಲ್ಲ’ ಎಂದು ಸ್ಪಷ್ಟವಾಗಿ ವಿವರಣೆ ಕೊಟ್ಟಿದ್ದರೂ ಈ ಕತೆಗೆ ಹೇಗೋ ಜೀವ ಸಿಕ್ಕಿತು.

ಶರ್ಮ ಅವರು ಮೂಲ ಪರ್ಷಿಯನ್ ಅನುವಾದಗಳನ್ನೇ ಹುಡುಕಿದರು.

17ನೆಯ ಶತಮಾನದ ಆದಿಭಾಗದಲ್ಲಿ ಮೊಘಲ್ ದೊರೆ ಅಕ್ಬರ್ ಸಂಸ್ಕೃತ ಗ್ರಂಥಗಳನ್ನು ಪರ್ಷಿಯನ್ ಭಾಷೆಗೆ ಅನುವಾದಿಸುವ ಯೋಜನೆಯನ್ನೇ ಆರಂಭಿಸಿದಾಗ ಮಹಾಭಾರತ, ರಾಮಾಯಣ, ಪಂಚತಂತ್ರ ಮುಂತಾದ ಗ್ರಂಥಗಳ ಜೊತೆಗೆ ಲೀಲಾವತಿಯೂ ಸೇರಿತು. ಯೋಜನೆ ಎಂಬ ಪದವನ್ನು ಬಳಸಿದ್ದಕ್ಕೆ ಕಾರಣವಿದೆ. ಸಂಸ್ಕೃತ ಮತ್ತು ಪರ್ಷಿಯನ್ ಎರಡೂ ಭಾಷೆಗಳಲ್ಲಿ ಪರಿಣತಿ ಇದ್ದವರು ಸಿಗುತ್ತಿರಲಿಲ್ಲ. ಆದ್ದರಿಂದ ಮಧ್ಯಂತರವಾಗಿ ಸಮಕಾಲೀನ ಹಿಂದಿಯಲ್ಲಿ ಸಾರಾಂಶ ಸಿದ್ಧ ಮಾಡಿಕೊಡುವವರ ಅಗತ್ಯವೂ ಇತ್ತು. ಇವರಲ್ಲಿ ಜೈನರೂ ಇದ್ದರು. (ಹೀಗೆ ಮಾಡಿದ್ದರಿಂದ ಸರಿಯಾದ ಅನುವಾದ ಆಗಲಿಲ್ಲ ಎಂಬುದು ಬೇರೆ ವಿಷಯ.)

ಹೀಗೆ ಸಾರಾಂಶವಾಗಿ ಸಿಕ್ಕಿದ್ದನ್ನು ಅಚ್ಚುಕಟ್ಟುಗೊಳಿಸಿ ಪದ್ಯಗಳು, ಉಪಮೆಗಳನ್ನು ಸೇರಿಸಿ ಸಾಹಿತ್ಯಕ ಮೌಲ್ಯ ಪಡೆಯುವಂತೆ ಮಾಡುತ್ತಿದ್ದವರು ಆಸ್ಥಾನದ ಕವಿಗಳು. ಲೀಲಾವತಿಯ ಪರ್ಷಿಯನ್ ಅವತರಣಿಕೆಯನ್ನು ಹೀಗೆ ಸಿದ್ಧಗೊಳಿಸಿದವನು ಅಬುಲ್ ಫೈಯದ್ ಫೈದಿ. ಅವನ ಅನುವಾದ ಮೂಲದಿಂದ ಬಹಳ ಭಿನ್ನವಾಗಿ ತಯಾರಾಗಿರುವುದನ್ನು ಜಾನ್ ಟೇಲರ್ ಗಮನಿಸಿ ‘ಅನುವಾದಕನು ಹೇಳಿದ್ದನ್ನು ತನಗೆ ತೋಚಿದಂತೆ ಅರ್ಥ ಮಾಡಿಕೊಂಡು ರಚಿಸಿರುವಂತಿದೆ’ ಎಂದು ಟಿಪ್ಪಣಿ ಬರೆದಿದ್ದಾನೆ.

ಹೀಗೆ ಭಾರತದಿಂದ ಪರ್ಷಿಯನ್ ಭಾಷೆಗೆ ಅನುವಾದಗೊಂಡು ಹೊರಗೆ ಹೋದ ಗಣಿತಗ್ರಂಥ ಪುನಃ ಇಂಗ್ಲಿಷ್‌ಗೆ ತರ್ಜುಮೆಯಾಗಿ ಭಾರತಕ್ಕೆ ಹಿಂದಿರುಗಿ ಬಂದಿತು. ಜೊತೆಗೆ ಒಂದಷ್ಟು ಮಾಲಿನ್ಯವನ್ನೂ ಅಂಟಿಸಿಕೊಂಡು ಬಂದಿತು ಎನ್ನೋಣವೇ?

ಕತೆಗಳ ಗೊಂದಲ
ಲೀಲಾವತಿಯ ಕತೆ ಫೈದಿಯ ಸೃಷ್ಟಿಯೇ? ಇದಕ್ಕೊಂದು ಕಾರಣವೂ ಇರಬೇಕಲ್ಲವೇ? ಇಲ್ಲಿ ಜೈನ ಕವಿ ಹೇಮವಿಜಯಗಣಿ ರಚಿಸಿದ ‘ಕಥಾರತ್ನಾಕರ’ ಎಂಬ ಗ್ರಂಥವು ಮುಖ್ಯ ಸುಳಿವು ಒದಗಿಸುತ್ತದೆ. (1911ರಲ್ಲಿ ಪ್ರಕಟವಾದ ಆವೃತ್ತಿ ಇಂಟರ್ನೆಟ್‌ನಲ್ಲಿ ಲಭ್ಯವಿದೆ). ವಿದ್ಯಾನಂದ ಎಂಬ ಜ್ಯೋತಿಷಿ ತನ್ನ ಮಗಳ ವೈಧವ್ಯವನ್ನು ತಪ್ಪಿಸಲು ಹೊರಟ. ಎಂಥ ವಿಘ್ನ ಬಂದರೂ ವೈಧವ್ಯ ಉಂಟಾಗದಂತಹ ಮುಹೂರ್ತವೊಂದಿದೆ ಎಂದು ಎಲ್ಲ ಗ್ರಂಥಗಳನ್ನೂ ಜೀರ್ಣಿಸಿ ಕಂಡುಹಿಡಿದ. ಅದೇ ಮುಹೂರ್ತಕ್ಕೆ ಮಗಳ ಮದುವೆಯನ್ನು ನಿಗದಿಪಡಿಸಿದ. ಗಳಿಗೆ ಬಟ್ಟಲನ್ನು ನೀರಿನಲ್ಲಿ ತೇಲಿಬಿಟ್ಟ.

ಇದು ಅಂದಿನ ದಿನಗಳಲ್ಲಿ ಪ್ರಚಲಿತವಿದ್ದ ಪದ್ಧತಿ. ಬೊಗಸೆ ಅಳತೆಯ ಬೋಗುಣಿ, ಅದಕ್ಕೆ ನಿರ್ದಿಷ್ಟ ದಪ್ಪದ ಚಿನ್ನದ ಸೂಜಿಯಿಂದ ತೂತು ಮಾಡಿರಬೇಕು. ಅಡುಗೆ ಮನೆಯ ಬಾಣಲಿಯ ಗಾತ್ರದ ಬೋಗುಣಿಯಲ್ಲಿ ನೀರು ತುಂಬಿಸಿ ಗಳಿಗೆ ಬಟ್ಟಲನ್ನು ಅದರಲ್ಲಿ ತೇಲಿ ಬಿಡಬೇಕು. ತೂತಿನಿಂದ ನೀರು ಒಳನುಗ್ಗಿ ಬಟ್ಟಲು ಮುಳುಗಲು ಬೇಕಾಗುವ ಅವಧಿಯೇ ಸಮಯದ ಅಳತೆ (ಸುಮಾರು 24 ನಿಮಿಷಗಳು). ಇಂತಹ ಗಳಿಗೆಬಟ್ಟಲು ಈಗಲೂ ಹಲವರ ಮನೆಯಲ್ಲಿದೆ. ಒಂದು ನಿರ್ದಿಷ್ಟ ಪಂಗಡದವರ ಮದುವೆಗಳಲ್ಲಿ ಈ ದಿನಗಳಲ್ಲಿಯೂ ಧಾರೆಯ ಮಂಟಪದಲ್ಲಿ ಈ ಬಟ್ಟಲನ್ನು ತಂದಿಟ್ಟು ನೀರಿನಲ್ಲಿ ಮುಳುಗಿಸಿ ತೆಗೆದುಕೊಂಡು ಹೋಗುವ ಶಿಷ್ಟಾಚಾರ (ಏಕೆ ಎಂದು ಗೊತ್ತಿಲ್ಲದಿದ್ದರೂ) ನಡೆಸಿಕೊಂಡು ಬರಲಾಗಿದೆ ಎಂದು ವಿ.ಎಸ್.ಎಸ್. ಶಾಸ್ತ್ರಿ ಅವರು ಗಮನಿಸಿದ್ದಾರೆ.

ಕತೆಯನ್ನು ಮುಂದುವರೆಸೋಣ. ವಿದ್ಯಾನಂದ ತದೇಕಚಿತ್ತದಿಂದ ಪಲವೃತ್ತಗಳನ್ನು ಹೇಳುತ್ತಾ ಗಳಿಗೆ ಬಟ್ಟಲನ್ನೇ ನೋಡುತ್ತಾ ಕುಳಿತ. ಪಲವೃತ್ತಗಳೆಂದರೆ ಅರುವತ್ತು ಮಾತ್ರೆಗಳಿರುವ ಶ್ಲೋಕಗಳು. ಒಂದೊಂದು ಮಾತ್ರೆಗೆ 24 ಸೆಕೆಂಡುಗಳು; ಅಂದರೆ ಒಂದು ಶ್ಲೋಕ ಮುಗಿಯಲು 24 ನಿಮಿಷಗಳ ಅವಧಿ. ಗಳಿಗೆಯ ಮಧ್ಯಾವಧಿಗಳ ಲೆಕ್ಕ ಮಾಡಲು ಈ ಶ್ಲೋಕಗಳನ್ನು ಹೇಳುವುದು ವಾಡಿಕೆ. ಶ್ಲೋಕಗಳು ಮುಗಿದವು, ಆದರೆ ಬಟ್ಟಲು ನೀರಿನಲ್ಲಿ ಮುಳುಗಲೇ ಇಲ್ಲ. ಏಕೆ ಗೊತ್ತೇ? ಅವನು ಹಣೆಗೆ ಗಂಧವನ್ನು ಲೇಪಿಸಿ ಅದರ ಮೇಲೆ ಅಕ್ಕಿಕಾಳುಗಳನ್ನು ಧರಿಸಿಕೊಂಡಿದ್ದನಷ್ಟೇ; ಅದರಲ್ಲಿ ಒಂದು ಕಾಳು ಬಟ್ಟಲೊಳಗೆ ಬಿದ್ದು ತೂತನ್ನು ಮುಚ್ಚಿ ಮುಹೂರ್ತವನ್ನು ತಪ್ಪಿಸಿತು. ಈ ಸಂದರ್ಭವನ್ನು ಫೈದಿ ಬಹಳ ಮಾರ್ಮಿಕವಾಗಿ ನಿರೂಪಿಸಿದ್ದಾನೆ. ‘ಪ್ರೀತಿಯ ಮಗಳು ಮುಗುಳ್ನಗುತ್ತಿದ್ದರೆ ತಂದೆಯ ಕಣ್ಣಂಚಿನಲ್ಲಿ ಮುತ್ತುಗಳು (ಹತಾಶೆಯ ಕಣ್ಣೀರು)’ ಈ ಕತೆಯ ಮೂಲ ಉದ್ದೇಶ ವಿಧಿಯ ಬರಹವನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ನಿರೂಪಿಸುವುದಷ್ಟೇ ಆಗಿತ್ತು.ಇದಾದ ನಂತರ ತಂದೆ ಮಗಳಿಗೆ ಹೇಳುವ ಮಾತು ‘ನಿನ್ನ ಹೆಸರಿನದೇ ಒಂದು ಪುಸ್ತಕ ಬರೆಯುತ್ತೇನೆ. ಅದು ಅಪಾರ ಕೀರ್ತಿ ಪಡೆಯುತ್ತದೆ; ಅದರಿಂದ ನಿನಗೊಂದು ಪುನರ್ಜನ್ಮ ಮತ್ತು ಅಮರತ್ವ ಕೂಡ ದೊರೆಯುತ್ತದೆ.’

ತರ್ಕವೂ ಇಲ್ಲ
ಈ ಕತೆಯ ವಿವರಗಳೇ ಲೀಲಾವತಿಯೊಳಗೆ ನುಸುಳಿವೆ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ ಹಾಗೆ ಮಾಡಬೇಕೆಂದು ಫೈದಿಗೆ ಅನಿಸಿದ್ದೇಕೆ? ಲೀಲಾವತಿ ಎಂಬ ಹೆಸರೇ ಕಾರಣವಿರಬಹುದು. ಅಲ್ ಬಿರೂನಿ ಎಂಬ ಯಾತ್ರಿಕ ಗಮನಿಸಿದ್ದೂ ಇದನ್ನೇ - ಈ ಕಠಿಣ ಪುಸ್ತಕಗಳಿಗೆ ಇಷ್ಟು ಚಂದದ ಹೆಸರೇಕೆ? ಬ್ರಹ್ಮಗುಪ್ತನ ಗಣಿತದ ಪುಸ್ತಕದ ಹೆಸರು ಖಂಡಖಾದ್ಯಕ - ಸಿಹಿಯಾದ ಕಬ್ಬು. ಕಾಶ್ಮೀರದ ಚರಿತ್ರೆಯ ಪುಸ್ತಕದ ಹೆಸರು ರಾಜತರಂಗಿಣಿ. ಅಂದ ಮಾತ್ರಕ್ಕೆ ತರಂಗಿಣಿ ಎಂಬ ಪತಿಯನ್ನೋ ಪ್ರೇಯಸಿಯನ್ನೋ ಕಲ್ಹಣನಿಗೆ ಸೃಷ್ಟಿಸಬಹುದೇ?

ಚಿಕ್ಕ ಮಕ್ಕಳಿಗೆ ರಾಮಾಯಣ, ಮಹಾಭಾರತ ಮುಂತಾದ ಕತೆಗಳನ್ನು ಹೇಳಿ, ಅವು ತೊದಲ್ನುಡಿಯಲ್ಲಿ ಅದೇ ಕತೆ ಹೇಳುವಾಗ ಉಂಟಾಗುವ ಗೊಂದಲಗಳನ್ನು ನಾವು ಕೇಳಿಯೇ ಇದ್ದೇವೆ - ಹನುಮಂತನು ಲಾಕ್ಷಾಗೃಹಕ್ಕೆ ಬೆಂಕಿ ಇಡಬಹುದು, ಭೀಮ ಸಂಜೀವಿನಿಯನ್ನು ಹೊತ್ತೊಯ್ಯಬಹುದು, ಕೃಷ್ಣ ಸಿಂಹಿಕೆಯ ಬಾಯಿಯನ್ನು ಹೊಕ್ಕು ಪಾರಾಗಬಹುದು. ಇವನ್ನೆಲ್ಲಾ ನಾವು ಲಘು ಹಾಸ್ಯವಾಗಿ ಸ್ವೀಕರಿಸುತ್ತೇವೆ. ನಮ್ಮ ಪುರಾಣದ ಕತೆಗಳನ್ನು ಪಾಶ್ಚಾತ್ಯರು ಅನುವಾದ ಮಾಡಿದಾಗಲೂ ಇಂತಹ ಗೊಂದಲಗಳು ಆಗುತ್ತವೆ. ರಾಧೆ ಶಿವನ ಹೆಂಡತಿಯಾಗುತ್ತಾಳೆ. ಬಹುಶಃ ಫೈದಿಯೂ ಹೀಗೆಯೇ ಎಡವಟ್ಟು ಮಾಡಿಕೊಂಡಿರಬೇಕು ಎಂದುಕೊಂಡು ಅದನ್ನು ಅಲ್ಲಿಯೇ ಬಿಟ್ಟರೆ ಒಳ್ಳೆಯದಲ್ಲವೇ?

ಇದು ಕಾವ್ಯವೂ ಹೌದು!
ಲೀಲಾವತಿಯನ್ನು ಕಾವ್ಯದಂತೆಯೂ ಓದಿಕೊಂಡು ಹೋಗಬಹುದು. ಆದ್ದರಿಂದಲೇ ಭಾಸ್ಕರಾಚಾರ್ಯರನ್ನು ಅತ್ಯುತ್ತಮ ಕವಿ ಎಂದೇ ಪರಿಗಣಿಸಲಾಗಿದೆ. ಎಲ್ಲಾ ಶ್ಲೋಕಗಳಲ್ಲಿರುವ ಲಾಲಿತ್ಯವನ್ನೂ ದ್ವಿರುಕ್ತಿಗಳನ್ನೂ ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. ಗಣಿತ ಬಲ್ಲದವರಿಗೆ ಮತ್ತು ಬಲ್ಲವರಿಗೆ ಬೇರೆ ಬೇರೆ ಅರ್ಥಗಳನ್ನು ಕೊಡುವ ಈ ಶ್ಲೋಕವನ್ನು ನೋಡಿ–

ಯೇಷಾಂ ಸುಜಾತಿ ಗುಣವರ್ಗವಿಭೂಷಿತಾಂಗೀ
ಶುದ್ಧಾ ಅಖಿಲ ವ್ಯವಹೃತಿಃ ಖಲು ಕಂಠಸಕ್ತಾ
ಲೀಲಾವತೀಹ ಸರಸೋಕ್ತಿಮುದಾಹರಂತೀ
ತೇಷಾಂ ಸದೈವ ಸುಖಸಂಪದುಪೈತಿ ವೃದ್ಧಿಮ್

{ಒಳ್ಳೆಯ ಜಾತಿ, ಗುಣವರ್ಗಗಳಿಂದ ವಿಭೂಷಿತಳಾದ ಅಂಗಗಳುಳ್ಳವಳೂ, ವ್ಯವಹಾರಗಳಲ್ಲಿ ಶುದ್ಧಳಾದವಳೂ, ಸರಸೋಕ್ತಿಗಳ ಉದಾಹರಣೆಗಳುಳ್ಳವಳೂ (ಸಲ್ಲಾಪ ಗೈಯುವವಳೂ), ಆದ ಲೀಲಾವತಿಯು ಯಾವನ ಕೊರಳನ್ನು ಅಲಂಕರಿಸುತ್ತಾಳೋ ಅವನ ಸುಖ ಸಂಪತ್ತುಗಳು ಯಾವಾಗಲೂ ವೃದ್ಧಿಸುತ್ತವೆ.

ಒಂದೇ ಭಾಜಕವಿರುವ ಭಿನ್ನರಾಶಿಗಳು (ಸುಜಾತಿ), ಗುಣಾಕಾರ (ಗುಣ), ವರ್ಗ (ವಿಧಾನ), ತಪ್ಪಿಲ್ಲದ ವ್ಯವಹಾರ ಗಣಿತ, ಸರಸವಾದ ಉಕ್ತಿಗಳ ಉದಾಹರಣೆಗಳು - ಈ ಎಲ್ಲ ಅಂಗಗಳನ್ನು (ಅಧ್ಯಾಯಗಳನ್ನು) ಒಳಗೊಂಡ ಲೀಲಾವತಿ ಯಾವನ ಕಂಠಸಕ್ತವಾಗುವುದೋ, (ಪರಿಣತಿ ಪಡೆಯುವನೋ) ಅವನ ಸುಖ ಸಂಪತ್ತುಗಳು ಯಾವಾಗಲೂ ವೃದ್ಧಿಸುತ್ತವೆ.}

ಕವಿ ಭಾಸ್ಕರಾಚಾರ್ಯ
ಯಾವುದೇ ಗಣಿತ ಅಥವಾ ಖಗೋಳ ಗೋಷ್ಠಿಗಳು, ಸಮ್ಮೇಳನಗಳು ನಡೆದಾಗ ಭಾಸ್ಕರಾಚಾರ್ಯರ ಪ್ರಸ್ತಾಪವಿಲ್ಲದೆ ಮುಂದುವರೆಯುವುದು ಸಾಧ್ಯವೇ ಇಲ್ಲ. ಆದರೆ ಎಲ್ಲೂ ಈ ಕತೆಯ ಬಗ್ಗೆ ಚರ್ಚೆ ಇರಲಿ ಪ್ರಸ್ತಾಪವೇ ಬರುವುದಿಲ್ಲ. ಏಕೆಂದರೆ ಆತನ ಗ್ರಂಥಗಳಲ್ಲಿ ಇದರ ಉಲ್ಲೇಖ ಇಲ್ಲ. ಆದರೂ 2014ರಲ್ಲಿ ಭಾಸ್ಕರಾಚಾರ್ಯರ 900ನೆಯ ಜನ್ಮ ಶತಾಬ್ದಿಯನ್ನು ಆಚರಿಸಿದಾಗ ಎಸ್.ಆರ್. ಶರ್ಮ ಅವರು ತಮ್ಮ ಹುಡುಕಾಟವನ್ನೂ ಅನಿಸಿಕೆಯನ್ನೂ ವ್ಯಕ್ತಪಡಿಸಿ ಆಧಾರಗಳನ್ನೂ ಪ್ರಕಟಿಸಿದರು. ಅದು ಮುಗಿದ ಅಧ್ಯಾಯ. ಲೀಲಾವತಿ ಕತೆಯಾಗಲೊಲ್ಲಳು ಎಂದು ತೀರ್ಮಾನಿಸಿದ್ದಾಯಿತು.

ಆದರೂ...? ಎಂಬ ಪ್ರಶ್ನೆ ಕಾಡಿತೇ?
ಈ ಉದಾಹರಣೆಯನ್ನು ನೋಡಿ. ತಂದೆ ಮಗಳಿಗೆ ಹೀಗೆ ಕಾಂತೇ ಎಂದು ಕರೆದಿರಬಹುದೇ? ಆಲೋಚಿಸಿ.
ಅಲಿಕುಲದಲಮೂಲಂ ಮಾಲತೀಂ ಯಾತಿಮಷ್ಟೌ
ನಿಖಿಲನವಮಭಾಗಾಶ್ಚಾಲಿನೀ ಭೃಂಗಮೇಕಮ್
ನಿಶಿ ಪರಿಮಲಲುಬ್ಧಂ ಪದ್ಮ ಮಧ್ಯೇ ನಿರುದ್ಧಂ
ಪ್ರತಿರಣತಿ ರಣಂತಂ ಬ್ರೂಹಿ ಕಾಂತೇ ಅಲಿಸಂಖ್ಯಾಮ್.

(ಒಟ್ಟು ಸಂಖ್ಯೆಯ ಅರ್ಧದ ವರ್ಗಮೂಲದ ಜೊತೆಗೆ ಒಂಬತ್ತರಲ್ಲಿ ಎಂಟು ಭಾಗದಷ್ಟು ದುಂಬಿಗಳು ಮಾಲತೀ ವೃಕ್ಷಕ್ಕೆ ಹೊರಟವು. ಪದ್ಮದ ಪರಿಮಳಕ್ಕೆ ಮನಸೋತು ಅದರಲ್ಲಿ ರಾತ್ರಿ ಬಂದಿಯಾಗಿ ಗುಯ್‍ಗುಟ್ಟತ್ತಿರುವ ದುಂಬಿಗೆ ಇನ್ನೊಂದು ಹೆಣ್ಣು ದುಂಬಿಯೂ ಉತ್ತರರೂಪವಾಗಿ ಗುಯ್‍ಗುಡುತ್ತಿದೆ. ಕಾಂತೇ, ಒಟ್ಟು ದುಂಬಿಗಳ ಸಂಖ್ಯೆಯನ್ನು ಹೇಳು.)

ಇನ್ನೊಂದು ಲೀಲಾವತಿ
ಲೀಲಾವತಿ ಎಂಬ ಹೆಸರಿನ ಇನ್ನೊಂದು ಗಣಿತ ಗ್ರಂಥ ಇದೆ. ಇದು ಕನ್ನಡದ ಗ್ರಂಥ. ಇದನ್ನು ರಚಿಸಿದ ರಾಜಾದಿತ್ಯ ಸುಮಾರು 12ನೆಯ ಶತಮಾನದವನೇ ಆದದ್ದರಿಂದ ಭಾಸ್ಕರಾಚಾರ್ಯರ ಸಮಕಾಲೀನರೇ ಎಂದಾಯಿತು. ಈ ಗ್ರಂಥದ ವ್ಯಾಖ್ಯಾನ ಮತ್ತು ಇಂಗ್ಲಿಷ್ ಅನುವಾದವನ್ನು ಮೈಸೂರಿನ ಡಾ. ಪದ್ಮಾವತಮ್ಮ ಮತ್ತು ತಂಡದವರು ಕೆಲವು ವರ್ಷಗಳ ಹಿಂದೆ (2013) ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT