ಜೀವನಮೀಮಾಂಸೆಯೇ ತತ್ತ್ವಜ್ಞಾನದ ಮೂಲ

7

ಜೀವನಮೀಮಾಂಸೆಯೇ ತತ್ತ್ವಜ್ಞಾನದ ಮೂಲ

Published:
Updated:

ಎಷ್ಟೋ ಸಲ ನಾವು ಅಂದುಕೊಳ್ಳುತ್ತಿರುತ್ತೇವೆ: ‘ನಮ್ಮನ್ನು ಅವರು ಕಷ್ಟದ ಕಾಲದಲ್ಲಿ ಕೈಹಿಡಿಯಲಿಲ್ಲ’. ಹೌದು, ನಾವು ಕಷ್ಟದಲ್ಲಿ ಸಿಲುಕಿರುವಾಗ ನಮ್ಮನ್ನು ಆ ಪರಿಸ್ಥಿತಿಯಿಂದ ನಮ್ಮ ಬಂಧುಗಳು, ಸ್ನೇಹಿತರು ರಕ್ಷಿಸಬೇಕು; ಅವರು ಸಹಾಯಕ್ಕೆ ಧಾವಿಸಬೇಕು – ಎಂದು ಯೋಚಿಸುವುದು ಸಹಜವೆನ್ನಿ! ಆದರೆ ಹೀಗೆ ಯಾರಾದರೂ ನಮ್ಮನ್ನು ನಿಜವಾಗಿಯೂ ರಕ್ಷಿಸಬಹುದೆ? ‘ಭೋಜಪ್ರಬಂಧ’ದ ಪದ್ಯವೊಂದನ್ನು ಇಲ್ಲಿ ಉಲ್ಲೇಖಿಸಬಹುದು:

‘ರಾಮೇ ಪ್ರವ್ರಜನಂ ಬಲೇರ್ನಿಯಮನಂ ಪಾಂಡೋಃ ಸುತಾನಾಂ ವನಂ
ವೃಷ್ಣೀನಾಂ ನಿಧನಂ ನಲಸ್ಯ ನೃಪತೇ ರಾಜ್ಯಾತ್‌ ಪರಿಭ್ರಂಶನಂ ।
ಕರಾಗಾರನಿವೇಷಣಂ ಚ ಮರಣಂ ಸಂಚಿಂತ್ಯ ಲಂಕೇಶ್ವರೇ
ಸರ್ವಃ ಕಾಲವಶೇನ ಸಶ್ಯತಿ ನಃ ಕೋ ವಾ ಪರಿತ್ರಾಯತೇ ।।

‘ರಾಮನು ಅರಣ್ಯಕ್ಕೆ ಹೋದನು. ಬಲಿಯು ಪಾತಾಳಕ್ಕೆ ತುಳಿಯಲ್ಪಟ್ಟನು. ಪಾಂಡವರು ಅರಣ್ಯದಲ್ಲಿ ಕಾಲ ಕಳೆಯಬೇಕಾಯಿತು. ಯಾದವರು ಪರಸ್ಪರ ಹೊಡೆದಾಡಿ ಸತ್ತರು. ನಳನು ರಾಜ್ಯವನ್ನು ಕಳೆದುಕೊಂಡ. ಲಂಕೇಶ್ವರನಾದ ರಾವಣನು ಸೆರೆಮನೆಯಲ್ಲಿರಬೇಕಾಯಿತು; ಕೊನೆಗೆ ಅವನು ಸತ್ತೂ ಹೋದನು. ಇವೆಲ್ಲವನ್ನೂ ಗಂಭೀರವಾಗಿ ಯೋಚಿಸಿದರೆ ಎಲ್ಲರೂ ಕಾಲಾಧೀನರಾಗಿ ನಾಶವಾಗುತ್ತಾರೆ. ಯಾರನ್ನು ಯಾರೂ ಕಾಪಾಡಲಾರರು.’

ರಾಮ, ಬಲಿ, ಪಾಂಡವರು, ನಳ, ರಾವಣ – ಇವರೆಲ್ಲರ ಕಥೆಯೂ ನಮಗೆ ಗೊತ್ತಿದೆ. ಇವರೆಲ್ಲರೂ ಕಷ್ಟಪರಂಪರೆಯನ್ನು ಅನುಭವಿಸಿದವರೇ. ಆದರೆ ಅವರು ಪಟ್ಟ ಕಷ್ಟಗಳ ಕಾರಣಗಳಲ್ಲಿ ವ್ಯತ್ಯಾಸವಿದೆ. ಕೆಲವರು ಬೇರೆಯವರ ಕಾರಣದಿಂದ ಕಷ್ಟಗಳನ್ನು ಅನುಭವಿಸಿದವರು; ಇನ್ನು ಕೆಲವರು ತಾವೇ ಮಾಡಿ ತಪ್ಪುಗಳಿಂದ ಅನುಭವಿಸಿದವರು. ಹೀಗಿದ್ದರೂ ಇವರೆಲ್ಲರೂ ಕಷ್ಟಗಳನ್ನು ಅನುಭವಿಸಿದರು. ಈ ಕಷ್ಟಗಳಿಂದ ಅವರನ್ನು ಯಾರೂ ತಪ್ಪಿಸಲು ಆಗಲಿಲ್ಲ. ಇಲ್ಲೂ ಕಾರಣಗಳು ಬೇರೆ ಬೇರೆ. ರಾಮನಂಥವರು ಧರ್ಮಕ್ಕೆ ಕಟ್ಟುಬಿದ್ದು ಕಷ್ಟಗಳನ್ನು ತಂದುಕೊಂಡರು; ನಳನಂಥವನಿಗೆ ವಿಧಿ ಆಟ ಆಡಿಸಿತು; ರಾವಣನಂಥವರು ತಾವಾಗಿಯೇ ಕಷ್ಟಗಳನ್ನು ತಂದುಕೊಂಡರು. ಇದೂ ಹೇಗಾದಿರಲಿ, ಇವರೆಲ್ಲರೂ ಕಷ್ಟಗಳನ್ನು ಅನಿಭವಿಸಿದ್ದು ಮಾತ್ರ ದಿಟ.

ಮೇಲಣ ಪದ್ಯ ನಮ್ಮಲ್ಲಿ ಭಯವನ್ನು ಹುಟ್ಟಿಸಲು ಹೊರಟಿಲ್ಲ; ಬದುಕಿನ ವಾಸ್ತವವನ್ನು ಹೇಳಲು ಹೊರಟಿದೆ. ನಮ್ಮ ಜೀವನವನ್ನು ನಮಗೆ ಗೊತ್ತಿರುವ ಜಗತ್ತು–ವಸ್ತುಗಳು–ಮನುಷ್ಯರು ನಿಯಂತ್ರಿಸುತ್ತಿರುತ್ತದೆ ಎಂದು ಭಾವಿಸುತ್ತೇವೆ. ಆದರೆ ನಮಗೆ ಕಾಣದ ವಿವರಗಳೂ ನಮ್ಮ ಜೀವನವನ್ನು ನಡೆಸುತ್ತಿರುತ್ತದೆ ಎನ್ನುವುದನ್ನು ಮರೆತುಬಿಡುತ್ತೇವೆ; ನಿತ್ಯವೂ ಇದು ನಮ್ಮ ಗಮನಕ್ಕೆ ಬರುತ್ತಿರುತ್ತದೆ; ಆದರೆ ನಾವು ಮರೆತುಬಿಡುತ್ತೇವೆ. ಹೀಗೆ ನಮಗೆ ಗೊತ್ತಿಲ್ಲದ ಎಲ್ಲ ವಿವರಗಳ ಸಂಕೇತವಾಗಿ ‘ಕಾಲ’ವನ್ನು ಇಲ್ಲಿ ಸೂಚಿಸಲಾಗಿದೆಯಷ್ಟೆ!

ಜೀವನದಲ್ಲಿ ನಮಗೆ ಸುಖವಿದ್ದಾಗ, ಅದನ್ನು ಶಾಶ್ವತ ಎಂದು ಅಂದುಕೊಳ್ಳುತ್ತೇವೆ; ಅಥವಾ ಅದು ಶಾಶ್ವತವಾಗಿರಲಿ ಎಂದು ಹಂಬಲಿಸುತ್ತೇವೆ. ಹೀಗೆಯೇ ಕಷ್ಟಗಳು ಎದುರಾದಾಗ, ಅವು ಶಾಶ್ವತವಾಗಿರುತ್ತವೆ ಎಂದು ಅವಕ್ಕೆ ಹೆದರುತ್ತೇವೆ; ಅವು ಶಾಶ್ವತವಾಗಿರುವುದು ಬೇಡ ಎಂದು ಪ್ರಾರ್ಥಿಸುತ್ತೇವೆ. ಆದರೆ ಯೋಚಿಸಿ ನೋಡಿದಾಗ, ಸುಖವಾಗಲೀ ದುಃಖವಾಗಲೀ ಶಾಶ್ವತವಲ್ಲ; ಎರಡೂ ಸುತ್ತತ್ತಲೇ ಇರುತ್ತವೆ. ನಮಗೆ ಚೆನ್ನಾಗಿರುವುದೆಲ್ಲ ಎಂದೆಂದಿಗೂ ನಮ್ಮಲ್ಲಿಯೇ ಉಳಿಯಲಿ ಎಂದು ಬಯಸುವುದು ಸಹಜವೇ. ಇದನ್ನು ಕುರಿತು ಭರ್ತೃಹರಿಯ ‘ವೈರಾಗ್ಯಶತಕ’ದ ಪದ್ಯವೊಂದು ವಿಚಾರಾರ್ಹವಾಗಿದೆ:

ರಮ್ಯಾಶ್ಚಂದ್ರಮರೀಚಯಸ್ತೃಣವತೀ ರಮ್ಯಾ ವನಾಂತಸ್ಥಲೀ
ರಮ್ಯಂ ಸಾಧುಸಮಾಗಮೋದ್ಭವಸುಖಂ ಕಾವ್ಯೇಷು ರಮ್ಯಾಃ ಕಥಾಃ ।
ಕೋಪೋಪಾಹಿತಬಾಷ್ಪಬಿಂದುತರಳಂ ರಮ್ಯಂ ಪ್ರಿಯಾಯಾ ಮುಖಂ
ಸರ್ವಂ ರಮ್ಯಮನಿತ್ಯತಾಮುಪಗತೇ ಚಿತ್ತೇ ನ ಕಿಂಚಿತ್ಪುನಃ ।।

ಇದರ ತಾತ್ಪರ್ಯ: ‘ಚಂದ್ರನ ಕಿರಣಗಳು ಸುಂದರವಾಗಿವೆ. ಹಸುರುಹುಲ್ಲಿನಿಂದ ಕೂಡಿದ ಅರಣ್ಯಪ್ರದೇಶ ಬಹು ಸೊಗಸು. ಸಾಧುಗಳ ಆಗಮನದಿಂದ ಉಂಟಾಗುವ ಸುಖ ಬಹಳ ಚೆನ್ನಾಗಿರುತ್ತದೆ. ಕಾವ್ಯಗಳಲ್ಲಿ ಕಥೆಗಳು ಸೊಗಸು. ಕೋಪಿಸಿಕೊಂಡ ಪ್ರಿಯಳ ಕಣ್ಣೀರಿನಿಂದ ಚಂಚಲವಾದ ಮುಖ ಬಹಳ ರಮಣೀಯ. ಆದರೆ ಇವೆಲ್ಲವೂ ಶಾಶ್ವತವಲ್ಲ ಎಂದು ಅರಿತ ಮನಸ್ಸಿನಲ್ಲಿ ಯಾವುದೂ ಸುಖವಲ್ಲ.’

ಸುಂದರವಾಗಿರುವುದೂ ಶಾಶ್ವತವಲ್ಲ; ಕುರೂಪವಾಗಿರುವುದೂ ಶಾಶ್ವತವಲ್ಲ. ಇದನ್ನು ನಾವು ತಿಳಿದುಕೊಳ್ಳಬೇಕು. ಈ ಸತ್ಯವನ್ನು ತಿಳಿದುಕೊಂಡರೆ ಆಗ ನಾವು ಸೌಂದರ್ಯವನ್ನೂ ಕುರೂಪವನ್ನೂ ಒಂದೇ ರೀತಿಯಲ್ಲಿ, ಸುಖವನ್ನೂ ಸುಃಖವನ್ನೂ ಒಂದೇ ವಿಧದಲ್ಲಿ ‘ದೃಷ್ಟಿ’ಸಲು ಸಾಧ್ಯವಾದೀತು.

ಇಲ್ಲೊಂದು ಪ್ರಶ್ನೆ ಎದುರಾಗುತ್ತದೆ. ಸೌಂದರ್ಯ ಎನ್ನುವುದು ಇಲ್ಲವೆ? ಅದನ್ನು ಕಂಡು ಸಂತೋಷ ಪಡುವುದು ತಪ್ಪೇ? ಸುಖ ಎನ್ನುವುದು ಅನುಭವಕ್ಕೆ ಬರುತ್ತದೆಯಲ್ಲ? ಅದನ್ನು ಇಲ್ಲ ಎಂದು ಹೇಗೆ ಒಪ್ಪುವುದು?

ಈ ಪ್ರಶ್ನೆಗಳ ಸಹಜವೇ ಹೌದು. ಸೌಂದರ್ಯವನ್ನಾಗಲೀ ಸುಖವನ್ನಾಗಲೀ ಇಲ್ಲಿ ನಿರಾಕರಿಸುತ್ತಿಲ್ಲ; ಅವು ಎಂದಿಗೂ ಇರುವಂಥ ವಿವರಗಳಲ್ಲ ಎನ್ನುವುದಷ್ಟೆ ಇಲ್ಲಿಯ ನಿಲುವು. ಹೀಗಾಗಿ ನಾವು ನಮ್ಮ ಸುಖಕ್ಕಾಗಲೀ ದುಃಖಕ್ಕಾಗಲೀ ಬೇರೊಬ್ಬರನ್ನು ಕಾರಣವನ್ನಾಗಿಸುವುದರಲ್ಲಿ ಅರ್ಥವಿರದು. ಅವು ನಮ್ಮ ಜೀವನದ ಕ್ರಮವೇ ಈ ಚಕ್ರದಲ್ಲಿ ಬಂಧಿಯಾಗಿದೆ. ನಮ್ಮ ಸುಖವನ್ನೂ ದುಃಖವನ್ನೂ ಕಾಲ ನಾಶ ಮಾಡುತ್ತದೆ ಎನ್ನುವುದನ್ನು ಮರೆಯವಂತಿಲ್ಲ. ಈ ತಿಳಿವಳಿಕೆಯಿಂದ ಏನು ಪ್ರಯೋಜನ – ಎಂಬ ಪ್ರಶ್ನೆಯೂ ಇಲ್ಲಿ ಎದುರಾಗಬಹುದು. ಇದಕ್ಕೆ ಉತ್ತರ ಸುಲಭ: ಸುಖ–ದುಃಖಗಳು ಶಾಶ್ವತ ಅಲ್ಲ ಎಂಬುದನ್ನು ನಾವು ಅನುಭವಿಸಿ, ಒಪ್ಪಿಕೊಂಡಾಗ ಮನಸ್ಸು ಬೇರೊಂದು ಸತ್ಯವನ್ನು ಹುಡುಕಲು ಹೊರಡುತ್ತದೆ; ಸುಖ–ದುಃಖಗಳನ್ನು ಮೀರಿದ ಸಂಗತಿಯೊಂದು ಉಂಟೆ ಎಂದು ಅನ್ವೇಷಿಸಿಲು ತೊಡಗುತ್ತದೆ. ದಿಟವಾದ ವೇದಾಂತದ ಜಿಜ್ಞಾಸೆ ಆರಂಭವಾಗುವುದೇ ಇಲ್ಲಿಂದ.

ಎಂದರೆ ನಮ್ಮ ಕಣ್ಣಿಗೆ ಕಾಣುವ ವಿವರಗಳನ್ನು ಮೀರಿ ಮತ್ತೊಂದು ವಿವರ ಉಂಟೇ – ಎಂದು ಆಲೋಚಿಸಬೇಕು. ನಮ್ಮ ಇಂದ್ರಿಯಗಳಿಗೆ ಒದಗುತ್ತಿರುವ ಅನುಭವಗಳ ಸತ್ಯಾಸತ್ಯಗಳು ಏನು ಎಂಬ ಪ್ರಶ್ನೆ ಏಳಬೇಕು. ಸುಖ–ದುಃಖಗಳು ಏಕೆ ಶಾಶ್ವತವಲ್ಲ ಎಂಬ ವಿಮರ್ಶೆ ಮೂಡಬೇಕು. ಎಲ್ಲವೂ ನಶ್ವರವಾದರೆ ಶಾಶ್ವತವಾದುದು ಏನೂ ಇಲ್ಲವೆ ಎಂಬ ಜಿಜ್ಞಾಸೆ ಬೆಳೆಯಬೇಕು. ಹೀಗೆ ಲೋಕಾನುಭವದ ಮೂಲಕ ಹುಟ್ಟುವ ಈ ಜೀವನಮೀಮಾಂಸೆಯೇ ತತ್ತ್ವಜ್ಞಾನಕ್ಕೆ ಮೂಲ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !