ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಸ್ತಿನ ಜೀವನದಿಂದ ವ್ಯಕ್ತಿತ್ವಕ್ಕೆ ಮೌಲ್ಯ

ಹೊಂಬೆಳಕು
Last Updated 19 ಸೆಪ್ಟೆಂಬರ್ 2019, 12:50 IST
ಅಕ್ಷರ ಗಾತ್ರ

ನಾವು ಕಲಿತ ಕೆಲವು ಶಿಸ್ತಿನ ನಡೆಗಳು ನಮಗೆ ಮುಳುವಾಗಬಹುದು.

ನಾನು ಪದವಿ ಓದುತ್ತಿದ್ದಾಗ ಎನ್‍ಸಿಸಿ ಶಿಬಿರಕ್ಕೆ ಹೋಗಿದ್ದೆ. ಅಲ್ಲಿ ಊಟಕ್ಕೆ ಪಾಳಿಯಲ್ಲಿ ಹೋಗುವುದಿತ್ತು. ನನ್ನ ಸರದಿ ಬರುವ ವೇಳೆಗೆ ಸಿಹಿ ತಿಂಡಿ ಮುಗಿದಿತ್ತು. ಬಡಿಸುತ್ತಿದ್ದವನು ಇರು, ಒಳಗಿಂದ ತರುವೆ ಎಂದು ಹೇಳಿ ಹೋದ. ನಾನು ಪಕ್ಕದಲ್ಲಿ ನಿಂತೆ. ಒಳಗಿಂದ ಮತ್ತಷ್ಟು ಸಿಹಿ ತಂದ ಅವನು ಇತರರಿಗೆ ಊಟ ಕೊಡುತ್ತಿದ್ದ. ಏಕೆ ಇಲ್ಲಿಯೇ ನಿಂತಿದ್ದ ನನ್ನನ್ನು ಯಾಕೆ ಇಲ್ಲಿ ನಿಂತಿದ್ದೀಯ ಎಂದು ಕೇಳಿದ. ನನಗೆ ಸಿಹಿ ಕೊಡಬೇಕಿತ್ತು ಎಂದಾಗ ಆಗಲೇ ಕೊಟ್ಟಿದ್ದು ಏನು ಮಾಡಿದೆ, ನಡಿ, ಎರಡು ಸಲ ಕೊಡಲ್ಲ ಎಂದು ಗದರಿಸಿದ. ನನಗೆ ಕೊಟ್ಟಿಲ್ಲ, ಕಾಯುವಂತೆ ನೀನೇ ಹೇಳಿದ್ದು ಎಂದು ನಾನು ಹೇಳಹೋದರೆ, ಸುಮ್ಮನೆ ವಾದಿಸಬೇಡ, ನಡಿ ಎಂದು ಬಿಟ್ಟ.

ವಾಸ್ತವವಾಗಿ ನನಗೆ ಸಿಹಿ ಇಷ್ಟವೇನೂ ಅಲ್ಲ. ಅಲ್ಲಿ ಶಿಸ್ತಿನಿಂದ ಕೊಟ್ಟಿದ್ದನ್ನು ತಿನ್ನಬೇಕು ಎನ್ನುವ ನಿಯಮವನ್ನು ಪಾಲಿಸುತ್ತಿದ್ದೆ ಅಷ್ಟೆ.

ಅಂಗಡಿಗಳಿಗೆ ಹೋದಾಗಲೂ ಹೀಗೆಯೇ ಆಗುವುದು. ನನಗಿಂತ ಮುಂಚೆ ಹೋದವರು ತಮ್ಮ ಕೆಲಸ ಮುಗಿಸಲಿ ಎಂದು ಕಾಯುತ್ತಿದ್ದರೆ, ನನಗಿಂತ ಮುಂದೆ ಬಂದವರು ತಮ್ಮ ಕೆಲಸ ಮುಗಿಸಿಕೊಂಡು ಹೋಗುತ್ತಿರುವರು. ನಾನು ಹಾಗೆಯೇ ತಾಳ್ಮೆಯಿಂದ ಕಾಯುವೆ. ಅದನ್ನು ಗೌರವಿಸದ ಕೆಲವು ಅಂಗಡಿಯ ನೌಕರರು ಏನೂ ಕೊಳ್ಳದಿದ್ದರೆ ಸುಮ್ಮನೆ ಯಾಕೆ ನಿಂತಿದ್ದೀರಾ, ಬೇರೆಯವರಿಗೆ ತೊಂದರೆ ಕೊಡುತ್ತೀರಾ ಎಂದೂ ಹೇಳಿರುವುದುಂಟು.

ಇಂಥ ಕಹಿ ಅನುಭವಗಳಿಂದ ಶಿಸ್ತನ್ನು ಯಾಕೆ ಪಾಲಿಸಬೇಕು ಎನ್ನುವ ಪ್ರಶ್ನೆ ಹುಟ್ಟಿದರೆ ಆಶ್ಚರ್ಯವಿಲ್ಲ. ಆದರೆ, ‘ಅನ್ಯರ ತಪ್ಪಿಗೆ ನಾವು ನಮ್ಮತನವನ್ನು ಬಿಟ್ಟುಕೊಡುವುದು ಎಷ್ಟರ ಮಟ್ಟಿಗೆ ಸರಿ?’ ಎನ್ನುವ ಯೋಚನೆ ಬಂದು ನಾನು ನನ್ನ ಶಿಸ್ತನ್ನು ಬಿಟ್ಟುಕೊಟ್ಟಿಲ್ಲ.

ಐರೋಪ್ಯ ರಾಷ್ಟ್ರಗಳಲ್ಲಿ ಈ ಶಿಸ್ತು ಸರ್ವೇ ಸಾಧಾರಣ. ಶೌಚಾಲಯಕ್ಕೆ ಹೋಗುವಾಗಲೂ ಇದೇ ಪಾಳಿ ನಿಲ್ಲುವ ಅಭ್ಯಾಸ ಕಾಣುವುದು. ಎಲ್ಲ ಕಡೆ ಅವರು ಮತ್ತೊಬ್ಬರ ಹಕ್ಕನ್ನು ಗೌರವಿಸುವರು. ಅವರ ಹಕ್ಕನ್ನು ಕದಿಯಬಾರದು ಎನ್ನುವ ನಿಯಮವನ್ನು ಪಾಲಿಸುವರು.

ಅಂಥ ಕಡೆ ಹೋದಾಗ ಬಹುತೇಕ ಭಾರತೀಯರು ಅದೇ ಶಿಸ್ತಿನ ನಡವಳಿಕೆ ತೋರಿಸುವರು. ಅದೇ ಜನ ಭಾರತಕ್ಕೆ ಬಂದಾಗ ಅಶಿಸ್ತಿಗೆ ಮರಳುವರು ಎನ್ನುವುದೇ ವಿಪರ್ಯಾಸ. ವಿಮಾನ ಹತ್ತುವ ಸಮಯ ಬಂದಾಗ ಮೆಟ್ಟಿಲ ಮೇಲೆ ಗುಂಪುಗುಂಪಾಗಿ ನುಗ್ಗುವುದನ್ನೂ ನೋಡಿದ್ದೇನೆ.

ಶಿಸ್ತಿನ ನಡವಳಿಕೆ ವ್ಯಕ್ತಿತ್ವಕ್ಕೆ ಮೌಲ್ಯವನ್ನು ತುಂಬುತ್ತದೆ. ಸಾಧನೆಗೆ ಬೇಕಾದ ತಾಳ್ಮೆಯನ್ನು ಕಲಿಸುತ್ತದೆ. ಗುರಿಗೆ ನಿಷ್ಠೆಯನ್ನೂ ಬೆಳೆಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT