ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ನಿಗೆ ಹಳೇ ಪಾತ್ರೆ, ಮುಂದಿದೆ ಹೊಸ ಹಾದಿ...

Last Updated 19 ಆಗಸ್ಟ್ 2019, 10:52 IST
ಅಕ್ಷರ ಗಾತ್ರ

ಜಾಗತೀಕರಣ ನಮ್ಮ ಮನೆ ಬಾಗಿಲಿಗೆ ಬರುವುದು ಎಂದರೇನು? ನಮ್ಮ ಬದುಕು ತಟ್ಟುವುದು ಎಂದರೇನು?ಮೈಸೂರಿನ 'ಪ್ರಜಾವಾಣಿ' ಛಾಯಾಗ್ರಾಹಕಿ ಬಿ.ಆರ್.ಸವಿತಾ ಅವರ ಈ ಚಿತ್ರ-ಕತೆ ಓದಿದರೆ ಛಾಯಾಗ್ರಾಹಕರ ಕಣ್ಣು ಅದೆಷ್ಟು ಸೂಕ್ಷ್ಮ ಎಂದು ಉದ್ಗರಿಸದೇ ಇರಲಾರಿರಿ.

---

ಇದೇ ಬಗೆಯ ದೃಶ್ಯ ಚಿತ್ರ ನಿರ್ದೇಶಕಯೋಗರಾಜಭಟ್ಟರಿಗೆ'ಹಳೆ ಪಾತ್ರೆ, ಹಳೆ ಕಬ್ಬಿಣ, ಹಳೆ ಪೇಪರ್, ತರಾ ಹೋಯಿ' ಎಂಬ ಪದ್ಯ ಬರೆಯಲು ಸ್ಫೂರ್ತಿಯಾಯಿತೋ ಏನೋ ಗೊತ್ತಿಲ್ಲ. ಆದರೆ, ಕೆಲಸ ಇಲ್ಲ ಎಂದು ಸುತ್ತಾಡುವವರಿಗೆ, ಆತ್ಮಹತ್ಯೆ ಮಾಡಿಕೊಳ್ಳುವವರಿಗಂತೂ ಈ ಚಿತ್ರ ಬದುಕಬೇಕು ಎನ್ನುವ ಸೆಲೆಯನ್ನು ಹುಟ್ಟಿಸದೇ ಇರದು.

ಚಂದಿರನ ತೂಕಕ್ಕೆ ಇಟ್ಟರೂ, ಸಂಜೆಯನ್ನು ಸೇಲಿಗೆ ಬಿಟ್ಟರೂ, ಈ ಭೂಮಿಯನ್ನೇ ಬಾಡಿಗೆಗೆ ಕೊಟ್ಟರೂ ಈ ಕಾಯಕ ಯೋಗಿಗೆ ಚಿಂತೆ ಇಲ್ಲ. ಲೋಕವನ್ನೇ ಮೂಟೆ ಕಟ್ಟಿದಂತೆ, ಕಸ ಎಂದು ಮೂಗುಮುರಿಯುವ ರದ್ದಿಯನ್ನು ಮೂಟೆ ಕಟ್ಟಿ ಹಳೆಯದೊಂದು ಟಿವಿಎಸ್ ಏರಿ ಇವರು ಬೆಳ್ಳಂಬೆಳಿಗ್ಗೆ ಮೈಸೂರಿನಲ್ಲಿ ಹೊರಟಿದ್ದಾರೆ.

ಇವರಿಗೇನು ಹೊಸ ದಿರಿಸು, ಹೊಸ ವಸ್ತು ಬೇಕಿಲ್ಲ. ಮನೆಯಲ್ಲಿ ತಮಗೆ ಬೇಡ ಎಂದು ಎಸೆದ ರದ್ದಿಯೇಸಾಕು. ಕಸದ ತೊಟ್ಟಿಗೆ ಎಸೆಯುವುದು ತಾನೆ, ಹಾಗೆ ಉಚಿತವಾಗಿ ಕೊಡಿ ಎಂದು ಇವರೇನು ಭಿಕ್ಷೆ ಬೇಡುವುದಿಲ್ಲ. ಆ ಕಸಕ್ಕೂ ಇವರು ನ್ಯಾಯಬದ್ಧವಾದ ಬೆಲೆ ನೀಡಿಯೇ ಖರೀದಿಸಿ, ಸ್ವಾಭಿಮಾನದ ಮೂಟೆಯನ್ನು ಹೊತ್ತುಕೊಂಡುಹೋಗುತ್ತಾರೆ.

ಇದನ್ನು ಇವರು ಗುಜರಿಯಲ್ಲಿ ಮಾರಾಟ ಮಾಡುವಾಗಲೂ ಹೆಚ್ಚಿನ ದರ ಕೇಳುವುದಿಲ್ಲ. ತಾವು ಖರೀದಿಸಿದಕ್ಕಿಂತ ಕೆ.ಜಿ.ಗೆ ಒಂದೆರಡು ರೂಪಾಯಿಯಷ್ಟೇ ಪಡೆದು ಧನ್ಯರಾಗುತ್ತಾರೆ‌. ಪ್ರತಿ ಮನೆಯಕಸಕ್ಕೊಂದು ಮುಕ್ತಿ ಕೊಡುವ, ಆ ಮೂಲಕ ಜಗತ್ತನ್ನೇ ರದ್ದಿ ಮುಕ್ತ ಮಾಡಿ, ಸ್ವಚ್ಛಗೊಳಿಸುವ ಕಾಯಕದಲ್ಲಿ ಸದ್ದಿಲ್ಲದೆ ತೊಡಗಿಕೊಂಡಿರುವ ಇವರ ಕಾಯಕವನ್ನೊಮ್ಮೆ ಧ್ಯಾನಿಸಿದರೆ ಇವರ ಮಹತ್ವ ಅರಿವಾಗದೆ ಇರದು.

ಇದೀಗ ದೊಡ್ಡಮಾಲ್‌ಗಳು ಇವರದುಡಿಮೆಗೆ ಅಡ್ಡಗಾಲಾಕಿ ತಾವೇ ರದ್ದಿ ಖರೀದಿಸುತ್ತಿವೆ. ಆಮೂಲಕ ಇವರ ಒಪ್ಪತ್ತಿನ ಕೂಳಿಗೂ ಕೈ ಹಾಕಿವೆ.ಇದಲ್ಲವೇಜಾಗತೀಕರಣ?

ಹಳೆಯ ಟಿವಿಎಸ್ ಮೇಲೆ ನಾಲ್ಕಾರು ಸೈಕಲ್‌ಗಳು, ಮಣ ಭಾರದ ರದ್ದಿಯನ್ನು ಹೇರಿಕೊಂಡು ಹಳೆ ಪಾತ್ರೆ, ಬಟ್ಟೆ, ಹಳೆ ಕಬ್ಬಿಣ
ಎಂದು ಕೂಗುತ್ತಾ, ಬಂದ ಇವರ ತುಕ್ಕು ಹಿಡಿದ ತಲೆ, ಸುಕ್ಕುಗಟ್ಟಿದ ಮುಖ, ಹೆಪ್ಪುಗಟ್ಟಿದ ಮನಸ್ಸನ್ನು ಸೆರೆಹಿಡಿಯಲು ಕೈಬಾರದೆ ಇವರ ಬೆನ್ನಿನ ಮೇಲಿನ ಭಾರವನ್ನಷ್ಟೆ ಸೆರೆ ಹಿಡಿದ ಆ ಘಳಿಗೆ ಮತ್ತೆಮತ್ತೆ ಕಾಡುತ್ತಿದೆ.

ಮಾಲ್‌ ಒಂದರಮುಂದೆ ಹಾಕಿದ್ದ 'ಒಂದು ಕೆ.ಜಿ. ಹಳೇ ಪೇಪರ್‌ಗೆ₹50 ಮೌಲ್ಯದ ಗಿಫ್ಟ್ ವೋಚರ್ ನೀಡಲಾಗುವುದು' ಜಾಹೀರಾತು ನೋಡಿ, ಇವರು ಮುಗುಳ್ನಗುತ್ತಾ ಹೊರಟಿದ್ದನ್ನು ಕಂಡು ಅವರನ್ನು ಹಿಂಬಾಲಿಸಿ ಈ ಚಿತ್ರ ತೆಗೆದ ಕ್ಷಣ ಇಂದಿಗೂ ಕಾಡುತ್ತಲೇ ಇದೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT