ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆವರೆಂಡ್‌ ಫರ್ಡಿನೆಂಡ್‌ ಕಿಟ್ಟೆಲ್‌ ನೆನಪಿನ ನಾವೆ

Last Updated 26 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಕನ್ನಡದಲ್ಲಿ ಕಿಟ್ಟೆಲ್‌ ಹೇಗೆ ಬರೀತಾರೆ?

ಎಂಟು ಬರೀರಿ, ಅಡ್ಡಗೀಟು ಹಾಕಿ, ಒಂದು ಮೂರನ್ನು ತಿರುಗಿಸಿ, ಇನ್ನೊಂದನ್ನು ಜೋಡಿಸಿ, ಮೇಲೆ ಕೊಂಬು ಕೊಡಿ, ಸಣ್ಣದೊಂದು ಅರ್ಧ ವೃತ್ತ, ಅದಕ್ಕೊಂದು ತಲೆತಿರುಗಿದ ಕೊಂಬು.. ಹೇಳುತ್ತ ಹೋದಂತೆ ಬರೆದೇ ಬಿಟ್ಟರು. ಅವರು ಜರ್ಮನಿಯ ಈವ್ಸ್‌ ಪ್ಯಾಟ್ರಿಕ್‌ ಮಯರ್‌. ರೆವರೆಂಡ್‌ ಫರ್ಡಿನೆಂಡ್‌ ಕಿಟ್ಟೆಲ್‌ ಅವರ ಗಿರಿಮೊಮ್ಮಗ (ಮರಿಮೊಮ್ಮಗಳ ಮಗ).

ಅಮ್ಮ ಅಲ್ಮೂತ್‌ ಮಯರ್‌ ಜೊತೆಗೆ ಪ್ರಜಾವಾಣಿ ಕಚೇರಿಗೆ ಭೇಟಿ ನೀಡಿದ ಈವ್ಸ್‌ ಬೆರಗು ಕಂಗಳಿಂದ ತಮ್ಮ ಹಿರಿಯಜ್ಜನ ಕುರಿತು ವಿಚಾರಿಸುತ್ತಿದ್ದರು. ಇಲ್ಲಿ ಜನ ಹೇಗೆ ನೆನಪಿಸಿಕೊಳ್ಳುತ್ತಾರೆ? ಅವರ ಜೀವಿತಾವಧಿಯಲ್ಲಿ ಮಾಧ್ಯಮಗಳಲ್ಲಿ ಅವರು ಸುದ್ದಿಯಾಗಿದ್ದರೆ? ಅದ್ಹೇಗೆ ಅಷ್ಟು ದೊಡ್ಡ ಕೆಲಸ ಮಾಡಿದರು ಅವರು? – ಹೀಗೆ ಪ್ರಶ್ನೆಗಳ ಸುರಿಮಳೆ.

ಮರು ಪ್ರಶ್ನಿಸುವ ಸರದಿ ಪ್ರಜಾವಾಣಿ ತಂಡದ್ದೂ ಆಗಿತ್ತು. ನಿಮಗೆ ನಿಮ್ಮಜ್ಜನ ಬಗ್ಗೆ ಏನು ಗೊತ್ತಿದೆ ಎಂದಾಗ ಅಲ್ಮೂತ್‌ ಅವರ ಕಂಗಳು ಮಿನುಗಿದವು. ನಿಮಗೆ ಅವರ ಪ್ರೇಮಕಥೆ ಗೊತ್ತೆ ಎಂದು ಕೇಳಿದರು. ಮಗನತ್ತ ಹೊರಳಿ ಈವ್ಸ್‌, ನೀನದನ್ನು ಹಂಚಿಕೊಳ್ಳಲು ಇಷ್ಟಪಡ್ತೀಯಾ ಅಂತ ಕೇಳಿದರು. ಈವ್ಸ್‌ ಯಾಕಾಗಬಾರದು ಅಂದವರೇ ಹಿರಿಯಜ್ಜನ ಬಾಳ ಚರಿತ್ರೆಯ ಕಣಿವೆಗೆ ಇಳಿದರು.

ಹಿರಿಯಜ್ಜ, ಭಾರತಕ್ಕೆ, ಕರ್ನಾಟಕಕ್ಕೆ ಬಂದಾಗ ಅವರಿಗೆ 21ರ ಹರೆಯ. ಭಾಷೆ, ಸಂಸ್ಕೃತಿ, ಹವಾಮಾನ, ಎಲ್ಲವೂ ಭಿನ್ನ. ಎಲ್ಲವೂ ಹೊಸತು. ಆದರೆ ಈ ನಾಡಿನೊಂದಿಗೆ, ಕನ್ನಡದೊಂದಿಗೆ ಅವರಿಗೆ ಪ್ರೀತಿ ಹುಟ್ಟಿತ್ತು. ಇಲ್ಲಿಯ ಮಹಿಳೆಗೇ ಮದುವೆಯಾಗುವೆಯಾ ಎಂದೂ ಕೇಳಲೂ ಬಯಸಿದ್ದರು. ಇದನ್ನೆಲ್ಲ ಅವರು ಪತ್ರಗಳಲ್ಲಿ ಬರೆಯುತ್ತಿದ್ದರು, ನನ್ನ ಹಿರಿಯಜ್ಜಿಗೆ. ಎಷ್ಟು ಚಂದದ, ನವಿರಾದ ಪ್ರೀತಿಯ ಪತ್ರಗಳು ಅವು. ಒಂದು ಪತ್ರದಲ್ಲಿ ಅವರು ಕಾಫಿ ರುಚಿಯ ಕುರಿತೂ ಉಲ್ಲೇಖಿಸಿದ್ದರು. ನಮ್ಮ ನಾಡು ಚಹಾಪ್ರಿಯರ ನಾಡು. ಇಲ್ಲಿಯ ಕಾಫಿ ಅವರ ಗಮನ ಸೆಳೆದಿತ್ತು. ಮನವನ್ನೂ ಸೆಳೆದಿತ್ತು. ಒಂದು ವರ್ಷದವರೆಗೂ ಹಿರಿಯಜ್ಜ – ಅಜ್ಜಿ ಪತ್ರಗಳ ಮುಖಾಂತರ ಸಂಪರ್ಕದಲ್ಲಿದ್ದರು.

ಒಂದು ವರ್ಷದ ನಂತರ ನನ್ನ ಹಿರಿಯಜ್ಜಿ, ಜರ್ಮನಿಯಿಂದ ಆರು ತಿಂಗಳು ಸಮುದ್ರಯಾನದ ಮೂಲಕ ಭಾರತಕ್ಕೆ ಪ್ರಯಾಣ ಕೈಗೊಂಡು ಅಜ್ಜನನ್ನು ಭೇಟಿಯಾದರು. ಇದೆಂಥ ಸಾಹಸಮಯ ಯಾತ್ರೆ ಅಲ್ವಾ? ನನಗೆ ಈಗಲೂ ಆ ಪ್ರೀತಿಯ ಕುರಿತು ಯೋಚಿಸಿದರೆ ಖುಷಿ ಮತ್ತು ಸೋಜಿಗ ಎರಡೂ ಒಟ್ಟೊಟ್ಟಿಗೆ ಉಂಟಾಗುತ್ತವೆ. ಆಮೇಲೆ ಅವರು ಮದುವೆಯಾದರು. ನಾಲ್ಕು ವರ್ಷ ಒಟ್ಟಿಗಿದ್ದರು. ಆದರೆ, ಅಜ್ಜಿಯ ಅಕಾಲಿಕ ಮರಣದಿಂದಾಗಿ ಹಿರಿಯಜ್ಜ ಒಂಟಿಯಾದರು. ಆಗ ನನ್ನ ಹಿರಿಯಜ್ಜಿಯ ತಂಗಿಯೇ ಅವರನ್ನು ಮದುವೆಯಾದರು. ಅವರು ತಮ್ಮಕ್ಕನ ಪ್ರೇಮಪ್ರಸಂಗಕ್ಕೆ ಸಾಕ್ಷಿಯಾಗಿದ್ದರಲ್ಲ.. ಆ ಪತ್ರಗಳನ್ನು ಓದಿಯೇ ಅವರು ಮರುಳಾಗಿರಬಹುದು!

ನಿಮಗೆ ಗೊತ್ತಾ? ಈ ಅಕ್ಕ ತಂಗಿಯರಿಬ್ಬರೂ ಯಾತ್ರೆಯ ಸಮಯದಲ್ಲಿ ಡೈರಿ ಬರೆದಿದ್ದಾರೆ. ಜರ್ಮನಿ ಭಾಷೆಯಲ್ಲಿ ಅವು ದಾಖಲಾಗಿವೆ. ನಾವೂ ಅನುವಾದಕರನ್ನು ಹುಡುಕುತ್ತಿದ್ದೇವೆ. ಇಂಗ್ಲಿಷ್‌ಗೆ ಭಾಷಾಂತರವಾದ ನಂತರ, ನೀವೂ ಅವುಗಳನ್ನು ಕನ್ನಡಕ್ಕೆ ಭಾಷಾಂತರಿಸಬಹುದೇನೊ ಎನ್ನುತ್ತಲೇ ಕಿರುನಕ್ಕರು ಈವ್ಸ್‌.

‘ನಮ್ಮ ಮನೆಯಲ್ಲಿ ಮೊದಲ ಮಗ ಪಾದ್ರಿ, ಎರಡನೆಯ ಮಗ ವೈದ್ಯ ಆಗುವ ಸಂಪ್ರದಾಯವಿತ್ತು. ಹಂಗಾಗಿ ಪಾದ್ರಿ ಆದರು. ಅವರ ಸಹೋದರ ವೈದ್ಯರಾದರು’ ಎನ್ನುತ್ತಾ ತಮ್ಮ ಕುಟುಂಬದ ಕುರಿತಾದ ವಿಶೇಷಗಳನ್ನು ಅತ್ಯಾಪ್ತವಾಗಿ ಬಿಚ್ಚಿಟ್ಟರು. ನೀವು, ನಿಮ್ಮ ಗಿರಿತಾತನನ್ನು ಹೇಗೆ ಗುರುತಿಸಲು ಇಷ್ಟಪಡುವಿರಿ ಎಂಬ ಪ್ರಶ್ನೆ ಎದುರಾದಾಗ, ‘ಹಟವಾದಿ’ ಅವರಿಗೆ ಕೈ ಹಿಡಿದದ್ದನ್ನು ಸಾಧಿಸುವ ಹುಚ್ಚು ಹಟವಿತ್ತು. ಇಲ್ಲಾಂದ್ರೆ 72 ಸಾವಿರ ಪದಗಳನ್ನು ಸಂಗ್ರಹಿಸಿ, ವಿಂಗಡಿಸಿ, ಅರ್ಥ ಬರೆದು, ಉಚ್ಚಾರ ಅರಿತು, ಭಾಷೆ ತಿಳಿದು ಇಷ್ಟೆಲ್ಲ ಸಾಹಸ ಮಾಡಲು ಸಾಧ್ಯವೇ, ಒಂದು ಜೀವಿತಾವಧಿಯಲ್ಲಿ’ ಎಂದು ಮರುಪ್ರಶ್ನೆ ಹಾಕಿದರು.

ನಾವೆಲ್ಲ ಸಾಮಾನ್ಯವಾಗಿ ಸಾವಿರ ಪದಗಳನ್ನು ಬಳಸುತ್ತೇವೆ. ಈ ಮನುಷ್ಯ ನಿತ್ಯ 18–20 ಗಂಟೆ ದುಡಿದಿರಬಹುದು. ಹೀಗೆ ದುಡಿಯುತ್ತಲೇ ಕನ್ನಡದ ಕುರಿತು ಮೋಹ ಹುಟ್ಟಿರಬೇಕು. ನಾಲ್ಕೈದು ದಶಕಗಳವರೆಗೂ ಇದೇ ನೆಲದಲ್ಲಿಯೇ ಬದುಕಿದರು ಅವರು. ಕನ್ನಡಿಗರ ಮುಖದಲ್ಲಿ ಕಿಟ್ಟೆಲ್‌ ಹೆಸರು ತೆಗೆದುಕೊಂಡ ತಕ್ಷಣ ಕಾಣುವ ಹೆಮ್ಮೆ, ಪ್ರೀತಿಯನ್ನು ನೋಡಿದಾಗ ಖುಷಿಯೆನಿಸುತ್ತದೆ. ನೀವು ನನ್ನ ಹೆಸರನ್ನು ಕನ್ನಡದಲ್ಲಿ ಬರೆದುಕೊಡುವಿರಾ? ನನ್ನ ವಿಸಿಟಿಂಗ್‌ ಕಾರ್ಡ್‌ಗಳಲ್ಲಿ ಅದನ್ನು ಬಳಸುವೆ ಎನ್ನುತ್ತ, ಕಿಟ್ಟೆಲ್‌ ಪದವನ್ನು ಹೇಗೆ ಬರೆಯಬೇಕು ತಿಳಿದು ಬರೆದರು. ಕನ್ನಡದ ಪದಗಳನ್ನು ಸ್ಪರ್ಶಿಸಿದರು. ಮುತ್ತಜ್ಜನ ಮುದಿನೆರಿಗೆ ಇರುವ ಮುಂಗೈಗೆ ಮುತ್ತಿಟ್ಟಂತೆ ಆ ಕಾಗದದ ಚೂರನ್ನು ಜೋಪಾನವಾಗಿ ಮಡಿಚಿಟ್ಟುಕೊಂಡು ಹೊರಟರು.

ಅವರ ನೆನಪಿನ ಬುತ್ತಿಯಲ್ಲಿ ನಮಗೂ ಒಂದಷ್ಟು ಕಥೆ ಕಟ್ಟಿಕೊಟ್ಟು ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT