ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುತ್ತಿವೆ ಅಪರಾಧಗಳು: ಸಹಜೀವನ ಸಂಬಂಧ ‘ನೋಟ’ ಬದಲಾಗಲಿ..!

Last Updated 25 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಹೆತ್ತವರೇ ವರ ಹುಡುಕಿ, ಲಕ್ಷಗಟ್ಟಲೆ ಖರ್ಚು ಮಾಡಿ ಮದುವೆ ಮಾಡಿಕೊಟ್ಟ ನಂತರವೂ ಹೆಣ್ಣುಗಳು ಗಂಡನ ಮನೆಯಲ್ಲಿ ಕೊಲೆಯಾಗುತ್ತಿರುವ ಉದಾಹರಣೆಗಳಿವೆ. ಕುಟುಂಬ ಮರ್ಯಾದೆಯ ಹೆಸರಲ್ಲಿ ಹೆತ್ತವರಿಂದಲೇ ಹತ್ಯೆಯಾಗುತ್ತಿರುವುದು ವರದಿಯಾಗುತ್ತಿವೆ. ಹಾಗಿರುವಾಗ ಲಿವ್ಇನ್ ಸಂಬಂಧಗಳಿಂದ ಹೆಣ್ಣು ಮಕ್ಕಳ ವಿರುದ್ಧದ ಅಪರಾಧಗಳು ಹೆಚ್ಚುತ್ತಿವೆ ಎಂದು ದೂಷಿಸುವುದು ಅತಾರ್ಕಿಕ.

***

ಪಾಶ್ಚಾತ್ಯ ದೇಶಗಳಲ್ಲಿರುವ ವ್ಯಕ್ತಿ ಕೇಂದ್ರಿತ ಸಮಾಜಗಳಿಗಿಂತ ಭಿನ್ನವಾಗಿ ಭಾರತದಲ್ಲಿರುವುದು ಕುಟುಂಬ ಅಥವಾ ಸಮುದಾಯ ಕೇಂದ್ರಿತ ಸಮಾಜ. ಈ ವ್ಯವಸ್ಥೆಯಲ್ಲಿ ವ್ಯಕ್ತಿಯ ಒಳಿತಿಗಿಂತ ಮೊದಲು ಕುಟುಂಬದ, ಸಮುದಾಯದ ಮತ್ತು ಸಮಾಜದ ಒಳಿತು ಮುಖ್ಯ ಎಂದು ಪರಿಗಣಿಸಲಾಗುತ್ತದೆ. ಅದಕ್ಕೆ ತಕ್ಕಂತೆ ಇದು ಸಮಾಜದ ಕಟ್ಟುಪಾಡು, ರೀತಿ ರಿವಾಜು, ಅದು ಒಪ್ಪಿರುವ ಮೌಲ್ಯವ್ಯವಸ್ಥೆಗೆ ಹೊಂದಿಕೊಂಡು ನಡೆಯುವ ವ್ಯವಸ್ಥೆಯಾಗಿದೆ. ಭಾರತದಲ್ಲಿ ಎಲ್ಲರನ್ನೂ ಕಾಡುವ ‘ನಾಲ್ಕು ಜನ ಏನಂತಾರೆ?’ ಅನ್ನುವ ಭಯದ ಮೂಲ ಇರುವುದು ಇಲ್ಲೇ.

ಸಹಜವಾಗಿಯೇ ಇಂತಹ ಸಮಾಜಗಳಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ಸ್ಥಾನವಿಲ್ಲ. ಹೀಗಾಗಿ, ಮದುವೆಯೂ ಸೇರಿದಂತೆ ತೀರಾ ವೈಯಕ್ತಿಕವಾದ ಹಲವು ನಿರ್ಧಾರಗಳನ್ನು ಕುಟುಂಬ ಮತ್ತು ಸಮಾಜವನ್ನು ದೃಷ್ಟಿಯಲ್ಲಿಟ್ಟುಕೊಂಡು ತೆಗೆದುಕೊಳ್ಳಲಾಗುತ್ತದೆ. ಕಾಲ ಬದಲಾದಂತೆ ಮದುವೆಯ ವಿಷಯದಲ್ಲಿ ಗಂಡು-ಹೆಣ್ಣಿನ ಒಪ್ಪಿಗೆ ಮಹತ್ವ ಪಡೆಯುತ್ತಾ ಹೋಗಿದೆಯಾದರೂ, ಅದಕ್ಕೆ ಸಮಾಜ ಮುದ್ರೆ ಒತ್ತುವುದು ಅಷ್ಟೇ ಮುಖ್ಯವಾಗಿಯೇ ಉಳಿದಿದೆ. ಹೀಗಾಗಿ, ಭಾರತೀಯ ಸಮಾಜ ಒಂದು ಚೌಕಟ್ಟಿನಲ್ಲಿ (ಒಂದೇ ಧರ್ಮ, ಒಂದೇ ಜಾತಿ, ಸಮಾನ ಅಂತಸ್ತು... ಹೀಗೆ) ಪ್ರೇಮ ವಿವಾಹಗಳನ್ನು ಒಪ್ಪಿಕೊಳ್ಳಲು ಆರಂಭಿಸಿದ್ದರೂ ಅದರ ಪರಿಕಲ್ಪನೆ, ಅರೇಂಜ್ಡ್ ಮದುವೆಗಳೇ ಇಲ್ಲದ ಪಾಶ್ಚಾತ್ಯ ಸಂಸ್ಕೃತಿಯಲ್ಲಿರುವುದಕ್ಕಿಂತ ತೀರಾ ಭಿನ್ನವಾಗಿದೆ.

ತೀರಾ ಇತ್ತೀಚಿನವೆರೆಗೂ ನಮ್ಮಲ್ಲಿ ಗಂಡು ಹೆಣ್ಣಿನ ನಡುವಿನ ಯಾವುದೇ ರೀತಿಯ ಆಕರ್ಷಣೆಯು, ಜೊತೆಯಾಗಿ ಕಾಫಿ ಕುಡಿಯುವ ಅಥವಾ ಐಸ್ಕ್ರೀಂ ತಿನ್ನುವ ಹಂತ ತಲುಪಿತೆಂದರೆ ಅದು ವಿವಾಹದಲ್ಲೇ ಪರ್ಯಾವಸನವಾಗಬೇಕೆಂಬುದು ಅಲಿಖಿತ ನಿಯಮವಾಗಿತ್ತು. ಈಗಲೂ, ಕೆಲ ಕಾಲ ಜೊತೆಗೆ ಸುತ್ತಿ ಯಾವುದೇ ಕಾರಣಕ್ಕೆ ಯಾರೇ ಒಬ್ಬರು ಮದುವೆಗೆ ನಿರಾಕರಿಸಿದಲ್ಲಿ ಅದು ವಂಚನೆಯೆಂದೇ ನಮ್ಮಲ್ಲಿ ಪರಿಗಣಿತವಾಗುತ್ತದೆ. ಪಾಶ್ಚಾತ್ಯ ಸಮಾಜದಲ್ಲಿರುವಂತೆ ಮೊದಲಿಗೆ ಡೇಟಿಂಗ್, ನಂತರ ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಸ್ಥಾನಮಾನ, ನಂತರ ಪ್ರೇಮ ನಿವೇದನೆ, ಬಳಿಕ ಕೆಲ ಕಾಲ ಲಿವ್–ಇನ್ ರಿಲೇಷನ್‌ಷಿಪ್... ಈ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ದಾಟಿದ ಮೇಲೂ ಒಬ್ಬರು ಪ್ರಪೋಸ್ ಮಾಡಿದಾಗ ಮತ್ತೊಬ್ಬರಿಗೆ ವಿವಾಹವನ್ನು ನಿರಾಕರಿಸುವ ಹಕ್ಕು ಇದ್ದೇ ಇದೆ ಎಂಬಂತಹ ಸ್ಪಷ್ಟತೆ ನಮ್ಮ ಇಂಡಿಯನೈಸ್ಡ್ ಪ್ರೇಮಗಳಲ್ಲಿ ಇಲ್ಲ.

ಆದರೆ, ವ್ಯಕ್ತಿ ಸ್ವಾತಂತ್ರ್ಯವನ್ನು ಹೆಚ್ಚಾಗಿ ಬಯಸುವ ನಮ್ಮ ಈಗಿನ ಯುವ ಜನಾಂಗ ಇಂಥ ಒಂದು ಹಂತ ಹಂತವಾದ ವ್ಯವಸ್ಥೆಯತ್ತ ಇತ್ತೀಚೆಗೆ ಒಲವು ತೋರುತ್ತಿದೆ. ಇದರಿಂದಾಗಿ, ಲಿವ್-ಇನ್ ರಿಲೇಷನ್ಶಿಪ್‌ಗಳ (ಸಹಜೀವನ ಸಂಬಂಧ) ಸಂಖ್ಯೆಯೂ ಹೆಚ್ಚುತ್ತಿದೆ. ಹಾಗಂತ ಇದಕ್ಕೆ ಕುಟುಂಬದ ಅಥವಾ ಸಮಾಜದ ಒಪ್ಪಿಗೆ ಸಿಗುತ್ತಿದೆ ಎಂದೇನಲ್ಲ. ದೂರದೂರುಗಳಲ್ಲಿ ಉದ್ಯೋಗದಲ್ಲಿರುವ ಹಲವರು ಲಿವ್ –ಇನ್ ಸಂಬಂಧದಲ್ಲಿದ್ದರೂ ಬಹುತೇಕ ಅದನ್ನು ಕುಟುಂಬದಿಂದ ಮುಚ್ಚಿಟ್ಟಿರುತ್ತಾರೆ. ದಂಪತಿ ಎಂದು ಸುಳ್ಳು ಹೇಳಿ ಬಾಡಿಗೆ ಪಡೆದು ಸಮಾಜದಿಂದಲೂ ಮುಚ್ಚಿಟ್ಟಿರುತ್ತಾರೆ. ಅದಕ್ಕೆ ಕಾರಣ, ಇಂತಹ ವಿವಾಹವಿಲ್ಲದ ಸಹಜೀವನವನ್ನು ಸಮಾಜ ನೋಡುವ ರೀತಿ ಮತ್ತು ನಡೆಸಿಕೊಳ್ಳುವ ರೀತಿ.

ವಿಚ್ಛೇದನಗಳೆಂದರೆ ಈಗಲೂ ಬೆಚ್ಚಿಬೀಳುವ ಭಾರತೀಯ ಸಮಾಜಕ್ಕೆ ಲಿವ್-ಇನ್ ಸಂಬಂಧಗಳು ವರವಾಗಬಲ್ಲದು ಮತ್ತು ಭಾರತದಲ್ಲಿ ಏರುತ್ತಿರುವ ವಿಚ್ಛೇದನಗಳ ಸಂಖ್ಯೆಗೂ ಪರಿಹಾರವಾಗಬಲ್ಲದು ಎಂಬ ನಿಟ್ಟಿನಲ್ಲಿ ಯೋಚಿಸಿದ್ದೀರಾ? ನಮ್ಮ ಸಮಾಜ ಈಗ ಒಂದು ವಿಚಿತ್ರ ಘಟ್ಟದಲ್ಲಿದೆ. ಪುರುಷ ಪ್ರಧಾನ ವ್ಯವಸ್ಥೆಗೆ ಒಗ್ಗಿಕೊಂಡಿದ್ದ ಹೆಣ್ಣು ಇದುವರೆಗೂ ಇಷ್ಟವಿಲ್ಲದಿದ್ದರೂ, ಕಷ್ಟವಾದರೂ, ಎಂತಹ ಮಾನಸಿಕ ದೈಹಿಕ ಹಿಂಸೆ ಇದ್ದರೂ ಸಹಿಸಿಕೊಂಡು ಹೋಗುತ್ತಿದ್ದಳೇ ಹೊರತು, ವಿಚ್ಛೇದನದ ಬಗ್ಗೆ ಯೋಚಿಸುತ್ತಿದ್ದದ್ದು ತೀರಾ ಕಡಿಮೆ. ಈಗ ದೊರಕಿರುವ ಆರ್ಥಿಕ ಸ್ವಾವಲಂಬನೆ, ಶಿಕ್ಷಣ ದಿಂದಾಗಿ ಏನೇ ಆದರೂ ಹೊಂದಿಕೊಂಡು ಹೋಗಬೇಕೆಂದು ಮೊದಲು ಕಲಿಸಿಕೊಡಲಾಗಿದ್ದ ಮನಸ್ಥಿತಿಯಿಂದ ಹೆಣ್ಣು ಹೊರಬಂದು ತನ್ನದೇ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಹಂತ ತಲುಪಿದ್ದಾಳೆ. ಹೀಗಾಗಿ, ಕುಟುಂಬ ನಿರ್ಧರಿಸಿದ ವೈವಾಹಿಕ ಸಂಬಂಧಗಳಲ್ಲಷ್ಟೇ ಅಲ್ಲ, ಪ್ರೇಮ ವಿವಾಹಗಳಲ್ಲೂ ಹೊಂದಾಣಿಕೆಯ ಕೊರತೆ ಉಂಟಾದಾಗ ಅದು ವಿಚ್ಛೇದನದಲ್ಲಿ ಕೊನೆಯಾಗುತ್ತಿದೆ.

ಪ್ರೇಮಿಸುವಾಗ ಎಲ್ಲವೂ ಚಂದವೆನಿಸಿದರೂ, ಜೊತೆಯಾಗಿ ಕಳೆಯುವ ಎರಡು ಮೂರು ಗಂಟೆಗಳು ಮಧುರವೆನಿಸಿದರೂ, ಒಟ್ಟಿಗೆ ಬಾಳಿದಾಗ ಹಲವು ಕುಂದು ಕೊರತೆಗಳು, ಸಮಸ್ಯೆಗಳು ಎದುರಾಗಬಹುದು. ಮದುವೆಯಂತಹ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮೊದಲು ಇಬ್ಬರ ನಡುವಿನ ಹೊಂದಾಣಿಕೆಯನ್ನು ಪರೀಕ್ಷಿಸುವುದು ಉತ್ತಮ. ಬ್ರೇಕ್ಅಪ್ ಆದರೆ ಅದು ಹೃದಯಗಳನ್ನು ಒಡೆಯುತ್ತದೆಯೇ ಹೊರತು ಬೇರೆ ರೀತಿಯ ಪ್ರಾಕ್ಟಿಕಲ್ ಸಮಸ್ಯೆಗಳನ್ನು ತಂದೊಡ್ಡುವುದಿಲ್ಲ ಎಂದು ಯೋಚಿಸುವವರ ಸಂಖ್ಯೆ ಹೆಚ್ಚುತ್ತಿದೆ.

ಭಾರತದಲ್ಲಿ ವಿಚ್ಛೇದನ ಪ್ರಮಾಣ ಶೇ 1.1 ರಷ್ಟಿದ್ದು, ಈಗಲೂ ಅತೀ ಕಡಿಮೆ ವಿಚ್ಛೇದನಗಳಾಗುವ ದೇಶ ಎನಿಸಿಕೊಡಿದೆ. ಆದರೂ ಇತ್ತೀಚಿನ ವರ್ಷಗಳಲ್ಲಿ ವಿಚ್ಛೇದನಗಳ ಸಂಖ್ಯೆ ಶೇ 50 ರಿಂದ ಶೇ 60 ರಷ್ಟು ಹೆಚ್ಚುತ್ತಿದೆ. ವಿಚ್ಛೇದನಗಳು ತಂದೊಡ್ಡುವ ಕಾನೂನು ಸಮರ, ವಿಚ್ಛೇದಿತರು ಎಂಬ ಹಣೆಪಟ್ಟಿ, ಮಕ್ಕಳಿದ್ದರಂತೂ ಅದು ಪುಟ್ಟ ಮನಸ್ಸುಗಳ ಮೇಲೆ ಬೀರುವ ಪರಿಣಾಮ ಇವೆಲ್ಲವನ್ನೂ ಯೋಚಿಸಿದಾಗ ಹಲವರಿಗೆ ಮದುವೆಗೂ ಮೊದಲು ಲಿವ್-ಇನ್ ನಂತಹ ಒಂದು ಟ್ರಯಲ್ ನಡೆಸಿದರೆ ಅದು ಭವಿಷ್ಯದಲ್ಲಿ ಎದುರಾಗಬಹುದಾದ ದೊಡ್ಡ ತೊಂದರೆಗಳನ್ನು ತಡೆಯಬಲ್ಲದು ಎನಿಸುವುದರಲ್ಲಿ ತಪ್ಪಿಲ್ಲ. ಇಷ್ಟೇ ಅಲ್ಲದೆ, ದೊಡ್ಡ ದೊಡ್ಡ ಮೆಟ್ರೊ ನಗರಗಳಲ್ಲಿ ಇದು ಆರ್ಥಿಕ ಅನುಕೂಲದ ಜೊತೆಗೆ ಆ ವಯಸ್ಸಿನಲ್ಲಿ ದೇಹ ಮತ್ತು ಮನಸ್ಸು ಬಯಸುವುದನ್ನು ಒಂದು ಕಮಿಟೆಡ್ ಸಂಬಂಧದೊಳಗೆ (ಹೆಚ್ಚು ಜವಾಬ್ದಾರಿಗಳಿಲ್ಲದಂತೆ) ಸಿಗುವಂತೆ ಮಾಡುತ್ತದೆ.

ಇತ್ತೀಚಿನ ಶ್ರದ್ಧಾ ವಾಲಕರ್‌ ಪ್ರಕರಣದ ನಂತರ ಲಿವ್-ಇನ್ ಸಂಬಂಧಗಳ ಔಚಿತ್ಯ ಮತ್ತು ಸುರಕ್ಷತೆಯ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಇಂತಹ ಒಂದು ಅಮಾನುಷ ಕೃತ್ಯಕ್ಕೆ ಲಿವ್–ಇನ್ ಸಂಬಂಧಗಳನ್ನು, ಸಂತ್ರಸ್ತಳನ್ನೂ ಹೊಣೆಯಾಗಿಸಲಾಗುತ್ತಿದೆ. ಹೆತ್ತವರೇ ವರ ಹುಡುಕಿ, ಲಕ್ಷಗಟ್ಟಲೆ ಖರ್ಚು ಮಾಡಿ, ಹಣ, ಆಸ್ತಿ, ಬಂಗಾರ ಸುರಿದು ಮದುವೆ ಮಾಡಿಕೊಟ್ಟ ನಂತರವೂ ಹೆಣ್ಣುಗಳು ಗಂಡನ ಮನೆಯಲ್ಲಿ ಕೊಲೆಯಾಗುತ್ತಿರುವಂತಹ ಉದಾಹರಣೆಗಳಿವೆ. ಕುಟುಂಬ ಮರ್ಯಾದೆಯ ಹೆಸರಲ್ಲಿ ಹೆತ್ತವರಿಂದಲೇ ಹತ್ಯೆಯಾಗುತ್ತಿರುವುದನ್ನು ಕೇಳುತ್ತಿದ್ದೇವೆ. ಈ ಎರಡೂ ರೀತಿಯ ಪ್ರಕರಣಗಳ ಸಂಖ್ಯೆ ಹೋಲಿಕೆಯಲ್ಲಿ ಅತೀ ದೊಡ್ಡದಾಗಿದೆ. ಹೀಗಿರುವಾಗ ಲಿವ್ಇನ್ ಸಂಬಂಧಗಳಿಂದ ಹೆಣ್ಣು ಮಕ್ಕಳ ವಿರುದ್ಧದ ಅಪರಾಧಗಳು ಹೆಚ್ಚುತ್ತಿವೆ ಎಂದು ದೂಷಿಸುವುದು ಅತಾರ್ಕಿಕ.

ಹಾಗಂತ ಲಿವ್ಇನ್ ಸಂಬಂಧಗಳಲ್ಲಿ ಸಮಸ್ಯೆಗಳೇ ಇಲ್ಲವೆಂದೇನು ಅರ್ಥವಲ್ಲ. ದೈಹಿಕ ಹಿಂಸೆ ಅನುಭವಿಸುತ್ತಿದ್ದರೂ, ಸಂಬಂಧಗಳು ಅನಿವಾರ್ಯ ಬಂಧನಗಳಾಗದಿರಲಿ ಎಂಬ ಕಾರಣಕ್ಕಾಗಿಯೇ ಇರುವ ಲಿವ್-ಇನ್ ಸಂಬಂಧದಿಂದ ಹೊರಬರಲು ಶ್ರದ್ಧಾ ಹಿಂಜರಿದಿದ್ದು ಏಕೆ? ಸಮಾಜದ ಅಂಜಿಕೆಯೇ? ಕುಟುಂಬ ತೊರೆದು ಬಂದವಳಿಗೆ ಎಲ್ಲೂ ಬೆಂಬಲ ಸಿಗಲಾರದೆಂಬ ಭಯವೇ? ಪ್ರಾಯುಶಃ ಸಮಾಜ ಇಂತಹ ಸಹಜೀವನವನ್ನು ಕೀಳು ದೃಷ್ಟಿಯಿಂದ ನೋಡದೇ ಇದ್ದರೆ, ಲಿವ್ಇನ್ ಸಂಬಂಧಗಳು ಸೋತಾಗ ಅದನ್ನು ಆಯ್ದುಕೊಂಡವರನ್ನು ಕಟಕಟೆಯಲ್ಲಿ ನಿಲ್ಲಿಸದೇ ಹೋದರೆ ಶ್ರದ್ಧಾ ವಾಲಕರ್ ನಂತಹ ಹೆಣ್ಣುಗಳಿಗೆ ಅವುಗಳಿಂದ ಹೊರಬರುವ ಧೈರ್ಯ ಸಿಗುತ್ತದೇನೋ.

(ಲೇಖಕಿ ಕಥೆಗಾರ್ತಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT