ಶನಿವಾರ, ಫೆಬ್ರವರಿ 4, 2023
17 °C
90 ವರ್ಷ ಹಿಂದಿನ ‘ಪೂನಾ ಕರಾರು’ ದಲಿತರ ಮೇಲೆ ಅನ್ಯಾಯ ಮಾಡಿತು ಎಂಬ ನಂಬಿಕೆ ತಪ್ಪು

ಗಾಂಧಿ-ಅಂಬೇಡ್ಕರ್‌ ಸಂವಾದ ಬೇಕು, ವಿವಾದ ಬೇಡ

ಸುಧೀಂದ್ರ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಮಹಾತ್ಮ ಗಾಂಧಿ ಮತ್ತು ಡಾ. ಬಾಬಾಸಾಹೇಬ್‌ ಅಂಬೇಡ್ಕರ್ ಅವರು ಭಿನ್ನ ಗುರಿಗಳನ್ನು ಹೊಂದಿದ್ದರು ಎಂಬ ತಪ್ಪು ಗ್ರಹಿಕೆಯನ್ನು ಪಸರಿಸುವ ಪ್ರಯತ್ನ ನಡೆಯುತ್ತಿರುವುದು ಖೇದಕರ.

***
ಹರಿಜನ ಅಥವಾ ದಲಿತ? ಗಾಂಧೀಜಿ ಅಥವಾ ಅಂಬೇಡ್ಕರ್‌? ಮಹಾತ್ಮ ಗಾಂಧಿ ಮತ್ತು ಡಾ. ಬಾಬಾಸಾಹೇಬ್‌ ಅಂಬೇಡ್ಕರ್ ಅವರು ಭಿನ್ನ ಗುರಿಗಳನ್ನು ಹೊಂದಿದ್ದರು ಎಂಬ ತಪ್ಪು ಗ್ರಹಿಕೆಯನ್ನು ಪಸರಿಸುವ ಪ್ರಯತ್ನ ನಡೆಯುತ್ತಿರುವುದು ಖೇದಕರ. ಗಾಂಧೀಜಿ ಅವರು ದಲಿತರ ಶತ್ರು ಎಂದು ಕೂಡ ಕೆಲವು ಶಕ್ತಿಗಳು ಬಿಂಬಿಸಿವೆ. ‘ಅಸ್ಪೃಶ್ಯರು’ ಕೂಡ ‘ದೇವರ ಮಕ್ಕಳು’ ಎಂಬ ತಮ್ಮ ‍ಪರಿಕಲ್ಪನೆಯನ್ನು ‘ಹರಿಜನ’ ಪದವನ್ನು ಜನಪ್ರಿಯಗೊಳಿಸುವ ಮೂಲಕ ಜನರಿಗೆ ತಲುಪಿಸಲು ಗಾಂಧೀಜಿ ಪ್ರಯತ್ನಿಸಿದ್ದರು. ಆದರೆ, ಅವರ ಟೀಕಾಕಾರರು ಈ ಪದಕ್ಕೆ ಕಳಂಕ ಅಂಟಿಕೊಳ್ಳುವಂತೆ ವ್ಯವಸ್ಥಿತವಾಗಿ ಮಾಡಿದರು. ‘ಹರಿಜನ’ ಎಂಬ ಪದವೇ ಅವಮಾನಕಾರಿ ಎಂದು ವಾದಿಸಿದರು. 

ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಡೆದ ಮಹತ್ವದ ವಿದ್ಯಮಾನವೊಂದನ್ನು ಈ ಪರಿಪ್ರೇಕ್ಷ್ಯದಲ್ಲಿ ಇರಿಸಿ ನೋಡುವುದು ಉಪಯುಕ್ತ. ಗಾಂಧೀಜಿಯ ಪ್ರತಿನಿಧಿಯಾಗಿ ಮದನ ಮೋಹನ ಮಾಳವೀಯ (‘ಪ್ರಬಲ ಜಾತಿ’ ಹಿಂದೂಗಳ ಪರವಾಗಿ) ಮತ್ತು ದಮನಿತ ವರ್ಗಗಳ (ದಲಿತ ಎಂಬ ಪದ ಆಗ ಚಾಲ್ತಿಯಲ್ಲಿ ಇರಲಿಲ್ಲ) ಪರವಾಗಿ ಡಾ. ಅಂಬೇಡ್ಕರ್‌ ಅವರು ಸಹಿ ಮಾಡಿದ್ದ ‘ಪೂನಾ ಒಪ್ಪಂದ’ಕ್ಕೆ ಕಳೆದ ತಿಂಗಳು (ಸೆಪ್ಟೆಂಬರ್‌ 24) 90 ವರ್ಷ ತುಂಬಿದೆ. ಮಹಾತ್ಮ ಗಾಂಧಿ ಅವರು ಉನ್ನತ ಧ್ಯೇಯ ಇರಿಸಿಕೊಂಡಿದ್ದ ‘ಹರಿಜನ ಸೇವಕ ಸಂಘ’ವನ್ನು ಅದೇ ದಿನ ಸ್ಥಾಪಿಸಿದರು: ಅಸ್ಪೃಶ್ಯತೆಯ ಶಾಪವನ್ನು ನಿರ್ಮೂಲನಗೊಳಿಸಿ ಜಾತಿ, ಮತ, ಜನಾಂಗ, ಮತ್ತು ಲಿಂಗದ ಆಧಾರದಲ್ಲಿ ಯಾವುದೇ ರೀತಿಯ ಅನ್ಯಾಯ, ಅಪಮಾನ ಮತ್ತು ತಾರತಮ್ಯ ಇಲ್ಲದ ಸಮಾಜ ನಿರ್ಮಾಣವೇ ಆ ಧ್ಯೇಯವಾಗಿತ್ತು. ಈ ಎಲ್ಲ ಅನಿಷ್ಟಗಳಿಂದ ಸಮಾಜವು ಮುಕ್ತವಾಗದೇ ಇದ್ದರೆ ಒಗ್ಗಟ್ಟು, ಶಾಂತಿ, ಸಾಮರಸ್ಯ ಮತ್ತು ಖಚಿತ ಪ್ರಗತಿ ಸಾಧ್ಯವಿಲ್ಲ ಎಂಬುದು ಗಾಂಧೀಜಿಗೆ ಮನದಟ್ಟಾಗಿತ್ತು. 

ಈ ಒಪ್ಪಂದದ ಮಹತ್ವ ಅರ್ಥವಾಗಬೇಕಾದರೆ ಅದರ ಹಿನ್ನೆಲೆಯನ್ನು ನೆನಪಿಸಿಕೊಳ್ಳುವುದು ಅಗತ್ಯ. ಬ್ರಿಟಿಷ್‌ ಸರ್ಕಾರವು ದಮನಿತ ಜಾತಿಗಳಿಗೆ ಪ್ರತ್ಯೇಕ ಪ್ರಾತಿನಿಧ್ಯ ನೀಡಲು 1931ರ ನವೆಂಬರ್‌ನಲ್ಲಿ ನಿರ್ಧರಿಸಿತು. ಈ ಯೋಜನೆಯ ಪ್ರಕಾರ, ಪ್ರಾದೇಶಿಕ ಶಾಸನ ಸಭೆಗಳಿಗೆ ದಲಿತರು ತಮ್ಮ ಪ್ರತಿನಿಧಿಗಳನ್ನು ಆರಿಸಿ ಕಳುಹಿಸಲು ಅವಕಾಶ ಇತ್ತು. ಇದೇ ರೀತಿಯ ಅವಕಾಶವನ್ನು ಮುಸ್ಲಿಮರಿಗೂ ನೀಡಲಾಗಿತ್ತು. ಜಾತಿ ಅಥವಾ ಧರ್ಮದ ಪರಿಗಣನೆ ಇಲ್ಲದೆ ಎಲ್ಲರನ್ನೂ ಒಳಗೊಂಡ ಚುನಾವಣಾ ವ್ಯವಸ್ಥೆ ಪರವಾದ ಒಲವನ್ನು ಮೊದಲು ತೋರಿದ್ದರೂ ಬಳಿಕ ಪ್ರತ್ಯೇಕ ಪ್ರಾತಿನಿಧ್ಯ ಬೇಕು ಎಂಬ ಬೇಡಿಕೆಯನ್ನು ಅಂಬೇಡ್ಕರ್ ಮುಂದಿಟ್ಟಿದ್ದರು. ಆ ಸಂದರ್ಭದಲ್ಲಿ ಗಾಂಧೀಜಿ ಅವರನ್ನು ಬ್ರಿಟಿಷರು ಪುಣೆಯ ಯೆರವಡಾ ಜೈಲಿನಲ್ಲಿ ಇರಿಸಿದ್ದರು. ಪ್ರತ್ಯೇಕ ಪ್ರಾತಿನಿಧ್ಯ ವ್ಯವಸ್ಥೆಯನ್ನು ಗಾಂಧೀಜಿ ಅವರು ದೃಢವಾಗಿ ವಿರೋಧಿಸಿದ್ದರು. ಹಿಂದೂ ಸಮಾಜವನ್ನು ವಿಭಜಿಸುವುದಕ್ಕಾಗಿ ವಸಾಹತುಶಾಹಿ ಆಡಳಿತಗಾರರ ಸಂಚು ಇದು ಎಂದು ಗಾಂಧೀಜಿ ಹೇಳಿದ್ದರು. 1932ರ ಸೆಪ್ಟೆಂಬರ್‌ 20ರಂದು ಅವರು ಆಮರಣಾಂತ ಉಪವಾಸ ಕೈಗೊಂಡರು. ಗಾಂಧೀಜಿಯವರ ಜೀವ ಉಳಿಸುವುದಕ್ಕಾಗಿ ಸಾರ್ವಜನಿಕವಾಗಿ ವ್ಯಕ್ತವಾದ ಗಂಭೀರ ಕಾಳಜಿಗೆ ಸ್ಪಂದಿಸಿದ ಅಂಬೇಡ್ಕರ್‌ ತಮ್ಮ ನಿಲುವಿನಿಂದ ಹಿಂದೆ ಸರಿದರು. ಅದರ ಪ್ರಕಾರ, ಪೂನಾ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಬ್ರಿಟಿಷರು ತಮ್ಮ ನಿರ್ಧಾರವನ್ನು ಕೈಬಿಟ್ಟರು ಮತ್ತು ಗಾಂಧೀಜಿ ಉಪವಾಸ ಕೊನೆಗೊಳಿಸಿದರು. ಪರಿಶಿಷ್ಟ ಜಾತಿಗಳ ಜನರಿಗೆ ಈ ಒಪ್ಪಂದವು ಪ್ರಮುಖ ಪ್ರಯೋಜನವೊಂದನ್ನು ಕೊಟ್ಟಿತು. ಸಾಮಾನ್ಯ ಪ್ರಾತಿನಿಧ್ಯ ವ್ಯವಸ್ಥೆ ಅಡಿಯಲ್ಲಿ ಇದ್ದ ಮೀಸಲು ಕ್ಷೇತ್ರಗಳ ಸಂಖ್ಯೆಯನ್ನು 96ರಿಂದ 148ಕ್ಕೆ ಹೆಚ್ಚಿಸಲಾಯಿತು. 

ಈ ಒಪ್ಪಂದದೊಂದಿಗೆ ಗಾಂಧೀಜಿ ತಮ್ಮ ಕೆಲಸಗಳನ್ನು ನಿಲ್ಲಿಸಲಿಲ್ಲ, ದಲಿತರಿಗೆ ಸಮಾನತೆ ಮತ್ತು ನ್ಯಾಯ ದೊರಕಿಸುವ ಪ್ರಯತ್ನಗಳನ್ನು ಇನ್ನಷ್ಟು ತೀವ್ರಗೊಳಿಸಿದರು. ‘ಆತ್ಮ ಶುದ್ಧೀಕರಣ’ಕ್ಕಾಗಿ ಮತ್ತು ಅಸ್ಪೃಶ್ಯತೆಯ ಪದ್ಧತಿ ಮುಂದುವರಿದಿರುವುದಕ್ಕೆ ತಮ್ಮ ಗಾಢ ವೇದನೆಯನ್ನು ತೋರಿಸುವುದಕ್ಕಾಗಿ 1933ರ ಮೇಯಲ್ಲಿ ಗಾಂಧೀಜಿ ಅವರು ಯೆರವಡಾ ಜೈಲಿನಲ್ಲಿಯೇ 21 ದಿನಗಳ ಉಪವಾಸ ಆರಂಭಿಸಿದರು. ಅದೇ ವರ್ಷ ನವೆಂಬರ್‌ನಲ್ಲಿ ದೇಶವ್ಯಾಪಿಯಾದ ಒಂಬತ್ತು ತಿಂಗಳ ‘ಹರಿಜನ ಯಾತ್ರೆ’ಯನ್ನು ಆರಂಭಿಸಿದರು. ಅದಲ್ಲದೆ, ‘ಪ್ರಭಾವಿ ಜಾತಿ’ಗಳ ಹಿಂದೂಗಳು ಅಸ್ಪೃಶ್ಯತೆಯನ್ನು ಶಾಶ್ವತವಾಗಿ ನಿಲ್ಲಿಸಬೇಕು ಮತ್ತು ಎಲ್ಲ ದೇವಾಲಯಗಳನ್ನು ದಲಿತರಿಗೆ ತೆರೆದಿಡಬೇಕು ಎಂದು ಆಗ್ರಹಿಸಿದರು. ಅಸ್ಪೃಶ್ಯತೆಯು ‘ಹಿಂದೂ ಧರ್ಮದ ಮೇಲೆ ಕರಿ ಚುಕ್ಕೆ’ ಎಂದು ಟೀಕಿಸಿದ ಅವರು ‘ಅಸ್ಪೃಶ್ಯತೆ ಇರುವುದಕ್ಕಿಂತ ಹಿಂದೂ ಧರ್ಮವೇ ಸಾಯುವುದು ಮೇಲು ಎಂದು ಭಾವಿಸುವೆ’ ಎಂದು ಘೋಷಿಸಿದರು. ‘ನಾಯಿಯೊಂದು ಕೆರೆಯಿಂದ ನೀರು ಕುಡಿಯಬಹುದು, ಆದರೆ ಬಾಯಾರಿದ ದಮನಿತವರ್ಗದ ಬಾಲಕನೊಬ್ಬ ಕುಡಿಯಲು ಸಾಧ್ಯವಾಗದು. ಒಂದು ವೇಳೆ ಆತ ಅಲ್ಲಿಗೆ ಹೋದರೆ ಹೊಡೆತ ತಿನ್ನದೆ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಇಂದು ಆಚರಣೆಯಲ್ಲಿರುವ ಅಸ್ಪೃಶ್ಯತೆಯು ಮನುಷ್ಯನನ್ನು ನಾಯಿಗಿಂತ ಕಡೆಯಾಗಿ ನೋಡುತ್ತದೆ’ ಎಂದು ತಮ್ಮ ಆಕ್ರೋಶವನ್ನು ಗಾಂಧೀಜಿ ವ್ಯಕ್ತಪಡಿಸಿದ್ದರು. 

ಗಾಂಧೀಜಿಯವರ ‘ಹರಿಜನ’ ಅಭಿಯಾನವು ಹಿಂದೂ ಸಮಾಜದ ಮೇಲೆ ಬಹುದೊಡ್ಡ ಪರಿಣಾಮ ಬೀರಿತ್ತು. ಹಲವು ಹಿಂದೂ ದೇವಾಲಯಗಳು ದಲಿತರಿಗೆ ಪ್ರವೇಶ ನೀಡಿದವು. ಸಾರ್ವಜನಿಕ ಬಾವಿಗಳನ್ನು ಬಳಸಲು ದಲಿತರಿಗೂ ಅವಕಾಶ ಕೊಡಬೇಕು ಎಂದು ಜನರಿಗೆ ಹೇಳಲು ಗಾಂಧೀಜಿಯ ಅನುಯಾಯಿಗಳು ಹಳ್ಳಿಗಳಿಗೆ ಹೋದರು. ಅಸ್ಪೃಶ್ಯತೆಯನ್ನು ತೊಡೆದು ಹಾಕಿ ಸ್ವತಃ ಉದಾಹರಣೆಗಳಾಗಲು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಲಾಯಿತು. ಇಲ್ಲೊಂದು ಗಮನಾರ್ಹ ಉದಾಹರಣೆ ಇದೆ. ಗಾಂಧೀಜಿ ಅವರು ಯೆರವಡಾ ಸೆರೆಮನೆಯಲ್ಲಿ ಇದ್ದಾಗ ಅವರನ್ನು ನೋಡಲು ಜವಾಹರಲಾಲ್‌ ನೆಹರೂ ಅವರ ಹೆಂಡತಿ ಕಮಲಾ ಮತ್ತು ತಾಯಿ ಸ್ವರೂಪ ರಾಣಿ ಅವರು ಬಂದರು. ಸ್ವರೂಪ ರಾಣಿ ಅವರು ಅತ್ಯಂತ ಸಂಪ್ರದಾಯಸ್ಥ ಹಿಂದೂ ಮಹಿಳೆ. ಅವರು ಮನೆಯಲ್ಲಿ ತಮಗಾಗಿ ಪ್ರತ್ಯೇಕ, ಸಾಂಪ್ರದಾಯಿಕ ಅಡುಗೆಮನೆ ಹೊಂದಿದ್ದರು. ಅಲಹಾಬಾದ್‌ನಿಂದ ಹೊರಡುವ ಮುನ್ನ ‘ಅಸ್ಪೃಶ್ಯ’ರ ಕೈಯಿಂದ ಪ್ರಸಾದ ಸ್ವೀಕರಿಸಿದೆ ಎಂದು ಅವರು ಗಾಂಧೀಜಿಗೆ ಹೇಳಿದರು. 

ಪೂನಾ ಕರಾರಿನ ಮೇಲೆ ಆಪಾದನೆ ತಪ್ಪು: ಮೂರು ಕಾರಣಗಳು: ಒಂಬತ್ತು ದಶಕಗಳ ಹಿಂದೆ ‘ಪೂನಾ ಒಪ್ಪಂದ’ಕ್ಕೆ ಸಹಿ ಹಾಕಿದ ಬಳಿಕ ಭಾರತದಲ್ಲಿ ಹಲವು ಮಹತ್ವಪೂರ್ಣವಾದ ಬದಲಾವಣೆಗಳು ಆಗಿವೆ. ಮುಖ್ಯವಾಗಿ ಗಾಂಧೀಜಿಯ ನೇತೃತ್ವದಲ್ಲಿ ನಡೆದ ಸುದೀರ್ಘ ಹೋರಾಟದ ಬಳಿಕ ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿದೆ. ಪ್ರಬುದ್ಧವಾದ ಸಂವಿಧಾನವನ್ನು 1950ರಲ್ಲಿ ದೇಶವು ಅಳವಡಿಸಿಕೊಂಡಿದೆ. ಬ್ರಿಟಿಷರು ನೀಡಿದ್ದ ಪ್ರತ್ಯೇಕ ಪ್ರಾತಿನಿಧ್ಯದ ಅವಕಾಶವನ್ನು ಅಂಬೇಡ್ಕರ್ ಅವರಿಗೆ ಮನಸ್ಸಿಲ್ಲದಿದ್ದರೂ ಕೈಬಿಡುವಂತೆ ಬಲವಂತ ಮಾಡಿ ಆ ಸಮುದಾಯಕ್ಕೆ ಗಾಂಧೀಜಿ ಬಹುದೊಡ್ಡ ಅನ್ಯಾಯ ಮಾಡಿದ್ದಾರೆ ಎಂದು ಕರ್ನಾಟಕ ಮತ್ತು ಬೇರೆಡೆಯಲ್ಲಿರುವ ಅಂಬೇಡ್ಕರ್‌ವಾದಿ ಚಿಂತಕರು ಆರೋಪಿಸಿದ್ದಾರೆ. ಇದು ಸುಳ್ಳು ಮತ್ತು ಆಧಾರರಹಿತ ಆರೋಪ ಎಂದು ತೋರಿಸಲು ಮೂರು ಕಾರಣಗಳನ್ನು ನಾನು ಕೊಡಬಲ್ಲೆ. 

ಮೊದಲ ಕಾರಣ: ಅಂಬೇಡ್ಕರ್ ಅವರು 1947ರ ಮಾರ್ಚ್‌ನಲ್ಲಿ ಪ್ರಕಟಿಸಿದ್ದ ‘ಸ್ಟೇಟ್ಸ್ ಆ್ಯಂಡ್‌ ಮೈನಾರಿಟೀಸ್‌’ ಪುಸ್ತಕವನ್ನು ‘ಭಾರತ ಸಂಯುಕ್ತ ಸಂಸ್ಥಾನದ ಸಂವಿಧಾನ’ ಎಂದು ಕರೆದಿದ್ದರು. ‘ಪೂನಾ ಒಪ್ಪಂದ’ವನ್ನು ರದ್ದುಪಡಿಸಬೇಕು ಮತ್ತು ಪ್ರತ್ಯೇಕ ಪ್ರಾತಿನಿಧ್ಯ ವ್ಯವಸ್ಥೆಯನ್ನು ಮರುಪರಿಚಯಿಸಬೇಕು ಎಂದು ಅವರು ಕರೆಕೊಟ್ಟಿದ್ದರು. ಆದರೆ, ಸ್ವತಂತ್ರ ಭಾರತದ ಸಂವಿಧಾನವನ್ನು ಅಳವಡಿಸಿದ ಸಂವಿಧಾನ ರಚನಾ ಸಭೆಯು ಈ ಪ್ರಸ್ತಾವವನ್ನು ತಿರಸ್ಕರಿಸಿತು. ಸಂಸತ್ತು ಮತ್ತು ರಾಜ್ಯ ಶಾಸನ ಸಭೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲು ಕ್ಷೇತ್ರಗಳು ಇರುವ ವ್ಯವಸ್ಥೆಯನ್ನೇ ಉಳಿಸಿಕೊಂಡಿತು. ಸಂವಿಧಾನ ಶಿಲ್ಪಿ ಎಂಬ ಖ್ಯಾತಿ ಹೊಂದಿದ್ದ, ಡಾ. ಅಂಬೇಡ್ಕರ್ ಅವರೇ ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದರೂ ಈ ನಿರ್ಧಾರಕ್ಕೆ ಬರಲಾಗಿತ್ತು. 

ಡಾ. ಅಂಬೇಡ್ಕರ್‌ ಅವರು ಬರೆದ ‘ಸ್ಟೇಟ್ಸ್‌ ಆ್ಯಂಡ್‌ ಮೈನಾರಿಟೀಸ್‌’ ಪುಸ್ತಕಕ್ಕೂ ಸಂವಿಧಾನ ರಚನಾ ಸಮಿತಿಯು (ಇದರ ಬಹುಸಂಖ್ಯೆಯ ಸದಸ್ಯರು ಕಾಂಗ್ರೆಸ್‌ನವರೇ ಆಗಿದ್ದರು) ಅನುಮೋದಿಸಿದ ಸಂವಿಧಾನಕ್ಕೂ ಅಂತಹ ಹೋಲಿಕೆಯೇನೂ ಇರಲಿಲ್ಲ. ಉದಾಹರಣೆಗೆ, ಪರಿಶಿಷ್ಟ ಜಾತಿಗಳ ಸಮುದಾಯಗಳನ್ನು ‘ಅಲ್ಪಸಂಖ್ಯಾತರು’ ಎಂದು ಪರಿಗಣಿಸಬೇಕು ಎಂದು ಅಂಬೇಡ್ಕರ್ ಮುಂದಿಟ್ಟಿದ್ದ ಬೇಡಿಕೆಯನ್ನು ಸಂವಿಧಾನ ರಚನಾ ಸಭೆಯು ಸಾರಾ ಸಗಟಾಗಿ ತಿರಸ್ಕರಿಸಿತ್ತು. ಮುಸ್ಲಿಮರಿಗೆ ಇದ್ದ ಪ್ರತ್ಯೇಕ ಪ್ರಾತಿನಿಧ್ಯ ವ್ಯವಸ್ಥೆಯನ್ನೂ ಸಭೆಯು ರದ್ದುಪಡಿಸಿದ್ದು ಗಮನಾರ್ಹ. ಆದುದರಿಂದಲೇ ಪ್ರತ್ಯೇಕ ಪ್ರಾತಿನಿಧ್ಯ ವ್ಯವಸ್ಥೆಯನ್ನು ಗಾಂಧೀಜಿ ಕಸಿದುಕೊಂಡರು ಎಂದು ಆಪಾದಿಸುವ ಅಂಬೇಡ್ಕರ್‌ವಾದಿಗಳು, ಗಾಂಧೀಜಿ ಮಾತ್ರವಲ್ಲ ಅಂಬೇಡ್ಕರ್ ಕೂಡ ಇದಕ್ಕೆ ಹೊಣೆಗಾರರು ಎಂಬುದನ್ನು ಗಮನಿಸಬೇಕು.

ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದರೂ 1950ರಲ್ಲಿ ಅಳವಡಿಸಿಕೊಳ್ಳಲಾದ ಸಂವಿಧಾನದಲ್ಲಿ ಪ್ರತ್ಯೇಕ ಪ್ರಾತಿನಿಧ್ಯ ವ್ಯವಸ್ಥೆಯನ್ನು ಉಳಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಲಿಲ್ಲ.

ಇದು ಮುಖ್ಯವಾದ ಪ್ರಶ್ನೆಯೊಂದಕ್ಕೆ ಕಾರಣವಾಗುತ್ತದೆ: ಡಾ.ಅಂಬೇಡ್ಕರ್ ಅವರು ‘ಭಾರತದ ಸಂವಿಧಾನದ ಪಿತಾಮಹ ಎಂದು ಹೊಗಳಲಾಗುತ್ತಿದ್ದರೂ ಸಂವಿಧಾನದಲ್ಲಿರುವ ಎಷ್ಟು ವಿಚಾರಗಳು ಅವರ ಪರಿಕಲ್ಪನೆ ಮತ್ತು ಎಷ್ಟನ್ನು ಅವರು ಸೃಷ್ಟಿಸಿದ್ದಾರೆ? ರಾಜ್ಯಸಭೆಯಲ್ಲಿ 1953ರಲ್ಲಿ ನಡೆದ ಚರ್ಚೆಯಲ್ಲಿ ಡಾ. ಅಂಬೇಡ್ಕರ್‌ ಅವರೇ ಉತ್ತರಿಸಿದ್ದಾರೆ. ‘ಈ ಸಂವಿಧಾನವು ಯಾರೊಬ್ಬರಿಗೂ ಹೊಂದಿಕೆ ಆಗುವುದಿಲ್ಲವಾದ್ದರಿಂದ ಇದನ್ನು ಸುಟ್ಟು ಹಾಕುವವರಲ್ಲಿ ನಾನೇ ಮೊದಲಿಗನಾಗಿರುತ್ತೇನೆ... ಜನರು ನನಗೆ ಹೀಗೆ ಹೇಳುತ್ತಲೇ ಇದ್ದಾರೆ: ‘ಓಹ್‌, ಸಂವಿಧಾನವನ್ನು ಬರೆದವರು ನೀವೇ’. ನನ್ನ ಉತ್ತರ ‘ನಾನೊಬ್ಬ ಗುಲಾಮನಾಗಿದ್ದೆ. ಏನನ್ನು ಮಾಡಲು ಹೇಳಿದ್ದರೋ ಅದನ್ನು ನನ್ನ ಇಚ್ಛೆಗೆ ವಿರುದ್ಧವಾಗಿ ಮಾಡಿದ್ದೇನೆ’. 

ಭಾರತದ ಸಂವಿಧಾನವು ಹೇಗೆ ರಚನೆಗೊಂಡಿತು ಎಂಬುದರ ನಿಜವಾದ ಇತಿಹಾಸವನ್ನು ಇಂದಿನ ತಲೆಮಾರಿನ ಭಾರತೀಯರಿಗೆ ತೋರಿಸಿಕೊಡಬೇಕಿದೆ. 

ಎರಡನೇ ಕಾರಣ: ದಲಿತರಿಗೆ ಪ್ರತ್ಯೇಕ ಪ್ರಾತಿನಿಧ್ಯ ಯೋಜನೆಯನ್ನು ಭಾರತದ ಸಂವಿಧಾನದಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಭಾವಿಸೋಣ. ಅದೇ ತರ್ಕದ ಪ್ರಕಾರ, ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೂ ಪ್ರತ್ಯೇಕ ಪ್ರಾತಿನಿಧ್ಯ ವ್ಯವಸ್ಥೆಯನ್ನು ಮಾಡಬೇಕಾಗುತ್ತಿತ್ತು. ಕ್ರಮೇಣ, ಇಂತಹುದೇ ಬೇಡಿಕೆಗಳು ಇತರೆ ಹಿಂದುಳಿದ ಜಾತಿಗಳಿಂದಲೂ ಬರುತ್ತಿದ್ದವು. ಈ ರೀತಿಯಲ್ಲಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ಜಾತಿಗಳ ಸಮುದಾಯಗಳು ತಮ್ಮ ಪ್ರತಿನಿಧಿಗಳನ್ನು ತಾವೇ ಆಯ್ಕೆ ಮಾಡಿಕೊಂಡರೆ ನಮ್ಮ ಪ್ರಜಾಪ್ರಭುತ್ವ ಮತ್ತು ಭಾರತದ ಆಳ್ವಿಕೆ ಗತಿ ಏನಾಗುತ್ತಿತ್ತು? ಇಲ್ಲಿ ಎಲ್ಲವೂ ಅಸ್ತವ್ಯಸ್ತ ಆಗುತ್ತಿತ್ತು. ಅಷ್ಟೇ ಅಲ್ಲದೆ, ದಲಿತ ಸಮುದಾಯದ ವಿವಿಧ ಜಾತಿಗಳು ತಮಗೆ ಪ್ರತ್ಯೇಕ ಪ್ರಾತಿನಿಧ್ಯ ಬೇಕು ಎಂಬ ಬೇಡಿಕೆ ಮುಂದಿಡುತ್ತಿದ್ದವು. ಆಯ್ಕೆಯಾದ ಪ್ರತಿನಿಧಿಗಳು ತಮ್ಮ ಜಾತಿಗೆ ಮಾತ್ರ ಉತ್ತದಾಯಿಗಳಾಗಿರುವುದರಿಂದ ನಮ್ಮ ಸಮಾಜವು ಜಾತಿಯ ನೆಲೆಯಲ್ಲಿ ಚೂರಾಗುತ್ತಿತ್ತು. ‘ಜಾತಿ ವಿನಾಶ’ ಮಾಡಬೇಕು ಎಂಬ ಡಾ. ಅಂಬೇಡ್ಕರ್ ಅವರ ಗುರಿಯು ಸಾಧ್ಯವಾಗದೆ, ಪರಿಶಿಷ್ಟ ಜಾತಿ, ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಪ್ರತ್ಯೇಕ ಪ್ರಾತಿನಿಧ್ಯ ವ್ಯವಸ್ಥೆ ಇದ್ದರೆ ಜಾತಿ ವ್ಯವಸ್ಥೆಯನ್ನು ಪಾಲಿಸಲು ಸಂವಿಧಾನವೇ ಅನುಮತಿ ಕೊಟ್ಟಂತಹ ವಿಪರ್ಯಾಸ ಸೃಷ್ಟಿಯಾಗುತ್ತಿತ್ತು. 

ಮೂರನೇ ಕಾರಣ: ಪ್ರತ್ಯೇಕ ಪ್ರಾತಿನಿಧ್ಯ ಇದ್ದಿದ್ದರೆ ದಲಿತ ಸಮುದಾಯದಿಂದ ಸ್ವತಂತ್ರ ಮತ್ತು ಶಕ್ತ ದಲಿತ ನಾಯಕರು ಹೊರಹೊಮ್ಮುವುದು ಸಾಧ್ಯವಾಗುತ್ತಿತ್ತು ಎಂದು ಅಂಬೇಡ್ಕರ್‌ವಾದಿಗಳಲ್ಲಿ ಹಲವರು ವಾದಿಸುತ್ತಾರೆ. ಸಾಮಾನ್ಯ ಪ್ರಾತಿನಿಧ್ಯ ವ್ಯವಸ್ಥೆಯಲ್ಲಿ ಮೀಸಲು ಕ್ಷೇತ್ರಗಳಿದ್ದರೂ ದಲಿತ ಅಭ್ಯರ್ಥಿಗಳು ದಲಿತೇತರ ಮತದಾರರ ಕಾಳಜಿಗಳಿಗೂ ಸ್ಪಂದಿಸಬೇಕಾಗುತ್ತದೆ. ಇದು ದಲಿತ ಸಮುದಾಯದ ಬಗ್ಗೆ ಅವರಲ್ಲಿ ಇರುವ ಕಾಳಜಿಯನ್ನು ದುರ್ಬಲಗೊಳಿಸುತ್ತದೆ ಎಂದು ಕೆಲವರು ವಾದಿಸುತ್ತಾರೆ. ಆದರೆ, ಪ್ರಜಾಪ್ರಭುತ್ವವು ಕೆಲಸ ಮಾಡಬೇಕಿರುವುದು ಹೀಗೆಯೇ ಅಲ್ಲವೇ? ಅಪಾರ ಸಂಖ್ಯೆಯ ಜಾತಿಗಳು, ಭಾಷೆಗಳು, ಧಾರ್ಮಿಕ ವೈವಿಧ್ಯ ಇರುವ ಭಾರತದಂತಹ ದೇಶದಲ್ಲಿ ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿಯೂ ತಮ್ಮ ಕ್ಷೇತ್ರದ ಎಲ್ಲ ಜನರನ್ನು ಪ್ರತಿನಿಧಿಸಬೇಕು ಮತ್ತು ಅವರಿಗೆ ಸೇವೆ ಒದಗಿಸಬೇಕು; ತಮ್ಮ ಜಾತಿಯ ಜನರಿಗೆ ಮಾತ್ರ ಅಲ್ಲ. ಆದುದರಿಂದ, ದಲಿತರಿಗೆ ಪ್ರತ್ಯೇಕ ಪ್ರಾತಿನಿಧ್ಯ ಬೇಕು ಎನ್ನುವುದು ದಲಿತ ಪ್ರತ್ಯೇಕತಾವಾದದ ಅಪಾಯಕಾರಿ ಚಿಹ್ನೆಯಾಗಿದೆ. ಇದು ದಲಿತ ಸಮುದಾಯಕ್ಕೂ ಒಳ್ಳೆಯದಲ್ಲ, ದೇಶಕ್ಕೂ ಒಳ್ಳೆಯದಲ್ಲ. 

ಕೊನೆಯ ಒಂದು ಅಂಶ: ‘ಹರಿಜನ–ದಲಿತ’ ವಿಚಾರವನ್ನು ಚರ್ಚೆಗೆ ಎತ್ತಿಕೊಳ್ಳುವುದಕ್ಕೆ ನನಗೆ ಒಂದು ವೈಯಕ್ತಿಕ ಕಾರಣವೂ ಇದೆ. ದೆಹಲಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ, ಕರ್ನಾಟಕ ಸೇರಿ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿರುವ ಹರಿಜನ ಸೇವಕ ಸಂಘದ ಜೊತೆಗೆ ಇತ್ತೀಚೆಗೆ ನಾನು ತೀರಾ ಹತ್ತಿರದಿಂದ ತೊಡಗಿಸಿಕೊಂಡಿದ್ದೇನೆ. 1950, 60 ಮತ್ತು 70ರ ದಶಕದಲ್ಲಿ ಹರಿಜನ ಸೇವಕ ಸಂಘವು ಅತ್ಯಂತ ಕ್ರಿಯಾಶೀಲವಾಗಿ ಇತ್ತು. ಆದರೆ, ಈಗ ಅದು ಕೇಂದ್ರದಿಂದ ಬದಿಗೆ ಸರಿದಿದೆ. ಡಾ. ಅಂಬೇಡ್ಕರ್‌ ಅವರ ಜೀವನ ಮತ್ತು ಹೋರಾಟದಿಂದ ಸ್ಫೂರ್ತಿಗೊಂಡು ಸಮಾಜ, ರಾಜಕಾರಣ ಮತ್ತು ಸಂಸ್ಕೃತಿಯಲ್ಲಿ ದಲಿತ ಕ್ರಿಯಾಶೀಲತೆ ಪ್ರಮಾಣವು ಏರುತ್ತಲೇ ಇರುವುದು ಇದಕ್ಕೆ ಮುಖ್ಯವಾದ ಕಾರಣ. 

ದಲಿತರಲ್ಲಿನ ಈ ಹೊಸ ದೃಢತೆಗೆ ಒಂದು ಸಕಾರಾತ್ಮವಾದ ಭಾಗವೂ ಇದೆ. ಅದೇ ದಲಿತರಲ್ಲಿ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿರುವುದು. ದಮನ ಮತ್ತು ಅನ್ಯಾಯದ ವಿರುದ್ಧ ಅವರನ್ನು ಒಂದುಗೂಡಿಸಿದೆ. ಹಿಂದೂ ‘ಪ್ರಬಲ ಜಾತಿ’ಗಳ ಜನರ‌ ಕಣ್ಣನ್ನೂ ಇದು ತೆರೆಸಿದೆ. ದಲಿತ ಸೋದರರು ಅನುಭವಿಸಿದ ನೋವು ಮತ್ತು ಅಪಮಾನವನ್ನು ತೊಡೆದು ಹಾಕುವ ತಮ್ಮ ಹೊಣೆಗಾರಿಕೆಯ ಬಗ್ಗೆ ಅರಿವು ಮೂಡಿಸಿದೆ. ದಮನಿತ ಜಾತಿಗಳ ಜನರ ಸ್ಥಿತಿಯ ಬಗ್ಗೆ ಅಂಬೇಡ್ಕರ್ ಅವರಲ್ಲಿ ಇರುವ ಆಕ್ರೋಶದ ಆಳ ತಮಗೆ ಅರ್ಥವಾಗುತ್ತದೆ, ಅವರು ಆ ಜಾತಿಗಳಲ್ಲಿಯೇ ಜನಿಸಿದವರು ಮತ್ತು ಜಾತಿ ಶೋಷಣೆಯ ಸಂತ್ರಸ್ತರು ಎಂದು ಗಾಂಧೀಜಿ ಅವರೇ ಹೇಳಿಕೊಂಡಿದ್ದರು.

ಸಮಾಜದ ಎಲ್ಲ ವರ್ಗಗಳ ಜನರೂ ಅಂಬೇಡ್ಕರ್‌ ಅವರ ಶ್ರೇಷ್ಠತೆಯನ್ನು ಗುರುತಿಸಿದ್ದಾರೆ ಮತ್ತು ಅವರನ್ನು ಗೌರವಿಸುತ್ತಾರೆ ಎಂಬುದೇ ಹಿಂದೂ ‘ಪ್ರಬಲ ಜಾತಿ’ಗಳ ಜನರಲ್ಲಿ ಮೂಡಿರುವ ಹೊಸ ಅರಿವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಅಸ್ಪೃಶ್ಯತೆಯು ಬಹುಪಾಲು ಮರೆಯಾಗಿದ್ದರೂ ಜಾತಿ ಅಸಮಾನತೆ, ಪೂರ್ವಗ್ರಹ ಮತ್ತು ತಾರತಮ್ಯದ ಎಲ್ಲ ಕುರುಹುಗಳನ್ನು ತೊಡೆದು ಹಾಕುವ ದಿಸೆಯಲ್ಲಿ ಭಾರತವು ಇನ್ನೂ ಬಹುದೂರ ಸಾಗಬೇಕಿದೆ. ಈ ಗುರಿಯನ್ನು ಸಾಧಿಸುವುದಕ್ಕಾಗಿ ನಾವು ಗಾಂಧೀಜಿ ಮತ್ತು ಡಾ. ಅಂಬೇಡ್ಕರ್‌ ಅವರ ಕುರಿತು ಅಂಧ ‘ಭಕ್ತಿ’ ತೋರದೆಯೇ ಅವರಿಬ್ಬರಿಂದಲೂ ಸ್ಫೂರ್ತಿ ಪಡೆಯಬೇಕು. ದಾರಿಗಳು ಬೇರೆ ಬೇರೆ ಆಗಿದ್ದರೂ ಈ ಇಬ್ಬರೂ ಸಮಾನ ಗುರಿಯ ಬೆನ್ನು ಹತ್ತಿದ ಶ್ರೇಷ್ಠ ನಾಯಕರು. ಆದ್ದರಿಂದ, ಗಾಂಧಿ-ಅಂಬೇಡ್ಕರ್ ಅವರನ್ನು ಸರಿಯಾಗಿ, ಸತ್ಯನಿಷ್ಠವಾಗಿ ತಿಳಿದುಕೊಳ್ಳಲು ಸಂವಾದ ಬೇಕು, ವಿವಾದ ಬೇಡ; ಸಹಕಾರ ಬೇಕು, ಸಂಘರ್ಷ ಬೇಡ.

ಕನ್ನಡಕ್ಕೆ: ಹಮೀದ್‌ ಕೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು