ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೆ ಸಿಕ್ಕಾರೆಯೇ ಮತ್ತೊಬ್ಬ ‘ನೀರ್‌ ಸಾಬ್‌’?

Last Updated 21 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಸುಡಾನ್‌ ಕ್ಷಾಮದ ಭೀಕರತೆಯನ್ನು ಪ್ರತಿಬಿಂಬಿಸುತ್ತಿದ್ದ ಆ ಛಾಯಾಚಿತ್ರವೇನಾದರೂ ನಿಮ್ಮ ನೆನಪಿನಂಗಳದಲ್ಲಿ ಇನ್ನೂ ಉಳಿದಿದೆಯೇ? ಹಸಿವಿನಿಂದಾಗಿ ಎಲುಬಿನ ಹಂದರವಾಗಿದ್ದ ಮಗುವೊಂದು ನಿರ್ಜನ ಪ್ರದೇಶದಲ್ಲಿ ಬಿದ್ದಿರುವಾಗ ಅದರ ಸಾವನ್ನೇ ಎದುರು ನೋಡುತ್ತಾ ಹದ್ದೊಂದು ಕಾದು ಕುಳಿತಿತ್ತು. ನೀರಿಲ್ಲದೆ ರಾಜ್ಯದ ಬಹುತೇಕ ಹಳ್ಳಿಗಳು ಬಿಕ್ಕುತ್ತಿದ್ದರೆ, ಉಕ್ಕೇರುತ್ತಿರುವ ಉಮೇದಿನಿಂದ ಅಲ್ಲಿ ಮತಗಳಿಗೆ ಗಾಳ ಹಾಕಲು ಹವಣಿಸುತ್ತಿರುವ ರಾಜಕೀಯ ಪಕ್ಷಗಳು ಕೂಡ ಒಂದು ರೀತಿಯಲ್ಲಿ ಆ ಹದ್ದಿನಂತೆಯೇ!

ಸಾವಿನ ದವಡೆಯಲ್ಲಿದ್ದ ಮಗುವನ್ನು ರಕ್ಷಿಸಲಾಗದ ನೋವು ಆ ಚಿತ್ರವನ್ನು ಕ್ಲಿಕ್ಕಿಸಿದ ಛಾಯಾಗ್ರಾಹಕ ಕೆವಿನ್‌ ಕಾರ್ಟರ್‌ ಅವರನ್ನು ಎಷ್ಟೊಂದು ಕಾಡಿತ್ತೆಂದರೆ, ಖಿನ್ನತೆಗೆ ಜಾರಿಹೋಗಿದ್ದ ಅವರು, ಕೊನೆಗೆ ಆತ್ಮಹತ್ಯೆ ಮಾಡಿಕೊಂಡರು. ಆದರೆ, ಶುದ್ಧ ಕುಡಿಯುವ ನೀರೆಂಬ ಮಾಯಾಜಿಂಕೆಯ ಹಿಂದೆ ಹಳ್ಳಿಗರನ್ನು ಓಡಿಸುತ್ತಿರುವ ರಾಜಕೀಯ ನೇತಾರರಿಗೆ ಇಲ್ಲಿಯತನಕ ಯಾವ ಪಾಪಪ್ರಜ್ಞೆಯೂ ಕಾಡಿದಂತಿಲ್ಲ.

ಇತ್ತ ಕೋಲಾರದ ಹಳ್ಳಿಗಳಲ್ಲಿ ಕೆರೆಗಳೆಲ್ಲ ಜೀವ ಕಳೆದುಕೊಂಡಿದ್ದಲ್ಲದೆ, ಸಾವಿರಾರು ಅಡಿ ಆಳದವರೆಗೆ ಕೊರೆದರೂ ಹನಿ ನೀರಿನ ಸುಳಿವಿಲ್ಲ. ಅತ್ತ ಯಾದಗಿರಿಯ ಆಸುಪಾಸಿನ ಕೊಳವೆ ಬಾವಿಗಳಲ್ಲಿ ಸಿಗುತ್ತಿರುವುದು ಜೀವ ಹಿಂಡುವಂತಹ ಆರ್ಸೆನಿಕ್‌ ಮಿಶ್ರಿತ ನೀರು (ಆರ್ಸೆನಿಕ್‌ನಲ್ಲಿರುವ ವಿಷಕಾರಿ ಅಂಶವು ಜಠರ, ಮೂತ್ರಕೋಶ ಹಾಗೂ ಶ್ವಾಸಕೋಶದ ಮೇಲೆ ನೇರವಾಗಿ ದಾಳಿ ಮಾಡುತ್ತದೆ; ಕ್ಯಾನ್ಸರ್‌ಗೂ ಕಾರಣವಾಗುತ್ತದೆ).

ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಹಾಸನ, ಬೆಳಗಾವಿ, ವಿಜಯಪುರ, ಬಳ್ಳಾರಿ, ರಾಯಚೂರು, ಬೀದರ್‌ ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಬಯಲುಸೀಮೆಯ ಈ ಜಿಲ್ಲೆಗಳನ್ನು ಬಿಡಿ, ರಾಜ್ಯದಲ್ಲೇ ಅತ್ಯಧಿಕ ಮಳೆ ಕಾಣುವಂತಹ ಮಲೆನಾಡು, ಕರಾವಳಿಯನ್ನೂ ಕಳೆದ ಬೇಸಿಗೆಯಲ್ಲಿ ನೀರಿನ ಬರ ಕಾಡದೆ ಬಿಟ್ಟಿಲ್ಲ.

ಉತ್ತರ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಫ್ಲೊರೈಡ್‌ಯುಕ್ತ ನೀರು ಪೂರೈಕೆ ಆಗುತ್ತಿರುವ ಕಾರಣ ಫ್ಲೊರೋಸಿಸ್‌ ಕಾಯಿಲೆಗೆ ತುತ್ತಾದವರ ಸಂಖ್ಯೆ ದೊಡ್ಡದಿದೆ. ಫ್ಲೊರೋಸಿಸ್‌ನಿಂದ ಹಲ್ಲುಗಳು ವಿರೂಪಗೊಂಡ ಲಕ್ಷಾಂತರ ಯುವಕ–ಯುವತಿಯರು ಮುಖ್ಯವಾಹಿನಿಯಿಂದ ಹೊರಗೆ ಉಳಿಯುವಂತಾಗಿದೆ. ಅಶುದ್ಧ ನೀರು ಗುಪ್ತಗಾಮಿನಿಯಾಗಿ ಗ್ರಾಮೀಣ ಪ್ರದೇಶದ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯನ್ನೇ ಅಲುಗಾಡಿಸಿದೆ.

ಕುಡಿಯುವ ನೀರಿಗಾಗಿ ಸಾವಿರಾರು ಹಳ್ಳಿಗಳು ಈಗಲೂ ಕೆರೆ–ಕಟ್ಟೆ, ನದಿ–ತೊರೆಗಳನ್ನೇ ಹೆಚ್ಚಾಗಿ ಅವಲಂಬಿಸಿವೆ. ಬೇಸಿಗೆಯಲ್ಲಿ ಅವುಗಳು ಬತ್ತಿದಾಗ ಜೀವಜಲಕ್ಕಾಗಿ ಹಾಹಾಕಾರ ಏಳುವುದು ಸಾಮಾನ್ಯ. ಬಿಂದಿಗೆ ನೀರಿಗಾಗಿಯೂ ಕಿಲೋಮೀಟರ್‌ಗಟ್ಟಲೆ ಸುತ್ತುವುದು, ಒರತೆಗಳ ಮುಂದೆ ಹಗಲು–ರಾತ್ರಿಯನ್ನದೆ ಪಾಳಿಯಲ್ಲಿ ಕಾಯುವುದು ಗ್ರಾಮೀಣ ಬದುಕಿನ ಭಾಗವಾಗಬಿಟ್ಟಿದೆ.

ಬರ ಆವರಿಸಿದಾಗ, ನೀರಿನ ಕೊರತೆ ಎದುರಾದಾಗ ಒಂದರ ಬೆನ್ನಹಿಂದೆ ಮತ್ತೊಂದರಂತೆ ಕೊಳವೆಬಾವಿ ಕೊರೆಸುವುದು, ಅವುಗಳು ವಿಫಲವಾದರೆ ತಮ್ಮದೇ ಭಾವಚಿತ್ರವಿರುವ ಟ್ಯಾಂಕರ್‌ಗಳ ಮೂಲಕ ಪ್ರತಿ ಕುಟುಂಬಕ್ಕೆ ಒಂದೆರಡು ಬಿಂದಿಗೆ ನೀರು ಪೂರೈಸುವುದು – ಇಂತಹ ತಾತ್ಕಾಲಿಕ ಪರಿಹಾರ ಕ್ರಮಗಳಲ್ಲೇ ಕಾಲಹರಣ ಮಾಡುತ್ತಾ ಬಂದಿದ್ದಾರೆ ಬರಪೀಡಿತ ಜಿಲ್ಲೆಗಳ ಬಹುತೇಕ ಶಾಸಕರು.

ಹದಿನಾಲ್ಕನೇ ವಿಧಾನಸಭಾ ಅವಧಿಯ ಸಂದರ್ಭದಲ್ಲಿ ರಾಜ್ಯದ ಬಹುತೇಕ ಭಾಗಗಳಲ್ಲಿ ಸತತ ಬರಗಾಲ ಆವರಿಸಿದೆ. ಪ್ರತಿಸಲ ಬರ ಪರಿಸ್ಥಿತಿ ಸೃಷ್ಟಿಯಾದಾಗಲೂ ಕೊಳವೆ ಬಾವಿ ಕೊರೆಯುವ ಕಂಪನಿಗಳು ಶ್ರೀಮಂತವಾಗಿಯೇ ಹೊರತು ಯಾವ ಗ್ರಾಮದಲ್ಲೂ ನೀರಿನ ಕೊರತೆ ಎದುರಾಗದಂತೆ ನೋಡಿಕೊಳ್ಳುವ ಶಾಶ್ವತ ವ್ಯವಸ್ಥೆ ಸೃಷ್ಟಿಯಾಗಿಲ್ಲ (ಹಾಗೆ ನೋಡಿದರೆ, ಬರಪೀಡಿತ ಪ್ರದೇಶದ ಸುಮಾರು 140 ಕ್ಷೇತ್ರಗಳಲ್ಲಿ ಮುಖ್ಯ ಚುನಾವಣಾ ವಿಷಯವೇ ಇದಾಗಿದೆ).

ಈಗಿನ ಚುನಾವಣೆ ಏನಾದರೂ ಒಂದು ವರ್ಷದಷ್ಟು ಹಿಂದೆಯೇ ಬಂದಿದ್ದರೆ ಪ್ರಚಾರಕ್ಕಾಗಿ ರಾಜಕಾರಣಿಗಳು ಹಳ್ಳಿಗಳಿಗೆ ಹೋಗಲು ಸಾಧ್ಯವೇ ಆಗುತ್ತಿರಲಿಲ್ಲ. ಏಕೆಂದರೆ, ಕಳೆದ ಏಪ್ರಿಲ್‌ನಲ್ಲಿ ರಾಜ್ಯದ 25 ಜಿಲ್ಲೆಗಳ 1,178 ಗ್ರಾಮಗಳು ನೀರಿನ ಬರದಿಂದ ತತ್ತರಿಸಿ ಹೋಗಿದ್ದವು. ಓಟು ಕೇಳಲು ಬಂದವರಿಗೆಲ್ಲ ಗ್ರಾಮಸ್ಥರು ನೀರಿಳಿಸಿಯೇ ಕಳುಹಿಸುತ್ತಿದ್ದರು. ಕಳೆದ ಸಲಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆಯಾಗಿರುವ ನೀರಿನ ಬೇಗುದಿ ಅವರ ಸಿಟ್ಟನ್ನು ತಣ್ಣಗಾಗಿಸಿದೆ. ಕೊಳವೆ ಬಾವಿಯ ನೀರನ್ನೇ ಶುದ್ಧೀಕರಿಸಿ ಕೊಡುವ ಘಟಕಗಳು ನೂರಾರು ಹಳ್ಳಿಗಳಲ್ಲಿ ಬಂದಿವೆಯಾದರೂ ಸಮಸ್ಯೆಯ ಬೆಟ್ಟದ ಮುಂದೆ ಈ ಪರಿಹಾರ ಸಾಸಿವೆ ಕಾಳಿನಷ್ಟು.

ಜಲಕ್ಷಾಮ ಎದುರಿಸುತ್ತಿರುವ ಜಗತ್ತಿನ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಕೂಡ ಸ್ಥಾನ ಪಡೆದಿದೆ. ರಾಜ್ಯದ ಉಳಿದ ಯಾವ ನಗರದಲ್ಲೂ ನೀರ ನೆಮ್ಮದಿ ಮನೆಮಾಡಿಲ್ಲ. ಗದುಗಿಗೆ ತಿಂಗಳಿಗೊಮ್ಮೆ ನೀರು ಪೂರೈಕೆಯಾದ ಉದಾಹರಣೆ ಕಣ್ಣ ಎದುರಿಗೇ ಇದೆಯಲ್ಲ. ಈ ಊರಿಗೆ ತುಂಗಭದ್ರಾ ನದಿಯಿಂದ ನೀರು ತರುವ ಯೋಜನೆ ಬಲು ಹಿಂದೆಯೇ ಅನುಷ್ಠಾ ನಕ್ಕೆ ಬಂದಿತ್ತು. ಪೈಪುಗಳು ಒಡೆದದ್ದು ಏಕೆ, ನೀರು ಸೋರಿಹೋಗಿದ್ದು ಎಲ್ಲಿಗೆ ಎಂಬುದರ ಕುರಿತು ತಲೆ ಕೆಡಿಸಿಕೊಳ್ಳದ ಸರ್ಕಾರ, ಅದೇ ನದಿಯಿಂದ, ಅದೇ ಊರಿಗೆ ನೀರು ತರಲು ಹೊಸ ಯೋಜನೆಯನ್ನು ಕೈಗೆತ್ತಿಕೊಂಡಿದೆ!

ರಾಜ್ಯದ ಉತ್ತರದ ಮಹದಾಯಿ ಹಾಗೂ ದಕ್ಷಿಣದ ಎತ್ತಿನಹೊಳೆ ಯೋಜನೆಗಳು ನೀರಿನ ರಾಜಕೀಯಕ್ಕೆ ಜ್ವಲಂತ ಸಾಕ್ಷಿ. ಮಹದಾಯಿ ವಿಚಾರದಲ್ಲಿ ನಡೆದ ಪತ್ರಗಳ ರೂಪದ ಪ್ರಹಸನ ಜನರನ್ನೇ ಹುಚ್ಚರನ್ನಾಗಿ ಮಾಡುವಂಥದ್ದು. ಯೋಜನೆ ಅನುಷ್ಠಾನದ ಸಂಬಂಧ ರಾಷ್ಟ್ರೀಯ ಪಕ್ಷಗಳು ನಡೆಸಿದ ಸರ್ಕಸ್‌ ನೋಡಿದಾಗ ‘ಇದು ಬರೀ ನಾಟಕ’ ಎನ್ನುವುದು ಎದ್ದು ಕಾಣುತ್ತಿತ್ತು.

ಚುನಾವಣೆ ಮುಂದಿರುವಾಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ತಮ್ಮ ಪಕ್ಷದ ಕರ್ನಾಟಕ ಹಾಗೂ ಗೋವಾ ನಾಯಕರ ಸಭೆ ಕರೆಯುವುದು, ಗೋವಾ ಮುಖ್ಯಮಂತ್ರಿಯಿಂದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರುವುದು, ಎದುರಾಳಿಯ ಈ ರಾಜಕೀಯ ಓಟಕ್ಕೆ ಪ್ರತಿಯಾಗಿ ಸಿದ್ದರಾಮಯ್ಯನವರು ಗೋವಾ ಮುಖ್ಯಮಂತ್ರಿಗೆ ಪತ್ರ ಬರೆಯುವುದು ಎಲ್ಲದರಲ್ಲೂ ರಾಜಕೀಯ ಲೆಕ್ಕಾಚಾರವೇ ತುಂಬಿತ್ತು. ನೀರು ತರುವ ಕಾಳಜಿ ಎಲ್ಲಿತ್ತು?

ಮಹದಾಯಿಯಿಂದ ಬೆಳಗಾವಿ, ಧಾರವಾಡ ಹಾಗೂ ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ತರುವ ಇರಾದೆ ಎಲ್ಲ ಪಕ್ಷಗಳಿಗೂ ಇದ್ದಮೇಲೆ ಎಲ್ಲರೂ ಒಟ್ಟಾಗಿ ಕುಳಿತು ಈ ಸಮಸ್ಯೆಗೆ ಪರಿಹಾರ ಹುಡುಕಲು ಕಷ್ಟ ಏನಿತ್ತು? ಮತಗಳ ಮೇಲೆ ಕಣ್ಣಿಟ್ಟಿರುವ ಕಾರಣ ಕಳಸಾ–ಬಂಡೂರಿ ನಾಲೆಯಲ್ಲಿ ನೀರು ಹರಿಸುವ ಶ್ರೇಯ ಹಂಚಿಕೊಳ್ಳಲು ಯಾವ ಪಕ್ಷಕ್ಕೂ ಮನಸ್ಸಿರಲಿಲ್ಲ ಅಷ್ಟೆ.

ಮಹದಾಯಿ ವಿಚಾರ ಅಂತರರಾಜ್ಯ ಮಟ್ಟದ್ದು ಬಿಡಿ. ರಾಜ್ಯದ ಮಲೆನಾಡಿನಿಂದ ಬಯಲು ಸೀಮೆಗೆ ನೀರು ತರುವಂತಹ ಎತ್ತಿನಹೊಳೆ ಯೋಜನೆ ವಿಷಯದಲ್ಲೂ ರಾಜಕೀಯ ನಾಯಕರದು ಅಲ್ಲೊಂದು ಮಾತು, ಇಲ್ಲೊಂದು ಮಾತು. ಹೀಗೆ ಅವರು ತಿಪ್ಪರಲಾಗ ಹಾಕುವಲ್ಲಿ ಕೂಡ ಮತಬುಟ್ಟಿ ತುಂಬಿಸಿಕೊಳ್ಳುವ ಇರಾದೆಯೇ ಅಡಗಿದೆ. ನೇತ್ರಾವತಿಯ ಈ ತಿರುವು ಯೋಜನೆಯಿಂದ ಸಿಗಲಿರುವ ನೀರಿಗಾಗಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳು ಕಾದು ಕುಳಿತಿವೆ.

ಕಲಬುರ್ಗಿ ಭಾಗದಲ್ಲಿ ಬರ ಪರಿಹಾರಕ್ಕಾಗಿಯೇ ಕಾರಂಜಾ ಅಣೆಕಟ್ಟೆ ಕಟ್ಟಲು ತೀರ್ಮಾನಿಸಲಾಗಿತ್ತು. ಮೂಲತಃ ₹ 9.90 ಕೋಟಿ ವೆಚ್ಚದ ಯೋಜನೆ ಇದಾಗಿತ್ತು. ಆದರೆ, ಯೋಜನೆ ಅನುಷ್ಠಾನದಲ್ಲಿ ವಿಳಂಬವಾಗುತ್ತಾ ಬಂದಿದ್ದರಿಂದ ಅದರ ವೆಚ್ಚ ₹ 532 ಕೋಟಿಗೆ ಹಿಗ್ಗಿತು.

ಅಣೆಕಟ್ಟೆ ಎದ್ದರೂ ಭೂಸ್ವಾಧೀನ ವಿವಾದ ಇನ್ನೂ ಉಳಿದುಕೊಂಡಿದೆ. ಬೀದರ್‌, ಹುಮ್ನಾಬಾದ್‌, ಭಾಲ್ಕಿ ಪಟ್ಟಣಗಳಿಗೆ ನೀರು ಪೂರೈಸಲು ಈ ಜಲಾಶಯವೇ ಆಧಾರ. ಸುತ್ತಲಿನ ಹಲವು ಹಳ್ಳಿಗಳು ಕಾರಂಜಾದಿಂದ ತಮ್ಮ ಬಾಯಾರಿಕೆಯೂ ತಣಿಯಲಿದೆ ಎಂದು ದಶಕಗಳಿಂದ ಕಾಯುತ್ತಲೇ ಇವೆ.

ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ನಜೀರ್‌ ಸಾಬ್‌ ಗ್ರಾಮಾಂತರ ಭಾಗದ ನೀರಿನ ಸಂಕಷ್ಟ ನೋಡಿ, ಮಮ್ಮಲ ಮರಗಿ ಹಳ್ಳಿ–ಹಳ್ಳಿಯಲ್ಲೂ ಕೊಳವೆ ಬಾವಿಗಳ ವ್ಯವಸ್ಥೆ ಮಾಡಿ, ‘ನೀರ್‌ ಸಾಬ್‌’ ಎಂದೇ ಹೆಸರಾದರು. ವಿಫಲವಾದ ಕೊಳವೆ ಬಾವಿಗಳಿಗೆ ಮಳೆ ನೀರು ಮರುಪೂರಣ ಮಾಡಿಸುವಂತಹ, ಕೆರೆ–ಕಟ್ಟೆಗಳಿಗೆ ಮರುಜೀವ ನೀಡುವಂತಹ, ಬೇಸಿಗೆಯಲ್ಲೂ ಹಳ್ಳಿಗಳಲ್ಲಿ ನೀರಿನ ಠೇವಣಿ ಕಡಿಮೆಯಾಗದ ಹಾಗೆ ನೋಡಿಕೊಳ್ಳುವಂತಹ ‘ನೀರ್‌ ಸಾಬ’ರು ಈಗ ಬೇಕಾಗಿದ್ದಾರೆ. ಆದರೆ, ಅಂತಹ ನಾಯಕರು ಯಾವ ಪಕ್ಷದಲ್ಲಿದ್ದಾರೆ?

‘ಕೆರೆಗಳಿಗೆ ಮರುಜೀವ’

ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವೆಂದರೆ ರಾಜ್ಯದ ಎಲ್ಲ ಕೆರೆಗಳನ್ನು ಪುನರುಜ್ಜೀವನಗೊಳಿಸುವುದು ಮತ್ತು ಅಂತರ್ಜಲ ಮಟ್ಟ ಹೆಚ್ಚಾಗುವಂತೆ ನೋಡಿಕೊಳ್ಳುವುದು. ಶುದ್ಧ ಹಾಗೂ ಸಮರ್ಪಕ ನೀರಿನ ಪೂರೈಕೆಗೆ ಇವೆರಡೇ ದಾರಿಗಳು. ಈಗಾಗಲೇ ರಾಜ್ಯದ ಎಲ್ಲ ಕೆರೆಗಳ ನಿರ್ವಹಣೆಯ ಹೊಣೆಯನ್ನು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ತರಲಾಗಿದ್ದು, ಅವುಗಳ ಸಂರಕ್ಷಣೆಯಲ್ಲಿದ್ದ ಆಡಳಿತಾತ್ಮಕ ದೋಷಗಳನ್ನು ನಿವಾರಿಸುವ ಕೆಲಸ ಮಾಡಲಾಗಿದೆ. ನಮ್ಮ ಪಕ್ಷ ಮತ್ತೆ ಆಡಳಿತಕ್ಕೆ ಬಂದರೆ ಎಲ್ಲ ಕೆರೆಗಳಿಗೆ ಮರುಜೀವ ನೀಡುವ ಕೆಲಸ ಮಾಡಲಿದೆ. ನೀರಿನ ಕೊರತೆಯನ್ನು ಸಂಪೂರ್ಣವಾಗಿ ನೀಗಿಸಲಿದೆ.

ಟಿ.ಬಿ. ಜಯಚಂದ್ರ, ಕಾಂಗ್ರೆಸ್‌

‘ಅತ್ಯಾಧುನಿಕ ತಂತ್ರಜ್ಞಾನ ಬಳಕೆ’

ರಾಜ್ಯದಲ್ಲಿ ಇದುವರೆಗೆ ಆಡಳಿತ ನಡೆಸಿದ ಯಾವ ಪಕ್ಷವೂ ಕುಡಿಯುವ ನೀರಿನ ಸಮಸ್ಯೆಯನ್ನು ಹೋಗಲಾಡಿಸಲು ಆದ್ಯತೆ ನೀಡಿಲ್ಲ ಎನ್ನುವುದನ್ನು ಒಪ್ಪಲೇಬೇಕು. ನಮ್ಮ ಪಕ್ಷದ ಆಂತರಿಕ ಸಭೆಗಳಲ್ಲಿ ರಾಜ್ಯದ ಎಲ್ಲ ಭಾಗಗಳಿಗೂ ಕುಡಿಯುವ ನೀರು ಪೂರೈಕೆ ಮಾಡುವ ವಿಷಯ ವಿಸ್ತೃತವಾಗಿ ಚರ್ಚೆಯಾಗಿದೆ. ಕೆರೆ, ನದಿ, ಜಲಾಶಯಗಳೇ ನೀರಿನ ಮುಖ್ಯ ಮೂಲಗಳಾಗಿದ್ದು, ನಮ್ಮ ಪಕ್ಷ ಆಡಳಿತಕ್ಕೆ ಬಂದರೆ ಅವುಗಳ ಧಾರಣಾ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಿದ್ದೇವೆ. ನೀರಿನ ಶುದ್ಧೀಕರಣಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಮಾಡಲಿದ್ದೇವೆ. ಬೇಸಿಗೆಯೂ ಸೇರಿದಂತೆ ವರ್ಷದ ಯಾವುದೇ ಅವಧಿಯಲ್ಲೂ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲಿದ್ದೇವೆ.

ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ

‘ಸಮಸ್ಯೆಗೆ ಶಾಶ್ವತ ಪರಿಹಾರ’

ಉತ್ತರ ಕರ್ನಾಟಕದ ಸಾವಿರಾರು ಹಳ್ಳಿಗಳಿಗೆ ವರ್ಷದ 365 ದಿನವೂ ಟ್ಯಾಂಕರ್‌ ಮೂಲಕವೇ ನೀರು ಪೂರೈಕೆ ಮಾಡುವಂತಹ ಸ್ಥಿತಿಯಿದೆ. ಇದೊಂದು ತಾತ್ಕಾಲಿಕ ವ್ಯವಸ್ಥೆಯಾಗಬಹುದೇ ವಿನಾ ಶಾಶ್ವತ ಪರಿಹಾರವಲ್ಲ. ಫ್ಲೋರೈಡ್‌ಯುಕ್ತ ನೀರು ಸೇವನೆಯಿಂದ ನನ್ನ ಕ್ಷೇತ್ರದ ಸುಳ್ಳ ಎಂಬ ಗ್ರಾಮದಲ್ಲಿ ಕಾಲು ನೋವಿನಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ. ಇದೊಂದು ಉದಾಹರಣೆಯಷ್ಟೆ. ನೂರಾರು ಹಳ್ಳಿಗರ ಗೋಳಿನ ಕಥೆಯಿದು. ನಮ್ಮ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದರೆ ಲಭ್ಯವಿರುವ ಶುದ್ಧ ನೀರಿನ ಸಮರ್ಪಕ ಬಳಕೆಗೆ ಬೃಹತ್‌ ಯೋಜನೆಯನ್ನು ಹಾಕಿಕೊಳ್ಳಲಿದೆ. ಐದು ವರ್ಷಗಳಲ್ಲಿ ನೀರಿನ ಸಮಸ್ಯೆಗೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಲಿದೆ. ಮಹದಾಯಿ ಮೂಲಕವೇ ಯೋಜನೆ ಅನುಷ್ಠಾನಕ್ಕೆ ನಾಂದಿ ಹಾಡಲಿದ್ದೇವೆ.

ಎನ್‌.ಎಚ್‌. ಕೋನರಡ್ಡಿ, ಜೆಡಿಎಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT