ಮಂಗಳವಾರ, ಜುಲೈ 27, 2021
21 °C

ಅಪ್ಪನ ನೆನಪು | ‘ಎಂದಿಗೂ ತನ್ನ ಪ್ರಭಾವ ಬಳಸಲಿಲ್ಲ...’

ಚಿ. ಗುರುದತ್ Updated:

ಅಕ್ಷರ ಗಾತ್ರ : | |

Prajavani

ಚಿ.ಉದಯಶಂಕರ್‌ ಅವರಂತಹ ಅಪ್ಪನನ್ನು ಪಡೆದಿದ್ದೇ ನನ್ನ ಅದೃಷ್ಟ. ನಾನು ಬಾಲ್ಯ ಕಳೆದಿದ್ದು ಮದ್ರಾಸ್‌ನಲ್ಲಿ. ಒಂದು ಕಾಲದಲ್ಲಿ ಅಲ್ಲಿನ ರಾಯಲ್‌ಪೇಟೆ ಕನ್ನಡ ಸಿನಿಮಾ ಇಂಡಸ್ಟ್ರಿಯ‌‌ ನೆಲೆಯಾಗಿತ್ತು. ಬೆಂಗಳೂರಿನಿಂದ ಬರುತ್ತಿದ್ದ ಸಿನಿಮಾ ಮಂದಿ ಅಲ್ಲಿಯೇ ಇರುತ್ತಿದ್ದರು. ಅಪ್ಪನ ಜೊತೆಗೆ ನಮ್ಮ ಇಡೀ ಸಂಸಾರ ಅಲ್ಲಿಯೇ ಬದುಕು ಕಟ್ಟಿಕೊಂಡಿತ್ತು.

ಅಪ್ಪನಿಗೆ ಸಿನಿಮಾವೇ ಉಸಿರಾಗಿತ್ತು. ಅಲ್ಲಿ ಸ್ವಾಗತ್‌ ಹೆಸರಿನ ಹೋಟೆಲ್‌ವೊಂದಿತ್ತು. ಕನ್ನಡದವರೇ ಅದರ ಮಾಲೀಕರಾಗಿದ್ದರು. ಅಪ್ಪ ಅಲ್ಲಿಯೇ ಇರುತ್ತಿದ್ದರು. ಅಲ್ಲಿ ಮ್ಯೂಸಿಕ್‌, ಡೈಲಾಗ್‌ ಸಿಟ್ಟಿಂಗ್‌ ನಡೆಯುತ್ತಿತ್ತು. ಅವರು ಅಪ್ಪಿತಪ್ಪಿಯೂ ಮನೆಯಲ್ಲಿ ಚಿತ್ರರಂಗದ ಚಟುವಟಿಕೆಗಳ ಬಗ್ಗೆ ಮಾತನಾಡುತ್ತಿರಲಿಲ್ಲ. ತಂದೆಯೊಟ್ಟಿಗೆ ‘ದಾರಿ ತಪ‍್ಪಿದ ಮಗ’, ‘ಆಪರೇಷನ್‌ ಡೈಮಂಡ್‌ ರಾಕೆಟ್‌’ ಸಿನಿಮಾದ ಶೂಟಿಂಗ್‌ ಸ್ಥಳಕ್ಕೆ ಹೋಗಿದ್ದು ಇನ್ನೂ ನೆನಪಿದೆ. ನಾನು ಚಿಕ್ಕ ವಯಸ್ಸಿನಲ್ಲಿದ್ದಾಗ ‘ಮಿಸ್ಟರ್‌ ರಾಜ್‌ಕುಮಾರ್‌’ ಚಿತ್ರೀಕರಣಕ್ಕೆ ಕರೆದೊಯ್ದಿದ್ದರು. ಬಿಡುವು ಸಿಕ್ಕಿದಾಗಲೆಲ್ಲಾ ವರನಟ ರಾಜ್‌ಕುಮಾರ್‌ ಅವರ ಮನೆಗೆ ಹೋಗುತ್ತಿದ್ದೆವು.

ಅಪ್ಪ ನನ್ನನ್ನು ಶಾಲೆಗೆ‌ ಕರೆದುಕೊಂಡು ಹೋಗಿದ್ದು ಕಡಿಮೆ. ನನಗೂ ಮತ್ತು ನನ್ನ ತಮ್ಮನಿಗೂ ಸೈಕಲ್ ತಂದುಕೊಟ್ಟಿದ್ದರು. ನನ್ನ ತಂಗಿಯನ್ನು ಶಾಲೆಗೆ ಬಿಡಲು ಹೋಗಿರಬಹುದಷ್ಟೇ. ಅಮ್ಮನ ಕೈಗೆ ತಿಂಗಳಿಗೆ ಸಂಸಾರ ನಡೆಸಲು ಸಾಕಾಗುವಷ್ಟು ಹಣ ಕೊಡುತ್ತಿದ್ದರು.

ಪದವಿಯ ಎರಡನೇ ವರ್ಷಕ್ಕೆ ಕಾಲಿಡುವಾಗ ನನಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಯಿತು. ಆ ವೇಳೆಗೆ ಶಿವರಾಜ್‌ಕುಮಾರ್‌ ಕೂಡ ಸಿನಿಮಾ ಇಂಡಸ್ಟ್ರಿ ಪ್ರವೇಶಿಸಲು ನಿರ್ಧರಿಸಿದ್ದರು.

ಅದು ತೊಂಬತ್ತರ ದಶಕ. ‘ಹಳ್ಳಿ ರಂಭೆ ಬೆಳ್ಳಿ ಬೊಂಬೆ’ ಸಿನಿಮಾದಲ್ಲಿ ನಟಿಸಲು ತಯಾರಿ ನಡೆಸಿದ್ದೆ. ನಟಿ ಮಾಲಾಶ್ರೀ ಕೂಡ ಡೇಟ್‌ ಕೊಟ್ಟಿದ್ದರು. ನನ್ನನ್ನು ನಾಯಕನನ್ನಾಗಿ ಮಾಡುವಂತೆ ಯಾರೊಬ್ಬರಿಗೂ ಅಪ್ಪ ರೆಕಮೆಂಡ್ ಮಾಡಿರಲಿಲ್ಲ. ನನ್ನ ತಮ್ಮ ಚಿತ್ರರಂಗದಲ್ಲಿ ಕೆಲಸ ಮಾಡುತ್ತೇನೆ ಎಂದು ಅಪ್ಪನ ಬಳಿ ಹೇಳಿದೆ. ಸೇರಿಕೋ ಎಂದರು.

ನಾನು ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಅವರ ಬಳಿ ಕೇಳಿದೆ. ಮನೆಗೆ ಸ್ಟಂಟ್‌ ಮಾಸ್ಟರ್‌ ಅವರನ್ನು ಕರೆಯಿಸಿ ಸಾಹಸ ಕಲಿಸಿದರು. ಡಾನ್ಸ್ ಮಾಸ್ಟರ್‌ ಅವರನ್ನು ಕರೆಯಿಸಿ ನೃತ್ಯ ಕಲಿಸಿದರು. ನಾನು ಮತ್ತು ತಮ್ಮ ಕುದುರೆ ಸವಾರಿ ಕಲಿತೆವು. ಯಾವುದೇ ಕೆಲಸ ಮಾಡುವುದಕ್ಕೂ ಮೊದಲು ಸಾಕಷ್ಟು ಪೂರ್ವ ತಯಾರಿಬೇಕು ಎಂದು ಹೇಳುತ್ತಿದ್ದರು. ಅಪ್ಪನಿಗೆ ಚಿತ್ರರಂಗದ ಪ್ರತಿಯೊಬ್ಬರ ಪರಿಚಯವಿತ್ತು. ಆದರೆ, ಎಲ್ಲಿಯೂ ತಮ್ಮ ಪ್ರಭಾವ ಬಳಸುತ್ತಿರಲಿಲ್ಲ. ತಮ್ಮ ಮಕ್ಕಳಿಗೆ ಸಿನಿಮಾದಲ್ಲಿ ಚಾನ್ಸ್‌ ಕೊಡಿ ಎಂದು ಯಾರೊಬ್ಬರ ಬಳಿಗೂ ಹೋಗಿ ಅವರು ಅಂಗಲಾಚಲಿಲ್ಲ.

ಅವರೇ ನಮಗೆ ದೊಡ್ಡ ಆಧಾರ ಸ್ತಂಭವಾಗಿದ್ದರು. ಬ್ಯಾಚುಲರ್‌ ಬದುಕು ಬಿಟ್ಟು ಸಂಸಾರಿಯಾಗು ಎಂದು ಅಪ್ಪ ಸಾಕಷ್ಟು ಬಾರಿ ನನಗೆ ಸಲಹೆ ನೀಡಿದ್ದು ಉಂಟು. ಸಂಸಾರದ ಜವಾಬ್ದಾರಿ ಬಗ್ಗೆ‌ ಚಿಂತಿಸಬೇಡ. ನಾನು ಜವಾಬ್ದಾರಿ ಹೊತ್ತುಕೊಳ್ಳುತ್ತೇನೆ. ಮದುವೆ ಮಾಡಿಕೋ ಎಂದು ಹೇಳಿದರು. ನಾನು ಸಂಪಾದನೆ ಮಾಡುವುದೇ ನನಗೆ ಸಾಕಾಗುತ್ತಿರಲಿಲ್ಲ. ಹಾಗಾಗಿ, ಅದು ಚೆನ್ನಾಗಿರಲ್ಲ ಎನ್ನುತ್ತಿದ್ದೆ.

ಅಪ್ಪನಿಗೆ ಆರು ಬಾರಿ ರಾಜ್ಯಮಟ್ಟದ ಪ್ರಶಸ್ತಿ ಬಂದಿದೆ. ಸರ್ಕಾರ ಕೂಡ ಬಿಡಿಎ ನಿವೇಶನ ನೀಡುವುದಾಗಿ ಘೋಷಿಸಿತ್ತು. ಅವರು ಇದ್ದಾಗಲೂ ನಿವೇಶನ ಸಿಗಲಿಲ್ಲ. ಆ ಬಗ್ಗೆ ಅವರು ಬೇಸರಪಟ್ಟುಕೊಳ್ಳಲಿಲ್ಲ. ಎರಡೂವರೆ ದಶಕ ಕಳೆದರೂ ನಿವೇಶನ ಮಂಜೂರಾಗಿಲ್ಲ.

‌ನಾವು ಸಂತೋಷವಾಗಿರುವುದೇ ಅವರ ಖುಷಿಯಾಗಿತ್ತು. ದಶಕಗಳ ಕಾಲ ಚಿತ್ರರಂಗದಲ್ಲಿ ದುಡಿದರೂ ನಾವು ಯಾವುದೇ ವಿವಾದಕ್ಕೆ ಸಿಲುಕಲಿಲ್ಲ. ಅದಕ್ಕಿಂತ ದೊಡ್ಡ ಸಂತಸ ಬೇರೊಂದಿಲ್ಲ. ಅದೇ ಅವರು ನಮಗೆ ತೋರಿಸಿರುವ ಸನ್ಮಾರ್ಗ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು