ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪನ ನೆನಪು | ‘ನಾದವನ್ನೂ, ಬದುಕಿನ ಹದವನ್ನೂ ಕಲಿಸಿದಾತ’

Last Updated 20 ಜೂನ್ 2020, 19:45 IST
ಅಕ್ಷರ ಗಾತ್ರ

ಸಿತಾರ್‌ ನವಾಜ್‌ ಉಸ್ತಾದ್‌ ಬಾಲೆಖಾನ್‌... ಅಂದ್ರೆ ನೆನಪಾಗುವುದೇ ಅವರ ಸಿತಾರ್‌ ವಾದನ, ಶಿಸ್ತು, ಆದರ್ಶ ಹಾಗೂ ಸಿದ್ಧಾಂತಗಳು. ನನ್ನಪ್ಪ ನನ್ನ ಗುರುವೂ ಹೌದು. ಧಾರವಾಡ ಘರಾನಾದ ಸಿತಾರ್‌ ವಾದಕ ‘ಗಾಯಕಿ ಅಂಗ್’ನಿಂದಲೇ ಹೆಸರುವಾಸಿಯಾದವರು.

ಅವರ ಬೆರಳಗಳಲ್ಲಿಯೇ ರಾಗಗಳಿವೆಯೇನೋ ಎಂಬಷ್ಟು ಸಹಜವಾಗಿ ಅವರ ನೈಪುಣ್ಯ, ಪರಿಣತಿ ಎಲ್ಲವೂ ಎದ್ದು ಕಾಣುತ್ತಿತ್ತು. ಇವೆಲ್ಲ ಬರಿಯ ಪದಗಳೇನೋ. ಸಿತಾರ್‌ ಜೊತೆಗೆ ಅವರಿದ್ದರೆ ನಾದವೆಂಬುದೇ ಅವರಾಗುತ್ತಿದ್ದರು.

ಗುರುವಾಗಿ ನನ್ನನ್ನು ಒಬ್ಬ ಸಿತಾರ್‌ ವಾದಕನಾಗಿ ತಯಾರು ಮಾಡಿದರು. ಸಾಂಪ್ರದಾಯಿಕವಾಗಿ, ಅಭ್ಯಾಸ ಮಾಡಿಸುತ್ತ ನನ್ನನ್ನು ಕಲಿಸಲೇ ಇಲ್ಲ. ಸಂಗೀತ ಸಭೆಗಳಿಗೆ ಕರೆದೊಯ್ಯುತ್ತಿದ್ದರು. ಅವರ ತರಗತಿಗಳಲ್ಲಿ ಕೂರಲು ಹೇಳುತ್ತಿದ್ದರು. ವಿದ್ಯಾರ್ಥಿಗಳು ನುಡಿಸುತ್ತಿರಬೇಕಾದರೆ, ಕಲಿಯಬೇಕಾದರೆ ಅದನ್ನು ಗ್ರಹಿಸಲು ಪ್ರೋತ್ಸಾಹಿಸುತ್ತಿದ್ದರು. ಮೊದಲು ಗ್ರಹಿಸಬೇಕು ಎನ್ನುವುದು ಅವರ ಉದ್ದೇಶವಾಗಿತ್ತು. ರಾಗ, ನಾದದ ಸೂಕ್ಷ್ಮಾತಿ ಸೂಕ್ಷ್ಮ ಏರಿಳಿತಗಳನ್ನು ಗಮನಿಸಿದ ನಂತರ ಅಭ್ಯಾಸ ಮಾಡಲು, ಪರಿಣತರಾಗಲು ತಿಳಿಸುತ್ತಿದ್ದರು. ಈ ಪದ್ಧತಿಯು ತೀವ್ರವಾಗಿ ಸ್ಪಂದಿಸುವುದನ್ನು ಕಲಿಸಿತು. ಕೂಡಲೇ ನಾದಗಳನ್ನು ಅಪ್ಪನ ಮುಂದೆ ಪ್ರಸ್ತುತ ಪಡಿಸುವಂತೆ ಮಾಡಿತು. ಈ ಆತ್ಮವಿಶ್ವಾಸವೇ ಮುನ್ನಡೆಸಿತು.

ಮಗನಿಗೆ ಮಾತ್ರವಲ್ಲ, ತಮ್ಮ ಎಲ್ಲಾ ಶಿಷ್ಯ ವೃಂದದವರಿಗೂ ಸಾಂಪ್ರದಾಯಿಕ ‘ಘತ್’ ಹಾಗೂ ಘರಾನಾದ ಶೈಲಿಗಳನ್ನು, ಸೂಕ್ಷ್ಮಗಳನ್ನು ಹೇಳಿಕೊಡುತ್ತಿದ್ದರು. ತಮ್ಮೆಲ್ಲ ಜ್ಞಾನವನ್ನೂ ಹಂಚಬೇಕು. ಆಸಕ್ತಿ ಇದ್ದವರು ಅದನ್ನು ಬೆಳೆಸಿಕೊಂಡು ಹೋಗಲಿ ಎಂಬ ಔದಾರ್ಯ ಅವರದ್ದಾಗಿತ್ತು. ಹೀಗಾಗಿಯೇ ಮಕ್ಕಳು ಶಿಷ್ಯರಾದರು. ಶಿಷ್ಯರೂ ಮಕ್ಕಳಂತಾದರು. ಈ ಸಮಾನ ದೃಷ್ಟಿಕೋನ ಯಾವತ್ತಿಗೂ ನನ್ನನ್ನು ಕಾಡುತ್ತದೆ. ನನ್ನಪ್ಪ ಹೇಗೆ ಇದನ್ನು ಸಾಧಿಸಿದರು ಅಂತ.

ಅಪ್ಪ ತನ್ನ ತತ್ವ, ಸಿದ್ಧಾಂತಗಳೊಂದಿಗೆ ಎಂದೂ ರಾಜಿ ಆಗುತ್ತಿರಲಿಲ್ಲ. ನಮಗೆ ವಿದ್ಯೆಯನ್ನು ಧಾರೆಯೆರೆದರು. ಎಲ್ಲಿಯೂ ತಮ್ಮ ಅಧಿಕಾರ ಪ್ರಭಾವವನ್ನು ಮಕ್ಕಳ ಏಳ್ಗೆಗಾಗಿ ಬಳಸಿಕೊಳ್ಳಲಿಲ್ಲ. ಪ್ರಾಮಾಣಿಕತನ ಮತ್ತು ಸದುವಿನಯ ಅವರಿಂದಲೇ ಕಲಿತೆವು.

ಕರ್ನಾಟಕ ಸಂಗೀತ ಅಕಾಡೆಮಿಯ ಸದಸ್ಯರಾಗಿದ್ದಾಗ ವಿದ್ಯಾರ್ಥಿವೇತನ ಪಡೆಯಲು ಅವರ ಮಕ್ಕಳಿಗೆ ಎಲ್ಲ ಅರ್ಹತೆಗಳಿದ್ದರೂ ಆಯ್ಕೆ ಮಾಡಲಿಲ್ಲ. ಆ ಅಧಿಕಾರವನ್ನು ಅವರೆಂದೂ ತಮ್ಮ ಮಕ್ಕಳು ಬೆಳೆಯಲು, ತಮ್ಮ ಮಕ್ಕಳನ್ನು ಬೆಳೆಸಲು ಬಳಸಿಕೊಳ್ಳಲಿಲ್ಲ. ಆ ಸ್ವಾಭಿಮಾನ ನಮ್ಮೆಲ್ಲರಲ್ಲಿಯೂ ಅಂತರ್ಗತವಾಗುವಂತೆ ಮಾಡಿದರು. ಅವರ ಈ ನಡೆ ಅವರ ಬಗೆಗಿನ ಗೌರವವನ್ನು ಹೆಚ್ಚಿಸಿತು.

ಗುರುವಾಗಿ ಸಂಗೀತ ಕಲಿಸಿದರು. ಅಪ್ಪನಾಗಿ ಸ್ವಾಭಿಮಾನವನ್ನು ಹೇಳಿಕೊಟ್ಟರು. ಸಿದ್ಧಾಂತಗಳೊಂದಿಗೆ ಬದುಕುವುದನ್ನು ಹೇಳಿಕೊಟ್ಟರು. ಅವರ ಪ್ರಭಾವಳಿ ಎಂದಿಗೂ ನಮ್ಮ ವ್ಯಕ್ತಿತ್ವವನ್ನು ಬೆಳಗಲಿಲ್ಲ ಅಥವಾ ಮಾಸುವಂತೆಯೂ ಮಾಡಲಿಲ್ಲ. ಅಪ್ಪನ ನೆರಳಲ್ಲಿ ನಾವೆಲ್ಲ ಪ್ರಾಮಾಣಿಕರಾಗಿ ಹಾಗೂ ಗೌರವದಿಂದ ಬದುಕುವುದನ್ನು ಕಲಿತೆವು.

1987ರಲ್ಲಿ ಅವರಿಗೆ ರಾಜ್ಯಪ್ರಶಸ್ತಿ ಅರಸಿಕೊಂಡು ಬಂದಿತು. ಉಸ್ತಾದ್‌ ಬಾಲೆ ಖಾನ್‌ ಅವರ ಮಗನಾಗಿರುವುದು, ಶಿಷ್ಯನಾಗಿರುವುದು ನನ್ನ ಪೂರ್ವಜನ್ಮದ ಸುಕೃತವೆಂದೇ ನಂಬಿರುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT