ಗುರುವಾರ , ಸೆಪ್ಟೆಂಬರ್ 24, 2020
21 °C

ಅತಿಯಾದ ಕಾಳಜಿ ಮಕ್ಕಳಲ್ಲಿ ನಕಾರಾತ್ಮಕವಾದ ಭಾವನೆಗಳನ್ನು ತುಂಬದಿರಲಿ

ಕಲ್ಪನಾ ಪ್ರಭಾಕರ ಸೋಮನಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೈಸ್ಕೂಲು ಓದುತ್ತಿರುವ ಅಮಿತನಿಗೆ ಮುಂಜಾನೆಯಿಂದ ತುಂಬಾ ಸಲ ಅಮ್ಮ ಕೇಳುತ್ತಿದ್ದಳು, ‘ಮುಖ ತೊಳೆದೆಯಾ? ನಿನ್ನೆಯ ಹೋಮ್‌ವರ್ಕ್‌ ಎಲ್ಲವೂ ಮುಗಿದಿದೆಯಾ? ಬ್ಯಾಗ್‌ಗೆ ಪುಸ್ತಕ, ಜಾಮೆಟ್ರಿ ಬಾಕ್ಸ್‌, ನೋಟ್‌ಬುಕ್‌ಗಳನ್ನೆಲ್ಲಾ ತುಂಬಿಕೊಂಡೆಯಾ?’ ಹೀಗೇ ಮುಂದುವರೆಯುತ್ತಿತ್ತು. ಆದರೆ ಅಮಿತನದು ಎಲ್ಲಕ್ಕೂ ಹೂಂ..ಕಾರ. ಅವನ ಲಕ್ಷ್ಯ ಮಾತ್ರ ಮೊಬೈಲ್.. ನಂತರ ಕಂಪ್ಯೂಟರ್.. ಆಮೇಲೆ ಟಿ.ವಿ. ಹೀಗೇ ಮುಂದುವರೆಯುತ್ತಿತ್ತು.

ಆಗ ಅವನ ಅಮ್ಮನಿಗೆ ಸಹಜವಾಗಿಯೇ ಕೋಪ ಬಂತು. ‘ಆಗಿನಿಂದಲೂ ಕೇಳ್ತಾನೇ ಇದ್ದೀನಿ.. ನೀನಿನ್ನೂ ಮುಖ ತೊಳೆದಿಲ್ಲ.. ಇಡೀ ದಿವಸ ಟಿ.ವಿ., ಮೊಬೈಲ್, ಕಂಪ್ಯೂಟರ್ ಎಂದು ಅದರ ಸುತ್ತ ಗಿರಕಿ ಹೊಡೆಯುತ್ತಿದ್ದರೆ ಓದುವುದು, ಬರೆಯುವುದು ಯಾವಾಗ? ಕೊನೇಪಕ್ಷ ನಿನ್ನ ದಿನಚರಿಯನ್ನಾದರೂ ನೀನೇ ಮಾಡಿಕೊಳ್ಳಬೇಕಲ್ಲವೇ! ನೀನಿನ್ನೂ ಚಿಕ್ಕವನಾ? ದಿನವೂ ನಿನಗೆ ಹೇಳಬೇಕಾ?‘ ಎಂದು ಬೈದಾಗ ಅಮಿತ ಕೋಪ ಮಾಡಿಕೊಂಡು ಎದ್ದುನಿಂತ. ಅಷ್ಟರಲ್ಲೇ ಅವನ ಅಪ್ಪ, ಅಜ್ಜಿ– ಅಜ್ಜ ಎಲ್ಲರೂ ಜಮಾಯಿಸಿದರು. ‘ಯಾಕೆ ಅವ್ನ ಬಯ್ತೀಯಾ? ಅವನಿನ್ನೂ ಚಿಕ್ಕವನು. ಆಡೋ ವಯಸ್ಸು ಆಡ್ಕೊಳ್ಳಲಿ ಬಿಡು. ಯಾವಾಗ ನೋಡಿದ್ರೂ ಓದು, ಬರೆ, ಅಂದ್ರೆ ಅವನಿಗೂ ಬೇಜಾರಾಗುತ್ತೆ. ಸುಮ್ನಿರೋ ಪುಟ್ಟಾ ನಿನ್ನ ಅಮ್ಮನಿಗೆ ಬಯ್ಯೋದಷ್ಟೇ ಗೊತ್ತು’ ಎಂದು ಅವನನ್ನೇ ಬೆಂಬಲಿಸಿ ಕಳಿಸಿದರು. ಸಂಜೆ ಯಥಾಪ್ರಕಾರ. ಸಮವಸ್ತ್ರ ಕೂಡ ಬಿಚ್ಚದೆ ಟಿ.ವಿ., ಮೊಬೈಲ್‌ನಲ್ಲಿ ತಲ್ಲೀನ. ಪ್ರತಿ ದಿವಸ ಇದೇ ಹಾಡು. ಪರಿಣಾಮ ಶಾಲೆಯಿಂದ ದೂರು. ಮನೆಕೆಲಸ ಸರಿಯಾಗಿ ಮಾಡಲ್ಲ. ಟೆಸ್ಟ್‌ಗಳಲ್ಲಿ ಅಂಕಗಳು ಮೊದಲಿಗಿಂತ ಕಡಿಮೆಯಾಗಿವೆ. ಈಗ ಅಪ್ಪ, ಅಜ್ಜಿ– ಅಜ್ಜ ಯಾರೂ ಜವಾಬ್ದಾರರಲ್ಲ. ಅಮ್ಮ ಸರಿಯಾಗಿ ಎಲ್ಲಾ ನೋಡಿ ಮಾಡಿಸಿದ್ದರೆ ಅವ್ನು ಹೀಗಾಗ್ತಿರಲಿಲ್ಲ ಎಂಬ ಅಜ್ಜಿಯ ಗೊಣಗೊಣ. ಆ ಮಗುವಿನ ತಲೆಯಲ್ಲಿ ಅಮ್ಮ ಕೆಟ್ಟವಳು. ಯಾವಾಗ್ಲೂ ಅಮ್ಮ ಮಾತ್ರ ಬಯ್ತಾಳೆ. ಅಮ್ಮನನ್ನು ಬಿಟ್ಟು ಉಳಿದವರೆಲ್ಲ ಒಳ್ಳೆಯವರು ಎನ್ನುವ ಭಾವ. ಆಕೆ ವಿಲನ್ ಆಗಿಬಿಟ್ಟಿದ್ದಾಳೆ.

ಒಬ್ಬ ಶಿಲ್ಪಿ ಒಂದು ಶಿಲೆಯನ್ನು ಉಳಿಪೆಟ್ಟಿನಿಂದ ತಿದ್ದಿ ತೀಡಿ ಸುಂದರ ಆಕಾರ ಕೊಡುವಂತೆ ಅಮ್ಮನೂ ಮಕ್ಕಳನ್ನು ತಿದ್ದಿ ತೀಡಿ ಸಂಸ್ಕಾರ ಕೊಟ್ಟು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯನ್ನಾಗಿ ಬೆಳೆಸುವ ಶಿಲ್ಪಿ ಎಂದೆಲ್ಲ ತಾಯಿಯನ್ನು ಸಾಕಷ್ಟು ಹೊಗಳುತ್ತೇವೆ. ಆದರೆ ಈ ಅಮ್ಮ ಶಿಲ್ಪಿ ಎನಿಸಿಕೊಳ್ಳುವುದು ಸುಲಭವಲ್ಲ. ಆಕೆ ಮಕ್ಕಳ ಬಗ್ಗೆ ಅಷ್ಟೇ ಸೂಕ್ಷ್ಮವಾಗಿರಬೇಕಾಗುತ್ತದೆ. ಅವರ ಆಚಾರ-ವಿಚಾರ, ಓದು, ಹವ್ಯಾಸ, ಕೆಲಸ.. ಹೀಗೆ ಎಲ್ಲ ವಿಷಯಗಳತ್ತ ಅವಳ ಗಮನ ಇರಬೇಕಾಗುತ್ತದೆ. ಆಕೆ ಮಕ್ಕಳ ಬಗ್ಗೆ ಮೂರನೇ ವ್ಯಕ್ತಿಗಳಿಂದ ಪುಕಾರು ಬರದಂತೆ ಸದಾ ಮೈಯೆಲ್ಲಾ ಕಿವಿಯಾಗಿಯೇ ಇರುತ್ತಾಳೆ.

ಒತ್ತಡ ಹೇರಿಕೆ ಸಲ್ಲ
ಯಾವ ತಾಯಿಯೂ ಮಕ್ಕಳಿಗೆ ಕೇಡು ಬಯಸಲಾರಳು. ಅವಳಿಗೆ ಮಕ್ಕಳ ಬಗ್ಗೆ ಅಷ್ಟೇ ಕಾಳಜಿ, ಜವಾಬ್ದಾರಿ ಕೂಡ ಇರುತ್ತದೆ. ‘ನೀನು ಪರೀಕ್ಷೆಯಲ್ಲಿ ರ‍್ಯಾಂಕ್ ಬರಲೇಬೇಕು, ಇಷ್ಟು ಅಂಕ ಗಳಿಸಲೇಬೇಕು‘ ಎಂದು ಒತ್ತಾಯಿಸುವುದು ಒತ್ತಡ ಹೇರಿದಂತೆ. ಆದರೆ ಓದುವುದಕ್ಕಾಗಲಿ, ಅವರ ನಿಷ್ಕಾಳಜಿಯ ಬಗ್ಗೆಯಾಗಲಿ, ಅವರು ತಪ್ಪು ಮಾಡಿದಾಗ ಗದರಿಸಿ ತಿಳಿಸಿ ಹೇಳುವುದನ್ನು ಮಕ್ಕಳ ಮೇಲೆ ಒತ್ತಡ ಹೇರುವುದು ಎಂದು ಹೇಳುವುದು ಸರಿಯಲ್ಲ.

ತಾಯಿಗೆ ಮಕ್ಕಳ ಬಗ್ಗೆ ಇರುವ ಕಾಳಜಿ ಜವಾಬ್ದಾರಿಯೇ ಒಮ್ಮೊಮ್ಮೆ ಬಯ್ಯುವಂತೆ ಮಾಡುತ್ತದೆ. ಕೆಲವರು ಬೇಗ ಗ್ರಹಿಸುತ್ತಾರೆ. ಕೆಲವರು ಒಂದೆರಡು ಸಲ ಹೇಳಿದರೆ ಕೇಳುತ್ತಾರೆ. ಇನ್ನೂ ಕೆಲವರು ಉದ್ಧಟತನ ಅಥವಾ ಮೊಂಡು ಹಟ, ಸಿಟ್ಟಿನವರಿರುತ್ತಾರೆ. ಅವರ ಮೂಲ ಸ್ವಭಾವವನ್ನು ತಾಯಿ ಮಾತ್ರ ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾಳೆ. ಸಾಮಾನ್ಯವಾಗಿ ಅವರ ಸ್ವಭಾವಕ್ಕೆ ತಕ್ಕಂತೆ ಅವಳ ವರ್ತನೆ ಇರುತ್ತದೆ. ಆದರೆ ಅವಾಚ್ಯ ಶಬ್ದಗಳಿಂದ ಬಯ್ಯುವುದು, ಹೊಡೆಯುವುದು, ಪದೇ ಪದೇ ಅವಮಾನ ಮಾಡುವುದು ತಪ್ಪೆನಿಸುತ್ತದೆ. ಇದರಿಂದ ಮಕ್ಕಳು ಖಿನ್ನತೆಗೆ ಒಳಗಾಗುವ ಸಾಧ್ಯತೆಗಳೂ ಇವೆ.

ಅತಿಯಾದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ
ಇಂದಿನ ಆಧುನಿಕ ಕಾಲದಲ್ಲಂತೂ ಎಲ್ಲ ಮಕ್ಕಳೂ ಟಿ.ವಿ., ಮೊಬೈಲ್. ಇಂಟರ್‌ನೆಟ್, ವಾಟ್ಸ್‌ಆ್ಯಪ್ ಎಂದು ಅದರ ಸುತ್ತವೇ ಸುತ್ತುತ್ತಿರುತ್ತಾರೆ. ಆದರೆ ಈ ಆಧುನಿಕ ಸಾಮಗ್ರಿಗಳು ನಮಗೆ ಎಷ್ಟು ಅನುಕೂಲವೋ ಅಷ್ಟೇ ಸಮಸ್ಯೆಗಳನ್ನೂ ಸೃಷ್ಟಿಸುತ್ತವೆ. ಇಲ್ಲಿ ಎಲ್ಲವೂ ಸಿಗುತ್ತವೆ. ಚಿಕ್ಕ ವಯಸ್ಸಿನಲ್ಲಿ ಬೇಡದ ವಿಚಾರಗಳು ಮನಸ್ಸಿನೊಳಗೆ ಬಂದು ಅವರು ಅದರತ್ತ ಮತ್ತೆ ಮತ್ತೆ ಆಕರ್ಷಿತರಾಗುತ್ತಾರೆ. ಪರಿಣಾಮ ಇಂತಹ ಮಕ್ಕಳು ಇತರ ವಿಚಾರಗಳಿಂದ ತಾನಾಗೇ ವಿಮುಖರಾಗುತ್ತಾರೆ. ಓದು, ಆಟ, ಹಾಡು, ಚಿತ್ರಕಲೆ, ಕಥೆ ಪುಸ್ತಕಗಳಂತಹ ಹವ್ಯಾಸಗಳು ಇವರಿಗೆ ರುಚಿಸಲಾರದು.

ಗ್ಯಾಜೆಟ್‌ಗಳನ್ನು ಎಷ್ಟು ಅವಶ್ಯಕತೆಯೋ ಅಷ್ಟೇ ಬಳಸಿದರೆ ಒಂದು ಹಂತದಲ್ಲಿರುತ್ತದೆ. ಇವೆಲ್ಲ ಅತಿಯಾದಾಗ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಇಂತಹ ವಿಚಾರಗಳನ್ನು ಮಕ್ಕಳಿಗೆ ಹತ್ತು ಸಲ ಪ್ರೀತಿಯಿಂದ ಹೇಳಿದರೂ ಕೇಳದಿದ್ದಾಗ ತಾಯಿಯ ತಾಳ್ಮೆ ಕೆಡುತ್ತದೆ. ಇದು ಸಾಮಾನ್ಯ ವರ್ತನೆ. ಅದೇ ವಾತ್ಸಲ್ಯ ಆ ಮಗುವನ್ನು ಗದರಿಸುವಂತೆ ಮಾಡುತ್ತದೆ. ತಪ್ಪು ಮಾಡದವರಿದ್ದಾರೆಯೇ? ಇಂದು ಹಿರಿಯರೆನಿಸಿದ ನಾವೂ ಕೂಡ ಚಿಕ್ಕವರಿದ್ದಾಗ ತಪ್ಪು ಮಾಡಿ ಅಪ್ಪ-ಅಮ್ಮನಿಂದ, ಶಿಕ್ಷಕರಿಂದ ಬೈಸಿಕೊಂಡೇ ದೊಡ್ಡವರಾಗಿದ್ದೇವೆ, ಅಲ್ಲವೇ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು