ಬುಧವಾರ, ಆಗಸ್ಟ್ 21, 2019
22 °C

ಜೀವನ ‘ಜೋಕಾಲಿ’ ಪಂಚಮಿ

Published:
Updated:
Prajavani

ಶ್ರಾವಣ ಬರುತ್ತಲೇ ಸಾಲುಗಟ್ಟುವ ಹಬ್ಬಗಳಲ್ಲಿ ಮೊದಲಾಗಿ ನಿಲ್ಲುವುದೇ ನಾಗರ ಪಂಚಮಿ. ನಾಗರ ಅಮಾವಾಸ್ಯೆಯ ಮರುದಿನ, ಮನೆಯ ಬಾಗಿಲ ಮುಂದಿನ ರಂಗೋಲಿಯಲ್ಲಿ ಆಡುವ ನಾಗರಗಳು ಹೆಡೆಬಿಚ್ಚಿ ಮನೆಯ ಒಳಮುಖವಾಗುತ್ತವೆ.

ಇದೇ ಶ್ರಾವಣದ ಆರಂಭ; ಮಣ್ಣೆಂಬ ಚೈತನ್ಯದ ಪೂಜೆಗೆ ಓಂಕಾರ. ಮಣ್ಣಿನಡಿಯಲ್ಲಿ ಬಿತ್ತಿದ ಬೀಜ ಮೇಲೆದ್ದು ಬರುವುದನ್ನು ಕಾಣಲು ಕಾದು ಕೂರುವ ಹಬ್ಬ! ಬೇಸಾಯ ಹಾಗೂ ಅದಕ್ಕೆ ಪೂರಕವಾದ ಕೆಲಸ-ಕಾರ್ಯಗಳ ಅಗತ್ಯಕ್ಕೆ ಅನುಗುಣವಾಗಿ ಹುಟ್ಟಿಕೊಂಡ ಶ್ರಾವಣದ ಈ ಹಬ್ಬಗಳು ಸಾರುವುದು ಮಣ್ಣಿನ ಮಹತ್ವವನ್ನೇ. ಮಣ್ಣಿನ ನಾಗರ, ಮಣ್ಣಿನ ಗಣಪ, ಮಣ್ಣಿನ ಇಲಿ, ಮಣ್ಣಿನ ಗೌರಿ, ಮಣ್ಣಿನ ನಂದಿ (ಬಸವಣ್ಣ), ಮಣ್ಣಿನ ಶಿವಲಿಂಗ... ಹೀಗೆ ತಿಂಗಳುದ್ದಕ್ಕೂ ನಡೆಯುವುದು ಮಣ್ಣಿನ ಪೂಜೆಯೇ.

ಆಗಷ್ಟೇ ಬಿತ್ತನೆಯಾದ ಬೀಜಗಳು ಇಲಿಗಳ ಪಾಲಾಗದಿರಲಿ ಎಂಬುದು ರೈತರ ಕಾಳಜಿ. ಇಲಿಗಳಿಗೆ ಕಂಟಕವಾಗುವ ಹಾವುಗಳು ಹೊಲದಲ್ಲಿರಬೇಕು. ಹೀಗಾಗಿಯೇ ರೈತರು ಯಾರೂ ಹೊಲದಲ್ಲಿನ ಹಾವುಗಳನ್ನು ಕೊಲ್ಲುವುದಿಲ್ಲ. ಬಿತ್ತಿದ ಬೀಜಕ್ಕೆ ಸೊಂಡಿಲು ತೂರಿಸುವ ಇಲಿಗೂ, ಅವುಗಳನ್ನು ನುಂಗುವ ಹಾವಿಗೂ ಪೂಜೆ ಸಲ್ಲಿಸಲು ನೆಪವಾಗಿ ಸಿಕ್ಕಿದ್ದು ನಾಗರ ಪಂಚಮಿ ಮತ್ತು ಗಣೇಶ ಚತುರ್ಥಿ. ಇಲಿಗಳಿಂದ ಬೆಳೆ ರಕ್ಷಿಸಿದ ಹಾವಿಗೆ ಮೊದಲೇ ಪೂಜೆಯಾದರೆ, ಇಲಿಗೆ ಗಣೇಶ ಚೌತಿಯ ಮರುದಿನ ಪೂಜೆ; ನೈವೇದ್ಯ. ಅದು ಇಲಿಯ ವಾರ!
ಹಾವು ಕಡಿತದಿಂದ ಮೃತಪಟ್ಟ ತನ್ನ ಅಣ್ಣನನ್ನು ತಂಗಿಯೊಬ್ಬಳು ಬದುಕಿಸಿಕೊಂಡ ಕಥೆಯೂ ಈ ಹಬ್ಬದ ಹಿಂದಿದೆ. ಹೀಗಾಗಿ, ಇದು ಅಣ್ಣ–ತಂಗಿಯರ ಹಬ್ಬ. ಯಾವ ಹಬ್ಬಕ್ಕೆ ಕರೆಸದಿದ್ದರೂ ನಾಗರ ಪಂಚಮಿಗೆ ಅವರು ತವರಿಗೆ ಬರಲೇಬೇಕು.

ಗಂಡನ ಮನೆಯ ಆಸರಿಕೆ–ಬ್ಯಾಸರಿಕೆ ಮರೆತು, ಮತ್ತೆ ಮಕ್ಕಳಾಗಿ ತವರಿನಲ್ಲಿ ಆಡುತ್ತಾರೆ; ನಲಿಯುತ್ತಾರೆ. ಹೀಗೆ ತವರಿಗೆ ಬಂದ ಹೆಣ್ಣುಮಕ್ಕಳಿಗೆಲ್ಲ ಹಿಗ್ಗು ನೀಡುವ ಸಂಗತಿ ಎಂದರೆ ಬಗೆಬಗೆಯಾದ ಉಂಡೆಗಳನ್ನು ಕಟ್ಟುವುದು; ಮರದ ಜೋಕಾಲಿ ಜೀಕುವುದು!

ಬೀಳುವ ಜಿಟಿಜಿಟಿ ಮಳೆಗೆ ಮೆಲ್ಲಲು, ದೇಹವನ್ನು ಬೆಚ್ಚಗಿರಿಸಲು, ಶೇಂಗಾ ಉಂಡೆ, ಎಳ್ಳುಂಡೆ, ಬೂಂದಿ, ಗುಳ್ಳಡಿಕೆ, ರವೆಯುಂಡೆ, ಚಕ್ಕುಲಿ, ಕೋಡುಬಳೆ, ಕರಿದ ಅವಲಕ್ಕಿ ಅಪ್ಯಾಯವೆನಿಸುತ್ತವೆ. ಇವೆಲ್ಲವುಗಳನ್ನು ಸಿದ್ಧಪಡಿಸುವಲ್ಲಿ ಹೆಣ್ಣಮಕ್ಕಳು ದಣಿವರಿಯದವರು. ಇವುಗಳೊಂದಿಗೆ, ತಿಂಗಳುಗಟ್ಟಲೇ ಬರುವಂತೆ, ಎಳ್ಳುಹಚ್ಚಿದ ಸಜ್ಜಿ ರೊಟ್ಟಿ, ಜೋಳದ ರೊಟ್ಟಿ, ಶೇಂಗಾ ಚಟ್ನಿ, ಅಗಸಿ ಚಟ್ನಿ, ಗುರೆಳ್ಳು ಚಟ್ನಿ – ಹೀಗೆ ಬಗೆಬಗೆಯ ವ್ಯಂಜನಗಳನ್ನು ಸಿದ್ಧ ಮಾಡಿಡುತ್ತಾರೆ. ಹೀಗೆ, ಇಷ್ಟು ಪ್ರಮಾಣದಲ್ಲಿ ರೊಟ್ಟಿ ಮಾಡುವುದನ್ನೂ ಹಬ್ಬ ಎಂದು ಸಂಭ್ರಮಿಸಿ, ಅದಕ್ಕೆ ‘ರೊಟ್ಟಿ ಪಂಚಮಿ’ ಎಂದರೆ; ಉಂಡಿ ಮಾಡಿ, ತಿನ್ನುವುದನ್ನು ‘ನಾಗರ ಪಂಚಮಿ’ ಎಂದರು.

ಹೊಲದ ಕೆಲಸಕ್ಕೆ ತುಸು ವಿರಾಮ ಸಿಗುವುದು ಈಗಲೇ ಆದ್ದರಿಂದ, ಈ ಅವಧಿಯಲ್ಲೇ ತಿಂಗಳಿಗೆ ಅಗತ್ಯವಿದ್ದಷ್ಟು ರೊಟ್ಟಿ–ಚಟ್ನಿಗಳನ್ನು ಸಿದ್ಧಪಡಿಸಿಬಿಡುತ್ತಾರೆ. ಬೀಜ ಮೊಳಕೆಯೊಡೆದು ಮೇಲಕ್ಕೆ ಬಂದಂತೆಲ್ಲ ಕಳೆ ತೆಗೆಯುವುದು, ಗೊಬ್ಬರ ಉಣಿಸುವುದು ಸೇರಿದಂತೆ ಬೇರೆ ಬೇರೆ ಕೆಲಸ ಶುರುವಾಗುತ್ತವೆ. ಆಗೆಲ್ಲ ಹೊಂದಿಸಿ ಅಡುಗೆ ಮಾಡುವುದು ಸಾಧ್ಯವಾಗುವುದಿಲ್ಲ. ಎಲ್ಲಕ್ಕಿಂತ ಮೇಲಾಗಿ, ಶ್ರಾವಣದ ಸೊಬಗನ್ನು ಸವಿಯಲಾಗದು.

ಬೇಸರಿಸದೇ, ಕುದಿಸಿದ ಕಡಬು, ಬಗೆಬಗೆಯ ಕಾಳಿನ ಉಸುಳಿಗಳು, ತಂಬಿಟ್ಟು, ಅವಲಕ್ಕಿ, ಉಂಡಿ, ಚಕ್ಕುಲಿಯಂಥ ತಿನಿಸುಗಳನ್ನು ಮಾಡುವ ಮಹಿಳೆಯರ ಜೀವನೋತ್ಸಾಹ; ದಣಿವರಿಯದ ದುಡಿಮೆ; ಬಸವನಪಾದ, ಗೌರೀಹೂವು, ಮಲ್ಲಿಗೆ, ಸಂಪಿಗೆ, ಡೇರೆ, ಆಬೋಲಿ, ಗೊರಟಗಿ, ಗುಲಾಬಿ, ಕೇದಿಗೆ– ಹೀಗೆ ಹೊತ್ತಿಗೆ ಬಂದ ಹತ್ತೂ ಹೂಗಳನ್ನು ಮುಡಿದು ಬೀಗುವ ಅವರ ಸಂಭ್ರಮ, ಕಲ್ಲನ್ನೂ ಕರಗಿಸಬಲ್ಲೆನೆಂಬ ಅಚಲ ವಿಶ್ವಾಸ, ಅಪರಿಮಿತ ಭರವಸೆ ಮೇಳೈಸಿದ ನಾಗರ ಪಂಚಮಿಯು, ‘ಜೋಕಾಲಿ’ ಹಬ್ಬವಾಗುವುದು ಈ ಕಾರಣಕ್ಕಾಗಿಯೇ. 

Post Comments (+)