ನವರಸದ ನವರಾತ್ರಿ

7

ನವರಸದ ನವರಾತ್ರಿ

Published:
Updated:
Deccan Herald

ಜಡಿ ಮಳೆ ನಿಂತು ಆಗೊಮ್ಮೆ, ಈಗೊಮ್ಮೆ ಕಾಣಿಸಿಕೊಂಡು ಇಳೆಗೆ ನಾನಿದ್ದೇನೆ ಎಂದು ತೋರಿಸಿಕೊಡುವ ತುಂತುರು ಮಳೆ, ಮಂದ ಮಾರುತ, ಎಳೆ ಬಿಸಿಲು, ಗದ್ದೆಗಳಲ್ಲಿ ತುಂಬಿದ ಬಸುರಿಯಂತೆ ತೊನೆದಾಡುವ ಪೈರುಗಳು, ಗಿಡಗಳಲ್ಲಿ ಗೊಂಚಲು ಗೊಂಚಲು ಹೂವುಗಳು, ತುಂಬಿದರೂ ತುಳುಕದೆ ಗಂಭೀರವಾಗಿ ಹರಿಯುವ ನದಿ, ಕೊಳಗಳು, ಅದರಲ್ಲರಳಿದ ಕೊಳದ ಹೂವುಗಳು (ತಾವರೆಯಂತಿರುವ ಹೂವು).

ಇದು ಸೆಪ್ಟೆಂಬರ್ – ಅಕ್ಟೋಬರ್ ತಿಂಗಳುಗಳಲ್ಲಿ ಪ್ರಕೃತಿ ಬಿಡಿಸುವ ಚಿತ್ರ. ಇದೇ ತಿಂಗಳಲ್ಲಿ ಪಿತೃಗಳಿಗೆ ತರ್ಪಣ ಕೊಡುವ ಪಿತೃಪಕ್ಷ ಮುಗಿದು ನವರಸದ ನವರಾತ್ರಿ ಹಾಜರಾಗುತ್ತದೆ. ನವರಾತ್ರಿ ದೇವಿಯ ಹಬ್ಬ, ದುರ್ಗಾ ಪರಮೇಶ್ವರಿ, ಮೂಕಾಂಬಿಕೆ, ಮಹಿಷ ಮರ್ಧಿನಿ, ಅಮ್ಮನವರು ಹೀಗೆ ಎಲ್ಲವೂ ಪೂಜಿಸುವವರ ಭಾವಕ್ಕೆ ತಕ್ಕಂತಿರುವ ದೇವಿಯ ಹಲವು ಮುಖಗಳು. ದೇವಿಯೆಂದ ಮೇಲೆ ಕೇಳಬೇಕೇ? ಜರಿ ಜರಿ ಸೀರೆ ಉಡಿಸಿ, ಹೊರಲಾರದಷ್ಟು ಹೂಮುಡಿಸಿ, ಗಂಧ, ಅರಿಸಿನ, ಕುಂಕುಮದಿಂದ ಸಿಂಗರಿಸಿ ಪಂಚಭಕ್ಷ್ಯ ಪರಮಾನ್ನ ಅರ್ಪಿಸಿ ದೇವಿಯನ್ನು ಸಂಪ್ರೀತಗೊಳಿಸಲು ಪ್ರಯತ್ನಿಸಲಾಗುತ್ತದೆ. ಭಾರತದ ಉದ್ದಗಲಕ್ಕೂ ನವರಾತ್ರಿ ಆಚರಿಸಿದರೂ ದೇವಿಯನ್ನು ಓಲೈಸುವ ಬಗೆ ಮಾತ್ರ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ರೀತಿ. ಕರ್ನಾಟಕದಲ್ಲೇ ಒಂದೊಂದು ಕಡೆ ಒಂದೊಂದು ರೀತಿ.

ಕರಾವಳಿಯ ಕುಂದಾಪುರದಲ್ಲಿ ಮತ್ತೊಂದೇ ರೀತಿ, ನವರಾತ್ರಿಯ ಒಂಬತ್ತು ದಿನವೂ ವೇಷಗಳ ಒಡ್ಡೋಲಗ. ವೇಷ ಹಾಕಿದ ಹುಡುಗರು, ಗಂಡಸರು ಮನೆ, ಮನೆಗೆ, ಅಂಗಡಿಗಳಿಗೆ ತೆರಳಿ ಹಾಕಿದ ವೇಷಕ್ಕೆ ತಕ್ಕಂತೆ ಮಾತನಾಡಿಯೋ, ಕುಣಿದೋ ದುಡ್ಡು ಕೇಳುವುದೇ ಇಲ್ಲಿನ ವಿಶೇಷ. ವೇಷಗಳಿಂದ ತಪ್ಪಿಸಿಕೊಳ್ಳುವಂತಿಲ್ಲ ಮುಖ್ಯ ಬೀದಿಯಿರಲಿ, ಗಲ್ಲಿಯಿರಲಿ, ಗದ್ದೆಯಂಚಿರಲಿ ಒಂದಿಲ್ಲೊಂದು ವೇಷಗಳು ಧುತ್ತನೆ ಎದುರಾಗುತ್ತವೆ.

ವೇಷ ಹಾಕಲು ಕಾರಣಗಳು ಮಾತ್ರ ಹಲವಾರು, ಕೆಲವರು ದುಡ್ಡಿಗಾಗಿ ವೇಷ ಹಾಕಿದರೆ, ಇನ್ನು ಕೆಲವರು ಕೆಲಸವಿಲ್ಲ, ಮಾಡಲು ಮತ್ತೇನಿಲ್ಲ ಎನ್ನುತ್ತಾ ವೇಷ ತೊಟ್ಟು ಅಲೆಯುವವರೂ ಇದ್ದಾರೆ. ಕೆಲವರಿಗೆ ಇದು ಪಾರಂಪರಿಕವಾಗಿ ಬಂದದ್ದು. ಇನ್ನು ಹರಕೆ ತೀರಿಸುವ ಬಗೆಯಾಗಿ ವೇಷ ಹಾಕುವುದೂ ಇದೆ. ‘ತಾಯೇ ಗಂಡುಮಗ ಹುಟ್ಟಿದ್ರೆ ವೇಷ ಹಾಕಸ್ತೆ’ ಅಂತಲೋ, ಮಕ್ಕಳಿಗೆ ಹುಷಾರಿಲ್ಲದಾಗ ‘ಮಗನಿಗೆ ಹುಷಾರಾದ್ರೆ ಬರುವ ವರ್ಷ ವೇಷ ಹಾಕಸ್ತೆ’ ಅಂತಲೋ ಹರಕೆ ಹೊರುವುದಿದೆ.

ಜೀವನದಲ್ಲಿ ಎಲ್ಲರೂ ಒಂದಿಲ್ಲೊಂದು ಸಂದರ್ಭದಲ್ಲಿ ಮುಖವಾಡ ಹಾಕುತ್ತಾರೆ ಅನ್ನಿಸುತ್ತದೆ. ಆದರೆ, ನವರಾತ್ರಿಯಲ್ಲಿ ಮಾತ್ರ ಗಂಡು ಮಕ್ಕಳು ಅಥವಾ ಗಂಡಸರೇ ವೇಷ ಹಾಕುತ್ತಾರೆಯೇ ಹೊರತು ಹೆಣ್ಣು ಮಕ್ಕಳು ಇದರಿಂದ ದೂರ. ಕಾರಣ ಸಾರ್ವಜನಿಕ ಜಾಗದಲ್ಲಿ ಹೆಣ್ಣು ಮಕ್ಕಳು ಕುಣಿಯುವುದು ಬೇಡವೆಂದು ಇರಬಹುದು. ಇಲ್ಲಿನ ಯಕ್ಷಗಾನದಲ್ಲೂ ಗಂಡಸರದ್ದೇ ಸಾಮ್ರಾಜ್ಯ. ಆರೇಳು ವರ್ಷದ ಮಕ್ಕಳಿಂದ ಹಿಡಿದು ಅರವತ್ತು- ಎಪ್ಪತ್ತು ವರ್ಷದ ಮುದುಕರವರೆಗೂ ಬಣ್ಣ ಹಚ್ಚಿ ಊರನ್ನೇ ರಂಗ ಮಂಚವನ್ನಾಗಿಸುತ್ತಾರೆ.

ಸುತ್ತಮುತ್ತ ಇರುವ ಜನರ ವ್ಯವಸಾಯ ಮತ್ತು ಪ್ರಾಣಿಗಳೇ ವೇಷ ಹಚ್ಚುವ ಜನರಿಗೆ ಸ್ಪೂರ್ತಿ. ಪೇಪರ್ ಹಾಕುವ ಹುಡುಗ, ಹಾಲು ಮಾರುವವ, ಕಸ ಎತ್ತುವವ, ಡಾಕ್ಟರ್-ಪೇಶಂಟ್, ಹುಚ್ಚ, ಡಾನ್ಸ್ ಪಾರ್ಟಿ, ಸಿಂಹ, ಹುಲಿ, ಕರಡಿ ಮಾತ್ರ ಅಲ್ಲ ಕಿವಿಯ ಕುಗ್ಗೆ ತೆಗೆಯುವವನ ವೇಷವೂ ಬಂದು ಹೋಗುತ್ತದೆ. ನಾರದ, ರಾಮ, ಕೃಷ್ಣರೂ ಅಪರೂಪಕ್ಕೆ ಎದುರಾಗುತ್ತಾರೆ. ಮುಖಕ್ಕೆ ಸುಮ್ಮನೆ ಒಂದಿಷ್ಟು ಬಣ್ಣ ಮೆತ್ತಿಕೊಂಡು ಬಂದು ದುಡ್ಡು ಕೇಳುತ್ತಾರೆಂದುಕೊಳ್ಳಬೇಡಿ, ಸಿಂಹ, ಕರಡಿಗಳದ್ದು ಸೊಂಟಕ್ಕೆ ಸರಪಳಿ, ಮುಖಕ್ಕೆ ಭಾರವಾದ ‘ಮುಖವಾಡ’ ಧರಿಸಿದ ಕುಣಿತ. ಹುಲಿಯ ವೇಷಧಾರಿಗಳು ಹುಲಿಯ ನೈಜ ಬಣ್ಣವಾದ ಹಳದಿ ಮತ್ತು ಕಪ್ಪು ಬಣ್ಣದ ಪೈಂಟನ್ನೇ ಮುಖ ಮತ್ತು ದೇಹವಿಡೀ ಬಳಿದುಕೊಂಡಿರುತ್ತಾರೆ.

ಪೈಂಟನ್ನು ನವರಾತ್ರಿಯ ಎರಡನೇಯ ಅಥವಾ ಮೂರನೇಯ ದಿನ ಹಚ್ಚಿದರೆ ತೆಗೆಯುವುದು ನವರಾತ್ರಿ ಮುಗಿದ ಮೇಲೆಯೇ. ಹುಲಿವೇಷದ ಗುಂಪಿನಲ್ಲಿ ಸಾಧಾರಣವಾಗಿ 6 ರಿಂದ 12 ಹುಲಿಗಳಿರುತ್ತವೆ, ಹುಲಿಗಳು ಜೊತೆಯಾಗಿ ಮಾಡುವ ನೃತ್ಯಕ್ಕೆ ಗಜ ಗಂಭೀರ ‘ಸ್ಟೆಪ್ಪು’ಗಳಿವೆ. ವಾದ್ಯದ ಸೆಟ್ಟಿನೊಂದಿಗೆ ತೆರಳುವ ಎರಡು ಕಾಲಿನ ಹುಲಿಗಳ ಗುಂಪಿನಲ್ಲಿ ಕೋವಿ ಹಿಡಿದುಕೊಂಡ ಹುಲಿ ಹೊಡೆಯುವವನೂ ಇರುತ್ತಾನೆನ್ನಿ. ಡಾನ್ಸ್ ಮಾಡುತ್ತಾ ಹಿಮ್ಮುಖವಾಗಿ ಬಗ್ಗಿ ನೆಲದ ಮೇಲಿಟ್ಟ ಲಿಂಬೆ ಹಣ್ಣನ್ನೋ, ದುಡ್ಡನ್ನೋ ಬಾಯಿಯಿಂದ ಕಚ್ಚಿ ತೆಗೆಯುವ ಕಸರತ್ತುಗಳೂ ಇರುತ್ತದೆ. ಇನ್ನು ಡಾನ್ಸ್ ಪಾರ್ಟಿಯೂ 8-10 ವೇಷಗಳ ಗುಂಪು, ಬ್ಯಾಂಡ್‌ ಸೆಟ್ಟಿನ ಹಾಡಿಗೆ ತಕ್ಕಂತೆ ಕುಣಿಯುವ ವೇಷಗಳಲ್ಲಿ ಸ್ಲರ್ಟ್, ಸೀರೆ ತರುಣಿಯ ವೇಷ ಹಾಕಿಕೊಂಡವರು, ಡೊಳ್ಳು ಹೊಟ್ಟೆಯವ, ಸೂಟುಧಾರಿ ಗಂಡಸಿನ ವೇಷಗಳಿರುವುದು ಸಾಮಾನ್ಯ.

ವೇಷ ಹಾಕಿ ಬಿಸಿಲು, ಮಳೆಯೆನ್ನದೆ ಮನೆ ಮನೆಗೆ ತೆರಳಿ ಕಷ್ಟಪಟ್ಟು ಒಟ್ಟು ಮಾಡಿದ ದುಡ್ಡನ್ನು ಕೆಲವರು ‘ಕುಡಿತ’ಕ್ಕೆ ಸುರಿದು ಹಾಳು ಮಾಡುತ್ತಾರೆಂಬ ಆರೋಪವೂ ಇವರ ಮೇಲಿದೆ.

ನವರಾತ್ರಿ ಶುರುವಾಗುತ್ತಿದ್ದಂತೆ ಊರಿನ ಮದ್ಯದಲ್ಲಿ ಕುಂದೇಶ್ವರ ದೇವಸ್ಥಾನದ ಮುಖ ಮಂಟಪದ ಹೊರಗೆ ‘ದೇವಿ’ಯ ಪ್ರತಿಷ್ಠಾಪನೆ. ಬೆಳಿಗ್ಗೆ ವೇಷಗಳು ದೇವಿಗೆ ನಮಸ್ಕರಿಸಿ ಮನೆ ಮನೆಗೆ ತಿರುಗಾಟ ಶುರು ಮಾಡಿದವರು ಸಂಜೆಯಾಗುತ್ತಲೆ ಮತ್ತೆ ದೇವಿಗೆ ನಮಸ್ಕರಿಸಿ ತಮ್ಮ ಮನೆಗೆ ತೆರಳುವುದು ಸಂಪ್ರದಾಯ. ನವರಾತ್ರಿಯ ಒಂಬತ್ತು ದಿನಗಳು ಮುಗಿದಾಗ ಬರುವುದೇ ವಿಜಯದಶಮಿ. ಅಂದು ದೇವಿಯ ಮೆರವಣಿಗೆ ಊರ ಸುತ್ತ, ಆಗ ಎಲ್ಲಾ ವೇಷಗಳು ದೇವಿಯೊಂದಿಗಿರುತ್ತವೆ, ಇದನ್ನು ನೋಡಲು ದಾರಿಯ ಎರಡೂ ಬದಿಗಳಲ್ಲೂ ಜನ ಸಾಗರ.

ನವರಾತ್ರಿ ಶುರುವಾಗುತ್ತಿದ್ದಂತೆ ಮೊದಲು ಬರುವುದೇ ‘ಲಕ್ಷ್ಮಣ ಶೇರಿಗಾರ’ರ ನಾರದ ವೇಷ, ಕಚ್ಚೆ ಪಂಚೆ, ತಲೆಯಲ್ಲಿ ಜಟ್ಟು, ಕೈಯಲ್ಲಿ ಕಿಲುಕ, ಕುತ್ತಿಗೆಯಲ್ಲಿ ನೇತಾಡುವ ತಂಬೂರಿ, ಅರ್ಧ ನಿಮಿಲಿತ ನೇತ್ರ, ಬಾಯಲ್ಲಿ ‘ನಾರಾಯಣ, ನಾರಾಯಣ’ ಎನ್ನುವ ಮಂತ್ರ, ಸ್ವಲ್ಪ ದೂರದಿಂದ ನೋಡಿದರೆ ಸಾಕ್ಷಾತ್ ನಾರದ ಧರೆಗಿಳಿದಂತೆ ಕಾಣುವುದು ಸುಳ್ಳಲ್ಲ.

ಹತ್ತಿರ ಬಂದಾಗ ಬಣ್ಣ ಬಯಲು, ಸರಾಯಿಯ ವಾಸನೆ, ನನ್ನ ಅಪ್ಪಯ್ಯ ‘ಶೇರಿಗಾರ್ರೇ ನಾರದನ ವೇಷ ಹಾಯ್ಕಂಡ್ ಸರಾಯಿ ಕುಡುದ ಎಂತಕೆ’ ಅಂದಾಗಲೋ, ‘ಶೇರಿಗಾರ್ರೇ ಸರಾಯಿ ಕುಡ್ದ ಕುಡ್ದ ಕರುಳು ಒಟ್ಟೆ ಆತ್ತ, ಕಡೆಗೆ ಯಾವ ನಾರಾಯಣ ಬಂದ್ರೂ ಸರಿ ಆತ್ತಿಲ್ಲ ಕಾಣೆ’ ಅಂದರೆ ‘ದೇವತೆಗಳಿಗೆ ಸುರಾಪಾನ ಹೊಸ್ತ ಅಲ್ಲಾ ಕಾಣಿ, ನಾರಾಯಣ ನಾರಯಣ’ ಎನ್ನುತ್ತಾ ಕಣ್ಣು ಮಿಟುಕಿಸುತ್ತಿದ್ದರು ಶೇರಿಗಾರರು. ಮನೆ ಮನೆಗೆ ಬಂದ ವೇಷಗಳನ್ನು ಸುಮ್ಮನೆ ಕಳಿಸಲಾದಿತೇ? ಇಲ್ಲಾ ಮನೆಗೆ ಬಂದ ವೇಷಗಳು ದುಡ್ಡು ಸಿಗದೆ ಸುಮ್ಮನೆ ವಾಪಸಾಗುವುದುಂಟೇ? ನಾನು ಚಿಕ್ಕವಳಿದ್ದಾಗ ನಾಲ್ಕಾಣೆ, ಎಂಟಾಣೆ, ಒಂದು ರೂಪಾಯಿ, ಹುಲಿ ವೇಷಕ್ಕಾದರೆ ಹತ್ತು ರೂಪಾಯಿ ಕೊಡುತ್ತಿದ್ದ ನೆನಪು. ನಮ್ಮ ಮನೆಯಲ್ಲಂತೂ ನವರಾತ್ರಿಗೆ ಎರಡು ತಿಂಗಳ ಮೊದಲಿನಿಂದಲೇ ವೇಷಗಳಿಗೆ ಕೊಡಲು ಚಿಲ್ಲರೆಗಳನ್ನು ಒಟ್ಟು ಮಾಡುತ್ತಿದ್ದೆವು. ಕಡೆ ಕಡೆಗೆ ಆಣೆಗಳು ಕಾಣೆಯಾದವು. ರೂಪಾಯಿಗಳು ಮಾತ್ರ, ಹುಲಿ ವೇಷಕ್ಕಂತೂ ನೂರು ರೂಪಾಯಿ ಕೊಟ್ಟರೂ ತಾತ್ಸಾರವಾಗುವ ಕಾಲ ಬಂತು.

ಯಾರು ಏನೇ ಮಾಡಲಿ ಚಿಕ್ಕವಳಿದ್ದಾಗ ನನಗಂತೂ ವೇಷಗಳ ಹುಚ್ಚು. ಮನೆಗೆ ಬಂದ ವೇಷಗಳ ಹಿಂದೆ ಹಿಂದೆ ಹೋಗುತ್ತಿದ್ದೆ. ಹುಲಿ ವೇಷ ಮತ್ತು ಡಾನ್ಸ್ ಪಾರ್ಟಿಯಂತಹ ವೇಷಗಳನ್ನು ಹಿಂಬಾಲಿಸುತ್ತಾ ಅರ್ಧ ಕುಂದಾಪುರ ಸುತ್ತು ಬಂದದ್ದೂ ಇದೆ. ನಾನಂತೂ ಇಂತಹ ವಿಷಯಗಳಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆಯೇ, ಮನೆ ಪಕ್ಕದಲ್ಲಿ ನಾಲ್ಕು ರಸ್ತೆ ಕೂಡುವಲ್ಲಿ ಹೋಗಿ ನಿಲ್ಲುತ್ತಿದ್ದೆ.

ಯಾವುದಾದರೂ ವೇಷಗಳು ಆ ದಾರಿಯಲ್ಲಿ ಬಂದರೂ ‘ಬನ್ನಿ ಬನ್ನಿ ನಮ್ಮ ಮನೆಗ ಬಂದ ಕುಣಿನಿ, ನಮ್ಮ ಮನೆಲ ದುಡ್ಡು ಒಟ್ಟ ಮಾಡಿ ಇಟ್ಟಿತ್ತ’ ಎನ್ನುತ್ತಾ ಕರೆದುಕೊಂಡು ಬರುತ್ತಿದ್ದೆ, ನನ್ನ  ಈ ಕೆಲಸ ಮನೆಯಲ್ಲಿ ಗೊತ್ತಾದರೆ ‘ಹೆಣೆ ಮಂಡೆ ಸಮಾ ಇತ್ತ’ ಎನ್ನುತ್ತಾ ಅಮ್ಮ ಬೆನ್ನಿನ ಮೇಲೆ ಗುದ್ದುವುದಿದೆ. ನಾನು ಇದಕ್ಕೆಲ್ಲಾ ಕ್ಯಾರ್‌ ಮಾಡುವವಳಲ್ಲ. ಕೆಲವು ಮನೆಗಳಲ್ಲಿ ವೇಷಗಳು ಬಾರದಿರಲು ಎದುರು ಬಾಗಿಲಿಗೆ ಬೀಗ ಹಾಕಿ ಮನೆಯಲ್ಲಿ ಯಾರೂ ಇಲ್ಲದಂತೆ ತೋರಿಸುವವರೂ ಇದ್ದರು, ಅಂತಹದ್ದರಲ್ಲಿ ವೇಷಗಳನ್ನು ಮನೆಗೆ ಕರೆಯುವ ನಾನು ಸಾಕಷ್ಟು ಫೇಮಸ್ಸೂ ಆಗಿದ್ದೆ ಅನ್ನಿ. ದಶಕಗಳ ಕಾಲ ವಿದೇಶಗಳಲ್ಲಿ ಸುತ್ತಿ ಮತ್ತೆ ಸ್ಥಿರವಾಗಿ ನೆಲೆಸಲು ಭಾರತಕ್ಕೆ ವಾಪಸ್‌ ಬಂದಾಗ ಬೆಂಗಳೂರು ಕೈ ಬೀಸಿ ಕರೆಯಿತು. ಸ್ವಂತ ಜೀವನದಲ್ಲೂ ಹಲವಾರು ಬದಲಾವಣೆ. ಅಪ್ಪಯ್ಯ ಇಹಲೋಕ ತ್ಯಜಿಸಿದಾಗ ಅಮ್ಮ ಮುಂದಿನ ಜೀವನವನ್ನು ಮಗನೊಡನೆ ಕಳೆಯಲು ಬೆಂಗಳೂರಿಗೆ ಬಂದಳು. ಈಗ ತವರೂರು ಕುಂದಾಪುರ ನನ್ನ ಹೆಸರಿನಲ್ಲಿ ಮಾತ್ರ ಉಳಿದಿದೆ.

ನವರಾತ್ರಿ ಬಂದಾಗ ಬಾಲ್ಯದ ನೆನಪು ಕುಂದಾಪುರದತ್ತ ಸೆಳೆಯಿತು, ಸರಿಯೆಂದು ಅತ್ತ ಹೆಜ್ಜೆ ಹಾಕಿದೆ. ಎಲ್ಲಾ ಊರಿನಂತೆ ಇಲ್ಲೂ ಬದಲಾವಣೆಯ ಗಾಳಿ ಬೀಸಿತ್ತು. ಎಲ್ಲೆಲ್ಲೂ ದೊಡ್ಡ ದೊಡ್ಡ ಕಟ್ಟಡಗಳು. ಆದರೆ, ರಸ್ತೆ ಬದಿಯ ಹಲವಾರು ಮರಗಳು ಕಾಣೆಯಾಗಿದ್ದವು. ಡಬಲ್ ರೋಡು ಮಾಡುವ ಗೌಜಿನಲ್ಲಿ ಎಲ್ಲೆಲ್ಲೂ ಅಗೆತ. ನನ್ನ ಮನಸ್ಸು, ಕಣ್ಣುಗಳು ಕುಣಿಯುವ ವೇಷಗಳನ್ನು ಅರೆಸುತ್ತಿತ್ತು. ಅಲ್ಲೊಂದು, ಇಲ್ಲೊಂದು ಜೋಲು ಮುಖ ಹಾಕಿದ ವೇಷಗಳು ಕಾಣಿಸಿದವು. ಬಾಲ್ಯದಲ್ಲಿ ವೇಷಗಳಲ್ಲೂ ನಿಜ ಕಂಡು ಬರುತ್ತಿತ್ತೋ ಏನೋ, ಈಗ ಎಲ್ಲವೂ ಕೃತಕವಾಗಿ ತೋರಿತು. ಹೆಚ್ಚಿನ ವಿಷಯಗಳು ಕಾಣುವ ಕಣ್ಣಲ್ಲೇ ಇರುವುದು, ಎಲ್ಲವೂ ನಾವು ಕಂಡಂತೆ, ನಾವು ಆಲೋಚಿಸಿದಂತೆ ಎಂದು ಸಮಾಧಾನ ಪಟ್ಟುಕೊಂಡೆ. ದೂರದಲ್ಲೆಲ್ಲೋ ಹುಲಿ ವೇಷದ ಬ್ಯಾಂಡಿನ ಶಬ್ದ ಕೇಳಿಸಿತು. ‘ನವರಾತ್ರಿ ಬಂದ್ರೆ ಭಾರಿ ಪೆಟ್ಟ, ಅಂಗಡಿಯವರ ಹತ್ತರ ಹುಲಿ ವೇಷದವ್ರ ಕಡ್ಮೆ ಅಂದ್ರೂ 5, 10 ಸಾವಿರ ವಸೂಲ ಮಾಡ್ತೊ, ಮನೆಗೆ ಬಂದ್ರೂ ಅಷ್ಟೇ ಸಾವಿರ ರೂಪಾಯಿ ಕೊಟ್ರೂ ಕಡ್ಮೆ ಅಂತೋ, ಕೆಲವ ಅಂಗಡಿಯವ್ರ ಆಪುದಲ್ಲ ಅನ್ನಕಂಡ ನವರಾತ್ರಿಲಿ ಅಂಗಡಿ ಬಾಗಿಲೇ ತೆಗಿತಿಲ್ಲ’ ಎಂದರು ಅಂಗಡಿ ಪ್ರಭುಗಳು. ಬದಲಾವಣೆ ಇಲ್ಲೂ ಬಂತು ಎಂದುಕೊಳ್ಳುತ್ತ ವೇಷಗಳನ್ನು ಇನ್ನು ಹುಡುಕುತ್ತಾ ಹೋಗುವುದು ಬೇಡವೆಂದು ವಾಪಸ್ಸು ಬೆಂಗಳೂರಿಗೆ ಬಂದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !