ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದಲ್ಲಿ ಬೇಕು ಬಲಿಷ್ಠ ಸರ್ಕಾರ

Last Updated 3 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಮೊನ್ನೆ ಕಾರ್ಯಕ್ರಮವೊಂದರಲ್ಲಿ ಸಚಿವ ಜೆ.ಮಾಧುಸ್ವಾಮಿ ಅವರು, ‘ಕೇಂದ್ರದ ಹಸ್ತಕ್ಷೇಪ ರಾಜ್ಯಗಳ ಮೇಲೆ ಹೆಚ್ಚುತ್ತಿದೆ. ಹಾಗಾಗಿ ರಾಜ್ಯಗಳ ಅಧಿಕಾರ ವ್ಯಾಪ್ತಿ ಕುಬ್ಜವಾಗುತ್ತಿದೆ’ ಎಂಬ ಹೇಳಿಕೆ ನೀಡಿದ್ದಾರೆ. ಆಡಳಿತ ಪಕ್ಷದ ಸಚಿವರೊಬ್ಬರು ನೀಡಿದ ಈ ರೀತಿಯ ಹೇಳಿಕೆ ಚರ್ಚೆಗೆ ಕಾರಣವಾಗಿದೆ.

ಭಾರತದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಣ ತಿಕ್ಕಾಟ ಗಂಭೀರ ಸ್ವರೂಪವನ್ನು ಪಡೆದುಕೊಂಡದ್ದು 1970ರ ಕಾಲಘಟ್ಟದಲ್ಲಿ. ಆಗ 356ನೇ ವಿಧಿಯ ಅಧಿಕಾರವನ್ನು ಅಂದಿನ ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಂಡು, ಹಲವು ರಾಜ್ಯಗಳನ್ನು ರಾಷ್ಟ್ರಪತಿ ಆಡಳಿತಕ್ಕೆ ಒಳಪಡಿಸಿತ್ತು.

ನಾವೆಲ್ಲರೂ 1949 ನವೆಂಬರ್ 26ರ ನಂತರ ಸಂವಿಧಾನದ ಚೌಕಟ್ಟಿಗೆ ಒಳಪಟ್ಟಿದ್ದೇವೆ. ಭಾರತಕ್ಕೊಂದು ಸಂವಿಧಾನ ರಚನೆ ಮಾಡುವ ಜವಾಬ್ದಾರಿ ಹೊತ್ತ ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದ ಸಮಿತಿಯು ಭಾರತಕ್ಕೆ ಯಾವ ಮಾದರಿಯ ನಿಯಮಗಳನ್ನು ಒಳಗೊಂಡ ಸಂವಿಧಾನ ರಚನೆಯಾಗಬೇಕು? ಯಾವ ಪದ್ಧತಿಗಳನ್ನು ಅಥವಾ ಮಾದರಿಗಳನ್ನು ಎಲ್ಲಿಂದ ಎರವಲು ಪಡೆಯಬೇಕು ಎಂಬ ಸಂಗತಿಗಳನ್ನು ಅತ್ಯಂತ ಸೂಕ್ಷ್ಮವಾಗಿ ಚರ್ಚಿಸಿ, ಸಂವಿಧಾನದಲ್ಲಿ ಅಳವಡಿಸಿಕೊಂಡಿದೆ .

1946ರ ಡಿ. 17ರಂದು ತಮ್ಮ ಮೊದಲ ಭಾಷಣದಲ್ಲಿ ಅಂಬೇಡ್ಕರ್ ಅವರು, ಬಲಿಷ್ಠ ಕೇಂದ್ರ ಸರ್ಕಾರದ ಕುರಿತು ಮಾತನಾಡಿದ್ದರು. ಬಹುಮತ ಹೊಂದಿದ ಪಕ್ಷ ನಿಯಮಗಳನ್ನು ಸಡಿಲಗೊಳಿಸುತ್ತಿದೆ, ಇದು ಭವಿಷ್ಯ ಭಾರತಕ್ಕೆ ಅಪಾಯ ತರಲಿದೆ ಎಂದಿದ್ದರು. ಜೊತೆಗೆ ಸಂಯುಕ್ತ ಮಾದರಿಯ ಸರ್ಕಾರದ ಅಳವಡಿಕೆ ಚರ್ಚೆಯ ಅವಧಿಯಲ್ಲಿ ಅಮೆರಿಕದ ರಾಜ್ಯಗಳ ವಿಪರೀತ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ತಿರಸ್ಕರಿಸುತ್ತಾ ಅದರ ದೋಷಗಳನ್ನು ಸದನದ ಮುಂದೆ ಬಿಚ್ಚಿಟ್ಟಿದ್ದರು.

ಅದರ ಬದಲಾಗಿ ಕೆನಡಾ ಮಾದರಿಯ ಅರೆ ಸಂಯುಕ್ತ ವ್ಯವಸ್ಥೆಯನ್ನು ಅನುಮೋದಿಸಿದ್ದರು. ಹತ್ತು ಹಲವು ಪ್ರಾಂತಗಳಾಗಿ ವಿಭಜನೆಗೊಂಡಿದ್ದ ದೇಶವು ಸುಸ್ಥಿರತೆಯನ್ನು ಕಾಪಾಡಿಕೊಳ್ಳಲು ಅದಕ್ಕೊಂದು ಪ್ರಬಲ ಕೇಂದ್ರ ಸರ್ಕಾರದ ಅಗತ್ಯ ಇದೆ ಎಂದು ಪ್ರತಿಪಾದಿಸಿದ್ದರು. ಈ ಕಾರಣಕ್ಕಾಗಿಯೇ ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ, ಸಮವರ್ತಿ ಪಟ್ಟಿ ನಂತರ ಉಳಿಕೆ ವಿಷಯಗಳ ಮೇಲೆ ಕೇಂದ್ರದ ಅಧಿಕಾರವನ್ನು ಮಾನ್ಯ ಮಾಡಿದ್ದರು. ಇದರೊಟ್ಟಿಗೆ ಯಾವುದೇ ಒಂದು ವಿಷಯದ ಕುರಿತು, ಕೇಂದ್ರ ಮತ್ತು ರಾಜ್ಯಗಳೆರಡೂ ಕಾನೂನು ಮಾಡಿದರೆ, ಕೇಂದ್ರದ ಕಾನೂನು ಅಂತಿಮ ಎಂಬ ವಿಧಿಯನ್ನು ಸೇರ್ಪಡೆ ಮಾಡಿದ್ದರು.

ಸಂವಿಧಾನ ರಚನಾ ಸಭೆಯಲ್ಲಿ ಮೂರನೇ ವಿಧಿಯ ಅನುಮೋದನೆ ಸಂದರ್ಭ ವಿವಿಧ ದಿನಗಳಂದು ಕೇಂದ್ರ ಸರ್ಕಾರಕ್ಕೆ ರಾಜ್ಯಗಳ ಗಡಿ ಮರುಸೃಷ್ಟಿ, ರಾಜ್ಯಗಳ ವಿಭಜನೆ, ಕೇಂದ್ರಾಡಳಿತ ಪ್ರದೇಶಗಳ ಸ್ಥಾಪನೆ ಅಧಿಕಾರವನ್ನು ಮಾನ್ಯ ಮಾಡಿ, ಸಾಂವಿಧಾನಿಕ ನಿಯಮ ಮಾಡಿದರು. ಸುಪ್ರೀಂ ಕೋರ್ಟ್‌ ಕೂಡ, ಅದಾನಿ ಪವರ್ ಲಿಮಿಟೆಡ್ ವರ್ಸಸ್ ಗುಜರಾತ್ ಎಲೆಕ್ಟ್ರಿಸಿಟಿ ಪ್ರಕರಣ, ಬೇರುಬಾರಿ ಪ್ರಕರಣ, ಬೋರ್ಡ್ ಆಫ್ ಟ್ರೇಡರ್ಸ್ ವರ್ಸಸ್ ಚೆನ್ನೈ ಕಂಟೇನರ್ಸ್ ಪ್ರಕರಣದಲ್ಲಿ ಕೇಂದ್ರದ ಅಧಿಕಾರ ವ್ಯಾಪ್ತಿಯನ್ನು ಮಾನ್ಯ ಮಾಡಿದೆ. 370(C)ನೇ ಉಪ ವಿಧಿಯಲ್ಲಿ ಸಂವಿಧಾನದಲ್ಲಿ ಏನೇ ನಿಯಮಗಳಿದ್ದರೂ ರಾಷ್ಟ್ರಪತಿ ಅನುಮೋದನೆಯೊಂದಿಗೆ ಕಾಶ್ಮೀರಕ್ಕಿರುವ ವಿಶೇಷ ಸವಲತ್ತನ್ನು ರಾಷ್ಟ್ರಪತಿ ಆದೇಶದ ಮೂಲಕ ಹಿಂಪಡೆಯಬೇಕೆಂಬ ನಿಯಮಕ್ಕೆ ಅಂಬೇಡ್ಕರ್ ಅವರ ಸಮಿತಿಯೇ ಅನುಮೋದನೆ ನೀಡಿತ್ತು.

ಭಾರತದಲ್ಲಿ ಕೇಂದ್ರ ಸರ್ಕಾರಕ್ಕೆ ಮಾತ್ರ ಪರಮಾಧಿಕಾರವಿದ್ದು ವಿದೇಶಾಂಗ ನೀತಿ, ರಕ್ಷಣೆ, ಸೈನ್ಯ, ವಾಯು ಸಂಬಂಧಿತ ನಿರ್ಧಾರಗಳ ಕುರಿತು ಕಾನೂನು ಮಾಡಲು ಕೇಂದ್ರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಸಂವಿಧಾನದ 18ನೇ ಭಾಗದಲ್ಲಿ ತುರ್ತು ಪರಿಸ್ಥಿತಿ ಅಧಿಕಾರ ಹೇರಿಕೆಗೂ ಕೇಂದ್ರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ತುರ್ತು ಪರಿಸ್ಥಿತಿಯ ಸಂದರ್ಭ ಮತ್ತು ವಿಶೇಷ ಸಂದರ್ಭಗಳಲ್ಲಿ ರಾಜ್ಯಪಟ್ಟಿಯ ಯಾವುದೇ ವಿಷಯಗಳ ಮೇಲೆ ಸಾರ್ವಜನಿಕ ಹಿತದೃಷ್ಟಿಯಿಂದ ಕಾನೂನು ಮಾಡಲು ಶಿಫಾರಸು ಮಾಡುವ ಅಧಿಕಾರ ಕೂಡ ಕೇಂದ್ರಕ್ಕೆ ಇದೆ.

ಬಲಿಷ್ಠ ಕೇಂದ್ರ ಪದ್ಧತಿಯನ್ನು ಸಾಂವಿಧಾನಿಕವಾಗಿ ಒಪ್ಪಿಕೊಂಡಿರುವ ನಾವು, ರಾಜಕೀಯ ಕಾರಣಗಳಿಗಾಗಿ ವಿರೋಧಿಸಲು ಅಥವಾ ತಿರಸ್ಕರಿಸಲು ಅವಕಾಶವಿಲ್ಲ. ಇತ್ತೀಚೆಗೆ ಪಶ್ಚಿಮ ಬಂಗಾಳ, ಕೇರಳ, ತೆಲಂಗಾಣಗಳಂತಹ ರಾಜ್ಯಗಳು ಕೇಂದ್ರದ ವಿರುದ್ಧ ಸಂಘರ್ಷಕ್ಕಿಳಿದು ರಾಷ್ಟ್ರದ ಸ್ಥಿರತೆಯ ಮೇಲೆ ದುಷ್ಪರಿಣಾಮ ಬೀರಿವೆ. ದೆಹಲಿ ಮತ್ತು ಕೇಂದ್ರ ಸರ್ಕಾರಗಳ ನಡುವಿನ ತಿಕ್ಕಾಟ, ಪುದುಚೇರಿ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷದಂತಹ ಪ್ರಕರಣಗಳು ಪ್ರಗತಿಯತ್ತ ಸಾಗಿರುವ ಭಾರತದ ಆಲೋಚನೆಗೆ ಮಾರಕ. ಕೇಂದ್ರ ತನ್ನ ಸಾಂವಿಧಾನಿಕ ಅಧಿಕಾರಗಳನ್ನು ಚಲಾಯಿಸಲು ವಿಶೇಷ ಅವಕಾಶವನ್ನು ಹೊಂದಿದ್ದರೂ ತನಗಿಷ್ಟ ಬಂದಂತೆ ಅಧಿಕಾರ ದುರುಪಯೋಗ ಮಾಡಿಕೊಳ್ಳಲು ಸಂವಿಧಾನ ಅವಕಾಶ ನೀಡಿಲ್ಲ. 124ನೇ ವಿಧಿಯ ಐದನೆಯ ಉಪ ವಿಧಿಯನ್ವಯ ನ್ಯಾಯಿಕ ಸ್ವಾತಂತ್ರ್ಯ ಹಾಗೂ ಸಂವಿಧಾನದ ನಾಲ್ಕನೇ ಭಾಗದ ಐದನೇ ಅಧ್ಯಾಯದಲ್ಲಿ ಸಂವಿಧಾನದ ಮರುವ್ಯಾಖ್ಯಾನ ಮತ್ತು ರಕ್ಷಣೆ ಹೊಣೆಯನ್ನು ನ್ಯಾಯಾಂಗಕ್ಕೆ ನೀಡಿದೆ. 973ರ ಕೇಶವಾನಂದ ಭಾರತಿ ವರ್ಸಸ್ ಕೇರಳ ಪ್ರಕರಣದಲ್ಲಿ ಸಂವಿಧಾನದ ಮೂಲ ರಚನೆಗೆ ಧಕ್ಕೆ ತರುವ ಎಲ್ಲ ಕಾಯ್ದೆಗಳನ್ನು ಅಸಿಂಧುಗೊಳಿಸುವ ತನ್ನ ಅಧಿಕಾರದ ಕುರಿತು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ತಿಳಿಸಿದೆ. ಸಾಂವಿಧಾನಿಕವಾಗಿ ಕೇಂದ್ರಕ್ಕಿರುವ ಅಧಿಕಾರ ಚಲಾವಣೆಗೆ ರಾಜ್ಯಗಳು ಅಡ್ಡಿ ಮಾಡುವುದು ಅಥವಾ ರಾಜ್ಯಗಳ ಮೇಲೆ ಅನಗತ್ಯ ಆಕ್ರಮಣ ಮಾಡುವುದು ಎರಡೂ ಸ್ವೀಕೃತ ನಡಾವಳಿಯಲ್ಲ. ರಾಜಕೀಯ ನಾಯಕರು ಸಂವಿಧಾನವನ್ನು, ಅಂಬೇಡ್ಕರರನ್ನು ಪೂರ್ಣ ಓದದೆ ಸ್ವಸ್ಥ ಸಮಾಜವನ್ನು ಹಾಳುಗೆಡಹುವ ಹೇಳಿಕೆ ನೀಡುವುದು ಅಪಾಯಕಾರಿ ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT