ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲೆ ನಿಂತ ನೆಲವ ನೀ ಬೆಳಗು

Last Updated 14 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

‘ನೆಲೆ ನಿಂತ ನೆಲವ ನೀ ಬೆಳಗು’ (‘Brighten the corner wherever you are’) ಎಂಬುದು ಆಂಗ್ಲ ಭಾಷೆಯ ಪ್ರಸಿದ್ಧ ಪದ್ಯವೊಂದರ ಮೊದಲ ಸಾಲು. ಕೆಲವು ದಶಕಗಳ ಹಿಂದೆ ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿದ್ದ ಸಾಲಿದು. ನಾವು ಮಾಡುವ ಕೆಲಸ, ಕಾರ್ಯಗಳು ಎಷ್ಟೇ ಚಿಕ್ಕದಿದ್ದರೂ ಅಥವಾ ನಾವು ಕೆಲಸ ನಿರ್ವಹಿಸುವ ಸ್ಥಳ ಜಗದ ಯಾವುದೇ ಮೂಲೆಯಲ್ಲಿದ್ದರೂ ಶ್ರದ್ಧೆ, ಉತ್ಸಾಹ, ಪ್ರೇರಣೆಗಳಿಂದ ಮಾಡುವ ಮೂಲಕ ಆ ಕೆಲಸಕ್ಕೊಂದು ಘನತೆಯನ್ನು ತಂದು ಕೊಡಬಹುದು. ಆ ಮೂಲಕ ನಾವೂ ತೃಪ್ತಿ, ಸಾರ್ಥಕ್ಯ ಕಂಡುಕೊಳ್ಳಲು ಸಾಧ್ಯ. ಮಿಂಚುಹುಳು ತಾನು ನಿಂತ ನೆಲವನ್ನೇ ಬೆಳಗುವಂತೆ ನಾವೆಲ್ಲರೂ ನಮ್ಮದೇ ಪರಿಧಿಯಲ್ಲಿ ನಮ್ಮ ಕೆಲಸದ ಮೂಲಕ ಬೆಳಕು ಮೂಡಿಸಲು ಸಾಧ್ಯವಿದೆ. ಈ ವಾಕ್ಯವು ಡಿವಿಜಿರವರ ‘ವನಸುಮ’ ಪದ್ಯ ಮತ್ತು ಬಸವಣ್ಣನವರ ‘ಕಾಯಕವೇ ಕೈಲಾಸ’ದ ತಿರುಳನ್ನು ನೆನಪಿಸುತ್ತದೆ.

1913ನೇ ಇಸವಿಯಲ್ಲಿ ಈ ಸಾಲುಗಳನ್ನೊಳಗೊಂಡ ಒಂದು ಪದ್ಯವನ್ನು ಅಮೆರಿಕ ದೇಶದಲ್ಲಿ ಶಿಕ್ಷಕಿಯಾಗಿದ್ದ ಒಗ್ಡಾನ್ ಬರೆದರು. ಈ ಪ್ರಸಿದ್ದ ಪದ್ಯದರಚನೆಯ ಹಿನ್ನೆಲೆ ಕೂಡ ಸ್ವಾರಸ್ಯಕರವಾಗಿದೆ. ಈ ಪದ್ಯ ರಚನೆಗೂ ಒಂದು ವರ್ಷದ ಹಿಂದೆ ಉತ್ತಮ ವಾಗ್ಮಿಯೂ ಆಗಿದ್ದ ಶಿಕ್ಷಕಿ ಒಗ್ಡಾನ್‍ ತನ್ನ ತಂದೆಗೆ ಉಂಟಾದ ಅಪಘಾತದ ಕಾರಣದಿಂದ ಬೇರೆಡೆಗೆ ಸಿಕ್ಕ ಉತ್ತಮ ವೃತ್ತಿ ಅವಕಾಶದಿಂದ ವಂಚಿತಳಾಗುತ್ತಾಳೆ. ಹಲವು ದಿನಗಳ ಸಿಟ್ಟು, ದುಃಖ, ಬೇಸರಗಳಿಂದ ನಿಧಾನವಾಗಿ ಸಾವರಿಸಿಕೊಂಡು ಈ ಪ್ರೇರಣಾದಾಯಕ ಪದ್ಯವನ್ನು ಬರೆಯುತ್ತಾಳೆ.

ನಿವೃತ್ತ ಮುಖ್ಯಶಿಕ್ಷಕರಾದ ನನ್ನ ಮಿತ್ರರೊಬ್ಬರೊಂದಿಗೆ ಇತ್ತೀಚೆಗೆ ಮಾತನಾಡುತ್ತಿರುವಾಗ ಈ ವಾಕ್ಯದ ಕುರಿತು ಅವರು ಪ್ರಾಸಂಗಿಕವಾಗಿ ತಿಳಿಸಿದರು. ದೇಶದ ಮೂಲೆ ಮೂಲೆಗಳ ಕುಗ್ರಾಮಗಳಲ್ಲಿ ಕೆಲಸ ನಿರ್ವಹಿಸುವ ನಮ್ಮ ಶಿಕ್ಷಕರು ಎಂತೆಂತಹ ಪ್ರತಿಭೆಗಳನ್ನು ನಮ್ಮ ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆಂಬ ಬಗ್ಗೆ ನಮ್ಮ ಮಾತು ಮುಂದುವರೆದಿತ್ತು. ತಾವಿರುವ ನೆಲವನ್ನೇ ಕರ್ಮ ಭೂಮಿಯಾಗಿ ಮಾಡಿಕೊಂಡು ನಿಷ್ಠೆಯಿಂದ ಕಾರ್ಯನಿರ್ವಹಿಸುವ ಲಕ್ಷಾಂತರ ಶಿಕ್ಷಕರು ನಿಜಕ್ಕೂ ಪ್ರಾತಃಸ್ಮರಣೀಯರಾಗಿದ್ದಾರೆ. ಈ ಸಂದರ್ಭದಲ್ಲಿ ‘ನೆಲೆ ನಿಂತ ನೆಲವ ನೀ ಬೆಳಗು’ ಎಂಬ ವಾಕ್ಯವನ್ನು ಎಚ್.ಎಸ್.ಆರ್. ಎಂದೇ ಖ್ಯಾತರಾಗಿದ್ದ ಪ್ರಸಿದ್ಧ ಶಿಕ್ಷಕರಾಗಿದ್ದ ಎಚ್.ಎಸ್. ಸೂರ್ಯನಾರಾಯಣರಾವ್‍ ಅವರು ತಮ್ಮ ಮಾತಿನ ಮಧ್ಯೆ ಆಗಾಗ್ಗೆ ಹೇಳುತ್ತಿದ್ದರು ಎಂದು ತಿಳಿಸಿದರು. ಅವರ ನೆನಪಿಗಾಗಿ ಅನೇಕ ವರ್ಷಗಳ ಹಿಂದೆ ಹೊರತಂದ ‘ಸೂರ್ಯ ಸ್ಮರಣೆ’ ಎಂಬ ಪುಸ್ತಕದಲ್ಲಿ ಪ್ರಕಟಗೊಂಡ ಒಂದು ಲೇಖನವನ್ನು ನನಗೆ ಕಳುಹಿಸಿಕೊಟ್ಟರು. ಸ್ವಾತಂತ್ರ್ಯ ಪೂರ್ವದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಪಾಂಡಿತ್ಯ ಸಂಪಾದಿಸಿ ಸ್ವತಃ ಬ್ರಿಟಿಷರಿಂದಲೇ ಸೈ ಎನಿಸಿಕೊಂಡ ವಿ.ಎಸ್.ಶ್ರೀನಿವಾಸ ಶಾಸ್ತ್ರಿ ಅವರ ಕುರಿತಾದ ಲೇಖನವದು.

ಬೆಳ್ಳಿ ಚಮಚದೊಂದಿಗೆ ಹುಟ್ಟದಿದ್ದರೂ ಅಪಾರ ಪರಿಶ್ರಮ, ಶ್ರದ್ಧೆಯ ಮೂಲಕ ‘ಬೆಳ್ಳಿ ನಾಲಗೆಯ ವಾಗ್ಮಿ’ (Silver tongued orator) ಎಂದು ಹೆಸರು ಗಳಿಸಿಕೊಳ್ಳುವ ಮೂಲಕ ವಿಶ್ವಖ್ಯಾತಿ ಗಳಿಸಿದವರು ವಿ.ಎಸ್.ಶ್ರೀನಿವಾಸಶಾಸ್ತ್ರಿ. ತಮಿಳುನಾಡಿನ ಕುಂಭಕೋಣಂ ಹತ್ತಿರದ ಒಂದು ಹಳ್ಳಿಯಲ್ಲಿ ದೇವಸ್ಥಾನದ ಬಡ ಅರ್ಚಕರೊಬ್ಬರ ಪುತ್ರನಾಗಿ 1869ರ ಸೆಪ್ಟೆಂಬರ್ 22ರಂದು ಜನಿಸಿದ ಶಾಸ್ತ್ರಿಗಳು ತಮ್ಮ ವೃತ್ತಿಯನ್ನು ಇಂಗ್ಲಿಷ್ ಭಾಷಾ ಶಿಕ್ಷಕರಾಗಿ ಪ್ರಾರಂಭಿಸಿದರು ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅಪಾರ ಪರಿಣತಿ ಸಾಧಿಸಿದರು. ನಂತರ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಗೋಪಾಲ ಕೃಷ್ಣ ಗೋಖಲೆ ಅವರ ಅನುಯಾಯಿಯಾಗಿ ಅವರ ಸಂಘಟನೆಗೆ ಸೇರಿದರು. ಮಹಾತ್ಮ ಗಾಂಧೀಜಿಯವರ ಒಡನಾಡಿಯಾದರು. ಅನೇಕ ವಿದೇಶಿ ನಿಯೋಗಗಳಲ್ಲಿ ಕೆಲಸ ಮಾಡಿದ ಇವರ ಆಂಗ್ಲ ಭಾಷಣ ಕೇಳಿದ ಬ್ರಿಟಿಷರು (ಚರ್ಚಿಲ್, ರಾಜ ಜಾರ್ಜ್ 5 ಹಾಗೂ ಇತರರು) 20ನೇ ಶತಮಾನದ ಅಪ್ರತಿಮ 5 ವಾಗ್ಮಿಗಳಲ್ಲಿ ಇವರೊಬ್ಬರು ಎಂದೇ ಗುರುತಿಸಿದ್ದರು.

ಗಾಂಧೀಜಿಯವರು ಇವರನ್ನು ಅಣ್ಣನೆಂದೇ ಭಾವಿಸುತ್ತಿದ್ದರು. ಗಾಂಧೀಜಿಯವರ ಪತ್ರಿಕೆ ಹರಿಜನ ಹಾಗೂ ಅವರ ಆತ್ಮಕತೆಯ ಕರಡನ್ನು ತಿದ್ದಿದ ಖ್ಯಾತಿ ಶಾಸ್ತ್ರಿಗಳದು. ಶಾಸ್ತ್ರಿಗಳಿಗೆ ಗಾಂಧೀಜಿಯವರು ಬರೆದ ಒಂದು ಪತ್ರದಲ್ಲಿ ‘ನಿಮ್ಮ ಟೀಕೆಯು ನನ್ನನ್ನು ಸಂತೈಸುತ್ತದೆ. ನಿಮ್ಮ ಮೌನವು ನನ್ನನ್ನು ಅಧೀರನನ್ನಾಗಿಸುತ್ತದೆ’ (Your criticism soothes me. Your silence makes me feel nervous) ಎಂದು ದಾಖಲಿಸಿರುವುದು ಶಾಸ್ತ್ರಿಯವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯೆನ್ನಬಹುದು. 1930 ಹಾಗೂ 1931ರಲ್ಲಿ ನಡೆದ ದುಂಡು ಮೇಜಿನ ಪರಿಷತ್ತಿನ ನಿಯೋಗದಲ್ಲಿ ಗಾಂಧೀಜಿಯವರ ಜೊತೆ ಶಾಸ್ತ್ರಿಗಳು ಇದ್ದರು.

ಶಾಸ್ತ್ರಿಗಳು ತಮ್ಮಲ್ಲಿರುವ ಮಾತಿನ ಚತುರತೆ ಹಾಗೂ ರಾಜತಾಂತ್ರಿಕ ವ್ಯಕ್ತಿತ್ವದ ಜೊತೆ ಶಿಕ್ಷಕರಾಗಿ ಹಾಗೂ ಶೈಕ್ಷಣಿಕ ಆಡಳಿತಗಾರರಾಗಿ ಮುಖ್ಯರಾಗಿದ್ದರು. 1935ರಲ್ಲಿ ಅವರು ಅಣ್ಣಾಮಲೈ ವಿಶ್ವವಿದ್ಯಾಲಯದ ಕುಲಪತಿಯಾಗಿ ನಿಯುಕ್ತಿಗೊಂಡರು. ‘ಬೋಧಿಸಲು ಕಲಿ ಹಾಗೂ ಕಲಿಯಲು ಬೋಧಿಸು’ (Learn in order to teach and teach in order to learn) ಎಂಬ ಮಾತಿಗೆ ಅನ್ವರ್ಥದಂತೆಯೇ ಇದ್ದವರು ಅವರು. ಎಲ್ಲಾ ಕಾಲಕ್ಕೂ ಶಿಕ್ಷಕರಿಗೆ ಮಾದರಿ ಎನ್ನಬಹುದಾದ ವ್ಯಕ್ತಿತ್ವ ಅವರದು. ಕಡುಬಡತನದ ಬೇಗೆಯಲ್ಲಿ ಬೆಂದು ಅಪ್ರತಿಮ ಸಾಧನೆಯ ಶಿಖರಕ್ಕೇರಿದ ಶಾಸ್ತ್ರಿಗಳ ಜೀವನದಲ್ಲಿ ನಡೆದ ಘಟನೆಯೊಂದು ಮನಮಿಡಿಯುವಂತಹುದು.

ಕುಂಭಕೋಣಂನ ಸರ್ಕಾರಿ ಕಲಾ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ ಶಾಸ್ತ್ರಿಗಳು ಧರಿಸಲು ಅಂಗಿಯಿಲ್ಲದೆ ಒಂದು ಪಂಚೆಯನ್ನೇ ಹೊದ್ದುಕೊಂಡು, ಅದರಲ್ಲಿ ಹಿಂದಿನ ದಿನದ ಅಡುಗೆಯನ್ನು ಕಟ್ಟಿಕೊಂಡು ಹೋಗುತ್ತಿದ್ದರು. ಮಾರ್ಗ ಮಧ್ಯೆ ನದಿಯಲ್ಲಿ ಸ್ನಾನ ಮಾಡಿ, ಕಟ್ಟಿಕೊಂಡು ಬಂದ ಆಹಾರವನ್ನು ತಿಂದು, ಪಂಚೆಯನ್ನು ಹೊದ್ದು ಕಾಲೇಜು ತಲುಪುತ್ತಿದ್ದರು. ಕಾಲೇಜಿನ ವಸ್ತ್ರ ಸಂಹಿತೆಯನ್ನು ಮೀರಿ ಅಂಗಿ ಧರಿಸದೇ ಬರುತ್ತಿದ್ದ ಇವರನ್ನು ಹೊಸದಾಗಿ ಪ್ರಾಂಶುಪಾಲರಾಗಿದ್ದ ಬಿಲ್ಡರ್‌ ಬೆಕ್‌ ಅವರು ತರಗತಿಯಲ್ಲಿ ಗಮನಿಸಿ, 8 ಆಣೆ ದಂಡ ವಿಧಿಸಿದ್ದರು. ತರಗತಿಯ ನಂತರ ಶಾಸ್ತ್ರಿಗಳು ಪ್ರಾಂಶುಪಾಲರನ್ನು ಭೇಟಿ ಮಾಡಿತಮ್ಮ ಮನೆಯ ಬಡತನದ ಸ್ಥಿತಿಯನ್ನು ವಿವರಿಸಿ, ಯಾವುದೇಕಾರಣಕ್ಕೂ ಈ ದಂಡದ ವಿಷಯ ತಮ್ಮ ತಂದೆಗೆ ತಿಳಿಯಬಾರದೆಂದು, ತಿಳಿದರೆ ಅವರು ಅವಮಾನದಿಂದ ಆತ್ಮಹತ್ಯೆ ಮಾಡಿಕೊಳ್ಳುವರೆಂದು ನಿವೇದಿಸಿಕೊಂಡಿದ್ದರು. ಕೇವಲ ಆರು ಆಣೆ ಇದ್ದಿದ್ದರೂ ಒಂದು ಅಂಗಿ ಧರಿಸಿಯೇ ಬರುತ್ತಿದ್ದೆ ಎಂದು ಬಡತನವಿದ್ದರೂ ಸ್ವಾಭಿಮಾನದಿಂದ ಬದುಕುತ್ತಿರುವ ಬಗ್ಗೆ ಗುರುಗಳಿಗೆ ವಿವರಿಸಿದ್ದರು.

ಈ ಘಟನೆಯಿಂದ ತೀವ್ರ ನೊಂದುಕೊಂಡ ಬಿಲ್ಡರ್‌ ಬೆಕ್‍ ಅವರು ಬೇಸರದಿಂದ ಮನೆಗೆ ಹಿಂದಿರುಗಿ, ಏಸುಕ್ರಿಸ್ತರ ಪಟದ ಮುಂದೆ ತಲೆ ತಗ್ಗಿಸಿ ಅಶ್ರುಧಾರೆಯಿಂದ ತಮ್ಮನ್ನು ಮನ್ನಿಸುವಂತೆ ಪ್ರಾರ್ಥಿಸುತ್ತಿರುವುದನ್ನು ಅವರ ಪತ್ನಿ ಗಮನಿಸಿದ್ದರು. ತಾವೇ ವಿಧಿಸಿದ ದಂಡವನ್ನು ತಾವೇ ಏಕೆ ಮನ್ನಾ ಮಾಡಬಾರದೆಂದು ಪ್ರಶ್ನಿಸಿದ ತಮ್ಮ ಪತ್ನಿಗೆ ಬಿಲ್ಡರ್‌ ಬೆಕ್‍ ಅವರು ಆ ರೀತಿ ನಿಯಮಗಳನ್ನು ಮುರಿಯಲು ಅವಕಾಶವಿಲ್ಲದ್ದರ ಬಗ್ಗೆ ತಿಳಿಸಿದ್ದರು. ಇದನ್ನು ಅರಿತ ಪತ್ನಿ ತಾವೇ ದಂಡ ಪಾವತಿಸಿದ್ದರು. ಶಾಸ್ತ್ರಿಗಳು ಬಿ.ಎ. ಪದವಿಯನ್ನು ಚಿನ್ನದ ಪದಕದೊಂದಿಗೆ ಮೊದಲ ರ‍್ಯಾಂಕ್ ಪಡೆಯುವ ಮೂಲಕ ಪೂರೈಸಿದ್ದರು.

ಮುಂದಿನ ಕತೆಯೇ ಕುತೂಹಲಕಾರಿಯಾದುದು. ಹಲವು ವರ್ಷಗಳ ತರುವಾಯ ಬ್ರಿಟನ್ ಸರ್ಕಾರದ ಆಹ್ವಾನದ ಮೇರೆಗೆ ಲಂಡನ್ ನಗರದ ಪ್ರಖ್ಯಾತ ಗಿಲ್ಡ್ ಹಾಲ್‍ನಲ್ಲಿ ಮಾಡಿದ ಅದ್ಭುತ ಭಾಷಣದ ಕುರಿತ ವರದಿಯನ್ನು ಲಂಡನ್‌ ಟೈಮ್ಸ್ ಪತ್ರಿಕೆಯಲ್ಲಿ ಓದಿದ ಬಿಲ್ಡರ್‌ ಬೆಕ್‍ ಅವರು ಭಾವಪರವಶರಾಗಿ ಶಾಸ್ತ್ರಿಗಳನ್ನು ನೋಡಲು ಹೋದರು. ಪ್ರಭಾವಿ ಗಣ್ಯ ವ್ಯಕ್ತಿಯಾಗಿದ್ದ ಶಾಸ್ತ್ರಿಗಳನ್ನು ಕಷ್ಟಪಟ್ಟು ಭೇಟಿ ಮಾಡಿದರು. ಗುರು-ಶಿಷ್ಯರಿಬ್ಬರೂ ಕಣ್ಣಂಚಿನಲ್ಲಿ ನೀರಿನ ಸಹಿತ ಪರಸ್ಪರ ಆಲಂಗಿಸಿಕೊಂಡರು.

ಗುರುವನ್ನು ಮೀರಿಸಿದ ಶಿಷ್ಯನ ಸಾಧನೆ ಯಾವಾಗಲೂ ಗುರುಗಳಿಗೆ ಪ್ರಿಯವಾದುದೇ ಆಗಿರುತ್ತದೆ. ಶಾಸ್ತ್ರಿಗಳ ರೀತಿಯ ಬಡತನದ ಬೇಗೆಯಲ್ಲಿರುವ ವಿದ್ಯಾರ್ಥಿಗಳು ಈಗಲೂ ನಮ್ಮ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಾಗಿ ಕಲಿಯುತ್ತಿರುತ್ತಾರೆ. ಶಾಸ್ತ್ರಿಗಳು ಮಾಡಿದಂತಹ ಸಾಧನೆ ಮಾಡುವಂತೆ ಪ್ರೇರೇಪಿಸುವ ಹೊಣೆ ಮಾತ್ರ ಗುರುಗಳದ್ದೇ ಆಗಿದೆಯಲ್ಲವೇ? ವಿದ್ಯಾರ್ಥಿಗಳು ಕಲಿಯದೇ ಇರಲು ನೂರು ನೆಪಗಳನ್ನು ಹೇಳಬಹುದು. ಅದೇ ರೀತಿ ಸಮರ್ಪಕವಾಗಿ ಕಲಿಸಲಾಗದೇ ಇರಲು ಶಿಕ್ಷಕರೂ ನೂರಾರು ಕಾರಣ ಮುಂದೊಡ್ಡಬಹುದು. ಆದರೆ ಅಪ್ರತಿಮ ಸಾಧನೆಗೈದ ವಿದ್ಯಾರ್ಥಿಯೊಬ್ಬ ತನ್ನ ಗುರುವಿನ ಮುಂದೆ ನಿಂತು ‘ನಾನು ನಿಮ್ಮ ವಿದ್ಯಾರ್ಥಿಯಾಗಿದ್ದೆ’ ಎಂದಾಗ ಗುರುವಿಗೆ ಸಿಗುವ ಆನಂದ, ಸಂತೋಷ ಯಾವುದರಲ್ಲೂ ದೊರೆಯಲು ಸಾಧ್ಯವಿಲ್ಲ. ಹೀಗಾಗಿ ‘ನೆಲೆ ನಿಂತ ನೆಲವ ನೀ ಬೆಳಗು’ ಎಂಬ ವಾಕ್ಯಕ್ಕೆ ಅನ್ವರ್ಥದಂತೆ ನಾವೆಲ್ಲಾ ಕಾರ್ಯನಿರ್ವಹಿಸಬೇಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT