ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗ್ಗಲು ಬದಲಿಸುತ್ತಿರುವ ಪುಸ್ತಕ

Last Updated 27 ಜೂನ್ 2020, 19:30 IST
ಅಕ್ಷರ ಗಾತ್ರ

ಕೊರೊನಾ ಕಾಲದಲ್ಲಿ ಕೋಗಿಲೆಗಳು ತುಸು ಹೆಚ್ಚಾಗಿಯೇ ಕೂಗಿದವು, ನವಿಲೂ ನಲಿಯಿತು, ಓದುಗ ಸ್ವಲ್ಪ ಜಾಸ್ತಿಯೇ ಓದಿದ, ಬರೆಯುವವನಿಗೂ ಸ್ಪೂರ್ತಿ ಉಕ್ಕಿತು. ಕೊರೊನಾ ಬದುಕನ್ನು ಹತ್ತಿಕ್ಕಿರಬಹುದು. ಆದರೆ ಮನುಷ್ಯನ ಓದುವ ಅಭ್ಯಾಸವನ್ನು ಹತ್ತಿಕ್ಕಲಾಗಲಿಲ್ಲ. ಪುಸ್ತಕ ಮೂಲೆಗುಂಪಾಗಿಲ್ಲ, ಮಗ್ಗಲು ಬದಲಾಗುತ್ತಿದೆಯಷ್ಟೇ. ‌

ಓದಬೇಕೆಂದಾಗ ಪುಸ್ತಕ ತೆರೆಯುವ ಕಾಲ, ಬರೆಯಬೇಕೆಂದಾಗ ಪೆನ್ನು, ಪೇಪರು ತೆಗೆಯುವ ಕಾಲ ಹಿಂದಕ್ಕೆ ಸರಿಯುತ್ತಿದೆ. ಎಲ್ಲವೂ ಬದಲಾಗುತ್ತಿದೆ. ಕೈಯಲ್ಲಿ ಮೊಬೈಲ್ ಇದ್ದರೆ ಸಾಕು ವಿಶ್ವ ಪರ್ಯಟನೆ ಮಾಡಬಹುದು!

ಕಳೆದ ಎರಡು ಮೂರು ದಶಕಗಳಲ್ಲೇ ಎಷ್ಟೊಂದು ಬದಲಾವಣೆ! ಊರಿನ ಪ್ರತೀ ಬೀದಿಯಲ್ಲೂ ಲೈಬ್ರೆರಿಗಳಿದ್ದವು, ಲೈಬ್ರೆರಿಯ ಶೆಲ್ಫಿನಲ್ಲಿ ಕಾರಂತರು, ಕುವೆಂಪು, ಕೆ.ಟಿ. ಗಟ್ಟಿ, ಎನ್.ಟಿ. ರಾಮರಾವ್, ತ್ರಿವೇಣಿ, ಎಂ.ಕೆ. ಇಂದಿರಾ, ಉಷಾ ನವರತ್ನರಾಮ್, ಸಾಯಿಸುತೆಯರ ಪುಸ್ತಕಗಳು, ಲೈಬ್ರೆರಿಯ ಶೆಲ್ಫಿನಲ್ಲಿಟ್ಟ ಪುಸ್ತಕಗಳನ್ನು ಹುಡುಕುವ ಜನರು. ಊರಿನ ಜಾತ್ರೆಯಲ್ಲಿ, ಬಸ್ಟ್ಯಾಂಡಿನಲ್ಲಿ, ರೈಲು ಬೋಗಿಯಲ್ಲೂ ಪುಸ್ತಕಗಳ ಮಾರಾಟ ಜೋರಾಗಿತ್ತು. ಶ್ರೀಮಂತರ ಮನೆಯಲ್ಲಿ ಪುಸ್ತಕಗಳ ಒಂದೆರಡು ಕಪಾಟಾದರೂ ಇರುತ್ತಿತ್ತು. ಅದು ಅವರ ಶ್ರೀಮಂತಿಕೆಯನ್ನು ತೋರಿಸುತ್ತಿತ್ತು. ನೋಡನೋಡುತ್ತಿದ್ದಂತೆ ಲೈಬ್ರೆರಿಗಳು ಮಾಯವಾಗುತ್ತಿವೆ, ಪುಸ್ತಕವಿರಬೇಕಾದ ಕೈಯಲ್ಲಿ ಮೊಬೈಲ್ ಬಂದಿದೆ. ಮೊಬೈಲಿನಲ್ಲಿ ಪುಸ್ತಕಗಳು ತೆರೆದುಕೊಂಡಿವೆ. ಅಲ್ಲೊಂದು, ಇಲ್ಲೊಂದು ಇರುವ ಸರ್ಕಾರಿ ಲೈಬ್ರೆರಿಗಳು ಮತ್ತು ಅಲ್ಲಿಟ್ಟಿರುವ ಶೆಲ್ಫುಗಳು ಹಳೆಯದಾದರೂ ಲೈಬ್ರೆರಿ ಸಂಸ್ಕೃತಿಯನ್ನು ನೆನಪಿಸುತ್ತಿವೆ.

ಲೈಬ್ರೆರಿಗಳು ಕಾಣೆಯಾಗುತ್ತಾ ಬಂದರೂ ಓದುಗರಿದ್ದಾರೆ, ಪ್ರಕಾಶಕರಿದ್ದಾರೆ. ಅಲ್ಲಿ ಇಲ್ಲಿ ಪುಸ್ತಕದ ಅಂಗಡಿಗಳಿವೆ. ಪುಸ್ತಕಗಳನ್ನು ಅಂಚೆಯ ಮೂಲಕ ತರಿಸುವವರಿದ್ದಾರೆ. ಪುಸ್ತಕಗಳು ಅದ್ದೂರಿಯಿಂದಲೇ ಬಿಡುಗಡೆಯಾಗುತ್ತಿವೆ. ನಿಯತಕಾಲಿಕೆಗಳಲ್ಲಿ ಬರುವ ಪುಸ್ತಕಗಳ ವಿಮರ್ಶೆ ಜನರನ್ನು ಓದಿನತ್ತ ಸೇಳೆಯುವಲ್ಲಿ ಸಫಲವಾಗುತ್ತಿದೆ. ಈಗ ಕೊರೊನಾ ಕಾಲ. ಇದರಿಂದ ಸಾಹಿತ್ಯ ಲೋಕದಲ್ಲೂ ಬದಲಾವಣೆಯಾಯಿತು. ಈ ಎರಡು-ಮೂರು ತಿಂಗಳಲ್ಲಿ ಡಿಜಿಟಲ್ ಜಗುಲಿಯ ಮೂಲಕ ಪುಸ್ತಕಗಳು ಬಿಡುಗಡೆಯಾದವು.

ಪುಸ್ತಕಗಳನ್ನು ಡಿಜಿಟಲ್ ರೂಪದಲ್ಲಿ ಹರಡುವ ಕಂಪ್ಯೂಟರ್, ಸ್ಮಾರ್ಟ್ ಫೋನುಗಳು, ಟ್ಯಾಬುಗಳು ಬಂದು ದಶಕಗಳಾದವು. ಅಮೆಜಾನ್‌ ‘ಕಿಂಡಲ್’ ಬಂದು 10 ವರ್ಷ ಕಳೆದಿದೆ. ಹೊಸ ತಲೆಮಾರಿನವರು ಎಲಕ್ಟ್ರಾನಿಕ್ ಮಾಧ್ಯಮದಲ್ಲಿ ಸಿಗುವ ಪುಸ್ತಕ, ಪತ್ರಿಕೆಗಳತ್ತಲೇ ವಾಲಿಕೊಂಡಿದ್ದರು. ಆದರೆ ಉಳಿದವರು?! ಈಗ ಕೊರೊನಾ ಪುಸ್ತಕದ ಪಾಠ ಕಲಿಸುತ್ತಿದೆ. ಪುಸ್ತಕದ ಅಮಲು ಅಷ್ಟು ಸುಲಭವಾಗಿ ದೂರಾಗದು. ಓದುವುದೆಂದರೆ ಪುಸ್ತಕಗಳು ಕೈ ತುಂಬ ಹರಡಿಕೊಂಡಿರಬೇಕು, ಪುಸ್ತಕದ ಪೇಜುಗಳ ತುದಿಗೆ ನಾಲಿಗೆ ತುದಿಯಲ್ಲಿರುವ ಎಂಜಲನ್ನು ಅಂಟಿಸಿ ಪುಟ ತಿರುಗಿಸಬೇಕು, ಮಧ್ಯದಲ್ಲಿ ಅರ್ಧಕ್ಕೆ ನಿಲ್ಲಿಸಿದರೆ ಟ್ಯಾಗ್ ಇಟ್ಟಿರಬೇಕು, ಆಗಲೇ ಓದಿನ ತೃಪ್ತಿ ಎನ್ನುವವರು ಇನ್ನೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

ಓದುವಾಗ ಇಷ್ಟವಾದ ಪದಗಳಿಗೆ ಅಡಿಗೆರೆ ಎಳೆದು, ಪೆನ್ನಿನಿಂದ ಗುರುತು ಹಾಕುವವರೂ ಇದ್ದಾರೆ. ಕಂಪ್ಯೂಟರಿನಲ್ಲಿ ಅಕ್ಷರಗಳು ಸ್ವಲ್ಪ ದೊಡ್ಡದಾಗಿ ತೋರಿದರೂ ಕಂಪ್ಯೂಟರಿನ ‘ಮೌಸ್’ ಹೇಳಿದ್ದನ್ನು ಕೇಳುವುದಿಲ್ಲ ಎನ್ನುವ ದೂರು. ತಾನು ಬರೆದದ್ದು ಮುದ್ರಣಗೊಂಡು ಪುಸ್ತಕವನ್ನು ಕೈಯಲ್ಲಿ ಹಿಡಿದಾಗಲೇ ಆತ್ಮ ತೃಪ್ತಿ ಎನ್ನುವ ಬರಹಗಾರ ಡಿಜಿಟಲ್ ಪ್ಲಾಟ್ ಫಾರಂ, ಡಿಜಿಟಲ್ ಪ್ರಿಂಟಿಗ್ ಬಗ್ಗೆ ನಿನ್ನೆಯವರೆಗೂ ಮೂಗು ಮುರಿದಿದ್ದ. ಈಗ, ‘ಹೆಚ್ಚು ಹೊತ್ತು ಕೂರಲಾರೆ, ಕಾಯಲಾರೆ. ನಿಜವಾದ ನವಿಲು ಸಿಗದಿದ್ದರೂ ಕಂಪ್ಯೂಟರಿನಲ್ಲಿ ಕುಣಿಯುವ ನವಿಲಾದರೂ ಸರಿ’ ಎಂದಂತೆ ಡಿಜಿಟಲ್ ಪ್ರಿಂಟಿಂಗನ್ನು ಅಪ್ಪಿಕೊಳ್ಳದಿದ್ದರೂ ಒಪ್ಪಿಕೊಳ್ಳಲು ಪ್ರಯತ್ನಿಸಿದ.

ಕೊಟ್ಟ ಪುಸ್ತಕ ವಾಪಾಸು ಬಾರದಿದ್ದಾಗ ‘ನಾರಿ, ಪುಸ್ತಕಂ, ವಿತ್ತಂ ಪರ ಹಸ್ತಂ ಗತಾಂ, ಗತಾ’ ಎನ್ನುವ ಮಾತು ನೆನಪಾಗುತ್ತದೆ. ಕಾಸು ಕೊಡದೆ ಬಿಟ್ಟಿ ಪುಸ್ತಕ ಓದುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹೊಸ ಪುಸ್ತಕದ ಪರಿಮಳವನ್ನು ಇಷ್ಟಪಡುವವರು ಇದ್ದಾರೆ. ತಮ್ಮ ಭಾವನೆಗಳನ್ನು ಪುಸ್ತಕದೊಂದಿಗೆ ಹಂಚಿಕೊಂಡವರಿದ್ದಾರೆ, ಪುಸ್ತಕದ ಹಾಳೆಗಳ ಮಧ್ಯೆ ಬರೆದು ತಮ್ಮ ಭಾವನೆಗಳನ್ನು ಭದ್ರವಾಗಿ ಮುಚ್ಚಿಟ್ಟವರಿದ್ದಾರೆ. ಇ-ಪುಸ್ತಕವನ್ನು ಇನ್ನೊಬ್ಬರಿಗೆ ಕೊಡಲು ಸಾಧ್ಯವಿಲ್ಲ, ಕಾಸು ಕೊಟ್ಟೇ ಓದಬೇಕು. ಆದರೆ ಇ-ಪುಸ್ತಕವು ಮುದ್ರಿತ ಪುಸ್ತಕಕ್ಕೆ ಹೋಲಿಸಿದರೆ ಶೇಕಡ 30ರಿಂದ ಶೇಕಡ 50ರಷ್ಟು ಕಡಿಮೆ ದರದಲ್ಲಿ ಸಿಗುತ್ತದೆ.

ಪುಸ್ತಕ ಇಟ್ಟ ಹೆಜ್ಜೆಯೇ ರೋಚಕವಾದದ್ದು. ಬರೆಯಬೇಕೆಂದು ಅನಿಸಿದಾಗ ಯಾವುದರ ಮೇಲೂ ಬರೆಯಬಹುದು ಎಂದು ತೋರಿಸಿದರು ನಮ್ಮ ಹಿರಿಯರು. ಕ್ರಿಸ್ತ ಪೂರ್ವದಲ್ಲಿ ಚಿಲಿ, ಜರ್ಮನಿ ದೇಶಗಳಲ್ಲಿ ಮಣ್ಣಿನ ಫಲಕಗಳ ಮೇಲೆ ಬರೆದರು. ಈಜಿಪ್ಟಿನ ಜನರು ಪೆಪಿರಸ್ ಮರದ ಹಾಳೆಗಳ ಮೇಲೆ ಬರೆದರು. ಪಶ್ಚಿಮ ಏಷ್ಯಾದ ಜನರು ಮೂಳೆ, ಕಪ್ಪೆ ಚಿಪ್ಪು, ಮರ, ರೇಶ್ಮೆಯ ಮೇಲೆ ಬರೆದರು. ರೋಮನ್ನರು ವ್ಯಾಕ್ಸ್ ಮೆತ್ತಿದ ಮರದ ಫಲಕಗಳ ಮೇಲೆ ಬರೆಯುತ್ತಿದ್ದರು. ಪ್ರಾಣಿಗಳ ಚರ್ಮದ ಮೇಲೆ ಬರೆಯುತ್ತಿದ್ದದ್ದೂ ಸಾಮಾನ್ಯವಾಗಿತ್ತು. ಮೊದಲ ಪುಸ್ತಕಗಳು ಫಲಕಗಳ ರೂಪದಲ್ಲಿದ್ದು ಮತ್ತೆ ಸುರುಳಿಯಾಕಾರವಾಯಿತು.

ಕಾಗದವನ್ನು ಬರೆಯಲು ಉಪಯೋಗಿಸತೊಡಗಿದ ಮೇಲೆ ಜೋಡಿಸಿದ ಹಾಳೆಗಳು ಪುಸ್ತಕದ ರೂಪ ಪಡೆದವು. ಭಾರತೀಯರೂ ಕಲ್ಲು, ತಾಳೆ ಮರದ ಎಲೆ, ಮರದ ಹಲಗೆ, ಇಟ್ಟಿಗೆ, ಶಂಖ, ಪ್ರಾಣಿಗಳ ಚರ್ಮ, ಲೋಹದ ಹಾಳೆಗಳ ಮೇಲೆ ಬರೆದರು.

ಈಗಾಗಲೇ ಇ-ಪುಸ್ತಕದತ್ತ ಹೊರಳಿರುವ ಪ್ರಕಾಶಕರು ಕೊರೊನಾ ಸಂಕಷ್ಟ ಮುಗಿದ ಮೇಲೆ ಪೇಪರ್ ಪುಸ್ತಕಗಳೊಂದಿಗೆ ಇ-ಪುಸ್ತಕಗಳನ್ನೂ ಮಾರುಕಟ್ಟೆಗೆ ತರಬಹುದು. ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ಲೈಬ್ರೆರಿಗೆ ಪ್ರಕಾಶಕರು ಪುಸ್ತಕಗಳೊಡನೆ ಎಲೆಕ್ಟ್ರಾನಿಕ್ ಕಾಪಿಯನ್ನೂ ಕೊಡಬೇಕಾಗಿದೆ. ಇನ್ನೊಂದು 8-10 ವರ್ಷಗಳಲ್ಲಿ ಪುಸ್ತಕಗಳು ಸಂಪೂರ್ಣವಾಗಿ ಎಲಕ್ಟ್ರಾನಿಕ್ ಮಾಧ್ಯಮದಲ್ಲಿ ಸಿಗುವ ಸಾಧ್ಯತೆ ಇದೆ. ಓದುಗರಿಗೂ ಪುಸ್ತಕದ ಭಾರ ಹೊತ್ತು ತಿರುಗಾಡಬೇಕೆಂದಿಲ್ಲ, ಬೆಲೆಯೂ ಕಡಿಮೆ ಇರುತ್ತದೆ. ಪುಸ್ತಕಗಳಿಗೆ ಎಕರೆಗಟ್ಟಲೆ ಮರ ಕಡಿಯಲಾಗುತ್ತದೆ ಎಂದು ಪರಿಸರವಾದಿಗಳು ದೂರುವಂತೆಯೂ ಇಲ್ಲ. ಮುದ್ರಿತ ಪುಸ್ತಕ ಓದಿದಾಗ ಸಿಗುವ ಸಂತಸ, ತೃಪ್ತಿ ಇ-ಪುಸ್ತಕದಲ್ಲಿಲ್ಲ ಎನ್ನುವವರ ದೂರು ಸ್ವಲ್ಪ ದಿನವಿದ್ದು ದೂರಾಗಬಹುದು.

ಈಗಾಗಲೇ ಆನ್ ಲೈನ್ ಕ್ಲಾಸುಗಳು, ಡಿಜಿಟಲ್ ಪುಸ್ತಕಗಳು ಬಂದು ಶಾಲಾ ಕಾಲೇಜಿಗೆ ಹೋಗುವವರೂ ಪುಸ್ತಕದಿಂದ ದೂರ ಸರಿಯುತ್ತಿದ್ದಾರೆ. ಕಳೆದ ಕೆಲವು ವಾರಗಳ ಬೆಳವಣಿಗೆ ಎಂದರೆ ಭಾರತದ ದೊಡ್ಡ ಪಬ್ಲಿಷರುಗಳಾದ ‘ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ’, ‘ಹಾರ್ಪರ್ ಕೊಲಿನ್ಸ್ ಇಂಡಿಯಾ’, ‘ಹ್ಯಾಚೆಟ್ ಇಂಡಿಯಾ’ ಇ–ಪುಸ್ತಕಗಳ ಮಳಿಗೆಯನ್ನು ಅಮೆಜಾನ್‌ನಲ್ಲಿ ತೆರೆದಿದ್ದು ‘ಕಿಂಡಲ್’ ಓದುಗರಿಗೆ ಕಡಿಮೆ ದರದಲ್ಲಿ ಪುಸ್ತಕಗಳು ಸಿಗುತ್ತಿವೆ.

ಕರ್ನಾಟಕ ಸರ್ಕಾರದ ಸಾರ್ವಜನಿಕ ಡಿಜಿಟಲ್ ಲೈಬ್ರೆರಿಯೂ ಸ್ಥಾಪಿತವಾಗಿದ್ದು ಇಲ್ಲಿರುವ ಪತ್ರಿಕೆ, ಪುಸ್ತಕಗಳನ್ನು ಫ್ರೀಯಾಗಿ ಓದಬಹುದು. ಪುಸ್ತಕದ ಜಾಗವನ್ನು ಇ-ಪುಸ್ತಕಗಳು ಕಬಳಿಸುತ್ತಾ ಬಂದರೆ ಶಾರದಾ ಪೂಜೆಗೆ ಪುಸ್ತಕವಿರದೆ ಲ್ಯಾಪ್ ಟಾಪ್, ಮೊಬೈಲ್ ಇಡುವುದೇ?!

ಕೊರೊನಾ ಕಾಲದಲ್ಲಿ ಕೋಗಿಲೆಗಳು ತುಸು ಹೆಚ್ಚಾಗಿಯೇ ಕೂಗಿದವು, ನವಿಲೂ ನಲಿಯಿತು, ಓದುಗ ಸ್ವಲ್ಪ ಜಾಸ್ತಿಯೇ ಓದಿದ, ಬರೆಯುವವನಿಗೂ ಸ್ಪೂರ್ತಿ ಉಕ್ಕಿತು. ಕೊರೊನಾ ಬದುಕನ್ನು ಹತ್ತಿಕ್ಕಿರಬಹುದು. ಆದರೆ ಮನುಷ್ಯನ ಓದುವ ಅಭ್ಯಾಸವನ್ನು ಹತ್ತಿಕ್ಕಲಾಗಲಿಲ್ಲ. ಪುಸ್ತಕ ಮೂಲೆಗುಂಪಾಗಿಲ್ಲ, ಮಗ್ಗಲು ಬದಲಾಗುತ್ತಿದೆಯಷ್ಟೇ. ‌

ಮುದ್ರಣಾಲಯದಲ್ಲಿ ಸಾವಿರಗಟ್ಟಲೆ ಪುಸ್ತಕಗಳನ್ನು ಪ್ರಕಟಿಸುವ ಸಂಸ್ಕೃತಿ ಬಂದು ಸಾವಿರ ವರ್ಷಗಳೂ ಕಳೆದಿಲ್ಲ. ಇಂತಹ ಸಂಸ್ಕೃತಿಗೆ ನಾಂದಿ ಹಾಡಿದ್ದು ಜರ್ಮನಿಯ ಜೋಹಾನ್ಸ್ ಗುಟೆನ್ಬರ್ಗ್. ಹೀಗೆ ಮೊದಲು ಮುದ್ರಣಗೊಂಡ ಪುಸ್ತಕ ಬೈಬಲ್, ‘ಗುಟೆನ್ಬರ್ಗ್ ಬೈಬಲ್’ ಎಂದೇ ವಿಶ್ವ ವಿಖ್ಯಾತಿ ಪಡೆಯಿತು. 1454ರಲ್ಲಿ ಮೊದಲು ಮುದ್ರಣಗೊಂಡ ಪುಸ್ತಕದ ಹಿಂದೆ ಪುಸ್ತಕಕ್ಕಾಗುವಷ್ಟು ದೊಡ್ಡ ಕಥೆಯೇ ಇದೆ. ಮೊದಲಿಗೆ ಪ್ರತೀ ಶಬ್ದಗಳ ಅಚ್ಚನ್ನು ತಯಾರಿಸಿ ಅದಕ್ಕೆ ಶಾಯಿಯನ್ನು ತುಂಬಿ ಕಾಗದದ ಮೇಲೆ ಒತ್ತಿ ಮುದ್ರಿಸಲು ಪ್ರಯತ್ನಿಸಿದ ಗುಟೆನ್ಬರ್ಗ್. ಶಾಯಿಯ ಅಚ್ಚು ಸುಲಭವಾಗಿದ್ದರೂ ಮರದ ಅಚ್ಚನ್ನು ತಯಾರಿಸಲು ಸಮಯ ಹಿಡಿಯುತ್ತಿತ್ತು. ನಂತರ ಅಕ್ಷರಗಳ ಮರದ ಅಚ್ಚನ್ನು ಮಾಡಿ ಅಚ್ಚೊತ್ತಿ ಮುದ್ರಿಸಲು ಪ್ರಯತ್ನಿಸಿದ.

ನಂತರ ಲೋಹದ ಅಚ್ಚುಗಳಿಂದ ಮುದ್ರಿಸಲು ತೊಡಗಿದ. ಅಷ್ಟರಲ್ಲಿ ನಷ್ಟದಲ್ಲಿ ಓಡುತ್ತಿದ್ದ ಮುದ್ರಣಾಲಯವು ಪಾಲುದಾರನಾದ ‘ಫಸ್ಟ್’ನ ವಶವಾಯಿತು. ಫಸ್ಟ್ ಮುದ್ರಣದ ಕೆಲಸವನ್ನು ಮುಂದುವರೆಸಿ ಬೈಬಲನ್ನು ಮಾರುಕಟ್ಟೆಗೆ ತಂದ. ಕೆಲವು ಪುಟಗಳಲ್ಲಿ ಆಕರ್ಷಕ ಚಿತ್ರಗಳು, ಇನ್ನು ಕೆಲವು ಪುಟಗಳಲ್ಲಿ ನೀಲಿ, ಕೆಂಪು ಬಣ್ಣದ ತಲೆಕಟ್ಟುಗಳು ಇದರಿಂದಾಗಿ ಗುಟೆನ್ಬರ್ಗ್ ಬೈಬಲ್ ಇವತ್ತಿಗೂ ಅತ್ಯಂತ ಸುಂದರ ಪುಸ್ತಕವೆಂದು ಗುರುತಿಸಲ್ಪಟ್ಟಿದೆ. ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾದ ಪುಸ್ತಕ ಬೈಬಲ್. ಕಳೆದ 50 ವರ್ಷಗಳಲ್ಲಿ 390 ಕೋಟಿ ಪ್ರತಿಗಳು ಮಾರಾಟವಾಗಿದೆ. ಬರೆಯುವವರು, ಓದವವರು ಆಗಲೂ ಇದ್ದರು, ಈಗಲೂ ಇದ್ದಾರೆ ಆದರೆ ರೀತಿ ಬದಲಾಗುತ್ತಿದೆ, ಜನರು ಇ-ಪುಸ್ತಕದತ್ತ ವಾಲುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT