ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷದ ಆಚರಣೆಗೂ ಹೊಸ ವಿಧಾನ

Last Updated 25 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

2020ನೇ ವರ್ಷವನ್ನು ಬರಮಾಡಿಕೊಂಡು ಸಂಭ್ರಮಿಸಿದ್ದನ್ನು ಬಹುತೇಕ ಮಂದಿ ಮರೆತಿರಲಿಕ್ಕಿಲ್ಲ. ಡಿಸೆಂಬರ್‌ ಬಂತೆಂದರೆ ಬಾಕಿ ಉಳಿದುಕೊಂಡ ರಜೆಗಳನ್ನು ಖರ್ಚು ಮಾಡುವಲ್ಲಿ ಬ್ಯುಸಿಯಾಗುವ ಉದ್ಯೋಗಿಗಳು ಪ್ರವಾಸ, ಪಾರ್ಟಿ ಎಂದೆಲ್ಲ ಯೋಜನೆ ರೂಪಿಸುವುದರಲ್ಲಿ ಒಂದಿಷ್ಟು ಸಡಗರ ಅನುಭವಿಸುವುದು ಸಾಮಾನ್ಯ. ಉಳ್ಳವರು ವಿದೇಶಿ ಪ್ರವಾಸದ ಯೋಜನೆ ಹಾಕಿದರೆ, ಹಲವರು ಗೋವಾ, ಕೇರಳ.. ಕೊನೆಗೆ ಮಡಿಕೇರಿಯಾದರೂ ಸರಿ ಎಂದು ಬುಕಿಂಗ್‌ ಮಾಡಿಕೊಂಡು ನೂತನ ವರ್ಷದ ಆಚರಣೆಗೆ ಸಜ್ಜಾಗುವುದು ಮಾಮೂಲಾಗಿತ್ತು. ಇರುವ ಕಡೆಯೇ ಪಬ್‌, ಬಾರ್‌– ರೆಸ್ಟೋರೆಂಟ್‌ ಎಂದು ದಾಂಗುಡಿಯಿಡುವ ಯುವಕ– ಯುವತಿಯರು.. ಇವೆಲ್ಲ ಯಾಕೆ, ಒಳ್ಳೆಯ ಹೋಟೆಲ್‌ನಲ್ಲಿ ಸ್ನೇಹಿತರು, ಕುಟುಂಬದವರ ಜೊತೆ ಊಟ ಮಾಡಿಕೊಂಡು ಖುಷಿಪಡೋಣ ಎನ್ನುವವರೂ ಸಾಕಷ್ಟು ಮಂದಿ. ಹಾಗೆಯೇ ಮನೆಯಲ್ಲೇ ಹೊಸ ತರಹದ ತಿಂಡಿ–ತಿನಿಸು ಮಾಡಿಕೊಂಡು, ಸ್ನೇಹಿತರನ್ನು ಸೇರಿಸಿಕೊಂಡು ಸರಳವಾಗಿ ಆಚರಣೆಗೆ ತೊಡಗುವವರೂ ಹಲವರು. ಒಟ್ಟಿನಲ್ಲಿ ಸಂಭ್ರಮಿಸಲು ಇದೊಂದು ಅವಕಾಶವಾಗಿತ್ತು.

ಆದರೆ 2021ನೇ ವರ್ಷವನ್ನು ಸ್ವಾಗತಿಸುವಾಗ ಈ ಆಡಂಬರ, ವಿಜೃಂಭಣೆ, ಸಡಗರಕ್ಕೆ ಒಂದಿಷ್ಟು ಅಲ್ಪವಿರಾಮವಂತೂ ಬಿದ್ದಿದೆ. ಈ ವರ್ಷವೇ ವಿಭಿನ್ನ. ವಿದೇಶ, ಗೋವಾ, ಕೇರಳ ಹೋಗಲಿ.. ಪಬ್‌, ಹೋಟೆಲ್‌, ಲೆಕ್ಕವಿಲ್ಲದಷ್ಟು ಡ್ರಿಂಕ್ಸ್‌ ಇರಲಿ, ಬೆಂಗಳೂರಿನ ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆಯಲ್ಲಿ ಕುಣಿದು ಕುಪ್ಪಳಿಸುವ ಆಚರಣೆಯನ್ನೂ ಮರೆತುಬಿಡಬೇಕಾದಂತಹ ಪರಿಸ್ಥಿತಿಯಿದೆ. ಮನೆಯಲ್ಲಿ ಪಾರ್ಟಿ ಏರ್ಪಡಿಸಿ ಸ್ನೇಹಿತರನ್ನು ಕರೆಯಲೂ ಭಯ. ‘ಮನೆಯಲ್ಲೇ ಇರಿ’ ಎಂಬ ಸರಳವಾದ ಸೂಚನೆಯನ್ನು ಪಾಲಿಸಿ, ಕುಟುಂಬದ ಸದಸ್ಯರೊಂದಿಗೆ ನಳಪಾಕ ತಯಾರಿಸಿಕೊಂಡು ಟಿ.ವಿ ಮುಂದೆ ಕೂರಬಹುದು.

ಹೊಸ ವರ್ಷಾಚರಣೆ, ಡಿಸೆಂಬರ್‌ 31ರ ಮಧ್ಯರಾತ್ರಿಯ ಸಂಭ್ರಮ ಜಗತ್ತಿನಾದ್ಯಂತ ನಡೆಯುವ ದೊಡ್ಡ ಆಚರಣೆ. ಹಿಂದಿನ ವರ್ಷದ ಸವಿ ನೆನಪನ್ನೆಲ್ಲ ಹೊಸ ವರ್ಷದ ಆಚರಣೆಯಲ್ಲಿ ಸೇರಿಸಿ ಮುಂದಿನ ವರ್ಷಕ್ಕೆ ಒಂದಿಷ್ಟು ನವಚೈತನ್ಯ ತುಂಬಿಕೊಳ್ಳುವ ಸಂದರ್ಭ. ಆದರೆ 2020ರ ಕೊನೆಯ ದಿನದಲ್ಲಿ ಸಂಭ್ರಮಿಸಲು ಸವಿನೆನಪುಗಳಿವೆಯೇ ಎಂದು ಹಲವರು ಪ್ರಶ್ನಿಸಬಹುದು.

ಬದಲಾದ ಜೀವನ, ಬದಲಾದ ಕನಸು
ಕಳೆದ ಮಾರ್ಚ್‌ನಲ್ಲಿ ಕೋವಿಡ್‌–19 ಪಿಡುಗನ್ನು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದ ನಂತರ ಎಲ್ಲವೂ ಬದಲಾದವು. ಯಾರೂ ಊಹಿಸದಷ್ಟು ಜನಜೀವನ ಬದಲಾಯಿತು. ಜೀವ ಕಳೆದುಕೊಂಡವರೆಷ್ಟೋ, ಪ್ರೀತಿಪಾತ್ರರ ಕಣ್ಮರೆಯಿಂದಾಗಿ ಮನದೊಳಗೆ ದುಃಖ ಅದುಮಿಟ್ಟುಕೊಂಡು ಜೀವನ ಸಾಗಿಸುತ್ತಿರುವವರೆಷ್ಟೋ! ಇವರ ಮಧ್ಯೆ ಉದ್ಯೋಗ ಕಳೆದುಕೊಂಡವರು, ಹಣಕಾಸಿನ ತೊಂದರೆಯಿಂದ ಹೈರಾಣಾದವರು, ಮಾನಸಿಕ ಸಮಸ್ಯೆಯಿಂದ ತೊಳಲಾಡಿದವರು, ಒತ್ತಡದಿಂದ ಬಳಲಿದವರು... ಹೇಗೋ ಈ ‘ನ್ಯೂ ನಾರ್ಮಲ್‌’ಗೆ ಹೊಂದಿಕೊಂಡು ಬದುಕನ್ನು ಹಳಿಯತ್ತ ತರಲು ಹೆಣಗಾಡಿದೆವು.. ಈ ಹೋರಾಟ ಸದ್ಯಕ್ಕಂತೂ ಮುಗಿಯುವ ಲಕ್ಷಣಗಳಿಲ್ಲ.

ಅವರು– ಇವರು ಎಂದಲ್ಲ, ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟ ಅನುಭವಿಸಿದವರೇ. ಹೀಗಾಗಿ 2020ನೇ ವರ್ಷವನ್ನು ನಿಜವಾಗಿಯೂ ಹಿಂದೆ ಬಿಟ್ಟು, ಅದರ ಜೊತೆಗೆ ತಳಕು ಹಾಕಿಕೊಂಡ ಕಹಿ ನೆನಪುಗಳಿಗೆ ಕೂಡ ಬೆನ್ನು ಹಾಕಿ 2021ನೇ ವರ್ಷವನ್ನು ಸರಳವಾಗಿ, ಆದರೆ ಕೊರೊನಾ ಕಡಿಮೆಯಾಗಲಿ, ಸಾಮಾನ್ಯ ಬದುಕು ಹಿಂದಿರುಗಲಿ ಎಂಬ ಆಶಯದೊಂದಿಗೆ ಬರಮಾಡಿಕೊಳ್ಳಬಹುದು.

ಈ ಪರಿಸ್ಥಿತಿಯಲ್ಲೂ ಒಂದು ಸೊಗಸಿದೆ. ಹೊಸ ವರ್ಷಾಚರಣೆಗೆ ವಿದೇಶಕ್ಕೋ, ಮತ್ತೆಲ್ಲಿಗೋ ಸ್ನೇಹಿತರು ಹೋಗಿಬಿಟ್ಟರೆ.. ಅದರ ಬಗ್ಗೆ ಅಸೂಯೆ ಪಡಲು ಅವಕಾಶವೇ ಇಲ್ಲವಲ್ಲ! ಒತ್ತಾಯಪೂರ್ವಕ ಪಾರ್ಟಿಗೆ ಹೋಗಿ ಬರುವ ಒತ್ತಡವೂ ಇಲ್ಲ. ಪಾರ್ಟಿಗೆ ಬೇಕಾದ ದುಬಾರಿ ಉಡುಪು ಖರೀದಿಸಲು ಸಾಧ್ಯವಿಲ್ಲ ಎಂಬ ಹಳಹಳಿಯೂ ಈ ಬಾರಿ ಇಲ್ಲ. ಈ ನಿಟ್ಟಿನಲ್ಲಿ ಯೋಚಿಸುವುದಾದರೆ ಒಂದು ರೀತಿಯ ನಿರಾಳ ಭಾವ ಬಹುತೇಕರಲ್ಲಿ.

ಪ್ರೀತಿಪಾತ್ರರ ಜೊತೆ...
ಈ ಸಲ ಹೊಸ ವರ್ಷವನ್ನು ಹೊಸ ರೀತಿಯಲ್ಲಿ ಆಚರಿಸಬಹುದು. ದೊಡ್ಡ ನಗರಗಳಲ್ಲಿ ಹೆಚ್ಚು ಕಡಿಮೆ ಅಪರಿಚಿತರಾಗಿ ಉಳಿದಿರುವ ನೆರೆಹೊರೆಯವರ ಪರಿಚಯ ಮಾಡಿಕೊಳ್ಳಿ. ದೂರದ ಊರಿನಲ್ಲಿರುವ ಬಂಧುಗಳ, ಸ್ನೇಹಿತರ ಜೊತೆ ಮಾತನಾಡಿ. ಝೂಮ್‌ಗೆ ಒಂದಿಷ್ಟು ಹೊತ್ತು ಮೀಸಲಿಟ್ಟು ಪ್ರೀತಿಪಾತ್ರರ ಜೊತೆ ಕಷ್ಟ– ಸುಖ ಹಂಚಿಕೊಳ್ಳಿ. ಹೆಚ್ಚು ಜನರ ಸಂಪರ್ಕ ಇದ್ದಷ್ಟೂ ಒಂದು ರೀತಿಯ ಸಮಾಧಾನ ಭಾವ ನಮ್ಮೊಳಗೆ.

ನಿಮ್ಮ ನೆಚ್ಚಿನ ಅಡುಗೆ ತಯಾರಿಸಿ. ಬೀದಿಯ ಬದಿಯಲ್ಲಿ ಕುಳಿತ ನಿರಾಶ್ರಿತರಿಗೆ ಒಂದಿಷ್ಟು ಆಹಾರ ಹಂಚಿ. ಅವರ ಕಣ್ಣಲ್ಲಿನ ಕೃತಜ್ಞತಾ ಭಾವ ನೆಮ್ಮದಿ ನೀಡಿದಷ್ಟು ಆಡಂಬರದ ಆಚರಣೆ ನೀಡಲಾರದು.

ಟಿ.ವಿ ವೀಕ್ಷಿಸಿ. ಕಾಮಿಡಿ ಷೋ ವೀಕ್ಷಿಸಿ ಹೊಟ್ಟೆ ತುಂಬ ನಗಬಹುದು. ಇಷ್ಟವಾದ ಹವ್ಯಾಸದಲ್ಲಿ ತೊಡಗಿಸಿಕೊಳ್ಳಿ. ಮನೆ ಸ್ವಚ್ಛ ಮಾಡಿ. ಕಡಿಮೆಯಾಗುತ್ತಿರುವ ಕೊರೊನಾ ಸೋಂಕು, ಲಸಿಕೆಯ ಆಗಮನದ ಖುಷಿಯಲ್ಲಿ ಆಶಾದಾಯಕ ಮುನ್ನೋಟ ಬೀರಬಹುದು 2021.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT