ಭಾನುವಾರ, ಜೂನ್ 13, 2021
24 °C

ಶಾಸ್ತ್ರೀಜಿ... ಈ ಮಕ್ಕಳಿಗೆ ಇನ್ನು ಯಾರು ಗತಿ?

ಜಯಂತ ಕೆ.ಎಸ್. Updated:

ಅಕ್ಷರ ಗಾತ್ರ : | |

ಆಡಿಟ್‌ ಡಿಪಾರ್ಟ್‌ಮೆಂಟ್‌ನಲ್ಲಿ ನೌಕರಿ ಮಾಡಿ ನಿವೃತ್ತಿ ಹೊಂದಿದ ರಾಮಕೃಷ್ಣ ಶಾಸ್ತ್ರಿಗಳು ರಾಜ್ಯದ ವಿವಿಧ ಭಾಗಗಳ ಬಡ ಮಕ್ಕಳಿಗೆ ನೀಡುತ್ತಿದ್ದ ನೆರವಿಗೆ ಲೆಕ್ಕವನ್ನು ಇಟ್ಟವರಾರು? ನೂರಾರು ವಿದ್ಯಾರ್ಥಿಗಳ ಎಂಬಿಬಿಎಸ್‌, ಎಂಜಿನಿಯರಿಂಗ್‌ ಸೇರಿದಂತೆ ಉನ್ನತ ವ್ಯಾಸಂಗದ ಕನಸು ನನಸಾಗಲು ಕಾರಣರಾಗಿದ್ದ ಈ ನಿಸ್ವಾರ್ಥ ಜೀವಿ ಇನ್ನು ನೆನಪು ಮಾತ್ರ...

***

ಕೆಲವು ದಿನಗಳ ಹಿಂದೆ ಧಾರವಾಡ ಜಿಲ್ಲೆಯ ಹಳ್ಳಿಯಿಂದ ನನ್ನ ಮೊಬೈಲಿಗೆ ಒಂದು ಕರೆ ಬಂತು. ‘ಸರ್, ನಾನು ಪವಿತ್ರಾ, ಬೆಂಗಳೂರಿನ (ರಾಮಕೃಷ್ಣ) ಶಾಸ್ತ್ರಿಗಳ ಫೋನ್ ಸ್ವಿಚ್ಡ್‌ ಆಫ್ ಆಗಿದೆ. ಎಂಟು ದಿನದಿಂದ ಕರೆ ಮಾಡುತ್ತಿದ್ದೇನೆ. ವಾರದಲ್ಲಿ ಎರಡು ಬಾರಿಯಾದರೂ ಅವರು ಕಾಲ್ ಮಾಡಿ ನಮ್ಮ ಆರೋಗ್ಯ ಮತ್ತು ಅಭ್ಯಾಸದ ಬಗ್ಗೆ ಕೇಳುತ್ತಿದ್ದರು, ಏನಾಯಿತು ಸರ್ ಅವರಿಗೆ’ ಎಂದು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು.

ಪವಿತ್ರಾಳನ್ನು ಸಮಾಧಾನ ಮಾಡಿ, ನನಗೆ ಗೊತ್ತಿದ್ದವರೊಬ್ಬರನ್ನು ವಿಚಾರಿಸಿದಾಗ ತಿಳಿಯಿತು, ಶಾಸ್ತ್ರಿಗಳು ಅನಾರೋಗ್ಯ
ದಿಂದ ಆಸ್ಪತ್ರೆ ಸೇರಿದ್ದಾರೆಂದು. ಪವಿತ್ರಾಳದು ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಐವರು ಹೆಣ್ಣುಮಕ್ಕಳ ಕಡು ಬಡತನದ ಕುಟುಂಬ. ಈಕೆ ಶಿವಮೊಗ್ಗದಲ್ಲಿ ಸರ್ಕಾರಿ ಕೋಟಾದಲ್ಲಿ ಬಿಎಎಂಎಸ್ ಸೀಟು ಪಡೆದು ಅಂತಿಮ ವರ್ಷದಲ್ಲಿ ಕಲಿಯುತ್ತಿದ್ದಾಳೆ. ಕಳೆದ ಆರು ವರ್ಷಗಳಿಂದ ಅವಳ ಶಿಕ್ಷಣದ ವೆಚ್ಚವನ್ನೆಲ್ಲ ಶಾಸ್ತ್ರಿಗಳೇ ನೋಡಿಕೊಳ್ಳುತ್ತಿದ್ದರು. ಮಾತ್ರವಲ್ಲ, ಅವಳ ಇಬ್ಬರು ತಂಗಿಯರ ವಿದ್ಯಾಭ್ಯಾಸಕ್ಕೂ ಸಹಾಯ ಮಾಡುತ್ತಿದ್ದರು. ಅವರ ಮನೆಯಲ್ಲಿ ಯಾರಿಗೇ ಆರೋಗ್ಯ ಸರಿ ಇಲ್ಲ ಎಂದರೂ ಬೆಂಗಳೂರಿನಲ್ಲಿ ಹೋಮಿಯೋಪಥಿ ವೈದ್ಯರನ್ನು ಸಂಪರ್ಕಿಸಿ ಔಷಧಿಯನ್ನು ಕೊರಿಯರ್‌ ಮೂಲಕ ಕಳಿಸಿ ಕೊಡುತ್ತಿದ್ದರು. ‘ಹಳ್ಳಿಗೆ ಕೊರಿಯರ್ ತಲುಪುವುದು ತಡವಾಗುತ್ತದೆ. ಹಾಗಾಗಿ ನಿಮ್ಮ ವಿಳಾಸಕ್ಕೆ ಕಳಿಸುತ್ತೇನೆ, ದಯವಿಟ್ಟು ಅವರಿಗೆ ತಲುಪಿಸಿ’ ಎಂದು ಫೋನ್ ಮಾಡಿ ನನಗೆ ವಿನಂತಿಸುತ್ತಿದ್ದರು. ಖರ್ಚಿಗಾಗಿ ಅವರ ಅಕೌಂಟ್‍ಗೆ ಹಣವನ್ನೂ ಹಾಕುತ್ತಿದ್ದರು.

‘ಪವಿತ್ರಾ ಬಿಎಎಂಎಸ್ ಮುಗಿಸುತ್ತಿದ್ದಾಳೆ. ಅವಳ ಹೌಸ್‌ಮನ್‍ಶಿಪ್‌ಗೆ ಸ್ವಾಮೀಜಿಯೊಬ್ಬರ ಸಹಾಯದಿಂದ ಮೈಸೂರಿನ ಪ್ರಸಿದ್ಧ ಆಸ್ಪತ್ರೆಯೊಂದರಲ್ಲಿ ವ್ಯವಸ್ಥೆ ಮಾಡಿದ್ದೇನೆ. ಅವಳ ಹೌಸ್‌ಮನ್‍ಶಿಪ್ ಮುಗಿದ ನಂತರ ಅಲ್ಲಿಯೇ ಅವಳನ್ನು ವೈದ್ಯಳನ್ನಾಗಿ ನೇಮಿಸಿಕೊಳ್ಳುವ ಭರವಸೆಯೂ ಸಿಕ್ಕಿದೆ. ಅವಳ ಜೀವನ ಸೆಟಲ್ ಆದ ಹಾಗಾಯಿತು’ ಎಂದು ಫೋನ್‌ನಲ್ಲಿ ಸಂತೋಷ ಹಂಚಿಕೊಂಡಿದ್ದರು. ಕಳೆದ ಆರು ವರ್ಷಗಳಿಂದ ಪವಿತ್ರಾಳ ಕುಟುಂಬಕ್ಕೆ ಸಹಾಯ ಮಾಡುತ್ತಿದ್ದರೂ ಒಮ್ಮೆಯೂ ಪರಸ್ಪರ ಭೇಟಿಯಾಗಿರಲಿಲ್ಲ. ಕೋವಿಡ್‌ ಕಡಿಮೆ ಆದ ಮೇಲೆ ಧಾರವಾಡಕ್ಕೆ ಬರುತ್ತೇನೆ, ಆಗ ಆ ಮಕ್ಕಳನ್ನೆಲ್ಲ ಭೇಟಿಯಾಗೋಣ ಎಂದಿದ್ದ ಶಾಸ್ತ್ರಿಗಳು, ಕೋವಿಡ್‌ ಕಾರಣದಿಂದಲೇ ಮೊನ್ನೆ ಕೊನೆಯುಸಿರು ಎಳೆದರು ಎಂದು ತಿಳಿಯಿತು.

‘ಶಾಸ್ತ್ರಿಯವರು ಸಾಮಾನ್ಯ ಮನುಷ್ಯರಲ್ಲ. ಅವರು ನಿಜವಾಗಿಯೂ ನಮ್ಮೆಲ್ಲರ ಪಾಲಿನ ಭಗವಂತ. ಅವರನ್ನು ನಾವು ಯಾರೂ ನೋಡಿಲ್ಲ. ಆದರೂ ಅವರು ನಮಗೆ ಆರು ವರ್ಷದಿಂದ ಸಹಾಯ ಮಾಡುತ್ತಿದ್ದರು. ನಮ್ಮೆಲ್ಲರ ವಿದ್ಯಾಭ್ಯಾಸದ ಬಗ್ಗೆ ಚಿಂತಿಸುತ್ತಿದ್ದರು. ಅವರ ಆರೋಗ್ಯ ಸರಿ ಇಲ್ಲ ಎಂದಾಗ ಎಲ್ಲಾ ದೇವರಲ್ಲೂ ಅವರು ಗುಣಮುಖರಾಗಲೆಂದು ಬೇಡಿಕೊಂಡಿದ್ದೆ. ಆದರೆ ಆ ದೇವರು ಅವರನ್ನ ನಮ್ಮಿಂದ ಕಿತ್ತುಕೊಂಡು ನಮ್ಮನ್ನೆಲ್ಲ ಅನಾಥರನ್ನಾಗಿ ಮಾಡಿದ’ ಎನ್ನುತ್ತಾಳೆ ಶಿವಮೊಗ್ಗದಲ್ಲಿ ಬಿಎಎಂಎಸ್‌ ಓದುತ್ತಿರುವ ಪವಿತ್ರಾ ದಿಂಡೂರ.

ಶಾಸ್ತ್ರಿಗಳು ಸರ್ಕಾರಿ ಆಡಿಟ್ ಡಿಪಾರ್ಟ್‌ಮೆಂಟ್‌ನಲ್ಲಿ ನೌಕರಿ ಮಾಡಿ ನಿವೃತ್ತಿ ಹೊಂದಿದವರು. ಬೆಂಗಳೂರಿನಲ್ಲೇ ನಿವೃತ್ತ ಜೀವನ ನಡೆಸುತ್ತಿದ್ದ ಅವರು ರಾಜ್ಯದಾದ್ಯಂತ ನೂರಾರು ಬಡಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದ್ದರು. ತಮಗೆ ಬರುತ್ತಿದ್ದ ಪೆನ್ಷನ್ ಹಣದ ಬಹುತೇಕ ಮೊತ್ತವನ್ನು ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ವ್ಯಯಿಸುತ್ತಿದ್ದರು. ‘ನಾನೂ ಬಡತನದಲ್ಲೇ ಬೆಳೆದವನು. ನನ್ನ ವಿದ್ಯಾಭ್ಯಾಸಕ್ಕೆ ಎಚ್.ನರಸಿಂಹಯ್ಯ ಸಹಾಯ ಮಾಡಿದ್ದರು. ಹಾಸ್ಟೆಲ್‌ನಲ್ಲಿ ಜಾಗ ಇಲ್ಲದ್ದರಿಂದ ತಮ್ಮ ಕೊಠಡಿಯಲ್ಲೇ ಇರಿಸಿಕೊಂಡಿದ್ದರು. ವಿದ್ಯಾಭ್ಯಾಸ ಮುಗಿಸಿ ಸರ್ಕಾರಿ ನೌಕರಿಯನ್ನೂ ಪಡೆದುಕೊಂಡೆ. ಬಡಮಕ್ಕಳ ಕಷ್ಟ ಏನು ಅಂತ ನನಗೆ ಗೊತ್ತು. ಕೈಲಾದಷ್ಟು ಮಕ್ಕಳಿಗೆ ಸಹಾಯ ಮಾಡಿ ಆ ಮೂಲಕ ನರಸಿಂಹಯ್ಯ ಅವರ ಋಣ ತೀರಿಸುತ್ತೇನೆ’ ಎಂದು ತಮ್ಮನ್ನು ಪರಿಚಯಿಸಿಕೊಂಡಿದ್ದರು.

ರಾಜ್ಯದ ಎಲ್ಲ ಭಾಗಗಳ ನೂರಾರು ವಿದ್ಯಾರ್ಥಿಗಳು ಅವರ ಸಹಾಯದಿಂದ ಓದುತ್ತಿದ್ದರು. ಅವರಲ್ಲೀಗ ಅನಾಥ ಭಾವ. ‘ನಾನು ಬಡ ಕುಟುಂಬದಲ್ಲಿ ಜನಿಸಿದ ಹುಡುಗಿ. ಕಳೆದ ವರ್ಷ ಲಾಕ್‌ಡೌನ್ ಸಮಯದಲ್ಲಿ ನನ್ನ ತಂದೆ ತೀರಿಹೋದರು. ನಾನು ಮತ್ತು ನನ್ನ ಕುಟುಂಬ ದುಃಖದಲ್ಲಿದ್ದಾಗ ನಮಗೆ ಧೈರ್ಯನೀಡಿ ಸಾಂತ್ವನ ಹೇಳಿದ ಹೃದಯವಂತ ವ್ಯಕ್ತಿ ಶಾಸ್ತ್ರಿಗಳು. ಅವರು ನನಗೆ ಸಾಂತ್ವನ ಅಷ್ಟೇ ಹೇಳಿಲ್ಲ, ಆತ್ಮಸ್ಥೈರ್ಯ ತುಂಬಿ ಆರ್ಥಿಕವಾಗಿಯೂ ಸಹಾಯ ಮಾಡಿದರು. ಅವರ ಸಹಾಯದ ಋಣಭಾರ ನನ್ನ ಮೇಲಿದೆ’ ಎಂದು ಗದ್ಗದಿತವಾಗಿ ಹೇಳುತ್ತಾಳೆ ಧಾರವಾಡದಲ್ಲಿ ಬಿ.ಇ ಓದುತ್ತಿರುವ ಪಲ್ಲವಿ ಕುರವಿನಕೊಪ್ಪ.

‘ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ನಮ್ಮೂರು. ಶಾಸ್ತ್ರಿಗಳು ನಮ್ಮ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿ ಸ್ವಂತ ಮಕ್ಕಳ ಹಾಗೆ ನೋಡಿಕೊಳ್ಳುತ್ತಿದ್ದರು. ಕಳೆದ ವರ್ಷ ಕೋವಿಡ್‌ ಕಾರಣದಿಂದ ನಮ್ಮ ಕುಟುಂಬ ಸಂಕಷ್ಟ ಎದುರಿಸುತ್ತಿದ್ದಾಗ ನಮಗೆ ಧೈರ್ಯ ತುಂಬಿ, ದಿನಸಿ ಕೊಳ್ಳಲು ನಮ್ಮ ಅಕೌಂಟಿಗೆ ಹಣ ಹಾಕಿದ್ದರು. ಅವರ ನಿಧನದ ಸುದ್ದಿ ತಿಳಿದ ನನ್ನ ತಂದೆ, ನಾನು ನಿನಗೆ ಜನ್ಮ ಕೊಟ್ಟಿರಬಹುದು, ಆದರೆ ನಿಜವಾದ ತಂದೆಯ ಜವಾಬ್ದಾರಿ ನಿರ್ವಹಿಸಿದವರು ಶಾಸ್ತ್ರಿಗಳು ಎಂದು ದುಃಖಿಸುತ್ತಿದ್ದಾರೆ...’ ಬಳ್ಳಾರಿಯಲ್ಲಿ ಎಂಎಸ್ಸಿ ಓದುತ್ತಿರುವ ನೀಲವೇಣಿ ಕಣ್ಣೀರು ಹಾಕುತ್ತಾಳೆ.

‘ತಾಯಿ ಬಿಟ್ಟು ಬೇರೆ ಯಾರೂ ಇಲ್ಲದ ನನಗೆ ನಿಮ್ಮ ಜೊತೆ ನಾನಿದ್ದೇನೆ ಎಂದು ಧೈರ್ಯ ತುಂಬುತ್ತಿದ್ದರು. ಬೇರೆ ಬೇರೆ ವಿದ್ಯಾರ್ಥಿ ವೇತನದ ಮಾಹಿತಿ ಹುಡುಕಿ ನಮ್ಮ ಕಡೆಯಿಂದ ಅರ್ಜಿಹಾಕಿಸಿ ವಿದ್ಯಾರ್ಥಿವೇತನ ಬರುವಂತೆ ಶತ ಪ್ರಯತ್ನ ಮಾಡುತ್ತಿದ್ದರು. ವಾರಕ್ಕೊಮ್ಮೆ ಮನೆಗೆ ಕರೆಸಿಕೊಂಡು ಎಲ್ಲಾ ವಿಚಾರಿಸಿ, ಬೇಕಾದ ನೆರವನ್ನೂ ಒದಗಿಸುತ್ತಿದ್ದರು’ ಎಂದು ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ಓದುತ್ತಿರುವ ಶಿವಾನಂದ ಸುಣಗಾರ ಹೇಳುತ್ತಾನೆ. ‘ನಾನು ಇಂದು ವೈದ್ಯಳಾಗಲು ಶಾಸ್ತ್ರಿಗಳೇ ಕಾರಣ. ಅವರ ಆರ್ಥಿಕ ನೆರವಿನಿಂದಲೇ ನಾನು ಎಂಬಿಬಿಎಸ್‌ ಓದಲು ಸಾಧ್ಯವಾಯಿತು. ನನ್ನಂತೆ ನೂರಾರು ಮಕ್ಕಳು ಅವರಿಂದ ಸಹಾಯ ಪಡೆದಿದ್ದಾರೆ’ ಎಂದು ಮೈಸೂರಿನಲ್ಲಿ ಎಂ.ಡಿ ಓದುತ್ತಿರುವ ಗಂಗಮ್ಮ ಕೆ. ಉಮ್ಮಳಿಸಿ ಬರುತ್ತಿದ್ದ ದುಃಖ ತಡೆಯುತ್ತಾ ವಿವರಿಸುತ್ತಾಳೆ.

‘ಒಮ್ಮೆ ನಮ್ಮ ಮನೆಗೆ ಕೋಲಾರ ಜಿಲ್ಲೆಯ ಒಬ್ಬ ಅನಾಥ ಹುಡುಗಿ ಬಂದಿದ್ದಳು. ಎಸ್‌ಎಸ್‌ಎಲ್‌ಸಿ ಮುಗಿಸಿದ್ದ ಅವಳು ನಾನು ನಿಮ್ಮ ಮನೆಯಲ್ಲಿ ಕೆಲಸ ಮಾಡುತ್ತೇನೆ. ನನಗೆ ನೀವು ಸಂಬಳ ಕೊಡಬೇಡಿ, ನಾನು ವಿದ್ಯಾಭ್ಯಾಸ ಮುಂದುವರೆಸುವುದಕ್ಕೆ ಸಹಾಯ ಮಾಡಿ ಎಂದು ಬೇಡಿಕೊಂಡಳು. ಅವಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದೆ. ಅವಳು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿ ಅಲ್ಲಿಯೇ ಎಂ.ಡಿ ಮಾಡುತ್ತಿದ್ದಾಳೆ. ಜೀವನದಲ್ಲಿ ಇದಕ್ಕಿಂತ ಸಂತೋಷ ಇನ್ನೇನು ಬೇಕು? ಅವಳ ಮದುವೆ ಒಂದು ಮಾಡಿದರೆ ನನ್ನ ಜವಾಬ್ದಾರಿ ಮುಗಿಯಿತು’ ಎಂದು ಶಾಸ್ತ್ರಿಗಳು ಹೇಳಿದ್ದರು.

ಯಾವುದೇ ಬಡಮಗು ಶಿಕ್ಷಣ ಪಡೆಯಲು ಒದ್ದಾಡುತ್ತಿದೆ ಎಂದು ತಿಳಿದರೆ ತಕ್ಷಣ ಅವರು ನೆರವಿಗೆ ಧಾವಿಸುತ್ತಿದ್ದರು. ಬಡಮಕ್ಕಳಿಗೆ ಅವರಿಂದ ಸಹಾಯವಾಗುವಂತೆ ನೋಡಿಕೊಂಡವರು ಸಹ ಈಗ ದುಃಖದಲ್ಲಿದ್ದಾರೆ. ‘ಶಾಸ್ತ್ರಿಗಳು ಬಡಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ಪ್ರತಿಯೊಬ್ಬರ ಜೀವನಕ್ಕೆ ಒಂದು ಪ್ರೇರಣೆಯಾಗಿದ್ದರು. ನಾನು ಅವರಿಗೆ ಸಹಾಯ ಕೇಳಿ ಪರಿಚಯಿಸಿದ ಐವರು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ. ಅಂತಹ ಪುಣ್ಯಾತ್ಮನನ್ನು ಕಳೆದುಕೊಂಡಿದ್ದೇವೆ’ ಎಂದು ವಿವೇಕಾನಂದ ಎನ್‌ಕರೇಜ್‌ಮೆಂಟ್‌ ಗ್ರೂಪ್‌ನ ಚಿದಂಬರ ಶಾಸ್ತ್ರಿ ಹೇಳುತ್ತಾರೆ.

ಒಮ್ಮೆ ಮಾತ್ರ ನಾನು ಅವರನ್ನು ಭೇಟಿಯಾಗಿದ್ದು. ವಾರಕ್ಕೊಮ್ಮೆಯಾದರೂ ಫೋನ್ ಮಾಡಿ, ‘ನೀವು ಆರೋಗ್ಯ ಕಾಪಾಡಿಕೊಳ್ಳಿ, ಇನ್ನೂ ಹೆಚ್ಚು ದಿನ ಬಡಮಕ್ಕಳಿಗೆ ಸಹಾಯ ಮಾಡುವಂತೆ ಆಗಬೇಕು’ ಎಂದು ಹೇಳುತ್ತಿದ್ದ ಶಾಸ್ತ್ರಿಗಳು, ತಮ್ಮ ಸ್ವಂತಕ್ಕಾಗಿ ಏನೂ ಯೋಚಿಸಿದವರಲ್ಲ. ಬಡಮಕ್ಕಳಿಗೆ ಸಹಾಯ ಬೇಕು ಎಂದು ಯಾರೇ ಕೇಳಿದರೂ ಅವರ ವಿವರ ಕಳಿಸಿ ಎಂದು ಸಹಾಯ ಮಾಡುತ್ತಿದ್ದ ಶಾಸ್ತ್ರಿಗಳು, ಅದೆಷ್ಟು ಮಕ್ಕಳಿಗೆ ಪಾಲಕರಾಗಿ ಜವಾಬ್ದಾರಿ ನಿರ್ವಹಿಸಿದರು. ತಮ್ಮ ಕೊನೆಯ ಉಸಿರಿರುವವರೆಗೂ ಇತರರ ಒಳಿತಿಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದ ಮಹಾನ್ ಶಕ್ತಿಯಾಗಿದ್ದವರು ಅವರು. ಇಂತಹ ಅಪೂರ್ವ ವ್ಯಕ್ತಿಯ ಸಂಪರ್ಕ ನಮಗೆ ಆದದ್ದೇ ನಮ್ಮ ಅದೃಷ್ಟ. ಕೋವಿಡ್‌ ಇಂಥವರನ್ನೂ ಕರೆದೊಯ್ದು ಹಲವರ ಬಾಳಿನಲಿ ಕತ್ತಲೆ ಮೂಡಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು