ಆ ಒಂದು ಕ್ಷಣ

7

ಆ ಒಂದು ಕ್ಷಣ

Published:
Updated:
ಶಿಲ್ಪಾ ಕಬ್ಬಿಣಕಂತಿ

ನಾನಾಗ ನಲ್ಲೂರಿನಲ್ಲಿ ಏಳನೇ ತರಗತಿಯಲ್ಲಿದ್ದೆ. ಒಂದು ಸಂಜೆ ಶಾಲೆ ಬಿಟ್ಟ ನಂತರ ಮನೆಗೆ ಬಂದಾಗ ಅಲ್ಲಿ ಮೌನ ಕವಿದಿತ್ತು. ಹೊಟ್ಟೆ ತುಂಬಾ ಹಸಿದಿತ್ತು. ಅಮ್ಮನಿಗಾಗಿ ಹುಡುಕಾಡಿದೆ, ಎಲ್ಲೂ ಕಾಣಲಿಲ್ಲ. ಚಾಪೆಯ ಮೇಲೆ ಗೋಡೆಗೊರಗಿಕೊಂಡು ಶೂನ್ಯಮುಖಿಯಾಗಿದ್ದ ಅಪ್ಪ. ‘ಅಮ್ಮ ಎಲ್ಲಯ್ಯಾ’ ಎಂದೆ. ‘ಜಗಳಾಡಿದ್ವಿ, ಕೆನಾಲ್‌ಗೆ ಬೀಳ್ತೀನಂತ ಹೋಯ್ತು’ ಎಂದು ನಿಡಿದಾಗಿ ಉಸಿರು ಬಿಟ್ಟರು.

ಮನೆಯಲ್ಲಿ ಇವರಿಬ್ಬರ ಜಗಳ ನಿತ್ಯ ನಿರಂತರ. ಕಿತ್ತು ತಿನ್ನುವ ಬಡತನ, ಐದು ಮಕ್ಕಳ ತುಂಬು ಸಂಸಾರ. ದಿನ ನಿತ್ಯದ ಊಟ- ತಿಂಡಿಗೆ ಹೊಂದಿಸಿ ಅಮ್ಮ ಹೈರಾಣಾಗಿದ್ದಳು. ಆ ಕಾರಣ ಸದಾ ಜಗಳ. ಜಗಳವಾಡಿ ಮನೆಯಿಂದ ಹೊರಹೋಗಿ ಯಾರಾದರೂ ಪರಿಚಿತರ ಮನೆಯಲ್ಲಿ ಸ್ವಲ್ಪಹೊತ್ತು ಕುಳಿತಿದ್ದು ಮನಸ್ಸಿಗೆ ಸಮಾಧಾನವಾದ ಮೇಲೆ ಹಸಿದ ಮಕ್ಕಳನ್ನು ನೆನಪಿಸಿಕೊಂಡು ಅಮ್ಮ ಮನೆಗೆ ಮರಳುತ್ತಿದ್ದದ್ದು ಮಾಮೂಲು.

ಇಂದು ಕೂಡ ಹಾಗೇ ಎಂದುಕೊಂಡು ಅಪ್ಪ ತನ್ನ ಪಾಡಿಗೆ ತಾವಿದ್ದರು. ತಂಗಿ- ತಮ್ಮಂದಿರಿನ್ನೂ ಶಾಲೆಯಿಂದ ಹಿಂದಿರುಗಿರಲಿಲ್ಲ. ಹೊರ ಓಡಿದವನೇ ಅಕ್ಕ ಪಕ್ಕದ ಮನೆಗಳಲ್ಲಿ ವಿಚಾರಿಸಿದೆ. ‘ಬಂದಿಲ್ಲ’ ಎಂಬ ಉತ್ತರ. ಅಕ್ಕ ಪಕ್ಕದ ಬೀದಿಗಳಲ್ಲಿ ಅಡ್ಡಾಡಿದೆ. ಅಮ್ಮನ ಸುಳಿವಿಲ್ಲ. ಕೊನೆಗೊಬ್ಬರು ‘ಹಿರೇಮಳಲಿ ರಸ್ತೆಯಲ್ಲಿ ನಿಮ್ಮಮ್ಮ ಹೋಗುವುದನ್ನು ನೋಡಿದೆ’ ಎಂದರು.

ಒಂದು ಕ್ಷಣ ಕಣ್ಣು ಕತ್ತಲಿಟ್ಟಿತು. ಹಿರೇಮಳಲಿ ರಸ್ತೆ ಎಂದರೆ ನಡುವೆ ಭದ್ರಾ ಕೆನಾಲ್. ಹದಿನೆಂಟು ಅಡಿ ಆಳದ, ಭೋರ್ಗರೆದು ಹರಿಯುವ ವಿಶಾಲ ನಾಲೆ. ಅಪ್ಪನ ಬಳಿ ಹೇಳಿದಂತೆ ಅಮ್ಮ ಕೆನಾಲ್‌ಗೆ ಬೀಳಲು ಹೋಗಿರಬಹುದು! ಎದೆ ನಡುಗಿತು.

ಕೆನಾಲ್‌ಗೂ ಮನೆಗೂ ಸುಮಾರು ಎರಡು ಕಿ.ಮೀ. ಅಂತರ. ತಕ್ಷಣ ಮನೆಯ ಪಕ್ಕದಲ್ಲೇ ಇದ್ದ ಸಮದ್‌ದಾ ಅವರ ಸೈಕಲ್ ಶಾಪಿನಲ್ಲಿ ಸೈಕಲ್ಲೊಂದನ್ನು ಬಾಡಿಗೆಗೆ ತೆಗೆದುಕೊಂಡು, ಶಕ್ತಿ ಬಿಟ್ಟು ತುಳಿಯುತ್ತ ಕೆನಾಲ್‌ನ ಸೇತುವೆ ಬಳಿಗೆ ಬಂದೆ. ಅಲ್ಲೆಲ್ಲೂ ಅಮ್ಮ ಕಾಣಲಿಲ್ಲ, ಮೆಟ್ಟಿಲುಗಳ ಮೇಲೆ ಬಟ್ಟೆ ತೊಳೆಯುತ್ತಿದ್ದವರನ್ನು ಕೇಳಿದೆ. ಅವರು ನೋಡಲಿಲ್ಲವೆಂದರು. ಎರಡೂ ದಡಗಳ ಮೇಲೆ ಉದ್ದಕ್ಕೂ ಕಣ್ಣಾಡಿಸಿದೆ. ಅಮ್ಮ ಕಾಣಲಿಲ್ಲ. ದುಃಖ ಉಮ್ಮಳಿಸಿತು. ಒಳಗೆಲ್ಲ ತಳಮಳ. ಸೂರ್ಯ ಕಂತುವುದರಲ್ಲಿದ್ದ.

ಕತ್ತಲಾವರಿಸಿದರೆ ಅಮ್ಮನನ್ನು ಕಾಣುವುದು ಕಷ್ಟವಾಗಬಹುದು. ಸುತ್ತ ನೋಡಿದೆ. ಜನ ಸಂಚಾರ ವಿರಳವಾಗುತ್ತಿತ್ತು. ಮನೆಗೆ ಹಿಂದಿರುಗಲು ಮನಸ್ಸು ಒಪ್ಪಲಿಲ್ಲ. ಸೈಕಲ್ಲನ್ನೇರಿ ಕೆನಾಲ್‌ನ ಏರಿ ಮೇಲಿನ ರಸ್ತೆಗುಂಟ ಲಿಂಗದಹಳ್ಳಿ ಊರಿನ ಕಡೆ ಹೊರಟೆ. ಸುಮಾರು ಒಂದು ಕಿ.ಮೀ. ದೂರದಲ್ಲಿ ನಲ್ಲೂರು- ಲಿಂಗದಹಳ್ಳಿ ಸಂಪರ್ಕಿಸುವ ಸೇತುವೆ. ಅದರ ಬಳಿಗೆ ನಾನು ಸಮೀಪಿಸುವಾಗ ಕೆನಾಲ್‌ನ ದಡಕ್ಕೆ ಹತ್ತಿರವಾಗುತ್ತಿದ್ದ ಅಮ್ಮ ದೂರದಿಂದಲೇ ಕಾಣಿಸಿದಳು. ಉಸಿರು ಬಿಗಿಹಿಡಿದು ಸೈಕಲ್ ತುಳಿದೆ. ಅಮ್ಮನಿಗೂ ನೀರಿಗೂ ಕೆಲವು ಗಜಗಳ ಅಂತರವಿದ್ದಾಗ ‘ಅಮ್ಮಾ...’ ಎಂದು ಚೀರುತ್ತ ಸೈಕಲ್ಲಿನಿಂದ ಹಾರಿ ಅಮ್ಮನ ಕಾಲುಗಳನ್ನು ಬಿಗಿಯಾಗಿ ತಬ್ಬಿ ಹಿಡಿದೆ. ‘ಬಿಡೊ...ಬಿಡೋ’ ಎನ್ನುತ್ತ ಅಮ್ಮ ಕೊಸರಿಕೊಂಡು ನೀರಿನ ಸಮೀಪಕ್ಕೆ ಹೋಗಲಾರಂಭಿಸಿದಳು.

ಇನ್ನೂ ಜೋರಾಗಿ ‘ಅಮ್ಮಾ...ಅಮ್ಮಾ...’ ಎಂದು ಕೂಗುತ್ತ ಅಳುತ್ತ ಅಮ್ಮನ ಎರಡೂ ಕಾಲುಗಳನ್ನು ಬಿಗ್ಗಬಿಗಿ ಹಿಡಿದುಕೊಂಡು ತೆವಳುತ್ತಿದ್ದೆ.

ಅಷ್ಟರಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಜನರೆಲ್ಲ ನನ್ನ ಕಿರುಚಾಟ ಕೇಳಿ ಓಡಿ ಬಂದು, ಅಮ್ಮನನ್ನು ಹಿಡಿದುಕೊಂಡು ಪಕ್ಕದಲ್ಲಿದ್ದ ದಿಬ್ಬದ ಮೇಲೆ ಕೂರಿಸಿದರು. ಅಮ್ಮನನ್ನು ಕಣ್ತುಂಬ ನೋಡಿದೆ. ಕೆದರಿದ ಕೂದಲು, ಅತ್ತು ಕರೆಗಟ್ಟಿದ್ದ ಮುಖ, ಉದ್ವೇಗದಿಂದ ಬಿಡುತ್ತಿದ್ದ ಏದುಸಿರು. ದುಃಖದ ಕಟ್ಟೆಯೊಡೆದು ಅವಳ ಮಡಿಲು ತಬ್ಬಿ ಜೋರಾಗಿ ಅತ್ತೆ. ಯಾರೋ ಒಬ್ಬರು ಬೊಗಸೆಯಲ್ಲಿ ಕೆನಾಲ್‌ನ ನೀರನ್ನು ತಂದು ಅಮ್ಮನ ಮುಖಕ್ಕೆ ಹಾಕಿದರು. ಅಮ್ಮ ನನ್ನ ತಲೆ ನೇವರಿಸಿದಳು.

ಸೇರಿದ್ದ ಆಪದ್ಬಾಂಧವರು ಅಮ್ಮನಿಗೆ ಬುದ್ಧಿ ಹೇಳಿ ಹೊರಟರು. ಕೇವಲ ಒಂದು ನಿಮಿಷ ತಡವಾಗಿದ್ದರೂ ಅಮ್ಮ ಮತ್ತೆ ಜೀವಂತವಾಗಿ ಸಿಗುತ್ತಿರಲಿಲ್ಲ. ವಿಸ್ಮಯದ ವಿಷಯವೆಂದರೆ ನಾನು ಕೆನಾಲ್‌ನ ಎಡಕ್ಕೆ ಸಾಗದೆ ಬಲಕ್ಕೆ ಲಿಂಗದಹಳ್ಳಿ ಕಡೆಗೆ ಸಾಗಿದ್ದು.

ಒಂದು ಕೈಯಲ್ಲಿ ಸೈಕಲ್ಲು ಇನ್ನೊಂದು ಕೈಯಲ್ಲಿ ಅಮ್ಮನ ಕೈ ಹಿಡಿದುಕೊಂಡು ಊರ ಕಡೆಗೆ ಹೆಜ್ಜೆ ಹಾಕಿದೆ. ನನ್ನೊಳಗೆ ಸಂತೋಷದ ಊಟೆ. ಸೂರ್ಯ ದಿಗಂತದಂಚಿನಲ್ಲಿ ಮರೆಯಾಗಿ, ಸಣ್ಣಗೆ ಕತ್ತಲು ಕೌದಿ ಹೊದಿಸಲು ಶುರುವಿಟ್ಟಿತು.

ಅಂದು ನಮ್ಮ ಮನೆಯಲ್ಲಿ ಬೆಳಕು ತುಸು ಹೆಚ್ಚೇ ಇತ್ತು.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !