ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಬದುಕಿನ ಸತ್ಯ ಹೇಳಿದ ಓಶೋ ಇಲ್ಲವಾಗಿ 30 ವರ್ಷ...

Last Updated 11 ಡಿಸೆಂಬರ್ 2020, 7:29 IST
ಅಕ್ಷರ ಗಾತ್ರ

ಉದ್ವೇಗ ರಹಿತ ತಣ್ಣನೆಯ ಮಾತುಗಳು, ಕವಿತೆಯ ಲಾಲಿತ್ಯದಂಥ ಉಪನ್ಯಾಸಗಳು, ಕಥೆಗೊಂದು ಉಪಕಥೆ, ತಿಳಿ ಹಾಸ್ಯ, ಸಮ್ಮೋಹನಗೊಳಿಸುವ ವಾಕ್ಪಟುತ್ವ, ತೀಕ್ಷ್ಣ ನೋಟದಲ್ಲಿ ಚುಂಬಕ ಶಕ್ತಿ, ತುಟಿ ಮುಚ್ಚಿಕೊಂಡ ಮೀಸೆ, ನೀಳವಾದ ಬಿಳಿಯ ಗಡ್ಡ, ತಲೆಗೆ ಉಲನ್ ಟೋಪಿ, ಕೊರಳಿಗೆ ಮಫ್ಲರ್,ಉದ್ದನೆಯ ನಿಲುವಂಗಿ... ಓಹ್‌ ಸ್ಫುರದ್ರೂಪಿ ದಾರ್ಶನಿಕ! ಇಂಥದ್ದೊಂದು ವ್ಯಕ್ತಿತ್ವ ವಿಜೃಂಭಿಸಿ ಬಾಳಿ–ಬದುಕಿ ಮೂರು ದಶಕಗಳು ಕಳೆದಿವೆ ಎನ್ನುವುದನ್ನು ಮರಳಿ ನೆನಪಿಸುವುದೇ ಈ ಬರಹದ ಉದ್ದೇಶ. ಅಂದ ಹಾಗೇ ಡಿಸೆಂಬರ್ 11 ಓಶೋ ಅವರ ಜನ್ಮದಿನ...

ಧರ್ಮವೆಂದರೇನು? ಜೀವಿಸುವ ಬಗೆ, ಜೀವಿಸುವ ಕಲೆಯೇ ಧರ್ಮ. ಜೀವನದ ತ್ಯಾಗ ಧರ್ಮವಲ್ಲ, ಜೀವನದ ಅಂತರಾಳದಲ್ಲಿ ಇಳಿಯಲು ಸೋಪಾನ ಧರ್ಮ. ಜೀವನದಿಂದ ಪಲಾಯನಗೈಯ್ಯುವುದೇ ಧರ್ಮವಲ್ಲ. ಧರ್ಮವೆಂಬುದು ಜೀವನದ ಪೂರ್ಣ ಸಾಕ್ಷಾತ್ಕಾರ. ಧರ್ಮಗಳು ಪ್ರೇಮದ ಮಾತನ್ನಾಡುತ್ತವೆ. ಆದರೆ ಇಂದಿನವರೆಗೆ ಮನುಷ್ಯ ಜನಾಂಗದ ಮೇಲೆ ದೌರ್ಭಾಗ್ಯದಂತೆ ಕವಿದುಕೊಂಡಿರುವ ಧರ್ಮಗಳೆಲ್ಲಾ ಮಾನವ ಜೀವನದಲ್ಲಿರುವ ಪ್ರೇಮದ ಎಲ್ಲ ಕವಾಟಗಳನ್ನು ಬಿಗಿದು ಬೀಗ ಹಾಕಿವೆ. ಈ ವಿಚಾರದಲ್ಲಿ ಪೂರ್ವ –ಪಶ್ಚಿಮ ದೇಶಗಳೆಂಬ ಭೇದವಿಲ್ಲ

* * *
ಪ್ರೇಮ ದಂಡೆ ಮೀರಿದಾಗ ಅದು ಪರಮಾತ್ಮನಾಗುವುದು, ಪ್ರೇಮ ಪರಮಾತ್ಮನಲ್ಲಿ ಐಕ್ಯವಾಗುವುದು. ಪ್ರೇಮ ಸರಿತೆ, ಪರಮಾತ್ಮ ಸಾಗರ. ಸಮಸ್ತ ಜೀವನ, ಅಭಿವ್ಯಕ್ತಿ , ಎಲ್ಲ ಅರಳುವಿಕೆಗಳು ಕಾಮದ ಚೇಷ್ಟೆ...
* * *
ಧ್ಯಾನದಲ್ಲಿ ಯಾವುದೇ ವಿಚಾರಗಳ ಜಂಜಾಟ ಇಲ್ಲ, ಯಾವುದೇ ಕಾಮನೆಗಳಿಲ್ಲ ಪರಿಪೂರ್ಣವಾಗಿ ಮೌನವಾಗಿದ್ದೀರಿ- ಆ ಮೌನವೇ ಧ್ಯಾನ. ಧ್ಯಾನವೆಂದರೆ ಮನಸ್ಸಿನೊಂದಿಗೆ ಯಾವುದೇ ರೀತಿ ಗುರುತಿಸಿಕೊಳ್ಳದಿರುವ ಸ್ಥಿತಿ. ಇಂತಹ ಮೌನದಲ್ಲಿ ಮಾತ್ರ ಸತ್ಯ ಅರಿಯಲು ಸಾಧ್ಯ.
* * *
ಮನಸ್ಸಿನ ವಿಚಾರಗಳ ತಿಕ್ಕಾಟಗಳು ನಿಂತು ಮನುಷ್ಯನಿಗೆ ಆನಂದದ ಸಮಯ ನೀಡುವುದೇ ಸಮಾಧಿ ಸ್ಥಿತಿ.
* * *
–ಬಹುಶಃ ಈ ಎಲ್ಲ ವಾಕ್ಯಗಳನ್ನು ಓದುತ್ತಿದ್ದರೆ ಸಹಜವಾಗಿಯೇ ನೆನಪಿಗೆ ಬರುವುದು ಆಚಾರ್ಯ ರಜನೀಶ್ ಅಥವಾ ಭಗವಾನ್ ರಜನೀಶ್ಅಥವಾ ಓಶೋ...

ಉದ್ವೇಗ ರಹಿತ ತಣ್ಣನೆಯ ಮಾತುಗಳು, ಕವಿತೆಯ ಲಾಲಿತ್ಯದಂಥ ಉಪನ್ಯಾಸಗಳು, ಕಥೆಗೊಂದು ಉಪಕಥೆ, ತಿಳಿ ಹಾಸ್ಯ, ಸಮ್ಮೋಹನಗೊಳಿಸುವ ವಾಕ್ಪಟುತ್ವ, ತೀಕ್ಷ್ಣ ನೋಟದಲ್ಲಿ ಚುಂಬಕ ಶಕ್ತಿ, ತುಟಿ ಮುಚ್ಚಿಕೊಂಡ ಮೀಸೆ, ನೀಳವಾದ ಬಿಳಿಯ ಗಡ್ಡ, ತಲೆಗೆ ಉಲನ್ ಟೋಪಿ, ಕೊರಳಿಗೆ ಮಫ್ಲರ್,ಉದ್ದನೆಯ ನಿಲುವಂಗಿ... ಓಹ್‌ ಸ್ಫುರದ್ರೂಪಿ ದಾರ್ಶನಿಕ! ಇಂಥದ್ದೊಂದು ವ್ಯಕ್ತಿತ್ವ ವಿಜೃಂಭಿಸಿ ಬಾಳಿ–ಬದುಕಿ ಮೂರು ದಶಕಗಳು ಕಳೆದಿವೆ.

ಸುಮಾರು 60ರ ದಶಕದಿಂದ 80ರ ದಶಕಗಳವರೆಗೂ 30 ವರ್ಷಗಳಷ್ಟು ಕಾಲ ಭಾರತ ಹಾಗೂ ವಿದೇಶಗಳಲ್ಲಿ ರಜನೀಶ್ ಹೆಸರು ಬಹಳ ಪರಿಚಿತ. ಈ ಅಧ್ಯಾತ್ಮ ಗುರುವಿನ ಹೆಸರಿನೊಂದಿಗೆ ಪ್ರಸಿದ್ಧಿ, ಟೀಕೆ ಹಾಗೂ ವಿವಾದಗಳು ಅಷ್ಟೇ ಪ್ರಮಾಣದಲ್ಲಿ ಅಂಟಿಕೊಂಡಿದ್ದವು. ಅವರ ಐಷಾರಾಮಿ ಬದುಕು ವಿಖ್ಯಾತವಾಗಿತ್ತು.

1960ರ ದಶಕದಲ್ಲಿ ಆಚಾರ್ಯ ರಜನೀಶ ಎಂದು,1970ರ ದಶಕ ಹಾಗೂ 1980ರ ದಶಕಗಳಲ್ಲಿ ಭಗವಾನ್ ರಜನೀಶ್ ಎಂದು, ಮತ್ತು ಬಳಿಕ ಓಶೊ ಎಂದೂ ಪರಿಚಿತವಾಗಿದ್ದ ಚಂದ್ರ ಮೋಹನ್ ಜೈನ್ (1931–1990)ಅಂತರರಾಷ್ಟ್ರೀಯ ಅನುಯಾಯಿಗಳನ್ನು ಹೊಂದಿರುವ ಭಾರತೀಯ ಗುರು, ಆಧ್ಯಾತ್ಮಿಕ ಶಿಕ್ಷಕ. ಆದರೆ ಇಷ್ಟನ್ನೇ ಹೇಳಿದರೆ ಓಶೋ ವ್ಯಕ್ತಿತ್ವ ದರ್ಶನವಾಗಲಾರದು.

ಓಶೋ ಎಂಬ ಹೆಸರು ಓಶಾನಿಕ್‌ ಎಂಬ ಪದದಿಂದ ಬಂದಿದ್ದು ಸಾಗರದಲ್ಲಿ ವಿಲೀನವಾಗುವುದು ಎಂಬರ್ಥವನ್ನು ವಿಲಿಯಂ ಜೇಮ್ಸ್ ಎಂಬುವವರು ನೀಡಿದ್ದಾರೆ. ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ರಜನೀಶ್ 1960ರ ದಶಕದಲ್ಲಿ ಸಾರ್ವಜನಿಕ ಭಾಷಣಕಾರರಾಗಿ ದೇಶಾದ್ಯಂತ ಪ್ರಯಾಣ ಮಾಡಿದರು. ಅವರ ಮುಚ್ಚುಮರೆಯಿಲ್ಲದ ಮಾತುಗಳನ್ನು ವಿವಾದಾತ್ಮಕ ವ್ಯಕ್ತಿಯನ್ನಾಗಿಸಿದವು. ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡುವ ರಜನೀಶ್ ಅವರನ್ನು ’ಸೆಕ್ಸ್‌ ಗುರು‘ ಎಂದು ಟೀಕಿಸಿದರು.

ಆದರೆ ಓಶೋ ಅದಕ್ಕೆ ಮಾತ್ರ ಸೀಮಿತರಲ್ಲ. ಎಲ್ಲ ವಿಷಯಗಳ ಬಗ್ಗೆ ತರ್ಕಬದ್ಧವಾಗಿ ಮಾತನಾಡುತ್ತಿದ್ದರು. ತಾವು ಕಂಡುಕೊಂಡ ಬದುಕಿನ ಸತ್ಯವನ್ನು ಯಾವುದೇ ಮುಲಾಜಿಲ್ಲದೇ ಹೇಳುತ್ತ ಹೋದರು. ಓಶೋ ಮಾತನಾಡುವುದೇ ಕಥೆಯ ಮೂಲಕ. ಕಥೆಯಿಂದಲೇ ಮಾತು ಆರಂಭ. ಕಥೆಗೊಂದು ಕಥೆ, ಅದಕ್ಕೆ ಉಪ ಕಥೆ, ಕಥೆಯಲ್ಲಿಯೇ ಬದುಕಿನ ದರ್ಶನ. ಅಧ್ಯಾತ್ನ, ಝೆನ್‌, ಬೌದ್ಧ, ಸೂಫೀ, ಪ್ರೇಮ, ಕಾಮ, ಮದುವೆ, ಬದುಕು, ವಿಡಂಬನೆ, ಸಾಮಾಜಿಕ, ರಾಜಕೀಯ...ಹೀಗೆ ಎಲ್ಲ ವಿಷಯಗಳ ಬಗ್ಗೆಯೂ ಹೇಳುತ್ತ ಸಭಿಕರನ್ನು ಮೋಡಿ ಮಾಡುತ್ತ ಸಾಗಿದರು.ದೇಶವಿದೇಶಗಳಲ್ಲಿ ಅವರು ನೀಡಿದ ಉಪನ್ಯಾಸಗಳಿಗೆ ಜನರು ಮುಗಿಬಿದ್ದು ಬಂದರು. ವಿಶ್ವವಿಖ್ಯಾತರಾದರು. ಅಷ್ಟೇ ವಿವಾದಗಳನ್ನೂ ಮೈ ಮೇಲೆ ಎಳೆದುಕೊಂಡರು.

ಮಹಾನ್‌ ಋಷಿಮುನಿಗಳು ತೋರಿದ ಹಾದಿ, ಧಾರ್ಮಿಕ ಗ್ರಂಥಗಳ ವಿಶ್ಲೇಷಣೆಗಳನ್ನು ಅವರು ಸುಮಾರು 30ಕ್ಕೂ ವರ್ಷಗಳ ಕಾಲ ನೀಡಿದರು. 1931ರ ಡಿಸೆಂಬರ್‌ 11ರಂದು ಪುಣೆಯಲ್ಲಿ ಜನಿಸಿದ ಚಂದ್ರ ಮೋಹನ್ ಜೈನ್ ಬದುಕಿದ್ದು 60 ವರ್ಷಗಳು ಮಾತ್ರ. ಆದರೆ ಈ ಅವಧಿಯಲ್ಲಿ ಪ್ರಪಂಚದ ಎಲ್ಲೆಡೆ ಶಿಷ್ಯರನ್ನು ಸಂಪಾದಿಸಿದ್ದರು. ಪುಣೆಯಲ್ಲಿಯೇ ಅತಿ ದೊಡ್ಡ ಧ್ಯಾನ ಕೇಂದ್ರವನ್ನು ತೆರೆದರು.

ಭಗವಾನ್‌ ರಜನೀಶ್‌ ಎಷ್ಟು ದೊಡ್ಡ ಹೆಸರು ಗಳಿಸಿದ್ದರೋ ಅಷ್ಟೇ ಪ್ರಮಾಣದಲ್ಲಿ ಆಸ್ತಿಯನ್ನೂ ಗಳಿಸಿದ್ದರು ಎನ್ನಲಾಗುತ್ತದೆ. ಆಸ್ತಿಪಾಸ್ತಿಯೂ ಅವರ ನಿಧನದ ಬಳಿಕ ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ರಜನೀಶ್ ಅವರು ಬದುಕಿನ ಉತ್ತುಂಗ ಕಾಲದಲ್ಲಿದ್ದಾಗ ಸಾಕಷ್ಟು ವಿಲಾಸಿ ಜೀವನವು ಅದರೊಂದಿಗೆ ಥಳುಕು ಹಾಕಿಕೊಂಡಿತ್ತು. ರೋಲ್ಸ್‌ರಾಯ್ಸ್‌ ಕಾರುಗಳೆಂದರೆ ಬಹಳ ಪ್ರೀತಿ. ಅವರ ಬಳಿ 80 ಕ್ಕೂ ಹೆಚ್ಚು ವಿಲಾಸಿ ಕಾರುಗಳಿದ್ದವು ಎನ್ನುತ್ತವೆ ಮೂಲಗಳು. ಅವರಿಗೆ ಇಂತಹ ಉಡುಗೊರೆಗಳನ್ನು ನೀಡಲು ಗಣ್ಯರು ಸಾಲುಗಟ್ಟುತ್ತಿದ್ದರು.

1980ರ ದಶಕದಲ್ಲಿ ಅವರ ಮೇಲೆ ಅನೇಕ ಆರೋಪಗಳು ಕೇಳಿಬಂದವು. ಅವರನ್ನು ವಿದೇಶದಿಂದ ಗಡಿಪಾರು ಮಾಡಲಾಯಿತು. ಅವರು ಉಪನ್ಯಾಸ ನೀಡುತ್ತಿದ್ದ ಹಲವು ದೇಶಗಳಿಗೆ ಅವರ ಪ್ರವೇಶವನ್ನು ನಿರ್ಬಂಧಿಸಲಾಯಿತು. ಓಶೋ ಅವರು ಪುಣೆಗೆ ಮರಳಿ ಮತ್ತೆ ತಮ್ಮ ಕಾರ್ಯಕ್ರಮ ಮುಂದುವರಿಸಿದರು. 1990ರ ಜನವರಿ 19ರಂದು ನಿಧನರಾದರು. ಅವರ ನಿಧನ ಕೂಡ ನಿಗೂಢವಾಗಿಯೇ ಇದೆ ಎಂಬ ಮಾತುಗಳಿವೆ.

ಪುಣೆಯಲ್ಲಿ ಸುಮಾರು 10 ಎಕರೆಯಲ್ಲಿ ಓಶೋ ಇಂಟರ್‌ನ್ಯಾಷನಲ್ ಮೆಡಿಟೇಶನ್ ರೆಸಾರ್ಟ್ (OSHO International Meditation Resort) ಕಟ್ಟಿದರು. ಸಾವಿರಾರು ಕೋಟಿ ಬೆಲೆ ಬಾಳುವ ಆಸ್ತಿ ಎನ್ನಲಾಗುತ್ತಿದೆ. ಓಶೋ ಕಮ್ಯೂನ್‌ ಇಂಟರ್ ನ್ಯಾಷನಲ್‌ –ಕೇಂದ್ರದಲ್ಲಿ ಧ್ಯಾನ ಮಾಡಲು ಓಶೋ ಅನುಯಾಯಿಗಳು ವಿಶ್ವದೆಲ್ಲೆಡೆಗಳಿಂದ ಪ್ರತಿವರ್ಷ ಇಲ್ಲಿಗೆ ಬರುತ್ತಾರೆ. ಒಟ್ಟಿನಲ್ಲಿ ವರ್ಣರಂಜಿತವಾಗಿ ಬದುಕಿದ ಓಶೋ ಅಭಿಮಾನಿಗಳ ನೆನಪಿನಲ್ಲಿ ಈಗಲೂ ಬದುಕಿದ್ದಾರೆ.

ಓಶೋರ ಕನ್ನಡದಲ್ಲಿ ಲಭ್ಯವಾಗುವ ಪುಸ್ತಕಗಳು: ಮಹಾತ್ಮ : ಗಾಂಧೀ ವಾದದ ಗೊತ್ತು - ಗುರಿಗಳು, ಭಜಗೋವಿಂದಂ ಮೂಢಮತೆ, ನಾನು ಧಾರ್ಮಿಕತೆಯನ್ನು ಕಲಿಸುತ್ತೇನೆ, ಧರ್ಮವನ್ನಲ್ಲ, ಶಿವಸೂತ್ರ, ಮಣ್ಣಿನ ಹಣತೆ (ಕಥಾ ಸಂಗ್ರಹ), ಧ್ಯಾನಸೂತ್ರ, ಸಂಭೋಗದಿಂದ ಸಮಾಧಿಯವರೆಗೆ, ಬುದ್ಧಬೋಧೆ, ಶೂನ್ಯನಾವೆ, ನಗುತ್ತಾ ಆಡುತ್ತಾ ಧ್ಯಾನ ಮಾಡು... ಇತ್ಯಾದಿ... ‘ಓಶೋ ವಚನ’ ಮಾಸಪತ್ರಿಕೆ ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಓಶೋ ಅಭಿಮಾನಿಗಳು ಹೊರತರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT