ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನಜ್ಜ ಲಾಂಗೂಲಾಚಾರ್ಯ!

Last Updated 12 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಪಾ.ವೆಂ. ಆಚಾರ್ಯ ಎಂದರೆ ಶಬ್ದಗಳ ಗಾರುಡಿಗ. ಪದಾರ್ಥ ಚಿಂತಾಮಣಿಯ ಮೂಲಕ ಶಬ್ದಗಳ ಇತಿಹಾಸವನ್ನೇ ತೆರೆದಿಟ್ಟವರು. ಓದುಗರೊಡನೆ ಹರಟೆಯ ಮೂಲಕ ಲಾಂಗೂಲಾಚಾರ್ಯರಾಗಿ ರಾಜ್ಯದ ಮನೆಮಾತಾದವರು. ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ವಿಶೇಷ ಹಿರಿಮೆಯನ್ನು ತಂದುಕೊಟ್ಟವರು. ಅವರ ಮೊಮ್ಮಗಳು, ಅಜ್ಜನನ್ನು ನೆನಪಿಸಿಕೊಂಡ ಆಪ್ತ ಬರಹ ಇಲ್ಲಿದೆ...

***

ನನಗೆ ಅಜ್ಜನ ನೆನಪೆಂದರೆ ಸದಾ ಬರೆಯುತ್ತ ಕೂತವರು ಸಾಹಿತ್ಯ, ಸಂಗೀತದ ಕುರಿತೇ ಯೋಚಿಸುವವರು, ದೇವರೆಂದರೆ ಸಿಡಿಮಿಡಿಗೊಳ್ಳುವವರು. ನಾನು ಅವರ ಮಗಳ ಮಗಳು. ನನ್ನ ಬಾಲ್ಯದ ದಿನಗಳವು. ನಾವು ಬೇಸಿಗೆ ರಜೆಗೆಂದು ಬೆಂಗಳೂರಿನಿಂದ ಹುಬ್ಬಳ್ಳಿಯಲ್ಲಿರುವ ಅವರ ಮನೆಗೆ ಹೋಗುತ್ತಿದ್ದೆವು. ಅಜ್ಜನೆಂದರೆ ಎಲ್ಲರಂತೆ ಮಾತಿಗೆ, ಹರಟೆಗೆ ಸಿಗುವ ಮನುಷ್ಯನಾಗಿರಲಿಲ್ಲ. ಬದಲಾಗಿ ಅವರು ಬರೆಯುತ್ತ ಒಂದೆಡೆ ಕೂತರೆ ಮಕ್ಕಳೆಲ್ಲ ಗಲಾಟೆ ಮಾಡಬಾರದೆಂದು ಮೊದಲೇ ನಮಗೆ ಹೇಳಿಬಿಟ್ಟಿದ್ದರಿಂದ ಅಲ್ಲೊಂದು ಅಲಿಖಿತ ಶಿಸ್ತು ಇದ್ದುಬಿಡುತ್ತಿತ್ತು. ಅಜ್ಜ ಬರೆಯಲು ಕೂತನೆಂದರೆ ಇಡೀ ಮನೆಯಲ್ಲಿ ಒಂಥರದಲ್ಲಿ ಮೌನ ಆವರಿಸುತ್ತಿತ್ತು.

ನನ್ನ ಅಮ್ಮ ಸುಶ್ರಾವ್ಯವಾಗಿ ಹಾಡುತ್ತಿದ್ದಳು. ಅಮ್ಮ ದಾಸರ ಪದ್ಯಗಳನ್ನು ಹೇಳುವಾಗಲೆಲ್ಲ ಬಂದು ಕೂತು ಶ್ರದ್ಧೆಯಿಂದ ಕೇಳುತ್ತಿದ್ದ ಅಜ್ಜ, ಅದು ಮುಗಿದ ಮೇಲೆ ಆ ದಾಸರ ಕುರಿತು ವಿವರಗಳನ್ನೂ ಕೊಡುತ್ತಿದ್ದರು. ಕುಮಾರವ್ಯಾಸ ಭಾರತವನ್ನು ಅದೆಷ್ಟು ಚೆಂದ ಹೇಳುತ್ತಿದ್ದರೆಂದರೆ, ನಮಗೆಲ್ಲ ಕರ್ಣನೆಂದರೆ ಇಷ್ಟವಾಗಲು ಕಾರಣನೇ ಕುಮಾರವ್ಯಾಸ ಎನ್ನುತ್ತ ನಮ್ಮ ಕರ್ಣದೊಳಗೂ ಕರ್ಣನನ್ನು ಇಳಿಸಿಬಿಡುತ್ತಿದ್ದರು.

ನನಗೆ ತುಂಬ ಕುತೂಹಲ ಎನಿಸಿದ್ದೆಂದರೆ ದೇವರೆಂದರೆ ಸಿಡಿದುಬೀಳುತ್ತಿದ್ದರು ಅಜ್ಜ. ಅಜ್ಜಿ, ದೊಡ್ಡಮ್ಮಂದಿರೆಲ್ಲ ಅಪಾರವಾಗಿ ದೈವಭಕ್ತಿ ಇಟ್ಟುಕೊಂಡಿದ್ದರೆ ಅಜ್ಜ ಮಾತ್ರ ಅದರಿಂದ ಮಾರುದೂರ. ಅಜ್ಜಿಗೆ ಮಾತುಕೊಟ್ಟಂತೆ ಪ್ರತಿದಿವಸ ದೇವರ ಪೂಜೆಯನ್ನೇನೋ ಮಾಡುತ್ತಿದ್ದರು. ಆದರೆ ಬೈದುಕೊಂಡೇ ಮಾಡುತ್ತಿದ್ದರು. ಒಮ್ಮೆ ಅವರಿಗೆ ಆಸ್ತಮಾ ಆಗಿ ಮಲಗಿಬಿಟ್ಟಿದ್ದರು. ಆಗ ಅವರು ‘ಈ ಆಸ್ತಮಾಕ್ಕೆ ಥ್ಯಾಂಕ್ಸ್ ಹೇಳುತ್ತೇನೆ. ಇದರಿಂದ ನಾನು ದೇವರ ಪೂಜೆ ಮಾಡುವುದು ತಪ್ಪಿತಲ್ಲ’ ಎಂದದ್ದು ಈಗಲೂ ನನ್ನ ನೆನಪಿನಲ್ಲುಳಿದಿದೆ. ಅಲ್ಲದೆ ‘ನನಗೆ ಇಬ್ಬರು ಹೆಂಡತಿಯರು, ಒಂದು ನನ್ನ ಧರ್ಮಪತ್ನಿ, ಇನ್ನೊಂದು ಆಸ್ತಮಾ’ ಎನ್ನುತ್ತಿದ್ದರು. ಅಂದರೆ ನೋವನ್ನೂ ತಿಳಿಹಾಸ್ಯವಾಗಿಸುವ ಕಲೆ ಅವರಿಗೆ ಒಲಿದಿತ್ತು.

ಹೀಗೆಲ್ಲ ಇದ್ದ ಅಜ್ಜ ಇಷ್ಟೊಂದು ದೊಡ್ಡ ಪತ್ರಕರ್ತನಾಗಿದ್ದ, ನಾಡು ಗುರುತಿಸುವಂತಹ ಕೆಲಸ ಮಾಡಿದ್ದ, ದೊಡ್ಡ ಸಾಹಿತಿಯಾಗಿದ್ದ ಎನ್ನುವುದು ತಿಳಿದದ್ದೇ ನಾವು ಮಧ್ಯವಯಸ್ಸನ್ನು ದಾಟಿದ ಮೇಲೆ. ಅವರ ಪದಾರ್ಥ ಚಿಂತಾಮಣಿಯಾಗಲಿ, ಲಾಂಗೂಲಾಚಾರ್ಯನಾಗಿ ಬರೆದ ಹರಟೆಯಾಗಲಿ, ಅನುವಾದ ಕೃತಿಗಳಾಗಲಿ, ವಿಜ್ಞಾನ ಲೇಖನಗಳಾಗಲಿ ಎಲ್ಲವನ್ನೂ ನಾನು ಓದಿದ್ದು ಈ ದಿನಗಳಲ್ಲಿ. ಈಗ ಅನಿಸುತ್ತಿದೆ, ಈ ಅಜ್ಜ ಅದೆಷ್ಟು ಎತ್ತರದಲ್ಲಿದ್ದ, ನಾವು ಆತನ ಕುರಿತು ಅಧ್ಯಯನ ಮಾಡಬೇಕಾದ್ದು ಎಷ್ಟೊಂದು ಇತ್ತು ಎಂಬುದಾಗಿ.

ಅಜ್ಜನನ್ನು ನೆನಪಿಸಿಕೊಳ್ಳಲು ಈಗ ಕೆಲವು ಕಾರಣಗಳಿವೆ. ಈಗ ಸಂಸ್ಕೃತವೇಕೆ ಬೇಕು, ಕನ್ನಡವೊಂದೇ ಸಾಕು ಎಂದು ಕನ್ನಡ, ಎಲ್ಲರ ಕನ್ನಡ, ಸಂಸ್ಕೃತ ಎಂಬೆಲ್ಲ ಭಾಷೆಯ ಕುರಿತಾದ ಈ ಕಿತ್ತಾಟಗಳು ನಡೆಯುತ್ತಿರುವ ಸಂದರ್ಭದಲ್ಲಿ ತಾತ ಬದುಕಿದ್ದರೆ ಯಾವ ಪ್ರತಿಕ್ರಿಯೆ ಅವರಿಂದ ಬರುತ್ತಿತ್ತು ಎಂದು ಯೋಚಿಸುತ್ತೇನೆ. ಭಾಷೆಯೊಂದು ಬೇರೆಬೇರೆ ಮೂಲಗಳಿಂದ ಎರವಲು ಪಡೆದ ಒಂದು ಶಿಷ್ಟ ಸಂಸ್ಕೃತಿಯಾಗುತ್ತದೆಂಬುದನ್ನು ಬರೆದೇ ಬದುಕಿ ತೋರಿದವರು. ಶಬ್ದಗಳ ವ್ಯುತ್ಪತ್ತಿಯ ಕುರಿತು ಹೆಕ್ಕಿಹೆಕ್ಕಿ ಕನ್ನಡಕ್ಕೆ ಒದಗಿಸಿಕೊಟ್ಟವರು ಅವರು.

ನಿಜಕ್ಕೂ ಭಾಷೆ ತೀರ ತರ್ಕಶೂನ್ಯ most illogical ಆಗಿದೆ. ಮತ್ತೆ ನಾವು ನಮ್ಮ ತರ್ಕಶಾಸ್ತ್ರವನ್ನು ಕಟ್ಟಿ ಅದು ಬಹುಭದ್ರ ಕಟ್ಟಡವೆಂದು ಭಾವಿಸುತ್ತೇವೆ- ಎನ್ನುತ್ತಿದ್ದರು ಅಜ್ಜ. ಅದಕ್ಕೆ ಉದಾಹರಣೆಗಳು ಹೀಗಿವೆ...

ಶಬ್ದ ಸೃಷ್ಟಿಯಲ್ಲಿ, ಅರ್ಥದಾನದಲ್ಲಿ ಮಾನವಕುಲದ ಸಮಾನ ಚಿಂತನೆಗೆ ಅಜ್ಜ ಮನುಷ್ಯ ಶಬ್ದವನ್ನು ಉದಾಹರಿಸುತ್ತಾರೆ. ‘ನನ್ನ ಮನುಷ್ಯನನ್ನು ಕಳುಹಿಸುತ್ತೇನೆ’ ಎನ್ನುವಾಗ ಮನುಷ್ಯ ಸೇವಕನೆಂಬ ಅರ್ಥಕ್ಕೆ ತಿರುಗುತ್ತದೆ. ದ್ರಾವಿಡದಲ್ಲಿ ಆಳ್ ಎಂದರೆ ಮನುಷ್ಯನೂ ಹೌದು, ಸೇವಕನೂ ಹೌದು. ಅರಬ್ಬಿಯಲ್ಲಿ ಆದ್ಮಿ ಎಂದರೆ ಮನುಷ್ಯ. ನಮ್ಮ ಮನುವಿನಂತೆ ಅರಬ್ಬರಲ್ಲದೆ ಹೀಬ್ರೂ ಜನಾಂಗಗಳಿಗೂ ಆದಮ್ ಮೂಲಪುರುಷನೂ ಆದಿ ಋಷಿಯೂ ಆಗಿದ್ದಾನೆ. ಅಲ್ಲಿ ಕೂಡ ಆದ್ಮಿ ಶಬ್ದ ಸೇವಕನೆಂಬ ಅರ್ಥವನ್ನು ಸಂಪಾದಿಸಿದೆ. ಖಂಡಾಂತರದಲ್ಲಿ ಇಂಗ್ಲಿಷ್‍ನ man ಕೂಡ ನಮ್ಮಲ್ಲಿರುವಂತೆ ಸೇವಕನೆಂಬ ಅರ್ಥ ಪಡೆಯುತ್ತದೆ. I will send my man ಎನ್ನುತ್ತಾರೆ. ಅಂದರೆ ಎಷ್ಟೆಷ್ಟು ದೂರ ದೂರದ ಮಾನವರು, ಎಷ್ಟು ಸಮಾನವಾಗಿ ಆಲೋಚಿಸುತ್ತಾರೆ, ಎಷ್ಟು ಸಮಾನವಾಗಿ ಮಾತು ನಿರ್ಮಿಸಿಕೊಳ್ಳುತ್ತಾರೆ ಮತ್ತು ಎಷ್ಟು ನಿರ್-ಅರ್ಥಕವಾಗಿ ಹೋರಾಡುತ್ತಾರೆ ಎಂದು ವಿವರಿಸುತ್ತಾರೆ.

ಶಬ್ದಗಳು ಭಾಷೆಯಿಂದ ಭಾಷೆಗೆ ಹೋದಾಗ ಹೊಸ ಅವತಾರ ತಾಳುತ್ತವೆ. ಕಾಲಕ್ಕೆ ತಕ್ಕ ಕೋಲ ಕಟ್ಟುತ್ತವೆ. ಅಜ್ಜ ಕೂಡ ಶಬ್ದಗಳ ಭವಾವಳಿಯನ್ನು ಶೋಧಿಸುತ್ತ ಸಂಸ್ಕೃತ, ಪ್ರಾಕೃತ, ತಮಿಳು, ಬಂಗಾಳಿ, ಮರಾಠಿ, ಹಿಂದಿ, ಉರ್ದು, ಪರ್ಷಿಯನ್, ಅರಬ್ಬಿ, ಇಂಗ್ಲಿಷ್, ಪೋರ್ಚುಗೀಸ್ ಶಬ್ದಗಳನ್ನು ತನಿಖೆ ಮಾಡುತ್ತಾರೆ. ಈ ಶಬ್ದ ಜಿಜ್ಞಾಸೆಯಲ್ಲಿ ಸ್ವಾರಸ್ಯಕರ ಮಾಹಿತಿಗಳು ಗೊತ್ತಾಗುತ್ತವೆ. ರಿಕ್ಷಾ ಜಪಾನಿ ಮೂಲದ ಶಬ್ದ.- ಜಿನ್‍ರಿಕಿಷಾ (ಜಿನ್ - ಮನುಷ್ಯ, ರಿಕಿ - ಶಕ್ತಿ, ಷಾ - ವಾಹನ). ಸಂಸ್ಕೃತದ ಪೃಥುಕ (ಹೊಸ ಪ್ರಾಯದ ಪ್ರಾಣಿ) ಪ್ರಾಕೃತದಲ್ಲಿ ‘ಹುಡುಅ’ ಆಗಿ ಕನ್ನಡದ ಹುಡುಗ ಆಗಿದೆ ಎಂದು ಬರೆದಿದ್ದಾರೆ.

ಇದೆಲ್ಲಕ್ಕಿಂತ ಮುಖ್ಯವಾಗಿ ಅವರು ಮಹಿಳಾ ದೃಷ್ಟಿಕೋನದಿಂದ ಆ ಕಾಲದಲ್ಲೇ ಯೋಚಿಸಿದ್ದು ಮತ್ತು ಆ ಶಬ್ದಗಳ ಹಿನ್ನೆಲೆಯನ್ನೂ ವಿವರಿಸಿದ್ದು ಒಬ್ಬ ಮಹಿಳೆಯಾಗಿ ನನಗೆ ಅಚ್ಚರಿಯೆನಿಸುತ್ತದೆ.

ಹೆಣ್ಣನ್ನು ನಿರ್ದೇಶಿಸಲು ನಮ್ಮಲ್ಲಿರುವ ಶಬ್ದಗಳು, ಪುರುಷ ಪರಂಪರೆಯಲ್ಲಿರುವ ಹೆಣ್ಣನ್ನು ಕುರಿತ ಇಷ್ಟ ಅನಿಷ್ಟಗಳನ್ನು, ಕನಸುಗಳನ್ನು ವಿವರಿಸುತ್ತವೆ. ಜಾಯಾ-ಜನನ ಕೊಡುವವಳು, ಪುರಂಧ್ರೀ-ತುಂಬಾ ಫಲವೀಯುವವಳು, ಸತಿ-ಸತ್ಯವಾಗಿರುವವಳು, ವಧು-ಕರೆದುಕೊಂಡು ಅಥವಾ ಹೊತ್ತುಕೊಂಡು ಬಂದವಳು, ಯೋಷಿತ್-ಜವ್ವನಗಿತ್ತಿ, ಅಂಗನೆ-ಮಾಟವಾದ ಅಂಗಗಳುಳ್ಳವಳು, ಅಸಿಯಳ್-ತೆಳ್ಳಗಿರುವವಳು, ಮಹಿಳಾ-ಉತ್ತೇಜನಗೊಳಿಸುವವಳು, ವನಿತಾ-ಆಸೆಪಡುವಂತೆ ಮಾಡುವವಳು, ರಮಣಿ-ರಮಿಸುವಂತೆ ಪ್ರೇರಿಸುವವಳು, ಲಲನಾ- ಲಲ್ಲೆಗರೆಯುವವಳು, ಪ್ರಮದೆ-ಕಾಮೋನ್ಮಾದವುಳ್ಳವಳು, ವಶಾ-ಅಂಕೆಯಲ್ಲಿರುವವಳು, ಮಾನಿನಿ-ಹಮ್ಮುಳ್ಳವವಳು, ಭಾಮಿನಿ-ಕೋಪ, ಛಲವುಳ್ಳವಳು. ‘ಇಷ್ಟೆಲ್ಲ ಗಡುಸು ಇದ್ದೂ ಅವಳು ಅಬಲಾ ಆಗಿರಬೇಕು. ಅಂದರೆ ಮಾತ್ರ ಅವಳನ್ನು ಕಾಯುವ ಹೆಮ್ಮೆಯನ್ನು ಗಂಡು ಅನುಭವಿಸಬಲ್ಲ. ಇಂಥ ಎಲ್ಲ ಪರಸ್ಪರ ವಿರೋಧವಾದ ಗುಣ ಲಕ್ಷಣಗಳನ್ನು ಭಾರತೀಯ ರೊಮ್ಯಾಂಟಿಕ್ ಗಂಡಸು ಹೆಣ್ಣಿನಲ್ಲಿ ನಿರೀಕ್ಷಿಸಿದ್ದಾನೆ. ಇದು ಈ ಶಬ್ದಗಳು ಕೊಡುವ ಮಾಹಿತಿ’ ಎನ್ನುತ್ತಾರೆ ಅಜ್ಜ.

‘ಶಬ್ದಗಳ ಬೇರುಗಳನ್ನು ಹುಡುಕುವುದಷ್ಟೇ ಪದಾರ್ಥ ಚಿಂತಾಮಣಿಯ ಉದ್ದೇಶವಲ್ಲ. ನಾನು ಶಬ್ದ ಮೂಲವನ್ನು ಶೋಧಿಸುವುದರಿಂದ ತೃಪ್ತನಾಗಿಲ್ಲ. ಅವು ಬೇರೆ ಯಾವಯಾವ ಐತಿಹಾಸಿಕ, ನರವಂಶ ಚರಿತ್ರದ, ಅರ್ಥ ವ್ಯವಸ್ಥೆಯ, ಸಂಸ್ಕೃತಿ ಸಂಪ್ರದಾಯಗಳ, ಜನಾಂಗದ ವಲಸೆಯ ಬಗ್ಗೆ ಗುಟ್ಟು ಹೇಳುತ್ತವೆ ಎಂದು ವಿಚಾರಿಸಿದ್ದೇನೆ. ಮನುಷ್ಯನ ವಿಚಾರ ರೀತಿಯಲ್ಲಿರುವ ಸಾಮ್ಯ, ವೈಷಮ್ಯಗಳನ್ನು ಬೇರೆ ಭಾರತೀಯ, ವಿದೇಶೀಯ ಭಾಷೆಗಳ ಪದಗಳ ವಿಕಾಸದೊಡನೆ ಹೋಲಿಸಿದ್ದೇನೆ’ ಎನ್ನುತ್ತಾರೆ ಅಜ್ಜ. ಪದಾರ್ಥ ಚಿಂತಾಮಣಿಯ ಜನಪ್ರಿಯತೆ ಎಷ್ಟೆಂದರೆ ‘ಲಾಂಗೂಲಾಚಾರ್ಯನಾಗಿ ಕಾಲು ಶತಮಾನದಿಂದ ಗುರುತಿಸಲ್ಪಡುತ್ತಿದ್ದವನನ್ನು ಈ ‘ಚಿಂತಾಮಣಿ’ ವಿಮೋಚನೆಗೊಳಿಸಿಬಿಟ್ಟಿತು ಎಂದೂ ಹೇಳಿಕೊಂಡಿದ್ದುಂಟು.

ಅಜ್ಜ ಸರ್ವ ಕುತೂಹಲಿಯಾಗಿದ್ದರು. ಅವರ ಆಸಕ್ತಿಗೆ ಬರದ ವಿಷಯವೇ ಇರಲಿಲ್ಲ. ಸೀರೆಯಿಂದಲೇ ಮಹಾಭಾರತವಾಯಿತು, ದ್ರೌಪದಿ ಫ್ರಾಕ್ ತೊಟ್ಟಿದ್ದಿದ್ದರೆ ಅಥವಾ ತಮಿಳು ರೀತಿಯಲ್ಲಿ ಸೀರೆ ಉಟ್ಟಿದ್ದಿದ್ದರೆ ವಸ್ತ್ರಾಪಹರಣಕ್ಕೆ ಅವಕಾಶವಿರುತ್ತಿರಲಿಲ್ಲ ಎಂದಿದ್ದರು. ದಶರಥನಿಗೆ ಒಬ್ಬಳು ಹೆಂಡತಿ ಕಡಿಮೆ ಇದ್ದಿದ್ದರೆ ಅಥವಾ ಆ ಹೆಂಡತಿಯ ಮನಸ್ಸು ಸ್ವಲ್ಪ ಕಡಿಮೆ ಗಟ್ಟಿಯಾಗಿದ್ದಿದ್ದರೆ ಅಥವಾ ಅವನ ರಥದ ಗಾಲಿಯ ಕೀಲು ಸ್ವಲ್ಪ ಹೆಚ್ಚು ಗಟ್ಟಿಯಾಗಿದ್ದಿದ್ದರೆ - ರಾಮಾಯಣವೇ ಆಗುತ್ತಿದ್ದಿಲ್ಲ ಎಂಬುದು ಕೂಡ ಅವರದೇ ಮಾತು.

ಅವರ ಬಲು ಇಷ್ಟವಾದ ಸಾಹಿತ್ಯಪ್ರಕಾರ ಕಾವ್ಯ. ಪ್ರಾರಂಭದಲ್ಲಿ ದೀರ್ಘವಾದ ಕವನಗಳನ್ನು ಬರೆದರೂ ನಂತರದ ದಿನಗಳಲ್ಲಿ ಚುಟುಕು ಕವನಗಳನ್ನು ಬರೆದಿದ್ದಾರೆ. ನವ್ಯ ಕವಿಗಳನ್ನು ಹೀಗೆ ಕವಿತೆಯೊಂದರಲ್ಲಿ ಲೇವಡಿ ಮಾಡಿದ್ದಾರೆ. ಅದು ಇಂತಿದೆ:

ಕವಿಯೊಬ್ಬ ಕವಿತೆಯನ್ನು

ಗಾಜಿನಲ್ಲಿ ಬರೆದ

ಕೈತಪ್ಪಿ ಕೆಳಗೆ ಒಗೆದ

ಕೈಗೆ ಬಂದಂತೆ ಚೂರುಗಳ ಜೋಡಿಸಿದ

ನವ್ಯಕಾವ್ಯ ಇದೆಂದು ಕರೆದ

ಮೂಲತಃ ಸೌಮ್ಯ ಸ್ವಭಾವದವರಾಗಿದ್ದ ಅಜ್ಜ, ಆಕಸ್ಮಿಕಗಳಿಂದಲೇ ತಮ್ಮ ಬದುಕನ್ನು ರೂಪಿಸಿಕೊಂಡವರು. ಈಗ ಅಂಗೈಯಲ್ಲಿ ಪ್ರಪಂಚವನ್ನೇ ಇಟ್ಟುಕೊಂಡಿರುವ ನಾನು ಅವರ ಪುಸ್ತಕಗಳು, ಲೇಖನಗಳನ್ನೆಲ್ಲ ಓದುವಾಗ ಸಿಗುವ ಬೇರೆಬೇರೆ ದೇಶಗಳ ಚಿಕ್ಕ-ಚಿಕ್ಕ ಘಟನೆಗಳು, ಶಬ್ದಗಳ ವಿವರಣೆ, ಹರಟೆ, ವಿಜ್ಞಾನ ಲೇಖನಗಳು ಕೊಡುವ ಮಾಹಿತಿಯಿಂದ ಪುಳಕಿತಳಾಗಿದ್ದೇನೆ. ಮಾಹಿತಿ ಸಂಗ್ರಹಿಸಲು ಕಷ್ಟವಾದ ಆ ದಿನಗಳಲ್ಲಿ ಪುಸ್ತಕವನ್ನು ಓದಿ ಬರೆದೇ ಅಜ್ಜ ಜೀವನವನ್ನು ಹೇಗೆ ಸಾಗಿಸಿದರೆಂದು ಆಶ್ಚರ್ಯಪಟ್ಟಿದ್ದೇನೆ. ಅನೇಕ ಸಲ ಅನಿಸಿದ್ದಿದೆ, ಎಸ್ಸೆಸ್ಸೆಲ್ಸಿಯವರೆಗೆ ಮಾತ್ರ ಓದಿದ ಅಜ್ಜ ಎಷ್ಟೊಂದನ್ನು ಬರೆದ! ಛೇ, ಆತನೊಂದಿಗೆ ನಾನು ಇನ್ನಷ್ಟು ಒಡನಾಡಬೇಕಿತ್ತು.

ಕಾರಕೂನನಿಂದ ಪತ್ರಕರ್ತನವರೆಗೆ

ಪಾಡಿಗಾರು ವೆಂಕಟರಮಣ ಆಚಾರ್ಯರು ಹುಟ್ಟಿದ್ದು 1915ರ ಫೆಬ್ರುವರಿ 6ರಂದು. ಪಾ.ವೆಂ. ತಮ್ಮ ಐದನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಸೋದೆ ಮತ್ತು ಉಡುಪಿಯಲ್ಲಿ ತಮ್ಮ ಬಾಲ್ಯವನ್ನು ಕಳೆದರು. ಹತ್ತನೇ ತರಗತಿಯವರೆಗೆ ಓದಿದ ಅವರು ಹಣದ ಅಡಚಣೆಗಳಿಂದಾಗಿ ಮುಂದೆ ಓದಲು ಆಗಲಿಲ್ಲ. ಜೀವನ ನಿರ್ವಹಣೆಗಾಗಿ ಉಪಾಧ್ಯಾಯರಾಗಿ, ಅಂಗಡಿಯಲ್ಲಿ ಮಾರಾಟಗಾರರಾಗಿ, ಕಾರಕೂನರಾಗಿ, ಲೆಕ್ಕಪತ್ರ ನೋಡಿಕೊಳ್ಳುತ್ತಿದ್ದರು. ನಂತರ ಮದ್ರಾಸಿಗೆ ಹೋಗಿ, ಅಲ್ಲಿ ಹೋಟೆಲೊಂದರಲ್ಲಿ ಬಿಲ್ ರೈಟರ್ ಆಗಿ ಸೇರಿದರು. ಅದು ಎರಡನೇ ಮಹಾಯುದ್ಧದ ಅವಧಿಯಾದ್ದರಿಂದ ಸ್ವಲ್ಪೇ ಸಮಯದಲ್ಲಿ ಧಾರವಾಡಕ್ಕೆ ಹಿಂದಿರುಗಬೇಕಾಯಿತು. ಮುಂದೆ ಪತ್ರಕರ್ತರಾಗಿ ವೃತ್ತಿ ಆರಂಭಿಸಿದ ಅವರು 1956ರಲ್ಲಿ ‘ಕಸ್ತೂರಿ’ ಮಾಸ ಪತ್ರಿಕೆ ಸಂಪಾದಕತ್ವದ ಹೊಣೆ ಹೊತ್ತು, ದೀರ್ಘಕಾಲ ಕಾರ್ಯನಿರ್ವಹಿಸಿದರು. 1992 ಮೇ 4ರಂದು ಪಾ.ವೆಂ. ಅಸ್ತಂಗತರಾದರು.

ಪಾ.ವೆಂ. ಸಾಹಿತ್ಯ ಸಿರಿ

ಪಾ.ವೆಂ. ಆಚಾರ್ಯ ಅವರ ಲೇಖನಗಳನ್ನು ಸಾಹಿತ್ಯಾಸಕ್ತರ ನೆರವಿನಿಂದ ಸಂಗ್ರಹಿಸಿಡುವ ಕೆಲಸದಲ್ಲಿ ಸುಮಾರು 5-6 ವರ್ಷಗಳಿಂದ ಛಾಯಾ ಅವರು ತೊಡಗಿಸಿಕೊಂಡಿದ್ದಾರೆ. ಇದುವರೆಗೆ ಸಂಗ್ರಹಿಸಿರುವ ಲೇಖನಗಳನ್ನು ಆರ್ಕೈವ್ ಮಾಡಿ ಇಡಲಾಗಿದೆ. pavem.sirinudi.org ಎಂಬ ಅಂತರ್ಜಾಲ ತಾಣದಲ್ಲಿ ಪಾವೆಂರವರ ಪುಸ್ತಕಗಳು, ಛಾಯಾಚಿತ್ರಗಳು, ಪತ್ರಿಕಾವರದಿಗಳು, ಕೈಬರಹಗಳು ಮುಂತಾದವುಗಳನ್ನು ಜೋಡಿಸಿಡಲಾಗಿದೆ. ಕಾಂತಾವರ ಕನ್ನಡ ಸಂಘದಲ್ಲಿ ‘ಪಾ.ವೆಂ. ಆಚಾರ್ಯ ಪತ್ರಿಕಾ ಮಾಧ್ಯಮ ಪ್ರಶಸ್ತಿ’ಯನ್ನು ಈ ವರ್ಷದಿಂದ ಪ್ರಾರಂಭಿಸಲಾಗಿದೆ.

ನಿರೂಪಣೆ: ಭಾರತಿ ಹೆಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT