ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಹೋಳಿಯ ಅಗ್ನಿದಿವ್ಯದ ಮುಂದೆ...

Last Updated 25 ಮಾರ್ಚ್ 2021, 8:36 IST
ಅಕ್ಷರ ಗಾತ್ರ

ಶಿವರಾತ್ರಿ ಕಳದ್ರ ಸಾಕು, ಕಲ್ಯಾಣ ಕರ್ನಾಟಕ ಭಾಗದ ಹಿರಿಯರು ಕಣ್ಣಿಗೆ ಕಣ್ಣು ಹತ್ತದ್ಹಂಗ ಮನಿ ಕಾಯ್ತಾರ. ಯಾಕಂದ್ರ ಅಂಗಳದಾಗಿನ ಕುರ್ಚಿ, ಸಾಲ್ಯಾಗಿನ ಬೆಂಚು, ಮನೀ ಮುಂದ, ಹಿತ್ತಲದಾಗ ಹೊರಿ ಹಾಕಿದ ಕಟ್ಟಗಿ ಎಲ್ಲಾ ಕಳುವು ಆಗ್ತಾವ.

ಶಿವರಾತ್ರಿಯಿಂದ ಶುಕ್ಲ ಪಕ್ಷ ಶುರುವಾಗ್ತದ. ಹುಣ್ಣಿವಿ ಬರೂದ್ರೊಳಗ ಕತ್ತಲಿದ್ದಾಗ ಕಳುವು ಮಾಡಿ, ಹೋಳಿ ಹುಣ್ಣಿವಿಗೆ ಸುಡೂದು ಉದ್ದೇಶ. ಇವರೇನು ಕಳುವು ಮಾಡಿದ ಕೂಡಲೆ ಕಳ್ಳರು ಆಗೂದಿಲ್ಲ. ತಮ್ಮ ಸಿರಿವಂತಿಕೆ ಹೆಚ್ಚಿಸಾಕ ಕಳುವು ಮಾಡೂದಿಲ್ಲ. ಇವರು ಕದ್ದರು ಅಂತ ಕದ್ದವರ ಮನೆಯವರು ಬಡವರಾಗೂದಿಲ್ಲ. ಆದರೂ ಕದೀತಾರ. ಯಾಕಿದು?

ಈ ಅವಧಿಯೊಳಗ ಎಷ್ಟೇ ಕದ್ದರೂ ಬಾರಾಖೂನ್‌ ಮಾಫ್‌ ಇದ್ದಂಗ. ಮನಸಿನೊಳಗಿನ ದುರಾಸೆಯನ್ನೆಲ್ಲ ಈ ಕ್ರಿಯೆಯೊಳಗ ತಗದು ಹೊರಗ ಹಾಕಲಿ ಅಂತ. ಚಿಳ್ಳಿಮಿಳ್ಳಿ ಹುಡುಗರು, ಮೀಸಿ ಬಂದು ಬಾಯಾಗ ಬೀಳುವಂಥ ಎಳೇ ಯುವಕರು ಡಬ್ಬಿ ಹಿಡ್ಕೊಂಡು ಪಟ್ಟಿ ಎತ್ತತಾರ. ಎಲ್ಲಿಯೂ ಹದಿಹರೆಯದ ಅಹಂಕಾರ ಬೆಳೀದೆ ಇರೂಹಂಗ ಆಗಲಿ ಅಂತ ಹಿಂಗ ಬೇಡಾಕ ಹಚ್ತಾರ. ಇಲ್ಲಾಂದ್ರ ತಮ್ಮತನವನ್ನು ಪ್ರತಿಷ್ಠಾಪಿಸುವಲ್ಲಿ ಈ ಯುವಕರಲ್ಲಿ ಜೋರು ಮಾಡುವ ಮನೋಭಾವ, ಎದಿರು ಮಾತನಾಡುವ, ಜೋರು ಧ್ವನಿಯಲ್ಲಿ ಮಾತನಾಡುವ ಆ ವಯಸ್ಸಿನ ಜೋಷು, ಹೀಗೆ ಕೇಳುವುದರಲ್ಲಿ, ಬೇಡುವುದರಲ್ಲಿ ತಣ್ಣಗಾಗ್ತದ.

ಹಂಗ ಬೇಡೂಮುಂದ ಯಾರರೆ ಕೊಡಲಿಲ್ಲಂದ್ರ ಜೋರೆಗೆ ಬೈದು ತಣ್ಣಗಾಗ್ತಾರ. ಹಂಗ ತಣಿಸುವ ಪ್ರಕ್ರಿಯೆ ಹೀಗೆ ಕೇಳುವುದರಿಂದ ಒಂದು ಹಂತಕ್ಕ ಬರ್ತದ.

ಇನ್ನ ಹೋಳಿ ಹುಣ್ಣಿವಿ ಹಿಂದಿನ ದಿನ, ಪ್ರತಿ ಓಣಿಯೊಳಗೂ ಒಬ್ಬ ಕಾಮಣ್ಣಗ ದಹಿಸ್ತಾರ. ಕಳುವು ಮಾಡಿದ್ದ ಎಲ್ಲ ಕಟ್ಟಿಗೆಯು ಒಂದು ಕಡೆ ಗುಡ್ಡ ಹಾಕಿರ್ತಾರ. ಅಗಸರ ಮನಿಯಿಂದ ಕತ್ತಿ ತೊಗೊಂಡು ಬರ್ತಾರ. ಆ ಕತ್ತಿ ಬೆದರದೆ ಒಂದೆರಡು ಸುತ್ತು ಹಾಕಿಸುವ ಹಂಗ ಕೂರುವ ಯುವಕನಿಗೆ ಸಕ್ಕರಿ ಸರ ಹಾಕಿ ಸನ್ಮಾನ ಮಾಡ್ತಾರ. ಸಕ್ಕರಿ ಸರ ಅಂದ್ರ, ಬತ್ತಾಸಿನ ಸರ ಹಾಕಿರ್ತಾರ. ಬಣ್ಣಬಣ್ಣದ ಬತ್ತಾಸಿನ ಸರ ಹಾಕಸ್ಕೊಳ್ಳಾಕ ನಾಮುಂದ, ತಾ ಮುಂದ ಅಂತ ಕತ್ತಿ ಮುಂದ ಕುಂದ್ರಾಕ ಹುಡುಗ್ರು ಓಡಾಡ್ತಾರ.

ಮನ್ಯಾಗಿರುವ ಐದು ವರ್ಷದೊಳಗಿನ ಮಕ್ಕಳಿಗೂ ಈ ಬತ್ತಾಸಿನ ಸರ ಹಾಕ್ತಾರ. ಸಣ್ಣೂ ಹುಡುಗ್ರಂತೂ ಅವು ಬಾಯಾಗ ಇಟ್ಕೊಂಡು, ಜೊಲ್ಲು ಸುರಸ್ಕೊಂತ, ಸುರಕ್‌ ಸುರಕ್‌ ಅಂತ ಸಕ್ರಿ ಸರ ತಿನ್ನೂದು ನೋಡೂದೆ ಒಂದು ಛಂದ.

ಬೆಂಕಿ ಜೋರು ಬಿದ್ದಾಗ ಮನ್ಯಾಗಿನ ಹೆಣ್ಮಕ್ಕಳು ಹೊರಗ ಬರೂದಿಲ್ಲ. ಯಾಕಂದ್ರ ಆ ಹೊತ್ತಿನಾಗ, ಇದ್ದ ಬದ್ದ ಎಲ್ಲ ಅಶ್ಲೀಲ ಬೈಗಳು, ಹಾಡು ಹಾಡುವ, ಚೀರುವ ಸ್ವಾತಂತ್ರ್ಯ ಇರೂದು ಇದೇ ಹಬ್ಬದಾಗ. ಇದೇ ಹೊತ್ತಿನಾಗ. ಒಮ್ಮೆ ಬೆಂಕಿ ಇಳೀತಂದ್ರ ಹರೆಯದ ಕಾವು ಇಳಿದ್ಹಂಗ ಇವರೊಳಗಿನ ಕಾಮನೆಗಳನ್ನೆಲ್ಲ ಬೆಂಕಿಗೆ ಹಾಕಿ ಪರಿಶುದ್ಧರಾಗಿರ್ತಾರ.

ಇದೊಂಥ ’ಡಿಸ್ಟ್ರೆಸ್‌’ ಆಗುವ ವಿಧಾನ. ಮನದೊಳಗೆ ಹಿಮಗಲ್ಲಿನಂತೆ ಕೂರುವ ಭಾವೋದ್ರೇಕಗಳೆಲ್ಲ ಈ ಹಬ್ಬದ ನೆವದೊಳಗ ಬೈಯ್ಯೂದ್ರೊಳಗ, ಹೊಯ್ಕೊಳ್ಳೂದ್ರೊಳಗ, ಅಂಗಿ ಹರಕೊಳ್ಳೂದ್ರೊಳಗ ಕರಗಿ ಹೋಗ್ತಾವ. ಹಂಗೆ ಈ ರಾಗ ದ್ವೇಷಗಳ ಬಣ್ಣಗಳನ್ನೇ ಬಳಕೊಂಡೋರು, ಒಮ್ಮೆ ಸ್ನಾನ ಮಾಡಿ ಮಲಗಿದ್ರ, ಎಲ್ಲ ಬಣ್ಣಗಳೂ ತೊಳಕೊಂಡು ಹೋಗಿರ್ತಾವ.

ಹೋಳಿಯ ಕಾಮನ ಬೆಂಕಿಯೊಳಗ ಸುಟ್ಟ ಎಲ್ಲ ರಾಗದ್ವೇಷಗಳೂ, ಬಣ್ಣಗಳು ಬದುಕಿನ ಮುಖವಾಡವನ್ನು ಕಳಚುವಂತೆ ತೊಳೆದು ಹಾಕುತ್ತದೆ. ಹೋಳಿಯ ಮರುದಿನದಿಂದ ನಮ್ಮೊಳಗಿನ ದುರಾಸೆ, ಬಯಕೆ, ಬೇಡಿಕೆಗಳೆಲ್ಲವೂ ಕುಂದುತ್ತವೆ. ತಮ್ಮ ಹಟವನ್ನು ಕಳೆದುಕೊಳ್ಳುತ್ತವೆ. ಜೊತೆಗೆ ಉನ್ನತಿಯನ್ನು ಸಾಧಿಸುವ ಸಾತ್ವಿಕ ಗುಣವನ್ನು ತಂದು ಕೊಡುತ್ತವೆ. ಆಗ ಸುಟ್ಟ ಕಾಮನ ಬದಲಿಗೆ, ಈ ಚಂದನೆಯ ಕಾಮನನ್ನು ಪ್ರತಿಷ್ಠಾಪಿಸಲಾಗುತ್ತದೆ. ಜೀವನ ಪ್ರೀತಿಯ ಅರಳಲಿ ಎಂಬ ಆಶಯದೊಂದಿಗೆ. ಬಣ್ಣಗಳ ಹಬ್ಬ, ಬದುಕಿಗೆ ಹೀಗೆ ಚಂದನೆಯ ಬಣ್ಣವನ್ನು ತಂದು ಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT