ಬುಧವಾರ, ಸೆಪ್ಟೆಂಬರ್ 18, 2019
28 °C

ರೈಲೆಂಬೋ ಮಿನಿ ಭಾರತ

Published:
Updated:
Prajavani

60-70ರ ದಶಕದ ಮಕ್ಕಳಿಗೆ ರೈಲು ಒಂದು ಅತ್ಯಾಶ್ಚರ್ಯಕರವಾದ ವಸ್ತುವಾಗಿತ್ತು. ಎಲ್ಲಿಯಾದರೂ ರೈಲು ಕಂಡರೆ ಅದು ಕಣ್ಣಿಗೆ ಮರೆಯಾಗುವವರೆಗೆ ನಿಂತು ನೋಡುವ ಅಭ್ಯಾಸ ನಮಗಿತ್ತು. ರೈಲು ಪ್ರಯಾಣವೂ ಅಪರೂಪವಾಗಿದ್ದ ಕಾಲ ಅದು. ರೈಲು ನಿಂತ ಕಡೆ ಇಳಿದು ಹೋಗಿ ನಲ್ಲಿಯಿಂದ ನೀರು ಕುಡಿದು ಬರುತ್ತಿದ್ದೆವು. ಇಲ್ಲವೇ ಅಮ್ಮ ತಂದಿರುತ್ತಿದ್ದ ರೈಲು ಚೊಂಬಿನಿಂದ ಪದೆಪದೇ ನೀರು ಕೇಳುತ್ತಾ ಬೈಸಿಕೊಳ್ಳುವುದು ಮಾಮೂಲಾಗಿತ್ತು.

ರೈಲು ಪ್ರಯಾಣ ಈ ಜನ್ಮಕ್ಕೆ ಮತ್ತೆ ಒದಗಿ ಬಂದದ್ದು ಅನಿರೀಕ್ಷಿತವಾಗಿ. ಬೆಂಗಳೂರಿನಲ್ಲಿ ಸುಖವಾಗಿ ಇದ್ದ ನಾನು ಇಲಾಖೆಯ ಮುಖ್ಯಸ್ಥರನ್ನು ನಿಂದಿಸಿದೆ ಎಂದು ಮಹಾನುಭಾವರೊಬ್ಬರು ಚಾಡಿ ಹೇಳಿದ ಕಾರಣ ನನ್ನನ್ನು ಮಂಡ್ಯದ ವಸೂಲಿ ವಿಭಾಗಕ್ಕೆ ಬಿಸಾಡಲಾಯ್ತು.

ನಾನು ಬೆಂಗಳೂರಿಂದ 6-45 ರ ರೈಲಿಗೆ ಹೊರಡುತ್ತಿದ್ದೆ. ರೈಲಿನಲ್ಲಿ ಪ್ರತಿದಿನ ಪ್ರಯಾಣ ಮಾಡುವ ಟೀಮುಗಳಿದ್ದವು. ಈ ತಂಡಗಳು ತಮ್ಮವರಿಗೆ ಸೀಟು ಹಿಡಿದು ಗುಂಪಾಗಿ ಸೇರಿಕೊಂಡು ತಿಂಡಿ-ಕಾಫಿû ಸೇವನೆ, ಹರಟೆಗಳನ್ನು ಬಿಡುಬೀಸಾಗಿ ನಡೆಸುತ್ತಿದ್ದರು. ನಾನು ಇವರ ಜೊತೆಗೆ ಸೇರದೇ ಕೂತು ಇವರನ್ನೆಲ್ಲಾ ಗಮನವಿಟ್ಟು ನೋಡುತ್ತಿದ್ದೆ. ಇನ್ನುಳಿದಂತೆ ಬಂದು ಹೋಗುವ ಜನ, ಅವರ ಮಾತು-ಕಥೆಗಳೆಲ್ಲಾ ಕಿವಿಯ ಮೇಲೆ ಬೀಳುತ್ತಿದ್ದವು. ಮಾತನಾಡುವವರ ಗಮನಕ್ಕೆ ಬಾರದ ಹಾಗೆ ಕೇಳಿಸಿಕೊಳ್ಳಬೇಕು. ಆದರೆ ಪ್ರತಿಕ್ರಿಯಿಸಬಾರದು. ಆಗ ಬದುಕಿನ ನಾನಾ ಚಿತ್ರಣಗಳು ಹಸಿಹಸಿಯಾಗಿ ಪರಿಚಯವಾಗುತ್ತವೆ.

ಪ್ರತೀದಿನ ಬರುತ್ತಿದ್ದವರಲ್ಲಿ ಒಂದಷ್ಟು ಜನ ಹೆಂಗಸರೂ ಇರುತ್ತಿದ್ದರು. ಅವರೆಲ್ಲಾ ಒಂದೆಡೆ ಸೇರಿ ಅವರದೇ ಚರ್ಚೆಗಳಲ್ಲಿ ಮುಳುಗಿ ಹೋಗುತ್ತಿದ್ದರು. ಒಬ್ಬಾಕೆ ಬಸುರಿ ಹೆಂಗಸು ಮಾತ್ರ ಒಂದು ಮೂಲೆಯಲ್ಲಿ ಕೂತು ಬಹಳ ನಿಷ್ಠೆಯಿಂದ ತನ್ನ ಕಂದನಿಗಾಗಿ ದಾರಿಯುದ್ದಕ್ಕೂ ಹೆಮ್ಮಿಂಗ್ ಮಾಡುತ್ತಾ ಕೂತಿರುತ್ತಿದ್ದಳು. ಆಕೆಯ ನಿಷ್ಠೆ ನೋಡಿ ನಾನು ಆಕೆಗೆ ಅರ್ನೆಸ್ಟ್ ಹೆಮಿಂಗ್ ವೇ ಅಂತ ಹೆಸರು ಕೊಟ್ಟುಕೊಂಡೆ. ಒಬ್ಬನಿಗೆ ಸದಾ ಕೈ-ಕಾಲು ಅಲ್ಲಾಡಿಸಿ ಮಾತಾನಾಡುವ ಅಭ್ಯಾಸ! ಆತ ಶೇಕ್ಸ್‌ಪಿಯರಲ್ಲದೇ ಇನ್ನೇನಾಗಲು ಸಾಧ್ಯ? ಸದಾ ಜೋಬಿನಲ್ಲಿ ಕೈ ಇಟ್ಟುಕೊಂಡೆ ತಿರುಗುತ್ತಿದ್ದವ ಜೋಭದ್ರನಾದ.

ಪ್ರತೀದಿನ ಒಬ್ಬನೇ ಬರುತ್ತಿದ್ದ ಆತನ ಮಗ್ಗುಲಲ್ಲಿ ಯಾರೂ ಕೂರುತ್ತಿರಲಿಲ್ಲ. ಅಷ್ಟು ಗಬ್ಬು ಬೆವರು ವಾಸನೆ ಆತನಿಂದ ಹೊರಡುತ್ತಿತ್ತು. ಆತನಿಗೆ ನಾತೇಶ್ವರ ಅಂತ ಹೆಸರು ಕೊಟ್ಟಿದ್ದೆ. ಮೈಸೂರಿನ ಅಧ್ಯಾಪಕನೊಬ್ಬ ಅಲ್ಪಸ್ವಲ್ಪ ಪರಿಚಯವಾಗಿದ್ದ. ಪ್ರತೀದಿನ ಡಬ್ಬಿಯಲ್ಲಿ ಅವಲಕ್ಕಿ ಉಪ್ಪಿಟ್ಟನ್ನೇ ತಂದು ತನ್ನ ಎಂಜಲನ್ನೇ ಎಲ್ಲರಿಗೂ ಕೊಡಲು ಹೋಗುತ್ತಿದ್ದ. ಅವನ ಹೆಸರು ಉಪ್ಪಿಷ್ಟ ಅಂತಿಟ್ಟೆ. ಸುಮಾರು 10-12 ಮಧ್ಯವಯಸ್ಕರ ಗುಂಪೊಂದಿತ್ತು. ಅವರೆಲ್ಲ ಬಿಡದಿಯ ಇಡ್ಲಿ, ಮದ್ದೂರಿನ ಸೆಟ್ ದೋಸೆ ಮತ್ತು ವಡೆಯನ್ನು ತಪ್ಪದೇ ತಂದು ತಿಂದುಕೊಳ್ಳುತ್ತಿದ್ದರು. ಇವರ ನಿಷ್ಠೆ ನೋಡಿ ಪಿಡಬ್ಲ್ಯುಡಿ ಅಂದರೆ ಪಕೋಡ ವಡೇ ದೋಸೆ ಅಂತ ಹೆಸರಿಟ್ಟೆ. ಮತ್ತೊಬ್ಬ ರಾಮನಗರ ದಾಟುತ್ತಲೇ ತನ್ನ ಬುತ್ತಿ ಬಿಚ್ಚಿ ಬೇರೆಯವರಿಗೆ ಅಸಹ್ಯವಾಗುವಂತೆ ಚಪ್ಪರಿಸಿಕೊಂಡು ಉಣ್ಣುತ್ತಿದ್ದ. ಅವನಿಗೆ ನಾನು ಕೊಟ್ಟ ಹೆಸರು ಹನುಕು ನಾಲಿಗೆ. ಇವೆಲ್ಲಾ ಹೆಸರುಗಳು ನನ್ನ ಮನಸ್ಸಲ್ಲಿ ಮಾತ್ರ ಇರುತ್ತಿದ್ದವು.

ಒಮ್ಮೆ ಮಂಡ್ಯದಿಂದ ಬೆಂಗಳೂರಿಗೆ 15-20 ಜನರ ಗುಂಪು ಹತ್ತಿ ನಮ್ಮ ಬೋಗಿಗೇ ಬಂದು ಕೂತಿತ್ತು. ನಾಳೆ ಕೋರ್ಟಲ್ಲಿ ಲಾಯರ್ ಹೇಳಿಕೊಟ್ಟಂತೆ ಹೇಳಬೇಕು, ಜಾಸ್ತಿ ಮಾತಾಡಬ್ಯಾಡಿ, ಜಡ್ಜ್ ಮುಂದೆ ನಗಾಡಬಾರದು ಅಂತ ಒಬ್ಬಾತ ಸೂಚನೆ ಕೊಡುತ್ತಿದ್ದ. ಅವತ್ತು ನನ್ನ ಮಗ್ಗುಲಲ್ಲಿ ಕೂತಿದ್ದ ಒಂದು ಅಜ್ಜ ನನ್ನನ್ನ ಮಾತನಾಡಿಸಲು ಪ್ರಯತ್ನಿಸಿ ಸೋತು ಸುಮ್ಮನಾಗಿತ್ತು. ಕೋರ್ಟ್ ಜನರನ್ನು ಸ್ವಲ್ಪ ಹೊತ್ತು ನೋಡಿ ಆಮೇಲೆ ಅವರಿಗೆ ತಗುಲಿಕೊಳ್ತು. ನೀವೆಲ್ಲಿಗೆ? ಯಾಕೆ? ಏನು? ಅಂತೆಲ್ಲಾ ಕೇಳಿತು. ಗುಂಪಿನ ಮುಖ್ಯಸ್ಥ ಹೇಳುವಷ್ಟೂ ಹೇಳಿದ. ಕೊನೆಗೆ ಬೇಜಾರಾಗಿ ‘ಯಜಮಾನ್ರೆ ನಾವು ಒಳ್ಳೇರಲ್ಲ. ಲೋಫರುಗಳು, ಕಚಡಾ ಜನ. ಕೋರ್ಟು- ಕಚೇರೀನೆ ನಮ್ಮನೆ. ಜೈಲೂ ಕಂಡಿದೀವಿ. ನಮ್ಮಂತಾ ಲೋಫರುಗಳ ಸಹವಾಸ ನಿಮಿಗ್ಯಾಕೆ ಸುಮ್ಮನಿರಿ’ ಅಂದ. ಅಜ್ಜ ಗಪ್‍ಚುಪ್. ಇದೇ ಕಥೆಯನ್ನ ಕೃಷ್ಣೇಗೌಡರು ರಸವತ್ತಾಗಿ ವರ್ಣಿಸೋದನ್ನ ಕೇಳಿದ್ದೀರಿ. ಬಹುಶಃ ಅವರು ಅಲ್ಲೇ ಎಲ್ಲೋ ಇದ್ದರೇನೋ !

ಒಮ್ಮೆ ಮೂರು ಮಕ್ಕಳು ಮತ್ತು 30ರ ಹರೆಯದ ಒಬ್ಬ ಮಧ್ಯಮ ವರ್ಗದ ಹೆಣ್ಣುಮಗಳು ನನ್ನ ಎದುರೇ ಕೂತರು. ಮಕ್ಕಳು ಕಂಡದ್ದನ್ನೆಲ್ಲಾ ಕೇಳಿ ತಿಳಿದುಕೊಳ್ಳುತ್ತಿದ್ದವು. ಮಕ್ಕಳು ಚಿಪ್ಸ್ ತಿಂದ ನಂತರ ರ‍್ಯಾಪರ್ ತಿರುಗಿಸಿ ನೋಡಿ ಕೇಳಿದವು, ‘ಅಮ್ಮ ನೋ ಎಂಎಸ್‍ಜಿ ಅಂತ ಇದೆ. ಎಂಎಸ್‍ಜಿ ಅಂದರೇನಮ್ಮಾ?’ ಆಕೆ ಬಹುಶಃ ಉತ್ತರ ಹೇಳಲಾರಳು ಅಂದುಕೊಂಡೆ. ಆ ತಾಯಿ ‘ಎಂಎಸ್‍ಜಿ ಅಂದರೆ ಮಾನೋ ಸೋಡಿಯಂ ಗ್ಲುಟಮೇಟ್ ಅಂತ. ಅಂದರೆ ಅಜಿನೊಮೋಟೋ ಇಲ್ಲ ಅಂತ’ ಅಂದಳು. ಜನರನ್ನ ಅಂಡರ್ ಎಸ್ಟಿಮೇಟ್ ಮಾಡೋದು ಎಷ್ಟು ರಿಸ್ಕ್ ಅಂತ ಆವತ್ತು ಗೊತ್ತಾಯಿತು.

ರೈಲಿನಲ್ಲಿ ತಿಂಡಿ ತೀರ್ಥಗಳನ್ನು ಮಾರುವವರದ್ದೇ ಒಂದು ಸೊಗಸು. ಸಂಜೆ ವಾಪಸಾಗುವಾಗ ರವೆ ಉಂಡೆ ಮಾರುವ ಒಬ್ಬಾತ ರವೆ ಉಂಡೆ, ಮೈಸೂರು ರವೆ ಉಂಡೆ ಅಂತ ಕೂಗುತ್ತ ಬರುತ್ತಿದ್ದ. ಮೈಸೂರು ರವೆ ಉಂಡೆ ಅಂತಿದ್ದ ಹಾಗೆ ಅದರ ಬ್ರಾಂಡ್ ನೋಡಿ ಒಂದಷ್ಟು ಜನ ಕೊಂಡುಕೊಳ್ಳುತ್ತಿದ್ದರು.

ಮೈಸೂರು-ಬೆಂಗಳೂರು ರೈಲಿನಲ್ಲಿ ಮದ್ದೂರು ವಡೆ ಮಾರುವವರದ್ದು ದೊಡ್ಡ ಪಟಾಲಂ ಇದೆ. ಇವರು ಮದ್ದೂರು ವಡೆಗಳನ್ನು ಕೆಂಗೇರಿ ರೈಲ್ವೆ ನಿಲ್ದಾಣದ ಬಳಿಯಲ್ಲಿ ಬಕೆಟ್‍ಗಟ್ಟಲೇ ಖರೀದಿ ಮಾಡಿ ಒಂದೆಡೆ ಇಟ್ಟಿರುತ್ತಾರೆ. ಹೆಸರು ಮಾತ್ರ ಮದ್ದೂರು ವಡೆ! ಎಲ್ಲಾ ಬಿಸಿ ಮಾಡಿ ‘ಮುಟ್ಟಿ ನೋಡಿ ತಗೊಳ್ಳಿ ಸಾರ್’ ಅಂತ ಮಾರೋರು. ಇನ್ನು ಪಾನಿಪೂರಿಯವರು, ಚಿಪ್ಸ್, ಬಜ್ಜಿ-ಬೋಂಡಾ, ಹಣ್ಣು ಮಾರುವವರು... ಹೀಗೆ ಒಬ್ಬರ ನಂತರ ಒಬ್ಬರು ತಮ್ಮದೇ ಶೈಲಿಯಲ್ಲಿ ಕೂಗುತ್ತಾ ಬರುವ ಸೊಗಸೇ ಬೇರೆ! 
ಎಲ್ಲಾ ರೈಲುಗಳಲ್ಲಿದ್ದಂತೆ ಮೈಸೂರು ರೈಲಿನಲ್ಲೂ ಭಿಕ್ಷುಕರ ಕಾಟ ಇದೆ. ಇವರು ಪ್ರತೀದಿನ ಬರುವವರನ್ನ ಗುರುತಿಟ್ಟುಕೊಂಡು ಅವರ ಹತ್ರ ಭಿಕ್ಷೆ ಕೇಳಲ್ಲ. ಒಬ್ಬಾತ ಕುರುಡನ ಸ್ಟೈಲೇ ಬೇರೆ. ‘ಕಣ್ಣಾಗ ನೋಡಿ ಹಾಕು ಸ್ವಾಮಿ, ಕಣ್ಣಾಗ ನೋಡು’ ಅಂತಿದ್ದ.

ಇಷ್ಟೆಲ್ಲಾ ಬದುಕು ತೋರಿಸುವ ರೈಲು, ಒಮ್ಮೊಮ್ಮೆ ಇಕ್ಕಟ್ಟಿಗೂ ಸಿಲುಕಿಸುತ್ತದೆ. ಆವತ್ತು ನಾನು ತಡವಾಗಿ ಬಂದ ಕಾರಣ ಟ್ರೈನ್ ಹೊರಟುಹೋಗಿತ್ತು. ಮತ್ತೂ ತಡವಾಗಿದ್ದ ಇನ್ನೊಂದು ರೈಲು ಪೂರಾ ಖಾಲಿ ಇತ್ತು. ಇಡೀ ಬೋಗಿಗೆ ನಾನೊಬ್ಬನೇ. ನನ್ನ ಬುತ್ತಿ ಬಿಚ್ಚಿ ಸಾವಕಾಶವಾಗಿ ತಿಂದು ಕೂತರೂ ಬೋಗಿಗೆ ಒಬ್ಬರೂ ಹತ್ತಿರಲಿಲ್ಲ. ಹಾಗೇ ಸೀಟಿನ ಮೇಲೆ ಕಾಲು ಚಾಚಿ ಶ್ರೀರಂಗಪಟ್ಟಣದ ರಂಗನಾಥನ ಹಾಗೆ ಮಲಗಿದೆ. ಥಟ್ಟನೆ ಎಚ್ಚರಾದಾಗ ನಾನೆಲ್ಲಿದ್ದೇನೆ ಅಂತ ಗೊತ್ತಾಗಲಿಲ್ಲ. ನಂತರ ಮಂಡ್ಯ ದಾಟಿ ಬಂದದ್ದು ಖಾತ್ರಿಯಾಯ್ತು. ನನ್ನ ಬ್ಯಾಗುಗಳನ್ನು ಎತ್ತಿಕೊಂಡು ಹೊಲಗಳ ನಡುವೆ ಅರ್ಧ ಗಂಟೆ ನಡೆದ ಮೇಲೆ ರಸ್ತೆ ಸಿಕ್ಕಿತು. ಅಲ್ಲೊಬ್ಬ ನಡೆದು ಹೋಗುತ್ತಿದ್ದವನನ್ನ ಇದ್ಯಾವ ಊರು ಅಂತ ಕೇಳಿದೆ. ಅವ ವಿಚಿತ್ರವಾಗಿ ನನ್ನನ್ನ ನೋಡುತ್ತಾ ಪಾಂಡವಪುರ ಸ್ವಾಮೇ ಅಂದ. ಪಾಂಡವಪುರದಿಂದ ಶ್ರೀರಂಗಪಟ್ಟಣಕ್ಕೆ ಬಸ್ಸು ಹಿಡಿದು ಅಲ್ಲಿಂದ ಮಂಡ್ಯ ತಲುಪುವಾಗ ಮಧ್ಯಾಹ್ನವಾಗಿತ್ತು. ರೈಲಿನದ್ದು ಎಷ್ಟು ಹೇಳಿದರೂ ಮುಗಿಯದ ಜಗದ್ಭವ್ಯ ಚಿತ್ರಣ. ಪ್ರಾಜ್ಞರು ಅನುಭವಿಸಿಯೇ ತಿಳಿಯಬೇಕು !

Post Comments (+)