ಮಳೆಯಿಂದ ಊರೇ ಕೆರೆಯಂತಾಗಿತ್ತು!

7

ಮಳೆಯಿಂದ ಊರೇ ಕೆರೆಯಂತಾಗಿತ್ತು!

Published:
Updated:
Deccan Herald

ಬರಗಾಡು ಪ್ರದೇಶವಾದ ಚಾಮರಾಜನಗರದಲ್ಲಿ ಮಳೆ ಬೀಳುವುದೇ ಅಪರೂಪ. ಮಳೆ ಬಂದರೆ ಅಂದು ನಮಗೆ ಖುಷಿಯೋ ಖುಷಿ. ಬೇಸಿಗೆಯ ಬೇಗೆಯಿಂದ ಕಂಗೆಟ್ಟಿದ ಜನರು ಜಾನುವಾರುಗಳಿಗೆ ಕುಡಿಯಲೂ ನೀರಿಲ್ಲದೆ ಪರಿತಪಿಸುವಂತಾಗಿತ್ತು. ಒಂದು ದಿನ ಇದ್ದಕ್ಕಿದ್ದಂತೆ ಮಧ್ಯಾಹ್ನ ಸಮಯದಲ್ಲಿ ಪಟಪಟನೇ ದಪ್ಪ ಹನಿಯೊಂದಿಗೆ ಆಲಿಕಲ್ಲು ಮಳೆ ಜೋರಾಗಿ ಬರತೊಡಗಿತು.

ಬೇಸಿಗೆಯ ಬಿಸಿಲಿಗೆ ಕಾದಿದ ಭೂಮಿ ಮಳೆಯ ನೀರಿಗೆ ಮಣ್ಣು ಗಮ್ಮೆಂದು ಸುವಾಸನೆ ಬರುತ್ತಿತ್ತು. ಮನೆಯ ಹೆಂಚುಗಳ ಮೂಲಕ ಹರಿದು ಬರುವ ನೀರಿಗೆ ಬಕೇಟ್, ಪಾತ್ರೆ, ಬಿಂದಿಗೆಯನ್ನು ಇಟ್ಟು ಧನ-ಕರುಗಳಿಗೆ ಕುಡಿಯಲೂ ಸಂಗ್ರಹಿಸಿದೆವು.

ನಮ್ಮ ಊರು ಕಂದೇಗಾಲ, ಬೆಟ್ಟದ ತಪ್ಪಲಿನಲ್ಲಿರುವುದರಿಂದ ಬೆಟ್ಟದಿಂದ ರಭಸವಾಗಿ ಇಳಿಜಾರಿಗೆ ಹರಿದ ನೀರು ರಸ್ತೆ, ಚರಂಡಿಯೆಲ್ಲಾತುಂಬಿಕೊಂಡು ಊರಿನ ಮನೆಗಳಿಗೆ ನುಗ್ಗಿತು. ಸಮಯ  ರಾತ್ರಿ 12 ಗಂಟೆಯಾಗಿದೆ ಆದರೂ ಮಳೆ ನಿಂತಿಲ್ಲ. ಮಳೆಯ ಶಬ್ದಕ್ಕೆ ನಿದ್ರೆ ಬರಲಿಲ್ಲ. ಅಕ್ಕಪಕ್ಕದ ಮನೆಯಿಂದ ಕೂಗಾಟ, ಕಿರುಚಾಟದ ಶಬ್ಧ ಕೇಳಿ ಬರುತ್ತಿತ್ತು.

ಅಪ್ಪ ಮೇಲೆದ್ದು ಬಾಗಿಲು ತೆರೆದು ನೋಡಿದರು. ಬೀದಿಯಲ್ಲಾ ಕೆರೆಯಂತಾಗಿ ತುಂಬಿಕೊಂಡಿರುವುದನ್ನು ನೋಡಿ ನಮ್ಮನ್ನೆಲ್ಲಾ ಎಬ್ಬಿಸಿದರು. ಮನೆಯ ಹೊರಗಡೆ ನೋಡಿದರೆ ರಸ್ತೆ, ಚರಂಡಿ ಯಾವುದೆಂದು ಗೊತ್ತಾಗುತ್ತಿಲ್ಲ. ಮನೆಯ ಮುಂದೆ ಬಿಟ್ಟಿದ ಚಪ್ಪಲಿಗಳು ನೀರಿನಲ್ಲಿ ತೇಲಿಕೊಂಡು ಹೋಗಿದ್ದವು.

ಅಕ್ಕ-ಪಕ್ಕದ ಮನೆಯವರ ಎರಡು ಮೇಕೆ, ಕುರಿ, ಹತ್ತಾರು ಕೋಳಿಗಳು ನೀರುಪಾಲಾಗಿ ಸಾವನಪ್ಪಿದವು. ಅಂದು ಊರಿನ ಜನರೆಲ್ಲಾ ಸೇರಿ ನಿದ್ರೆಗೆಟ್ಟು, ನೀರು ಸಲಿಸಾಗಿ ಹೋಗಲು ಕಾಲುವೆಮಾಡಿ ಊರ ಹೊರಗೆ ಬಿಟ್ಟೆವು. ನಮ್ಮ ಊರನ್ನು ಬೆಚ್ಚಿಬೀಳಿಸಿದ ಆ ಆಲಿಕಲ್ಲು ಮಳೆಯನ್ನಂತು ಮರೆಯಲು ಸಾಧ್ಯವಿಲ್ಲ.

-ಸುರೇಶ.ಆರ್ ಕಂದೇಗಾಲ, ಗುಂಡ್ಲುಪೇಟೆ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !