ಮಳೆ ತರುವ ನೆನಪಿನ ಬುತ್ತಿ

7

ಮಳೆ ತರುವ ನೆನಪಿನ ಬುತ್ತಿ

Published:
Updated:
Deccan Herald

ಮಳೆಗಾಲ ಬಂತೆಂದರೆ ಸಾಕು ನನ್ನ ನೆನಪಿನ ಬುತ್ತಿಯಲ್ಲಿ ಅನೇಕ ಘಟನೆಗಳು ಬಿಚ್ಚಿಕೊಳ್ಳುತ್ತವೆ. ಪ್ರತಿ ಬಾರಿಯೂ ಮಳೆಗಾಲದಲ್ಲಿ ನನ್ನಪ್ಪನ ಮಾತುಗಳು ತಪ್ಪದೇ ನೆನಪಾಗುತ್ತವೆ.

ರಾತ್ರಿ ಮಳೆಯಲ್ಲಿ ಮನೆಯಿಂದ ನಾನು ಹೊರಗಿದ್ದ ಸಂದರ್ಭಗಳಲ್ಲಿ ನನ್ನ ತಂದೆ ತಪ್ಪದೇ ನನಗೆ ಫೋನ್ ಮಾಡಿ, ಬರುವಾಗ ಹುಷಾರಾಗಿ ಬಾರಪ್ಪ, ರಸ್ತೆಯಲ್ಲಿ ನೀರು ನಿಂತಿರುತ್ತದೆ ಎಚ್ಚರಿಕೆಯಿಂದಿರು, ಮಳೆ ಕಡಿಮೆಯಾದ್ಮೇಲೆ ಇಲ್ಲವೇ ಬದಲಿ ರಸ್ತೆಯಲ್ಲಿ ಬೇಗ ಮನೆಗೆ ಬಾ ಎನ್ನುತ್ತಿದ್ದರು.

ಅಕಸ್ಮಾತ್ ಮಳೆಯಲ್ಲಿ ತೋಯ್ದು ಬಂದರೆ, ಬಾಗಿಲಲ್ಲೇ ಕಾಯುತ್ತಾ ನಿಂತ
ಅಮ್ಮ ಟವೆಲ್ ಕೊಟ್ಟು ಮೊದಲ ತಲೆ ಒರೆಸಿಕೋ ಮಗ, ಜಾಸ್ತಿ ಮಾತನಾಡಬೇಡ ಎಂದು ಪ್ರೀತಿಯಿಂದ ಗದರುವ ಕ್ಷಣಗಳು ಇಂದಿಗೂ ಹಸಿರಾಗಿವೆ.

ಒಮ್ಮೆ ನಮ್ಮ ಮಾವನವರ ಜತೆ ಹೊರನಾಡಿಗೆ ಹೊರಟಾಗ ಭಾರಿ ಮಳೆ ಸುರಿದು ದೇವರ ಮೇಲೆ ಭಾರ ಹಾಕಿ ಬದುಕಿ ಬಂದ ನೆನಪು ಕಾಡುತ್ತದೆ. ಅಂತೆಯೇ ಮಳೆಗಾಲದಲ್ಲೇ ಆಗುಂಬೆ ಮತ್ತು ಹೆಬ್ರಿಯಲ್ಲಿ ನಡೆದ ಮದುವೆ ಮತ್ತು  ಗೀತಗಾಯನ ಸಮಾರಂಭ ಇಂದಿಗೂ ಅಚ್ಚಳಿಯದೇ ಮನದಲ್ಲಿದೆ.
–ಮಹೇಶ್ ಅರಸೀಕರೆ, ಹಾಸನ

****

ಆ ಬಾಲ್ಯ ಮತ್ತೆ ಮರುಕಳಿಸಲಿ...
ಮಲೆನಾಡು, ಪ್ರಕೃತಿಯ ಸೌಂದರ್ಯವನ್ನು ತನ್ನೊಡಲಲ್ಲಿಟ್ಟುಕೊಂಡಿರುವ ಪ್ರದೇಶ. ಹೇಳಿಕೇಳಿ ಇಲ್ಲಿ ಮಳೆಯ ಅಬ್ಬರ ಜೋರಾಗೇ ಇರುತ್ತೆ. ಬಾಲ್ಯದಲ್ಲಿ ಮುಂಗಾರಿನ ಮೊದಲ ಮಳೆಯಲ್ಲಿ ನೆನೆದು ಆಗ ತಿಂದ ಆಲಿಕಲ್ಲುಗಳೆಷ್ಟೋ? ಹೊಸ ಛತ್ರಿ ಹಿಡಿದು ಶಾಲೆಗೆ ಹೊರಡುವ ಸಂಭ್ರಮಕ್ಕಿಂತ, ಶಾಲೆ ಬಿಟ್ಟಾಗ ಆಗುವ ಸಂತೋಷವೇ ಬೇರೆಯಾಗಿತ್ತು. ಅಂಗಡಿಯಲ್ಲಿ ಬಟಾಣಿ ತೆಗೆದುಕೊಂಡು ತಿನ್ನುತ್ತಾ ಗೆಳೆಯರೊಂದಿಗೆ ಹವಾಯಿ ಚಪ್ಪಲಿ ಧರಿಸಿ ಮಳೆ ಎನ್ನದೇ, ಕೆಸರೆನ್ನದೇ ನಡೆದರೆ ಬಟ್ಟೆಯ ಹಿಂಭಾಗ ಅಧೋಗತಿಯಾಗಿರುತ್ತಿತ್ತು. ಇದಲ್ಲದೆ, ರಸ್ತೆಯಲ್ಲಿ ಬರುವ ಕಾರು–ಬಸ್‌ಗಳಿಗೆ ಕೈ ಮಾಡಿ ಅವರಿಂದ ಪ್ರತಿಕ್ರಿಯೆ ಬಂದರೆ ಅದೇನೋ ಖುಷಿ ಪಡುತ್ತಿದ್ದೆವು.

ಸುತ್ತಲಿನ ಪ್ರದೇಶದಲ್ಲಿ ನೆರೆ ಹೆಚ್ಚಾದಾಗ ಅದನ್ನು ನೋಡಲು ಸೈಕಲ್ ಏರಿ ಪ್ರವಾಸ ಮಾಡುವುದೇ ಒಂದು ರೀತಿಯಲ್ಲಿ ಹುರುಪು. ಈಗ ನಮ್ಮೂರಿನಲ್ಲಿ 3-4 ವರ್ಷಗಳಿಂದ ಮಳೆ ಸ್ವಲ್ಪ ಕಡಿಮೆಯಾಗಿತ್ತು. ಆದರೆ ಈ ಬಾರಿ ಮತ್ತೆ ಅಬ್ಬರಿಸಿ ಬೊಬ್ಬಿರಿದಿದ್ದಾನೆ ವರುಣ. ಹೀಗಾಗಿ ಬಾಲ್ಯದಲ್ಲಿ ಕಳೆದ ಆ ದಿನಗಳು ಮತ್ತೆ ನೆನಪಾಗುತ್ತಿವೆ. ಈಗ ಮಳೆಯಲ್ಲಿ ಸ್ವಲ್ಪ ನೆನೆದರೆ ಶೀತ, ಜ್ವರ ಬರುತ್ತೆ ಅನ್ನೋ ಭಯ, ಆಗ ಮಳೆಯಲ್ಲಿ ನೆನೆದರೆ ಏನೋ ಸಂತೋಷ ಆಗುತ್ತಿತ್ತು. ಹೀಗೆ 2–3 ತಿಂಗಳು ಇದೇ ದಿನಚರಿ. ಇದನ್ನೆಲ್ಲಾ ನೆನೆದಾಗ ಮರಳಿ ಬಾ ಬಾಲ್ಯವೇ ಎಂದು ಕರೆಯಬೇಕೆನಿಸುತ್ತದೆ! 
–ಸುಧಾಕರ್ ಹುಣಸೂರು, ಶಿವಮೊಗ್ಗ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !