ಅತಿ ಉತ್ಸಾಹ ತಂದ ಆಪತ್ತು

4

ಅತಿ ಉತ್ಸಾಹ ತಂದ ಆಪತ್ತು

Published:
Updated:
Deccan Herald

ಎರಡು ವರ್ಷದ ಹಿಂದೆ ಹೊಸದಾಗಿ ಮೊಬೈಲ್ ಖರೀದಿಸಿದ್ದೆ. ಫೋಟೊ ತೆಗೆಯುವ ಆಸೆ. ಮಳೆಗಾಲದ ದಿನಗಳಾದ್ದರಿಂದ ಒಂದು ದಿನ ಮಧ್ಯಾಹ್ನ ಸಣ್ಣಗೆ ಬೀಳುವ ಮಳೆಯಲ್ಲಿಯೇ ನಮ್ಮೂರಿಗೆ ಸಮೀಪದ ಬೆಟ್ಟದ ಕಡೆ ನಡೆದೆ. ಗಿಡಗಳನ್ನು, ಪೊದೆಗಳನ್ನು ಸರಿಸುತ್ತಾ ಸಣ್ಣ ಸಣ್ಣ ಹಳ್ಳಗಳನ್ನು ದಾಟುತ್ತಾ ಬೆಟ್ಟ ಹತ್ತುತ್ತಿದ್ದೆ. ಕಾಡು ಹೂ, ಹಸಿರು, ಗಿಡಮರ, ನಮ್ಮೂರ ಕೆರೆ, ದೂರದ ಬೆಟ್ಟ, ಅಂಗೈಯಗಲ ಕಾಣುವ ಊರು, ಬೆಂಕಿಪೊಟ್ಟಣದಂತೆ ಕಾಣುವ ಮನೆಗಳು, ಗುಂಪು ಗುಂಪು ದನ ಕರು,  ದೊಡ್ಡ ಬಿದಿರ ಕೋಲು ಹಿಡಿದು ಗೋಣಿಚೀಲ ಹೊದ್ದ ಕುರಿಗಾಹಿಗಳು ಎಲ್ಲರೂ-ಎಲ್ಲವೂ ನನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾದರು.

ಉತ್ಸಾಹದಿಂದ ಮಳೆಯನ್ನು, ಹಸಿರನ್ನು, ತಲೆಯ ಮೇಲೆ ತೇಲಿಹೋಗುತ್ತಿದ್ದ ಮೋಡವನ್ನು ಕಣ್ತುಂಬಿಕೊಳ್ಳುತ್ತಾ ಫೋಟೊ ಕ್ಲಿಕ್ಕಿಸುತ್ತಾ ಹತ್ತುತ್ತಾ ಮೇಲೆ ಹೋದೆ. ಕುರಿ ಮತ್ತು ದನಗಾಹಿಗಳು ಒಬ್ಬೊಬ್ಬರೇ ಚದುರುತ್ತಾ ಊರ ಕಡೆ ಹೆಜ್ಜೆ ಹಾಕತೊಡಗಿದರು. ಬೆಟ್ಟದ ತುದಿ ತಲುಪಿದಾಗ ಮೋಡವೇ ಕೈಗೆಟುಕಿ ಪುಳಕಿತನಾದೆ. ಪ್ರಕೃತಿಯ ರೌದ್ರತೆ, ಹಸಿರಿನ ಸಂಭ್ರಮ ಸವಿಯುತ್ತಾ ನಡೆಯುತ್ತಲಿದ್ದೆ. 

ಅದೆಲ್ಲಿತ್ತೊ ಸುತ್ತಲಿದ್ದ ಬಿಳಿಯ ಮೋಡ ಚದುರಿ ಕಪ್ಪನೆ ಮೋಡ ದಟ್ಟವಾಗಿ ಆವರಿಸತೊಡಗಿತು. ಎದುರಿದ್ದ ಗಿಡಮರಗಳೇ ಕಾಣದಂತಾಯಿತು. ಇಷ್ಟರವರೆಗಿನ ಪುಳಕ ಮಾಯವಾಗಿ ಭಯ, ಆತಂಕ, ಕಾಲಲ್ಲಿ ನಡುಕ ಶುರುವಾಯಿತು. ಬಿರುಗಾಳಿಗೆ ಕೊಡೆ ಮಗುಚಿತು. ಮೊಬೈಲ್ ನೆನೆಯಬಾರದೆಂದು ತೆಗೆದುಕೊಂಡು ಹೋಗಿದ್ದ ಪ್ಲಾಸ್ಟಿಕ್ ಕವರಿನಲ್ಲಿ ಭದ್ರ ಮಾಡಿ ಹಿಡಿದೆ. ಬಂಡೆಯೊಂದರ ಮೇಲೆ ತಪಸ್ಸಿಗೆ ಕುಳಿತ ಯೋಗಿಯಂತೆ ಕುಳಿತುಬಿಟ್ಟೆ. ಸುಮಾರು ಎರಡೂವರೆ ತಾಸಿಗಿಂತಲೂ ಹೆಚ್ಚು ಕಾಲ ಅಬ್ಬರದಿಂದ ಸುರಿದ ಮಳೆಗೆ ತೊಯ್ದು ತೊಪ್ಪೆಯಾದೆ. ಮಳೆ ಕಡಿಮೆಯಾಗೋ ವೇಳೆಗೆ ಸಂಜೆಯಾಯಿತು.

ಕಾಡಿನಲ್ಲಿ ಕಳೆದುಹೋದ ನಾನು ಕೆಳಗಿಳಿಯಲು ಜಾರುತ್ತಾ-ಬೀಳುತ್ತಾ ಅಂತು ರಸ್ತೆಗೆ ಬಂದು ಮನೆ ಸೇರುವ ವೇಳೆಗೆ ಸಂಪೂರ್ಣ ಕತ್ತಲಾಗಿತ್ತು.ಆ ಮಳೆ, ಕಪ್ಪನೆ ಮೋಡ, ಧಿಗ್ಗನೆ ಆವರಿಸಿದ ಕತ್ತಲು, ಧೋ ಎಂದು ಸುರಿದ ಮಳೆ, ಒಂಟಿಯಾಗಿ ನಡುಗುತ್ತಾ ನಿಂತ ನಾನು! ಅಬ್ಬಬ್ಬಾ! ಇನ್ನೆಂದೂ ಒಂಟಿಯಾಗಿ ಇಂಥಾ ಸಾಹಸಕ್ಕೆ ಕೈಹಾಕಬಾರದೆಂದು ತೀರ್ಮಾನಿಸಿದೆ.
-ಕಿರಣ್, ಹಳೇಹಳ್ಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !