ಮಳೆ ಬಂದ್ರೆ ಬಾಲ್ಯದ ನೆನಪುಗಳ ಮೂಟೆ

7

ಮಳೆ ಬಂದ್ರೆ ಬಾಲ್ಯದ ನೆನಪುಗಳ ಮೂಟೆ

Published:
Updated:

ನನ್ನ ಮಿಡ್ಲ್‌ಸ್ಕೂಲ್‌ ದಿನಗಳಲ್ಲಿ ಆಡಿದ ಆಟಗಳು, ತರಲೆಗಳಿಗೆ ಲೆಕ್ಕವೇ ಇರಲಿಲ್ಲ. ಆಗ ನಮ್ಮ ಮನೆ ಊರ ಹೊರವಲಯದಲ್ಲಿತ್ತು. ಸಮೀಪದಲ್ಲಿ ಗುಡ್ಡ, ಹೊಲಗಳಿದ್ದವು. ಶಾಲಾ ರಜಾದಿನಗಳಲ್ಲಿ ಅಕ್ಕ ಪಕ್ಕದ ಸಮವಯಸ್ಕರೆಲ್ಲಾ ಸೇರಿಕೊಂಡು ಸಂಜೆವರೆಗೂ ಸಿಕ್ಕ ಸಿಕ್ಕಲ್ಲಿ ಅಲೆದಾಡುತ್ತಾ, ಆಡುತ್ತಾ ಕಾಲಕಳೆಯುತ್ತಿದ್ದೆವು.

ಒಮ್ಮೆ ಹೀಗೆ ಸಮೀಪದ ಗುಡ್ಡದ ಬಳಿ ಆಡುತ್ತಿದ್ದಾಗ ಒಮ್ಮೆಲೇ ಬಿರುಸಿನ ಮಳೆ ಆರಂಭವಾಯಿತು. ಸುತ್ತಮುತ್ತ ಯಾವ ಆಶ್ರಯ ತಾಣವೂ ಇಲ್ಲದ್ದರಿಂದ ಕ್ಷಣಾರ್ಧದಲ್ಲಿ ಎಲ್ಲರೂ ತೊಯ್ದು ತೊಪ್ಪೆಯಾದೆವು. ಸರಿ, ನೀರಲ್ಲಿ ಮುಳುಗಿದವನಿಗೆ ಚಳಿಯೇನು? ಮಳೆಯೇನು? ಸುರಿವ ಮಳೆಯಲ್ಲಿ ಕೆಸರಿನಲ್ಲಿ ಬಿದ್ದೇಳುತ್ತಾ ‘ಮಳೆ ಬಂತು ಮಳೆ... ಕೊಡೆ ಹಿಡಿದು ನಡೆ... ಜರ್ ಅಂತ ಜಾರಿಬಿದ್ದು ಬಟ್ಟೆಯೆಲ್ಲಾ ಕೊಳೆ’ ಎಂದು ಹಾಡುತ್ತಾ ಒಬ್ಬರನ್ನೊಬ್ಬರು ಎಳೆದು ಬೀಳಿಸುತ್ತಾ ಕೆಸರಲ್ಲಿ ಬಿದ್ದ ಎಮ್ಮೆಯಂತಾಗಿದ್ದೆವು. ಈ ಆಟ ಸಾಕಾದ ನಂತರ ಪಕ್ಕದ ಹೊಲಕ್ಕೆ ದಾಳಿಯಿಟ್ಟು ಪುಟ್ಟ ಸೌತೆಕಾಯಿ, ಟೊಮೆಟೊ ಕಿತ್ತು ಮನದಣಿಯೇ ಸವಿದೆವು. ಆಗ ದೂರದಲ್ಲಿ ಹೊಲದೊಡೆಯನ ಕೂಗಿಗೆ ದೌಡಾಯಿಸಿ ಓಟಕಿತ್ತೆವು.

ಆಗಿನ್ನೂ ಕಾಮಗಾರಿ ಹಂತದಲ್ಲಿದ್ದ ಕಲಾ ಕಾಲೇಜಿನ ಕಟ್ಟಡದ ಬಳಿ ಬಂದು ಅಲ್ಲಿ ನೀರಿಗಾಗಿ ಕಟ್ಟಿದ ತೊಟ್ಟಿಯಲ್ಲಿ ಇಳಿದು ಕೆಸರಾದ ಬಟ್ಟೆ ತೊಳೆದು ಮನೆಗೆ ಬಂದೆವು. ಮನೆಗೆ ಬಂದು ಮಳೆಗೆ ಏನಾದರೂ ಬಿಸಿ ಬಿಸಿ ತಿನ್ನೋಣವೆಂದು ವಿಶೇಷ ಪಾಕವನ್ನು ತಯಾರಿಸಿ ದೊಡ್ಡವರಿಗೂ ಕೊಡುತ್ತಿದ್ದೆವು.

ಈಗ ಮಳೆ ಬಂದೊಡನೆ ಬಾಲ್ಯದ ಇಂತಹ ಹತ್ತುಹಲವು ಆಟಗಳು ಸಿನಿಮಾದಂತೆ ಕಣ್ಣ ಮುಂದೆ ಬರುತ್ತದೆ. ಈಗಲೂ ಪ್ರತಿ ಸಂಜೆ ಬೆಟ್ಟಕ್ಕೆ ವಾಕಿಂಗ್ ಹೋಗುತ್ತೇನೆ. ಮಳೆಗಾಲವಾದರೂ ಕೊಡೆ ಒಯ್ಯುವುದಿಲ್ಲ, ಮಳೆ ಬಂದರೆ ನೆನೆಯುತ್ತಾ ಹಾಗೆ ಬಾಲ್ಯದ ನೆನಪಿಗೆ ಜಾರುತ್ತೇನೆ.
-ಉಮಾಮೋಹನಮುರಳಿ, ಜೋಗಿಮಟ್ಟಿ ರಸ್ತೆ, ಚಿತ್ರದುರ್ಗ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !