ಮಂಗಳವಾರ, ಆಗಸ್ಟ್ 3, 2021
21 °C

ಧರ್ಮಚಕ್ರಪ್ರವರ್ತನ ಸೂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿದ್ಧಾರ್ಥನು ಬುದ್ಧನಾದಮೇಲೆ ಮಾಡಿದ ಮೊತ್ತಮೊದಲನೆಯ ಉಪದೇಶವೇ ‘ಧಮ್ಮಚಕ್ಕಪ್ಪವತ್ತನ ಸುತ್ತ' (ಧರ್ಮಚಕ್ರಪ್ರವರ್ತನ ಸೂತ್ರ). ಇದನ್ನು ಅವನು ಐವರು ತಪಸ್ವಿಗಳಿಗೆ ಉಪದೇಶಿಸಿದನು. ಈ ಉಪದೇಶದಲ್ಲಿಯೇ ಬುದ್ಧನ ದರ್ಶನವೆಲ್ಲವೂ ಅಡಕವಾಗಿದೆ. ಇದನ್ನೇ ‘ಆರ್ಯಸತ್ಯಗಳು’ ಎನ್ನುವುದು. ಈ ಉಪದೇಶ ನಡೆದದ್ದು ಆಷಾಢಮಾಸದ ಹುಣ್ಣಿಮೆಯ ದಿನ. ‘ಸಂಯುತ್ತನಿಕಾಯ’ದಲ್ಲಿರುವ ಈ ಭಾಗವನ್ನು ಜಿ. ಪಿ. ರಾಜರತ್ನಂ ಅವರು ಕನ್ನಡಕ್ಕೆ ತಂದಿದ್ದಾರೆ. ಅದರ ಸಂಗ್ರಹ ಇಲ್ಲಿದೆ:

‘ಭಿಕ್ಷುಗಳೆ! ಈ ಎರಡು ಅಂತಗಳು ಪರಿವ್ರಜಿಸಿದವನಿಂದ ಸೇವಿಸಲ್ಪಡತಕ್ಕವಲ್ಲ. ಯಾವ ಎರಡು? ಕಾಮಗಳಲ್ಲಿ ಕಾಮಸುಖಗಳಲ್ಲಿ ಅದ್ದಿಹೋಗುವುದು ಹೀನವಾದದ್ದು, ಗ್ರಾಮ್ಯವಾದದ್ದು, ಲೋಕದ ಜನಗಳಿಗೆ ಸಂಬಂಧಿಸಿದ್ದು, ಅನಾರ್ಯವಾದದ್ದು, ಅನರ್ಥಸಂಹಿತವಾದದ್ದು; (ಅದರಂತೆಯೇ) ಆತ್ಮಕ್ಕೆ ಕ್ಲೇಶವನ್ನು ಉಂಟುಮಾಡುವುದು ದುಃಖವು, ಅನಾರ್ಯಸಂಹಿತವು.

‘ಭಿಕ್ಷುಗಳೆ! ಈ ಎರಡು ಅಂತಗಳ ಹತ್ತಿರಹೋಗದೆ, ಚಕ್ಷುವನ್ನು ಉಂಟುಮಾಡುವ, ಜ್ಞಾನವನ್ನು ಉಂಟುಮಾಡುವ, ಉಪಶಮೆಗೂ ಅಭಿಜ್ಞೆಗೂ ಸಂಬೋಧಿಗೂ ನಿರ್ವಾಣಕ್ಕೂ ನಡಸುವ ಮಧ್ಯಮಮಾರ್ಗವು ತಥಾಗತನಿಂದ ವಿಶೇಷವಾಗಿ ತಿಳಿಯಲ್ಪಟ್ಟಿತು.

‘ಮತ್ತೆ ಭಿಕ್ಷುಗಳೆ, ಇದು ದುಃಖವೆಂಬ ಆರ್ಯಸತ್ಯ. ಜನನವು ದುಃಖ, ಜರೆಯು ದುಃಖ, ವ್ಯಾಧಿಯೆಂಬ ದುಃಖ, ಮರಣವು ದುಃಖ, ಅಪ್ರಿಯವಾದವುಗಳೊಡನೆ ಸೇರುವುದು ದುಃಖ, ಪ್ರಿಯವಾದವುಗಳೊಡನೆ ಸೇರುವುದರಿಂದ ದುಃಖ, ಇಷ್ಟವಾದದ್ದು ದೊರಕದಿದ್ದರೆ ಅದೂ ದುಃಖ.

‘ಮತ್ತೆ ಭಿಕ್ಷುಗಳೆ, ಇದು ದುಃಖಸಮುದಯವೆಂಬ ಆರ್ಯಸತ್ಯ. ಪುನರ್ಭವಕ್ಕೆ ಕಾರಣವಾಗಿ, ನಂದೀರಾಗಗಳಿಗೆ ಸಹಗತವಾಗಿ, ಅಲ್ಲಿ ಅಲ್ಲಿ ಅನುಭವಿಸುತ್ತಿರುವ ತೃಷ್ಣೆ; ಅವು ಯಾವುವೆಂದರೆ – ಕಾಮಕೃಷ್ಣಾ, ಭವತೃಷ್ಣಾ, ವಿಭವತೃಷ್ಣಾ.

‘ಮತ್ತೆ ಭಿಕ್ಷುಗಳೆ, ಇದು ದುಃಖನಿರೋಧವೆಂಬ ಆರ್ಯಸತ್ಯ; ಇದೇ ತೃಷ್ಣೆಯನ್ನೇ ಅಶೇಷವಾದ ವಿರಾಗದಿಂದ ನಿರೋಧಿಸಿ, ಅದನ್ನು ತೊರೆದು, ಅದರಿಂದ ಬಿಡಿಸಿಕೊಂಡು, ಅದಕ್ಕೆ ಸಿಕ್ಕದೆ, ಅದಕ್ಕೆ ಆಶ್ರಯ ಕೊಡದಿರುವುದು.

‘ಮತ್ತೆ ಭಿಕ್ಷುಗಳೆ, ಇದು ದುಃಖನಿರೋಧಗಾಮಿನೀ ಪ್ರತಿಪದಾ ಎಂಬ ಆರ್ಯಸತ್ಯ; ಇದೇ ಆರ್ಯವಾದ ಅಷ್ಟಾಂಗಿಕ ಮಾರ್ಗ. ಯಾವುವೆಂದರೆ – ಸಮ್ಯಕ್‌ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್‌ ವಾಕ್‌, ಸಮ್ಯಕ್‌ ಕರ್ಮ, ಸಮ್ಯಕ್‌ ಆಜೀವ, ಸಮ್ಯಕ್‌ ವ್ಯಾಯಾಮ, ಸಮ್ಯಕ್‌ ಸ್ಮೃತಿ, ಸಮ್ಯಕ್‌ ಸಮಾಧಿ.‌’

(ಗ್ರಂಥಕೃಪೆ: ಜಿ.ಪಿ. ರಾಜರತ್ನಂ ಅವರ ‘ಜ್ಞಾನದಯಾಸಿಂಧು ಭಗವಾನ್‌ ಬುದ್ಧ’)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು