ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಗಿಲ್ಲ ಗಡಿ ಇದು ವಾಗಡಿ!

Last Updated 20 ಜುಲೈ 2019, 19:30 IST
ಅಕ್ಷರ ಗಾತ್ರ

ನನ್ನ ಬಸ್ ಸೀಟಿನ ಕೆಳಗೆ ಏನೋ ದಡಬಡ ಸದ್ದಾಯಿತು. ಮರುಗಳಿಗೆಯೇ ಕೋಳಿಗಳ ಗದ್ದಲ. ‘ಅರೇ! ಇದೇನು ಬಸ್ಸಿನಲ್ಲಿ ಕೋಳಿ!' ಬೆಚ್ಚಿಬಿದ್ದು, ಕರ್ಟನ್ ಸರಿಸಿ ನೋಡಿದೆ. ಯಾವನೋ ಪುಣ್ಯಾತ್ಮ ಕೋಳಿಗಳ ಬಿದಿರು ಗೂಡನ್ನು ನನ್ನ ಸೀಟಿನ ಕೆಳಗೆ ತಳ್ಳಿ ಅದಕ್ಕೆ ತಲೆ ಇಟ್ಟು ಪವಡಿಸಿದ್ದ. ಥೇಟ್ ಶ್ರೀರಂಗನಾಥ ಸ್ವಾಮಿ ಪೋಸ್‍ನಲ್ಲಿ!

ರಾಜಸ್ಥಾನದ ಉದಯಪುರದಿಂದ ಮಧ್ಯಪ್ರದೇಶದ ಇಂದೋರ್‌ನತ್ತ ಹೊರಟಿದ್ದ ಆ ಸ್ಲೀಪರ್ ಬಸ್ ತೇಜಸ್ವಿಯವರ ‘ಜುಗಾರಿ ಕ್ರಾಸ್’ನ ‘ಖದ್ದೂಸ್ ಎಕ್ಸ್‍ಪ್ರೆಸ್' ನೆನಪಿಸುತ್ತಿತ್ತು. ರಸ್ತೆಯಲ್ಲಿ ಸಿಕ್ಕ ಹಳ್ಳಿಗಳಲ್ಲೆಲ್ಲಾ ನಿಲ್ಲುತ್ತಿದ್ದ ಬಸ್ ಯಾರಿಗೂ ಇಲ್ಲ ಎನ್ನದೇ, ಸರಕು ಸರಂಜಾಮಿನ ಜೊತೆ ಜನಗಳನ್ನೂ ಹತ್ತಿಸಿಕೊಳ್ಳುತ್ತಾ ಸೀಟುಗಳ ಮಧ್ಯದ ಖಾಲಿ ಜಾಗವನ್ನು ತುಂಬಿಕೊಳ್ಳುತ್ತಿತ್ತು. ಚಕ್ರಗಳ ಮೇಲೆ ಹಳ್ಳಿಯೇ ಸವಾರಿ ಹೊರಟಂತಿತ್ತು.

ಬೀಜ ಶಿಕಾರಿ

ದೆಹಲಿಯ ಬೀಜಮೇಳಕ್ಕೆ ಬಂದಿದ್ದ ರಾಜಸ್ಥಾನದ ರೈತರ ಮಳಿಗೆ ನನ್ನನ್ನು ಆಕರ್ಷಿಸಿತ್ತು. ‘ಇದೇನು ಮಹಾ. ನಮ್ಮ ಊರಿಗೆ ಬನ್ನಿ, ಇನ್ನಷ್ಟು ಬೀಜಗಳನ್ನು ತೋರಿಸುತ್ತೇನೆ. ಕಾಡುಹಳ್ಳಿಗಳಲ್ಲಿ ಸುತ್ತಾಡಿಸುತ್ತೇನೆ' ಎಂದು ಬೀಜ ಸಂರಕ್ಷಕ ರಂಗಲಾಲ್ ದಾಮೋರ್ ಆಸೆ ಹುಟ್ಟಿಸಿದರು.

ಹೇಗೂ ಬೆಂಗಳೂರಿಗೆ ಹಿಂತಿರುಗುವ ಟಿಕೆಟ್ ಕಾದಿರಿಸಿರಲಿಲ್ಲ. ಸರಿ, ದೆಹಲಿಯಿಂದ ಮಧ್ಯಪ್ರದೇಶದ ರತ್ಲಂಗೆ ಹೋಗಿ, ಅಲ್ಲಿಂದ ದಕ್ಷಿಣ ರಾಜಸ್ಥಾನದ ಸುತ್ತಾಟ ಮುಗಿಸಿ, ಊರಿಗೆ ವಾಪಸಾಗಲು ನಿರ್ಧರಿಸಿದೆ. ಹಿಂದಿ ಗೊತ್ತಿದ್ದ, ಜಾರ್ಖಂಡ್ ಗೆಳೆಯ ಸೌಮಿಕ್ ಜೊತೆಯಾದ.

ವಾಹ್, ವಾಗದ್!

ಮಧ್ಯಪ್ರದೇಶ, ಗುಜರಾತ್ ಮತ್ತು ರಾಜಸ್ಥಾನದ ಗಡಿಯ ಈ ಭಾಗ ‘ವಾಗದ್' ಎಂದೇ ಜನಪ್ರಿಯ. ಬಿಲ್, ದಾಮೂರ್, ಭಗೋರ, ನೀನಾಮ, ಚರಪೋಟ ಮೊದಲಾದ ಆದಿವಾಸಿ ಸಮುದಾಯಗಳು ಇಲ್ಲಿ ನೆಲೆಸಿವೆ; ಕೃಷಿಯನ್ನೇ ನಂಬಿ ಬದುಕುತ್ತಿವೆ. ಹಿಂದಿ - ಗುಜರಾತಿ ಮಿಶ್ರಣದ ‘ವಾಗಡಿ' ಎಂಬ ಸ್ಥಾನಿಕ ಭಾಷೆಯನ್ನು ಅವರು ಮಾತಾಡುತ್ತಾರೆ. ಗುಜರಾತಿ ಕೂಡ ಬಳಕೆಯಲ್ಲಿದೆ. ಓದು ಬರಹವೆಲ್ಲ ಹಿಂದಿಯಲ್ಲೇ.

‘ವಾಗ್ದಾರ’ ಎಂಬ ಸಂಸ್ಥೆ ಇಲ್ಲಿನ ಆದಿವಾಸಿಗಳ ಜೊತೆ ಕೆಲಸ ಮಾಡುತ್ತದೆ. ಅದರ ಮುಖ್ಯಸ್ಥ ಜಯೇಷ್ ಜೋಷಿ ನಮ್ಮ ಸುತ್ತಾಟದ ಜವಾಬ್ದಾರಿ ಹೊತ್ತು, ಜೀಪು ಮತ್ತು ಪಂಚಾಬಾಯ್ ಪಟೇಲ್ ಎಂಬ ತಮ್ಮ ಸಹೋದ್ಯೋಗಿಯನ್ನು ಗೈಡ್ ಆಗಿ ಕಳಿಸಿದ್ದರು.

ನಾವು ಮೊದಲು ಹೊರಟಿದ್ದು ದೆಹಲಿಯಲ್ಲಿ ಸಿಕ್ಕಿದ ರಂಗಲಾಲ್ ದಾಮೋರ್‌ ಅವರ ರಾಥಾಪಾಣ್ ಹಳ್ಳಿಗೆ.

ಊರಿಗೆ ಕಾಲಿಡುತ್ತಿದ್ದಂತೆ, ನೂರಾರು ವೀರಗಲ್ಲು, ಹಾರುತ್ತಿದ್ದ ಬಾವುಟ ಗಮನಸೆಳೆದವು! ಟಿಬೇಟನ್ ಕಾಲೊನಿ ಹೊಕ್ಕ ಅನುಭವ. ನಮ್ಮ ಕುತೂಹಲ ಗಮನಿಸಿದ ಗೈಡ್ ಪಂಚಾಬಾಯ್ ಪಟೇಲ್ ‘ಹಳ್ಳಿಯಲ್ಲಿ ಯಾರೇ ಸತ್ತರೂ ಅವರ ಹೆಸರಲ್ಲಿ ಕಲ್ಲು ನೆಡುತ್ತಾರೆ. ಅದರ ಮೇಲೆ ಸತ್ತವರ ವಿವರಗಳನ್ನು ಕೆತ್ತುತ್ತಾರೆ. ಪ್ರತಿಯೊಂದು ಹಬ್ಬದಲ್ಲೂ ಕಲ್ಲಿಗೆ ಪೂಜೆ ನಡೆಯುತ್ತದೆ’ ಎಂದು ಬಾವುಟದ ಹಿನ್ನೆಲೆ ವಿವರಿಸಿದರು.

ರಾಜಸ್ಥಾನದಲ್ಲಿ ಭತ್ತ?

‘ಸಾಬ್, ಏ ಜಲಜೀರ್‌ ಚಾವಲ್' ರಂಗೂಬಾಯ್ ಜೀರಿಗೆಯಂಥ ಅಕ್ಕಿ ಕಾಳನ್ನು ನನ್ನ ಮುಂದೆ ಹಿಡಿದರು. ರಾಜಸ್ಥಾನವೆಂದರೆ ಬರದ ನಾಡು ಎಂಬ ಭ್ರಮೆಯಲ್ಲಿದ್ದ ನನಗೆ ಭತ್ತದ ಕೃಷಿ ನೋಡಿ ಅಚ್ಚರಿಯಾಯಿತು. ನೀರು ನಿಲ್ಲುವ ತಗ್ಗಿನ ಜಾಗಗಳಲ್ಲಿ ಭತ್ತದ ಕೃಷಿ ಇದೆ. ಕಾಲಿ ಕಮೋರ್, ಜಲಜೀರ್‌, ಫತಾರಿಯ, ಬಿಜಲಿ ಮೊದಲಾದ ಸ್ಥಳೀಯ ಭತ್ತದ ತಳಿಗಳನ್ನು ಬೆಳೆಯುತ್ತಾರೆ. ಭತ್ತವನ್ನು ಕೈಯಿಂದಲೇ ಕುಟ್ಟಿ ಅಕ್ಕಿ ಮಾಡಿಕೊಳ್ಳುತ್ತಾರೆ.

ರಂಗಲಾಲರ ಮನೆಯಲ್ಲಿ ಇಡೀ ಮಧ್ಯಾಹ್ನ ಕಳೆದೆವು. ಬಿಳಿ ಮುಸುಕಿನ ಜೋಳದ ರೊಟ್ಟಿ, ಜಾಲಾರ್ ಪಲ್ಯದ ಊಟ ಚಪ್ಪರಿಸಿದೆವು. ಇದೊಂದೇ ಮನೆಯಲ್ಲಿ ಇಪ್ಪತ್ನಾಲ್ಕು ದೇಸಿ ಬೀಜದ ತಳಿಗಳು ನಮಗೆ ಸಿಕ್ಕವು.

ಮುಂದಿನ ಪಯಣ ಮುಂಡರಿ ಎಂಬ ಗ್ರಾಮಕ್ಕೆ. ಸರಲಾ ದೇವಿ ಕುಟುಂಬದ ಮುಖ್ಯಸ್ಥೆ. ಅಜ್ಜಿಯ ಮೊಮ್ಮಕ್ಕಳು, ಸೊಸೆಯಂದಿರೆಲ್ಲಾ ನೆರೆದರು. ಗಂಡಸರೆಲ್ಲಾ ನಗರಕ್ಕೆ ಗುಳೆ ಹೋಗಿರುವುದರಿಂದ ಹೊಲದ ಕೆಲಸವೆಲ್ಲ ಹೆಣ್ಣು ಮಕ್ಕಳ ಪಾಲಿಗೆ.

ಮನೆಯಲ್ಲಿದ್ದ ಬೀಜ, ಕಾಯಿ, ಹಣ್ಣುಗಳು ಒಂದೊಂದಾಗಿ ಹೊರಬಂದವು. ಬೀಜದೊಟ್ಟಿಗೆ ಅದನ್ನು ಉಳಿಸಿದ ಬೀಜ ಸಂರಕ್ಷಕರ ದಾಖಲಾತಿ ಕೂಡ ಮುಖ್ಯವಾದ್ದರಿಂದ, ಬೀಜ ಹಿಡಿದು ಪೋಸ್ ಕೊಡಲು ಮನವಿ ಮಾಡಿದೆ. ಸೆರಗಿನಿಂದ ಮುಚ್ಚಿದ ಮುಖವನ್ನು ಇಂತಿಷ್ಟೇ ತೋರುತ್ತಿದ್ದ ಹೆಣ್ಣುಮಕ್ಕಳು, ಕ್ಯಾಮೆರಾ ಹೊರತೆಗೆಯುತ್ತಿದ್ದಂತೆ, ತಲೆ ಕೆಳಗೆ ಹಾಕುತ್ತಿದ್ದರು. ಈ ಕುಟುಂಬದ ಜೊತೆ ಒಡನಾಟವಿದ್ದ ಪಟೇಲರು ಅಜ್ಜಿಯ ಜೊತೆ ವಾಗಡಿ ಭಾಷೆಯಲ್ಲಿ ಅದೇನೋ ಮಾತನಾಡಿದರು. ಮುಗುಳ್ನಕ್ಕ ಅಜ್ಜಿ ಕುಂಬಳ ಹಿಡಿದು ಪೋಸು ಕೊಟ್ಟಿದ್ದೇ ತಡ, ಉಳಿದ ಹೆಣ್ಣುಮಕ್ಕಳು ತರಹೇವಾರಿ ಬೀಜ, ಕಾಯಿಗಳನ್ನು ಹಿಡಿದು ಫೋಟೊ ಸೆಷನ್‍ಗೆ ಸಿದ್ಧವಾಗಿ ನಿಂತರು. ಮುಖ ಮುಚ್ಚಿದ್ದ ಸೆರಗು ಅದಾವ ಮಾಯದಲ್ಲೋ ಸರಿದು ಹೋಗಿತ್ತು; ರಾಜಸ್ಥಾನದ ಹಳ್ಳಿ ಹೆಣ್ಣುಮಕ್ಕಳ ಚೆಲುವು ಕ್ಯಾಮೆರಾ ಕಣ್ಣಲ್ಲಿ ಮಿನುಗುತ್ತಿತ್ತು.

ಮೊಳಕೈ ಉದ್ದದ ಔಡಲ

ಊರಂಚಿನ ಹೊಲದ ಬದುವಿನ ಮೇಲೆ ಔಡಲದ (ಹರಳು) ಸಾಲಿತ್ತು. ನಾನೆಂದೂ ನೋಡದ ಅತ್ಯಂತ ಉದ್ದನೆಯ ‘ಜುಮಕ ಅರಂಡಿ' ಔಡಲದ ಗೊನೆಗಳು! ಪ್ರತಿ ಗೊನೆಯೂ ಮೊಳಕೈ ಉದ್ದವಿದ್ದವು. ಗೊನೆಗಳ ಫೋಟೊ ತೆಗೆಯಲು ಕ್ಯಾಮೆರಾ ತೆಗೆಯುತ್ತಿದ್ದಂತೆ, ಯುವತಿಯರ ಗುಂಪೊಂದು ರೂಪದರ್ಶಿಗಳಾಗಲು ತಾ ಮುಂದು, ನಾ ಮುಂದು ಪೈಪೋಟಿಗೆ ನಿಂತಿತು. ಎಲ್ಲರನ್ನು ಸರದಿಯಲ್ಲಿ ನಿಲ್ಲಿಸಿದ ಪಟೇಲ್, ಒಬ್ಬೊಬ್ಬರಾಗಿ ಗೊನೆ ಹಿಡಿದು ನಿಲ್ಲಲು ಹೇಳಿದರು. ಔಡಲದ ಫೋಟೋ ಸೆಷನ್, ಮದುವೆ ಆರತಕ್ಷತೆಯ ನೆನಪು ತಂದಿತು.

ನಿಂಬೆಗಾತ್ರದ ಟೊಮೆಟೊ ಹೊಲದ ಹಾದಿಯಲ್ಲೆಲ್ಲ ತಮ್ಮ ಪಾಡಿಗೆ ತಾವು ಹುಟ್ಟಿಕೊಂಡಿದ್ದವು. ಅದರ ಬೀಜ ಸಂಗ್ರಹಿಸಿಕೊಂಡೆವು. ಮುಂಡರಿ ಗ್ರಾಮದ ಸುತ್ತಾಟದಲ್ಲೇ ಇಡೀ ಮಧ್ಯಾಹ್ನ ಕಳೆದುಹೋಯಿತು. ಸರಲಾ ದೇವಿ ಕೊಟ್ಟ ಅವಲಕ್ಕಿ ಮತ್ತು ಚಹಾ ಚಪ್ಪರಿಸಿ, ಸಂಜೆಯ ಇಳಿಗತ್ತಲಲ್ಲಿ ಬಾನಸವಾಡದತ್ತ ವಾಪಸ್ ಹೊರಟೆವು. ಬೀಜ ತುಂಬಿಕೊಂಡ ಬ್ಯಾಗ್ ಭಾರಕ್ಕೆ ತೊನೆಯುತ್ತಿತ್ತು.

ಪಶುಪಾಲಕರ ಸಾಂಗತ್ಯದಲ್ಲಿ

‘ಮುಂಜಾನೆ ಬೇಗ ಸಿದ್ಧವಾಗಿರಿ. ಬಿಸಿಲೇರುವ ಮುನ್ನ ಹೋಗಿ ಬಂದು ಬಿಡೋಣ' ಎಂದು ಪಂಚಬಾಯ್ ಪಟೇಲರು ಹಿಂದಿನ ದಿನವೇ ಹೇಳಿದ್ದರು. ಬಾನಸವಾಡ ಪಟ್ಟಣದ ಹೊರವಲಯದಲ್ಲಿದ್ದ ‘ವಾಗ್ದರಾ’ ಸಂಸ್ಥೆಯ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿದ್ದೆವು.

ನಾನು ಬೆಳಿಗ್ಗೆಯೇ ಎದ್ದು, ಚಹಾ ಕುಡಿದು ಅತಿಥಿಗೃಹದ ಆವರಣದಲ್ಲಿದ್ದ ಔಷಧೀಯ ಗಿಡಗಳನ್ನು ನೋಡುತ್ತಿದ್ದೆ. ‘ಕೆ.ಪಿ... ಅಲ್ಲಿ ನೋಡಿ' ಎಂದು ಸೌಮಿಕ್ ಕೂಗು ಹಾಕಿದರು. ಅವರು ಕೂಗಿದತ್ತ ನೋಡಿ, ಚಕಿತಗೊಂಡೆ. ಕತ್ತೆಗಳ ಬೆನ್ನಿಗೆ ಹಗ್ಗದ ಮಂಚದ ಅಂಬಾರಿ ಕಟ್ಟಿ ಪಾತ್ರೆ ಪಗಡೆ, ಮಕ್ಕಳು, ಎಳೆಯ ಕುರಿ ಮರಿಗಳನ್ನು ಕುಳ್ಳಿರಿಸಿ ಬರುತ್ತಿರುವ ಕತ್ತೆಗಳ ಮೆರವಣಿಗೆ! ಕತ್ತೆಗಳ ಹಿಂದೆ ಮುಂದೆ, ರಾಜಸ್ಥಾನಿ ಉಡುಗೆಯಲ್ಲಿ ನಡೆದು ಬರುತ್ತಿದ್ದ ಹೆಣ್ಣು ಮಕ್ಕಳು. ನನಗೆ ಒಂದುಕ್ಷಣ ಮೈಸೂರು ದಸರಾದ ನೆನಪು ಬಂತು.

ಮೆರವಣಿಗೆಯ ಕಾಲಾಳು ಒಬ್ಬರನ್ನು ನಿಲ್ಲಿಸಿ ಸೌಮಿಕ್ ಮಾತನಾಡಿ ಬಂದರು. ‘ಇವರು ರಬರೀ ಸಮದಾಯಕ್ಕೆ ಸೇರಿದವರು. ಪಶುಪಾಲಕರು‘ ಎಂದರು.

ನೂರಾರು ವರ್ಷಗಳ ಹಿಂದೆ ಮೆಡಿಟರೇನಿಯನ್ ಕಡೆಯಿಂದ ವಲಸೆ ಬಂದ ರಬರೀ ಜನಾಂಗದವರು ಮೂಲತಃ ಪಶುಪಾಲಕರು. ಒಂಟೆ, ಕುರಿ ಮತ್ತು ಆಡುಗಳನ್ನು ದೊಡ್ಡ ಗುಂಪಲ್ಲಿ ಸಾಕುತ್ತಾರೆ. ವರ್ಷಪೂರ ಸುತ್ತಾಟದಲ್ಲೇ ಕಳೆವ ಅಲೆಮಾರಿಗಳಿವರು. ಶಿವ ತನ್ನ ಮಡದಿ ಪಾರ್ವತಿ ಸಾಕಿದ ಒಂಟೆಗಳನ್ನು ನೋಡಿಕೊಳ್ಳಲು ಇವರನ್ನು ಭೂಮಿಗೆ ಕಳಿಸಿದ ಎಂಬುದು ಪ್ರತೀತಿ.

ವಾಯುವ್ಯ ರಾಜಸ್ಥಾನದ ಮರಳುಗಾಡಿನ ಜೋಧಪುರ ಇವರ ಮೂಲನೆಲೆ. ಗುಜರಾತಿನ ಕಛ್ ಮತ್ತು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲೂ ಇವರು ಕಾಣಸಿಗುತ್ತಾರೆ. ರಾಜಸ್ಥಾನದಲ್ಲಿ ಇವರನ್ನು ‘ರೈಕಾ’ ಎಂದು ಕರೆಯಲಾಗುತ್ತದೆ.

ಅವಲಕ್ಕಿ ‘ಪೋಹ' ಮತ್ತು ಚಹಾದ ಶಾಸ್ತ್ರ ಮುಗಿಸಿ, ಕಾಜಾಲಿಯ ಎಂಬ ಹಳ್ಳಿಯತ್ತ ನಮ್ಮ ಜೀಪ್ ಪ್ರಯಾಣ ಬೆಳೆಸಿತು. ಆರೆಂಟು ಕಿ.ಮೀ ಕ್ರಮಿಸಿರಬೇಕು; ರಸ್ತೆಯ ಪಕ್ಕದ ಖಾಲಿ ಹೊಲದಲ್ಲಿ ಕೆಂಪು ಕೆಂಪು ಆಕೃತಿ! ‘ಜೀಪ್ ನಿಲ್ಲಿಸಿ' ಜೋರಾಗಿ ಕೂಗಿದೆ. ಗಾಬರಿಬಿದ್ದ ಡ್ರೈವರ್ ತಟ್ಟನೆ ಬ್ರೇಕ್ ಒತ್ತಿ, ನನ್ನತ್ತ ತಿರುಗಿದ. ಮರುಗಳಿಗೆಯಲ್ಲೇ ಕ್ಯಾಮೆರಾ ಹೊತ್ತ ನಾನು ಹೊಲದತ್ತ ಓಡಿದೆ.

ನೂರಾರು ಕುರಿಗಳ ಹಿಂಡಿನ ನಡುವೆ, ಆರೇಳು ಮಂದಿ ಕೆಂಪು ಪೇಟ ತೊಟ್ಟ ಹಿರಿಯರು ಊಟಕ್ಕೆ ಕೂತಿದ್ದರು. ಜಾಲಿ ಮುಳ್ಳಿನ ಸೌದೆ ಉರಿಸುತ್ತಾ, ಅಜ್ಜಿಯೊಂದು ರೊಟ್ಟಿ ಬೇಯಿಸುತ್ತಿತ್ತು. ತಿರುವಿ ಹುರಿಗಟ್ಟಿಸಿದ ಮೀಸೆಯ ಯುವಕರು ಕುರಿಗಳನ್ನು ಗುಂಪಿಗೆ ಸೇರಿಸುತ್ತಿದ್ದರು. ಮುಂಜಾನೆಯ ಎಳೆ ಬಿಸಿಲು ಕುರಿಗಳ ಮೈ ಸವರಿ ಹೊಂಬಣ್ಣಕ್ಕೆ ತಿರುಗಿತ್ತು. ರಬರೀ ಪಶುಪಾಲಕರ ದಿನಚರಿಯನ್ನು ಸೆರೆಹಿಡಿಯುವ ಭಾಗ್ಯ ನನ್ನ ಪಾಲಿಗಿತ್ತು.

ನಾವು ಮೊದಲೇ ನೋಡಿದ ಕತ್ತೆಗಳ ಮೆರವಣಿಗೆ ಇವರ ಗುಂಪಿನದೇ. ಮುಂದಿನ ಹಳ್ಳಿಗೆ ಹೋಗಿ ಅವರು ಬಿಡಾರ ಹೂಡುತ್ತಾರೆ. ಸಂಜೆ ಇವರು ಅವರ ಜೊತೆಗೂಡುತ್ತಾರೆ. ಬಿಸಿ ಬಿಸಿ ಮುಸುಕಿನ ಜೋಳದ ರೊಟ್ಟಿಯನ್ನು ಸಣ್ಣ ಕುಡಿಕೆಯಂಥ ಗಂಗಾಳದಲ್ಲಿ ಹಾಕಿಕೊಂಡು ಮೆಲ್ಲುತ್ತಿದ್ದ ಗುಂಪಿನ ಹಿರಿಯಜ್ಜ ನಮ್ಮನ್ನು ಊಟಕ್ಕೆ ಆಹ್ವಾನಿಸಿದರು.

ಕುರಿಯ ಬೆಣ್ಣೆ ಹಚ್ಚಿದ ಬಿಸಿ ಬಿಸಿ ರೊಟ್ಟಿಯನ್ನು ಅಜ್ಜಿ ನಮ್ಮ ಕೈಗಿತ್ತಿತು. ಕುರಿಯ ಹಾಲಿನಿಂದ ಬೆಣ್ಣೆ ಮತ್ತು ತುಪ್ಪ ಮಾಡುವುದನ್ನು ಕೇಳಿರಲಿಲ್ಲ. ಈಗ ರುಚಿ ನೋಡುವ ಅವಕಾಶ ಸಿಕ್ಕಿತು. ಅವರ ಗುಂಪಿನ ಜೊತೆ ನಾವೂ ಒಂದಾಗಿ ರೊಟ್ಟಿ ತಿಂದೆವು. ಅವರ ಪ್ರೀತಿಗೆ ಶರಣು ಹೇಳಿ ಹೊರಟೆವು.

ಔಷಧೀಯ ಗೋಧಿ

ನಾವು ಕಾಜಾಲಿಯ ಹಳ್ಳಿ ತಲುಪುವ ಹೊತ್ತಿಗಾಗಲೇ ಸೂರ್ಯ ಮೈಸುಡುತ್ತಿದ್ದ. ನಮಗಾಗಿ ಕಾಯುತ್ತಿದ್ದ ಅಮೃತಲಾಲರ ಮನೆಯವರು ಬೀಜಗಳನ್ನೆಲ್ಲಾ ಪೇಪರ್ ಪೊಟ್ಟಣ ಕಟ್ಟಿ ಮೊರದಲ್ಲಿಟ್ಟಿದ್ದರು. ಚಹಾ ಕೂಡ ಕಾಯುತ್ತಿತ್ತು.

ಅಮೃತಲಾಲರ ಸಂಗ್ರಹದಲ್ಲಿ ಬಿಳಿ ಬಣ್ಣದ ‘ಸಫೇದ್ ಮಕ್ಕ' ಮತ್ತು ಕೆಂಪು ಬಣ್ಣದ ‘ಪಿಲಿ ಮಕ್ಕ’ ಇದ್ದವು. ಬೀಗರ ಮನೆ ಜಬವಾದಿಂದ ತಂದ ‘ಪಿತಾಂಬರಿ' ಹೆಸರಿನ ಗುಂಡನೆಯ ಗೋಧಿ ತಳಿಯ ನಾವೆಂದೂ ಕಂಡಿರಲಿಲ್ಲ. ‘ಇದರಲ್ಲಿ ಔಷಧೀಯ ಗುಣವಿದೆ. ಸಕ್ಕರೆ ಅಂಶ ಕಡಿಮೆ. ಮಧುಮೇಹಿಗಳಿಗೆ ಒಳ್ಳೆಯದು' ಎಂದು ಅಮೃತಲಾಲ್ ಪಿತಾಂಬರಿಯ ಗುಣಗಾನ ಮಾಡಿದರು. ಸೌಮಿಕ್ ಮತ್ತು ನಾನು ತಲಾ ಒಂದೊಂದು ಕೆಜಿ ಬೀಜ ತೆಗೆದುಕೊಂಡು ಹಣ ನೀಡಿದೆವು. ನಯವಾಗಿ ಹಣ ಹಿಂತಿರುಗಿಸಿದ ಅಮೃತಲಾಲ್ ‘ಸಾಬ್, ಎ ಘರ್ ಕಾ ಬೀಜ್ ಹೈ; ದೂಕಾನ್ ಕಾ ನಹೀ. ಆಪ್ ಕಿಸಾನ್ ಕೊ ದಿಜಿಯೇ' ಎಂದರು. ಬೀಜಕ್ಕೆ ಬೆಲೆ ಕಟ್ಟಿದ ನಮ್ಮ ಬಗ್ಗೆ ನಮಗೇ ನಾಚಿಕೆ ಬಂತು. ನನ್ನ ಬ್ಯಾಗ್ ತಡಕಾಡಿ ‘ಮದನಪಲ್ಲಿ’ ಟೊಮ್ಯಾಟೊ ಬೀಜದ ಪ್ಯಾಕೆಟ್ ನೀಡಿದೆ. ಅವರ ಮುಖವರಳಿತು.

ಕೊನೆಗೂ ಸಿಕ್ಕಿತು ದೇಸಿ ಹತ್ತಿ!

ಅಮೃತ ಲಾಲ್‍ರ ಮನೆಯಲ್ಲಿ ಊಟ ಮುಗಿಸಿ ಬಡಾತಲಾಬ್ ಗ್ರಾಮಕ್ಕೆ ಹೊರಟೆವು.ಗ್ರಾಮದ ಮುಖ್ಯಸ್ಥ ಜಗಮಲ್ ಪರಗಿ ಮತ್ತು ಅವರ ಸ್ನೇಹಿತರು ಹೊಲದಲ್ಲೆಲ್ಲಾ ಸುತ್ತಾಡಿಸಿ, ಊರ ದೇವಸ್ಥಾನದಲ್ಲಿ ಸಭೆ ಸೇರಿದ್ದ ಮಹಿಳಾ ಸಂಘದ ಸಭೆಗೆ ಕರೆದೊಯ್ದರು.

‘ಬಿಳಿ ಮುಸುಕಿನಜೋಳದ ರೊಟ್ಟಿ ಮತ್ತು ಉದ್ದಿನ ಬೇಳೆ ಪಲ್ಯ ಮುಂದೆ ಬೇರೆ ಯಾವುದೂ ಇಲ್ಲ. ಈಗ ಮುಸುಕಿನ ಜೋಳದ ರೊಟ್ಟಿ ಮಾಡೋರೆ ಕಡಿಮೆ. ಎಲ್ಲರಿಗೂ ಗೋಧಿ ರೊಟ್ಟಿನೇ ಬೇಕು. ಅದಕ್ಕೆ ರುಚಿಯೇ ಇಲ್ಲ’ - ಅನಿತಾ ದಮೂರ್ ಹೇಳಿದರು. ಅನಿತಾ ಹಳ್ಳಿ ಹೆಣ್ಣುಮಕ್ಕಳ ಸ್ವಸಹಾಯ ಸಂಘ ನಡೆಸುತ್ತಾರೆ.

‘ನಾನು ಮದುವೆಯಾಗಿ ಬಂದಾಗ ಸಿರಿಧಾನ್ಯಗಳಾದ ಕೋದ್ರಾ, ಕಾಂಗ್, ಸಾಮ, ಚೇನಾ ಬೆಳೆಯುತ್ತಿದ್ದೆವು. ಅವುಗಳನ್ನು ಕುಟ್ಟಿ ಅಕ್ಕಿ ಮಾಡುತ್ತಿದ್ದೆವು. ಈಗಿನ ತಲೆಮಾರಿಗೆ ಇವು ಗೊತ್ತೇ ಇಲ್ಲ' ಎಂದು ಐವತ್ತರ ಹರೆಯದ ಮಹಿಳೆ ಮಾತಿ ಚೇತನ್ ಕಳೆದ ದಿನಗಳ ನೆನಪು ಮಾಡಿಕೊಂಡರು.

ಬಡಾತಲಾಬ್ ಗ್ರಾಮದ ಸುತ್ತಾಟದಲ್ಲಿ ‘ಕಿಡ್ನಿ ಕಾಟನ್’ ಎಂಬ ಅಪರೂಪದ ಹತ್ತಿ ಗಿಡಗಳ ನೋಡಿದೆ. ಹತ್ತಿಯ ಬೀಜಗಳಲ್ಲಾ ಒಂದಕ್ಕೊಂದು ಅಂಟಿಕೊಂಡು ‘ಕಿಡ್ನಿ’ ಥರ ಕಾಣುವುದರಿಂದ ಈ ಹೆಸರು! ನಾವು ಹುಡುಕುತ್ತಿದ್ದ ‘ವಾಗದ್' ತಳಿ ದೇಸಿ ಹತ್ತಿ ಕೂಡ ಸಿಕ್ಕಿತು.

ಜೀವ ಪ್ರೀತಿಯ ಜೀವ

‘ಇಲ್ಲೇ ಪಕ್ಕದ ಗ್ರಾಮದಲ್ಲಿ ಹಳೆಯ ಕಾಲದ ಬೀಜ ಬಚ್ಚಿಡುವ ವಾಡೆಗಳಿವೆ. ನೋಡೋಣ ನಡೆಯಿರಿ' ಎನ್ನುತ್ತ ಪಟೇಲ್ ನಮ್ಮನ್ನು ಅಮಲೀಪರ ಗ್ರಾಮಕ್ಕೆ ಹೊರಡಿಸಿದರು. ಇಪ್ಪತ್ತೈದು ಮನೆಗಳ ಸಣ್ಣ ಗ್ರಾಮ. ಊರ ಹೊರಗೆ, ಹೊಲದ ಅಂಚಿನಲ್ಲಿದ್ದ ಮನೆಗೆ ಬಂದೆವು. ಮನೆಯೊಡತಿ ರೇಷ್ಮಾ ದೇವಿ, ನಮ್ಮನ್ನು ಸ್ವಾಗತಿಸಿ ಮನೆಯೊಳಗೆ ಕರೆದೊಯ್ದು , ಸಗಣಿ ಸಾರಿಸಿದ ಮಣ್ಣಿನ ವಾಡೆಗಳನ್ನು ತೋರಿಸಿದರು.

ಅಲ್ಲೇ ಮೂಲೆಯಲ್ಲಿ ನಿಲ್ಲಿಸಿದ್ದ ಆಳೆತ್ತರದ ಎರಡು ಸೋರೆ ನನ್ನ ಗಮನ ಸೆಳೆದವು. ಐದು ಅಡಿಗೂ ಮೀರಿ ಉದ್ದವಿರುವ ಈ ಸೋರೆಯನ್ನು ರೇಷ್ಮಾ ದೇವಿ ಕುಟುಂಬ ಉಳಿಸಿ ಬೆಳೆಸುತ್ತಿದೆ.

ಕಂಕುಳದಲ್ಲಿದ್ದ ಮಗು ಹಸಿವಿನಿಂದ ಅಳಲು ಶುರುಮಾಡಿತು. ನಮ್ಮ ಜೊತೆ ಮಾತಾಡುತ್ತಲೇ ಕಿಟಕಿಯಲ್ಲಿ ಇಟ್ಟಿದ್ದ ರೊಟ್ಟಿ ಗಂಟಿಗೆ ರೇಷ್ಮಾ ದೇವಿ ಕೈ ಹಾಕಿದರು. ರೊಟ್ಟಿ ತಿನ್ನುತ್ತಿದ್ದ ಒಂದೆರಡು ಗುಬ್ಬಚ್ಚಿಗಳು ಬೆದರಿ ಹಾರಿ ಹೋದವು. ಗುಬ್ಬಚ್ಚಿಯ ಪಾಲಾಗಿದ್ದ ರೊಟ್ಟಿಯ ತುಂಡೊಂದನ್ನು ಮುರಿದು ಮಗುವಿನ ಕೈಗೆ ಕೊಟ್ಟು, ಮತ್ತೆ ನಮ್ಮ ಜೊತೆ ಮಾತಿಗೆ ನಿಂತರು. ಒಂದಷ್ಟು ಹೊತ್ತಿನ ನಂತರ ಗುಬ್ಬಚ್ಚಿಗಳು ಕಿಟಕಿಯಿಂದ ಒಳಬಂದು ಮತ್ತೆ ರೊಟ್ಟಿ ತಿನ್ನುವುದರಲ್ಲಿ ತಲ್ಲೀನವಾದವು. ಆ ತಾಯಿ ಅತ್ತ ನೋಡಿದರೂ ಗುಬ್ಬಚ್ಚಿಗಳನ್ನು ಓಡಿಸುವ ಪ್ರಯತ್ನ ಮಾಡಲಿಲ್ಲ.

ಆ ಕ್ಷಣ ಕಾರ್ಪೋರೇಟ್ ಜಗತ್ತಿನ ‘ಕೀಟಾಣು' ಕಲ್ಪನೆಯನ್ನು ಛಿದ್ರಗೊಳಿಸುವ ದೇವತೆಯಾಗಿ ರೇಷ್ಮಾ ದೇವಿ ನನಗೆ ಕಂಡರು. ತನ್ನದೇ ಜಗತ್ತಿನ ಸಕಲ ಜೀವಿಗಳ ಜೊತೆ ಸಾಮರಸ್ಯದಿಂದ ಬದುಕುವ ಆ ತಾಯಿಯನ್ನು ಕಂಡು ಕಣ್ತುಂಬಿ ಬಂತು. ಒಂದೆರಡು ಹನಿ ಕಣ್ಣೀರು ನನಗರಿವಿಲ್ಲದಂತೆ ಜಾರಿದವು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT