ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡಿನ ದೇಹದ ಸೌಂದರ್ಯ ಮೀಮಾಂಸೆ

Last Updated 30 ಜುಲೈ 2022, 19:31 IST
ಅಕ್ಷರ ಗಾತ್ರ

ಹೆಣ್ಣಿನ ದೇಹವಷ್ಟೇ ಸೌಂದರ್ಯ, ಆಕೆಯನ್ನು ಅರೆನಗ್ನವಾಗಿ ನೋಡುವುದು ರಸಿಕತೆ. ಅವಳ ಅಂಗಾಗ ಸೌಷ್ಠವವನ್ನು ಹೊಗಳಿ ಬಿಡಿಬಿಡಿಯಾಗಿ ವರ್ಣಿಸಿ ಬರೆಯುವುದಷ್ಟೇ ಮಹಾ ಕವಿತೆ! ಅದೇ ಗಂಡಸಿನ ಅರೆಬೆತ್ತಲೆ ಚಿತ್ರಗಳು ಭಾವನೆಗಳನ್ನು ಕೆರಳಿಸುತ್ತವೆ, ಅವಮಾನಿಸುತ್ತವೆ ಎನ್ನುವುದು ಎಂತಹ ವಿತಂಡವಾದ. ಹಾಗಾದರೆ ಗಂಡಸಿನ ದೇಹದಲ್ಲಿ ಸೌಂದರ್ಯವಿಲ್ಲವೇ?’

ಇಂತಹದ್ದೊಂದು ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಈಗ ಜೋರಾಗಿ ಆಗುತ್ತಿದೆ. ಈ ಚರ್ಚೆಗೆ ಕಾರಣ ‘ಪೇಪರ್’ ಎಂಬ ಅಂತರರಾಷ್ಟ್ರೀಯ ನಿಯತಕಾಲಿಕಕ್ಕೆ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಮಾಡಿಸಿಕೊಂಡ ಅರೆನಗ್ನ ಫೋಟೊಶೂಟ್.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಶೇಷ ಫೋಟೊಗಳನ್ನು ರಣವೀರ್‌ ಹಂಚಿಕೊಳ್ಳುತ್ತಿದ್ದಂತೆಯೇ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಯಾಗಿದೆ. ಸ್ತ್ರೀನಗ್ನತೆಯನ್ನು ಆಸ್ವಾದಿಸಿ, ಕೊಂಡಾಡಿ ಸಂಭ್ರಮಿಸುವ ಸಮಾಜಕ್ಕೆ ಪುರುಷನನ್ನು ಅರೆನಗ್ನವಾಗಿ ನೋಡುವುದು ಸಹಿಸಲಾಗದ ದೃಶ್ಯ! ಇಷ್ಟೊಂದು ಅಸಹನೆ ಏಕೆ ಎಂಬ ಪ್ರಶ್ನೆ ಬಲವಾಗಿ ಕೇಳಿ ಬರುತ್ತಿದೆ.

ಮಹಿಳೆಯರ ಭಾವನೆಗಳಿಗೆ ಸಿಂಗ್ ಘಾಸಿ ಉಂಟುಮಾಡಿದ್ದಾರೆ ಎಂದು ದೆಹಲಿ ಮೂಲದ ಸ್ವಯಂಸೇವಾ ಸಂಸ್ಥೆಯೊಂದು ದೂರು ನೀಡಿದ್ದು, ಎಫ್‌ಐಆರ್‌ ಕೂಡ ದಾಖಲಿಸಲಾಗಿದೆ. ಅಲ್ಲದೆ, ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗಕ್ಕೂ ದೂರು ನೀಡಲಾಗಿದೆ. ಸ್ವಲ್ಪ ಅತಿರೇಕದ ವ್ಯಕ್ತಿತ್ವ ಎನ್ನುವ ಕಾರಣಕ್ಕೆ ಹೆಚ್ಚು ಸುದ್ದಿಯಾಗುತ್ತಿದ್ದ ರಣವೀರ್‌, ‘ನಾನು ಸಾವಿರ ಜನರ ಮುಂದೆ ಬೆತ್ತಲೆಯಾಗಿ ನಿಲ್ಲಬಲ್ಲೆ. ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅಷ್ಟು ಆತ್ಮವಿಶ್ವಾಸ ನನಗಿದೆ’ ಎನ್ನುತ್ತಿದ್ದವರು ಈಗ ಅಂತೆಯೇ ಮಾಡಿದ್ದಾರೆ.

‘ಹೆಣ್ಣುಮಕ್ಕಳ ಅರೆಬೆತ್ತಲೆ ಫೋಟೊಗಳನ್ನು ಬೇಕಾದಷ್ಟು ನಾವು ನೋಡಿದ್ದೇವೆ. ಹಲವು ನಿಯತಕಾಲಿಕೆಗಳು ಇಂಥ ಮುಖಪುಟ ಫೋಟೊ ಇಲ್ಲದೆ ಪ್ರಕಟವಾಗಿದ್ದೇ ಇಲ್ಲ. ಅಂಥದರಲ್ಲಿ ಗಂಡಸಿನ ಅರೆಬೆತ್ತಲೆ ಫೋಟೊಕ್ಕೆ ಯಾಕೆ ಇಷ್ಟು ಅತಿರೇಕದ ವರ್ತನೆ’ ಎಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಪ್ರಶ್ನಿಸಿದ್ದಾರೆ. ಬಾಲಿವುಡ್‌ ನಟಿ ವಿದ್ಯಾ ಬಾಲನ್‌ ಅವರಂತೂ ‘ನೋಡಲು ಸಾಧ್ಯವಿಲ್ಲ ಎಂದವರು ಪತ್ರಿಕೆ ಮುಚ್ಚಿಡಿ. ನಿಮಗೇನು ತೊಂದರೆ? ಈ ಚಿತ್ರದಿಂದ ನಮ್ಮ ಕಣ್ಣಿಗೆ ಹಬ್ಬವಾಗಲಿ’ ಎಂದಿದ್ದಾರೆ. ಆಲಿಯಾ ಭಟ್‌ ಸಹ ಈ ಮಾತಿಗೆ ದನಿಗೂಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊಗಳು ಟ್ರೋಲ್‌ ಆಗುತ್ತಿದ್ದು, ಹಲವರು ಮೀಮ್‌ಗಳನ್ನು ಸೃಷ್ಟಿಸಿ ಟ್ರೆಂಡ್‌ ಮಾಡುತ್ತಿದ್ದಾರೆ. ಈ ಫೋಟೊಗಳನ್ನು ಕಟುವಾಗಿ ಟೀಕಿಸಿದ ಹಲವರು ಇಂದೋರ್‌ನಲ್ಲಿ ರಣವೀರ್ ಅವರಿಗಾಗಿ ಬಟ್ಟೆ ‘ದೇಣಿಗೆ’ ಅಭಿಯಾನ ಕೂಡ ನಡೆಸಿದ್ದಾರೆ. ‘ನಿತ್ಯ ಹೆಣ್ಣುಮಕ್ಕಳ ಅರೆಬೆತ್ತಲೆ ಫೋಟೊ, ವಿಡಿಯೊ ನೋಡಿ ಜನ ಚಪ್ಪರಿಸುವಾಗ ಈ ಫೋಟೊವನ್ನು ವಿರೋಧಿಸುತ್ತಿರುವವರು ಏಕೆ ಮಾತನಾಡಲಿಲ್ಲ’ ಎನ್ನುವ ಪ್ರಶ್ನೆ ಕೂಡ ಬೆನ್ನಹಿಂದೆಯೇ ಎದ್ದಿದೆ.

ರಣವೀರ್‌ ನಗ್ನ ಫೋಟೊಶೂಟ್‌ ಕುರಿತು ಮಾತನಾಡಿರುವ ನಟ ಮತ್ತು ಅವರ ಆಪ್ತಗೆಳೆಯ ಅರ್ಜುನ್‌ ಕಪೂರ್‌, ‘ಈ ಚಿತ್ರಗಳಲ್ಲಿ ಅಸಭ್ಯತೆ ಏನಿದೆ’ ಎಂದು ಪ್ರಶ್ನಿಸಿದ್ದಾರೆ. ‘ಅವನ ಆತ್ಮವಿಶ್ವಾಸ ಮೆಚ್ಚುವಂಥದ್ದು. ಅಷ್ಟು ಸುಂದರ ದೇಹವನ್ನು ಪ್ರದರ್ಶಿಸಿ ಸಂಭ್ರಮಿಸಿದ್ದಾನೆ. ಅಸಭ್ಯ ಏನಿಲ್ಲ. ಅವನ ನಿರ್ಧಾರವನ್ನು ಗೌರವಿಸಬೇಕು’ ಎಂದು ಹೇಳಿದ್ದಾರೆ.

ರಣವೀರ್‌ ಅವರು ಕಾರ್ಪೆಟ್‌ ಮೇಲೆ ಮಲಗಿ, ಹೂವಿನ ಹಾಸಿಗೆಯ ಮೇಲೆ ಕುಳಿತು ಚಿತ್ರ ತೆಗೆಸಿಕೊಂಡಿದ್ದರು. 2.3 ಕೋಟಿ ಜನ ಆ ಚಿತ್ರಗಳನ್ನು ಲೈಕ್‌ ಮಾಡಿದ್ದರು. ಭಾರತೀಯ ನಟನೊಬ್ಬ ಅರೆ ಬೆತ್ತಲೆ ಫೋಟೊಶೂಟ್‌ ಮಾಡಿಸಿರುವುದು ಇದೇ ಮೊದಲಲ್ಲ. ಈ ಹಿಂದೆ ಪಿ.ಕೆ. ಸಿನಿಮಾಕ್ಕಾಗಿ ಅಮೀರ್‌ ಖಾನ್‌ ಅರೆಬೆತ್ತಲಾಗಿ ಕಾಣಿಸಿಕೊಂಡಿದ್ದರು. ನಟ, ರೂಪದರ್ಶಿ ಮಿಲಿಂದ್ ಸೋಮನ್ ಕೂಡ ಅರೆಬೆತ್ತಲಾಗಿ ಕಾಣಿಸಿಕೊಂಡಿದ್ದರು. ಬರ್ಟ್‌ ರೆನಾಲ್ಡ್‌ ಎಂಬ ಅಮೆರಿಕದ ಕಲಾವಿದ ಐವತ್ತು ವರ್ಷಗಳ ಹಿಂದೆ ಕಾಸ್ಮೊಪಾಲಿಟಿನ್‌ ಮ್ಯಾಗಜಿನ್‌ಗೆ ಸಂಪೂರ್ಣ ನಗ್ನರಾಗಿ ಪೋಸ್‌ ನೀಡಿದ್ದರು. ಆಗ ಜಗತ್ತಿನಾದ್ಯಂತ ‘ಪುರುಷ ದೇಹದ ಸೌಂದರ್ಯ ಮೀಮಾಂಸೆ’ ಭಾರಿ ಸದ್ದು ಮಾಡಿತ್ತು. ರಣವೀರ್‌ ಸಾಹಸ ಭಾರತದಲ್ಲಿ ಈಗ ಮತ್ತೆ ಚರ್ಚೆಯನ್ನು ಮುನ್ನೆಲೆಗೆ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT