ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೋಮ್‌ ಥಿಯೇಟರ್‌’ ಪುಸ್ತಕ ನೋಡಿ, ಕೇಳಿ !

Last Updated 24 ಜೂನ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ಕೆಲವರಿಗೆ ಓದು ನಿರಂತರ ಧ್ಯಾನವಾದರೆ, ಕೆಲ ಜನರಿಗೆ ಪುಸ್ತಕ ಅಂದ್ರೆ ಬೋರು. ಆದರೆ ಜನರಲ್ಲಿ ಓದುವ ಅಭಿರುಚಿ ಹೆಚ್ಚಿಸಬೇಕು, ಪುಸ್ತಕದ ಬಗ್ಗೆ ಪ್ರೀತಿ ಬೆಳೆಸಬೇಕು ಎಂಬ ಉದ್ದೇಶದಿಂದ ರಂಗಭೂಮಿ ತಂಡ ಪ್ರದರ್ಶನ ಕಲಾ ಸಂಸ್ಥೆ (ಪ್ರಕಾಸಂ) ‘ಹೋಮ್‌ ಥಿಯೇಟರ್’‌ ಎಂಬ ಪರಿಕಲ್ಪನೆಯನ್ನು ಹೊರತಂದಿದೆ.

ಇದು ವಿಡಿಯೊ ಬುಕ್‌.ಇದರಲ್ಲಿ ಪ್ರಸಿದ್ಧ ಲೇಖಕರ ಕೃತಿಗಳನ್ನು ಆಯ್ದುಕೊಂಡು ರಂಗಭೂಮಿ, ಸಿನಿಮಾ, ಕಿರುತೆರೆಯ ಜನಪ್ರಿಯ ನಟ– ನಟಿಯರು, ಹಿರಿಯ ಸಾಹಿತಿಗಳು ಆ ಕೃತಿಯ ಒಂದು ಅಧ್ಯಾಯ ಅಥವಾ ಪುಟವನ್ನು ವಿಡಿಯೊ ಮೂಲಕ ಓದುತ್ತಾರೆ. ಪ್ರತಿಯೊಬ್ಬರು ತಮ್ಮದೇ ಶೈಲಿಯಲ್ಲಿ, ಆಂಗಿಕ ಅಭಿನಯದ ಮೂಲಕ ಈ ಪುಸ್ತಕ ಓದಿರುವುದರಿಂದ ಈ ವಿಡಿಯೊ ಬುಕ್‌ ಅಪ್ಯಾಯಮಾನವಾಗಿದೆ.

ವಿಡಿಯೊ ಬುಕ್ ಎಂಬುದು ಪ್ರಕಾಸಂ ಸಂಸ್ಥೆಯ ಪಿ.ಡಿ ಸತೀಶ್‌ಚಂದ್ರ ಅವರ ಪರಿಕಲ್ಪನೆ. ಜೋಗಿ ಅವರ ‘ಲೈಫ್‌ ಈಸ್‌ ಬ್ಯೂಟಿಫುಲ್’‌ ಹಾಗೂಕೇಶವ ಮಳಗಿರವರ ‘ಅಂಗದ ಧರೆ’ ಕಿರು ಕಾದಂಬರಿಯನ್ನು ವಿಡಿಯೊ ರೂಪಕ್ಕಿಳಿಸಿದೆ.

ಇದರ ಬಗ್ಗೆ ಪಿ.ಡಿ. ಸತೀಶ್‌ ಚಂದ್ರ ವಿವರಿಸಿದ್ದು ಹೀಗೆ– ‘ಜನವರಿಯಿಂದ ಮಾರ್ಚ್‌ ತಿಂಗಳಲ್ಲಿ ನಮ್ಮ ಸಂಸ್ಥೆಯ ರಂಗಭೂಮಿ ಚಟುವಟಿಕೆಗಳು, ಪ್ರದರ್ಶನಗಳು ಹೆಚ್ಚಾಗಿ ನಡೆಯುತ್ತವೆ. ಆದರೆ ಈ ಬಾರಿ ಕೊರೊನಾದಿಂದ ಎಲ್ಲಾ ನಿಂತುಹೋಯಿತು. ಲೈವ್‌ ಮೂಲಕ ನಾಟಕಗಳ ಓದು, ನಾಟಕಗಳ ವಿಡಿಯೊ ಪ್ರದರ್ಶನ ಮೊದಲಾದ ಕಾರ್ಯಕ್ರಮಗಳನ್ನು ಲಾಕ್‌ಡೌನ್‌ನಲ್ಲಿ ಮಾಡಿದೇವು. ಹೀಗೆ ಯೋಚಿಸುತ್ತಿದ್ದಾಗ ವಿಡಿಯೊ ಬುಕ್‌ ಆಲೋಚನೆ ಬಂತು’ ಎಂದರು.

‘ಕಲಾವಿದರು ಸ್ನೇಹಿತರಾದಾಗ ಈ ತರಹದ ಕೆಲಸಕ್ಕೆ ಸಿಕ್ಕಾಪಟ್ಟೆ ಅನುಕೂಲ ಆಗುತ್ತೆ. ಪುಸ್ತಕವನ್ನು ಜನರ ಹತ್ತಿರ ತೆಗೆದುಕೊಂಡು ಹೋಗಬೇಕು. ಒಂದು ಕೃತಿ ಆಯ್ಕೆ ಮಾಡಿಕೊಂಡು ಎಲ್ಲರೂ ಒಟ್ಟಿಗೆ ಒಂದೊಂದು ಕಥೆ ಓದಿ ಒಂದು ದೊಡ್ಡ ವಿಡಿಯೊ ಮಾಡೋಣ ಅಂತ ಮನಸಾಯಿತು. ಓದುವುದರ ವಿಡಿಯೋ ಮಾಡಿ ಅದನ್ನು ಎಡಿಟ್ ಮಾಡಿ ನಮ್ಮದೇ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಮಾಡುವುದೆಂದು ನಿರ್ಧರಿಸಿದೆವು. ನಂತರದ ಪ್ರಶ್ನೆ ಯಾವ ಪುಸ್ತಕ ಓದುವುದು ಎನ್ನುವುದು. ಜೋಗಿಯವರ ‘ಲೈಫ್ ಈಸ್ ಬ್ಯೂಟಿಫುಲ್’ ನೆನಪಿಗೆ ಬಂತು. ನನ್ನ ನಟನಾ ಕಾರ್ಯಾಗಾರಕ್ಕೆ ಈಗಾಗಲೇ ಅದನ್ನು ಬಳಸಿದ್ದರಿಂದ ಅದರಲ್ಲಿದ್ದ ಸಣ್ಣ ಸಣ್ಣ ಯೋಚನೆಗಳು ಹಾಗು ಈಗಿನ ಕಾಲಕ್ಕೆ ತಕ್ಕ ಬರಹ ಎನಿಸಿತು. ಜೋಗಿಯವರು ಕೇಳಿದ ತಕ್ಷಣ ತಮ್ಮ ಪುಸ್ತಕ ಉಪಯೋಗಿಸಲು ಅನುಮತಿ ಕೊಟ್ಟಿದ್ದಲ್ಲದೆ, ಈ ಪರಿಕಲ್ಪನೆಗೆ ‘ಹೋಮ್ ಥಿಯೇಟರ್’ ಎಂದು ನಾಮಕರಣ ಕೂಡ ಮಾಡಿದರು’ ಎಂದು ಆರಂಭದ ಬಗ್ಗೆ ಸತೀಶ್‌ ಚಂದ್ರ ಮಾಹಿತಿ ನೀಡಿದರು.

‘ಲೈಫ್‌ ಈಸ್‌ ಬ್ಯೂಟಿಫುಲ್’‌ ವಿಡಿಯೊ ಬುಕ್‌ ಅಧ್ಯಾಯಗಳನ್ನು ರಿಷಭ್‌ ಶಟ್ಟಿ, ಪ್ರಮೋದ್‌ ಶೆಟ್ಟಿ, ಸುಮನ್‌ ನಗರ್‌ಕರ್‌, ಭಾವನಾ, ಟಿ.ಎನ್‌.ಸೀತಾರಾಮ್‌, ಸಿಹಿಕಹಿ ಚಂದ್ರು, ಮಂಡ್ಯ ರಮೇಶ್‌ ಮೊದಲಾದವರು ಕೈ ಜೋಡಿಸಿದ್ದಾರೆ. ಈ ಕೃತಿಯನ್ನು ರಂಗಭೂಮಿ ಹಿರಿಯ ನಟರು ಸೇರಿದಂತೆ 53 ಜನ ಓದಿದ್ದಾರೆ.3 ಗಂಟೆ 40 ನಿಮಿಷದ ವಿಡಿಯೊ ಬುಕ್‌ ಇದು.

ಹೋಮ್‌ ಥಿಯೇಟರ್‌ನ ಎರಡನೇ ವಿಡಿಯೊ ಬುಕ್‌ ಪ್ರಯೋಗಕ್ಕೆ ಆರಿಸಿಕೊಂಡಿದ್ದುಕೇಶವ ಮಳಗಿರವರ "ಅಂಗದ ಧರೆ' ಕಿರು ಕಾದಂಬರಿಯನ್ನು. ಇದನ್ನು ರಾಜ್‌ ಪಿ.ಶೆಟ್ಟಿ, ಅಚ್ಯುತ್‌ಕುಮಾರ್‌ ಸುಕೃತ ವಾಗ್ಳೆ ಸೇರಿದಂರೆ 62 ಜನರು ಓದಿದ್ದಾರೆ. ಈ ಕೃತಿಯ ಆರಂಭದಲ್ಲಿರುವ ವಚನಕ್ಕೆ ಎಂ.ಡಿ ಪಲ್ಲವಿ ಅವರು ಸಂಗೀತ ನೀಡಿದ್ದು,ಈ ವಿಡಿಯೊ ಬುಕ್‌ ಅವರ ವಚನಗಾಯನದೊಂದಿಗೆ ಆರಂಭವಾಗುವುದು ವಿಶೇಷ.

‘ಹಾಗೆ ಮೊದಲನೇ ಪುಸ್ತಕ ನೋಡು ನೋಡುತ್ತಿದ್ದಂತೆ ಮುಗಿದೇ ಹೋಯಿತು. ಇನ್ನೂ ಅನೇಕ ಸ್ನೇಹಿತರು ಇನ್ನೊಂದು ಪುಸ್ತಕ ಮಾಡು ಎನ್ನುವ ಸಲಹೆ ಬಂದಿತು. ಆಗ ನಮ್ಮ ವಸುದೇಂಧ್ರರವರು ಚಿಕ್ಕ ಚೊಕ್ಕ ಕಾದಂಬರಿ ಅಂದಾಗ ಕೇಶವ ಮಳಗಿರವರ ‘ಅಂಗದ ಧರೆ" ಕಿರು ಕಾದಂಬರಿ ಬಗ್ಗೆ ತಿಳಿಸಿದರು. ಕೇಶವ ಮಳಗಿರವರು ತಕ್ಷಣ ಅವರ ಒಪ್ಪಿಗೆಯನ್ನು ಕೊಟ್ಟರು’ ಎಂದು ಹೇಳಿದರು ಸತೀಶ್‌ ಚಂದ್ರ.

ಮುಂದೆ ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಶಿವರಾಮ ಕಾರಂತ ಸೇರಿದಂತೆ ಪ್ರಸಿದ್ಧ ಲೇಖಕರ ಕೃತಿಗಳನ್ನು ವಿಡಿಯೊ ಬುಕ್‌ ಮಾಡುವ ಆಲೋಚನೆ ಈ ತಂಡಕ್ಕಿದೆ. ಕೃತಿಗಳ ಹಕ್ಕನ್ನು ಪಡೆದುಕೊಂಡು ಮುಂದುವರಿಯಲಾಗುವುದು ಎಂದು ಪಿ.ಡಿ. ಸತೀಶ್‌ಚಂದ್ರ ತಿಳಿಸಿದರು. ಈ ವಿಡಿಯೊ ಬುಕ್‌ ಅನ್ನು 7 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗ ಮೂರನೇ ಬುಕ್‌ಗೆ172 ಜನ ಓದಲು ರೆಡಿಯಾಗಿದ್ದಾರೆ. ಹಾಗೇ ಸಿನಿಮಾದಂತೆ ವಿಡಿಯೊ ಬುಕ್‌ಗೆ ಟ್ರೇಲರ್‌, ಪೋಸ್ಟರ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚುವ ಮೂಲಕ ಕುತೂಹಲ ಮೂಡಿಸುತ್ತಿದ್ದಾರೆ.

ಪಿ.ಡಿ.ಸತೀಶ್ ಚಂದ್ರ

ವಿಡಿಯೊ ಜೊತೆ ಪುಸ್ತಕವನ್ನೂ ಓದಬಹುದು

ಈ ವಿಡಿಯೊ ಬುಕ್‌ನಲ್ಲಿ ಪ್ರಸಿದ್ಧ ನಟ, ನಟಿಯರು ಪುಸ್ತಕ ಓದುತ್ತಿದ್ದಂತೆ, ಎಡ ಭಾಗದಲ್ಲಿ ಅವರು ಓದುತ್ತಿರುವ ಪುಟವೂ ಕಾಣುತ್ತಿರುತ್ತದೆ. ಒಂದು ವೇಳೆ ಯಾರಿಗಾದರೂ ಕೃತಿಯನ್ನು ಓದಬೇಕೆನಿಸಿದಲ್ಲಿ ಅದನ್ನು ಓದಿಕೊಳ್ಳಬಹುದು. ಕನ್ನಡ ಓದಲು ಬಾರದವರು ವಿಡಿಯೊ ಕೇಳಬಹುದು. ಸುನೇತ್ರ ಪಂಡಿತ್‌, ಪ್ರಮೋದ್‌ ಶೆಟ್ಟಿಯವರು ಅವರು ಓದಬೇಕಾದ ಅಧ್ಯಾಯವನ್ನು ಬಾಯಿ ಪಾಠ ಮಾಡಿಕೊಂಡು ಏಕಪಾತ್ರಾಭಿನಯದ ಮೂಲಕ ಓದಿದ್ದಾರೆ. ಇಂತಹ ಅನೇಕ ಸಂಗತಿಗಳು ವಿಡಿಯೊ ಬುಕ್‌ ಅನ್ನು ಆಕರ್ಷನೀಯಗೊಳಿಸಿವೆ.

‘ಬರೀ ಆಡಿಯೊ ಮಾತ್ರ ಇದ್ದರೆ ಕೇಳುಗನಿಗೆ ಮೂರು ತಾಸಿನಷ್ಟು ಕೇಳುವುದು ಕಷ್ಟ. ನಿರಾಸಕ್ತಿ ಕಾಣಿಸಬಹುದು. ಆದರೆ ಇಲ್ಲಿ ವಿಡಿಯೊ ಹಾಗೂ 5–10 ನಿಮಿಷಗಳಿಗೊಮ್ಮೆ ಕಲಾವಿದರು ಬದಲಾಗುವುದರಿಂದ ಮುಂದುವರೆಯುತ್ತಾರೆ. ಅವರವರ ಸ್ವರದಲ್ಲಿ ಕೃತಿಯನ್ನು ದಕ್ಕಿಸಿಕೊಳ್ಳಬಹುದು. ಭಾವನೆಗಳು ಬದಲಾಗಬಹುದು’ ಎನ್ನುತ್ತಾರೆ ಸತೀಶ್‌ಚಂದ್ರ.

ನೀವೂ ವಿಡಿಯೊ ಬುಕ್‌ ಓದ್ಬೇಕಾ?

ಈ ವಿಡಿಯೊ ಬುಕ್‌ ಓದಲು ನೀವು ಸೇರಬಹುದು. ಪ್ರಕಾಸಂ ಫೇಸ್‌ಬುಕ್‌ ಅಥವಾ ಟ್ವಿಟರ್‌ ಮೂಲಕ ಕೃತಿ ಓದುವ ಬಗ್ಗೆ ಆಸಕ್ತಿಯನ್ನು ತಿಳಿಸಿದರೆ, ತಂಡ ಯಾವ ಪುಸ್ತಕದ ಯಾವ ಪುಟವನ್ನು ಓದಬೇಕೆಂದು ಮಾಹಿತಿ ನೀಡುತ್ತಾರೆ.

ದೇಣಿಗೆ ಸಂಗ್ರಹ

ಇದು ಸಂಪೂರ್ಣ ಉಚಿತ ಕಾರ್ಯಕ್ರಮ. ಈಗ ಕೊರೊನಾ ಲಾಕ್‌ಡೌನ್‌ ಕಾರಣದಿಂದ ರಂಗಭೂಮಿಯ ಎಲ್ಲಾ ಚಟುವಟಿಕೆಗಳು ಸ್ಥಗಿತವಾಗಿವೆ. ವಿಡಿಯೊ ಬುಕ್‌ಗೆ ವಿಡಿಯೊ ಎಡಿಟಿಂಗ್‌, ತಾಂತ್ರಿಕ ಕೆಲಸ ಮಾಡುವ ತಂತ್ರಜ್ಞರ ಜೀವನೋಪಾಯಕ್ಕಾಗಿ ಯಾರಾದರೂ ಇಚ್ಚಿಸಿದ್ದಲ್ಲಿ ದೇಣಿಗೆ ನೀಡಬಹುದು. ಈಗಾಗಲೇ ₹36 ಸಾವಿರ ಸಂಗ್ರಹವಾಗಿದೆ ಎನ್ನುತ್ತಾರೆ ಸತೀಶ್‌ ಚಂದ್ರ.

ಹೋಮ್‌ ಥಿಯೇಟರ್‌– ವಿಡಿಯೊ ಬುಕ್‌ ವೀಕ್ಷಿಸಲು–http://www.prakasamtrust.org/ht/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT