ಓದುಗರ ಬರಹ ‘ಭಾವಸೇತು’: ಗಾಯದ ಗುರುತು

7

ಓದುಗರ ಬರಹ ‘ಭಾವಸೇತು’: ಗಾಯದ ಗುರುತು

Published:
Updated:

ಎದೆಯ ಮರಳುಗಾಡಿನಲ್ಲಿ ಎಷ್ಟೊಂದು ಹೆಜ್ಜೆ ಗುರುತುಗಳು; ಬಲವಾಗಿ ಊರಿದ, ಹೂ ಹಗುರ ಹೆಜ್ಜೆಗಳು, ಕಂಡೂ ಕಾಣದ ಹೆಜ್ಜೆಗಳು...ಹೀಗೆ ನೂರಾರು ನೆನಪುಗಳ ಮೆರವಣಿಗೆಯಲ್ಲಿ ಆಗಾಗ ಕಾಡೋ ಈ ನೆನಪ ಹೆಜ್ಜೆ ಅಚ್ಚಳಿಯದೇ ಉಳಿದಿದೆ. ಬಹುಶಃ ನಾನಾಗ ನಮ್ಮೂರಲ್ಲೇ ದ್ವಿತೀಯ ಪಿಯುಸಿ ಓದ್ತಾಯಿದ್ದೆ. ನಾವು ಮೂರು ಜನ ಅಣ್ತಮ್ಮರಿಗೆ ಸೋದರಿ ಒಬ್ಬಳೇ. ಹರಿಹರದ ಸೊಸೆಯಾಗಿ ಹೋದ ಒಂದೆರೆಡು ವರುಷದಲ್ಲಿ ಗಂಡು ಮಗುವಿನ ತಾಯಿಯಾದಳು. ನಮ್ಮ ತಂದೆ ತಾಯಿಯರ ಆನಂದ ಹೆಚ್ಚಾಗಿ ಮುಂದೆ ಆ ಮಗು ನಮ್ಮನೆ ಮಗುವಾಯಿತು. ಚಿಕ್ಕ ಮಕ್ಕಳಿಲ್ಲದ ನಮ್ಮನೆಗೆ ಆ ಮಗು ಖ್ವಾಜಾ ಪೀರ್ ಕಣ್ಮಣಿಯಾದ. ಸಂತೆಬೆನ್ನೂರಲ್ಲೇ ಶಾಲೆ ಸೇರಿ ಕಾಲ- ವಾಹಿನಿಯಂತೆ ಸರಿಯಲು ಅಳಿಯ ನಾಲಕ್ಕನೇ ತರಗತಿ ಮುಟ್ಟಿದ. ಅನ್ನಕ್ಕಿಂತ ಜೋಳದ ರೊಟ್ಟಿಪ್ರಿಯ ಖ್ವಾಜಾ ಬಾಲ್ಯದಲ್ಲಿಯೇ ಪೈಲ್ವಾನನಂತೆ ಕಾಣುತ್ತಿದ್ದ. ಮನೆಯಲ್ಲಿ ಆತ ಸ್ವಲ್ಪ ಮಟ್ಟಿಗೆ ಹೆದರುತ್ತಿದ್ದುದು ನನಗೆ ಮಾತ್ರ.

ನಾ ಕಂಡೆನೆಂದರೆ ಎಲ್ಲಿದ್ದರೂ ಮನೆಗೋಡಿ ಬರುತ್ತಿದ್ದ. ಆ ಭಯದ ವಾತಾವರಣಕ್ಕೆ ಅಕ್ಕ ಭಾವನೂ ಸಮ್ಮತಿಸಿ 'ಒಬ್ಬರದಾದರೂ ಭಯ ಇರಲಿ ಬಿಡಿ' ಅನ್ನುತ್ತಿದ್ದರು. ಮನೆ ಮಗನೇ ಆಗಿದ್ದ ಖ್ವಾಜಾ ನಮ್ಮೆಲ್ಲರ ಜೀವಜಲದಂತಿದ್ದ. ಇಂಥಾ ಗಟ್ಟಿ ಜಟ್ಟಿ ಖ್ವಾಜಾ ಅದೊಂದು ದಿನ ಶಾಲೆಯಿಂದ ಬಂದವನೇ ಮಲಗಿಬಿಟ್ಟ. ನಮ್ಮಮ್ಮ ಮೈ ಕೈ ದಡವಿ ಜ್ವರ ಬಂದಿರುವುದು ಖಾತ್ರಿ ಮಾಡಿಕೊಂಡು ನಾ ಕಾಲೇಜಿಂದ ಬರುವುದನ್ನೇ ಕಾಯುತ್ತಿದ್ದಳು. ಅಂದು ನಾ ಮನೆಗೆ ಬಂದಿದ್ದೇ ತಡ, ಬಂದ ಕೂಡಲೇ ಆಸ್ಪತ್ರೆಗೆ ಅವಸರಿಸಿದ ಅಮ್ಮನ ಗಾಬರಿಗೆ ಬೆದರಿ ಅಳಿಯನನ್ನು ಎಬ್ಬಿಸಲು ಯತ್ನಿಸಿದೆ, ಏಳಲಿಲ್ಲ. ಆಗ ಮೊಬೈಲಿಲ್ಲ, ಆಟೋಗಳಿಲ್ಲ... ಅಳಿಯನನ್ನು ಹೆಗಲಿಗೆ ಹಾಕಿ ನಡೆದುಬಿಟ್ಟೆ. ಖಾಸಗಿ ವೈದ್ಯರ ಬಳಿ ಹೋದೆ. ಅಲ್ಲಿದ್ದ ವೈದ್ಯರು ಪರೀಕ್ಷಿಸಿ 'ಬೇಗ ದಾವಣಗೆರೆಗೆ ಒಯ್ಯಿರಿ' ಅಂದಾಗ ನಮಗ್ಯಾರಿಗೂ ಕೈಕಾಲಾಡಲಿಲ್ಲ.

ಅಷ್ಟರಲ್ಲಿ ದೊಡ್ಡಣ್ಣ ಬಂದು ಜೊತೆಯಾದ. ಊರಲ್ಲಿದ್ದ ಒಂದೇ ಒಂದು ಕಾರು ವೀರಭದ್ರಪ್ಪನವರದು. ಅದರಲ್ಲಿ ಸೀದಾ ದಾವಣಗೆರೆಗೆ ಹೋಗದೇ ಅಕ್ಕ ಭಾವನವರಿಗೆ ತಿಳಿಯಲೆಂದು ಹರಿಹರಕ್ಕೇ ಹೋದೆವು, ಆಗ ರಾತ್ರಿ ಹನ್ನೊಂದು. ಮನೆಗೆ ಸ್ವಲ್ಪ ದೂರ ಕಾರು ನಿಲ್ಲಿಸಿ ನಾನು ಅಣ್ಣ ನಡೆದು ಮನೆಗೆ ಹೋಗಿ ಭಾವರನ್ನು ಮಾತ್ರ ಕರೆದು ವಿಷಯ ತಿಳಿಸಿದೆವು. ತಕ್ಷಣ ಅವರು ಕಾರಿನೊಂದಿಗೆ ದಾವಣಗೆರೆಗೆ ಪಯಣ ಬೆಳೆಸಿದರು. ನಾ ಮನೆಯಲ್ಲಿ ಉಳಿದುಕೊಂಡಾಗ ನಿಧಾನವಾಗಿ ಇದ್ದ ವಿಚಾರ ಅಕ್ಕನಿಗೆ ಹೇಳಿದೆ. ಚಿಟ್ಟನೆ ಚೀರಿದ ಅವಳು ಪ್ರಜ್ಞೆ ತಪ್ಪಿದಳು. ಅಕ್ಕಪಕ್ಕದವರ ಶೂಶ್ರೂಷೆಯಿಂದ ಎಚ್ಚರಾದಳು. ಇಡೀ ರಾತ್ರಿ ಮಲಗದೇ ದಾವಣಗೆರೆ ಸುದ್ದಿಗೆ ಕಾಯುತ್ತಿದ್ದೆವು. ಪಕ್ಕದ ಮನೆಯವರಿಗೆ ಭಾವ ಫೋನ್ ಮಾಡಿ ‘ಖ್ವಾಜಾಗೆ ಬ್ರೈನ್ ಟ್ಯುಮರ್ ಅಂತೆ ಟ್ರೀಟ್ ಮೆಂಟ್ ನಡೀತಿದೆ ಬೆಳಿಗ್ಗೆ ವರೆಗೂ ಏನೂ ಹೇಳಕ್ಕಾಗಲ್ಲ ಅಂದಿದ್ದಾರೆ’ ಅಂದಾಗ ಅಕ್ಕ ಕುಸಿದು ಹೋದಳು. ನಾ ಎಷ್ಟೇ ಸಮಾಧಾನ ಮಾಡಿದರೂ ಅವಳ ದುಃಖ ಕೇರಿಯವರ ಕಣ್ಣೀರಿಗೆ ಕಾರಣವಾಗಿತ್ತು.

ಬೆಳಗಿನ ಜಾವ. ಭಾವ ಪಕ್ಕದ ಮನೆಗೆ ಫೋನಾಯಿಸಿ ಸುದ್ದಿ ತಿಳಿಸಿದರು; ಖ್ವಾಜಾ ಹೋಗಿಬಿಟ್ಟ! ಮನೆ ಜನಜಾತ್ರೆಯಾಯ್ತು. ಸ್ಮಶಾನ ಮನೆಗೆ ಬಂದಂತಾಯ್ತು. ಬೆಳೆದ ಮಗನ ಮಣ್ಣಲ್ಲಿಟ್ಟು ಬಂದೆವು. ನಮ್ಮ ಮನೆಯಲ್ಲಿ ಅಪರಾಧೀ ಪ್ರಜ್ಞೆ ಕಾಡತೊಡಗಿತು. ಅಪ್ಪ ಅಮ್ಮರ ಬಳಿ ಇದ್ದಿದ್ರೆ ಬದುಕುತ್ತಿದ್ದನೇ? ನಾವೇ ಸರಿಯಾಗಿ ತೋರಿಸದೇ ಹಂತಕರಾದೆವೇ... ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಕಾರಣವೇ... ಗೊತ್ತಿಲ್ಲ. ಅಳಿಯನನ್ನು ನಾವ್ಯಾರೂ ಮರೆತಿಲ್ಲ. ಅವನ ನೆನಪು ಆಸ್ಪತ್ರೆಗಳನ್ನು ನೋಡಿದಾಗೆಲ್ಲಾ ಕಾಡುತ್ತೆ!

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !