ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ: ಕೆಲವು ಪ್ರಕರಣಗಳ ಮೆಲುಕು

Last Updated 17 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಮೀಸಲಾತಿಯ ಪರಿಕಲ್ಪನೆಯನ್ನು ಹಲವರು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ. ಜಾತಿಯೊಂದೇ ಮೀಸಲಾತಿಗೆ ಆಧಾರವಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಇರುತ್ತದೆ. ನಮ್ಮಲ್ಲಿ ಮೂರು ಬಗೆಯ ಮೀಸಲಾತಿಗಳಿವೆ – ಉದ್ಯೋಗದಲ್ಲಿ, ಶಿಕ್ಷಣದಲ್ಲಿ ಹಾಗೂ ರಾಜಕೀಯದಲ್ಲಿ ಮೀಸಲಾತಿ ಇದೆ. ಮೀಸಲಾತಿಯನ್ನು ಸಮಾನತೆಯ ಹಕ್ಕಿನ ಒಂದು ಭಾಗ ಎಂದು ಗ್ರಹಿಸಬೇಕು.

ಚಂಪಕಮ್ ದೊರೈರಾಜನ್ ಮತ್ತು ಮದ್ರಾಸ್ ಸರ್ಕಾರದ ನಡುವಿನ ಪ್ರಕರಣ ಮೀಸಲಾತಿಗೆ ಸಂಬಂಧಿಸಿದ ವಿಚಾರಗಳಲ್ಲಿ ಗಮನಿಸಬೇಕಾದದ್ದು. ತಮಿಳುನಾಡು ರಾಜ್ಯವು, ಸಂವಿಧಾನದಲ್ಲಿ ಹೇಳಿರುವ ರಾಜ್ಯ ನಿರ್ದೇಶನ ತತ್ವಗಳನ್ನು ಆಧರಿಸಿ ಶಿಕ್ಷಣದಲ್ಲಿ ಒಂದಿಷ್ಟು ಮೀಸಲಾತಿಯನ್ನು ನೀಡಿತು. ಇದನ್ನು ಚಂಪಕಮ್ ದೊರೈರಾಜನ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರು. ಈ ಮೀಸಲಾತಿಯು ಸಮಾನತೆಯ ಹಕ್ಕಿನ ಉಲ್ಲಂಘನೆ ಎಂದು ವಾದಿಸಿದರು. ಅವರ ವಾದವನ್ನು ಸುಪ್ರೀಂ ಕೋರ್ಟ್‌ ಮಾನ್ಯ ಮಾಡಿತು. ಈ ಮೀಸಲಾತಿ ಅಸಾಂವಿಧಾನಿಕ ಎಂದಿತು. ಆಗ ಸಂವಿಧಾನದ 15ನೇ ವಿಧಿಗೆ ತಿದ್ದುಪಡಿ ತಂದು, 15(4)ಅನ್ನು ಸೇರಿಸಲಾಯಿತು. ಆ ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸಲಾಯಿತು.

ಬಾಲಾಜಿ ಮತ್ತು ಮೈಸೂರು ಸರ್ಕಾರದ (ಈಗಿನ ಕರ್ನಾಟಕ) ನಡುವಿನ ಒಂದು ಪ್ರಕರಣವನ್ನು ಕೂಡ ಇಲ್ಲಿ ಉಲ್ಲೇಖಿಸಬಹುದು. ರಾಜ್ಯದಲ್ಲಿ ಎಂಜಿನಿಯರಿಂಗ್, ವೈದ್ಯಕೀಯ ಸೀಟುಗಳಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ಹಿಂದುಳಿದ ವರ್ಗಗಳು (ಒಬಿಸಿ) ಹಾಗೂ ಹೆಚ್ಚು ಹಿಂದುಳಿದ ವರ್ಗಗಳಿಗೆ ಶೇಕಡ 50ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮೀಸಲಾತಿ ನೀಡಲಾಗಿತ್ತು. ಆದರೆ, ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌, ಶೇ. 50ರ ಮಿತಿಯನ್ನು ಉಲ್ಲಂಘಿಸಿ ಮೀಸಲಾತಿ ನೀಡುವುದು ಅಸಾಂವಿಧಾನಿಕ ಎಂದು ಹೇಳಿತು.

1994ರಲ್ಲಿ ತಮಿಳುನಾಡು ಸರ್ಕಾರ ಕೂಡ ಇದೇ ರೀತಿ ಶೇ. 50 ಮಿತಿಯನ್ನು ಮೀರಿ ಮೀಸಲಾತಿ ಕಲ್ಪಿಸಿತು. ಆದರೆ, ಇದನ್ನು ಸಂವಿಧಾನದ ಒಂಬತ್ತನೆಯ ಪರಿಚ್ಛೇದದ ಅಡಿಯಲ್ಲಿ ತಂದು, ಇದು ನ್ಯಾಯಾಂಗದ ಪರಿಶೀಲನೆಯ ವ್ಯಾಪ್ತಿಯಿಂದ ಹೊರಗಿರುವಂತೆ ಮಾಡಲಾಯಿತು.

ಮಂಡಲ್ ಆಯೋಗದ ವರದಿಯು ಅನುಷ್ಠಾನಕ್ಕೆ ಬಂದ ನಂತರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು ಇಂದಿರಾ ಸಾಹ್ನಿ ಪ್ರಕರಣ. ಆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಈಗಲೂ ಈ ದೇಶದ ಪಾಲಿಗೆ ಕಾನೂನಿನಂತೆ ಚಾಲ್ತಿಯಲ್ಲಿ ಇದೆ. ಈ ಪ್ರಕರಣದಲ್ಲಿ ಕೋರ್ಟ್‌, ಮಂಡಲ್ ಆಯೋಗ ನೀಡಿದ ವರದಿ ಊರ್ಜಿತ ಎಂದಿತು. ಆದರೆ, ಶೇ. 10ರಷ್ಟು ಮೀಸಲಾತಿಯನ್ನು ಆರ್ಥಿಕವಾಗಿ ಹಿಂದುಳಿದವರಿಗೆ ನೀಡಿರುವುದು ಅಸಾಂವಿಧಾನಿಕ ಎಂದು ಹೇಳಿತು. ಒಬಿಸಿ ವರ್ಗದವರ ಪಾಲಿಗೆ ಕೆನೆಪದರದ ಪರಿಕಲ್ಪನೆಯನ್ನು ತಂದು, ಮೀಸಲಾತಿ ಪಡೆದು ಮೇಲೆ ಬಂದವರ ಮಕ್ಕಳು ಮೀಸಲಾತಿ ಪಡೆಯಬಾರದು ಎಂದು ಹೇಳಿತು. ಆದರೆ ಈ ಕೆನೆಪದರದ ಪರಿಕಲ್ಪನೆಯು ಎಸ್‌ಸಿ ಮತ್ತು ಎಸ್‌ಟಿ ವರ್ಗಗಳಿಗೆ ಅನ್ವಯವಾಗದು ಎಂದಿತು.

ಉದ್ಯೋಗದಲ್ಲಿ ಮೀಸಲಾತಿ ಸರಿ. ಆದರೆ, ಬಡ್ತಿಯಲ್ಲಿ ಕೂಡ ಮೀಸಲಾತಿ ಕೊಡಬೇಕೇ ಎಂಬ ಪ್ರಶ್ನೆ ಇತ್ತು. ಈ ಪ್ರಶ್ನೆಗೆ ಉತ್ತರವಾಗಿ ಸಂವಿಧಾನದ 16(4)(ಎ) ವಿಧಿಯ ಮೂಲಕ ಸಂಸತ್ತು ಉತ್ತರಿಸಿತು. ಬಡ್ತಿಯಲ್ಲಿ ಎಸ್‌ಸಿ, ಎಸ್‌ಟಿ ವರ್ಗಕ್ಕೆ ಮೀಸಲಾತಿ ಕೊಡಬಹುದು ಎಂದು ಇದು ಹೇಳುತ್ತದೆ.

ಎಂ. ನಾಗರಾಜ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿದ ಮಾತುಗಳು ಬಹಳ ಪ್ರಮುಖವಾಗುತ್ತವೆ. ಬಡ್ತಿಯಲ್ಲಿ ಮೀಸಲಾತಿ ಕೊಡಲು ಬಲವಾದ ಕಾರಣ ಇರಬೇಕು ಎಂದು ಅದು ಹೇಳಿತು. ಬಡ್ತಿಯಲ್ಲಿ ಮೀಸಲಾತಿ ಕೊಡಬೇಕು ಎಂದಾದರೆ ವ್ಯಕ್ತಿ ಪ್ರತಿನಿಧಿಸುವ ವರ್ಗವು ಹಿಂದುಳಿದಿರಬೇಕು. ಆ ವರ್ಗ ಹಿಂದುಳಿದಿದೆ ಎನ್ನಲು ಪೂರಕವಾದ ಅಂಕಿ–ಅಂಶ ಇರಬೇಕು. ಆ ವರ್ಗದವರ ಪ್ರಾತಿನಿಧ್ಯ ಬಹಳ ಕಡಿಮೆ ಇದೆ ಎಂಬುದನ್ನು ತೋರಿಸಬೇಕು. ಹಾಗೆಯೇ ಬಡ್ತಿಯಲ್ಲಿ ಮೀಸಲಾತಿ ಕೊಡಬೇಕಾದವನಿಗೆ ಹೊಸ ಹುದ್ದೆಯನ್ನು ನಿಭಾಯಿಸಲು ಶಕ್ತಿ ಇದೆ ಎಂಬುದನ್ನು ಕೂಡ ತೋರಿಸಬೇಕು ಎಂದು ಕೋರ್ಟ್‌ ಹೇಳಿತು.

ಇದಾದ ನಂತರ, ಮೂರು ಪ್ರಕರಣಗಳಲ್ಲಿ (ಯು.ಪಿ. ಪವರ್ ಕಾರ್ಪೊರೇಷನ್, ಪವಿತ್ರಾ ಹಾಗೂ ಮಹೇಶ್ ಕುಮಾರ್ ಪ್ರಕರಣಗಳಲ್ಲಿ) ಇದೇ ಮಾತನ್ನು ಕೋರ್ಟ್‌ ಹೇಳಿತು. 2018ರಲ್ಲಿ ಸಿದ್ದರಾಮಯ್ಯ ಅವರು ಎಂ. ನಾಗರಾಜ್‌ ಪ್ರಕರಣದಲ್ಲಿ ಹೇಳಿದ ಮೂರು ತತ್ವಗಳಿಗೆ ಅನುಗುಣವಾಗಿ ಅಂಕಿ–ಅಂಶಗಳನ್ನು ಸಲ್ಲಿಸಿ ಮೀಸಲಾತಿ ಕಲ್ಪಿಸಿದರು. ಇದನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿಯಿತು.

ಮಹೇಶ್ ಕುಮಾರ್ ಮತ್ತು ಉತ್ತರಾಖಂಡ ನಡುವಿನ ಪ್ರಕರಣದಲ್ಲಿ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಕೋರ್ಟ್ ಹೇಳಿತು. ಏಕೆಂದರೆ, ಮೀಸಲಾತಿಗೆ ಸಂಬಂಧಿಸಿದವು ಸಬಲೀಕರಣದ ಕಾನೂನುಗಳು.

2019ರ ಜನವರಿಯಲ್ಲಿ ಕೇಂದ್ರ ಸರ್ಕಾರವು ಆರ್ಥಿಕವಾಗಿ ಹಿಂದುಳಿದಿರುವ ವರ್ಗಗಳಿಗೆ ಶೇಕಡ 10ರ ಮೀಸಲಾತಿ ಕಲ್ಪಿಸಿತು. ಇದು ಸರಿಯೇ ಎಂಬ ಪ್ರಶ್ನೆ ಕೋರ್ಟ್‌ನ ಅಂಗಳದಲ್ಲಿ ಇದೆ.

ದೇಶ ಮುಂದುವರಿಯುತ್ತ ಸಾಗಿದಂತೆ ಮೀಸಲಾತಿ ಪ್ರಮಾಣ ಕಡಿಮೆ ಆಗುತ್ತ ಬರಬೇಕಿತ್ತು. ಆದರೆ ಈಗ ಹಾಗಾಗುತ್ತಿಲ್ಲ. ರೈತರಿಗೆ ಸಬ್ಸಿಡಿ ಬದಲು ವೈಜ್ಞಾನಿಕ ಬೆಲೆ ಕೊಡಬೇಕು. ಹಾಗೆಯೇ, ಹಿಂದುಳಿದ ವರ್ಗಗಳಿಗೆ ಸೇರಿದ ಮಕ್ಕಳಿಗೆ ಕೇಂದ್ರೀಯ ವಿದ್ಯಾಲಯದ ಗುಣಮಟ್ಟದ ಶಿಕ್ಷಣವನ್ನು ರಾಜ್ಯ ಸರ್ಕಾರದ ಶಾಲೆಗಳಲ್ಲಿ ಕೊಡಬೇಕು. ಆ ಮಕ್ಕಳ ತಂದೆ–ತಾಯಿಯನ್ನು ಆರ್ಥಿಕವಾಗಿ ಗಟ್ಟಿ ಮಾಡಿದರೆ, ಮೀಸಲಾತಿಯ ಅಗತ್ಯ ಕಾಣುವುದಿಲ್ಲ.

ಈ ರೀತಿಯಾಗಿ ಮಾಡಿದರೆ, ಕಾಲಮಿತಿಯಲ್ಲಿ ಮೀಸಲಾತಿಯನ್ನು ಹಂತಹಂತವಾಗಿ ಕಡಿಮೆ ಮಾಡುತ್ತ ಬರಬಹುದು. ಆಳುವ ಸರ್ಕಾರಗಳು ಮೀಸಲಾತಿಯನ್ನು ಚುನಾವಣೆಯಲ್ಲಿ ಲಾಭ ತರುವ ಅಸ್ತ್ರವನ್ನಾಗಿ ಬಳಸುವುದನ್ನು ನಿಲ್ಲಿಸಬೇಕು.

ಶೇ.50ರಷ್ಟು ಮೀಸಲಾತಿ ನೀಡಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಒಳ್ಳೆಯ ಉದ್ದೇಶದಿಂದಲೇ ಈ ಮಾತು ಹೇಳಿದೆ. ಆದರೆ, ಇದನ್ನು ಎಲ್ಲ ಕಡೆಯೂ ಏಕರೂಪದಲ್ಲಿ ಅನ್ವಯ ಮಾಡಬೇಕಿಲ್ಲ. ಎಲ್ಲಿ ಎಷ್ಟು ಮೀಸಲಾತಿ ಕೊಡಬೇಕು ಎಂಬುದನ್ನು ಅಂಕಿ–ಸಂಖ್ಯೆಗಳ ಆಧಾರದಲ್ಲಿ ನಿರ್ಧರಿಸಬೇಕು. ಯಾವುದೋ ಒಂದು ರಾಜ್ಯದಲ್ಲಿ ಶೇ. 90ರಷ್ಟು ಮೀಸಲಾತಿ ಅಗತ್ಯವಿರಬಹುದು, ಇನ್ನೊಂದು ರಾಜ್ಯದಲ್ಲಿ ಶೇ. 20ರಷ್ಟು ಮಾತ್ರ ಸಾಕಾಗಬಹುದು. ಇವೆಲ್ಲ ಗಟ್ಟಿ ಅಂಕಿ–ಅಂಶಗಳ ಆಧಾರದಲ್ಲಿ ತೀರ್ಮಾನವಾಗಬೇಕು.

ಲೇಖಕರು: ಸಹಾಯಕ ಪ್ರಾಧ್ಯಾಪಕ, ಕಾನೂನು ಕಾಲೇಜು, ಬೆಂಗಳೂರು ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT