ಭಾನುವಾರ, ಸೆಪ್ಟೆಂಬರ್ 15, 2019
27 °C

ನನ್ನ ಕಣ್ಣು ಬ್ಲರ್ ಆಗಿತ್ತು, ಚಿತ್ರ ಶಾರ್ಪ್ ಆಗಿಯೇ ಬಂದಿತ್ತು, ಮನಸು ಮುದುಡಿತ್ತು

Published:
Updated:

ಕ್ಯಾಮೆರಾ ಕಣ್ಣಿನಲ್ಲಿ ಜಗತ್ತು ನೋಡುವ ಛಾಯಾಗ್ರಾಹಕರಿಗೆ ಜಗತ್ತೇ ತಾನು ಚೌಕಟ್ಟು ಹಾಕಲು ಕಾದಿರುವ ಕಲಾಕೃತಿಯಂತೆ ಕಾಣಿಸುತ್ತಿರುತ್ತೆ. ಅವರ ಭಾವುಕ ಮನಸ್ಸು ಹಿಂಸೆ, ದುರಂತಗಳಿಗೆ ತೀವ್ರವಾಗಿ ಸ್ಪಂದಿಸುತ್ತವೆ. ಮುಗ್ಧ ಮಕ್ಕಳ ಸಾವಿನ ಚಿತ್ರ ತೆಗೆಯುವ ಪರಿಸ್ಥಿತಿ ಎದುರಾದಾಗ ಮಂಡ್ಯದ 'ಪ್ರಜಾವಾಣಿ' ಛಾಯಾಗ್ರಾಹಕ ಸಂತೋಷ್‌ ಚಂದ್ರಮೂರ್ತಿ ಅವರು ಅನುಭವಿಸಿದ ತೊಳಲಾಟ ಎಂಥದ್ದು?

---

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕನಗನಮರಡಿಯಲ್ಲಿ ನಾಲೆಗೆ ಬಸ್ ಬಿದ್ದುದು ನವೆಂಬರ್ 24, 2018. ಆ ದಿನವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ದುರಂತ ಕಂಡು ನನ್ನ ಮನಸ್ಸು ಅಕ್ಷರಶಃ ಜರ್ಝರಿತವಾಗಿತ್ತು. ದೇಶವೇ ಬೆಚ್ಚಿ ಬಿದ್ದ ಘಟನೆಯ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ತಾಂತ್ರಿಕವಾಗಿ ಮತ್ತು ಕಲಾತ್ಮಕವಾಗಿ ಅಷ್ಟೇ ಅಲ್ಲ ಭಾವನಾತ್ಮಕವಾಗಿಯೂ ನನಗೆ ಸವಾಲಾಗಿತ್ತು. ಆ ಗೋಳಾಟ, ನರಳಾಟ, ಆಕ್ರಂದನ... ಅಬ್ಬಬ್ಬಾ ನನ್ನ ಕರುಳು ಹಿಂಡುವಂತಿತ್ತು.

ಇಂತಹ ದುರ್ಘಟನೆ ನಡೆಯಲೇಬಾರದಿತ್ತು ಎಂದು ಹೆಜ್ಜೆಹೆಜ್ಜೆಗೂ ಅಂದುಕೊಳ್ಳುತ್ತಲೇ ಕ್ಯಾಮೆರಾ ಕಣ್ಣು ತೆರೆದು ವೃತ್ತಿಧರ್ಮ ಪಾಲಿಸಿದೆ. ಚಿಕ್ಕಮಕ್ಕಳು, ಅಯ್ಯೋ ಅವು ಶಾಲೆಗೆ ಹೋಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾದ ಮೊಗ್ಗುಗಳು. ಆದರೆ ಅರಳುವ ಮುನ್ನವೇ ಬಾಡಿಹೋದವು. 

ಘಟನೆ ನಡೆದು 9 ತಿಂಗಳುಗಳೇ ಕಳೆದು ಹೋಗವೆ. ಆದರೆ ಇಂದಿಗೂ ಅದನ್ನು ನೆನೆಸಿಕೊಂಡರೆ ಮೈ ಝೂಂ ಎನ್ನುತ್ತದೆ. ಆ ಪರಿಸ್ಥಿತಿಯ ಭೀಕರತೆ ಎಂಥವರ ಕಣ್ಣಲ್ಲಾದರೂ ನೀರು ತರಿಸದೆ ಇರಲಾರದು. ನಾನು ಸಹ ಬಹಳ ಭಾವುಕನಾಗಿ, ದುಃಖದಲ್ಲೇ ಚಿತ್ರ ತೆಗೆದೆ. ಒಮ್ಮೊಮ್ಮೆ ಬ್ಲರ್ ಆಗಿರುವುದು ನನ್ನ ಕಣ್ಣೋ ಅಥವಾ ಫೋಕಸ್ ಸರಿಯಿಲ್ಲದೆ ಇಮೇಜ್ ಬ್ಲರ್ ಆಗಿದೆಯೋ ಎಂದು ನನಗೇ ಗೊಂದಲವಾಗುತ್ತಿತ್ತು.

ಯಾಕಾದರೂ ಇಂಥದ್ದೊಂದು ಸಂದರ್ಭ ನನ್ನ ಜೀವನದಲ್ಲಿ ಬಂತೋ ಎಂದು ವಿಧಿಯನ್ನು ಶಪಿಸಿದೆ. ಆದರೆ ವೃತ್ತಿ ಧರ್ಮವನ್ನು ಮರೆಯುವಂತಿರಲಿಲ್ಲ. ನಾ ತೆಗೆದ ಚಿತ್ರ ಎಲ್ಲಾ ಆವೃತ್ತಿಯ ಮುಖಪುಟದಲ್ಲಿ ನನ್ನ ಬೈಲೈನ್‌ ಜೊತೆಯಲ್ಲೇ ಬಂತು. ನಾಲೆಯಲ್ಲಿ ಬಿದ್ದ ಬಸ್‌ ಮೇಲೆತ್ತುತ್ತಿರುವ ದೃಶ್ಯ ಇಡೀ ಘಟನೆಯನ್ನು ವರ್ಣಿಸುವಂತಿತ್ತು. ಒಳ್ಳೆಯ ಚಿತ್ರ ತೆಗೆದಿ ಅಂತ ಸಹೋದ್ಯೋಗಿಗಳು ಮೆಚ್ಚುಗೆ ಸೂಚಿಸಿದರು.

ಬಸ್‌ ಮುಳುಗಿದ ಘಟನೆಯ ದಿನವೇ ಅಂಬರೀಷ್‌ ಕೂಡ ಮೃತಪಟ್ಟರು. ಈ ಎರಡು ಒಂದೇ ಸಮಯದಲ್ಲಿ ಘಟಿಸಿದವು. ಅಂಬರೀಷ್‌ ಮೃತದೇಹದ ಅಂತಿಮ ದರ್ಶನ ಪಡೆಯಲು ಮಂಡ್ಯ ಜಿಲ್ಲಾ ಕ್ರೀಡಾಂಗಣಕ್ಕೆ ಜನಸಾಗರವೇ ಹರಿದು ಬಂತು. ಆ ಕ್ಷಣಗಳನ್ನು ಕ್ಲಿಕ್ಕಿಸಿದ್ದು ನನ್ನ ವೃತ್ತಿ ಜೀವನ ಮತ್ತೊಂದು ಪ್ರಮುಖ ಅನುಭವ. ಘಟನೆಗೆ ಮಂಡ್ಯ ಜನರು ಪ್ರತಿಕ್ರಿಯಿಸಿದ ರೀತಿ, ಸುಮಲತಾ ಅಂಬರೀಷ್‌, ಅಭಿಷೇಕ್‌ ಅಂಬರೀಷ್‌ ದುಃಖ, ಕ್ರೀಡಾಂಗಣದಲ್ಲಿ ಮಂಡ್ಯ ಜನರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದ ಬಗೆ, ಮಂಡ್ಯದಿಂದ ಶರೀರ ತೆಗೆದುಕೊಂಡು ಹೋಗುವ ಮುನ್ನ ಸುಮಲತಾ ಮಂಡ್ಯ ಮಣ್ಣನ್ನು ಅಂಬರೀಷ್‌ ಹಣೆಗೆ ತಿಲಕವಿಟ್ಟ ಕ್ಷಣಗಳನ್ನು ಕ್ಲಿಕ್ಕಿಸಿದೆ.

ಮಂಡ್ಯ ಜನರು ಅಂಬರೀಷ್ ಅವರಿಗೆ ನಮಸ್ಕರಿಸಿದ ಅಭೂತಪೂರ್ವ ಐತಿಹಾಸಿಕ ದೃಶ್ಯಗಳು ನನ್ನ ಕ್ಯಾಮೆರಾದಲ್ಲಿ ಸೆರೆಯಾಗಿ ಅವು ಪತ್ರಿಕೆಯ ರಾಜ್ಯಪುಟದಲ್ಲಿ ಪ್ರಕಟಗೊಂಡವು. ಘಟನೆಗೆ ಸ್ವತಃ ನಾನು ಸಾಕ್ಷಿಯಾಗಿದ್ದು  ನನ್ನ ಜೀವನದಲ್ಲಿ ಮರೆಯದ ಕ್ಷಣಗಳು.

 

Post Comments (+)