ಬುಧವಾರ, ಸೆಪ್ಟೆಂಬರ್ 18, 2019
23 °C

ಪ್ರತಿ ಮಳೆಯಲ್ಲಿಯೂ ಕಾಡುವ ನೆನಪಿನಾಳದ ತಳ್ಳುಗಾಡಿ

Published:
Updated:

ಮಳೆ ಚಿತ್ರಕ್ಕಾಗಿ ತುಡಿಯುತ್ತಿದ್ದ ಛಾಯಾಗ್ರಾಹಕ ಇರ್ಷಾದ್ ಮಹಮ್ಮದ್ ಅವರಿಗೆ ಚಿತ್ರವೇನೋ ಸಿಕ್ಕಿತು. ಆದರೆ ಅದು ಹೊಮ್ಮಿಸಿದ ಭಾವದಿಂದ ಅವರ ಹೃದಯ ಭಾರವಾಗಿತ್ತು. ಮೈಸೂರಿನ ಮಳೆಚಿತ್ರದ ಈ ಅನುಭವ ಓದಿ, ನಿಮ್ಮ ಮನಸ್ಸು ಬೆಚ್ಚಗಾದೀತು. 

---

ಪ್ರತಿ ಬಾರಿ ಮಳೆ ಬಂದಾಗ ಮಳೆಯ ಚಿತ್ರಣವನ್ನು ಚೆನ್ನಾಗಿ ಕಟ್ಟಿಕೊಡಬೇಕು ಹಾಗೂ ಅಲ್ಲಿ ಭಾವನಾತ್ಮಕ ಲೋಕ ತೆರೆದುಕೊಳ್ಳಬೇಕು ಎನ್ನುವ ಅಭಿಪ್ರಾಯ ಎಲ್ಲಾ ಛಾಯಾಗ್ರಾಹಕರಲ್ಲಿರುತ್ತದೆ. ಅದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಒಮ್ಮೊಮ್ಮೆ ವೈರಲ್‌ ಆಗುವ ಚಿತ್ರಗಳು ಮನಸ್ಸಿನಾಳದಲ್ಲಿ ನೆನಪಿನ ಗೆರೆ ಎಳೆದಿರುತ್ತವೆ. ಆದರೆ ಹುಡುಕಿದರೂ ಕೆಲವೊಮ್ಮೆ ಅಂತಹ ಚಿತ್ರಗಳು ನಮ್ಮ ಕ್ಯಾಮೆರಾ ಕಣ್ಣಿಗೆ ಸಿಗುವುದಿಲ್ಲ. ಕೆಲವೊಮ್ಮೆ ಸಿಕ್ಕರೂ ಕ್ಯಾಮೆರಾ ತೆಗೆಯುವ ಹೊತ್ತಿಗೆ ಚಿತ್ರಣ ಬದಲಾಗಿರುತ್ತದೆ.

ಬೇರೆ ಯಾವ ವೃತ್ತಿಯಲ್ಲೂ ಮಳೆ ಬಂದಾಗ ಎಲ್ಲಾದರೂ ಸೂರಿನಡಿ ನಿಂತುಕೊಂಡು ನಮ್ಮನ್ನು ರಕ್ಷಿಸಿಕೊಳ್ಳುವ ಅವಕಾಶವಿದೆ. ಆದರೆ ಪತ್ರಿಕಾ ಛಾಯಾಗ್ರಾಹಕರಿಗೆ ಮಳೆಯಲ್ಲಿ ತೊಯ್ಸಿಕೊಂಡು ಒಳ್ಳೆಯ ಫೊಟೋ ತೆಗೆಯುವ ಸವಾಲುಗಳಿರುತ್ತವೆ.

ಅವತ್ತು ಭಾನುವಾರ. ನಾನು ಮೈಸೂರಿನಲ್ಲಿದ್ದೆ. ಇನ್ನೇನು ಅಸೈನ್‌ಮೆಂಟ್‌ ಮುಗಿಸಿ ಆಫೀಸಿಗೆ ಹೊರಡಬೇಕು ಅನ್ನುವಷ್ಟರಲ್ಲಿ ಧೋ ಎನ್ನುವ ಮಳೆ. ಕೂಡಲೇ ಮುಚ್ಚಿದ್ದ ಅಂಗಡಿಯ ಶಟರ್‌ ಮುಂದೆ ನಿಂತುಕೊಂಡು ರೇನ್‌ಕೋಟ್‌ ಹಾಕಿ ಮತ್ತೆ ಬೈಕ್‌ ಏರಿ ಹೊರಟೆ. ಮಳೆಯೇನೋ ಬರುತ್ತಿದೆ, ಆದರೆ ಅಲ್ಲಿ ಜೀವಕಳೆಯೇನೂ ಕಾಣುತ್ತಿಲ್ಲ. ರಾಮಸ್ವಾಮಿ ವೃತ್ತದಿಂದ ಹೊರಟು ನಾದಬ್ರಹ್ಮ ಸಂಗೀತ ಸಭಾ ತಲುಪಿದ್ದಾಯ್ತು. ಮಳೆ ಮಾತ್ರ ಕಾಣುತ್ತಿದೆ. ಒಳ್ಳೆಯ ಛಾಯಾಚಿತ್ರ ಕಾಣುತ್ತಿಲ್ಲ. ಅಲ್ಲೇ ಇದ್ದ ಪೆಟ್ರೋಲ್‌ ಬಂಕ್‌ ಬಳಿ ಸ್ವಲ್ಪ ಹೊತ್ತು ನಿಂತೆ. ಅದೇ ಕಾರುಗಳು, ಬಸ್‌ಗಳು ಮಾತ್ರ ಕಾಣುತ್ತಿದ್ದವು. 

ಜೆಎಲ್‌ಬಿ ರಸ್ತೆಯಲ್ಲಿ ಎಲೆತೋಟ ದಾಟಿ ಜೆಎಸ್‌ಎಸ್‌ ಸರ್ಕಲ್‌ ಬಳಿ ತಲುಪಿದರೂ, ನನ್ನ ಕಲ್ಪನೆಯ ಚಿತ್ರವಿಲ್ಲ. ಇದೇಕೋ ಅದೃಷ್ಟವಿಲ್ಲ ಎಂದುಕೊಂಡು ಊಟಿ ರಸ್ತೆಯಲ್ಲಿ ವಿದ್ಯಾಪೀಠ ಸರ್ಕಲ್‌ ಕಡೆಗೆ ಹೊರಟೆ. ರಸ್ತೆಯ ಬದಿಯಲ್ಲಿ ಒಂದು ಕಡೆ ತಳ್ಳುಗಾಡಿಯೊಂದು ಕಂಡಿತು. ದೂರದಿಂದ ನೋಡಿದರೆ ಏನೂ ವಿಶೇಷವಿಲ್ಲ. ಹಾಗೇ ದಾಟಿ ಮುಂದೆ ಹೋಗುತ್ತಿದ್ದರೆ, ತಳ್ಳುಗಾಡಿಯ ಕೆಳಗೆ ಹಿರಿಜೀವವೊಂದು ಮಳೆಯಿಂದ ರಕ್ಷಣೆ ಪಡೆದುಕೊಳ್ಳುತ್ತಿದೆ. ನನ್ನ ಕಲ್ಪನೆಯಲ್ಲಿದ್ದ ಚಿತ್ರವೊಂದು ಕಣ್ಮುಂದೆ ಕಾಣುತ್ತಿದೆ. ಕೂಡಲೇ ಬೈಕ್‌ ನಿಲ್ಲಿಸಿ, ಬ್ಯಾಗ್‌ನಿಂದ ಕ್ಯಾಮೆರಾ ತೆಗೆದೆ. ಹಿರಿಜೀವ ಜಡಿಮಳೆಗೆ ಚಳಿತಾಳಲಾರದೇ ಒಳಗಡೆ ಅವಿತುಕೊಂಡು ಮಳೆಗಾಳಿಯಿಂದ ರಕ್ಷಣೆ ಪಡೆಯುವ ವ್ಯರ್ಥ ಪ್ರಯತ್ನ ಮಾಡುತ್ತಿತ್ತು. ಅವರ ಕಣ್ಣಲ್ಲಿ ಹನಿನೀರಿತ್ತು. ಎಷ್ಟೆ ದುಡಿದರೂ ತಲೆಗೊಂದು ಸೂರಿಲ್ಲ ಅನ್ನುವ ವೇದನೆಯಿತ್ತು.

ಎಲ್ಲರಂತೆಯೇ ನಾನೂ ಇದನ್ನು ನೋಡಿ ಒಳ್ಳೆಯ ಮಳೆಯ ಚಿತ್ರ ತೆಗೆದೆ. ಅವರೊಡನೆ ಮಾತನಾಡುವ ಪ್ರಯತ್ನ ಮಾಡಿದೆ. ಆದರೆ ಪ್ರತಿಕ್ರಿಯೆ ಬರಲಿಲ್ಲ. ಒಂದೆರಡು ನಿಮಿಷ ಅಲ್ಲೇ ನಿಂತೆ. ಆ ವ್ಯಕ್ತಿ ಕೆಳಗೆ ನೋಡುತ್ತಾ ಮೌನಕ್ಕೆ ಶರಣಾದರು. ಬೀಳುತ್ತಿದ್ದ ಮಳೆ ಹನಿಗಳ ಶಬ್ದ ಮಾತ್ರ ಅವರಿಗೆ ಕೇಳುತ್ತಿತ್ತು ಎನಿಸಿತು. ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದ ಚಿತ್ರಕ್ಕೆ ಸಮನಾದ ಚಿತ್ರ ನನಗೆ ಸಿಕ್ಕಿತು ಎನ್ನುವ ಖುಷಿ ಮನದಲ್ಲಿರಲಿಲ್ಲ.

ಆ ಹಿರಿಜೀವ ನೆಲವನ್ನೇ ದಿಟ್ಟಿಸಿ ನೋಡುತ್ತ ಏನು ಯೋಚಿಸುತ್ತಿರಬಹುದು? ಬದುಕೇಕೆ ಹೀಗೆ? ಎನ್ನುವ ಪ್ರಶ್ನೆಗಳ ಸರಮಾಲೆ ಮನದಲ್ಲಿ ಮೂಡತ್ತಿತ್ತು. ಕಣ್ಣುಂಚು ತೇವವಾಗುತ್ತಿತ್ತು. ಮಳೆ ಬಂದರೂ ಬೈಕ್‌ನಲ್ಲೇ ಅಡ್ಡಾಡುವ ದಿನಾ ತೊಯ್ಸಿಕೊಂಡು ಮನೆಗೆ ಬರುವ ಅಪ್ಪ ನೆನಪಾದರು. ಮಳೆಯಲ್ಲಿ ನೆನೆದರೂ ಪರ್ವಾಗಿಲ್ಲ ಬಟ್ಟೆ ಒಗೆದು ಮುಗಿಸುವೆ ಎನ್ನುವ ಅಮ್ಮ ನೆನಪಾದಳು. ಬೈಕ್‌ ಏರಿ ಆಫೀಸಿಗೆ ಹೊರಟೆ. ಈಗ ಚಿತ್ರ ಹುಡುಕುವ ಧಾವಂತ ಇರಲಿಲ್ಲ. ನಿಧಾನವಾಗಿ ಬೈಕ್‌ ಚಲಾಯಿಸಿದೆ. ಆ ಚಿತ್ರಣ ಮನದಾಳದಲ್ಲಿ ಕೊರೆಯುತ್ತಿತ್ತು.

Post Comments (+)