ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳಿಂದ ಅವನಾಗುವ ಘಟ್ಟದಲ್ಲಿ ರೂಮಿ ಹರೀಶ್: ಲಿಂಗದ ಹಂಗು ತೊರೆದು...

Last Updated 26 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ್ತಿ ಸುಮತಿ ಅವರು ರೂಮಿ ಹರೀಶ್ ಆಗಿಯೇ ಈಗ ಹೆಚ್ಚು ಪರಿಚಿತರು. ಲಿಂಗತ್ವ ಅಲ್ಪಸಂಖ್ಯಾತರ ಪರ ಹೋರಾಟದ ಜತೆಗೆ ತಮ್ಮೊಳಗಿನ ತಳಮಳಗಳಿಗೆ ಸಂಗೀತ ಮತ್ತು ಚಿತ್ರಕಲೆಯ ಮೂಲಕ ಉತ್ತರ ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ಅವಳಿಂದ ಅವನಾಗುವ ಘಟ್ಟದಲ್ಲಿ ಸಮಾಜ ಮತ್ತು ಲಿಂಗ ವ್ಯವಸ್ಥೆಯೊಳಗಿನ ಅಪಸವ್ಯಗಳ ಕುರಿತು ಮುಕ್ತವಾಗಿ ಇಲ್ಲಿ ಮಾತನಾಡಿದ್ದಾರೆ.

***

‘ನಡುವೆ ಸುಳಿವ ಆತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ’ ಅಂತ ವಚನಕಾರ ಜೇಡರ ದಾಸಿಮಯ್ಯ ಒಂದೇ ಸಾಲಿನಲ್ಲಿ ಹೇಳಿಬಿಟ್ಟ. ಆದರೆ, ಗಂಡಿನಿಂದ ಹೆಣ್ಣಾದವರು, ಹೆಣ್ಣಿನಿಂದ ಗಂಡಾದವರ ಪಾಡು ಒಂದೇ ಸಾಲಿನಲ್ಲಿ ಹೇಳುವಂಥದಲ್ಲ. ಲೋಕನಿಂದನೆಯ ಜತೆಗೆ ತಮ್ಮ ಮೈ–ಮನಗಳಲ್ಲಿನ ತಾಕಲಾಟಗಳಿಗೆ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ಅಂಥದೊಂದ್ದು ಹಾದಿಯಲ್ಲಿ ತಮ್ಮದೇ ಅಸ್ಮಿತೆ ಕಂಡುಕೊಳ್ಳಲು ಯತ್ನಿಸುತ್ತಿರುವರಲ್ಲಿ ಒಬ್ಬರು ರೂಮಿ ಹರೀಶ್.

ಸುಮತಿ ಅರ್ಥಾತ್ ರೂಮಿ ಹರೀಶ್ ಹೆಣ್ಣಾಗಿ ಜನಿಸಿದವರು. ಬಾಲ್ಯದಲ್ಲೇ ಸಂಗೀತದ ಕುಂಟಾಬಿಲ್ಲೆ ಆಡುತ್ತಾ ಬೆಳೆದವರು.ಇಷ್ಟವಿದೆಯೋ ಇಲ್ಲವೋ ಒಟ್ಟಿನಲ್ಲಿ ಕಲಿಯಬೇಕು. ರಾಗಗಳ ಮೇಲೆ ಪ್ರಭುತ್ವ ಸಾಧಿಸಿ ಮತ್ತೆ ಮರೆತುಬಿಡಬೇಕು ಅನ್ನೋದು ಅವರ ಪಾಲಿಗೆ ಅಲಿಖಿತ ನಿಯಮವಾಗಿತ್ತು. ಸ್ವರ–ರಾಗ ಅಲಾಪಗಳ ಏರಿಳಿತಗಳ ಜೊತೆಗೆ ಸಾಂಪ್ರದಾಯಿಕ ಕುಟುಂಬದಲ್ಲಿನ ಕರ್ಮಠತೆಯನ್ನೂ ಎಳೆವೆಯಲ್ಲಿ ಸೂಕ್ಷ್ಮವಾಗಿ ಗ್ರಹಿಸುತ್ತಿದ್ದ ಅವರ ಬೆಂಬಲಕ್ಕೆ ನಿಂತದ್ದು ಅಮ್ಮ, ಶಿಲ್ಪಿ ಕನಕಮೂರ್ತಿ. ಹೆಣ್ಣುಮಕ್ಕಳ ಬಗೆಗಿದ್ದ ಸಿದ್ಧಮಾದರಿಯ ಚೌಕಟ್ಟುಗಳನ್ನು ಮುರಿದು ಕಟ್ಟುವಲ್ಲಿ ನಿಸ್ಸೀಮರಾಗಿದ್ದ ಅಮ್ಮನಿಂದ ಮಗಳು ಕೂಡಾ ಕಲಿತದ್ದು ಮುರಿದು ಕಟ್ಟುವಿಕೆಯ ಕಾಯಕವನ್ನೇ. ಸಮಾನತೆಯ ಹಾದಿಯಲ್ಲಿ ಹೆಣ್ಣು–ಗಂಡು ಜತೆಯಾಗಿ ಹೆಜ್ಜೆ ಹಾಕಬೇಕು ಎಂಬುದನ್ನು ಗಾಢವಾಗಿ ನಂಬಿದ್ದ ಸುಮತಿ, ಬೆಳೆಯುತ್ತಲೇ ತಮ್ಮೊಳಗಿನ ‘ಅವನನ್ನು’ ಕಂಡುಕೊಳ್ಳತೊಡಗಿದ್ದರು. ಒಂದೆಡೆ ಅವನಾಗುವ ಬಯಕೆಯ ಚಿಗುರು, ಮತ್ತೊಂದೆಡೆ ತನ್ನ ಸಾಂಗತ್ಯದಂತಿರುವ ಸಂಗೀತದಿಂದ ವಿಮುಖವಾಗುವ ಭಯ. ಅದಕ್ಕಾಗಿಯೇ ಹತ್ತಾರು ವರುಷಗಳ ಕಾಯುವಿಕೆಯ ಬಳಿಕ ‘ರೂಮಿ ಹರೀಶ್‌’ನಾಗಿ ಪರಿವರ್ತನೆ (ರೂಮಿ ಅವರಿಷ್ಟದ ಕವಿ ಹಾಗಾಗಿ, ಹೆಸರಿನೊಂದಿಗೆ ಸೇರಿಸಿಕೊಂಡಿದ್ದಾರೆ).

‘ನಾನು ಹೆಣ್ಣು ಅನ್ನೋದು ಚೆನ್ನಾಗಿ ಗೊತ್ತು. ಆದರೆ, ಅದೇ ಸಮಯಕ್ಕೆ ಹೆಣ್ಣಲ್ಲ ಅನ್ನೋದು ತುಂಬಾ ಸ್ಪಷ್ಟವಾಗಿ ಗೊತ್ತು. ಹಾಗಾದರೆ ಗಂಡಸಾ ಅನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಬಹಳ ಗೊಂದಲಕ್ಕೆ ಬಿದ್ದಿರುವೆ. ಈ ಲೋಕ ಪ್ರತಿಪಾದಿಸುವ ‘ಗಂಡಸುತನ’ ನನಗೆ ಬೇಕಾಗಿಲ್ಲ.ಸಾಮಾಜಿಕವಾಗಿ ಕಟ್ಟಿಕೊಂಡು ಬಂದಿರುವ ಗಂಡಸುತನಕ್ಕೂ ನಾನು ಹುಡುಕಿಕೊಳ್ಳಬೇಕಾದ ನನ್ನ ಥರದ ಗಂಡಸುತನಕ್ಕೂ ಬಹಳ ವ್ಯತ್ಯಾಸ ಇರಬೇಕೆಂದು ಮೊದಲಿನಿಂದಲೂ ಬಯಸಿದ್ದೆ. ಗಂಡಸೆಂದರೆ ಮನೆಗೆಲಸ ಮಾಡದೇ ಬೆಳಿಗ್ಗೆಯೇ ಪೇಪರ್ ಓದುತ್ತಾ ಕೂತು, ಅಡುಗೆ ಮನೆಯಲ್ಲಿ ಹೆಂಡತಿ ಬೇಯುತ್ತಿದ್ದರೂ ತಿಂಡಿ, ಕಾಫಿಗೆ ಆರ್ಡರ್ ಮಾಡುವ ಗಂಡಾಗಲೀ, ‘ಬೀಯಿಂಗ್ ಗುಡ್ ಮ್ಯಾನ್’ ಅನ್ನಿಸಿಕೊಳ್ಳುವಲ್ಲೂ ಒಂದು ರೀತಿಯ ಪುರುಷ ಅಹಂ ತೋರಿಸುವ ಗಂಡಾಗಲೀ ನಾನಾಗಬೇಕು ಅನ್ನುವುದನ್ನು ಪ್ರಜ್ಞಾಪೂರ್ವಕವಾಗಿ ತಪ್ಪಿಸಿಕೊಂಡಿದ್ದೇನೆ’ ಅನ್ನುವುದು ಅವರ ಮಾತು.

‘ನಾನು ಚಿಕ್ಕವಯಸ್ಸಿನಿಂದ ನೋಡಿದ್ದು ಮೂವರು ಗಂಡಸರನ್ನು. ತಂದೆ, ನನ್ನ ಮೇಷ್ಟ್ರು ಮತ್ತು ನನ್ನ ತಾಯಿಯ ಮೇಷ್ಟ್ರು. ಅವರಾರೂ ಕೆಟ್ಟ ಗಂಡಸುತನ ತೋರಿಸಿಕೊಳ್ಳಲಿಲ್ಲ. ತಾಯಿಯ ಕಡೆಯ ಸಂಬಂಧಿಕರಲ್ಲಿ ಕೆಲ ಗಂಡಸರು ಮಾತ್ರ ಮಾತಿನಿಂದ ಹಿಡಿದು ನಡವಳಿಕೆಯಲ್ಲೂ ಗಂಡಸಿನ ದರ್ಪ ತೋರುತ್ತಿದ್ದರು. ಒಂದು, ತಾವು ಗಂಡಸರು ಅನ್ನೋ ಅಹಂ. ಮತ್ತೊಂದು, ಬ್ರಾಹ್ಮಣರು ಅನ್ನೋ ಮೇಲಸ್ತಿಕೆ. ಅಷ್ಟಲ್ಲದೆ ತಾವು ಓದಿಕೊಂಡಿದ್ದೇವೆ, ದೊಡ್ಡ ಸ್ಥಾನದಲ್ಲಿದ್ದೇವೆ, ಹಾಗಾಗಿ ಯಾರಿಗೆ ಏನು ಬೇಕಾದರೂ ಸಲಹೆ ಕೊಡಬಹುದು ಅನ್ನುವ ದರ್ಪ ಅವರಲ್ಲಿತ್ತು. ಇದನ್ನೆಲ್ಲ ನೋಡಿದ್ದ ನಾನೂ ಅವರಂತಾಗಬಾರದೆಂಬ ಜಾಗೃತಿ ನನ್ನಲ್ಲಿ ಸದಾ ಇತ್ತು’ ಅನ್ನುತ್ತಾರೆ ಅವರು. ಅವರ ಭಾವಯಾನದಲ್ಲಿ ಇನ್ನು ನೀವುಂಟು, ಅವರುಂಟು. ಓವರ್‌ ಟು ರೂಮಿ ಹರೀಶ್‌...

***

ನಿಮಗೇನ್ರಿ ಇದೆ ಕಳೆದುಕೊಳ್ಳಲು...
ಲಿಂಗ ಬದಲಾವಣೆಯ ಸರ್ಜರಿ ಮಾಡಿಸಿಕೊಳ್ತೀನಿ ಅಂದಾಗ ಸ್ನೇಹಿತನೊಬ್ಬ,‘ಅವರಾದರೆ ಗಂಡಸುತನ ಕಳೆದುಕೊಳ್ತಾರೆ. ನಿಮಗೇನ್ರಿ ಇದೆ ಕಳೆದುಕೊಳ್ಳಲು’ ಅಂತ ಮುಖಕ್ಕೆ ಹೊಡೆದಂತೆ ಕೇಳಿದ್ದ. ‘ಏನಿಲ್ಲ ಅಂತ ದಯವಿಟ್ಟು ಹೇಳಿ ನೋಡೋಣ’ ಅಂತ ತಿರುಗೇಟು ಕೊಟ್ಟೆ.ಕೆಲವರು ಹೇಳ್ತಾರೆ ಅಷ್ಟೊಂದು ನೋವು ಪಟ್ಟುಕೊಂಡು ನೀವು ಸರ್ಜರಿ ಮಾಡಿಕೊಳ್ಳಬೇಕಾ ಅಂತ. ಮತ್ತೊಬ್ಬ ಪ್ರಗತಿಪರ ಮಹಿಳೆ ಜತೆಗೆ ಆಕೆ ವೈದ್ಯೆ ಬೇರೆ, ನಿಮಗೆ ಹೇಗೂ ಮೆನೊಪಾಸ್ ಹತ್ತಿರವಿದೆ. ಈಗ ಗರ್ಭಕೋಶ ಇದ್ದರೆಷ್ಟು ಬಿಟ್ಟರೆಷ್ಟು? ಹೇಗೂ ಮುಟ್ಟಾಗಲ್ಲವಲ್ಲ. ಹಾಗೇ ಹೊಂದಾಣಿಕೆ ಮಾಡಿಕೊಂಡಿದ್ರೆ ಆಗ್ತಾ ಇತ್ತು ಎಂದಿದ್ದರು. ಅರೆ ಎಷ್ಟು ಸುಲಭವಲ್ಲ ಹೊಂದಾಣಿಕೆ ಅನ್ನೋದು. ಪುರುಷ ಪ್ರಧಾನ ಸಮಾಜದಲ್ಲಿ ಅದನ್ನೇ ತಾನೇ ಹೇಳಿಕೊಳ್ಳೋದು. ನನಗೆ ಇಂಥ ಸಮಸ್ಯೆ ಆಗ್ತಾ ಇದೆ ಅಂದ್ರೆ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಮ್ಮಾ ಅಂತಾರೆ. ಎಲ್ಲಿಯ ತನಕ ಅಡ್ಜಸ್ಟ್‌ಮೆಂಟ್‌? ನಮ್ಮ ಜೀವ ಹೋಗುವ ತನಕವಾ?

ನಮ್ಮ ಜನರಿಗೆ ಲಿಂಗತ್ವ ಅಲ್ಪಸಂಖ್ಯಾತರು ಅಂದರೆ ಸಾಕು, ಒಂದು ರೀತಿಯ ಅಧಿಕಾರ ತನ್ನಿಂತಾನೇ ಬಂದುಬಿಡುತ್ತೆ. ‘ತಪ್ಪು ತಿಳಿದುಕೊಳ್ಳಬೇಡಿ’ ಅಂತ ಮುನ್ನುಡಿ ಬರೆಯುತ್ತಲೇ ನೀವು ಹೇಗೆ ಲೈಂಗಿಕವಾಗಿ ತೃಪ್ತಿ ಹೊಂದುತ್ತೀರಾ ಅಂತ ಪ್ರಶ್ನೆ ಕೇಳ್ತಾರೆ.ಎಷ್ಟೊಂದು ಅಸೂಕ್ಷ್ಮರಾಗಿ ಪ್ರಶ್ನೆಗಳನ್ನು ಕೇಳ್ತಾರೆ ಅಂದರೆ ಎಲ್ಲವೂ ಅಲ್ಲಿ ಟೇಕನ್ ಫಾರ್ ಗ್ರಾಂಟೆಡ್ ಆಗಿರುತ್ತದೆ.ಬಹುತೇಕರು ತಮ್ಮ ಲೈಂಗಿಕ ಕುತೂಹಲಗಳನ್ನು ತಣಿಸಿಕೊಳ್ಳಲೆಂದೇ ಟ್ರಾನ್ಸ್ ಜೆಂಡರ್‌ಗಳ ಜತೆಗೆ ಸಂವಾದ ನಡೆಸುತ್ತಾರೆ. ಈ ನಡುವೆ ಒಬ್ಬರು ನನ್ನನ್ನು ಪ್ರಶ್ನಿಸಿದ್ದರು ನಿಮ್ಮಂಥವರಿಂದ ಸಮಾಜಕ್ಕೇನು ಕೊಡುಗೆ ಅಂತ. ಆಗ ನಾನು ನಿಮ್ಮಂಥ ಬುದ್ಧಿಹೀನರಿಂದ ಏನು ಕೊಡುಗೆ ಅಂತ ನೇರವಾಗಿಯೇ ಮರುಪ್ರಶ್ನಿಸಿದ್ದೆ.

ನನ್ನ ಹಾಡು ನನ್ನದು...
‘ಶಾಸ್ತ್ರೀಯ ಸಂಗೀತಗಾರ್ತಿಯಾಗಿ ನೆಲೆ ಕಂಡುಕೊಂಡಿದ್ದರೂ ನನಗೆ ಪ್ರಥಮ ಬಾರಿಗೆ ಹಾಡಲು ಅವಕಾಶ ನಿರಾಕರಿಸಿದ್ದು ನಾನು ಮದುವೆ ಮಾಡಿಕೊಂಡಿಲ್ಲ ಅಂತ. ಅದರಲ್ಲೂ ನಾನು ಗಂಡಾಗಿ ಗುರುತಿಸಿಕೊಳ್ಳತೊಡಗಿದ ಮೇಲೆ, ಲಿಂಗತ್ವ ಅಲ್ಪಸಂಖ್ಯಾತರ ಜತೆಗೆ ಕೆಲಸ ಮಾಡ್ತೀನಿ ಅಂತ ತಿಳಿದ ಮೇಲೆ ಮುಖ್ಯವಾಹಿನಿಯ ಸಂಗೀತ ಕಾರ್ಯಕ್ರಮಗಳಿಂದ ಹೊರಗಿಡಲಾಯಿತು. ನಾನು ಖಿನ್ನತೆಗೆ ಜಾರಿದೆ. ಹಾಡಲು ಸಿದ್ಧವಿಲ್ಲವೆಂದೇ ಪುಕಾರು ಹಬ್ಬಿಸಲಾಯಿತು. ನಾನು ಹಾಡುವ ಸಂಗೀತ ಕಾರ್ಯಕ್ರಮಗಳಲ್ಲಿ ಪುರುಷ ಮೇಲುಗೈ ಪ್ರತಿಪಾದಿಸುವ ಹಾಡುಗಳಿದ್ದರೆ ಅಂಥವನ್ನು ನಾನು ಖಂಡಿತಾ ಹಾಡೋದಿಲ್ಲ.

ಸೀರೆ ಉಟ್ಟಿದ್ದರೆ ಚೆನ್ನಾಗಿರ್ತಿತ್ತು...
ಗಂಗೂಬಾಯಿ ಹಾನಗಲ್ ಅವರ ನೆನಪಿನ ಕಾರ್ಯಕ್ರಮವೊಂದರಲ್ಲಿ ಹಾಡಿದ್ದೆ. ನನ್ನ ಹಾಡು ಕೇಳಿ ಖುಷಿಯಾಗಿದ್ದ ದೊಡ್ಡ ಸಂಗೀತಪ್ರಿಯರೊಬ್ಬರು ಹತ್ತಿರ ಬಂದು ‘ತುಂಬಾನೇ ಚೆನ್ನಾಗಿ ಹಾಡಿದ್ದೀಯಾ. ಆದರೆ, ಸೀರೆ ಉಟ್ಟಿದ್ದರೆ ಚೆನ್ನಾಗಿರ್ತಿತ್ತು ಅಂದ್ರು. ಅವರ ಪ್ರಕಾರ ಹಾಡಿಗೂ ಇಮೇಜ್ ಬೇಕು. ಕಣ್ಣಿಗೂ ಇಮೇಜ್ ಬೇಕು. ಅದು ಮಿಸ್ ಮ್ಯಾಚ್ ಆಗಬಾರದು. ವುಮನ್ ಆರ್ಟ್, ಟ್ರಾನ್ಸ್‌ ಜೆಂಡರ್ ಆರ್ಟ್ ಅಂತ ಹೇಳುವಾಗ ಸಂಗೀತ ಕ್ಷೇತ್ರದಲ್ಲಿ ಸೌಂದರ್ಯ ಇಲ್ಲವೇ ದೈವಭಕ್ತಿಯ ಬಗ್ಗೆ ಮಾತಾಡ್ತಾರೆ. ದೈವಭಕ್ತಿ ಅನ್ನೋದು ಒಂದು ಅರ್ಹತೆಯೇ? ನಾವೆಷ್ಟು ಪರಿಶ್ರಮ ಪಟ್ಟಿರುತ್ತೇವೆ ಅನ್ನೋದು ಮುಖ್ಯವಾಗಿರಬೇಕೇ ಹೊರತು ನಮಗಿರುವ ಭಕ್ತಿ ಅಲ್ಲ. ಹೆಣ್ಣೊಬ್ಬಳು ಎಷ್ಟೇ ಚೆನ್ನಾಗಿ ಹಾಡಿದ್ರೂ ಅಲ್ಲಿ ಭಕ್ತಿಯದ್ದೇ ಮೇಲುಗೈ.ಗಂಡಾಗಿ ಹುಟ್ಟಿ ಟ್ರಾನ್ಸ್‌ಜೆಂಡರ್‌ ಆದರೆ ಅದನ್ನು ನೋಡುವ ಪರಿಭಾಷೆಯೇ ಬೇರೆ. ನಮ್ಮ ಕೌಶಲ, ಶ್ರಮ, ನಡೆದು ಬಂದ ಹಾದಿಯನ್ನು ನೋಡದೇ ಬರೀ ಭಕ್ತಿಗೆ ಮಾರ್ಕ್ಸ್ ಕೊಟ್ಟರೆ ಹೇಗೆ? ಅದೇ ಗಂಡಸು ಸಾಧನೆ ಮಾಡಿದರೆ ಅದು ಸೃಜನಶೀಲತೆ ಅಂತ ಕೊಂಡಾಡುತ್ತಾರೆ.

ಹೆಣ್ಣು–ಗಂಡನ್ನು ಮೀರಿದ ಭಾವ...
ಸರ್ಜರಿ ಆದ್ಮೇಲೆ ನನ್ನ ಧ್ವನಿಯಲ್ಲಿ ಬದಲಾವಣೆ ಆಗುತ್ತಿದೆ. ನಿತ್ಯವೂ ಸಂಗೀತಾಭ್ಯಾಸ ಮಾಡ್ತೀನಿ. ಒಮ್ಮೊಮ್ಮೆ ಧ್ವನಿ ಒಡೆದುಬಿಡುತ್ತದೆ. ಒಮ್ಮೊಮ್ಮೆ ಆಗಲ್ಲ. ಈಗ ನನ್ನ ಧ್ವನಿ ಗಂಡಸಿನದಾ, ಹೆಂಗಸಿನದಾ ಅಂತ ಪ್ರಶ್ನಿಸಿಕೊಂಡರೆ ನಾನು ಅವರೆಡನ್ನೂ ಮೀರಿದ್ದೇನೆ ಅನಿಸುತ್ತೆ. ನಾನು ಉಡುವ ಬಟ್ಟೆ ಗಂಡಸಿನದು. ಇಷ್ಟವಿಲ್ಲದ ಅಂಗಗಳನ್ನು ಬೇರ್ಪಡಿಸಿಕೊಂಡಿದ್ದೇನೆ. ಹಾಗಂತ ಹೆಣ್ತನ ಪೂರ್ತಿಯಾಗಿ ಹೋಗಿದೆಯೇ ಅಂದರೆ ಇಲ್ಲ ಅನ್ತೀನಿ. ಇದು ಹೆಣ್ತನ, ಇದು ಗಂಡಸುತನ ಅಂತ ನಿರ್ದಿಷ್ಟವಾಗಿ ಮಾರ್ಕ್ ಮಾಡಿ ಹೇಳಲಾಗದು. ಈ ತುಮುಲಗಳನ್ನು ನಾನು ಚಿತ್ರಕಲೆಯ ಮೂಲಕ ಅಭಿವ್ಯಕ್ತಿಪಡಿಸಲು ಯತ್ನಿಸುತ್ತಿದ್ದೇನೆ.

ಸೆಕ್ಷ್ಯುವಲ್ ಆಗಿ ಇರೋದು ಅಂದರೆ ಹಲವರೊಂದಿಗೆ ಸೆಕ್ಸ್ ಮಾಡೋದು ಎಂದರ್ಥವಲ್ಲ. ಉದಾಹರಣೆಗೆ ನಾವು ಒಂದು ವಚನವನ್ನೋ, ಹಾಡನ್ನೂ ಕಾಮಿಸಬಹುದು. ಕಂಡಿರದ ವ್ಯಕ್ತಿಯನ್ನೂ ಕಾಮಿಸಬಹುದು.ನನ್ನ ಪ್ರಕಾರ, ಇನ್ನೊಬ್ಬರ ಮೇಲೆ ಅವಲಂಬಿತವಾಗದೇ ಇರೋದು ಹೆಣ್ತನ. ಸೆಕ್ಷ್ಯುವಲ್ ಅನ್ನು ಅನುಭವಿಸಲು ಹೆಣ್ಣು ಯಾರನ್ನೂ ಅವಲಂಬಿಸಬೇಕಿಲ್ಲ. ಒಂದು ಸಣ್ಣ ಅಡುಗೆ ಮಾಡಿದಾಗ ಅದು ಪರ್ಫೆಕ್ಟ್ ಆಗಿಬಂದರೆ ಅದು ಯಾವ ರೀತಿಯ ಸಂತೋಷ ಅಂತ ಹೇಳಲಾಗದು. ಅದು ಸೆಕ್ಷ್ಯುವಲ್ ಆಗಿರಬಹುದು, ರೊಮ್ಯಾಂಟಿಕ್ ಆಗಿರಬಹುದು.ನಮ್ಮ ಅಸೋಸಿಯೇಷನ್ ಆಫ್ ಸೆಕ್ಸ್ ಕೂಡಾ ಮತ್ತೊಬ್ಬ ಮನುಷ್ಯನೊಂದಿಗೇ ಇರಬೇಕಿಲ್ಲ. ಅದೇ ಪರಿಭಾಷೆಯಲ್ಲಿ ಗಂಡಸುತನವನ್ನು ನನ್ನ ಪೇಟಿಂಗ್‌ನಲ್ಲಿ ಕಾಣಿಸಲು ಯತ್ನಿಸಿದ್ದೇನೆ. ನನಗೆ ಮೀನು ತುಂಬಾ ಗಂಡಸು ಅನಿಸುತ್ತದೆ. ಅದಕ್ಕೊಂದು ಘನತೆ ಇದೆ. ಹೇಗೆಂದರೆ ಹಳೆಯ ಹಿಂದಿ ಸಿನಿಮಾಗಳಲ್ಲಿನ ನಟ ಅಶೋಕ್‌ಕುಮಾರ್ ಥರ.

ಸಿದ್ಧಮಾದರಿಯನ್ನು ಮೀರಲಾಗದೇ?
ಒಂದೋ ನೀವು ಗಂಡಾಗಿರಬೇಕು ಇಲ್ಲವೇ ಹೆಣ್ಣಾಗಿರಬೇಕು. ಇವರೆರಡನ್ನೂ ಹೊರತುಪಡಿಸಿ ಬೇರೆ ಥರದ ದೇಹ, ಮನಸು ಅಥವಾ ಹೊಸತನಕ್ಕೆ ನಮ್ಮ ಸಮಾಜದಲ್ಲಿ ಜಾಗವಿಲ್ಲ. ಲಿಂಗ ಬದಲಾವಣೆ ಮಾಡಿಕೊಂಡವರು ಕೂಡ ಪಿತೃಪ್ರಧಾನ ವ್ಯವಸ್ಥೆಗೆ ಚಂದಾದಾರರಾಗಿದ್ದರೆ ಮಾತ್ರ ಬೆಲೆ! ಹೊಸತನವನ್ನು ಕಂಡುಕೊಳ್ತೀವಿ ಅನ್ನೋರಿಗೆ ಇಲ್ಲಿ ಜಾಗವಿಲ್ಲ. ಇಲ್ಲೂ ಮತ್ತೆ ಹೆಟ್ರೊ ಸೆಕ್ಷ್ಯುವಲ್ ಲೈಫ್ (ಪರಸ್ಪರ ವಿರುದ್ಧ ಲಿಂಗಿಗಳ ಆಕರ್ಷಣೆ) ಅನ್ನೇ ನೋಡ್ತೀವಿ. ಕೆಲವರು ಅವರದ್ದೇ ಜಗತ್ತು ಕಂಡುಕೊಂಡವರಿದ್ದಾರೆ. ಲಿಂಗತ್ವ ಅಲ್ಪಸಂಖ್ಯಾತರಲ್ಲಿ ಬಹುತೇಕರು ಗಂಡಿನಿಂದ ಹೆಣ್ಣಾಗಿರುವವರೇ. ಆದರೆ, ಹೆಣ್ಣಾಗಿ ಗಂಡಾದವರ ಬಗ್ಗೆ ಮಾನ್ಯತೆ ಇಲ್ಲ. ಟ್ರಾನ್ಸ್‌ಜೆಂಡರ್ ಅಂದರೆ ನಿಮಗೊಂದು ತೀವ್ರ ನೋವಿನ ಕಥೆ ಇರಲೇಬೇಕೆಂದು ಭಾವಿಸಲಾಗುತ್ತದೆ. ಅದನ್ನು ಹೊರತುಪಡಿಸಿದ ಬೇರೆ ರೀತಿಯ ಹೋರಾಟಗಳನ್ನು ಗುರುತಿಸುತ್ತಿಲ್ಲ.

ಧ್ವನಿ ಬದಲಾವಣೆಯ ವಿವಿಧ ಹಂತಗಳಿಗೆ ತೆರೆದುಕೊಳ್ಳುತ್ತಿರುವ ರೂಮಿ ಹರೀಶ್‌ ಸ್ವಗತದ ರೂಪದಲ್ಲಿ ಹೇಳುತ್ತಲೇ ಇದ್ದರು. ಧ್ವನಿ ಏರಿಳಿತಗಳ ಒತ್ತಡ ನಿವಾರಣೆಗಾಗಿ ಅವರೀಗ ಚಿತ್ರಕಲೆಯ ಮೊರೆ ಹೊಕ್ಕಿದ್ದಾರೆ. ‘ಚಿತ್ರಕಲೆಯೀಗ ನನ್ನ ನಿತ್ಯಸಂಜೆಯ ಸಂಗಾತಿ’ ಎನ್ನುತ್ತಲೇ ಅವರು ತಮ್ಮ ತಟ್ಟೆಯೊಳಗಿನ ಮೀನಿನ ತುಂಡನ್ನು ಬಾಯಿಗಿಟ್ಟುಕೊಂಡು ಮಾತು ಮುಗಿಸಿದಾಗ ರಾಗರತಿಯ ರಂಗು ಸಂಜೆಗೇರುತ್ತಿತ್ತು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT