ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ–ವಿದೇಶಗಳಲ್ಲಿ ‘ಅಚ್ಚಾ’ಗಿರುವ ಶ್ರದ್ಧಾ

Last Updated 17 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

‘ಅದು 1995ರ ಸಮಯ. ಕೈಯಲ್ಲಿ ದುಡ್ಡಿರಲಿಲ್ಲ. ಸ್ವಂತ ಊರಿನಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಇತ್ತು. ಧಾರವಾಡದ ಎನ್‌ಟಿಟಿಎಫ್‌ನಿಂದ ಪಡೆದಿದ್ದ ಎಂಜಿನಿಯರಿಂಗ್‌ ಪದವಿ ಜೊತೆಯಲ್ಲಿತ್ತು. ಅದರಿಂದಲೇ ಗೋಕುಲ ರಸ್ತೆಯ ಹಳೆಯ ಕೈಗಾರಿಕಾ ಪ್ರದೇಶದಲ್ಲಿದ್ದ ಒಂದು ಕಾರ್ಖಾನೆಯ ಟಾಯ್ಲೆಟ್‌ನಲ್ಲಿ ಒಂದು ಹಲಗೆ ಹಾಕಿಕೊಂಡು ಆರ್‌ ಆ್ಯಂಡ್‌ ಡಿ ಆರಂಭಿಸಿದೆ. ಯಾವುದೇ ಬಂಡವಾಳವಿಲ್ಲದೆ ‘ಶ್ರದ್ಧಾ’ ಆರಂಭಿಸಿದೆ. ಗ್ಲಾಸ್‌ ಹೌಸ್‌ನಲ್ಲಿ ಕುಳಿತು ಡ್ರಾಯಿಂಗ್‌ ಬರೆದೆ. ಡೈ ಮಾಡಿಸಿಕೊಂಡು ಬಂದು, ಅದನ್ನು ಇನ್ನೊಂದು ಕಾರ್ಖಾನೆಯಲ್ಲಿ ತಯಾರು ಮಾಡಿ ಗ್ರಾಹಕರಿಗೆ ನೀಡಿದೆ. ಈಗ ಆ ‘ಶ್ರದ್ಧಾ’, ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಸ್ವಂತ ಘಟಕವನ್ನು ಹೊಂದಿದ್ದು, ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ವಿದೇಶಗಳಿಗೂ ತನ್ನ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ...’

ಹೀಗೆಂದು ‘ಶ್ರದ್ಧಾ ಟೂಲ್ಸ್‌ ಆ್ಯಂಡ್‌ ಡೈಸ್‌’ ಆರಂಭದ ದಿನಗಳಿಂದ ಇಂದಿನವರೆಗೆ ಬೆಳೆದುಬಂದ ಹಾದಿಯನ್ನು ಸಂಕ್ಷಿಪ್ತವಾಗಿ ಹೇಳಿದರು ಅದರ ಸ್ಥಾಪಕ ಶರಣಪ್ಪ ಕೆ. ಹಗೆದಾಳ.

ಕೊಪ್ಪಳ ಜಿಲ್ಲೆಯ ಯಲಬುರ್ಗಾದ ದೇಸಾಯರ ಮುಧೋಳದ ತುಂಬು ಕುಟುಂಬದಲ್ಲಿ ಜನಿಸಿದ ಶರಣಪ್ಪ, ಪ್ರತಿ ದಿನ ಹೆಚ್ಚು ಓದುತ್ತಾರೆ ಎಂಬ ಕಾರಣಕ್ಕೇ ತಂದೆ ಕಂಠೆಪ್ಪ ಹಗೆದಾಳ ಅವರಿಂದ ಬೈಗುಳ ತಿನ್ನಬೇಕಿತ್ತು. ಓದುವುದು ಎಂದರೆ ಶರಣಪ್ಪ ಅವರಿಗೆ ಬಲುಪ್ರಿಯ. ತಮಗೆ ಅಗತ್ಯವಾದ ಪುಸ್ತಕ ಕೊಳ್ಳಲು, ಶಾಲಾ ಶುಲ್ಕಕ್ಕೂ ತನ್ನದೇ ದುಡಿಮೆ ಮಾಡುತ್ತಿದ್ದರು. ರೈತರ ಕುಟುಂಬದವರಾಗಿದ್ದರಿಂದ ಹೊಲದಲ್ಲಿ ಕೆಲಸ ಮಾಡಲೇಬೇಕಿತ್ತು.

ರಜೆ ದಿನಗಳಲ್ಲಿ ಹೊಲಗಳಲ್ಲಿ ಸಿಗುವ ಶೇಂಗಾ ಅಥವಾ ಕೃಷಿ ತ್ಯಾಜ್ಯವನ್ನು ಮಾರಾಟ ಮಾಡಿ ಅದರಿಂದ ಹಣ ಗಳಿಸುತ್ತಿದ್ದರು. ಜಾತ್ರೆಗಳಲ್ಲಿ ಉತ್ತತ್ತಿ, ಬಾಳೆಹಣ್ಣು ಮಾರೋದು, ಸ್ಟುಡಿಯೊ ಮಾಡೋದು ಸೇರಿದಂತೆ ಎಲ್ಲೆಲ್ಲಿ ಅವಕಾಶ ಇತ್ತೋ ಅಲ್ಲೆಲ್ಲ ಕೆಲಸ ಮಾಡಿ, ಹಣ ಗಳಿಸಿದರು. ಹುಟ್ಟೂರಿನಲ್ಲಿ ಎಸ್‌ಎಸ್ಎಲ್‌ಸಿ ಪೂರೈಸಿದ ಮೇಲೆ, ಗದಗದಲ್ಲಿ ಪಿಯುಸಿ ಮುಗಿಸಿ 1982ರಲ್ಲಿ ಧಾರವಾಡದ ಎನ್‌ಟಿಟಿಎಫ್‌ಗೆ ಸೇರಿಕೊಂಡರು. ಅಲ್ಲಿ ಎಂಜಿನಿಯರಿಂಗ್ ಮುಗಿಸಿದ ಮೇಲೆ ಎರಡು ವರ್ಷ (1990ರವರೆಗೆ) ಗುಜರಾತ್‌ನಲ್ಲಿ ಆರ್‌ ಆ್ಯಂಡ್‌ ಡಿ ಸಂಸ್ಥೆಯಲ್ಲಿ ಎಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸಿದರು. ನಂತರ ಹುಟ್ಟೂರು, ಕಲಿತ ಊರಿನಲ್ಲೇ ಏನಾದರೂ ಸಾಧನೆ ಮಾಡಬೇಕು, ಸ್ವಂತ ಉದ್ಯಮ ಆರಂಭಿಸಬೇಕು ಎಂದು ಹುಬ್ಬಳ್ಳಿಗೆ ಬಂದರು.

ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಒಂದೆರಡು ವರ್ಷ ಅದಕ್ಕಾಗಿ ಪರಿಶ್ರಮಪಟ್ಟರು. ಮದುವೆಯೂ ಆಗಿದ್ದರಿಂದ ಕುಟುಂಬ ಜವಾಬ್ದಾರಿಯೂ ಇತ್ತು. ಮನೆ ನಡೆಸಲೇ 10 ಸಾವಿರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಸ್ವಂತ ಉದ್ಯಮ ಆರಂಭಿಸಲು, ಆಗ 1995ರಲ್ಲಿ ‘ಶ್ರದ್ಧಾ’ ಆರಂಭಿಸಿದರು.

ಯಾವುದೇ ಮೆಷಿನ್‌ ಇಲ್ಲ, ಟೂಲ್‌ ಇರಲಿಲ್ಲ. ಒಂದು ಟಾಯ್ಲೆಟ್‌ ರೂಂ ಬಾಡಿಗೆ ಪಡೆದುಕೊಂಡು ಅಲ್ಲಿ ಕೆಲಸ ಆರಂಭಿಸಿದರು. ಕನ್ವೇಯರ್‌ ಪಾರ್ಟ್ಸ್‌ ತಯಾರಿಕೆಗಾಗಿ ಯೂನಿವರ್ಸಲ್‌ ರಿಸಿಸನ್‌ ಟೂಲ್ಸ್‌ ಅವರಿಂದ ಪ್ರಥಮ ಆರ್ಡರ್‌ ಪಡೆದರು. ಅಲ್ಲಿಂದ ಅವರ ಉದ್ಯಮ ಆರಂಭವಾಗಿ, ಯಶಸ್ಸು ಗಳಿಸಿ, ಕೆಎಸ್‌ಎಫ್‌ಸಿಯಿಂದ ಸಾಲ ಪಡೆದು, ಗೋಕುಲ ರಸ್ತೆಯಲ್ಲಿ ಕಟ್ಟಡ ಬಾಡಿಗೆ ಪಡೆದು ಎರಡು ಯಂತ್ರಗಳನ್ನು ಹಾಕಿಕೊಂಡರು. ನಂತರ ಅವು ಹೆಚ್ಚಾಗುತ್ತಲೇ ಹೋದವು. 2013ರಲ್ಲಿ ತಾರಿಹಾಳದಲ್ಲಿ ದೊಡ್ಡ ಸ್ಥಳದಲ್ಲಿ ಸ್ವಂತ ಕಟ್ಟಡವನ್ನು ನಿರ್ಮಿಸಿಕೊಂಡರು. 20ಕ್ಕೂ ಹೆಚ್ಚು ಮಂದಿ ಶ್ರದ್ಧಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆಟೊಮೊಬೈಲ್‌, ಮೆಷಿನ್‌ ಟೂಲ್‌ ಇಂಡಸ್ಟ್ರಿ, ಕೃಷಿ, ಎಲೆಕ್ಟ್ರಿಕಲ್‌, ವಾಲ್ವ್‌ ಕ್ಷೇತ್ರದವರಿಗೆ ಅವರ ವಿನ್ಯಾಸಕ್ಕೆ ತಕ್ಕಂತೆ ಅಚ್ಚು ನಿರ್ಮಿಸಿ, ಉತ್ಪನ್ನಗಳನ್ನು ‘ಶ್ರದ್ಧಾ’ ಮೂಲಕ ತಯಾರು ಮಾಡಿಕೊಡುತ್ತಿದ್ದಾರೆ ಶರಣಪ್ಪ. ಇದೀಗ, ಧಾರವಾಡ ಹಾಗೂ ಸುತ್ತಮುತ್ತ ಜಿಲ್ಲೆಗಳಿಗೆ ಯಶಸ್ವಿ ಉದ್ಯಮಿಯಾಗಿದ್ದಾರೆ. ಎಲ್ಲೂ ಆಗದ್ದನ್ನು ಶರಣಪ್ಪ ಬಳಿಗೆ ಹೋದರೆ ಮಾಡಿಕೊಡುತ್ತಾರೆ ಎಂಬ ಹೆಗ್ಗಳಿಕೆಯೂ ಇವರದಾಗಿದೆ.

ಶರಣಪ್ಪ ಅವರಿಗೆ ವರ್ಷದ ಉದ್ಯಮಿ ಪ್ರಶಸ್ತಿಯನ್ನು ದೇಶಪಾಂಡೆ ಫೌಂಡೇಷನ್‌ನವರು ನೀಡಿದ್ದಾರೆ. ಟೈಕಾನ್‌ನಲ್ಲಿ ತೀರ್ಪುಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಧಾರವಾಡದ ಎನ್‌ಟಿಟಿಎಫ್‌ನಲ್ಲಿ ಗೌರವ ಉಪನ್ಯಾಸಕರಾಗಿ ಹೋಗಿ ತಮ್ಮ ಸಾಧನೆ ಮೂಲಕ ಅವರಲ್ಲಿ ಉತ್ತೇಜನ ತುಂಬುತ್ತಾರೆ ಶರಣಪ್ಪ. ಇನ್ನು ಎರಡು ವರ್ಷದಲ್ಲಿ ತಮ್ಮ ಕಾರ್ಖಾನೆಯ ಸಾಮರ್ಥ್ಯವನ್ನು ದ್ವಿಗುಣಗೊಳಿಸುವ ಗುರಿಯೂ ಅವರಿಗಿದೆ. ಅದಲ್ಲದೆ, ನವೀಕೃತ ಇಂಧನದ ಬಗ್ಗೆಯೂ ತಮ್ಮದೇ ಸಂಶೋಧನೆಯನ್ನೂ ಅವರು ಮಾಡುತ್ತಿದ್ದಾರೆ.

**

ಎಲ್ಲ ಕ್ಷೇತ್ರದಲ್ಲೂ ಸ್ಪರ್ಧೆ ಇದ್ದೇ ಇರುತ್ತದೆ. ಅದಕ್ಕಾಗಿ ಎದೆಗುಂದಬಾರದು. ಆ ಸ್ಪರ್ಧೆಯಲ್ಲಿ ಉಳಿದು ನಾವು ಹೇಗೆ ಅದನ್ನು ನಿರ್ವಹಿಸಬೇಕು ಎಂಬುದನ್ನು ಕಲಿಯಬೇಕು. ವಿದ್ಯಾರ್ಥಿಗಳಿಗೆ ಕೇವಲ ಯಶಸ್ಸಿನ ಮಂತ್ರವನ್ನು ಮಾತ್ರ ತಿಳಿಸಬಾರದು. ಅವರಿಗೆ ಸೋಲಿನ ಬಗ್ಗೆಯೂ ಹೇಳಬೇಕು. ಯಾವುದೂ ಸುಲಭವಲ್ಲ. ನಾನೂ ಸಾಕಷ್ಟು ವೈಫಲ್ಯ ಎದುರಿಸಿದ್ದೇನೆ.

ಅದನ್ನೆಲ್ಲ ಅರಗಿಸಿಕೊಂಡು ಮುಂದುವರಿಯಬೇಕು. ಎಂತಹ ಸಂದರ್ಭ ಬಂದರೂ ಅವರು ಎಲ್ಲವನ್ನು ಎದುರಿಸಿ, ಮುನ್ನುಗ್ಗಿದ್ದರೆ ಯಶಸ್ಸು ಸಾಧಿಸುತ್ತಾರೆ.
-ಶರಣಪ್ಪ ಕೆ. ಹಗೆದಾಳ, ಸ್ಥಾಪಕ, ಶ್ರದ್ಧಾ ಟೂಲ್ಸ್‌ ಆ್ಯಂಡ್‌ ಡೈಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT